ಕರಿದ ಮಿರ್ಚಿಯಾದ ಜೀವಂತ ಮನುಷ್ಯರು....


ಆಲ್‌ ಇಂಡಿಯಾ ರೇಡಿಯೋದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾಗಿರುವ ಡಾ. ಬಸವರಾಜ ಸಾದರ ಅವರು ’ಧ್ವನಿ’ ಜಗತ್ತು, ಅಲ್ಲಿ ಸೃಷ್ಟಿಸುವ-ಸೃಷ್ಟಿಯಾಗುವ ವಿಶಿಷ್ಟ ಸಂಗತಿಗಳನ್ನು ಕಟ್ಟಿಕೊಟ್ಟವರು. ಸುಮಾರು ಮೂರುವರೆ ದಶಕದ ಹಿಂದೆ ಬಸವಕಲ್ಯಾಣ ತಾಲ್ಲೂಕಿನ ತಡೋಳಾ ಗ್ರಾಮದಲ್ಲಿ ನಡೆದ ಅಗ್ನಿ ದುರಂತದ ಕುರಿತು ಆಕಾಶವಾಣಿಗಾಗಿ ’ಬೆಂಕಿ ತಿಂದ ಬದುಕು’ ಎಂಬ ಸುದ್ದಿರೂಪಕ ಸಿದ್ಧಪಡಿಸಿದ್ದರು. ಅದರ ಹಿನ್ನೆಲೆಯನ್ನು ಈ ಬರೆಹದಲ್ಲಿ ವಿವರಿಸಿದ್ದಾರೆ. ಹೃದಯವಿದ್ರಾವಕ ಘಟನೆಯ ನಿರೂಪಣೆಯೂ ಮನ ಕಲಕುತ್ತದೆ.

 

ಬೆಂಕಿ ತಿಂದ ಬದುಕು ದೃಶ್ಯಧ್ವನಿಚಿತ್ರದ ಹಿಂದಿನ ವ್ಯಥೆ-ಕಥೆ
ಹೈದ್ರಾಬಾದ್ ಕರ್ನಾಟಕದ (ಈಗಿನ ಕಲ್ಯಾಣ ಕರ್ನಾಟಕ) ಆ ಊರಿನ ಹೆಸರು ಹೇಳಲು ನನಗೆ ಈಗಲೂ ಭಯ. ಅಷ್ಟೇ ಅಲ್ಲ, ಅಂದಿನ ಘಟನೆಯನ್ನು ನೆನಸಿಕೊಂಡರೆ ಅವತ್ತು ಆ ಊರಿನ ಜನರಿಂದ ತಿಂದ ಕಲ್ಲಿನ ಹೊಡೆತ ಮತ್ತೆ ನೆನಪಾಗುತ್ತದೆ. ಆದರೆ ಆ ಭಯ, ಆ ಹೊಡೆತ ಇವೆಲ್ಲವುಗಳ ನಡುವೆಯೂ ಕಣ್ಣಲ್ಲಿ ಸ್ಥಿರಚಿತ್ರದಂತೆ ಗಟ್ಟಿಯಾಗಿ ನೆಲೆ ನಿಂತಿರುವ ಅಲ್ಲಿನ ಹೃದಯವಿದ್ರಾವಕ ದೃಶ್ಯ ಮಾತ್ರ ಎಂದೆಂದೂ ನನ್ನ ಮನಸ್ಸಿನಾಳದಿಂದ ಮರೆಯಾಗಿಲ್ಲ; ಮರೆಯಾಗಲು ಸಾಧ್ಯವೂ ಇಲ್ಲ. ಮೂವತ್ತೊಂದು ವರ್ಷಗಳ ಆಕಾಶವಾಣಿಯ ನನ್ನ ವೃತ್ತಿಜೀವನದಲ್ಲಿ ಅಷ್ಟು ಭೀಕರ ದುರಂತದ ಘಟನೆಯನ್ನು ನಾನು ನೋಡೇ ಇಲ್ಲ. 'ಮನುಷ್ಯನ ದುರಾಸೆ ಆತನ ಬದುಕನ್ನು ಇಷ್ಟೊಂದು ಬರ್ಬರಗೊಳಿಸಬೇಕೆ? ಒಂದು ಚೋಟಿಗಿಂತಲೂ ಸಣ್ಣದಾಗಿರುವ ಮನುಷ್ಯನ ಹೊಟ್ಟೆ ಇಂಥ ಕ್ಷುದ್ರ ಮತ್ತು ಕಳ್ಳತನದ ಕೆಲಸಗಳನ್ನು ಮಾಡಲು ಹಚ್ಚಬೇಕೆ?' ಎಂಬ ಪ್ರಶ್ನೆಗಳು ನನ್ನನ್ನು ಸದಾ ಕಾಡುವಂತೆ ಮಾಡಿದ ಆ ಘಟನೆಯನ್ನು ಕುರಿತು ಬರೆಯುವಾಗ ಒಂದು ಸಲ ನನ್ನ ಇಡೀ ಶರೀರ ಥರಗುಟ್ಟಿದ್ದಂತೂ ಸತ್ಯ.

ಬಹುಶಃ ಅದು 1987ನೆಯ ವರ್ಷದ ಏಪ್ರಿಲ್-ಮೇ ತಿಂಗಳ ಒಂದು ದಿನ. (ಸರಿಯಾದ ದಿನಾಂಕ ನೆನಪಿಲ್ಲ) ಬೆಳಗಿನ ನಾಲ್ಕೂವರೆಯ ಹೊತ್ತಿಗೆ ಮುಂಬೈ-ಹೈದ್ರಾಬಾದ್ ಹೆದ್ದಾರಿಯಲ್ಲಿ, ಬಸವಕಲ್ಯಾಣದ ಕ್ರಾಸ್‌ಗೆ ಸ್ವಲ್ಪ ದೂರದಲ್ಲಿ ನಡೆದ ಆ ಘಟನೆ, ಇವತ್ತಿನಂತೆ ಮೊಬೈಲ್ ಮತ್ತಿತರ ವೇಗದ ಸಂಪರ್ಕ ಸಾಧನಗಳಿಲ್ಲದ ಆ ದಿನಗಳಲ್ಲೂ ಬೆಳಗಾಗುವುದರೊಳಗೆ ರಾಷ್ಟ್ರವ್ಯಾಪಿಯ ಸುದ್ದಿಯಾಗಿ ಎಲ್ಲೆಡೆ ತಲುಪಿಬಿಟ್ಟಿತ್ತು. ಆ ಘಟನೆಯ ಪ್ರತ್ಯಕ್ಷ ವರದಿಯನ್ನು, ಸಾಕ್ಷಿ ಸಹಿತವಾಗಿ ಧ್ವನಿಮುದ್ರಿಸಿಕೊಂಡು ಬಂದು, ಒಂದು ವಿಶೇಷ ಕಾರ್ಯಕ್ರಮ ನಿರ್ಮಿಸಲು ನಿಯುಕ್ತನಾಗಿ, ಗುಲ್ಬರ್ಗ ಆಕಾಶವಾಣಿಯಿಂದ ಹೋಗಿದ್ದ ನಾನು ಅಲ್ಲಿಗೆ ತಲುಪಿದಾಗ ಮಧ್ಯಾಹ್ನ ಸವಾಎರಡು ಗಂಟೆ. ಒಂದು ದೊಡ್ಡ ಜಾತ್ರೆಯೇ ಸೇರಿದಂತೆ ಜನ ಕೂಡಿದ್ದಾರೆ ಅಲ್ಲಿ. ಜನರಿಗಿಂತ ಪೋಲೀಸರ ಸಂಖ್ಯೆ ದೊಡ್ಡದಿದೆ.

