ಕರ್ನಾಟಕದ ಫತೇಪುರ್ ಸಿಕ್ರಿ- ಫಿರೋಜಾಬಾದ- ಬಹಮನಿ ಸುಲ್ತಾನರ ಅರಮನೆಗಳ ನಗರ

Date: 27-05-2021

Location: ಬೆಂಗಳೂರು


ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ (ICHR) ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿರುವ ಡಾ. ಶಿವಶರಣ ಅರುಣಿ ಅವರು ಪ್ರಾಗೈತಿಹಾಸಿಕ ಇತಿಹಾಸ ಮತ್ತು ಕಲಾ ಇತಿಹಾಸದಲ್ಲಿ ಆಸಕ್ತರು. ಕರ್ನಾಟಕದಲ್ಲಿ ನಗರೀಕರಣ ಪ್ರಕ್ರಿಯೆಯ ಸ್ವರೂಪ ಹಾಗೂ ನಗರಗಳು ರೂಪುಗೊಂಡ ಬಗೆಯನ್ನು ವಿವರಿಸುವ ಈ ಸರಣಿಯಲ್ಲಿ ಕರ್ನಾಟಕದ ಫತೇಪುರ್ ಸಿಕ್ರಿ ಎಂದೇ ಗುರುತಿಸುವ ಫಿರೋಜಾಬಾದ ನಗರದ ಕುರಿತು ಚರ್ಚಿಸಿದ್ದಾರೆ.

ಪರಂಪರಾಗತ ಐತಿಹಾಸಿಕ ನಗರ ಅಥವಾ ಸ್ಮಾರಕಗಳು ನಮ್ಮ ಐತಿಹಾಸಿಕ ಸಾಂಸ್ಕೃತಿಕ ಸಂಪತ್ತಿನ ಅವಿಭಾಜ್ಯ ಅಂಗ. ನಮ್ಮ ನಿರ್ಲಕ್ಷ್ಯದಿಂದಾಗಿ ಅಸಂಖ್ಯ ಸ್ಮಾರಕಗಳು ಅಥವಾ ಪುರಾತನ ನಗರಗಳು ಇಂದು ಕಾಣೆಯಾಗಿವೆ ಅಥವಾ ಮರೆಮಾಚಿವೆ. ದೆಹಲಿಯನ್ನು ಆಳಿದ ಮೊಘಲರು ನಿರ್ಮಿಸಿದ ಬಹಳ ವಿಶೇಷವಾದ ನಗರವೆಂದು ಫತೇಪುರ್-ಸಿಕ್ರಿಯನ್ನು ಗುರುತಿಸಲಾಗುತ್ತದೆ. ಮೊಘಲ ಬಾದಶಾಹ ಅಕ್ಬರ್ ಹೊಸದಾದ ಅರಮನೆಗಳು, ವಿಶೇಷವಾದ ದರ್ಬಾರ್‍ಗಳು, ಉಧ್ಯಾನಗಳು, ಸಂಗೀತ ಮಹಲ್‍ಗಳು ಇತ್ಯಾದಿಗಳನ್ನು ಒಳಗೊಂಡ ನೂತನವಾದ ಫತೇಪುರ್ ಸಿಕ್ರಿ ನಗರವನ್ನು ಕ್ರಿ.ಶ. 1571ರಲ್ಲಿ ನಿರ್ಮಿಸಿದನು. ಸೂಫಿ ಸಂತ ಸಲೀಮ್ ಚಿಸ್ಠಿ ಅವರ ಅನುಯಾಯಿ ಆಗಿದ್ದ ಮೊಘಲ ದೊರೆ ಅಕ್ಬರ್ ಸೂಫಿ ಸಂತರ ಸನ್ನಿಧಿಯಲ್ಲಿ ಹೊಸನಗರವನ್ನು ನಿರ್ಮಿಸಿ ಅಲ್ಲಿಗೆ ತನ್ನ ರಾಜ್ಯದ ಆಡಳಿತವನ್ನು ವರ್ಗಾಯಿಸಿದ್ದನು. ಕರ್ನಾಟಕದಲ್ಲಿಯೂ ಇದೇ ಮಾದರಿಯ ಪ್ರಯೋಗ ಮೊಘಲರಿಗಿಂತಲೂ ಅಂದರೆ ಸುಮಾರು ಎರಡು ಶತಮಾನಕ್ಕಿಂತಲೂ ಮುಂಚೆಯೆ ನಡೆದಿತ್ತು ಎಂಬುದು ಗಮನಾರ್ಹ ವಿಷಯ. ಮಧ್ಯಕಾಲೀನದಲ್ಲಿ ಆಳಿದ ಬಹಮನಿ ಸುಲ್ತಾನರು ಫತೇಪುರ ಸಿಕ್ರಿ ನಗರದ ಕಲ್ಪನೆಯಂತೆಯೇ ಸೂಫಿ ಸಂತ ಖಲಿಫಾತ್-ಅಲ್-ರಹಮಾನ್ ದರ್ಗಾಕ್ಕೆ ಸನಿಹದ ಭೀಮಾ ನದಿಯ ದಂಡೆಯ ಮೇಲೆ ತನ್ನ ಹೆಸರಿನಲ್ಲಿ ಹೊಸದಾಗಿ ನಗರವನ್ನು ನಿರ್ಮಿಸಿ ಅಲ್ಲಿಗೆ ರಾಜಧಾನಿಯನ್ನು ಸ್ಥಳಾಂತರಿಸುವ ಯೋಜನೆಯನ್ನು ಬಹಮನಿ ಸುಲ್ತಾನ ತಾಜುದ್ಧೀನ್ ಫಿರೋಜ್ ಶಹಾ ಯೋಜನೆಯನ್ನು ರೂಪಿಸಿದ್ದನು. ಅದರಂತೆ ಕ್ರಿ.ಶ.1406ರ ಅವಧಿಯಲ್ಲಿ ಹೊಸದಾಗಿ ಫಿರೋಜಾಬಾದ ಎಂಬ ಬೃಹತ್ ನಗರ ನಿರ್ಮಿಸಲಾಯಿತು. ಇದು ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣದಿಂದ ಈಶಾನ್ಯಕ್ಕೆ ಸುಮಾರು ಎಂಟು ಕಿ.ಮಿ. ದೂರದ ಭೀಮಾ ನದಿಯ ಎಡದಂಡೆಯ ಮೇಲೆ ಇದೆ. ಹರಿಯುವ ಹೊಳೆಯ ಹರವಾದ ಬಯಲು ಪ್ರದೇಶದಲ್ಲಿ ನಿರ್ಮಸಲಾಗಿದೆ ಈ ಮಧ್ಯಕಾಲೀನ ನಗರ. ಇಲ್ಲಿ ಭೀಮಾ ನದಿಯ ಹರಿವು ಕಡಿಮೆ ಇರುವುದರಿಂದ ಸುಲಭವಾಗಿ ಹೊಳೆಯನ್ನು ದಾಟಬಹುದಾಗಿದೆ. ಪ್ರಾಚೀನ ಕಾಲದಲ್ಲಿ ಫಿರೋಜಾಬಾದದ ಬಳಿಯೆ ಈ ನದಿಯನ್ನು ದಾಟಿ ಕಲಬುರ್ಗಿ ಪಟ್ಟಣಕ್ಕೆ ಸಂಚರಿಸುತ್ತಿದ್ದರು. ಆದ್ದರಿಂದ ಈ ಆಯಕಟ್ಟಿನ ಸ್ಥಳದಲ್ಲಿ ಬಹಮನಿ ಅರಸರು ಈ ನಗರವನ್ನು ನಿರ್ಮಿಸಿ ವೈರಿಗಳ ದಾಳಿಗಳಿಂದ ಅವರ ಮುಖ್ಯ ರಾಜಧಾನಿಯಾದ ಕಲಬುರ್ಗಿ ನಗರಕ್ಕೆ ರಕ್ಷಣೆ ಒದಗಿಸುವ ಯೋಜನೆಯೂ ಆಗಿತ್ತು. ಅಲ್ಪಕಾಲ ಅಂದರೆ ಕೇವಲ ಎರಡು ದಶಕಗಳ ಕಾಲ ಮಾತ್ರ ಅಂದರೆ ಕ್ರಿ.ಶ.1406 ರಿಂದ 1426ರ ಅವಧಿಯವರೆಗೆ ಈ ನಗರ ಅಸ್ತಿತ್ವದಲ್ಲಿತ್ತು. ರಾಜಕೀಯ ಕಾರಣಗಳಿಂದಾಗಿ ಸುಲ್ತಾನ ಫಿರೋಜ್ ಶಹಾನ ನಂತರ ಬಂದ ಬಹಮನಿ ದೊರೆ ಬೀದರಗೆ ರಾಜಧಾನಿಯನ್ನು ಸ್ಥಳಾಂತರಿಸಿದ್ದರಿಂದ ಈ ನಗರ ತನ್ನ ಮಹತ್ವತೆಯನ್ನು ಕಳೆದುಕೊಂಡು ಬಹಮನಿ ರಾಜ್ಯದ ಒಂದು ಸಾಮಾನ್ಯ ಕೋಟೆಯುಕ್ತ ಸ್ಥಳವಾಯಿತು. ಆದರೆ ಈ ನಗರದ ರಚನೆಯ ಇತಿಹಾಸ ಮತ್ತು ಇದರ ವಿನ್ಯಾಸ ದಕ್ಷಿಣ ಭಾರತದ ಮಧ್ಯಕಾಲೀನ ನಗರೀಕರಣದ ಅಧ್ಯಯನಕ್ಕೆ ಬಹು ಮುಖ್ಯ ಉದಾಹರಣೆಯಾಗಿದೆ. ಬಹಮನಿ ಪೂರ್ವದ ದೆಹಲಿ ಸುಲ್ತಾನರಾದ ತೊಘಲಕ್‍ರ ನಗರ ರಚನೆಯ ಶೈಲಿಯನ್ನು ಅನುಕರಣೆ ಈ ಫಿರೋಜಾಬಾದ ರಚನೆಯಲ್ಲಿ ಕಂಡುಬಂದರು ಮಧ್ಯ-ಏಶಿಯಾ ಅಥವಾ ಪರ್ಶಿಯನ್ ನಗರಗಳ ರಚನೆಯ ಪ್ರಭಾವ ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ಈ ನಗರದ ಅವಶೇಷಗಳ ಅಧ್ಯಯನಗಳು :

ಬಹಮನಿ ಅರಮನೆಗಳ ಅವಶೇಷಗಳಿರುವ ಫಿರೋಜಾಬಾದ ಇಂದಿಗೂ ಕೂಡ ಒಂದು ಅಜ್ಞಾತ ಸ್ಥಳ. ಈ ಬಹಮನಿ ಸುಲ್ತಾನ ರಾಜ್ಯದ ಮುಖ್ಯ ನಗರವಾಗಿದ್ದರೂ ಕೂಡ ಬಹಮನಿ ಸುಲ್ತಾನರ ಇತಿಹಾಸದಲ್ಲಿ ಅಥವಾ ಅವರ ವಾಸ್ತುಶಿಲ್ಪ ಅಧ್ಯಯನಗಳಲ್ಲಿ ಫಿರೋಜಾಬಾದದ ಅವಶೇಷಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಬಹುದು. ಕಲಬುರ್ಗಿ, ಬೀದರ, ಇತ್ಯಾದಿ ಪ್ರಮುಖ ಬಹಮನಿ ಸುಲ್ತಾನರ ಐತಿಹಾಸಿಕ ಸ್ಥಳಗಳ ಮಧ್ಯ ಫಿರೋಜಾಬಾದ ತೆರೆಮರೆಯಲ್ಲಿ ಉಳಿದಿದೆ. ಬೆರಳಣಿಕೆಯಷ್ಟು ಅಧ್ಯಯನಗಳು ನಡೆದಿವೆ ಎಂದು ಹೇಳಬಹುದು. ಕೆಲವು ಉಲ್ಲೇಖಾರ್ಹವಾದ ಅಧ್ಯಯನಗಳ ಪಟ್ಟಿಯನ್ನು ಈ ಕೆಳಗಿನಂತೆ ಮಾಡಬಹುದು.

ಪ್ರಾರಂಭಿಕವಾಗಿ ಹೇಳುವುದಾದರೆ ಈ ನಗರದ ಕುರಿತಂತೆ ಮಾಹಿತಿ 16ನೇ ಶತಮಾನದ ಮಧ್ಯಕಾಲೀನ ಇತಿಹಾಸಕಾರರಾದ ಖಾಸಿಮ್ ಫೆರಿಸ್ತಾ ಹಾಗೂ ಅಲಿ-ತಬಾತಬಿ ಅವರ ಕೃತಿಗಳಲ್ಲಿ ಫಿರೋಜಾಬಾದದ ಪ್ರಸ್ತಾಪ ಮಾಡಿದ್ದಾರೆ. ನಗರ ಸ್ಥಾಪನೆಯಾದ ಎರಡು ಶತಮಾನಗಳ ನಂತರ ಬಹಮನಿ ಮತ್ತು ಇತರ ದಖ್ಖನ್ ಸುಲ್ತಾನರ ಇತಿಹಾಸ ರಚಿಸಿದ ಈ ಚರಿತ್ರೆಕಾರರು ದೊರೆತ ಮಾಹಿತಿಗಳ ಆಧರಿಸಿ ಫಿರೋಜಾಬಾದದ ಬಗ್ಗೆ ಮಾಹಿತಿಯನ್ನು ನೀಡಿರುವುದು ವಿಶೇಷ. ಮುಖ್ಯವಾಗಿ ಖಾಸಿಮ್ ಫೆರಿಸ್ತಾ ಬಿಜಾಪುರದ ಆದಿಲ ಶಾಹಿ ಸುಲ್ತಾನರ ಆಶ್ರಯದಲ್ಲಿದ್ದ ಇತಿಹಾಸಕಾರ, ತನ್ನ ತಾರೀಖ್-ಇ-ಫೆರಿಸ್ತಾ ಕೃತಿಯಲ್ಲಿ ಬಹಮನಿ ಅರಸರ ಇತಿಹಾಸವನ್ನು ವಿವರಿಸುವಾಗ ಫಿರೋಜ್ ಶಹಾ ಸುಲ್ತಾನ ವ್ಯಕ್ತಿತ್ವವನ್ನು ವಿವರಿಸುತ್ತಾ ಫಿರೋಜಾಬಾದ ಪ್ರಸ್ತಾಪ ಮಾಡಿದ್ದಾನೆ. ಫಿರೋಜ್ ಶಹಾನ ವಯಕ್ತಿಕ ಆಸಕ್ತಿಯ ಹಿನ್ನೆಲೆಯಲ್ಲಿ ಈ ನಗರ ಸುಲ್ತಾನ ನಿರ್ಮಿಸಿದನು ಎಂದು ವಿವರಿಸಿದ್ದಾನೆ. ಅದರಂತೆ ಅಹ್ಮದನಗರದ ನಿಜಾಮ ಶಾಹಿ ಸುಲ್ತಾನ ಬುರಾಹನ್ ಶಹಾನ ಆಶ್ರಯದಲ್ಲಿದ್ದ ಇನ್ನೊಬ್ಬ ಇತಿಹಾಸಕಾರ ಅಲಿ-ತಬಾತಬಿಯು ತನ್ನ ಬುರಾನ್-ಇ-ಮಾಹ್ತಿರ್ ಕೃತಿಯಲ್ಲಿ ಈ ನಗರದ ಯೋಜನೆಯನ್ನು ಬಹಮನಿ ದೊರೆ ಫಿರೋಜ್ ಶಹಾ ರೂಪಿಸಿದರ ಕುರಿತು ವಿವರವಾಗಿ ಹೇಳಿದ್ದಾನೆ. ತಬಾತಬಿಯ ಪ್ರಕಾರ ಸುಲ್ತಾನ ಫಿರೋಜ್ ಶಹಾ ತನಗಾಗಿ ಒಂದು ಹೊಸ ನಗರವನ್ನು ನಿರ್ಮಿಸಿ ಅದನ್ನು ರಾಜ್ಯದ ಆಡಳಿತ ಕೇಂದ್ರಸ್ಥಾನವನ್ನಾಗಿ ಮಾಡುವ ಉದ್ಧೇಶ ಹೊಂದಿದ್ದ. ಆದ್ದರಿಂದ ಫಿರೋಜಾಬಾದ ನಗರವನ್ನು ಭೀಮಾ ನದಿಯ ದಡದ ಮೇಲೆ ನಿರ್ಮಿಸಿದ ಎಂದು ವಿವರಿಸಿದ್ದಾನೆ. ಒಟ್ಟಿನಲ್ಲಿ ಮಧ್ಯಕಾಲೀನ ಇತಿಹಾಸಕಾರರಿಗೆ ಬಹಮನಿ ಅರಸರು ನಿರ್ಮಿಸಿದ ಫಿರೋಜಾಬಾದ ನಗರದ ಪರಿಚಯವಿತ್ತೆಂದು ತಿಳಿದುಬರುತ್ತದೆ.

