ಕರ್ನಾಟಕದ ಐತಿಹಾಸಿಕ ನಗರಗಳು

Date: 22-08-2020

Location: ಬೆಂಗಳೂರು


ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ (ICHR) ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿರುವ ಡಾ. ಶಿವಶರಣ ಅರುಣಿ ಅವರು ಪ್ರಾಗೈತಿಹಾಸಿಕ ಇತಿಹಾಸ ಮತ್ತು ಕಲಾ ಇತಿಹಾಸದಲ್ಲಿ ಆಸಕ್ತರು. ಕರ್ನಾಟಕದಲ್ಲಿ ನಗರೀಕರಣ ಪ್ರಕ್ರಿಯೆಯ ಸ್ವರೂಪ ಹಾಗೂ ನಗರಗಳು ರೂಪುಗೊಂಡ ಬಗೆಯನ್ನು ಈ ಸರಣಿಯಲ್ಲಿ ವಿವರಿಸಲಿದ್ದಾರೆ.

ಭಾರತೀಯ ಇತಿಹಾಸದ ಸಂದರ್ಭದಲ್ಲಿ ನಗರೀಕರಣ ಮತ್ತು ನಗರಗಳ ಬೆಳವಣಿಗೆಗಳ ಚರಿತ್ರೆ ಬಹಳ ಕೌತುಕದ ವಿಷಯವಾಗಿದೆ. ಸುಮಾರು ೫ ಸಾವಿರ ವಷಗಳ ಪೂರ್ವದಲ್ಲಿಯೇ ಭಾರತದ ನೆಲದಲ್ಲಿ ನಗರಗಳನ್ನು ನಿರ್ಮಿಸಿ ನಗರಿಕೃತ ಜೀವನವನ್ನು ಪ್ರಾರಂಭಿಸಿದರು. ಸಿಂಧೂ ನದಿ ಬಯಲಿನಲ್ಲಿ ಮೂಡಿಬಂದ ನಾಗರಿಕತೆಯ ಪ್ರಮುಖ ಲಕ್ಷಣವೇ ನಗರಗಳ ನಿರ್ಮಾಣ. ಅಂದಿನಿಂದ ಇಂದಿನವರೆಗೂ ಭಾರತದಲ್ಲಿ ನಗರಗಳು ನಿರಂತರವಾಗಿ ನಿರ್ಮಾಣಗೊಂಡಿವೆ. ಪ್ರಾಕೃತಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತ್ಯಂತರಗಳಿಂದಾಗಿ ಹಳೆಯ ನಗರಗಳು ತಮ್ಮ ಅಸ್ತಿತ್ವಗಳನ್ನು ಕಳೆದು ಕೊಂಡು, ಹೊಸ ನಗರಗಳು ಏಳಿಗೆಗೆ ಬಂದಿವೆ. ಬ್ರಿಟಿಷ್ ಇತಿಹಾಸಕಾರ ಅರ್ನಾಲ್ಡ್ ಟಾಯ್ನ್‌ಬಿ ಅವರು ಹೇಳುವಂತೆ: "ನಾಗರಿಕತೆಯ ಏಳು ಬೀಳಿನ ಕಥೆಯೆ ಇತಿಹಾಸವಾಗಿದೆ’. ಈ ಹಿನ್ನೆಲೆಯಲ್ಲಿ ನಗರಗಳ ಇತಿಹಾಸವೇ ನಾಡಿನ ಇತಿಹಾಸವೆಂದು ಗುರುತಿಸಬಹುದು.