ಏಕೈಕ ವಿದ್ಯುನ್ಮಾನ ಮಾಧ್ಯಮವಾಗಿದ್ದ ಆಕಾಶವಾಣಿಗೆ ಆ ದಿನಗಳಲ್ಲಿ ಇದ್ದ ಮಹತ್ವ ಮತ್ತು ಗೌರವದ ಕಾರಣವಾಗಿ ಆ ಗದ್ದಲದಲ್ಲೂ ಪೋಲೀಸರು ನನ್ನನ್ನು ಘಟನೆ ನಡೆದ ಸ್ಥಳದ ಹತ್ತಿರದ ವರೆಗೂ ತಾವೇ ಕರೆದೊಯ್ದಿದ್ದರು. ಅಲ್ಲಿನ ಆ ದೃಶ್ಯಗಳನ್ನು ನೋಡಿದಾಗ, ನಾನು ಬಂದ ಕೆಲಸದ ಎಚ್ಚರವೂ ಇರಲಾರದ ಹಾಗೆ ನನ್ನನ್ನು ನಾನೇ ಮೈಮರೆತುಬಿಟ್ಟಿದ್ದೆ. ಗೊತ್ತಿಲ್ಲದ ಹಾಗೆಯೇ ಎರಡೂ ಕಣ್ಣುಗಳು ತುಂಬಿ ಬಂದು ಧಾರೆಯಾಗಿ ಹರಿಯತೊಡಗಿತ್ತು ಕಣ್ಣೀರು. ಎಂಬತ್ತು ಜನರ ಶವಗಳನ್ನು ಆ ಗುಂಡಿಯ ಸುತ್ತಲೂ ಅಲ್ಲಲ್ಲೇ ಎಳೆದು ಹಾಕಿದ್ದಾರೆ. ಅವುಗಳನ್ನು ಶವಗಳು ಎನ್ನುವುದಕ್ಕಿಂತ ಎಣ್ಣೆಯಲ್ಲಿ "ಕರಿದ ಮನುಷ್ಯ" ಮಿರ್ಚಿಗಳು ಎನ್ನುವುದೇ ಸೂಕ್ತ. ಏಕೆಂದರೆ, ಅಲ್ಲಿ ಕಾಣುತ್ತಿದ್ದುದು ಇಡೀ ಶರೀರದ ಮಾಂಸ-ಖಂಡಗಳು ಗುಂಡಿಯಲ್ಲಿ ಹರಿದು ನಿಂತಿದ್ದ ಹೈಸ್ಪೀಡ್ ಪೆಟ್ರೋಲ್‌ನಲ್ಲಿ ಕರಿದುಹೋಗಿ, ಕರಕಲಾಗಿ ಉಳಿದಿದ್ದ ಬರೀ ಎಲುಬಿನ ಹಂದರಗಳು ಮಾತ್ರ. (ಈ ಬರಹದೊಂದಿಗೆ ಲಗತ್ತಿಸಿದ ಕಪ್ಪು-ಬಿಳುಪಿನ ಫೋಟೋಗಳನ್ನು ನೋಡಬಹುದು. ಇದರಲ್ಲಿ ಕಾಣುತ್ತಿರುವಂಥವು ಸುಟ್ಟು ಕರಕಲಾದರೂ ತಮ್ಮ ಆಕಾರ ಉಳಿಸಿಕೊಂಡ ಕೆಲವು ಶವಗಳು. ಸುಟ್ಟು ಬೂದಿಯಾದ ಮತ್ತು ತುಂಡು ತುಂಡಾದ ಶರೀರದ ತುಣುಕುಗಳನ್ನೂ ಅಲ್ಲಲ್ಲಿ ಕಾಣಬಹುದು. ಸುಟ್ಟು ಮುದ್ದೆ ಮುದ್ದೆಯಾಗಿ ಬಿದ್ದ ಶರೀರಗಳೂ ಈ ಚಿತ್ರಗಳಲ್ಲಿವೆ.) ನನ್ನ ಬದುಕಿನಲ್ಲಿ ನೋಡಿದ ಅತ್ಯಂತ ಕರಾಳ ದೃಶ್ಯವದು. ಅಂಥಲ್ಲಿ ನಿಂತು ಏನು ರೆಕಾರ್ಡ್ ಮಾಡಬೇಕು? ಯಾರನ್ನು ಮಾತಾಡಿಸಬೇಕು? ಆ ಗದ್ದಲದ ನಡುವೆ ರೆಕಾರ್ಡ್ ಮಾಡುವುದಾದರೂ ಹೇಗೆ ಸಾಧ್ಯ? ನಿಜಕ್ಕೂ ನಾನು ಮುಂದುಗಾಣದೆ ಮಂಕಾಗಿ ನಿಂತುಬಿಟ್ಟಿದ್ದೆ.

ನನ್ನಿಂದ ಸ್ವಲ್ಪ ದೂರದಲ್ಲಿ ನಿಂತು, ಜನರನ್ನು ನಿಯಂತ್ರಿಸುತ್ತಿದ್ದ ಒಬ್ಬ ಪೊಲೀಸ್ ಸಬ್‌ಇನ್ಸಪೆಕ್ಟರ್ ಅವರು ಹತ್ತಿರ ಬಂದು, 'ಸರ್. ಆಯ್ತಾ ನಿಮ್ಮ ರಿಪೋರ್ಟಿಂಗ್ ಕೆಲಸ? ಜನ ತುಂಬಾ ಸೇರ್‍ತಾ ಇದ್ದಾರೆ. ನಿಯಂತ್ರಿಸೋದು ಬಹಳ ಕಷ್ಟ ಆಗ್ತಿದೆ. ನೀವು ಇಲ್ಲಿಂದ ಹೋಗುವುದು ಒಳ್ಳೆಯದು. ನಾವು ಈ ಘಟನೆಗೆ ಸಂಬಂಧಿಸಿದ ಕೆಲವು ಜನರನ್ನು ಅರೆಸ್ಟ್ ಮಾಡಿದ್ದು ಆ ಊರಿನವರಿಗೆ ಗೊತ್ತಾಗಿದೆ. ಅಲ್ಲಿಂದ ಮತ್ತಷ್ಟು ಜನ ಬಂದು ಗದ್ದಲ ಮಾಡುವ ಸಾಧ್ಯತೆ ಇದೆ. ದಯವಿಟ್ಟು ನೀವು ಇಲ್ಲಿಂದ ಹೋಗಿಬಿಡಿ' ಎಂದು ವಿನಂತಿ ಮಾಡತೊಡಗಿದಾಗ ನಾನು ಅಲ್ಲಿಂದ ಹೊರಡಲೇಬೇಕಾಯ್ತು. ಹೋಗುವ ಮುಂಚೆ 'ಸರ್, ಈ ಘಟನೆ ಹೇಗೆ ನಡೀತು ಅನ್ನೋದರ ಬಗ್ಗೆ ನೀವು ಒಂದಿಷ್ಟು ವಿವರಗಳನ್ನು ಕೊಡಬಹುದೆ? ಘಟನೆಯ ಬಗ್ಗೆ ಆಕಾಶವಾಣಿಯಿಂದ ಒಂದು ಕಾರ್ಯಕ್ರಮ ಪ್ರಸಾರ ಮಾಡಬೇಕಾಗಿದೆ. ನೀವು ಮಾತಾಡಿ ಹೇಳಿದರೆ ರೆಕಾರ್ಡ್ ಮಾಡಿಕೊಳ್ಳುವೆ. ದಯವಿಟ್ಟು ಸಹಾಯ ಮಾಡಿದರೆ ಅನುಕೂಲ' ಎಂದಾಗ, 'ಓ, ಹಾಗಾ' ಎಂದವರೆ, 'ನನ್ನ ಜೊತೆ ಬನ್ನಿ' ಎನ್ನುತ್ತ, ಜನರನ್ನು ದೂರ ಸರಿಸುತ್ತ, ಸ್ವಲ್ಪ ದೂರದಲ್ಲಿ ನಿಂತಿದ್ದ ಒಂದು ಪೊಲೀಸ್ ವ್ಯಾನ್ ಹತ್ತಿರ ಕರೆದೊಯ್ದು, ಅಲ್ಲಿ ಕೆಲಸದಲ್ಲಿ ತೊಡಗಿದ್ದ ಮತ್ತೊಬ್ಬ ಹಿರಿಯ ಪೋಲೀಸ್ ಅಧಿಕಾರಿಗಳಿಗೆ ಪರಿಚಯಿಸಿ, 'ಇವರು ಗುಲ್ಬರ್ಗ ಆಕಾಶವಾಣಿಯಿಂದ ರಿಪೋರ್ಟಿಂಗ್‌ಗಾಗಿ ಬಂದಿದ್ದಾರೆ ಸರ್, ಇವರಿಗೆ ಘಟನೆಯ ಬಗ್ಗೆ ಏನೋ ಮಾಹಿತಿ ಬೇಕಂತೆ' ಎಂದು ಹೇಳಿ, ತಮ್ಮ ಡ್ಯೂಟಿ ಮುಗಿಯಿತು ಎಂಬಂತೆ ಅವರಿಗೆ ಸೆಲ್ಯೂಟ್ ಮಾಡಿ ಹಿಂದಕ್ಕೆ ಹೋಗಿದ್ದರು.