17ನೇ ಮತ್ತು 18ನೇ ಶತಮಾನಗಳಲ್ಲಿ ಫಿರೋಜಾಬಾದ ತನ್ನ ಮೂಲ ಸ್ವರೂಪ ಕಳೆದುಕೊಂಡು ಒಂದು ಬೆಚಾರಕ್ ಗ್ರಾಮವಾಗಿತ್ತು. ಹಳೆಯ ನಗರಕ್ಕೆ ಹೊಂದಿಕೊಂಡಂತೆ ಉಳಿದುಕೊಂಡಿದ್ದ ಫಿರೋಜಾಬಾದ-ಪೇಟ್ ಭೀಮಾ ನದಿಯ ದಂಡೆಯ ಮೇಲಿನ ಆಯಕಟ್ಟಿನ ಗ್ರಾಮವಾಗಿತ್ತು. ನಿಜಾಮ ಆಡಳಿತದಲ್ಲಿ ಫಿರೋಜಾಬಾದ-ಪೇಟ್ ಕಲಬುರ್ಗಿ ಜಿಲ್ಲೆಯ ಆಂದೋಲಾ ತಾಲೂಕಿಗೆ ಒಳಪಟ್ಟ ದೊಡ್ಡ ಹೊಬಳಿಯಾಗಿತ್ತು.

ಐತಿಹಾಸಿಕ ಸ್ಥಳಗಳ ಕುರಿತು ಅಧ್ಯಯನಗಳು ಪ್ರಾರಂಭಗೊಂಡಿದ್ದು 18ನೇ ಶತಮಾನದ ಉತ್ತರಾರ್ಧದಲ್ಲಿ. ನಿಜಾಮ ಸರ್ಕಾರ ತನ್ನ ರಾಜ್ಯದ ಭೂ-ಸರ್ವೇ ಕಾರ್ಯ ಮಾಡಿಸುವ ಯೋಜನೆಯೊಂದನ್ನು ರೋಪಿಸಿತು. ಈ ಸರ್ವೇ ಕಾರ್ಯಕ್ಕೆ ಬ್ರಿಟಿಷ ಅಧಿಕಾರಿ ಕೋಲಿನ್ ಮೆಕೆಂಜಿ ಅವರನ್ನು 1797ರಲ್ಲಿ ನೇಮಿಸಿತು. ಮೆಕೆಂಜಿಯ ಆಸಕ್ತಿ ಇತಿಹಾಸದ ದಾಖಲೆಗಳನ್ನು ಕಲೆ ಹಾಕುವುದು ಕೂಡ ಆಗಿತ್ತು. ಆದ್ದರಿಂದ ತನಗೆ ವಹಿಸಿದ ಭೂ-ಸರ್ವೇಯ ಜೊತೆಗೆ ವಿವಿಧ ಐತಿಹಾಸಿಕ ಸ್ಥಳಗಳ ಮಾಹಿತಿ ಕಲೆ ಹಾಕುವುದು ಮತ್ತು ಐತಿಹಾಸಿಕ ಸ್ಮಾರಕಗಳ ನಕ್ಷೆ ಮತ್ತು ಜಲವರ್ಣ ಚಿತ್ರಗಳನ್ನು ರಚಿಸುವುದು, ಪ್ರಾಚೀನ ಶಿಲಾಶಾಸನಗಳ ಪ್ರತಿಗಳನ್ನು ಸಂಗ್ರಹಿಸುವುದು ಮಾಡುತ್ತಿದ್ದನು. ಮೆಕೆಂಜಿ ಫಿರೋಜಾಬಾದಗೂ 1797ರಲ್ಲಿ ಬೇಟಿ ನೀಡಿ ಅಲ್ಲಿಯ ಕೋಟೆ, ಜುಮ್ಮಾ ಮಸೀದಿ, ಮತ್ತಿತರ ಅವಶೇಷಗಳ ನಕ್ಷೆಗಳನ್ನು ಮತ್ತು ವರ್ಣಚಿತ್ರಗಳನ್ನು ರಚಿಸಿದನು. ಇದು ಫಿರೋಜಾಬಾದದ ಪ್ರಾಚೀನ ಅವಶೇಷಗಳ ಪ್ರಥಮ ಅಧ್ಯಯನ ಎಂದು ಗುರುತಿಸಬಹುದು. ಮೆಕೆಂಜಿ ರಚಿಸಿದ ವರದಿ, ಅವಶೇಷಗಳ ನಕ್ಷೆಗಳು, ವರ್ಣಚಿತ್ರಗಳು ಲಂಡನ್ನಿನ ಲಂಡನ್ನಿನ ಬ್ರಿಟಿಷ್ ಲೈಬ್ರರಿಯ ಸಂಗ್ರಹದಲ್ಲಿವೆ.

ಮೆಕೆಂಜಿಯ ನಂತರ ಒಂದು ಶತಮಾನ ಕಾಲ ಈ ಸ್ಥಳದ ಬಗ್ಗೆ ಅಧ್ಯಯನಗಳು ನಡೆಯಲಿಲ್ಲ. ನಿಜಾಮ ಸರ್ಕಾರ ಪುರಾತತ್ವ ಇಲಾಖೆ ಸ್ಥಾಪಿಸುವ ಹಂತದವರೆಗೂ ಪುರಾತನ ಐತಿಹಾಸಿಕ ಸ್ಥಳಗಳ ಮಾಹಿತಿ ಸಂಗ್ರಹ ಅಥವಾ ಅವುಗಳ ಅಧ್ಯಯನಗಳಿಗೆ ಆಧ್ಯತೆ ಇರಲಿಲ್ಲ. ಈ ಮಧ್ಯೆ ನಿಜಾಮ ಸರ್ಕಾರದ ಭೂಗರ್ಭಶಾಸ್ತ್ರಜ್ಞ ಇಲಾಖೆ ಅಧಿಕಾರಿಯಾಗಿದ್ದ ಲಿಯೊನಾರ್ಡ ಮನ್ನ್ ಅವರು 1914ರಲ್ಲ್ಲಿ ಫಿರೋಜಾಬಾದಿಗೆ ಬೇಟಿ ನೀಡಿ ಅಲ್ಲಿಯ ಬಹಮನಿ ಕಾಲದ ಅವಶೇಷಗಳ ವಿವರಗಳನ್ನು ಕಲೆಹಾಕಿದರು. ಅವುಗಳ ವಿವಿರವಾದ ಮಾಹಿತಿಯನ್ನು ಸರ್ಕಾರದ ಕಾರ್ಯದರ್ಶಿಗೆ ಪತ್ರದ ಮೂಲಕ ವಿವರಿಸಿದ್ದರು. ಪುರಾತತ್ವ ಇಲಾಖೆಯ ಮುಖ್ಯಸ್ಥರಾಗಿದ್ದ ಗುಲಾಮ್ ಯಾಜ್ದಾನಿ ಅವರು ಇಲಾಖೆಯ ವಾರ್ಷಿಕ ವರದಿಯಲ್ಲಿ ಲಿಯೊನಾರ್ಡ ಮುನ್ನ್ ಅವರ ಫಿರೋಜಾಬಾದ ಕುರಿತಾದ ವರದಿಯ ಪತ್ರವನ್ನು 1914-15ರ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದರು. ಲಿಯೊನಾರ್ಡ ಮನ್ನ್ ಅವರು ತಾವು ಸಂದರ್ಶಿಸಿದ್ದ ಮಾಹಿತಿಯನ್ನು ಮತ್ತು ಫಿರೋಜಾಬಾದ ಅವಶೇಷಗಳ ವಿವರಣೆಗಳ ಮಾಹಿತಿ ಈ ವರದಿಯಲ್ಲಿ ಕಾಣಬಹುದಾಗಿದೆ. ಲಿಯೊನಾರ್ಡ ಮನ್ನ್ ಅವರು ಫಿರೋಜಾಬಾದ ಗ್ರಾಮದ ಸ್ಥಳಿಯರು ನೀಡಿದ ಮಾಹಿತಿಯ ಆಧಾರದ ಮೇಲೆ ಈ ಬಹಮನಿ ಕಾಲದ ಕೋಟೆ, ದ್ವಾರ ಕೊತ್ತಳಗಳನ್ನು ವಿವರವಾಗಿ ದಾಖಲಿಸಿದ್ದಾರೆ. ಈ ಕೋಟೆಯ ನಾಲ್ಕು ದಿಕ್ಕುಗಳಲ್ಲಿರುವ ಮಹಾದ್ವಾರಗಳ ವಿವರಿಸುತ್ತಾ ಇವುಗಳನ್ನು ಪಾನಿ-ದರವಾಜಾ; ಗುಲಬರ್ಗಾ-ದರವಾಜಾ; ಶೋರಾಪುರ-ದರವಾಜಾ ಮತ್ತು ರಾಯಚೂರು-ದರವಾಜಾ ಎಂದು ಸ್ಥಳಿಯರು ಕರೆಯುತ್ತಾರೆ ಎಂದು ವಿವರಿಸಿದ್ದಾರೆ. ಇವರಿಗೆ ಬಹಳ ಕುತುಹಲ ಮೂಡಿಸಿದ್ದು ಇಲ್ಲಿಯ ಜೆನಾನ ಮತ್ತು ಟರ್ಕಿಸ್ ಹಬೆ-ಸ್ನಾನಗೃಹ [ಹಮಾಮ್]. ಈ ಸ್ನಾನಗೃಹದ [ಹಮಾಮ್] ತಲನಕ್ಷೆಯನ್ನು ಇವರು ನೀಡಿದ್ದಾರೆ. ಬಹಮನಿ ಸುಲ್ತಾನರ ಅವಶೇಷಗಳಿರುವದನ್ನು ಕಲಾಶೈಲಿಯ ಆಧಾರದ ಮೇಲೆ ಗುರುತಿಸಿ ಈ ಅವಶೇಷಗಳ ಛಾಯಾಚಿತ್ರಗಳ ಸಮೇತ ದಾಖಲಿಕರಣ ಮಾಡುವುದು ಅಗತ್ಯವೆಂದು ಕಾರ್ಯದರ್ಶಿಯವರಿಗೆ ಲಿಯೊನಾರ್ಡ ಮನ್ನ್ ಅವರು ಶಿಫಾರಿಸು ಮಾಡಿದ್ದನು. ಕಲಬುರ್ಗಿ, ಬೀದರ ರಾಯಚೂರು ಇತ್ಯಾದಿ ಐತಿಹಾಸಿಕ ಸ್ಥಳಗಳಿಗೆ ದೊರೆತ ಆಧ್ಯತೆ ಫಿರೋಜಾಬಾದಗೆ ನಿಜಾಮ ಸರ್ಕಾರದ ಅವಧಿಯಲ್ಲಿಯೂ ದೊರೆಯದೆ ಇರುವುದು ಸೋಜಿಗದ ಸಂಗತಿ. ಸ್ವಾತಂತ್ರೋತ್ತರದ ನಂತರ ಅಂದರೆ 1954ರಲ್ಲಿ ಹೈದರಾಬಾದದಿಂದ ಪ್ರಕಟವಾಗುವ ಇಸ್ಲಾಮೀಕ್ ಕಲ್ಚರ್ ಎಂಬ ನಿಯತಕಾಲಿಕದಲ್ಲಿ ಜರ್ಮನ್ ವಿದ್ವಾಂಸ ಕ್ಲೌಸ್ ಫಿಷರ್ ಅವರು ಫಿರೋಜಾಬಾದ ಆನ್ ದಿ ಭೀಮಾ ಆ್ಯಂಡ್ ಎನ್ವಾರನ್ಸ್ ಎಂಬ ಲೇಖನ ಪ್ರಕಟಿಸಿದರು. ಕ್ಷೇತ್ರಕಾರ್ಯ ಆಧರಿತ ಮತ್ತು ಐತಿಹಾಸಿಕ ದಾಖಲೆಗಳ ಆಕರಗಳನ್ನು ಬಳಸಿಕೊಂಡು ಫಿರೋಜಾಬಾದ ಬಗ್ಗೆ ಪ್ರಕಟವಾದ ಪ್ರಥಮ ಸಂಶೋಧನಾತ್ಮಕ ಅಧ್ಯಯನ.

1972ರಲ್ಲಿ ಕೇಂದ್ರ ಪುರಾತತ್ವ ಇಲಾಖೆಯ ಶಾಸನತಜ್ಞ ಎ. ಸಿದ್ಧಿಕಿ ಅವರು ಟು ಇನ್ಸಕ್ರಿಪನ್ಸ್ ಆಫ್ ದಿ ಬಹಮನಿ ಪಿರೆಡ್ ಫ್ರಾಮ್ ಫಿರೋಜಾಬಾದ ಲೇಖನವನ್ನು ಎಫಿಗ್ರಾಪಿಯಾ ಇಂಡಿಕಾ- ಅರಾಬಿಕ್ ಪರ್ಷಿಯನ್ ಇನ್ಸಕ್ರಿಪನ್ಸ್ ಎಂಬ ನಿಯತಕಾಲಿಕದಲ್ಲಿ ಫಿರೋಜಾಬಾದ ಬಳಿಯ ಸೂಫಿ ಸಂತ ಖಲಿಫಾ-ಅಲ್-ರಹಮಾನ್ ದರ್ಗಾದ ಆವರಣದಲ್ಲಿಯ ಪರ್ಷಿಯನ್ ಶಿಲಾಶಾಸನಗಳನ್ನು ಪ್ರಕಟಿಸುವುದರ ಮೂಲಕ ಈ ಸ್ಥಳದ ಚಾರಿತ್ರಕ ದಾಖಲೆಗಳನ್ನು ಪರಿಚಯಿಸಿದರು. ಬಹಮನಿ ಸುಲ್ತಾನರ ವಾಸ್ತು-ಶಿಲ್ಪಕಲೆಯ ಕುರಿತು 1970ರ ದಶಕದಲ್ಲಿ ಪ್ರಕಟಿಸಿದ ದೀರ್ಘ ಲೇಖನದಲ್ಲಿ ಜಿಯಾಉದ್ಧೀನ್ ದೇಸಾಯಿ ಅವರು ಫಿರೋಜಾಬಾದ ಅವಶೇಷಗಳ ಬಗ್ಗೆಯೂ ಪ್ರಸ್ಥಾಪ ಮಾಡಿದ್ದಾರೆ. ಆದರೆ ಅವರು ಈಗಾಗಲೆ ದೊರೆತ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಆಧರಿಸಿ ಈ ಸ್ಥಳದ ಮಾಹಿತಿಯನ್ನು ನೀಡಿದ್ದಾರೆ.