ಕರ್ನಾಟಕದ ಇತಿಹಾಸದಲ್ಲಿಯೂ ನಗರಗಳ ನಿರ್ಮಾಣಗಳನ್ನು ಸ್ವಲ್ಪ ಭಿನ್ನವಾಗಿ ಕಾಣಬಹುದು. ಉತ್ತರ ಭಾರತದಲ್ಲಿ ಉದಯಿಸಿದ ಸಿಂಧೂ ನದಿ ನಾಗರಿಕತೆಯಷ್ಟು ಪುರಾತನ ನಗರಗಳು ಕರ್ನಾಟಕದಲ್ಲಿ ನಿರ್ಮಾಣವಾಗದಿದ್ದರೂ ಮೌರ್ಯ ಚಕ್ರವರ್ತಿ ಅಶೋಕನ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಸುವರ್ಣಗಿರಿ ಮತ್ತು ಅದರ ಪ್ರಾದೇಶಿಕ ನಗರವಾಗಿದ್ದ ’ಇಸಿಲಾ’ದಂತಹ ನಗರಗಳು ಕರ್ನಾಟಕದಲ್ಲಿದ್ದವೆಂಬುದು ಗಮನಿಬೇಕಾದ ಅಂಶವಾಗಿದೆ. ಸುಮಾರು 2300 ವಷಗಳಷ್ಟು ಪುರಾತನವಾದ ನಗರಗಳನ್ನು ಕನ್ನಡ ನಾಡಿನಲ್ಲಿ ಗುರುತಿಸಬಹುದಾಗಿದೆ. ಪ್ರಸ್ತುತ ಲೇಖನ ಮಾಲಿಕೆಯು ಕನ್ನಡ ನಾಡಿನಲ್ಲಿ ಬೆಳೆದುಬಂದ ನಗರಗಳ ಇತಿಹಾಸ ಮತ್ತು ಅವುಗಳ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ.

ಆರಂಭಿಕ ನಗರಗಳ ಉಗಮಕ್ಕೆ ಕಾರಣಗಳು :