ನಾನು ಆಕಾಶವಾಣಿಯವನೇ ಎಂಬುದನ್ನು ಖಾತ್ರಿ ಮಾಡಿಕೊಳ್ಳುವ ಸಲುವಾಗಿ, ಪೊಲೀಸಿಂಗ್ ಭಾಷೆಯಲ್ಲಿ ಅದೂ-ಇದೂ ಒಂದಿಷ್ಟನ್ನು ಕೇಳಿದ ನಂತರವೇ ಮಾಹಿತಿ ಕೊಡಲು ಒಪ್ಪಿದ್ದರು ಆ ಅಧಿಕಾರಿ. ಟೇಪ್ ರೆಕಾರ್ಡರ್ ಆನ್ ಮಾಡಿದಾಗ ಆ ಹಿರಿಯ ಪೋಲೀಸ್ ಅಧಿಕಾರಿ ಕೊಟ್ಟ ದೀರ್ಘ ಮಾಹಿತಿಯ ಒಟ್ಟು ಸಾರ ಇಷ್ಟು - ಹೈಸ್ಪೀಡ್ ಪೆಟ್ರೋಲ್ ತುಂಬಿದ ಟ್ಯಾಂಕರ್ ಒಂದು ಮುಂಬೈನಿಂದ ಹೈದ್ರಾಬಾದ್‌ಗೆ ಹೊರಟಿತ್ತು. ಬೆಳಗಿನ ನಾಲ್ಕೂವರೆ ಗಂಟೆಯ ಹೊತ್ತಿಗೆ ಅದು ಈ ಹೈ ವೇ ಮೇಲೆ ಇಲ್ಲಿಗೆ ಬಂದಿದೆ. ಹೆದ್ದಾರಿಯ ಗುಡ್ಡದ ಅಡಿಯಲ್ಲಿ, ಜನಸಂಪರ್ಕವೇ ಇರಲಾಗದ ಜಾಗೆಯಲ್ಲಿದ್ದ ಒಂದು ಯೂ-ತಿರುವನ್ನು ದಾಟಿ ಟ್ಯಾಂಕರ್ ಮುಂದೆ ವೇಗವಾಗಿ ಹೊರಟಾಗ, ಮೊದಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಬಂದು, ರಸ್ತೆಯ ಆಚೆ ಈಚೆ ಮರೆಯಲ್ಲಿ ಅಡಗಿ ನಿಂತ ಬಹುಸಂಖ್ಯೆಯ ಜನರು ಒಂದು ಆಕಳ ಕರುವನ್ನು ಬೆದರಿಸಿ ಒಮ್ಮೆಲೇ ಆ ಟ್ಯಾಂಕರ್‌ಗೆ ಅಡ್ಡವಾಗಿ ಓಡಿಸಿದ್ದಾರೆ. ಗಾಬರಿಗೊಂಡ ಅದು ರಸ್ತೆಯ ನಡುವೆಯೇ ಓಡಿ ಬಂದಾಗ, ಟ್ಯಾಂಕರ್‌ನ ಡ್ರೈವರ್ ಒಮ್ಮೆಲೇ ಬ್ರೆಕ್ ಹಾಕಿ ವಾಹನವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾನೆ. ಆದರೆ ತುಂಬ ಭಾರವಾಗಿದ್ದ ಆ ವಾಹನದ ವೇಗ ಹೆಚ್ಚಾಗಿದ್ದ ಕಾರಣ, ವೇಗದ ಫೋರ್ಸ್‌ಗೆ ಗಾಡಿ ನಿಲ್ಲುವ ಬದಲು, ಒಮ್ಮೆಲೇ ಎಡಗಡೆ ಪಲ್ಟಿ ಆಗಿ ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಗುಂಡಿಗೆ ಉರುಳಿದೆ. ಟ್ಯಾಂಕರ್ ಉರುಳಿದ್ದೊಂದೇ ತಡ, ಮೊದಲೇ ಎಲ್ಲ ಸಲಕರಣೆಗಳ ಸಹಿತ ಸಿದ್ಧರಾಗಿಯೇ ಬಂದಿದ್ದ ಜನರು, ಅದರ ಟ್ಯಾಂಕ್‌ಗಳಿಗೆ ಹಾರೆಗಳಿಂದ ಹೊಡೆದು ತೂತು ಮಾಡಿದ್ದಾರೆ. ಹಾರೆಯಿಂದ ಮೀಟಿ, ಆ ತೂತುಗಳ ಅಗಲ ಹೆಚ್ಚು ಮಾಡಿದಂತೆ, ಅಲ್ಲಿಂದ ಪೆಟ್ರೋಲ್ ಜೋರಾಗಿ ಹೊರಗೆ ಹರಿಯತೊಡಗಿದೆ. ಅದು ಹರಿಯುತ್ತಿದ್ದಂತೆಯೇ ಅಲ್ಲಿ ಜಮಾಯಿಸಿದ್ದ ಜನರೆಲ್ಲಾ ಅದನ್ನು ಕೊಡ, ಬಕೆಟ್, ಚಿಮಣಿ ಎಣ್ಣೆ ಡಬ್ಬಿ, ಡ್ರಮ್, ಹರವಿ, ಗುಡಿಮಿ, ಕೊಳಗ-ಹೀಗೆ ತಾವು ತಂದಿದ್ದ ತರಹೇವಾರಿ ಸಾಮಾನುಗಳಲ್ಲಿ ತುಂಬತೊಡಗಿದ್ದಾರೆ. ಅವರೆಲ್ಲ ಹೀಗೆ ತುಂಬಿಕೊಳ್ಳುತ್ತಿರುವಂತೆಯೇ ಪೆಟ್ರೋಲ್ ಕೆಳಗೆ ಹರಿದು ಬೀಳುತ್ತ, ಆ ದೊಡ್ಡ ಗುಂಡಿಯಲ್ಲೂ ತುಂಬತೊಡಗಿದೆ. ಅಲ್ಲಿಂದಲೂ ಪೆಟ್ರೋಲ್ ತುಂಬಿಕೊಳ್ಳತೊಡಗಿದ ಜನರು, ಓಡುತ್ತ ಓಡುತ್ತ ಅದನ್ನು ಊರಿನ ಕಡೆಗೆ ಸಾಗಿಸುತ್ತಿದ್ದಾರೆ. ಸುದ್ದಿ ತಿಳಿದ ಊರಲ್ಲಿದ್ದ ಜನ ತಾವೂ ಪೆಟ್ರೋಲ್ ತುಂಬಿಕೊಳ್ಳುವ ಆಸೆಯಿಂದ ಮತ್ತಷ್ಟು ಪಾತ್ರೆ-ಪಡಗಗಳನ್ನು ತೆಗೆದುಕೊಂಡು ಬಂದು, ನಾ ನೀ ಎಂದು ಗದ್ದಲ ಹಾಕುತ್ತ, ಅದನ್ನು ತುಂಬಿಕೊಳ್ಳತೊಡಗಿದ್ದಾರೆ.

ಇಷ್ಟು ವಿವರಗಳನ್ನು ಕೊಡುವಾಗಲೇ ಆ ಅಧಿಕಾರಿ ಮತ್ತೊಂದು ಕಡೆ ಕೈ ಮಾಡಿ ತೋರಿಸುತ್ತ, 'ಅಲ್ಲಿದೆ ನೋಡಿ ಆ ಕಣ, ರಾತ್ರಿ ಅಲ್ಲಿಯೇ ಮಲಗಿದ್ದ ಒಬ್ಬ ಅಜ್ಜನಿಗೆ ಈ ಗದ್ದಲ ಕೇಳಿ ಎಚ್ಚರಾಗಿದೆ. ಗಡಬಡಿಸಿ ಎದ್ದವನೇ, ಏನು ನಡೆದಿದೆಯೆಂದು ನೋಡಲು ಆತನೂ ಅಲ್ಲಿಗೆ ಬಂದಿದ್ದಾನೆ. ನೋಡಿದ ನಂತರ ಅವನಿಗೂ ಆಸೆಯಾಗಿ, ಮತ್ತೆ ಕಣಕ್ಕೆ ಹೋಗಿ, ನೀರು ತುಂಬಿ ಇಟ್ಟಿದ್ದ ಬಿಂದಿಗೆಯನ್ನು ಖಾಲಿ ಮಾಡಿ ಅದರಲ್ಲಿ ತಾನೂ ಪೆಟ್ರೋಲ್ ತುಂಬಿಕೋಳ್ಳಬೇಕೆಂದು ಬಂದಿದ್ದಾನೆ. ಹಾಗೆ ತುಂಬಿಕೊಂಡು ಹಿಂದಿರುಗಿ ಹತ್ತು ಹೆಜ್ಜೆ ಮರಳಿ ಹೋಗಿ, ಅಲ್ಲಿ ಕೊಡ ಕೆಳಗಿಟ್ಟು, ತುದಿಗಾಲಿನಲ್ಲಿ ಕುಳಿತುಕೊಂಡು ಜನರ ಗದ್ದಲ ನೋಡುತ್ತ, ನೋಡುತ್ತ, ಬೀಡಿ ಕಟ್ಟು ತೆಗೆದು, ಕಡ್ಡಿಯನ್ನು ಗೀರಿ ಇನ್ನೇನು ಅದಕ್ಕೆ ಹಚ್ಚಬೇಕು ಅನ್ನುವಾಗಲೇ ಗೀರಿದ ಕಡ್ಡಿಯ ಬೆಂಕಿ ಕೊಡದಲ್ಲಿ ತುಂಬಿದ್ದ ಹೈಸ್ಪೀಡ್ ಪೆಟ್ರೋಲ್‌ಗೆ ಧಗ್ ಎಂದು ಹೊತ್ತಿಕೊಂಡಿದೆ. ಅದನ್ನು ಕೊಡದಲ್ಲಿ ತುಂಬುವಾಗ ಅವನ ಕೈಗಳಿಗೆ ಪೆಟ್ರೋಲ್ ಹತ್ತಿತ್ತಲ್ಲ; ಅದು ಇನ್ನೂ ಆರಿರಲಿಲ್ಲವೆಂದು ಕಾಣುತ್ತದೆ. ತಕ್ಷಣ ಆ ಮೂಲಕ ಬೆಂಕಿ ಅವನನ್ನು ಆವರಿಸಿಕೊಂಡಿದೆ. ಮೈಗೆಲ್ಲ ಉರಿ ಆವರಿಸಿದಾಗ, ಬೆಂಕಿಯ ಸಂಕಟಕ್ಕೆ ಚೀರಾಡುತ್ತ, ತನ್ನನ್ನು ಉಳಿಸಿರೋ ಎಂದು ಆತ ಜನರ ಗದ್ದಲದ ನಡುವೆಯೇ ಆ ಗುಂಡಿಯ ಹತ್ತಿರ ಹೋಗಿದ್ದಾನೆ. ಅಲ್ಲಿ ಹೋಗಿದ್ದೊಂದೇ ತಡ, ಅವನಿಗೆ ಹತ್ತಿದ್ದ ಬೆಂಕಿ, ಅಷ್ಟೊತ್ತಿಗಾಗಲೇ ಆ ದೊಡ್ಡ ಗುಂಡಿಯಲ್ಲಿ ತುಂಬಿ ನಿಂತಿದ್ದ ಪೆಟ್ರೋಲ್‌ಗೆ ಒಮ್ಮೆಲೇ ಭಗ್ ಎಂದು ಹತ್ತಿಕೊಂಡಿದೆ. ಗುಂಡಿಯ ಸುತ್ತ ನನಗೆ, ನಿನಗೆ ಎಂದು ಗದ್ದಲ ಹಾಕುತ್ತ ಪೆಟ್ರೋಲ್ ತುಂಬಲು ನೂಕುನುಗ್ಗಲು ಮಾಡುತ್ತಿದ್ದ ಜನರಿಗೂ ತಕ್ಷಣಕ್ಕೆ ಬೆಂಕಿ ತಗುಲಿದೆ. ಸಂಕಟದಿಂದ ದಿಕ್ಕುಗಾಣದೇ ಅವರೆಲ್ಲಾ ಓಡಾಡತೊಡಗಿದಾಗ ನೂಕುನುಗ್ಗಲಲ್ಲಿ ಆ ಗುಂಡಿಯಲ್ಲೇ ಬಿದ್ದಿದ್ದಾರೆ. ಇಡೀ ಗುಂಡಿಗೇ ಬೆಂಕಿ ವ್ಯಾಪಿಸಿದ್ದರಿಂದ, ಸುತ್ತಲೂ ಅದರೊಳಗೆ ಬಿದ್ದ ಜನರು ಹೀಗೆ ಸುಟ್ಟು ಕರಕಲಾಗಿದ್ದಾರೆ. ಇಲ್ಲಿ ಕಾಣುವುದು ಸತ್ತ ಎಂಬತ್ತು ಜನರ ಶವಗಳು ಮಾತ್ರ. ಉರಿಯುತ್ತಿದ್ದ ಬೆಂಕಿಯಲ್ಲಿ ಸಿಕ್ಕು ಮುಖ ಸುಟ್ಟವರು, ಶರೀರ ಬೆಂದವರು, ಕಾಲು- ಕೈಗಳು ಸುಟ್ಟವರ ಸಂಖ್ಯೆ ಬಹಳಿದೆ. ಅವರನ್ನೆಲ್ಲಾ ಹತ್ತು ಗಂಟೆಯ ಸುಮಾರಿಗೆ ಗುಲ್ಬರ್ಗದ ಸರಕಾರಿ ಆಸ್ಪತ್ರೆ ಮತ್ತು ಎಂ. ಆರ್. ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಅದರಲ್ಲಿ ಹದಿನೆಂಟು ಜನರ ಸ್ಥಿತಿ ತುಂಬ ಕ್ರಿಟಿಕಲ್ ಆಗಿದೆ' ಎಂದು ಮಾಹಿತಿ ಬಂದಿದೆ.-ವಿವರಗಳನ್ನು ಕೇಳುತ್ತಿದ್ದಂತೆಯೇ ನಾನು ಮೂಕನಂತಾಗಿ ಹೋಗಿದ್ದೆ. ಓ ದೇವರೇ! ಎಂಥ ದುರಂತವಿದು!!