1980ರ ದಶಕದವರೆಗೂ ಫಿರೋಜಾಬಾದ ಸ್ಥಳದ ಬಗ್ಗೆ ಹೆಚ್ಚಿನ ಆಸಕ್ತಿ ಪುರಾತತ್ವ ಇಲಾಖೆಯವರಾಗಲಿ, ವಿಶ್ವವಿದ್ಯಾಲಯದ ಸಂಶೋಧಕರು ವಹಿಸಲಿಲ್ಲ. 1980ರ ದಶಕದಲ್ಲಿ ಹೆಸರಾಂತ ಕಲಾ-ಇತಿಹಾಸಕಾರ ಡಾ|| ಜಾರ್ಜ ಮಿಶ್ಚೇಲ್ ಅವರು ಫಿರೋಜಾಬಾದ ಸ್ಥಳದ ಸಮಗ್ರ ಅವಶೇಷಗಳ ಅನ್ವೇಷಣೆಯನ್ನು ಕೈಕೊಂಡು ತಳಸ್ಪರ್ಶಿ ಅಧ್ಯಯನಗಳನ್ನು ಕೈಕೊಂಡರು. ಡಾ|| ಮಿಶ್ಚೇಲ್ ಅವರು ಹಿರಿಯ ಚರಿತ್ರೆಕಾರಾದ ಡಾ|| ರಿರ್ಚಡ್ ಇಟನ್ ಜೊತೆಗೂಡಿ ಫಿರೋಜಾಬಾದದ ಅವಶೇಷಗಳ ಮತ್ತು ಅವುಗಳ ಇತಿಹಾಸ ವಿವರಣೆಗಳು ಒಳಗೊಂಡ ವಿಶೇಷ ಸಂಶೋಧನಾ ಕೃತಿಯನ್ನು 1992ರಲ್ಲಿ ಪ್ರಕಟಿಸಿದರು. ಪ್ರತಿಷ್ಟಿತ ಆಕ್ಸಫರ್ಡ್ ಯುನಿರ್ವಸಿಟಿ ಪ್ರೆಸ್ ಅವರು ಪ್ರಕಟಿಸಿದ ಫಿರೋಜಾಬಾದ: ಪ್ಯಾಲೆಸ್ ಸಿಟಿ ಆಫ್ ಡೆಖ್ಖನ್ ಕೃತಿಯು ಫಿರೋಜಾಬಾದದ ಬಹಮನಿ ಸುಲ್ತಾನರ ಕಾಲದ ಎಲ್ಲಾ ಅವಶೇಷಗಳನ್ನು ದಾಖಲಿಸಿದ್ದಲ್ಲದೆ ಅವುಗಳ ಕಲಾಶೈಲಿ, ನಿರ್ಮಾಣದ ಕಾಲ, ಅವುಗಳ ವಿಶೇಷತೆ ಇತ್ಯಾದಿಗಳ ಕುರಿತು ಸಂಶೋಧನಾತ್ಮಕ ವಿಶ್ಲೇಷಣೆ ಒಳಗೊಂಡಿದೆ. ಅವಶೇಷಗಳ ತಲನಕ್ಷೆಗಳು, ಛಾಯಾಚಿತ್ರಗಳ ಸಮೇತ ವಿವರಣಾತ್ಮಕ ಮಾಹಿತಿ ಈ ವಿದ್ವಾಂಸರು ಈ ಕೃತಿಯಲ್ಲಿ ನೀಡಿದ್ದರಿಂದ ಫಿರೋಜಾಬಾದದ ಐತಿಹಾಸಿಕ ಮಹತ್ವವನ್ನು ಅರಿಯಲು ಉಪಯುಕ್ತ ಸಂಶೋಧನೆ ಆಗಿದೆ.

ಪ್ರೊ. ಕೆ. ಪದ್ದಯ್ಯ ಅವರು ಕೂಡ ಈ ಸ್ಥಳಕ್ಕೆ ಕ್ಷೇತ್ರಕಾರ್ಯ ಕೈಕೊಂಡು ಮಾಹಿತಿಯನ್ನು 1993ಯಲ್ಲಿ ಲೇಖನದ ಮೂಲಕ ಪ್ರಕಟಿಸಿದ್ದಾರೆ. ಈ ನಡುವೆ ಡಾ||ಚೆನ್ನಬಸಪ್ಪ ಎಸ್. ಪಾಟೀಲ ಅವರು 1998ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾದ ಕರ್ನಾಟಕ ಕೋಟೆಗಳು ಕೃತಿಯಲ್ಲಿ ಫಿರೋಜಾಬಾದ ಕೋಟೆಯ ಬಗ್ಗೆ ಕ್ಷೇತ್ರಕಾರ್ಯ ಆಧಾರಿತ ವಿವರಣೆಗಳ ಒಳಗೊಂಡ ಒಂದು ಅಧ್ಯಾಯವನ್ನು ಪ್ರಕಟಿಸಿದರು.

ಇತ್ತೀಚಿಗೆ ಲಂಡನ್ನಿನ ಸ್ಕೂಲ್ ಆಫ್ ಸೌತ್ ಏಶಿಯನ್ ಆ್ಯಂಡ್ ಆಫ್ರಿಕನ್ ಸ್ಟಡೀಸ್ ಸಂಶೋಧನಾ ಸಂಸ್ಥೆಯಲ್ಲಿ ಡಾ|| ಹೆಲೆನ್ ಫಿಲೋನ್, ಸಂಶೋಧಕರು, ಬಹಮನಿ ಸುಲ್ತಾನರ ಆರಂಭಿಕ ಕಾಲದ ವಾಸ್ತುಶಿಲ್ಪ ಮತ್ತು ಕಲೆಯ ಕುರಿತಾಗಿ ಸಂಶೋಧನೆ ಕೈಕೊಂಡರು. ಇವರು ಮುಖ್ಯವಾಗಿ ಫಿರೋಜ್ ಶಹಾ ಸುಲ್ತಾನನ ಒಟ್ಟು ಸಾಧನೆಗಳ ಹಿನ್ನಲೆಯಲ್ಲಿ ಈ ನಗರ ಯೋಜನೆ ಹಾಗೂ ನಗರ ರಚನೆಯ ಮಹತ್ವತೆಯನ್ನು ಪುನರ್ ಪರಿಶಿಲಿಸಿದ್ದಾರೆ.

ನಗರದ ವಿನ್ಯಾಸ :
ಜೇವರ್ಗಿ ಪಟ್ಟಣಕ್ಕೆ ಹತ್ತಿರವಿದ್ದರೂ ಫಿರೋಜಾಬಾದ ಕಲಬುರ್ಗಿ ತಾಲೂಕಿನ ವ್ಯಾಪ್ತಿಗೆ ಒಳಪಡುತ್ತದೆ. ಪ್ರಸ್ತುತ ಫಿರೋಜಾಬಾದ ಗ್ರಾಮವು ಆಧುನಿಕ ಗ್ರಾಮವಾಗಿದ್ದು ಇದರ ದಕ್ಷಿಣಕ್ಕೆ 500 ಮಿ. ದೂರದಲ್ಲಿ ಹಳೆಯ ಬಹಮನಿ ಕಾಲದ ಫಿರೋಜಾಬಾದ ನಗರದ ಅವಶೇಷಗಳಿದ್ದು, ಭೀಮಾ ನದಿಯ ದಂಡೆಯ ಮೇಲೆ ಹರಡಿಕೊಂಡಿದೆ. ಇದು ಚೌಕಾಕಾರದ ವಿನ್ಯಾಸದಲ್ಲಿ ನಿರ್ಮಿಸಲಾಗಿದ್ದು, ನದಿಯ ತಿರುವಿನಂತೆಯೇ ಕೋಟೆಯ ಗೋಡೆಯನ್ನು ಕಟ್ಟಲಾಗಿದೆ. ಈ ನಗರವು ಸುಮಾರು 12000 ಚದುರ ಮೀಟರ್ ವಿಸ್ತಿರ್ಣ ವ್ಯಾಪ್ತಿಯಿಂದ ಕೂಡಿದೆ. ಚೌಕಾಕಾರದ ವಿನ್ಯಾಸದ ರಚನೆಯಲ್ಲಿರುವ ಈ ನಗರವು ಎರಡು ಮುಖ್ಯ ಆವರಣಗಳಾಗಿ ವಿಂಗಡಿಸಲಾಗಿದೆ. ಅರಮನೆಗಳ ಆವರಣ ಮತ್ತು ಪೇಟೆ-ಆವರಣ ಎಂದು ಗುರುತಿಸಬಹುದು.

ಕೋಟೆ:
ಕ್ರಿ.ಶ. 1400 ಅವಧಿಯಲ್ಲಿ ನಿರ್ಮಿಸಿದ ಫಿರೋಜಾಬಾದ ಕೋಟೆ ಉತ್ತರ ಭಾರತದ ತೊಘಲಕ್ ಸುಲ್ತಾನರ ರಕ್ಷಣಾ ವಾಸ್ತು ಶೈಲಿ ಮತ್ತು ತಂತ್ರಗಾರಿಕೆಗಳ ಪ್ರಭಾವದಿಂದ ನಿರ್ಮಿತವಾದ ಕೋಟೆ. ದಖ್ಖನ್ನಿನಲ್ಲಿ ಕೋಟೆ ರಚನೆಯ ವಿಧಾನದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಂಡ ಕೋಟೆ ಎಂಬ ಹೆಗ್ಗಳಿಕೆ ಕೂಡ ಇದಕ್ಕೆ ಇದೆ. ನದಿಯ ದಂಡೆಯ ಇಳಿಜಾರಿನ ಬಯಲಿನಲ್ಲಿ ನಿರ್ಮಿಸಲಾದ ಈ ಕೋಟೆ ಒಂದು ನೆಲದುರ್ಗ ಕೋಟೆ. ಕಲಬುರ್ಗಿಯಿಂದ ವಿಜಯನಗರಕ್ಕೆ ಸಂಚರಿಸುವ ಹೆದ್ದಾರಿಯ ಮೇಲೆ ಈ ಕೋಟೆಯುಕ್ತ ನಗರ ನಿರ್ಮಿಸಲಾಗಿದೆ. ಸ್ಥಳೀಯವಾಗಿ ದೊರೆಯುವ ಸುಣ್ಣದ ಕಲ್ಲುಗಳನ್ನು ಬಳಸಿಕೊಂಡು ಇಲ್ಲಿ ಬದ್ರವಾದ ಕೋಟೆಯನ್ನು ಕಟ್ಟಲಾಗಿದೆ. ಕೋಟೆಯ ಗೋಡೆಯು ಸುಮಾರು 42 ಅಡಿ ದಪ್ಪ ಹಾಗೂ 40 ಅಡಿ ಎತ್ತರವಾಗಿವೆ. ವೈರಿಗಳ ಆಕ್ರಮಣಗಳನ್ನು ತಡೆಯುವದಕ್ಕಾಗಿ ದಪ್ಪನೆಯ ಕೋಟೆ ಗೋಡೆಗಳನ್ನು; ಪಹರೆ ಕಟ್ಟೆ ಮತ್ತು ಬುರುಜುಗಳಿಂದ ನಿರ್ಮಿಸಲಾಗಿದೆ. ಸುಮಾರು 50ಕ್ಕು ಅಧಿಕ ಚೌಕಾಕಾರದ ಮತ್ತು ಷಟ್‍ಕೋನ ವಿನ್ಯಾಸದ ಬುರುಜುಗಳು ಈ ಕೋಟೆಯಲ್ಲಿ ಅಳವಡಿಸಲಾಗಿದ್ದು, ಹಳೆಯ ಸಂಪ್ರದಾಯಕ ತಂತ್ರಜ್ಞಾನದಿಂದ ನಿಧಾನವಾಗಿ ಪರ್ಶಿಯನ್ ದೇಶದ ಮಿಲಿಟರಿ ತಂತ್ರಜ್ಞಾನದ ಅನುಕರಣೆ ದೇಶಿಯ ಕೋಟೆಗಳಲ್ಲಿ ಬಳಕೆಗೆ ಮಾಡುವುದನ್ನು ಇಲ್ಲಿ ಕಾಣಬಹುದು. ಪ್ರಾಯಶಃ ಕೋಟೆಯ ನಿರ್ಮಾಣದಲ್ಲಿ ಪರ್ಶಿಯನ್ ವಾಸ್ತು-ಶಿಲ್ಪಿಗಳು ಅಥವಾ ವಾಸ್ತು-ವಿನ್ಯಾಸಕಾರರನ್ನು ಮತ್ತು ತಂತ್ರಜ್ಞರನ್ನು ಬಹಮನಿ ಅರಸರು ನೇಮಿಸಿಕೊಂಡಿದ್ದರೆಂದು ಇಲ್ಲಿಯ ರಚನಾ ವಿಧಾನಗಳಿಂದ ಗುರುತಿಸಬಹುದು.

ಮಹಾ-ದ್ವಾರಗಳು :
ಈ ನಗರದ ಕೋಟೆಗೆ ನಾಲ್ಕು ದಿಕ್ಕುಗಳಲ್ಲಿ ಪ್ರವೇಶಕ್ಕಾಗಿ ಮಹಾ-ದ್ವಾರಗಳನ್ನು ಅಳವಡಿಸಲಾಗಿದೆ. ನಗರದ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಮುಖ್ಯ ದ್ವಾರಗಳಿದ್ದು ಇವುಗಳನ್ನು ವೈರಿಗಳ ಆಕ್ರಮಣಗಳಿಂದ ರಕ್ಷಿಸಲು ಹಲವು ತಂತ್ರಗಳನ್ನು ಅಳವಡಿಸಿ ಭದ್ರಪಡಿಸಲಾಗಿವೆ. ಕೋಟೆಯ ಉತ್ತರ ಮತ್ತು ದಕ್ಷಿಣ ದಿಕ್ಕಿನ ದ್ವಾರಗಳು ಸರಳವಾಗಿದ್ದು ಇವು ನದಿಯ ದಂಡೆಯಿಂದ ಕಲಬುರ್ಗಿ ಪಟ್ಟಣಕ್ಕೆ ಸಂಚರಿಸಲು ಬಳಸುವಂತಿವೆ. ಕೋಟೆಯ ಈ ನಾಲ್ಕು ದ್ವಾರಗಳನ್ನು ಈ ಹಿಂದೆ ಇವುಗಳನ್ನು ಗುಲಬರ್ಗಾ-ದರವಾಜಾ; ರಾಯಚೂರು-ದರವಾಜಾ; ಶೋರಾಪುರ-ದರವಾಜಾ ಮತ್ತು ಪಾನಿ-ದರವಾಜಾ ಎಂದು ಕರೆಯುತ್ತಿದ್ದರು.