ಬದುಕನ್ನು ಕಟ್ಟಿಕೊಂಡು ಚಿಕ್ಕದಾದ ಹಳ್ಳಿಗಳನ್ನು ರಚಿಸಿಕೊಳ್ಳುವ ಕ್ರಮವನ್ನು ನವ-ಶಿಲಾಯುಗದಲ್ಲಿ ಅಂದರೆ ಸುಮಾರು ೪೫೦೦ ವಷಗಳಿಂದ ದಕ್ಷಿಣ ಭಾರತದಲ್ಲಿ ಕಾಣುತ್ತೇವೆ. ತದನಂತರ ಅವುಗಳಲ್ಲಿ ಕೆಲವು ಆಯಕಟ್ಟಿನ ಹಳ್ಳಿಗಳು ಕ್ರಮೇಣವಾಗಿ ಪಟ್ಟಣಗಳಾಗಿ ಮಾರ್ಪಾಡುಗೊಳ್ಳುವ ಪ್ರಕ್ರಿಯೆಯನ್ನು ನವ-ಶಿಲಾಯುಗದ ನಂತರ ಲೋಹ-ಯುಗದ ಕಾಲದಲ್ಲಿ ಕಾಣಬಹುದು. ಈ ಪ್ರಕ್ರಿಯೆಯು ’ನಗರೀಕರಣ ಪ್ರಕ್ರಿಯೆ’ ಎಂದು ಕರೆಯಲ್ಪಡುತ್ತದೆ. ಈ ನಗರೀಕರಣ ಪ್ರಕ್ರಿಯೆಯು ಏಕಾಏಕಿ ಆರಂಭಗೊಂಡಿದ್ದಲ್ಲ. ಇದರ ಹಿಂದೆ ಹಲವು ಶತಮಾನಗಳ ತಯಾರಿಯೇ ಬೇಕಾಯಿತು ಎಂಬುದನ್ನು ಇತಿಹಾಸದಿಂದ ತಿಳಿಯಬಹುದು. ಈ ನಗರೀಕರಣ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದ ಹೆಸರಾಂತ ವಿದ್ವಾಂಸರಾದ ವಿ. ಗೊರ್ಡಾನ್ ಚೈಲ್ಟ್ ಅವರು ೧೯೩೬ರಲ್ಲಿ ಪ್ರಕಟಿಸಿದ ಅವರ ಮ್ಯಾನ್ ಮೆಕ್ಸ್ ಹಿಮ್ ಸೆಲ್ಫ್ ಎಂಬ ಕೃತಿಯಲ್ಲಿ ಈ ನಗರೀಕರಣ ಪ್ರಕ್ರಿಯೆಗೆ ಪೂರಕವಾದ ಹತ್ತು ಮುಖ್ಯವಾದ ಕಾರಣಗಳನ್ನು ನೀಡಿದ್ದಾರೆ. ಅವರು ಗುರುತಿಸಿದ ಕಾರಣಗಳು ವಿಶ್ವ ಇತಿಹಾಸದ ಆರಂಭಿಕ ಕಾಲಘಟ್ಟದಲ್ಲಿ ಉಗಮಗೊಂಡ ನಗರಗಳ ಅಧ್ಯಯನಕ್ಕೆ ಸಂಬಂಧಿಸಿದ್ದಾಗಿರುತ್ತದೆ.
ವಾಸಿಸಲು ವಿಸ್ತೃತವಾದ ಅಥವಾ ವಿಶಾಲವಾದ ನೆಲೆಗಳನ್ನು ಹುಡುಕುವುದು.
ನೆಲೆಸಿದ ಪ್ರಜೆಗಳಿಂದ ಕರಗಳನ್ನು ಸಂಗ್ರಹಿಸುವ ಪದ್ಧತಿಯ ಪ್ರಾರಂಭ
ಮನೆಗಳಲ್ಲದೇ ಊರಿನ ಮುಖ್ಯಸ್ಥಳದಲ್ಲಿ ಸಾರ್ವಜನಿಕವಾಗಿ ಸಭೆ ಸೇರಲು ಅಥವಾ ಆಚರಣೆ ಕೈಗೊಳ್ಳಲು ಸಾರ್ವಜನಿಕ ಭವನಗಳನ್ನು ಅಥವಾ ಗುಡಿಗಳಂತಹ ಸಭಿಕರು ಸೇರುವ ಕಟ್ಟಡಗಳನ್ನು ನಿರ್ಮಿಸುವುದು.
ನೆಲೆಸುವ ಎಲ್ಲ ಜನರಿಗೆ ತಿಳಿಯುವಂತಹ ಮತ್ತು ಮಾಹಿತಿ ವಿನಿಮಯ ಮಾಡುವುದಕ್ಕಾಗಿ ಏಕಿಕೃತವಾದ ಲಿಪಿಯನ್ನು ಬಳಸುವ ಕ್ರಮದ ಪ್ರಾರಂಭ.