ಅಧಿಕಾರಿ ಇಷ್ಟನ್ನು ಹೇಳುತ್ತಿರುವಾಗಲೇ ನಾನು ನಡುವೆಯೇ ಬಾಯಿ ಹಾಕಿ, 'ಸರ್, ಡ್ರೈವರ್ ಏನಾಗಿದ್ದಾರೆ ಪಾಪ?' ಎಂದು ಕೇಳಿದಾಗ, ಅವರು - ತನ್ನ ನಿಯಂತ್ರಣ ತಪ್ಪಿ, ಟ್ಯಾಂಕರ್ ಪಲ್ಟಿ ಆದಕೂಡಲೇ ಅದರೊಂದಿಗೇ ಕೆಳಗೆ ಬಿದ್ದ ಡ್ರೈವರ್ ಮತ್ತು ಕ್ಲೀನರ್ ಇಬ್ಬರನ್ನೂ ಈ ಜನರು ಮೊದಲು ಎಳೆದು ಹೊರತೆಗೆದು, ಒಯ್ದು ದೂರದ ಗಿಡಗಳಿಗೆ ಹಗ್ಗದಿಂದ ಕಟ್ಟಿಹಾಕಿದ್ದಾರೆ. ಅವರು ಓಡಿ ಹೋಗಿ ಯಾರಿಗಾದರೂ ಸುದ್ದಿ ಮುಟ್ಟಿಸಬಾರದೆಂಬುದೇ ಜನರ ಉದ್ದೇಶವಾಗಿತ್ತು. ನಾವು ಬಂದು ಬಿಡಿಸುವ ವರೆಗೂ ಅವರಿಬ್ಬರೂ ಗಿಡಕ್ಕೆ ಕಟ್ಟಿದ ಸ್ಥಿತಿಯಲ್ಲಿಯೇ ಇದ್ದರು. ಕೂಗಾಡಿ ಕೂಗಾಡಿ ಆ ಇಬ್ಬರ ದನಿಗಳೂ ಬಿದ್ದು ಹೋಗಿವೆ. ಅವರನ್ನು ನಮ್ಮ ಸಿಬ್ಬಂದಿಯವರು ಬಸವಕಲ್ಯಾಣದ ಪೋಲೀಸ್ ಸ್ಟೇಶನ್ನಿಗೆ ಕರೆದುಕೊಂಡು ಹೋಗಿದ್ದಾರೆ. ನಾನು ಈ ವರೆಗೆ ಕೊಟ್ಟ ಎಲ್ಲ ವಿವರಗಳೂ ಡ್ರೈವರ್ ಮತ್ತು ಕ್ಲೀನರ್ ಇಬ್ಬರೂ ಕೊಟ್ಟ ಪ್ರಥಮ ಮಾಹಿತಿ ಆಧಾರದವೇ - ಎಂದು ರನ್ನಿಂಗ್ ಕಾಮೆಂಟ್ರೀ ರೀತಿಯಲ್ಲಿಯೇ ಪೂರ್ತಿ ವಿವರಗಳನ್ನು ಕೊಟ್ಟರು ಆ ಅಧಿಕಾರಿ. ಇಡೀ ಘಟನೆ ನಡೆದದ್ದು ಕಣ್ಣ ಮುಂದೆಯೇ ಬಂದ ಹಾಗಿತ್ತು ಪೋಲೀಸ್ ಆಧಿಕಾರಿ ಕೊಟ್ಟ ವಿವರ. ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳ ಕೈವಾಡ ಆ ಘಟನೆಯಲ್ಲಿ ಇರಲಿಲ್ಲವಾದ ಕಾರಣ, ಪೋಲೀಸಿನವರು ನಡೆದದ್ದನ್ನೆಲ್ಲಾ ಇದ್ದ ಹಾಗೆಯೇ ವಿವರಿಸಿದ್ದರು. ಈ ಮಾಹಿತಿಯನ್ನೇ ಅವರು ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಬಂದಿದ್ದ ಅನೇಕ ಪತ್ರಕರ್ತರಿಗೂ ಹೇಳಿದ್ದರಂತೆ.

ಎಲ್ಲ ಧ್ವನಿಮುದ್ರಿಸಿಕೊಂಡು ಆ ಅಧಿಕಾರಿಗೆ ಧನ್ಯವಾದ ಹೇಳುತ್ತ, 'ಸರ್, ಆ ಡ್ರೈವರ್‌ನನ್ನು ಸ್ವಲ್ಪ ಮಾತಾಡಿಸಬಹುದೆ?' ಎಂದು ಕೇಳಿದ ಕೂಡಲೇ ತುಂಬ ಸಹಕಾರ ಕೊಟ್ಟ ಅವರು, ತಕ್ಷಣ ತಮ್ಮ ವೈಯರ್‌ಲೆಸ್ ಸೆಟ್ ಮೂಲಕ ಮಾತಾಡಿ, 'ಆಕಾಶವಾಣಿಯಿಂದ ಒಬ್ಬರು ವರದಿಗಾರರು ಕಛೇರಿಗೆ ಬರುತ್ತಿದ್ದಾರೆ, ಅವರಿಗೆ ಟ್ಯಾಂಕರ್‌ನ ಡ್ರೈವರ್‌ನನ್ನು ಮಾತಾಡಿಸಲು ಬಿಡಿ' ಎಂದು ತಿಳಿಸಿದರು. ತಡ ಮಾಡದೇ ನಾನು ನಮ್ಮ ಡ್ರೈವರ್ ಗುರುಲಿಂಗಯ್ಯ ಅವರಿಗೆ ಗಾಡಿಯನ್ನು ಬಸವಕಲ್ಯಾಣದ ಕಡೆ ಓಡಿಸಲು ಹೇಳಿದೆ.

ರಕ್ಷಣೆಗಾಗಿ ಡ್ರೈವರ್ ಮತ್ತು ಕ್ಲೀನರ್ ಇಬ್ಬರನ್ನೂ ಸರಳುಗಳಿದ್ದ ಒಂದು ಸಣ್ಣ ಕೋಣೆಯಲ್ಲಿ ಕೂಡಿಸಿದ್ದರು. ನಾನು ಹೊರಗಿನಿಂದಲೇ ಡ್ರೈವರನನ್ನು ಮಾತಾಡಿಸಿದಾಗ, ಬಿದ್ದುಹೋಗಿದ್ದ ಗೊಗ್ಗರು ದನಿಯಲ್ಲೇ ಆತ ಕೂಡ ಪೋಲೀಸ್ ಅಧಿಕಾರಿಗಳು ಹೇಳಿದ ವಿವರಗಳನ್ನೇ ಕೊಡುತ್ತ, 'ಸರ್, ನಾನು ಮತ್ತು ನಮ್ಮ ಕ್ಲೀನರ್ ಇಬ್ಬರೂ ಕೂಗಿ ಕೂಗಿ, 'ಅದು ವಿಮಾನಕ್ಕೆ ಹಾಕುವ ಹೈ ಸ್ಪೀಡ್ ಪೆಟ್ರೋಲ್ ಇದೆ. ಬೇಗನೇ ಬೆಂಕಿ ಹತ್ತುತ್ತದೆ, ಮುಟ್ಟಬೇಡಿ', ಎಂದು ಚೀರಿ ಹೇಳಿದರೂ ಯಾರೊಬ್ಬರೂ ಅದನ್ನು ಕೇಳಿಸಿಕೊಳ್ಳಲಿಲ್ಲ. ನೋಡುತ್ತಿದ್ದ ಹಾಗೆಯೇ ಬೆಂಕಿ ಹತ್ತಿ ಉರಿಯತೊಡಗಿತು. ನಾವು ಒದರಾಡುತ್ತಲೇ ಇದ್ದೆವು. ಅವರು ಪೆಟ್ರೋಲ್ ತುಂಬುತ್ತಲೇ ಇದ್ದರು. ಸುತ್ತಲೂ ಎಷ್ಟೋ ಜನರು ಅದರೊಳಗೇ ಬಿದ್ದು ಬಾಯಿ ಬಾಯಿ ಬಡಿದುಕೊಳ್ಳುತ್ತ, ಚಟಪಟ ಸಾಯುತ್ತಿದ್ದುದನ್ನು ನೋಡಿ ಸಂಕಟವಾಗುತ್ತಿತ್ತು. ಆದರೆ ನಾವು ಏನೂ ಮಾಡುವ ಹಾಗಿರಲಿಲ್ಲ. ನಮ್ಮಿಬ್ಬರ ಕೈಗಳನ್ನು ಗಿಡದ ಹಿಂದೆ ಒಯ್ದು ಬಿಡಿಸಿಕೊಳ್ಳದಂತೆ ಕಟ್ಟಿ ಹಾಕಿದ್ದರು. ಜಗ್ಗಾಡಿ ಜಗ್ಗಾಡಿ ಕೈಗಳು ಕೆತ್ತಿ ರಕ್ತ ಹರೀದಿದೆ ನೋಡಿ. ಪೋಲೀಸರು ಬಂದು ಹಗ್ಗ ಕತ್ತರಿಸಿದಾಗಲೇ ನಾವು ಆ ಸಂಕಟದಿಂದ ಹೊರಗೆ ಬಂದದ್ದು' ಎಂದು ಕೈಗಳನ್ನು ತೋರಿಸುತ್ತ, ಅವರೂ ವಿವರವಾಗಿ ತಮ್ಮ ನೋವನ್ನು ತೋಡಿಕೊಂಡರು. ಅವರಿಬ್ಬರೂ ಕನ್ನಡಿಗರೇ ಆಗಿದ್ದ ಕಾರಣ ಕನ್ನಡದಲ್ಲಿಯೇ ಮಾತಾಡಿದ್ದರು. ಇದಾದ ನಂತರ ಪಬ್ಲಿಕ್ ಓಪೀನಿಯನ್ ಇರಲಿ ಎಂದು, ಪೊಲೀಸ್ ಕಛೇರಿಯ ಎದುರು ನಿಂತಿದ್ದ ಒಬ್ಬ ಹಿರಿಯ ವ್ಯಕ್ತಿಯ ಕೆಲವು ಮಾತುಗಳನ್ನೂ ನಾನು ಧ್ವನಿಮುದ್ರಿಸಿಕೊಂಡೆ. ಇಷ್ಟು ಕೆಲಸ ಮುಗಿಸಿ, ಕಛೇರಿಯಲ್ಲಿದ್ದವರಿಗೆ ಧನ್ಯವಾದ ಹೇಳಿ ಬಸವಕಲ್ಯಾಣದಿಂದ ಹೊರಬಿದ್ದಾಗ ಸಂಜೆ ನಾಲ್ಕು ಗಂಟೆಯಾಗಿತ್ತು.