ಕೋಟೆಯ ನಾಲ್ಕು ದಿಕ್ಕಿನಲ್ಲಿರುವ ಮಹಾ-ದ್ವಾರಗಳು ಅತ್ಯಂತ ವಿಶೇಷವಾಗಿವೆ. ಇವುಗಳಲ್ಲಿ ಪಶ್ಚಿಮ ದಿಕ್ಕಿನಲ್ಲಿರುವ ಮಹಾ-ದ್ವಾರ ಅತ್ಯಂತ ದೊಡ್ಡದು ಮತ್ತು ವಿಶೇಷ ರಕ್ಷಣಾ ತಂತ್ರಗಳನ್ನು ಬಳಸಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಭರತದಲ್ಲಿ ಮುಸ್ಲೀಮ್ ದೊರೆಗಳ ನಗರಗಳ ಪಶ್ಚಿಮ ದ್ವಾರಗಳು ಬಹಳ ವಿಶೇಷತೆಯಿಂದ ಕೂಡಿರುತ್ತವೆ. ಮಹ್ಮದೀಯರಿಗೆ ಬಹಳ ಪವಿತ್ರ ಕ್ಷೇತ್ರವೆಂದರೆ ಮೆಕ್ಕಾದ ಖಾಬಾ. ಭಾರತಕ್ಕೆ ಮೆಕ್ಕಾ ನಗರವು ಪಶ್ಚಿಮ ದಿಕ್ಕಿನಲ್ಲಿದೆ. ಆದ್ದರಿಂದ ಪಶ್ಚಿಮದ ದ್ವಾರಗಳು ವಿಶೇಷತೆಗಳಿಂದ ನಿರ್ಮಿಸಲಾಗಿತ್ತವೆ. ಫಿರೋಜಾಬಾದ ಸಂಪೂರ್ಣವಾಗಿ ಮುಸ್ಲೀಮ್ ದೊರೆಗಳ ಅಧೀನದಲ್ಲಿ ನಿರ್ಮಿಸಲಾಗಿದ್ದರಿಂದ ನಗರ ರಚನೆಯಲ್ಲಿ ಇಸ್ಲಾಮಿಕ್ ಸಂಪ್ರದಾಯಗಳು ಸ್ಪಷ್ಟವಾಗಿ ಗುರುತಿಸಬಹುದಾಗಿವೆ. ನದಿಗೆ ಮುಖಮಾಡಿ ನಿರ್ಮಿಸಲಾದ ಪಶ್ಚಿಮ ದಿಕ್ಕಿನ ದ್ವಾರವು ವಿಶಾಲ ಮತ್ತು ಎತ್ತರವಾದ ಕಮಾನಿನ ವಿನ್ಯಾಸದಿಂದ ಕೂಡಿದೆ. ಬಿಳಿಯ ಬಣ್ಣದ ಸುಣ್ಣದ ಕಲ್ಲುಗಳನ್ನು ಬಳಸಿ ನಿರ್ಮಿಸಲಾದ ಈ ದ್ವಾರವು ದೈತ್ಯವಾದ ಎತ್ತರದ ಕಮಾನ ಮುಂಭಾಗದಲ್ಲಿ ಅಳವಡಿಸಿ ದ್ವಾರಕ್ಕೆ ಗಂಭಿರತೆಯನ್ನು ನೀಡಲಾಗಿದೆ. ಅದರಂತೆ ಕಪ್ಪು ವರ್ಣದ ಬಸಾಲ್ಟ್ ಶಿಲೆಗಳನ್ನು ಬಳಸಿದ್ದರಿಂದ ಮಹಾ-ದ್ವಾರವು ಅಲಂಕಾರಿಕವಾಗಿ ಕಾಣುತ್ತದೆ. ಪ್ರವೇಶಕ್ಕೆ ಮಾಡಲಾದ ಬಾಗಿಲು ಕಮಾನಿನಿಂದ ಕೂಡಿದ್ದು ಇದರ ಇಕ್ಕೆಲೆಗಳಲ್ಲಿ ಕಪ್ಪು-ಶಿಲೆಯಲ್ಲಿ ಕುಂಭಗಳಂತೆ ಅಲಂಕಾರದ ಕೆತ್ತನೆಗಳಿವೆ. ಅಲಂಕಾರದ ಜೊತೆಗೆ ದ್ವಾರವು ವೈರಿಗಳ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಲು ಬಾಗಿಲುಗಳ ಇಕ್ಕೆಡೆಗಳಲ್ಲಿ ಷಟ್‍ಕೋನಾಕಾರದ ಎತ್ತರವಾದ ಬುರುಜುಗಳನ್ನು ನಿರ್ಮಿಸಲಾಗಿವೆ. ದ್ವಾರದ ಒಳಭಾಗದಲ್ಲಿ ಎತ್ತರವಾದ ಜಗುಲಿಗಳನ್ನು ನಿರ್ಮಿಸಲಾಗಿದೆ. ಒಂಬತ್ತು ಅಂಕಣಗಳ ಈ ಜಗುಲಿಗಳು ಕಮಾನುಗಳಿಂದ ವಿಂಗಡಿಸಲಾಗಿದೆ. ಜಗುಲಿಗಳು ಎರಡು ಅಂತಸ್ಥುಗಳಿಂದ ಕೂಡಿದ್ದವು, ಆದರೆ ಈಗ ಮೇಲಿನ ಮಹಡಿ ಬಿದ್ದು ಹೋಗಿದೆ. ಇದರ ಮಾಳಿಗೆ ಪಿರಾಮಿಡ್ ಆಕೃತಿಯಲ್ಲಿ ನಿರ್ಮಿತವಾಗಿದ್ದವು. ಬಹಮನಿ ರಾಜ್ಯದ ದಕ್ಷಿಣಕ್ಕೆ ಇದ್ದ ವಿಜಯನಗರದ ಪ್ರದೇಶದಿಂದ ಬರುವ ಯಾತ್ರಿಕರಿಗೆ ಅಥವಾ ವರ್ತಕರಿಗೆ ಈ ಪಶ್ಚಿಮದ ಮಹಾ-ದ್ವಾರದಿಂದ ಪ್ರವೇಶಿಸಬೇಕಾಗಿತ್ತು. ಪ್ರತಿ ಯಾತ್ರಿಕರು ಈ ದ್ವಾರದಲ್ಲಿ ನಿಯೋಜಿತವಾದ ಅಧಿಕಾರಿಗಳ ತಪಾಸಣೆಗೆ ಒಳಗೊಳ್ಳಬೇಕಾಗಿತ್ತು. ಯಾತ್ರಿಕರು ವಿಶ್ರಮಿಸಿಕೊಳ್ಳಲು ದ್ವಾರದ ಹೊರಭಾಗದ ಗೋಡೆಯಲ್ಲಿ ಚಿಕ್ಕ ಚಿಕ್ಕ ಕೋಣೆಗಳನ್ನು ಸಾಲಾಗಿ ನಿರ್ಮಿಸಲಾಗಿದೆ. ಒಟ್ಟಾರೆ ಈ ಪಶ್ಚಿಮ ದಿಕ್ಕಿನ ಮಹಾ-ದ್ವಾರವು ಫಿರೋಜಾಬಾದ ನಗರದ ಅತ್ಯಂತ ಸುಂದರ ಮತ್ತು ಅತ್ಯಂತ ಮಹತ್ವದ ಪ್ರವೇಶ-ದ್ವಾರವಾಗಿತ್ತು. ಅದರಂತೆ ಪೂರ್ವ ದಿಕ್ಕಿನ ಮಹಾ-ದ್ವಾರವು ಕೂಡ ಎತ್ತರವಾದ ಮತ್ತು ಸುಂದರವಾದ ದ್ವಾರವಾಗಿದೆ.

ಪೂರ್ವ ಮಹಾ-ದ್ವಾರ :
ಪೂರ್ವದ ಕೋಟೆ ಗೋಡೆಯಲ್ಲಿ ನಿರ್ಮಿಸಲಾದ ಈ ಮಹಾ-ದ್ವಾರವು ಹಲವು ವೈಶಿಷ್ಟ್ಯತೆಗಳಿಂದ ನಿರ್ಮಿಸಲಾಗಿದೆ. ಸಂಪ್ರದಾಯಿಕ ದೇಶಿ ರಕ್ಷಣಾ ವ್ಯವಸ್ಥೆಯ ತಂತ್ರಜ್ಞತೆಯನ್ನು ತೊರೆದು ಮಧ್ಯ-ಏಶಿಯಾದ ಮಿಲಿಟಿರಿ ತಂತ್ರಜ್ಞಾನವನ್ನು ಮತ್ತು ವೈರಿಗಳ ಆಕ್ರಮಣಗಳನ್ನು ತಿವ್ರಗತಿಯಲ್ಲಿ ಎದುರಿಸಲು ಬೇಕಾಗುವ ವಿಧಾನಗಳನ್ನು ಅಳವಡಿಸುವ ಕ್ರಮಗಳನ್ನು ಈ ದ್ವಾರದ ನಿರ್ಮಾಣದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಸುಮರು 40 ಅಡಿ ಎತ್ತರವಾದ ಗೋಡೆಗಳ ಒಳಗೊಂಡ ಈ ದ್ವಾರವು ಎತ್ತರವಾದ ಕಮಾನಿನಿಂದ ನಿರ್ಮಿಸಲಾಗಿದೆ. ಇಕ್ಕೆಡೆಗಳಲ್ಲಿ ಷಟ್ ಕೋನಾಕೃತಿಯ ಎತ್ತರವಾದ ಕೊತ್ತಳಗಳನ್ನು ಅಳವಡಿಸಲಾಗಿದೆ. ಈ ಕೊತ್ತಳಗಳ ಮೇಲ್ಭಾಗದಲ್ಲಿ ಮುಂಚಾಚಿದ ಚಿಕ್ಕ ಬಾಲ್ಕೊನಿಗಳಿವೆ. ಈ ಬಾಲ್ಕೊನಿಗಳಿಂದ ವೈರಿಗಳ ಮೇಲೆ ಪ್ರತಿ-ಆಕ್ರಮಣ ಮಾಡಬಹುದಾಗಿದೆ. ಅದರಂತೆ ಈ ದ್ವಾರಕ್ಕೆ ಪ್ರವೇಶಿಸುವ ಯಾತ್ರಿಕರನ್ನು ವಿಚಾರಣೆ ಮಾಡಬಹುದಾಗಿತ್ತು. ದ್ವಾರಕ್ಕೆ ನೇರವಾಗಿ ವೈರಿಗಳು ನುಗ್ಗಲು ಸಾಧ್ಯವಾಗದಂತೆ ದ್ವಾರದ ಮುಂಭಾಗದಲ್ಲಿ ಪರದೆಯಂತೆ ಮರೆ-ಮಾಚುವ ತಿರುವು ಇರುವ ಗೋಡೆಗಳನ್ನು ನಿರ್ಮಿಸಲಾಗಿದೆ. ವೈರಿಗಳು ದ್ವಾರಕ್ಕೆ ಆಕ್ರಮಣ ಮಾಡಲು ಕಠಿಣವಾಗುವುದಕ್ಕೆ ಈ ಪರದೆ ರೂಪದ ಗೋಡೆಗಳನ್ನು ನಿರ್ಮಿಸಿ ಮಹಾ-ದ್ವಾರವನ್ನು ರಕ್ಷಿಸಿಕೊಳ್ಳುವ ತಂತ್ರವಾಗಿತ್ತು. ಸಂಪ್ರದಾಯಿಕ ದ್ವಾರಗಳ ನಿರ್ಮಾಣಕ್ಕಿಂತ ಬಿನ್ನವಾದ ತಂತ್ರ ಫಿರೋಜಾಬಾದದ ಕೋಟೆಯಲ್ಲಿ ನಿರ್ಮಿಸಲಾಗಿದ್ದು ವಿಶೇಷ. ಈ ತಂತ್ರಗಳನ್ನು ಬಳಸಿಕೊಂಡು ಬೀದರ ಕೋಟೆ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕ್ರಿ.ಶ. 15ನೇ ಶತಮಾನದ ಆರಂಭಿಕ ದಶಕದ ಬಹಮನಿ ಸುಲ್ತಾನರಿಂದ ದಖ್ಖನ್ನಿನ ಪ್ರದೇಶದಲ್ಲಿ ಮೊದಲಬಾರಿಗೆ ಈ ತಂತ್ರಗಾರಿಕೆಗಳನ್ನು ಅಳವಡಿಸಿ ಕೋಟೆಗಳ ದ್ವಾರಗಳನ್ನು ನಿರ್ಮಿಸುವ ಸಂಪ್ರದಾಯ ಆರಂಭವಾಯಿತು. ಬೀದರಗಿಂತಲೂ ಪೂರ್ವದ ಕೋಟೆ ಫಿರೋಜಾಬಾದ ಆಗಿರುವುದರಿಂದ ಇದರ ನಿರ್ಮಾತೃ ಸುಲ್ತಾನ ಫಿರೋಜ್ ಶಹಾನ ದೂರದೃಷ್ಟಿ ಇದರಿಂದ ವ್ಯಕ್ತವಾಗುತ್ತದೆ. ಅದರಂತೆ ದ್ವಾರದ ಒಳಭಾಗದಲ್ಲಿಯೂ ಎತ್ತರವಾದ ಜುಗುಲಿಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಮಹಡಿಯ ರೂಪದಲ್ಲಿರುವ ಈ ಜಗುಲಿಗಳು ಹಳೆಯ ಕಂಬಗಳನ್ನು ಬಳಸಿಕೊಂಡು ಅಂಕಣಗಳನ್ನು ಮಾಡಲಾಗಿದೆ. ಮೆಲಿನ ಮಹಡಿಗೆ ಹೋಗುವುದಕ್ಕೆ ಮೆಟ್ಟಲುಗಳನ್ನು ನಿರ್ಮಿಸಲಾಗಿದೆ. ಈ ಎರಡು ಅಂತಸ್ಥಿನ ಮಹಡಿ ಜಗುಲಿಗಳು ಅಧಿಕಾರಿಗಳ ಕಚೇರಿಯಾಗಿ ಬಳಕೆಯಾಗುತ್ತಿತ್ತು. ವರ್ತಕರ ಸರಕು ಸಾಮಾನುಗಳ ಮೇಲಿನ ಸುಂಕಗಳನ್ನು ಸಂಗ್ರಹಿಸುವುದಕ್ಕೆ ಮತ್ತು ತಪಾಸಣೆ ಮಾಡುವುದಕ್ಕೆ ಬಳಕೆಯಾಗುತ್ತಿತ್ತು. ನದಿಯ ದಂಡೆಯಲ್ಲಿದ್ದರಿಂದ ಈ ದ್ವಾರವು ಲಿಯೊನಾರ್ಡ ಮನ್ನ್ ಅವರು ಸೂಚಿಸಿದ ಪಾನಿ-ದರವಾಜಾ ಇರುವ ಸಾಧ್ಯತೆ ಕಾಣುತ್ತದೆ.