ಕೃಷಿಗಾಗಿ ಅಥವಾ ವಾಣಿಜ್ಯ ವ್ಯವಹಾರಕ್ಕಾಗಿ ಗುಡಿ ಕೈಗಾರಿಕೆಯಂತಹ ಉದ್ಯಮಗಳನ್ನು ಪ್ರಾರಂಬಿಸುವುದು ಹಾಗೂ ಕುಶಲಕರ್ಮಿ ವರ್ಗಗಳು ನೆಲೆಗೊಳ್ಳಲು ಪ್ರಾರಂಭವಾಗುವುದು.
ಉದ್ಯಮಕ್ಕಾಗಿ ಬೇಕಾಗುವ ಕಚ್ಛಾ ಸಾಮಗ್ರಿಗಳಿಗಾಗಿ ದೂರದ ಸ್ಥಳಗಳೊಂದಿಗೆ, ದೇಶ-ವಿದೇಶಗಳೊಂದಿಗೆ ಸಂಪರ್ಕ ಸಾಧಿಸಿಕೊಳ್ಳುವುದನ್ನು ಮತ್ತು ವಾಣಿಜ್ಯ ವ್ಯವಹಾರಗಳನ್ನು ಬೆಳೆಸಿಕೊಳ್ಳುವುದನ್ನು ಪ್ರಾರಂಭಿಸುವುದು.
ವಸ್ತುಗಳ ಉತ್ಪಾದನೆಗೆ ಮತ್ತು ವಿವಿಧ ಸಂಪರ್ಕಗಳಿಗಾಗಿ ವಿಜ್ಞಾನಗಳ ಶಾಖೆಗಳ ಜ್ಞಾನವನ್ನು ಬಳಸುವ ಕ್ರಮದ ಆರಂಭ. ಮುಖ್ಯವಾಗಿ ಊರುಗಳನ್ನು ನಿರ್ಮಿಸಲು ನಗರಗಳನ್ನು ಯೋಜಿಸುವದಕ್ಕಾಗಿ ಜ್ಯಾಮಿತಿ ವಿಜ್ಞಾನ; ಅದರಂತೆ, ಬೃಹತ್ ಕಟ್ಟಡಗಳನ್ನು ನಿರ್ಮಿಸುವುದಕ್ಕಾಗಿ ಸಿವಿಲ್ ತಂತ್ರಜ್ಞಾನ; ದೂರದ ಸ್ಥಳಗಳಿಗೆ ಸಂಪರ್ಕ ಹೊಂದುವುದಕ್ಕಾಗಿ ಭೌಗೋಳಿಕ ಜ್ಞಾನ, ಇತ್ಯಾದಿಗಳ ಜ್ಞಾನ ಶಾಖೆಗಳು ಪ್ರಾರಂಭಗೊಂಡವು.
ವ್ಯಾಪಾರ ವಾಣಿಜ್ಯಕ್ಕೆ ನಾಣ್ಯಗಳ ಚಲಾವಣೆ ಮತ್ತು ಪ್ರಯೋಗಗಳು ನಗರಗಳ ಉಗಮಕ್ಕೆ ಪ್ರಮುಖ ಕಾರಣವೆಂದು ಗುರುತಿಸಬಹುದು.
ವಿವಿಧ ಕಲೆಗಳು ಮುಖ್ಯವಾಗಿ ಲಲಿತ ಕಲೆಗಳಾದ ಶಿಲ್ಪಕಲೆ, ಸಂಗೀತ, ಮುಂತಾದವುಗಳು ನಗರ ಕೇಂದ್ರಿಕೃತವಾಗಿರುತ್ತವೆ. ಕಲೆಗೆ ಪ್ರಾಧಾನ್ಯತೆ ನೀಡುವುದನ್ನು ನಗರೀಕರಣ ಪ್ರಕ್ರಿಯೆಯಲ್ಲಿ ಗುರುತಿಸಬಹುದಾದ ಪ್ರಧಾನ ಅಂಶ.
ನೆಲೆಸಿದ ಪ್ರಜೆಗಳನ್ನು ರಕ್ಷಿಸುವುದಕ್ಕಾಗಿ ಮತ್ತು ನಿಯಂತ್ರಿಸುವುದಕ್ಕಾಗಿ ಆಡಳಿತ ಸೂತ್ರಗಳನ್ನು ರೂಪಿಸಿ ಆಳುವ ವರ್ಗದ ಉಗಮ ನಗರೀಕರಣ ಪ್ರಕ್ರಿಯೆಯಲ್ಲಿ ಕಂಡುಬರುವ ಮತ್ತೊಂದು ಪ್ರಮುಖ ಅಂಶವೆಂದು ಹೇಳಬಹುದು.