ಇಲ್ಲಿಂದ ಮುಂದೆ ನಾನು ಮಾಡಿದ್ದು ಎಡವಟ್ಟಿನ ಕೆಲಸ. ಬಸವಕಲ್ಯಾಣದಿಂದ ಸೀದಾ ಗುಲ್ಬರ್ಗಕ್ಕೆ ಹೋಗುವುದನ್ನು ಬಿಟ್ಟು, ನೋಡೋಣ, ಆ ಜನರ ಊರಿಗೆ ಹೋಗಿ ತಮ್ಮ ಸಂಬಂಧಿಕರನ್ನು ಕಳೆದುಕೊಂಡ ಕೆಲವರ ಅಭಿಪ್ರಾಯಗಳನ್ನು ರೆಕಾರ್ಡ್ ಮಾಡಲು ಸಾಧ್ಯವೇ ಎಂದು ಯೋಚಿಸಿ, ನಮ್ಮ ಗುರುಲಿಂಗಯ್ಯ ಅವರಿಗೆ ಆ ಹಳ್ಳಿಯ ಕಡೆ ಗಾಡಿ ಬಿಡಲು ಹೇಳಿದೆ. ವಾಹನ ಇನ್ನೇನು ಊರ ಅಗಸಿಯನ್ನು ಪ್ರವೇಶ ಮಾಡಬೇಕು, ಎಲ್ಲಿಂದಲೋ ಬೀಸಿ ಬರತೊಡಗಿದವು ನೋಡಿ ಕಲ್ಲುಗಳು! ಕಿಟಕಿ ತೆಗೆದುಕೊಂಡು ಕುಳಿತಿದ್ದ ನನ್ನ ಕೈಮೇಲೆ ರೊಂಯ್ ಎಂದು ಬೀಸಿ ಬಂದ ಒಂದು ಕಲ್ಲು ತರಚುಗಾಯ ಮಾಡಿದಾಗ, ರಕ್ತ ಒಸರತೊಡಗಿತು. ನಮ್ಮ ಗುರುಲಿಂಗಯ್ಯ ತುಂಬ ಜಾಣ ಡ್ರೈವರ್. 'ಸರ್, ಊರೊಳಗ ಹೋಗೋದು ವಾಜಿಮಿ ಅನಸೂದುಲ್ಲ, ಗಾಡೀ ಇಲ್ಲೇ ಹೊಳಿಸಿ ಬಿಡ್ಲ್ಯಾ?' ಎಂದು ಹೇಳಿದಾಗ ಅವರ ಅಭಿಪ್ರಾಯ ನನಗೂ ಸರಿ ಅನ್ನಿಸತು. ಅಷ್ಟರಲ್ಲಿ ಡ್ರೈವರ್ ಗುರುಲಿಂಗಯ್ಯ ಅವರಿಗೂ ಒಂದು ಕಲ್ಲು ಬೀಸಿ ಬಂದು ಬಡಿದಿತ್ತು. ಕಾಣದ ಜಾಗೆಗಳಿಂದ ಒಂದೊಂದೇ ಕಲ್ಲುಗಳು ತೂರಿ ಬರುತ್ತಿದ್ದ ಹಾಗೆಯೇ ಗುರುಲಿಂಗಯ್ಯ ಅವಸರವಸರವಾಗಿ ರಸ್ತೆಯ ಕೂಡುಗತ್ತರಿಯಲ್ಲಿ ವಾಹನ ತಿರುಗಿಸಿ, ಅಷ್ಟೇ ವೇಗದಲ್ಲಿ ಬಂದ ದಾರಿ ಹಿಡಿದು ಹಿಂದಕ್ಕೆ ಗಾಡಿ ಓಡಿಸತೊಡಗಿದ್ದರು.

ಒಂದು ಅರ್ಧ ಫರ್ಲಾಂಗ್ ವಾಪಸ್ ಹೋಗಿರಬೇಕು, ದಾರಿಯಲ್ಲಿ ದೊಡ್ಡ ದನಿತೆಗೆದು, ದಂಡು ದಂಡಾಗಿ ಅಳುತ್ತ ಕರೆಯುತ್ತ, ನೆಲ ಬಡಿಯುತ್ತ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವ ಹೆಣ್ಣುಮಕ್ಕಳನ್ನು ನೋಡಿ ಕರುಳು ಕಿವುಚಿದ ಹಾಗಾಗತೊಡಗಿತ್ತು. ಒಂದು ಕಡೆ ಗಾಡಿ ನಿಲ್ಲಿಸಿ, 'ಏನಬೇ ಯವ್ವಾ, ಹಿಂತಾ ಕೆಲಸಾ ಮಾಡಾಕ ಯಾಕ ಬಿಟ್ರಿ ನಿಮ್ಮ ಮನೀಯವರನ್ನ?' ಎಂದು ಕೇಳಿದರೆ, 'ಇಲ್ರಿ ಸಾವ್ಕಾರ್ರ, ನಮ್ಮವ್ರು ಎಣ್ಣೀ ತುಂಬ್ಕೊಳ್ಳಾಕ ಹೋಗಿರ್‍ಲಿಲ್ರೀ, ಅದನ್ನ ನೋಡಾಕ ಹೋಗಿದ್ರರಿ, ಸುಟಗೊಂಡು ಸತ್ತಾರ್ರೀ, ಎಲ್ಲಿಂದ ತರೂದ್ರೀ ಅವರ್‍ನ ಇನ್ನ....' ಎಂದು ಒಬ್ಬರು ಹೇಳಿದ್ರೆ, ಮತ್ತೊಬ್ಬರದು, 'ನಮ್ಮ ಹಣೇಬರದಾಗ ಕಳ್ಳತನಾ ಒಂದs ಬರದೈತ್ರ್ಯೋ ಯಪ್ಪಾ. ಹೊಟ್ಟೀ ಸಲವಾಗಿ ಕಳ್ಳತನಾ ಮಾಡಾಕ್ ಹೋಗಿ ಜೀಂವಾ ಕಳಕೊಳ್ಳುವಂಗಾತೋ ಯಪ್ಪಾ, ಅವರ್‍ನಷ್ಟs ಒಯ್ದು ನನ್ನ್ಯಾಕ ಬಿಟ್ಟ್ಯೋ ದೇವ್ರ? ನನ್ನೂ ತೊಗೊಂಡ್ ಹೋಗೋ ತಂದೆ.....' ಎಂದು ಹಾಡಾಡಿಕೊಂಡು ಅಳುವ ದನಿ! ತನ್ನ ಗಂಡ, ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಳು ಹೆಣ್ಣುಮಗಳು-ಹೀಗೆ ಎಲ್ಲರನ್ನೂ ಕಳೆದುಕೊಂಡು, ಪೂರ್ತಿ ಅನಾಥಳಾಗಿದ್ದ ಮತ್ತೊಬ್ಬ ತಾಯಿ ನೆಲ ಕೆದರಿ, ಮಣ್ಣು ತೂರಾಡುತ್ತ, ಬೋರಾಡುತ್ತ, 'ಅಯ್ಯೋ ಯಪ್ಪಾ ನನ್ನ ಗಂಡಾ ಮತ್ತ್ ಮೂರೂ ಮಂದಿ ಮಕ್ಕಳ್ನ ಹೊಳ್ಳಿ ತಂದ್ ಕೊಡ್ರ್ಯೋ ಯಪ್ಪಾ'. ಎಂದು ಅಳುವುದನ್ನು ಕೇಳಿದ ನನಗೆ, ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯ್ತು. ಆನ್ ಮಾಡಿದ್ದ ಟೇಪ್ ರೆಕಾರ್ಡರ್‌ನಲ್ಲಿ ಆ ತಾಯಂದಿರ ಆಕ್ರಂದನವೆಲ್ಲಾ ಧ್ವನಿಮುದ್ರಣಗೊಂಡಿತ್ತು.