ದಕ್ಷಿಣದ ಮಹಾ-ದ್ವಾರ :
ಇದು ಸರಳವಾದ ದ್ವಾರ. ಸುಣ್ಣದ ಬಿಳಿಯ ಕಲ್ಲುಗಳನ್ನು ಮತ್ತು ಬಸಾಲ್ಟ್‍ದ ಕಪ್ಪು-ಶಿಲೆಗಳನ್ನು ಒಟ್ಟಿಗೆ ಬಳಸಿ ಕಟ್ಟಲಾಗಿದ್ದು ನೋಡಲು ಸುಂದರವಾಗಿ ಕಾಣುತ್ತದೆ. ಇದರ ಕಮಾನು ಎತ್ತರವಾಗಿರದೆ, ಸ್ವಲ್ಪ ಗೊಳಾಕಾರದ ವಿನ್ಯಾಸದಂತೆ ಗೋಚರಿಸುತ್ತದೆ. ಆದರೆ ಕಮಾನಿನ ದ್ವಾರದ ಮೇಲ್ಭಾಗದ ಕುಂಬಿಯಲ್ಲಿ ಚಿಕ್ಕ ಗೂಡು ಮಾಡಲಾಗಿದೆ. ಉಳಿದಂತೆ ದ್ವಾರದ ಇಕ್ಕೆಡೆಗಳ ಗೋಡೆಗಳು ನಾಶವಾಗಿದ್ದು ಮೂಲ ಸ್ವರೂಪ ಮತ್ತು ರಚನೆ ಗುರುತಿಸುವುದು ಕಷ್ಟವಾಗಿದೆ. ಈ ದ್ವಾರವು ಜೇವರ್ಗಿ ಪಟ್ಟಣಕ್ಕೆ ಮುಖ ಮಾಡಿದೆ ಪ್ರಾಯಶಃ ಲಿಯೊನಾರ್ಡ ಮನ್ನ್ ಸೂಚಿಸಿದ ರಾಯಚೂರು-ದರವಾಜಾ ಇದೇ ಆಗಿರುವ ಸಾಧ್ಯತೆ ಇದೆ.

ಜುಮ್ಮಾ ಮಸೀದಿ :
ಮಹ್ಮದೀಯ ನಗರಗಳ ರಚನೆಯಲ್ಲಿ ಜುಮ್ಮಾ ಮಸೀದಿಯು ನಿರ್ಮಾಣ ಪ್ರಧಾನ. ವಾರದ ಪವಿತ್ರದ ದಿನವೆಂದು ಕರೆಯಲಾಗುವ ಶುಕ್ರವಾದ ಮಧ್ಯಾನದ ಪ್ರಾರ್ಥನೆ ಊರಿನ ಜನರೆಲ್ಲರೂ ಸಾಮೂಹಿಕವಾಗಿ ಮಾಡುವುದು ಸಂಪ್ರದಾಯ ಮತ್ತು ಅಗತ್ಯ ಕೂಡ. ಆ ಕಾರಣಕ್ಕಾಗಿ ನಗರದ ನಿವಾಸಿಗರು ಒಂದೇಡೆ ಸೇರಿ ಪ್ರಾರ್ಥನೆ ಮಾಡುವುದಕ್ಕಾಗಿ ಬೃಹತ್ ಆಥವಾ ವಿಶಾಲವಾದ ಮಸೀದಿಯನ್ನು ನಿರ್ಮಿಸುವುದು ವಾಡಿಕೆ. ಸಾಮೂಹಿಕ ಪ್ರಾರ್ಥನೆ ಮಾಡುವುದಕ್ಕೆ ನಿರ್ಮಿಸಿದ ಮಸೀದಿಯನ್ನು ಜುಮ್ಮಾ ಮಸೀದಿಯೆಂದು ಕರೆಯುದುಂಟು. ಫಿರೋಜಾಬಾದ ನಗರದ ಮಧ್ಯಭಾಗದಲ್ಲಿ ನಿರ್ಮಿಸಲಾದ ಜುಮ್ಮಾ ಮಸೀದಿ ಹಲವು ವಿಶೇಷತೆಗಳಿಂದ ಕೂಡಿದೆ. ಇದು ಅರಮನೆಯ ಆವರಣದ ಗೋಡೆಗೆ ಹೊಂದಿಕೊಂಡಂತೆ ಹೊರಭಾಗದಲ್ಲಿ ನಿರ್ಮಿಸಲಾಗಿದೆ. ನಗರದ ನಿವಾಸಿಗರಿಗೂ ಮತ್ತು ಅರಮನೆಯ ನಿವಾಸಿಗರಿಗೂ ಸುಲಭವಾಗಿ ಜುಮ್ಮಾ ಮಸೀದಿಯ ಪ್ರಾರ್ಥನೆಗೆ ಭಾಗಿಯಾಗಲು ಈ ವ್ಯವಸ್ಥೆ ಮಾಡಲಾಗಿತ್ತು. ಬಹಮನಿ ಅರಸ ಮೂಲ ರಾಜಧಾನಿ ಕಲಬುರ್ಗಿ ಕೋಟೆಯ ಒಳಾಂಗಣದ ಜುಮ್ಮಾ ಮಸೀದಿಗಿಂತಲೂ ಭಿನ್ನವಾದ ರಚನೆ ಇಲ್ಲಿಯ ಜುಮ್ಮಾ ಮಸೀದಿಯಲ್ಲಿ ಕಾಣುತ್ತೇವೆ. ಇದು ದೆಹಲಿಯ ತುಘಲಕ್ ಸುಲ್ತಾರನರ ನಿರ್ಮಿಸಿದ ಫಿರೋಜಶಹಾ ಕೊಟ್ಲಾದ ಜುಮ್ಮಾ ಮಸೀದಿಯ ಮಾದರಿಯಲ್ಲಿ ನಿರ್ಮಿತವಾಗಿದೆ ಎಂದು ವಿದ್ವಾಂಸರು ಗುರುತಿಸಿದ್ದಾರೆ. ವಿಶಾಲವಾದ ಇಲ್ಲಿಯ ಜುಮ್ಮಾ ಮಸೀದಿಯ ಪ್ರವೇಶಕ್ಕೆ ಗುಮ್ಮಟವಿರುವ ದ್ವಾರವನ್ನು ನಿರ್ಮಿಸಲಾಗಿದೆ. ಎತ್ತರವಾದದ ಗೋಡೆಯೊಂದಿಗೆ ನಿರ್ಮಿಸಿದ ಇದರ ಒಳಾಂಗಣ ವಿಸ್ತಾರವಾಗಿ ನಿರ್ಮಿಸಲಾಗಿದೆ. ಇದರ ಒಳಗೋಡೆಯಲ್ಲಿ ಕಮಾನಿನ ಗೂಡುಗಳನ್ನು ನಿರ್ಮಿಸಲಾಗಿದೆ. ಇಲ್ಲಿಯ ಪ್ರಾರ್ಥನಾ ಅಂಕಣವು 115 ಅಂಕಣಗಳಿಂದ ಕೂಡಿದೆ. ಪ್ರತಿ ಅಂಕಣವು ಕಮಾನು ವಿನ್ಯಾಸದಲ್ಲಿ ರಚನೆಯಾಗಿದೆ. ಪ್ರಾರ್ಥನಾ ಅಂಕಣಗಳ ಹಿಂಭಾಗದ ಗೋಡೆಯಲ್ಲಿ ಒಂದು ಚಿಕ್ಕ ದಿಡ್ಡಿ ದ್ವಾರವಿದೆ. ಇದು ಅರಮನೆಯ ಆವರಣಕ್ಕೆ ತೆರೆದು ಕೊಳ್ಳುತ್ತದೆ. ಜುಮ್ಮಾ ಮಸೀದಿಯಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಅರಮನೆಯ ಆವರಣದಲ್ಲಿ ನೆಲೆಸಿದ ಸುಲ್ತಾನರು ಮತ್ತು ಇತರ ಗಣ್ಯರು ಮಸೀದಿಯ ಪ್ರಾರ್ಥನಾ ಅಂಕಣಕ್ಕೆ ನೇರವಾಗಿ ಬರುವುದಕ್ಕೆ ಈ ದಿಡ್ಡಿ-ದ್ವಾರವನ್ನು ಬಳಸಿಕೊಂಡು ಪ್ರಾರ್ಥನೆಗೆ ತೊಡಗುತ್ತಿದ್ದರು. ಈ ರೀತಿಯ ವ್ಯವಸ್ಥೆಯು ಬಹಮನಿ ಸುಲ್ತಾನರ ಆರಂಭಿಕ ಕಾಲದ ಜುಮ್ಮಾ ಮಸೀದಿಗಳ ರಚನೆಯಲ್ಲಿ ಮಾತ್ರ ಕಾಣುತ್ತೇವೆ. ಯಾದಗಿರಿ ಜಿಲ್ಲೆಯ ಸಗರದ ಜುಮ್ಮಾ ಮಸೀದಿಯ ರಚನೆಯಲ್ಲಿಯೂ ಕಾಣಬಹುದು. ನಗರದ ಜುಮ್ಮಾ ಮಸೀದಿಯು ಕೂಡ ಬಹಮನಿ ದೊರೆ ಫಿರೋಜ್ ಶಹಾನ ಕಾಲದಲ್ಲಿಯೇ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಫಿರೋಜಾಬಾದದ ಜುಮ್ಮಾ ಮಸೀದಿಯ ನಿರ್ಮಾಣದ ಕುರಿತಂತೆ ಕ್ರಿ.ಶ. 1406ರ ಕಾಲದ ಪಾರ್ಷಿ ಭಾಷೆಯ ಶಿಲಾಶಾಸನವನ್ನು ಹತ್ತಿರದ ಸೂಫಿ ಸಂತ ಹಜರತ್ ಖಲಿಫಾ-ಉಲ್-ರಹಮಾನ್ ಅವರ ದರ್ಗಾದ ಆವರಣದಲ್ಲಿದೆ. ಬಹಮನಿ ಸುಲ್ತಾನ ತಾಜುವುದ್ಧೀನ ಫಿರೋಜ್ ಶಹಾ ಆಶ್ರಯದಲ್ಲಿ ಭವ್ಯ ಮಸೀದಿಯನ್ನು ಹಿಜರಾ 808ರ ವರ್ಷದ ರಜಬ್ ಮಾಸದ ಕೊನೆಯ ದಿನದಂದು ನಿರ್ಮಿಣ ಪೂರ್ಣಗೊಂಡಿತು ಎಂದು ಈ ಶಾಸನವು ಉಲ್ಲೇಖಿಸುತ್ತದೆ ಎಂದು ಶಾಸನಶಾಸ್ತ್ರಜ್ಞ ಸಿದ್ಧಿಕಿ ಅವರು ವಿವರಿಸಿದ್ದಾರೆ. ಶಾಸನದಲ್ಲಿ ಉಲ್ಲೇಖವಾದ ಭವ್ಯವಾದ ಮಸೀದಿಯು ಫಿರೋಜಾಬಾದ ಜುಮ್ಮಾ ಮಸೀದಿಯಾಗಿದೆ ಎಂದು ಅವರು ಸೂಚಿಸುತ್ತಾರೆ. ಮೂಲತಃ ಈ ಶಿಲಾಶಾಸನವು ಫಿರೋಜಾಬಾದದ ಜುಮ್ಮಾ ಮಸೀದಿಯಲ್ಲಿತ್ತು; ಅದನ್ನು ನಂತರ ಕಾಲದಲ್ಲಿ ಈ ದರ್ಗಾದ ಆವರಣಕ್ಕೆ ತಂದು ಇಡಲಾಗಿದೆ ಎಂದು ಸಿದ್ಧಿಕಿ ಅವರು ಅಭಿಪ್ರಾಯ ಪಟ್ಟಿದಾರೆ. ಈ ಮಸೀದಿಯ ನಿರ್ಮಾಣದ ವಾಸ್ತುಶಿಲ್ಪಿ ಹೆಸರನ್ನು ಈ ಶಾಸನ ಉಲ್ಲೇಖಿಸಿರುವುದು ವಿಶೇಷ. ಅಹ್ಮದ ಇಬ್ನ್ ಹುಸೇನ್ ಅಲ್-ಹಿಸನ್‍ಕೈಫ್ ಅವರು ಮಸೀದಿಯ ವಾಸ್ತು-ಶಿಲ್ಪಿ ಅಥವಾ ರೂವಾರಿಯಾಗಿದ್ದನು ಎಂಬುದು ಶಾಸನದಿಂದ ತಿಳಿದುಬರುತ್ತದೆ.

ಅರಮನೆ ಆವರಣ:
ಇದು ಪಶ್ಚಿಮ ಅಂಚಿನದ್ದು ನದಿಯ ದಂಡೆಗೆ ಹೊಂದಿಕೊಂಡು ನಿರ್ಮಿಸಲಾಗಿದೆ. ನದಿಯ ವಿಹಂಗಮಯ ನೋಟವನ್ನು ಸವಿಯುವುದಕ್ಕಾಗಿ ನಿರ್ಮಿಸಿದಂತಿದೆ ಈ ಸ್ಥಳ. ನದಿಯ ಹರಿವನ್ನು ಅರಮನೆಯ ಮಹಡಿ ಮೇಲಿನಿಂದಲೇ ಗಮನಿಸಬಹುದಾಗಿದೆ ಈ ಸ್ಥಳ. ಈ ಆವರಣದ ಪೂರ್ವದ ಗೋಡೆಯಲ್ಲಿ ವಿಶೇಷವಾದ ಪ್ರವೇಶ-ದ್ವಾರವಿದೆ. ಈ ದ್ವಾರವು ಎತ್ತರದ ಕಮಾನಿನಿಂದ ಕೂಡಿದೆ. ಇದರ ಕುಂಬಿಯಲ್ಲಿ ಸಾಲಾಗಿ ಅಲಂಕಾರಿಕ ನಿಟುಗಳನ್ನು ಮಾಡಲಾಗಿದೆ. ದ್ವಾರದ ಗೋಡೆಗಳನ್ನು ಗಾರೆಯಿಂದ ಪ್ಲಾಸ್ಟರ್ ಮಾಡಲಾಗಿದೆ. ದ್ವಾರದ ಕಮಾನಿನ ಎರಡು ಬದಿಗಳಲ್ಲಿ ಗಾರೆಯಲ್ಲಿ ತೆಳುವಾಗಿ ಹುಲಿಗಳ ಶಿಲ್ಪಗಳನ್ನು ಮಾಡಲಾಗಿದೆ. ಈ ಹುಲಿಗಳ ಶಿಲ್ಪಗಳು ರಾಜ ಲಾಂಛನಗಳಾದ್ದು, ಅರಮನೆಯ ಆವರಣದ ಮುಖ್ಯ ದ್ವಾರದಲ್ಲಿ ಈ ಶಿಲ್ಪಗಳನ್ನು ರಚಿಸಲಾಗಿದ್ದು ವಿಶೇಷ ಸಂಕೇತಗಳನ್ನು ಸೂಚಿಸುತ್ತವೆ. ಬೀದರದ ಕೋಟೆಯ ಮುಖ್ಯದ್ವಾರದ ಮುಂಭಾಗದ ಗೋಡೆಯಲ್ಲಿಯೂ ಇದೇ ಮಾದರಿಯ ಹುಲಿಗಳ ಶಿಲ್ಪಗಳನ್ನು ರಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇವು ಬಹಮನಿ ಸುಲ್ತಾನರ ರಾಜ ಲಾಂಛನಗಳಾಗಿವೆ. ಈ ಅರಮನೆ ಆವರಣವು ಅನೇಕ ಮಹಲ್ ಅಥವಾ ಅರಮನೆಗಳು, ಮಹಡಿ ಮನೆಗಳು, ಕಚೇರಿಗಳು, ಉಧ್ಯಾನಗಳು, ಸುಲ್ತಾನರ ಪರಿವಾರದವರ ವಾಸದ ಮನೆಗಳು; ಸೇವಕರ ಗೃಹಗಳು ಇತ್ಯಾದಿಗಳು ಇಲ್ಲಿ ನಿರ್ಮಿಸಲಾಗಿದೆ. ನಿರ್ಜಕ್ಷ್ಯದಿಂದಾಗಿ ಇಲ್ಲಿಯ ಬಹುತೇಕ ಅರಮನೆಗಳು, ಕಚೇರಿಗಳು ಅವಶೇಷಗಳ ರೂಪದಲ್ಲಿ ಹೊಳು ಕೊಂಪೆಯಂತಾಗಿವೆ. ಕಮಾನುಗಳ ಈ ಕಟ್ಟಡಗಳು ಅಲ್ಲಲ್ಲಿ ಇಂದಿಗೂ ಕಾಣಬಹುದಾಗಿದೆ. ಇವುಗಳಲ್ಲಿ ಕೆಲವನ್ನು ದಖ್ಖನಿ-ಮಹಲ್, ಅರೆಬಿಕ-ಮಹಲ್ ಎಂದು ಸ್ಥಳೀಯರು ಕರೆಯುತ್ತಾರೆ. ಇವುಗಳಲ್ಲಿ ಮಹತ್ವದ ಅವಶೇಷಗಳೆಂದರೆ ಇಲ್ಲಿಯ ಹಬೆ-ಸ್ನಾನ ಗೃಹಗಳ ಸಮೂಹಗಳು. ಇವುಗಳನ್ನು ಹಮಾಮ್ ಎಂದು ಕರೆಯಲಾಗುತ್ತವೆ.