ಒಟ್ಟಿನಲ್ಲಿ ಗ್ರಾಮಕ್ಕೂ ನಗರಗಳಿಗೂ ಇರುವು ಮುಖ್ಯ ವ್ಯತ್ಯಾಸವೆಂದರೆ ನಗರವಾಸಿಗಳು ಕೃಷಿಯೇತರ ಚಟುವಟಿಕೆಗಳಾದ ಗುಡಿಕೈಗಾರಿಕೆಯಂತಹ ಕಸಬುಗಳನ್ನು, ಕಲೆಗಳನ್ನು ಆಶ್ರಯಿಸುವ ವರ್ಗಗಳು ಮತ್ತು ಆಳುವ ವರ್ಗಗಳಾಗಿರುತ್ತಾರೆ. ಆದರೆ ಗ್ರಾಮದ ನಿವಾಸಿಗಳು ಕೃಷಿಯನ್ನು ಪ್ರಧಾನವಾದ ಕಸಬುವನ್ನಾಗಿ ಮಾಡಿಕೊಂಡಿರುತ್ತಾರೆ. ಅಲ್ಲದೇ ಹತ್ತಿರದ ನಗರಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಮತ್ತು ದಿನನಿತ್ಯದ ವಸ್ತುಗಳನ್ನು ಪೂರೈಸುವ ಕೆಲಸ ಮಾಡುತ್ತಿರುತ್ತಾರೆ ಎಂಬುದು ಸಮಾಜಶಾಸ್ತ್ರ ವಿದ್ವಾಂಸರ ಅಭಿಪ್ರಾಯವಾಗಿದೆ.