ಹೃದಯ ಬಿರಿಯುವ ಈ ಸಂಕಟವನ್ನು ರೆಕಾರ್ಡ್ ಮಾಡುವುದು ಸಾಕೆನಿಸಿ, ಅಲ್ಲಿಂದ ಸೀದಾ ಗುಲ್ಬರ್ಗದ ದಾರಿ ಹಿಡಿದಿದ್ದೆವು. ಇಡೀ ದಿನ ಏನೂ ತಿನ್ನದಿದ್ದ ಹೊಟ್ಟೆಯಲ್ಲಿ ತುಂಬಿದ್ದು ಆ ಘಟನೆಯ ನೋವು ಮಾತ್ರ. ಕಣ್ತುಂಬ ನಿಂತದ್ದು ಕರಿದು ಮಿರ್ಚಿಯಂತಾಗಿದ್ದ ಹೆಣಗಳು, ಇಡೀ ಘಟನೆಗೆ ಸಾಕ್ಷಿಯೆಂಬಂತೆ ಸುಟ್ಟು ಕರಕಲಾಗಿ ಬಿದ್ದಿದ್ದ ಪೆಟ್ರೋಲ್ ಟ್ಯಾಂಕರ್ ಹಾಗೂ ಗುಂಡಿಯ ಸುತ್ತಲೂ ಅನಾಥವಾಗಿ ಹರವಿಕೊಂಡಿದ್ದ ಖಾಲಿ ಕೊಡ, ಡ್ರಮ್ಮು, ಬಕೆಟ್, ಕೊಳಗ, ಹಂಡೆ, ತತ್ರಾಣಿ, ಗುಡುಮಿ, ಚಿಮಣಿ ಎಣ್ಣಿಯ ಡಬ್ಬಗಳು!! ಹೌದು ಖಾಲಿ ಖಾಲಿಯಾಗಿದ್ದ ಪಾತ್ರೆಗಳು!! ಎಂ. ಎ. ಓದುವಾಗ, ಭಾರತೀಯ ಕಾವ್ಯ ಮೀಮಾಂಸೆ ಓದಿಸುತ್ತಿದ್ದ ನಮ್ಮ ಗುರುಗಳಿಗೆ ರೌದ್ರ ಮತ್ತು ಬೀಭತ್ಸ ರಸಗಳಿಗೆ ಸೂಕ್ತ ಉದಾಹರಣೆ ಕೊಡಲು ಆಗಿರಲೇ ಇಲ್ಲ. ನನಗೆ ಅವೆರಡೂ ರಸಗಳ ನಿಜಸ್ವರೂಪ ಅರ್ಥವಾದದ್ದು ಆ ದೃಶ್ಯಗಳಿಂದ.

ಅಲ್ಲಿಂದ ವಾಪಸಾಗುತ್ತಿದ್ದಂತೆಯೇ ನೇರವಾಗಿ ಹೋದದ್ದು, ಗುಲ್ಬರ್ಗದ ಸರಕಾರಿ ದವಾಖಾನೆಗೆ. ಅಲ್ಲಿ ನೋಡಿದ ದೃಶ್ಯಗಳು ಇನ್ನೂ ಹೃದಯವಿದ್ರಾವಕ!!. ಘಟನೆ ನಡೆದ ಸ್ಥಳದಲ್ಲಿ ಸತ್ತವರು ಸತ್ತಾದರೂ ಹೋಗಿದ್ದರು. ಆದರೆ, ಇಲ್ಲಿ ಅರ್ಧ ದೇಹ ಸುಟ್ಟವರು. ಮುಕ್ಕಾಲು ಭಾಗ ಸುಟ್ಟವರು, ಎಂಬತ್ತು-ತೊಂಬತ್ತು ಪ್ರತಿಶತ ಸುಟ್ಟವರು, ಕೈಗಳು ಬೆಂದು ಹೋದವರು, ಕಾಲುಗಳು ಸುಟ್ಟವರು ಮತ್ತು ಅವರೆಲ್ಲರ ಮುಗಿಲು ಮುಟ್ಟುವ ಆಕ್ರಂದನ!! ಅಯ್ಯೋ ದೇವರೇ! ಇವರೆಲ್ಲ ಆ ನೋವನ್ನು ಹೇಗೆ ಸಹಿಸಿಕೊಳ್ಳುತ್ತಿರಬೇಕು!! ನಾಲ್ಕು ವಾರ್ಡುಗಳಲ್ಲಿ ಕಾಟ್‌ಗಳ ಮೇಲೆ ಮತ್ತು ನೆಲದ ಮೇಲೆ ಮಲಗಿಸಿದ್ದ ಅವರೆಲ್ಲರೂ ಕರುಳು ಬಿರಿಯುವಂತೆ ಒದರಾಡುತ್ತಿದ್ದಾರೆ, ಚೀರಾಡುತ್ತಿದ್ದಾರೆ, 'ಯಪ್ಪಾ ಮಲಾಮು ಹಚ್ರ್ಯೋ', 'ಇಂಗ್ಲೀಸ್ ಮಾಡ್ರ್ಯೋ', 'ಗುಳಗೀ ಕೊಡ್ರ್ಯೋ' ಎಂಬ ಅವರೆಲ್ಲರ ನರಳಾಟದಿಂದಲೇ ತುಂಬಿ ಹೋಗಿದೆ ಇಡೀ ದವಾಖಾನೆಯ ವಾತಾವರಣ! ಕೆಲವರ ಮುಖಗಳು ಸುಟ್ಟು ಕರಕಲಾಗಿ ಅವು ಮನುಷ್ಯರ ಮುಖಗಳೆ? ಎಂದು ಸಂದೇಹ ಬರುವಂತಾಗಿವೆ! ನಾಲ್ಕಾರು ಜನರು 'ಯಪ್ಪಾ ನಮ್ಮನ್ನ ಲಗೂನ ಕೊಂದರs ಬಿಡ್ರ್ಯೋ' ಎಂದು ಒರಲುತ್ತಿದ್ದ ದನಿಗಳಂತೂ ಎಂಥ ಕಲ್ಲೆದೆಯವರನ್ನೂ ಕರಗಿಸಿಬಿಡುವಂತಿದ್ದವು. ನೂರರ ಹತ್ತಿರ ಇರಬಹುದಾಗಿದ್ದ ಆ ಜನರನ್ನೆಲ್ಲ ಹಾಕಿದ್ದ್ ವಾರ್ಡುಗಳ ತುಂಬ ಸುಟ್ಟ ಮಾಂಸದ ವಿಚಿತ್ರ ಕಮಟು ವಾಸನೆ ತುಂಬಿಹೋಗಿತ್ತು. ಮುಖಗವಸುಗಳನ್ನು ಹಾಕಿಕೊಂಡು ಸಾಧ್ಯವಿರುವ ಎಲ್ಲ ಸುಶ್ರೂಷೆ ಮಾಡುತ್ತಿದ್ದ ವೈದ್ಯರು, ನರ್ಸ್‌ಗಳು, ಸಹಾಯಕರು ಒಳಗೆ ಓಡಾಡುತ್ತಿದ್ದರೆ, ವಾರ್ಡುಗಳ ಹೊರಗೆ ಸಂಬಂಧಿಕರ ದೊಡ್ಡ ಗುಂಪಿನ ರಂಪಾಟದ ದನಿ!

ಅಲ್ಲಿನ ಯಾವ ದನಿಯನ್ನೂ ಧ್ವನಿಮುದ್ರಿಸಿಕೊಳ್ಳುವ ಸ್ಥಿತಿ ಇರಲಿಲ್ಲ. ವಾರ್ಡುಗಳ ಮೇಲ್ವಿಚಾರಣೆಗೆ ನಿಯುಕ್ತರಾಗಿದ್ದ ಹಿರಿಯ ವೈದ್ಯರನ್ನು ಮಾತಾಡಿಸಿ, ಒಟ್ಟಾರೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿವರ ಪಡೆದು ಮನೆಗೆ ಮರಳಿದಾಗ ರಾತ್ರಿ ಹತ್ತೂವರೆ ಗಂಟೆಯಾಗಿತ್ತು. ದಿನವಿಡೀ ಉಣ್ಣದಿದ್ದರೂ, ಆಗಲೂ ನನಗೆ ಉಣ್ಣುವ ಮನಸ್ಸಾಗಲಿಲ್ಲ. ಹೆಂಡತಿಯ ಒತ್ತಾಯಕ್ಕೆ ನಾಲ್ಕು ತುತ್ತು ಬಾಯಲ್ಲಿ ತುರುಕಿ, ಎಂಟು ತಿಂಗಳ ಮಗಳನ್ನು ತೊಡೆಯ ಮೇಲೆ ಎತ್ತಿಕೊಂಡು ಕುಳಿತು ಒಂದಿಷ್ಟು ಉಸಿರು ಬಿಡುವಾಗ ಮತ್ತೆ ಕಣ್ಮುಂದೆ ಬಂದದ್ದು ಇಡೀ ದಿನ ನೋಡಿದ ಆ ಅಕರಾಳ, ವಿಕರಾಳ ದೃಶ್ಯಗಳೇ. ನನ್ನ ಮಗಳಿಗೆ ಕುಳಿತುಕೊಳ್ಳಲು ಈ ತೊಡೆ ಇದೆ, ಆದರೆ ಅಲ್ಲಿ ಸತ್ತ ಎಂಬತ್ತು ಜನರ ಮಕ್ಕಳು ಎಲ್ಲಿ ಕುಳಿತುಕೊಳ್ಳಬೇಕು? ಯಾರೊಂದಿಗೆ ಆಡಬೇಕು? ಮತ್ತೆ ಮತ್ತೆ ಕಾಡತೊಡಗಿದ ಉತ್ತರಗಳಿಲ್ಲದ ಈ ಪ್ರಶ್ನೆಗಳನ್ನೇ ಧೇನಿಸುತ್ತ ಮಲಗಿದಾಗ, ಕಣ್ತುಂಬ ಅವೇ ದೃಶ್ಯಗಳು, ಕಿವಿಯಲ್ಲಿ ಅದೇ ಆಕ್ರಂದನದ ದನಿ, ಬೋರಾಡಿ ಅಳುತ್ತಿದ್ದ ತಾಯಂದಿರ ಗೋಳಾಟ! ಸುಟ್ಟು ಅರೆಬೆಂದ ಆ ಮುಖಗಳೇ ಎದುರು ಬಂದಂತಾಗಿ, ಇಡೀ ದಿನ ದಣಿದಿದ್ದರೂ ಶರೀರದ ಹತ್ತಿರ ಒಂದು ಕ್ಷಣ ಕೂಡಾ ನಿದ್ದೆ ಸುಳಿಯಲಿಲ್ಲ.