ಹಮಾಮ್ ಅಥವಾ ಹಬೆ-ಸ್ನಾನಗೃಹಗಳು :
ಮಧ್ಯ-ಏಶಿಯ ಮತ್ತು ಪರ್ಶಿಯಾ ದೇಶಗಳಲ್ಲಿ ಹಮಾಮ್ ಅಥವಾ ಹಬೆ-ಸ್ನಾನ ಗೃಹಗಳು ಶ್ರೀಮಂತ ವರ್ಗದವರ ಪ್ರತಿಷ್ಟೆ ಮತ್ತು ಉಚ್ಛವರ್ಗದವರ ಸಂಕೇತವೆಂದು ಪರಿಗಣಿಸಲಾಗುತ್ತಿತ್ತು. ದಖ್ಖನ್ ಪ್ರದೇಶದಲ್ಲಿ ಮೊದಲಬಾರಿಗೆ ಫಿರೋಜಾಬಾದ ನಗರದಲ್ಲಿ ಹಮಾಮ್‍ಗಳನ್ನು ಬಹಮನಿ ಸುಲ್ತಾನರು ಪರಿಚಯಿಸಿದರು. ವಿಜಯನಗರದ ಹಂಪಿಯಲ್ಲಿರುವ ರಾಣಿ ಸ್ನಾನಗೃಹಗಳ ನಿರ್ಮಾಣಕ್ಕೆ ಈ ಹಮಾಮ್‍ಗಳು ಪ್ರೇರಣೆ ಎಂದು ವಿದ್ವಾಂಸರ ಅಭಿಪ್ರಾಯ. ದಪ್ಪ ಗೋಡೆಗಳಿಂದ ಗುಮ್ಮಟವಿರುವ ಕೋಣೆಯನ್ನು ರಚಿಸಿ ಅದರ ನೆಲಹಾಸಿಗೆಯಲ್ಲಿ ಕಾರಂಜಿಯಂತೆ ನೀರಿನ ತೊಟ್ಟಿ ಮಾಡಲಾಗುತ್ತಿತ್ತು. ಈ ತೊಟ್ಟಿಯಲ್ಲಿ ಬಿಸಿ ನೀರನ್ನು ಕೊಳವೆ ಮೂಲಕ ಭರಿಸಲಾಗುತ್ತಿತ್ತು. ಕೋಣೆಯಲ್ಲಿ ಕಲ್ಲಿನ ಬೆಂಚುಗಳ ಮೇಲೆ ಕುಳಿತು ಬಿಸಿ ನೀರಿನಿಂದ ಹೊರಡುವ ಹಬೆಯನ್ನು ಪಡೆದು ಹಬೆಯ-ಸ್ನಾನ ಮಾಡಿ ಆಯಾಸವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ಆವಿಯಾದ ನೀರು ಮುಚ್ಚಿನ ಕೋಣೆಯಿಂದ ಆಚೆ ಹೋಗುವುದಕ್ಕೆ ಕೋಣೆಯ ಮಾಳಿಗೆಗಳಲ್ಲಿ ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಲಾಗುತ್ತಿತ್ತು. ಫಿರೋಜಾಬಾದ ಅರಮನೆಯ ಆವರಣದಲ್ಲಿ ದೊರೆತ ಹಮಾಮ್ ಇದೆ ಮಾದರಿಯಲ್ಲಿ ನಿರ್ಮಿಸಲಾಗಿದೆ. ಚೌಕಾಕಾರದ ವಿಶಾಲವಾದ ಆವರಣದಲ್ಲಿ ದೊಡ್ಡ ಗುಮ್ಮಟವಿರುವ ಕೋಣೆಯನ್ನು ನಿರ್ಮಿಸಿ ಅದರ ಪಕ್ಕದಲ್ಲಿ ನಾಲ್ಕು ಚಿಕ್ಕ ಕೋಣೆಗಳು ಅದರಂತೆ ಎದರುಗಡೆ ಮೂರೂ ಮಧ್ಯಮ ಗಾತ್ರದ ಕೋಣೆಗಳನ್ನು ನಿರ್ಮಿಸಲಾಗಿದೆ. ಬಿಸಿ ನೀರಿನ್ನು ಕಾಯಿಸಲು ಪಕ್ಕದಲ್ಲಿ ಉದ್ದನೇಯ ಕೋಣೆಯ ಕಟ್ಟಲಾಗಿದೆ. ಬಿಸಿ ನೀರಿನ್ನು ಹಮಾಮ್‍ದ ಮುಖ್ಯ ಕೋಣೆಗೆ ಸರಬುರಾಜು ಮಾಡಲು ಕೊಳವೆಯ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ಕೋಣೆಯು ಗುಮ್ಮಟದಿಂದ ಕೂಡಿದ್ದು ಇದರ ಪಕ್ಕದ ಕೋಣೆಗಳ ಮಾಳಿಗೆಗಳನ್ನು ಪಿರಾಮಿಡ್ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಆವಿಯಾದ ನೀರು ಹೋಗುವುದಕ್ಕಾಗಿ ಗುಮ್ಮಟ ಮತ್ತು ಪಿರಾಮಿಡ್ ಮಾಳಿಗೆಗಳಲ್ಲಿ ಚಿಕ್ಕ ಚಿಕ್ಕ ವೃತ್ತಾಕಾರದ ರಂದ್ರಗಳನ್ನು ಮಾಡಲಾಗಿದೆ.

ಪೇಟೆ ಆವರಣ :
ನಗರದ ಬಹು ಮುಖ್ಯ ಆವರಣ ಇದಾಗಿದೆ. ಈ ಆವರಣದ ಪ್ರವೇಶಕ್ಕಾಗಿ ನಾಲ್ಕು ದಿಕ್ಕಿನಲ್ಲಿ ಮಹಾ-ದ್ವಾರಗಳನ್ನು ನಿರ್ಮಿಸಲಾಗಿದೆ. ಪೇಟೆ ಆವರಣದ ಒಳಾಂಗಣದಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಮುಖಿಯಾಗಿ ವಿಶಾಲವಾದ ಮುಖ್ಯ ರಸ್ತೆಗಳನ್ನು ಯೋಜಿಸಲಾಗಿದೆ. ಈ ನಾಲ್ಕು ರಸ್ತೆಗಳು ಕೋಟೆಯ ಮಹಾ-ದ್ವಾರಗಳಿಂದ ಪ್ರಾರಂಭವಾಗಿ ಜುಮ್ಮಾ-ಮಸೀದಿಯ ಪೂರ್ವದ ದ್ವಾರದ ಮುಂಭಾಗದಲ್ಲಿ ಸೇರುತ್ತವೆ. ಪೇಟೆ ಆವರಣವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಅಪಾರ ಜನವಸತಿಯನ್ನು ನೆಲೆಗೊಳಿಸುವ ಉದ್ಧೇಶದಿಂದ ವಿಸ್ತಾರವಾದ ಪೇಟೆಯನ್ನು ನಿರ್ಮಿಸಿದಂತಿದೆ. ಈ ಆವರಣದಲ್ಲಿ 15ನೇ ಶತಮಾನದ ಬಹಮನಿ ಕಾಲದ ಅನೇಕ ವಾಸ್ತು-ಅವಶೇಷಗಳ ಕಟ್ಟಡಗಳು ಇಂದಿಗೂ ಕಾಣಬಹುದಾಗಿವೆ. ಇವುಗಳಲ್ಲಿ ಹಲವಾರು ನಾಶವಾಗಿದ್ದು ಗುರುತಿಸಲು ಸಾಧ್ಯವಾಗದಾಗಿವೆ. ಕೆಲವು ಕಟ್ಟಡಗಳನ್ನು ಗುರುತಿಸಲಾಗಿದೆ. ಎರಡು ಅಂತಸ್ಥಿನ ಎತ್ತರದ ಕಟ್ಟಡವು ಜುಮ್ಮಾ ಮಸೀದಿಯ ಮುಂಭಾಗದಲ್ಲಿದೆ. ವಿಶಾಲವಾದ ಅಂಗಳದಿಂದ ಕೂಡಿದ ಈ ಕಟ್ಟಡವು ಕಮಾನುಗನ್ನು ಬಳಸಿಕೊಂಡು ಕಟ್ಟಲಾಗಿದೆ. ಪ್ರಾಯಶಃ ಇದು ದಿವಾನ್-ಇ-ಆಮ್ ಅಂದರೆ ಸುಲ್ತಾನರು ಸಾರ್ವಜನಿಕರನ್ನು ಬೇಟಿ ಮಾಡುವ ಅಥವಾ ದರ್ಶನ ನೀಡುವ ಕಟ್ಟಡವಾಗಿದೆ. ಅದರಂತೆ ಈ ಪೇಟೆಯ ಆವರಣದಲ್ಲಿ ಒಂದು ಚಿಕ್ಕ ಮಸೀದಿ, ಹಮಾಮ್, ಹಲವಾರು ಇತರೆ ಕಟ್ಟಡಗಳು ಇಲ್ಲಿವೆ.

ಬಜಾರ :
ಮಧ್ಯಕಾಲೀನದಲ್ಲಿ ಮುಖ್ಯವಾಗಿ ಬಹಮನಿ ಸುಲ್ತಾನರ ಕಾಲದ ನಗರಗಳ ನಿಮಾರ್ಣದಲ್ಲಿ ಪ್ರಮುಖವಾಗಿ ಕಂಡುಬರುವುದು ಸಾಲಾಗಿ ನಿರ್ಮಿಸಿದ ಅಂಗಡಿಗಳ ಬೀದಿಗಳು. ಇವು ಸಾಮಾನ್ಯವಾಗಿ ನಗರದ ಒಳಾಂಗಣದ ಮುಖ್ಯ ದ್ವಾರದ ಮುಂಭಾಗದ ಇಕ್ಕೆಡೆಗಳಲ್ಲಿ ನಿರ್ಮಿಸಲಾಗುತ್ತಿತ್ತು. ಎತ್ತರವಾದ ಉದ್ದನೇಯ ಕಟ್ಟೆಗಳನ್ನು ರಚಿಸಿ ಅವುಗಳ ಮೇಲೆ ಕಮಾನುಗಳುಳ್ಳ ಚೌಕಾಕಾರದ ಚಿಕ್ಕ ಚಿಕ್ಕ ಕೋಣೆಗಳನ್ನು ನಿರ್ಮಿಸುತ್ತಿದ್ದರು. ಕೋಟೆಯಲ್ಲಿ ನೆಲೆಸಿದ ನಿವಾಸಿಗರಿಗೆ ಮತ್ತು ರಾಜ-ಪರಿವಾರದವರಿಗೆ ಬೇಕಾದ ವಿಶೇಷವಾದ ಸಾಮಗ್ರಿಗಳನ್ನು ಈ ಬಜಾರಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೆ ಯುದ್ಧಗಳಲ್ಲಿ ಸೇನಾಪತಿಗಳು, ದೊರೆಗಳು ಸೆರೆಹಿಡಿದ ಅಪಾರ ಸಂಪತ್ತು, ಆಭರಣಗಳು ಇತ್ಯಾದಿಗಳು ಈ ಬಜಾರ ಬೀದಿಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿತ್ತು ಮತ್ತು ಅವುಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಜಾರಗಳು ನೇರವಾಗಿ ಸುಲ್ತಾನರ ಸುಪರ್ದಿಯಲ್ಲಿರುತ್ತಿದ್ದವು. ಸುಲ್ತಾನರ ಆಪ್ತ ಸೇನಾಧಿಪತಿ ಇವುಗಳ ಉಸ್ತುವಾರಿ ಅಧಿಕಾರಿಯಾಗಿರುತ್ತಿದ್ದನು. ಅದಕ್ಕಾಗಿಯೇ ಈ ಬಜಾರಗಳು ಬಹಳ ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ನಿರ್ಮಿಸಲಾಗುತ್ತಿತ್ತು. ಫಿರೋಜಾಬಾದದಲ್ಲಿಯ ಬಹಮನಿ ಕಾಲದ ಬಜಾರವು ಕೋಟೆಯ ದ್ವಾರದಿಂದ ಗ್ರಾಮಕ್ಕೆ ಸಾಗುವ ಮಧ್ಯದಲ್ಲಿ ನಿರ್ಮಿಸಲಾಗಿದೆ. ರಸ್ತೆಯ ಇಕ್ಕೆಡೆಗಳಲ್ಲಿ ಸಾಲಾಗಿ ನಿರ್ಮಿಸಲಾದ ಬಜಾರದ ಅಂಗಡಿಗಳು ಚೌಕಾಕಾರದ ವಿನ್ಯಾಸದಲ್ಲಿವೆ. ಇವು ಸುಮಾರು 6 ಅಡಿ ಚೌಕಾಕಾರದ ವಿಸ್ತಿರ್ಣತೆಯಿಂದ ಕೂಡಿವೆ. ಒಂದಕ್ಕೊಂದು ಅಂಟಿಕೊಂಡು ನಿರ್ಮಿಸಲಾದ ಈ ಅಂಗಡಿಗಳು ಅನುಕ್ರಮವಾಗಿ ಹತ್ತು ಅಂಗಡಿಗಳ ನಂತರ ಓಡಾಡುವುದಕ್ಕೆ ಜಾಗ ಬಿಡಲಾಗಿದೆ. ನಂತರ ಮತ್ತೆ ಸಾಲಾಗಿ ಹತ್ತು ಅಂಗಡಿಗಳನ್ನು ನಿರ್ಮಿಸಲಾಗಿದೆ. ಈ ಅಂಗಡಿಗಳು ಕಮಾನುಗಳನ್ನು ಹೊಂದಿದ ದ್ವಾರಗಳಿದ್ದು ರಸ್ತೆಗೆ ತೆರೆದುಕೊಂಡಿವೆ. ಇವುಗಳ ಮಾಳಿಗೆಗಳು ಪಿರಾಮಿಡ್ ವಿನ್ಯಾಸದಲ್ಲಿವೆ. ಮಧ್ಯಕಾಲೀನ ನಗರಗಳ ರಚನೆಯಲ್ಲಿ ಬಜಾರಗಳು ಮುಖ್ಯ ಪಾತ್ರ ವಹಿಸುತ್ತಿದ್ದವು. ಆರಂಭಿಕವಾಗಿ ಇವುಗಳನ್ನು ದೊರೆಗಳ ಆಶ್ರಯದಲ್ಲಿ ಕಟ್ಟಲಾಗುತ್ತಿದ್ದವು. ಕ್ರಮೇಣವಾಗಿ ನಾಡಿನ ಗಣ್ಯರು ಮತ್ತು ಶ್ರೀಮಂತ ವರ್ಗದವರು ಬಜಾರಗಳನ್ನು ನಿರ್ಮಿಸುವುದನ್ನು ವಿಜಯನಗರ ಒಳಗೊಂಡಂತೆ ದಖ್ಖನ್ ಸುಲ್ತಾನರ ರಾಜ್ಯದಲ್ಲಿ ಕಾಣಬಹುದು. ಮುಖ್ಯವಾಗಿ ವಿಜಯನಗರದಲ್ಲಿ ವಿಸ್ತಾರವಾದ ದೇವಾಲಯಗಳ ಮುಂಭಾಗದಲ್ಲಿ ಮಂಟಪಗಳಂತೆ ಸಾಲುಗಳ ರೂಪದಲ್ಲಿ ಬಜಾರಗಳನ್ನು ನಿರ್ಮಿಸುವುದನ್ನು ಕಾಣುತ್ತೇವೆ. ಪಾನ-ಸುಫಾರಿ ಬಜಾರ, ವಿರುಪಾಕ್ಷ ಬಜಾರ, ಅಚ್ಯುತ ದೇವಾಲಯದ ಮುಂಭಾಗದ ಸೂಳೆ-ಬಜಾರ, ವಿಠಲಪುರ-ಬಜಾರ, ಕೃಷ್ಣಾಪುರ-ಬಜಾರ; ಇತ್ಯಾದಿಗಳು ಹೆಸರಿಸಬಹುದು. ಇವುಗಳಿಗೆ ಬಹಮನಿ ಸುಲ್ತಾನರ ನಗರಗಳಲ್ಲಿಯ ಬಜಾರ ನಿರ್ಮಾಣಗಳು ಪ್ರೇರಣೆ.