ಕರ್ನಾಟಕದಲ್ಲಿ ನಗರಗಳ ಉಗಮ :

ಉತ್ತರ ಭಾರತದ ವಾಯವ್ಯ ಗಡಿಯಲ್ಲಿ ಸಿಂಧೂ ನದಿ ನಾಗರಿಕತೆಯಂತೆಯೇ ದಖ್ಖನ್ ಅಥವಾ ಕರ್ನಾಟಕದ ಭೂಪ್ರದೇಶದಲ್ಲಿ ಸಮಕಾಲೀನ ನಾಗರಿಕತೆ ಕಂಡುಬರುವುದಿಲ್ಲವಾದರೂ ಬೃಹತ್ ಶಿಲಾ ಸಮಾಧಿ ಸಂಸ್ಕೃತಿಯ ಕಾಲದಲ್ಲಿ ಬೃಹತ್ ಗಾತ್ರದ ಶಿಲೆಗಳನ್ನು ಬಳಸಿಕೊಂಡು ವಿಶಿಷ್ಟವಾದ ಮತ್ತು ವೈಜ್ಞಾನಿಕವಾಗಿ ನಿರ್ಮಿಸಿದ ಸಮಾಧಿಗಳು ಕಂಡುಬರುತ್ತವೆ. ಈ ಸಂಸ್ಕೃತಿಯು ಕಬ್ಬಿಣ-ಯುಗದ ಕಾಲಕ್ಕೆ ಸೇರಿದ್ದಾಗಿದೆ. ಈ ಸಂಸ್ಕೃತಿಯು ದಕ್ಷಿಣ ಭಾರತ ಒಳಗೊಂಡಂತೆ ಡೆಕ್ಕನ್ ಭೂಪ್ರದೇಶದಲ್ಲಿಯೂ ವಿಸ್ತರಿಸಿತ್ತು. ಕಬ್ಬಿಣ ಲೋಹದಿಂದ ಮಾಡಿದ ವಿವಿಧ ಕೃಷಿ ಸಲಕರಣೆಗಳ ತಯಾರಿಕೆಯನ್ನು ಈ ಕಾಲದಲ್ಲಿ ಕಾಣುತ್ತೇವೆ. ಮುಖ್ಯವಾಗಿ ಕಬ್ಬಿಣದಲ್ಲಿ ಮಾಡಿದ ನೇಗಿಲು ಈ ಕಾಲದ ಕೃಷಿಯ ಉತ್ಪಾದನೆಯಲ್ಲಿಯೇ ಬದಲಾವಣೆಯನ್ನು ತಂದಿತು ಎಂದು ವಿದ್ವಾಂಸರು ಗುರುತಿಸುತ್ತಾರೆ. ಕೃಷಿಯ ಉತ್ಪಾದನೆ ಹೆಚ್ಚಳಕ್ಕೆ ಕರಕುಶಲ ಕರ್ಮಿಗಳು ಮತ್ತು ಲೋಹ ತಯಾರಿಕಾ ತಂತ್ರಜ್ಞರು ಕಾರಣಕರ್ತರಾದರು. ಆಹಾರ ಉತ್ಪಾದನೆ ಹೆಚ್ಚಿದಂತೆ ಕೃಷಿಯೇತರ ಚಟುವಟಿಕೆಗಳಾದ ಕರಕುಶಲ ಉದ್ಯಮಗಳು ಹುಟ್ಟಿಕೊಂಡವು. ಈ ಕುಶಲಕರ್ಮಿಗಳಿಗೆ ಕೃಷಿಕರು ಆಹಾರ ಉತ್ಪಾದಿಸುವ ಪೂರಕ ವರ್ಗವಾಗಿ ರೂಪುಗೊಂಡರು. ಕೃಷಿಕರು ಮತ್ತು ಕುಶಲಕರ್ಮಿ / ತಂತ್ರಜ್ಞರುಗಳಿಬ್ಬರು ಪರಸ್ಪರ ಸಹಾಯಕರಾಗಿ ರೂಪಗೊಂಡರು. ಸಮಾಜದಲ್ಲಿ ಶ್ರಮಿಕ ವರ್ಗಗಳ ಸೃಷ್ಟಿಗೆ ನಾಂದಿಯಾಯಿತು. ಅದಕ್ಕಾಗಿ ಸಾಮಾಜಿಕ ಬದಲಾವಣೆಯ ಕ್ರಾಂತಿಗೆ ಲೋಹದ ಉತ್ಪಾದನೆ ಕಾರಣವಾಯಿತು ಎಂದು ಗುರುತಿಸಲ್ಪಡುತ್ತದೆ. ಒಟ್ಟಾರೆ, ಕುಶಲಕರ್ಮಿಗಳು ಮತ್ತು ಕೃಷಿಕರ ನಡುವಿನ ಪರಸ್ಪರ ಕೊಡುಕೊಳ್ಳುವಿಕೆಯಿಂದಾಗಿ ಆಹಾರದ ಉತ್ಪಾದನೆಯಲ್ಲಿ ಹೆಚ್ಚಳವಾಯಿತು. ಇದರಿಂದ Surplus ಅಥವಾ ಹೆಚ್ಚುವರಿ ಮಿಗುತೆ ಉಂಟಾಯಿತು. ಅಂದರೆ ಒಂದು ಸಮಾಜದ ಜೀವನವಶ್ಯಕತೆಗಿಂತ ಹೆಚ್ಚಿನ ಆಹಾರಧಾನ್ಯದ ಉತ್ಪಾದನೆ. ಹೀಗೆ ಉಂಟಾದ ಹೆಚ್ಚುವರಿ ಮಿಗುತೆಯ ಧಾನ್ಯಗಳನ್ನು ಅಗತ್ಯವಿರುವ ಸಮಾಜಕ್ಕೆ ತಲುಪಿಸುವ ಮತ್ತು ಆ ಸಮಾಜದಲ್ಲಿ ಉತ್ಪಾದನೆಯಾಗಿರುವ ಹೆಚ್ಚುವರಿ ಮಿಗುತೆಯ ಧಾನ್ಯವನ್ನು ಈ ಸಮಾಜಕ್ಕೆ ತಲುಪಿಸುವ ವರ್ಗವೊಂದು ಹುಟ್ಟುಕೊಂಡಿತು. ಇದೇ ವ್ಯಾಪಾರಿ ವರ್ಗ. ಈ ವರ್ಗವು ಆಹಾರ ಧಾನ್ಯ ಮತ್ತು ಕರಕುಶಲವಸ್ತುಗಳನ್ನು ಕೊಳ್ಳುವ ಮತ್ತು ಮಾರುವ ನಿರ್ದಿಷ್ಟ್ಟ ಪ್ರದೇಶಗಳೆ ನಿಧಾನವಾಗಿ ಪೇಟೆ, ಪಟ್ಟಣ, ನಗರಗಳಾಗಿ ಭಾರತದ ಸಂದರ್ಭದಲ್ಲಿ ವಿಕಾಸ ಹೊಂದಿದವೆಂದು ಹೇಳಲಾಗುತ್ತದೆ.