ಮರುದಿನ ಎಂಟು ಗಂಟೆಗೇ ಕಛೇರಿಗೆ ಹೋಗಿ, ಸಂಕಲನದ ಸ್ಟುಡಿಯೋದಲ್ಲಿ ಹೊಕ್ಕು, ಧ್ವನಿಮುದ್ರಿಸಿ ತಂದಿದ್ದ ಎಲ್ಲ ಮಾಹಿತಿಯನ್ನೂ ಅಗತ್ಯಕ್ಕೆ ತಕ್ಕಷ್ಟು ಸೋಸಿಕೊಂಡು, ಮಾಹಿತಿಗೆ ಪೂರಕವಾದ ಸ್ಕ್ರಿಪ್ಟನ್ನು ಸಿದ್ಧಪಡಿಸಿಕೊಂಡು, ಇಡೀ ದಿನ ನಿಂತು ನಿರ್ಮಿಸಿದ ದೃಶ್ಯಧ್ವನಿಚಿತ್ರದ ಹೆಸರು ’ಬೆಂಕಿ ತಿಂದ ಬದುಕು’. ಈ ವರೆಗಿನ ಲೇಖನದುದ್ದಕ್ಕೂ ಬಂದ ಮಾಹಿತಿಯೇ ಆ ಕಾರ್ಯಕ್ರಮದಲ್ಲಿ ಯಥಾವತ್ತಾಗಿ ಬಾನುಲಿ ದನಿಯಾಗಿ ರೂಪು ಪಡೆದಿತ್ತು. ರಾತ್ರಿ ಒಂಬತ್ತೂವರೆಯಿಂದ ಹತ್ತೂವರೆಯ ವರೆಗೆ, ಒಂದು ತಾಸಿನ ಅವಧಿಗೆ ಪ್ರಸಾರವಾದ ಆ ಹೃದಯವಿದ್ರಾವಕ ಕಾರ್ಯಕ್ರಮವನ್ನು ಕೇಳಿದವರು ಮರುದಿನ ಬರೆದ ಪತ್ರಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿತ್ತು!! ಬೆಂಕಿ ತಿಂದ ಬದುಕು, ಒಂದು ಕಾರ್ಯಕ್ರಮವಾಗಿ ಜನತೆಯನ್ನು ತಲುಪಿರಲಿಲ್ಲ, ಬದಲಾಗಿ ಮನುಷ್ಯನ ದುರಂತದ ಕಥೆಯಾಗಿ ಕೇಳಿದವರ ಹೃದಯವನ್ನೇ ನಡುಗಿಸಿತ್ತು, ಕರುಳನ್ನೇ ಕತ್ತರಿಸಿತ್ತು. ಆಕಾಶವಾಣಿಯೊಂದೇ ಪ್ರಬಲ ದನಿಮಾಧ್ಯಮವಾಗಿದ್ದ ಆ ದಿನಗಳಲ್ಲಿ ಆ ಕಾರ್ಯಕ್ರಮವನ್ನು ಜನರು ಕೇಳಿರಲಿಲ್ಲ, ಕೇಳುತ್ತಲೇ ನೋಡಿದ್ದರು ಕೂಡ. ಕೆಲವರು ಪತ್ರ ಬರೆದದ್ದೂ ಹಾಗೆಯೇ.

ಮಾಧ್ಯಮದಲ್ಲಿ ಕೆಲಸ ಮಾಡುವವರು ಬರೀ ವರಿದಿಗಾರರೆ, ಸುದ್ದಿ ಹಾಗೂ ಮಾಹಿತಿಯನ್ನು ಬಿತ್ತರಿಸುವವರು ಮಾತ್ರವೆ? ಇಂಥ ಘಟನೆಗಳು ಅವರನ್ನು ಕೇವಲ ವೃತ್ತಿಪರರನ್ನಾಗಿ ಮಾತ್ರ ಮಾಡುತ್ತವೆಯೇ? ಅವರು ಕೇವಲ ಯಂತ್ರಗಳಂತೆ ಇಂಥ ಘಟನೆಗಳನ್ನು ಮಾಧ್ಯಮಕ್ಕೆ ಹೊಂದಿಸುತ್ತಾರೆಯೆ? ಅವರ ಸಂವೇದನೆಗಳು ಇಂಥ ಕರುಣೆಯ ಕಥೆಗಳಿಗೆ ಕರಗುವುದಿಲ್ಲವೆ? ಇದು ತಮ್ಮ ವೃತ್ತಿಯಲ್ಲಿ ಮಾಡಿದ ದೊಡ್ಡ ಸಾಧನೆಯೆಂದು ಅವರು ಹೆಮ್ಮೆ ಪಡುತ್ತಾರೆಯೆ? ಇಂಥ ಕಾರ್ಯಕ್ರಮ ಸಿದ್ಧಪಡಿಸಿದ ಕಾರಣಕ್ಕೆ ಸಿಗುವ ಶಹಬ್ಬಾಶ್, ಮೆಚ್ಚುಗೆ ಅಥವಾ ಕೀರ್ತಿ ಅವರ ಹೊಟ್ಟೆ ತುಂಬಿಸುತ್ತವೆಯೆ?-ಇಂಥ ನೂರಾರು ಪ್ರಶ್ನೆಗಳು ಕೆಲವರನ್ನು ಕಾಡಬಹುದು. ಇಂಥ ಪ್ರಶ್ನೆಗಳಿಗೆ ತರಹೇವಾರಿ ಉತ್ತರಗಳೂ ಇರಬಹದು-ಬರಬಹುದು. ಆದರೆ, ಹೃದಯದೊಳಗಿನ ಸತ್ಯವನ್ನು ಹೇಳಲೇಬೇಕು- ಈ ಕಾರ್ಯಕ್ರಮವನ್ನು ನಾನು ನಿರ್ಮಿಸಿ ಪ್ರಸಾರ ಮಾಡಿದೆ ಎಂದು ಹೆಮ್ಮೆ ಪಡುವ ಭಾವನೆ ನನಗೆ ಒಂದು ಕ್ಷಣ ಕೂಡ ಆಗಲೂ ಬರಲಿಲ್ಲ, ಈ ಲೇಖನ ಬರೆಯುವಾಗಲೂ ಬಂದಿಲ್ಲ. ಇದಕ್ಕೆ ಬದಲಾಗಿ ಮನುಷ್ಯನ ನೋವು, ಸಂಕಟ, ಯಾತನೆಗಳ ಹಿಂದಿರುವ ವಾಸ್ತವ ಕಾರಣಗಳನ್ನು ಶೋಧಿಸುವ ಕರುಳ ತುಡಿತ ಮಾತ್ರ ಸದಾ ಎಚ್ಚರವಾಗಿರುವಂತೆ ಮಾಡಿದೆ, ನಾನು ಮಾಡಿದ ಈ ಸಣ್ಣ ಪ್ರಯತ್ನ.

ಬೆಂಕಿ ತಿಂದ ಬದುಕು ಕಾರ್ಯಕ್ರಮ ಪ್ರಸಾರವಾಗಿ ನಾಲ್ಕು ದಿನ ಕಳೆದಿರಬೇಕು. ದಿಲ್ಲಿಯ ನಮ್ಮ ಮಹಾನಿರ್ದೇಶನಾಲಯದವರಿಗೆ ಈ ಸುದ್ದಿ ತಿಳಿದು, ಆ ಇಡೀ ಕಾರ್ಯಕ್ರಮದ ಪ್ರತಿಯೊಂದನ್ನು ತರಿಸಿಕೊಂಡು ದಿಲ್ಲಿ ಆಕಾಶವಾಣಿಯಿಂದ ಅದರ ಆಯ್ದ ಭಾಗಗಳನ್ನು ಹಿಂದಿಗೆ ತರ್ಜಮೆ ಮಾಡಿ ಪ್ರಸಾರ ಮಾಡಿದರು. ಈ ಇಡೀ ಕಾರ್ಯಕ್ರಮ ಮೂಡಿಬರುವಲ್ಲಿ ಅಂದು ಗುಲ್ಬರ್ಗ ಆಕಾಶವಾಣಿಯ ಆಗಿನ ನಿರ್ದೇಶಕರಾಗಿದ್ದ ಜಿ.ಕೆ.ಕುಲಕರ್ಣಿ ಅವರ ಪ್ರೋತ್ಸಾಹವನ್ನು ನಾನೆಂದೂ ಮರೆಯಲಾರೆ. ಜೊತೆಗೆ ನೆನೆಯಲೇಬೇಕಾದ ಇನ್ನಿಬ್ಬರು ವ್ಯಕ್ತಿಗಳೆಂದರೆ ಪ್ರಭಾಕರ ಗುರ್ಜಾರ್ ಎಂಬ ಇಂಜನೀಯರ್ ಸಹಾಯಕರು ಮತ್ತು ಡ್ರೈವರ್ ಗುರುಲಿಂಗಯ್ಯ. ಈ ಕಾರ್ಯಕ್ರಮದ ನಿರ್ಮಾಣದಲ್ಲಿ ಮಂಜುಳಾ ಪಂಡಿತ ಅವರು ನೀಡಿದ ಮನದಾಳದ ನೆರವನ್ನು ವಿಶೇಷವಾಗಿ ನೆನೆಯುವೆ.