ಫಿರೋಜಾಬಾದ ಮತ್ತು ಸೂಫಿ ಸಂತರ ಸನ್ನಿಧಿ :
ಬಹಮನಿ ಸುಲ್ತಾನರ ನಗರಗಳ ಆಯ್ಕೆ ಮತ್ತು ನಿರ್ಮಾಣಗಳಲ್ಲಿ ಸೂಫಿ ಸಂತರ ಗಾಡ ಪ್ರಭಾವ ಕಾಣುತ್ತೇವೆ. ಕಲಬುರ್ಗಿ, ಸಗರ, ಹೊಳಲಗುಂದ ಮತ್ತು ಬೀದರ ಸೇರಿದಂತೆ ಬಹಮನಿ ಅವರ ಅವಶೇಷಗಳ ಸ್ಥಳಗಳಲ್ಲಿ ಸೂಫಿ ಸಂತರ ಸನ್ನಿಧಿಗಳು ಇರುವುದನ್ನು ಕಾಣಬಹುದು. ಬಹಮನಿ ಸುಲ್ತಾನರು ಕಲಬುರ್ಗಿಯನ್ನು ತಮ್ಮ ರಾಜಧಾನಿ ನಗರವೆಂದು ಆಯ್ಕೆ ಮಾಡಿಕೊಂಡ ನಂತರ ಅದರ ಪುನರ್ ರಚನೆಯ ಸಂದರ್ಭದಲ್ಲಿ ಸೂಫಿ ಸಂತ ಹಜರತ್ ಸಿರಾಜುದ್ಧೀನ ಅವರ ದರ್ಗಾದ ಹತ್ತಿರದಲ್ಲಿಯೇ ಶಹಾ ಬಜಾರ ನಿರ್ಮಾಣ ಮಾಡಿದ್ದನ್ನು ಗಮನಿಸಬಹುದು. ಅದರಂತೆ ಸೂಫಿ ಸಂತ ಬಂದೇ ನವಾಜ ಅವರ ದರ್ಗಾದ ಪರಿವಿಧಿಯಲ್ಲಿಯೇ ಹಪ್ತ-ಗುಂಬಜ್ ನಿರ್ಮಾಣವಾಗಿದ್ದನ್ನು ಗಮನಿಸಬಹುದು. ಫಿರೋಜಾಬಾದ ನಗರ ನಿರ್ಮಾಣದಲ್ಲಿಯೂ ಸೂಫಿ ಸಂತರ ನೇರ ಸಲಹೆಗಳು ಮತ್ತು ಅವರ ಪ್ರಭಾವ ಇರುವುದನ್ನು ವಿದ್ವಾಂಸರಾದ ರಿಚರ್ಡ ಇಟನ್ ಮತ್ತು ಜಾರ್ಜ ಮಿಶ್ಚೆಲ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕಟ್ಟಿಸಂಗಾವಿ ಗ್ರಾಮದ ಬಳಿಯ ಭೀಮಾ ನದಿಗೆ ನಿರ್ಮಿಸಲಾದ ಸೇತುವೆಯ ಹತ್ತಿರದಲ್ಲಿರುವ ಸೂಫಿ ಸಂತ ಹಜರತ್ ಖಲಿಫಾತ್-ಉಲ್-ರಹಮಾನ್ ಅವರ ದರ್ಗಾ ಇದೆ. ಈ ಸೂಫಿ ಸಂತ ಬಹಮನಿ ಸುಲ್ತಾನ ಫಿರೋಜ್-ಶಹಾನ ಸಮಕಾಲೀನ ಸಂತ. ಸುಲ್ತಾನ ಫಿರೋಜ್ ಶಹಾ ಈ ಸಂತನಿಗೂ ಗೌರವ ನೀಡುತ್ತಿದ್ದನೆಂದು ತಿಳಿದುಬರುತ್ತದೆ. ಹೊಸದಾಗಿ ಫಿರೋಜಾಬಾದ ನಗರ ಆಯ್ಕೆಯನ್ನು ಸೂಫಿ ಸಂತನು ಮಾಡಿದನು ಎಂದು ಹೇಳಲಾಗುತ್ತದೆ. ಸೂಫಿ ಸಂತನ ದರ್ಗಾಕ್ಕೆ ಸಮನಾಂತರದ ದಿಕ್ಕಿನಲ್ಲಿ ಫಿರೋಜಾಬಾದ ನಗರವನ್ನು ನಿರ್ಮಿಸಲಾಗಿದೆ ಎಂದು ವಿದ್ವಾಂಸರು ಗುರುತಿಸಿದ್ದಾರೆ. ನಗರದ ಉತ್ತರದ ದಿಕ್ಕಿನ ದ್ವಾರದ ಮೂಲಕ ಸಾಗುವ ರಸ್ತೆ ದರ್ಗಾವನ್ನು ತಲುಪುತ್ತದೆ. ಪ್ರಾಯಶಃ ಈ ಸಂತನ ಆಶಯದಂತೆಯೇ ನಗರದ ನಿರ್ಮಾಣಗೊಂಡಿರುವುದು ಸ್ಪಷ್ಟವಾಗುತ್ತದೆ. ಈ ಹಿಂದೆ ಹೇಳಿದಂತೆ ಫಿರೋಜಾಬಾದದ ಜುಮ್ಮಾ ಮಸೀದಿಯಲ್ಲಿದ್ದ ಪರ್ಶಿಯನ್ ಶಿಲಾಶಾಸನದ ಫಲಕವನ್ನು ಈ ದರ್ಗಾದ ಆವರಣದಲ್ಲಿಟ್ಟಿದ್ದನ್ನು ಗಮನಿಸಿದರೆ, ದರ್ಗಾ ಮತ್ತು ಬಹಮನಿ ಅವರ ಈ ನಗರಕ್ಕೂ ಇರುವ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಬಂಧಗಳನ್ನು ಗುರುತಿಸಬಹುದು. ದರ್ಗಾದ ರಚನೆಯೂ ಕೂಡ ಬಹಮನಿ ಸುಲ್ತಾನ ಫಿರೋಜ್ ಶಹಾ ಕಾಲದ ಶೈಲಿಯನ್ನು ಒಳಗೊಂಡಿದೆ. ಗುಮ್ಮಟಗಳು, ಕಮಾನುಗಳು, ಗೋಡೆಯ ರಚನೆಗಳು, ಕುಂಬಿಯಲ್ಲಿ ಅಲಂಕಾರಗಳು ಮತ್ತು ಗಾರೆಯ ಅಲಂಕಾರಿಕ ಕೆತ್ತನೆಗಳು ಕಲಬುರ್ಗಿಯ ಹಪ್ತ-ಗುಂಬಜ್ ಸಮೂಹದಲ್ಲಿಯ ಫಿರೋಜ್ ಶಹಾನ ಗೋರಿಯ ರಚನಾ ಶೈಲಿಯ ಅನುಕರಣೆ ಕಾಣುತ್ತೇವೆ. ಒಟ್ಟಿನಲ್ಲಿ ಫಿರೋಜಾಬಾದ ನಗರದ ರಚನೆಯಲ್ಲಿ ಸೂಫಿ ಸಂತ ಹಜರತ್ ಖಲಿಪಾತ್-ಉಲ್-ರಹಮಾನ ಅವರ ಪ್ರಭಾವ ಇದ್ದು; ದರ್ಗಾ ಮತ್ತು ಕೋಟೆಯುಕ್ತ ನಗರವನ್ನು ಒಟ್ಟಾಗಿ ಪರಿಗಣಿಸಬೇಕು.

ವಿಶ್ಲೇಷಣೆ :
ಫಿರೋಜಾಬಾದ ನಗರ ವೈಭವಿತ ನಗರವಾಗಿದ್ದರೂ ಹೆಚ್ಚು ಜನಜನಿತವಾಗಿರಲಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಶೀರ್ಘ ಗತಿಯಲ್ಲಿ ನಿರ್ಮಾಣಗೊಂಡ ಈ ನಗರ ಅಷ್ಟೆ ಶೀರ್ಘವಾಗಿ ಅವನತಿಯನ್ನು ಹೊಂದಿದ್ದರಿಂದ ಹೆಚ್ಚು ಕಾಲ ಜನರ ಸ್ಮರಣೆಯಲ್ಲಿ ಉಳಿಯಲಿಲ್ಲ. ಈ ನಗರದ ಕುರಿತಂತೆ ಹಲವಾರು ಕುತುಹಲಕಾರಿ ವಿಷಯಗಳು ಪ್ರಚಲಿತದಲ್ಲಿವೆ. ಮುಖ್ಯವಾಗಿ ನಿರ್ಮಾಣದ ಕಾಲ, ನಿರ್ಮಾಣದ ಉದ್ಧೇಶ, ಅವನತಿಗೆ ಕಾರಣಗಳು, ಇತ್ಯಾದಿ. ಇವುಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ನಗರದ ನಿರ್ಮಾಣದ ಕಾಲ:
ನಗರದ ಹೆಸರೇ ಸೂಚಿಸುವಂತೆ ಇದು ಮಧ್ಯಕಾಲೀನ ನಗರವಾಗಿದ್ದು ಬಹಮನಿ ರಾಜ್ಯವನ್ನು ಆಳಿದ ಸುಲ್ತಾನ ಫಿರೋಜ್ ಶಹಾ ಈ ನಗರವನ್ನು ನಿರ್ಮಿಸಿದನೆಂದು ಗುರುತಿಸಬಹುದು. ಫಿರೋಜಾಬಾದ ನಗರದ ಅವಶೇಷಗಳಲ್ಲಿ ಫಿರೋಜ್ ಶಹಾ ಕಾಲದ ಶಿಲಾಶಾಸನಗಳು ದೊರೆಕದೆ ಇದ್ದರೂ ಪಕ್ಕದ ಸೂಫಿ ಸಂತನ ದರ್ಗಾದ ಆವರಣದಲ್ಲಿರುವ ಪರ್ಶಿಯನ್ ಶಿಲಾಶಾಸನದಲ್ಲಿ ಫಿರೋಜ್ ಶಹಾನ ಉಲ್ಲೇಖವನ್ನು ಆಧರಿಸಿ ಈ ನಗರದ ನಿರ್ಮಾಣವನ್ನು ಈ ಸುಲ್ತಾನ ಮಾಡಿದನೆಂದು ಸ್ಪಷ್ಟವಾಗಿ ಗುರುತಿಸಬಹುದು. ಜೊತೆಗೆ ಮಧ್ಯಕಾಲೀನ ಇತಿಹಾಸಕಾರರಾದ ಖಾಸಿಮ್ ಫೆರಿಸ್ತಾ, ತಬಾತಬಿ, ಮತ್ತಿತರರು ಫಿರೋಜ್ ಶಹಾನ ಬಗ್ಗೆ ಉಲ್ಲೇಖಿಸುತ್ತಾ ಹೊಸದಾದ ನಗರವನ್ನು ಫಿರೋಜ್ ಶಹಾ ಸುಲ್ತಾನ ಕಟ್ಟಿಸಿದನು ಎಂದು ಹೇಳಿರುವುದನ್ನು ಕೂಡ ಆಧಾರವಾಗಿ ತೆಗೆದುಕೊಳ್ಳಬಹುದು. ಕ್ರಿ.ಶ.1350ರಿಂದ 1400ರವೆರೆಗೆ ಅಂದರೆ ಸುಮಾರು ಅರ್ಧ ಶತಮಾನದವರೆಗೂ ಕಲಬುರ್ಗಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯದ ಆಳ್ವಿಕೆಯನ್ನು ನಡೆಸಿದ್ದ ಬಹಮನಿ ಸುಲ್ತಾನರಿಗೆ ಮತ್ತೊಂದು ರಾಜಧಾನಿ ನಗರದ ಅವಶ್ಯಕತೆ ಯಾಕಾಯಿತು ಎಂಬುದು ಕುತುಹಲದ ಸಂಗತಿ. ಮುಖ್ಯವಾಗಿ ಸುಲ್ತಾನ ಫಿರೋಜ್ ಶಹಾನ ವ್ಯಕ್ತಿತ್ವ ತೀರ ಭಿನ್ನವಾಗಿತ್ತು. ಪ್ರತಿ ಕ್ಷೇತ್ರದಲ್ಲಿಯೂ ಅನ್ವೇಷಣೆಗಳನ್ನು ಮಾಡುವ ಕೌತುಕ ಈ ಸುಲ್ತಾನನಿಗೆ ಇತ್ತು. ಕಲಬುರ್ಗಿ ಕೋಟೆಯನ್ನು ಹೊಸ ಯುದ್ಧತಂತ್ರಗಳೊಂದಿಗೆ ಸಮಗ್ರವಾಗಿ ಪುನರ್ ರಚಿಸಿದ್ದು ಈ ಸುಲ್ತಾನ. ವಿಜಯನಗರದ ಅರಸರೊಂದಿಗೆ ರಾಜತಾಂತ್ರಿಕ ಸಂಬಂಧಗಳ ಜೊತೆಗೆ ವೈವಾಹಿಕ ಸಂಬಂಧಗಳನ್ನು ಪ್ರಾರಂಭಿಸಿದ್ದು ಈ ಸುಲ್ತಾನ. ಮಧ್ಯಯುಗೀನ ಕಾಲದ ಶ್ರೇಷ್ಟ ಸೂಫಿ ಸಂತ ಎಂದು ಗುರುತಿಸಿಕೊಂಡಿದ್ದ ಹಜರತ್ ಘೇಜು-ದರಾಜ್ ಅಥವಾ ಬಂದೇ ನವಾಜ್ ಅವರೊಂದಿಗೆ ಸ್ನೇಹಪರ ಸಂಬಂಧಗಳನ್ನು ಹೊಂದಿದ್ದ ಸುಲ್ತಾನನೆಂದರೆ ಈ ಫಿರೋಜ್ ಶಹಾ. ಹಲವು ಕ್ರಾಂತಿಕಾರಿ ವಿಚಾರಗಳನ್ನು ಸುಲ್ತಾನ ಫಿರೋಜ್ ಶಹಾ ಹೊಂದಿದ್ದ ಎಂದು ವಿದ್ವಾಂಸರು ಹೇಳುತ್ತಾರೆ. ಆಳ್ವಿಕೆಯ ಪ್ರಾರಂಭದಲ್ಲಿಯೇ ಕ್ರಿ.ಶ. 1399ರಲ್ಲಿ ಸುಲ್ತಾನ ಫಿರೋಜ್ ಶಹಾ ರಾಯಚೂರು ದೋ-ಆಬ್ ಪ್ರದೇಶದಲ್ಲಿ ವಿಜಯನಗರದ ಸೈನ್ಯ ಅತಿಕ್ರಮಣ ಮಾಡಿದಾಗ 12 ಸಾವಿರ ಸೈನ್ಯ ಸಮೇತ ಹೋಗಿ ವೈರಿ ಸೈನ್ಯವನ್ನು ಸದೆಬಡಿದು ವಿಜಯ ಸಾಧಿಸಿ ತನ್ನ ರಾಜ್ಯಕ್ಕೆ ಮರಳುವಾಗ ಭೀಮಾ ನದಿಯ ದಂಡೆಯ ಮೇಲೆ ಕೆಲವು ತಿಂಗಳು ಕಾಲ ತಂಗಿದ್ದಾಗ ಅಲ್ಲೊಂದು ನಗರ ನಿರ್ಮಿಸ ಬೇಕೆಂಬ ಯೋಜನೆ ರೂಪಗೊಂಡಿತು ಎಂದು ಇತಿಹಾಸಕಾರ ಅಲಿ ತಬಾತಬಿ ಉಲ್ಲೇಖಿಸುತ್ತಾನೆ. ಭೀಮಾ ನದಿಯ ಆಚೆಗೆ ಇರುವ ರಾಜ್ಯದ ರಾಜಧಾನಿಯಾದ ಕಲಬುರ್ಗಿಗೆ ವೈರಿಗಳ ಆಕ್ರಮಣಗಳಿಂದ ದೂರವಿಡಲು ಭೀಮಾ ನದಿಯ ದಡದ ಮೇಲೆ ಕೋಟೆಯುಕ್ತ ಮಿಲಿಟರಿ ನಗರದ ಅವಶ್ಯಕತೆಯನ್ನು ಸುಲ್ತಾನ ಫಿರೋಜ್ ಶಹಾ ಕಂಡುಕೊಂಡನು. ನಗರವನ್ನು ನಿರ್ಮಿಸಿ ಅಲ್ಲಿ ಸಶಸ್ತ್ರ ಸೈನ್ಯವನ್ನು ಜಮಾವಣೆ ಮಾಡಿಡುವುದು ಮುಖ್ಯ ಉದ್ಧೇಶವಾಗಿತ್ತು ಎಂದು ವಿದ್ವಾಂಸರು ಹೇಳುತ್ತಾರೆ. ಈ ನಗರದ ನಿರ್ಮಾಣದ ಕಾಲವನ್ನು ಗುರುತಿಸುವುದಕ್ಕೆ ನಮಗೆ ದೊರೆತ 1406ರ ಜುಮ್ಮಾ ಮಸೀದಿಯ ಉಲ್ಲೇಖಿಸುವ ಪರ್ಶಿಯನ್ ಶಾಸನ ಏಕೈಕ ಸಮಕಾಲೀನ ಆಕರವಾಗಿದೆ. ಆದ್ದರಿಂದ ಫಿರೋಜಾಬಾದ ನಗರದ ನಿರ್ಮಾಣ ಕ್ರಿ.ಶ. 1399ರಿಂದ 1406 ಅವಧಿಯಲ್ಲಿ ನಿರ್ಮಾಣವಾಗಿರುವ ಸಾಧ್ಯತೆ ಇದೆ.