ಅಶೋಕನ ಕಾಲದ ಕರ್ನಾಟಕದಲ್ಲಿ ಈ ಬದಲಾವಣೆಯನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಕ್ರಿ.ಪೂ. ಮೂರನೇ ಶತಮಾನದಲ್ಲಿ ತೆಲಗಾಂಣ ಸೇರಿದಂತೆ ಕರ್ನಾಟಕದ ಉತ್ತರ ಭಾಗವು ಮೌರ್ಯ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು. ಹಾಗೂ ಕೌಟಿಲ್ಯನ ಅರ್ಥಶಾಸ್ತ್ರ ಕೃತಿಯಲ್ಲಿ ಉಲ್ಲೇಖಿಸಿದಂತೆ ’ದಕ್ಷಿಣಪಥ’ ಪ್ರದೇಶವು ಮುಖ್ಯವಾಗಿ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಪ್ರದೇಶದ ಕಬ್ಬಿಣ ಅದಿರು ಮತ್ತು ಕಬ್ಬಿಣ ಲೋಹಗಳು ಉತ್ತಮ ಮಟ್ಟದ್ದಾಗಿದ್ದುವು ಎಂಬುದನ್ನು ಕಾಣುತ್ತೇವೆ. ಅಲ್ಲದೇ ಈ ಪ್ರದೇಶದಲ್ಲಿ ದೊರೆಯುವ ಚಿನ್ನದ ಬಗ್ಗೆಯು ಉತ್ತರ ಭಾರತದ ಮೌರ್ಯ ಸಾಮ್ರಾಜ್ಯದ ತಂತ್ರಜ್ಞರಿಗೆ ತಿಳಿದಿತ್ತು. ಅದಕ್ಕಾಗಿ ಚಂದ್ರಗುಪ್ತ ಸೇರಿದಂತೆ ಅಶೋಕ ಚಕ್ರವರ್ತಿ ಮೊದಲಾದವರು ಕರ್ನಾಟಕವನ್ನು ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡಿದ್ದರೆಂದು ವಿದ್ವಾಂಸರು ಗುರುತಿಸುತ್ತಾರೆ. ಅಲ್ಲದೆ ಅಶೋಕ ಚಕ್ರವರ್ತಿಯು ಕರ್ನಾಟಕದ ಹಲವು ಆಯಕಟ್ಟಿನ ಸ್ಥಳಗಳಲ್ಲಿ ಶಿಲಾ-ಶಾಸನಗಳನ್ನು ಬಂಡೆಗಳ ಮೇಲೆ ಬರೆಯಿಸಿದ್ದಾನೆ. ಪ್ರಾಕೃತ ಭಾಷೆಯ ಈ ಶಾಸನಗಳನ್ನು ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾಗಿವೆ. ಅಶೋಕನ ಪೂರ್ವ ಕಾಲದ ಲಿಪಿಯು ಕನ್ನಡ ನಾಡಿನಲ್ಲಿ ಇರುವ ಬಗ್ಗೆ ಸ್ಪಷವಾದ ಮಾಹಿತಿ ಇರುವುದಿಲ್ಲವಾದ್ದರಿಂದ ಅಶೋಕ ಚಕ್ರವರ್ತಿಯ ಶಾಸನಗಳ ಬ್ರಾಹ್ಮಿ ಲಿಪಿಯು ನಮ್ಮ ನಾಡಿನಲ್ಲಿ ದೊರೆತ ಅತ್ಯಂತ ಪುರಾತನ ಲಿಪಿಯೆಂದು ಹೇಳಬಹುದು. ನಾಡಿಗೆ ಅಶೋಕನು ಲಿಪಿಯನ್ನು ನೀಡುವುದರ ಮೂಲಕ ಕನ್ನಡ ನಾಡಿನ ನಗರಗಳ ಉಗಮಕ್ಕೆ ಕಾರಣನಾದ ಎಂದು ಗುರುತಿಸಬಹುದು. ಇದಕ್ಕೆ ಪೂರಕವೆಂಬಂತೆ ಮೌರ್ಯರ ಕಾಲದ ಪಂಚ್-ಮಾರ್ಕ್ ನಾಣ್ಯಗಳು ಬನವಾಸಿ (ಉತ್ತರ ಕನ್ನಡ ಜಿಲ್ಲೆ) ಹಾಗೂ ಸನ್ನತಿ (ಕಲಬುರ್ಗಿ ಜಿಲ್ಲೆ) ಸ್ಥಳಗಳಲ್ಲಿ ದೊರಕಿವೆ. ನಾಣ್ಯಗಳ ಚಲಾವಣೆಯು ಕೂಡ ಮೌರ್ಯರ ಕಾಲದಿಂದ ಪ್ರಾರಂಭವಾಗಿದ್ದನ್ನು ಗಮನಸಿಬೇಕು. ಒಟ್ಟಿನಲ್ಲಿ ಮೌರ್ಯರ ಕಾಲೋತ್ತರ ಮತ್ತು ಕಬ್ಬಿಣ-ಯುಗ ಸಂಸ್ಕೃತಿಯ ಅಂತ್ಯದೊಂದಿಗೆ ಪ್ರಾರಂಭಗೊಳ್ಳುವ ಇತಿಹಾಸ-ಆರಂಭ ಕಾಲ (ಅರ್‍ಲಿ ಹಿಸ್ಟೊರಿಕ್) [ಸು. ಕ್ರಿ.ಪೂ. 2ನೇ ಶತಮಾನ] ಘಟ್ಟದಲ್ಲಿ ಕಾಣಿಸೊಕೊಳ್ಳುವ ನಗರೀಕರಣ ಪ್ರಕ್ರಿಯೆಯ ಅಂಗವಾಗಿ ಬನವಾಸಿ, ಸನ್ನತಿ [ಸುವರ್ಣಗಿರಿ], ಬ್ರಹ್ಮಗಿರಿ[ಇಸಿಲಾ], ಚಂದ್ರವಳ್ಳಿ, ಮಸ್ಕಿ, ವಡಗಾವ್-ಮಾಧವಪುರ, ಐಹೊಳೆ, ವಾತಾಪಿ, ತಲಕಾಡು, ಮುಂತಾದವು ನಗರಗಳು ಉಗಮಗೊಂಡವು ಎಂದು ಹೇಳಬಹುದು.