ಕೊನೆಯಲ್ಲಿ ಒಂದು ಮಾತು ಹೇಳಲೇಬೇಕು. ದುರ್ಘಟನಗೆ ಈಡಾಗಿದ್ದ ಟ್ಯಾಂಕರ್ ಡ್ರೈವರನ ಅಭಿಪ್ರಾಯಗಳನ್ನು ಧ್ವನಿಮುದ್ರಿಸಲು ಬಸವಕಲ್ಯಾಣದ ಪೊಲೀಸ್ ಸ್ಟೇಶನ್ನಿಗೆ ಹೋದಾಗ, ಒಬ್ಬರದಾದರೂ ಪಬ್ಲಿಕ್ ಓಪಿನೀಯನ್ ಇರಲಿ ಎಂದು ಅಲ್ಲಿ ಸೇರಿದ್ದ ಒಬ್ಬ ಹಿರಿಯ ವ್ಯಕ್ತಿಯ ಮಾತುಗಳನ್ನು ಧ್ವನಿಮುದ್ರಿಸಿದ್ದೆ ಎಂದು ಆಗಲೇ ಪ್ರಸ್ತಾಪಿಸಿದ್ದೆ. ಆ ವ್ಯಕ್ತಿಯ ಮಾತುಗಳಲ್ಲಿದ್ದ ಅಭಿಪ್ರಾಯ ಇದು 'ಚೊಲೋ ಆತ್ರಿ ಸರ್ ಆ ಊರಿನ ಕಳ್ಳ ನನ ಮಕ್ಳೀಗೆ. ಹೀಂಗs ಆಗ್ಬೇಕ್ ಆಗಿತ್ತವ್ರಿಗೆ. ತಿಂಗಳ್ಗೆ ಒಮ್ಮೆ, ಎರ್‍ಡ್ ತಿಂಗಳ್ಗೆ ಒಮ್ಮೆ ಇದs ರೀತಿ ಅಕ್ಕಿ, ಬೆಲ್ಲಾ, ಜ್ವಾಳಾ, ಬ್ಯಾಳಿ ಹೇರಿಕೊಂಡು ಹೋಗೂ ಲಾರಿಗಳ್ನ ಲೂಟಿ ಮಾಡಿ ಮಾಡಿ ಹೈವೇ ಮ್ಯಾಗ ಓಡಾಡೂ ಲಾರಿಯವರ್‍ಗೆ ಭಯಾ ಹುಟ್ಟೀಸಿದ್ರು ಆ ಕಳ್ರು. ಈಗಾಗಿದ್ದು ಅವರ್‍ಗೆ ಬೇಸಿ ಪಾಠ ಆತ್ ನೋಡ್ರಿ. ಈ ಭಾಗದ ಮಂದೀ ಬಗ್ಗೆ ಮ್ಯಾಲಿನೆವ್ರಿಗೇ ಗೊತ್ತಿದ್ರೂ, ಅವ್ರ ಪುಂಡಾಟಕ್ಕ ಹೆದರಿ ಸುಮ್ನ ಇದ್ದ್ ಬಿಟ್ಟಿದ್ರು. ಈಗ್ ದೇವ್ರs ಅವ್ರೀಗೆ ಬರೋಬ್ಬರಿ ಮಾಡಿದಾ ನೋಡ್ರಿ.'

ಯಾಕೋ ಆ ಹಿರಿಯರ ಇಂಥ ಮಾತುಗಳನ್ನು ನನ್ನ ಕಾರ್ಯಕ್ರಮದಲ್ಲಿ ಸೇರಿಸಲು ನನಗೆ ಮನಸ್ಸಾಗಲಿಲ್ಲ.

ಕಳ್ಳರೇ ಇರಲಿ, ಸುಳ್ಳರೇ ಇರಲಿ, ಮಹಾದ್ರೋಹಿಗಳೇ ಇರಲಿ, ವೈರಿಗಳೇ ಇರಲಿ - ಸತ್ತವರ ಬಗ್ಗೆ ಕೆಟ್ಟ ಮಾತು ಆಡಬಾರದೆಂಬ ಮನುಷ್ಯತ್ವದ ಪಾಠವನ್ನು ನಾನು ಬೆಳೆದು ಬಂದ ಪರಿಸರವೇ ನನಗೆ ಕಲಿಸಿದ ಕಾರಣ ಆ ಮುಖ್ಯ ವ್ಯಕ್ತಿಯ ಅಭಿಪ್ರಾಯಗಳನ್ನು ನನ್ನ ಬೆಂಕಿ ತಿಂದ ಬದುಕು ಕಾರ್ಯಕ್ರಮದಲ್ಲಿ ನಾನು ಸೇರಿಸಲಿಲ್ಲ. ಅದಕ್ಕೆ ಬದಲಾಗಿ ಆ ಕಾರ್ಯಕ್ರಮದ ಕೊನೆಯಲ್ಲಿ ನಾನು ಬರೆದು ಸೇರಿಸಿದ ಮಾತುಗಳು ಇವು- ಬೆಂಕಿ ತಿಂದ ಬದುಕುಗಳು ಇನ್ನು ಮರಳಿ ಬರಲಾರವು. ಆದರೆ, ಈ ಘಟನೆಯ ಪಾಠಗಳು ಬೆಂಕಿಗೆ ಆಹುತಿಯಾಗುವವರ ಬದುಕುಗಳಲ್ಲಿ ಬೆಳಗು ಮೂಡಿಸುವ ಹಾಗಾಗಬೇಕು. ಇದು ಆಗಬೇಕಾದರೆ, ಜನರು ಯಾಕೆ ಈ ರೀತಿಯ ಕೃತ್ಯಗಳಿಗೆ ಕೈ ಹಾಕುತ್ತಾರೆ? ಯಾಕೆ ಅಡ್ಡದಾರಿ ಹಿಡಿಯುತ್ತಾರೆ? ಅದರ ಕಾರಣಗಳೇನು? ಎಂಬುದನ್ನು ಅಧಿಕಾರ ನಡೆಸುವವರು ಮೊದಲು ತಿಳಿದುಕೊಳ್ಳುವಂತಾಗಲಿ. ಯಾವುದೇ ಮನುಷ್ಯ ಅಪರಾಧಿಯಾಗಲು ಅಥವಾ ಕಳ್ಳನೆನಿಸಿಕೊಳ್ಳಲು ಬಯಸುವುದಿಲ್ಲ. ಆದರೂ ಇಂಥ ಕೆಟ್ಟ ಕೆಲಸಗಳಿಗೆ ಕೈ ಹಾಕುತ್ತಾರೆಂದರೆ, ಅದಕ್ಕೆ ಅವರಿಗಿರುವ ಸಮಸ್ಯೆಗಳೇ ಕಾರಣವಾಗಿರುತ್ತವೆ ಎಂಬುದನ್ನು ಮರೆಯಬಾರದು. ಜನರು ಹೀಗೆ ಕೆಟ್ಟ ಕೃತ್ಯಗಳಿಗೆ ಕೈ ಹಾಕಲು ಕಾರಣವಾಗುವುದರ ಹಿಂದಿರುವ ಸಮಸ್ಯೆಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಪರಿಹರಿಸುವತ್ತ ಮನಸ್ಸು ಮಾಡಿದರೆ, ಅಂಥ ಜನರ ಬದುಕುಗಳು ಖಂಡಿತ ಬದಲಾಗುತ್ತವೆ. ಇಂಥ ಬದಲಾವಣೆಯ ಪರ್ವ ಆರಂಭವಾದರೆ ಮಾತ್ರ 'ಅಯ್ಯೋ ಯಪ್ಪಾ, ನನ್ನ ಗಂಡಾ, ಮತ್ತ್ ಮೂರೂ ಮಂದಿ ಮಕ್ಕಳ್ನ ಹೊಳ್ಳಿ ತಂದ್ ಕೊಡ್ರ್ಯೋ ಯಪ್ಪಾ' (ಇದು ಆ ಊರಿನ ದಾರಿಯಲ್ಲಿ ಮರಳಿ ಬರುವಾಗ ಮಾಡಿಕೊಂಡಿದ್ದ ಧ್ವನಿಮುದ್ರಣದಿಂದ ಆರಿಸಿದ ಭಾಗ) ಎಂದೊರಲುವ ಕರುಳು ಕೊರೆಯುವ ದನಿಗಳು ಮುಂದೆ ಕೇಳಲಿಕ್ಕಿಲ್ಲ.

ಹೌದು ಇಂಥ ದನಿಗಳು ಇನ್ನು ಮುಂದೆ ಕೇಳಬಾರದು.

ಕೇಳಬಾರದೆಂದರೆ, ಅಂಥವರ ಸಮಸ್ಯೆಗಳಿಗೆ ಮುಚ್ಚಿಕೊಂಡಿರುವ ಕಣ್ಣು, ಕಿವಿ ಮತ್ತು ಹೃದಯಗಳು ಮೊದಲು ತೆರೆದುಕೊಳ್ಳಲಿ.

ಈ ಅಂಕಣದ ಹಿಂದಿನ ಬರೆಹ

ಐವತ್ತು ಕಲ್ಲು ಒಗೆದು ಮಹಾದೇವರಾಯನ ಸಾವಿನ ಶಬ್ದ ಹಿಡಿದು…

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...