ಇತಿಹಾಸ ಆರಂಭಿಕ ಕಾಲದಿಂದ ಪ್ರಾರಂಭಗೊಂಡ ನಗರೀಕರಣ ಪ್ರಕ್ರಿಯೆಯು ನಿರಂತರವಾಗಿ ನಡೆದುಕೊಂಡು ಬಂದಿದೆ. ರಾಜಕೀಯ ಮತ್ತು ಆರ್ಥಿಕ ಕಾರಣಗಳಿಗಾಗಿ ಕೆಲವು ನಗರಗಳು ತಮ್ಮ ಮಹತ್ವವನ್ನು ಕಳೆದುಕೊಂಡು ಕೆಲವು ಹೊಸ ನಗರಗಳು ಹುಟ್ಟಿಕೊಳ್ಳುವ ಕ್ರಮವನ್ನು ಇತಿಹಾಸದ ಉದ್ದಕ್ಕೂ ಕಾಣುತ್ತೇವೆ. ಈ ಐತಿಹಾಸಿಕ ನಗರಗಳ ಇತಿಹಾಸವು ಸಮಾಜಶಾಸ್ತ್ರಜ್ಞರಿಗೂ ಹಾಗೂ ಇತಿಹಾಸಕಾರರಿಗೂ ಬಹಳ ಕುತುಹಲಕಾರಿಯಾಗಿದೆ. ಪ್ರಮುಖ ಐತಿಹಾಸಿಕ ನಗರಗಳ ಇತಿಹಾಸ, ಅವುಗಳ ಅಧ್ಯಯನ, ರಚನೆ, ಮತ್ತು ಅವುಗಳ ವೈಶಿಷ್ಟ್ಯತೆಗಳ ವಿವರಗಳನ್ನು ಈ ಲೇಖನ ಮಾಲಿಕೆಯಲ್ಲಿ ಪರಿಚಯಿಸಲು ಪ್ರಯತ್ನಿಸಲಾಗುವುದು.
------

ಚಿತ್ರ ಶೀರ್ಷಿಕೆ

1. ಅಶೋಕನ ಶಿಲಾ-ಶಾಸನವಿರುವ ಬಂಡೆ. ಕೊಪ್ಪಳದ ಹತ್ತರದ ಪಾಲ್ಕಿಗುಂಡು. 2- ಅಶೋಕನ ನಿಟ್ಟೂರು ಶಾಸನ. 3- ಬೆಟ್ಟಗಳ ನಡುವಿನ ಹರವಾದ ಕಣಿವೆಯಲ್ಲಿ ಉಗಮಗೊಂಡ ನಗರದ ಸಾಂದರ್ಭಿಕ ಚಿತ್ರ.

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...