ನಿರ್ಮಾಣದ ಉದ್ದೇಶ :
ನಗರದ ನಿರ್ಮಾಣದ ಸಮಕಾಲೀನ ದಾಖಲೆಗಳ ಕೊರತೆ ಇದ್ದರೂ ಮಧ್ಯಕಾಲೀನ ಇತಿಹಾಸಕಾರರಾದ ಫೆರಿಸ್ತಾ ಮತ್ತು ತಬಾತಬಿ ಅವರ ಕೃತಿಗಳಲ್ಲಿ ಫಿರೋಜ್ ಶಹಾನ ವ್ಯಕ್ತಿತ್ವನ್ನು ವಿವರಿಸುತ್ತಾ ಈ ನಗರದ ನಿರ್ಮಾಣದ ಉದ್ದೇಶ ಕುರಿತಾಗಿ ಕೆಲವು ಕುತುಹಲದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಖಾಸಿಮ್ ಫೆರಿಸ್ತಾನ ವಿವರಣೆ ಇನ್ನೂ ಕುತುಹಲಕಾರಿಯಾಗಿದೆ. ಫೆರಿಸ್ತಾನ ಪ್ರಕಾರ ಈ ನಗರದ ನಿರ್ಮಾಪಕ ಬಹಮನಿ ದೊರೆ ಫಿರೋಜ್ ಶಹಾ ಒಬ್ಬ ಅತ್ಯಂತ ಉತ್ಸಾಹಿ ಸುಲ್ತಾನನಾಗಿದ್ದ; ಹಲವು ಭಾಷೆಗಳನ್ನು ಕರಗತ ಮಾಡಿಕೊಂಡಿದ್ದನು. ಭೀಮಾ ನದಿಯ ದಂಡೆಯ ಮೇಲೆ ಹೊಸದಾಗಿ ನಗರವೊಂದನ್ನು ಸುಲ್ತಾನ ನಿರ್ಮಿಸಿ ಅಲ್ಲಿ ಭಾಷಾ ಪಂಡಿತರನ್ನು ಕರೆಸಿ ಅವರೊಂದಿಗೆ ಚರ್ಚೆಗಳ ಮೂಲಕ ಸಾಹಿತ್ಯದ ಹರವನ್ನು ವೃದ್ಧಿಸಬೇಕೆಂಬ ಇಚ್ಛೆ ಸುಲ್ತಾನ ಹೊಂದಿದ್ದನು. ಪ್ರತಿ ಭಾಷೆಯ ಹೆಸರಿನಲ್ಲಿ ಪ್ರತ್ಯೇಕ ಮಹಲ್‍ಗಳನ್ನು ನಿರ್ಮಿಸಿದ್ದನು. ದೇಶಿ ಮತ್ತು ವಿದೇಶಿ ಭಾಷೆಗಳನ್ನು ಆಡುವ ಆಯಾ ಪ್ರಾಂತ್ಯಗಳ ಮತ್ತು ರಾಷ್ಟ್ರಗಳ ಮಹಿಳೆಯರನ್ನು ತನ್ನ ರಾಣಿಯರನ್ನಾಗಿ ಮಾಡಿಕೊಂಡು ಅವರನ್ನು ಇಲ್ಲಿ ಪ್ರತ್ಯೇಕ ಮಹಲ್ ನಿರ್ಮಿಸಿ ಅವರನ್ನು ನೆಲೆಗೊಳಿಸಿದ್ದನು. ವಾಸದ ಮಹಲ್‍ಗಳಲ್ಲಿ ವಾಸಿಸುವ ರಾಣಿಯರು ಮಾತನಾಡುವ ಭಾಷೆಯ ವ್ಯವಹರಿಸುವುದು ಕಡ್ಡಾಯವಾಗಿತ್ತು. ಅದಕ್ಕಾಗಿ ರಾಣಿಯರ ಪರಿಚಾರಕರು ಕೂಡ ರಾಣಿಯು ಆಡುವ ಭಾಷೆಯನ್ನು ಆಡಬೇಕಾಗಿತ್ತು. ರಾಣಿಯ ವಾಸಕ್ಕೆ ಆಗಮಿಸಿದ ಸುಲ್ತಾನ ಆಯಾ ರಾಣಿಯರ ಭಾಷೆಯಲ್ಲಿಯೆ ಸಂವಾದಿಸುತ್ತಿದ್ದನು. ಕನ್ನಡ, ಮರಾಠಿ, ಗುಜರಾತಿ, ಬೆಂಗಾಲಿ, ದಖ್ಖನಿ-ಹಿಂದುಸ್ತಾನಿ, ಪಾರ್ಷಿ, ಅರೆಬಿಕ್, ಜಾರ್ಜಿಯನ್ [ರಷಿಯನ್], ಇತ್ಯಾದಿ ಭಾಷೆ ಹೆಸರಿನಲ್ಲಿ ಮಹಲ್‍ಗಳನ್ನು ನಿರ್ಮಿಸಿದ್ದನೆಂದು ಫೆರಿಸ್ತಾ ವಿವರಿಸುತ್ತಾನೆ. ಇಂದಿಗೂ ಕೆಲವು ಹಳೆಯ ಕಟ್ಟಡಗಳನ್ನು ಡೆಕ್ಕನಿ ಮಹಲ್, ಅರಾಬಿಕ್-ಮಹಲ್ ಎಂದು ಸ್ಥಳೀಯರು ಕರೆಯುತ್ತಾರೆ. ಸುಲ್ತಾನ ಫಿರೋಜ್ ಶಹಾ ಬಹಳ ಭಿನ್ನ ವ್ಯಕ್ತಿತ್ವ ಹೊಂದಿದ ದೊರೆಯಾಗಿದ್ದನು. ವಿವಿಧ ಭಾಷೆಗಳನ್ನು ಅರಿತವನಾಗಿದ್ದಲ್ಲದೆ, ತನ್ನ ರಾಜ್ಯದಲ್ಲಿ ಮನ್ನಣೆಯನ್ನು ನೀಡಿ ಸಾಹಿತ್ಯ ಪರಂಪರೆಯನ್ನು ಬೆಳೆಸುವ ಮಹಾದಾಸೆ ಹೊಂದಿದ್ದನು. ನೆರೆಯ ವಿಜಯನಗರದ ಅರಸ ಪ್ರೌಢ ದೇವರಾಯನ ಸಮಕಾಲೀನ ದೊರೆಯಾಗಿದ್ದ ಫಿರೋಜ್ ಶಹಾನು ದೇವರಾಯ ಅರಸನ ಮಗಳನ್ನು ವಿವಾಹವಾಗಿದ್ದನು. ದೇಶಿ ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದನು. ಕಲಬುರ್ಗಿಯಲ್ಲಿ ನೆಲೆಸಿದ ಹೆಸರಾಂತ ಸೂಫಿ ಸಂತ ಘೇಜು-ದರಾಜ್ ಅಥವಾ ಹಜರತ್ ಬಂದೇ ನವಾಜ್ ಅವರ ಸಮಕಾಲೀನ ದೊರೆ ಹಾಗೂ ಅವರ ಪರಮ ಭಕ್ತನಾಗಿದ್ದನು. ಹಜರತ್ ಬಂದೇ ನವಾಜ್‍ರನ್ನು ಉತ್ತರ ಭಾರತದಿಂದ ಕಲಬುರ್ಗಿ ನಗರಕ್ಕೆ ಅಮಂತ್ರಿಸಿ ಅವರಿಗಾಗಿ ವಿಶೇಷ ಖಾನ್ಕಾ ಅಥವಾ ಆಶ್ರಮವನ್ನು ನಿರ್ಮಿಸಿ ಅವರನ್ನು ನಗರದಲ್ಲಿ ನೆಲೆಸುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅವನತಿಯ ಕಾರಣಗಳು :
ಆಗ್ರಾದ ಹತ್ತಿರ ಮೊಘಲ ಬಾದಶಾಹ ಅಕ್ಬರ್ ನಿರ್ಮಿಸಿದ ಫತೇಪುರ ಸಿಕ್ರಿ ನಗರದಂತೆ ನಿರ್ಮಿಸಿದ ದೊರೆಯೊಂದಿಗೆ ನಗರವೂ ತನ್ನ ಅಸ್ತಿತ್ವ ಕಳೆದುಕೊಂಡು ಒಂದು ಅಜ್ಞಾತ ಸ್ಥಳವಾಗಿ ರೂಪಗೊಂಡಂತೆ ಫಿರೋಜಾಬಾದ ನಗರದ ಚರಿತ್ರೆಯಲ್ಲಿಯೂ ಇದೆ ಬಗೆಯ ಘಟನಗಳಿವೆ. ವಿಜಯನಗರದ ಮೇಲೆ ವಿಜಯ ಸಾಧಿಸಿ ಮರಳುವ ಮಧ್ಯದಲ್ಲಿ ಆಯಕಟ್ಟಿನ ಸ್ಥಳವಾದ ಭೀಮಾ ನದಿಯ ದಂಡೆಯ ಪ್ರದೇಶದಲ್ಲಿ ಕೋಟೆಯುಕ್ತ ನಗರ ನಿರ್ಮಾಣದ ಕನಸನ್ನು ಕಂಡ ಸುಲ್ತಾನ ಒಂದು ಶಾಶ್ವತವಾದ ಭವ್ಯ ರಾಜಧಾನಿ ನಗರವನ್ನು ಕ್ರಿ.ಶ. 1406ರಲ್ಲಿ ನಿರ್ಮಿಸಿದ. ಇಲ್ಲಿ ಸುಮಾರು ಎರಡು ದಶಕಗಳ ಕಾಲ ಆಡಳಿತ ನಡೆಸಿದನು. ತರುವಾಯ ದುರಾದೃಷ್ಟವಶಾತ ರಾಜ್ಯದ ಉತ್ತರಾಧಿಕಾರಿ ಸುಲ್ತಾನ ಅಹ್ಮದ ಶಹಾನ ನಡುವೆ ಬಿನ್ನಾಭಿಪ್ರಾಯ ಉಂಟಾಗಿ ಪರಸ್ಪರ ದ್ವೇಸಿಸುವ ಹಂತಕ್ಕೆ ತಲುಪಿತು. ಫಿರೋಜ್ ಶಹಾನ ಮರಣದ ನಂತರ ಅಹ್ಮದ ಶಹಾ ವಲಿ ಅಧಿಕಾರಕ್ಕೆ ಬಂದನು. ಈ ಹಿಂದಿನ ಸುಲ್ತಾನ ಫಿರೋಜ್ ಶಹಾ ರಚಿಸಿದ ಮತ್ತು ಯೋಜಿಸಿದ ಎಲ್ಲಾ ಕಾರ್ಯಗಳನ್ನು ಸುಲ್ತಾನ ಅಹ್ಮದ ಶಹಾ ಶಾಶ್ವತವಾಗಿ ಕಡೆಗಣೆಸುವುದಲ್ಲದೇ ಅವುಗಳಿಂದ ದೂರವಿರುವುದಕ್ಕೆ ಕಲಬುರ್ಗಿಯನ್ನೂ ತೆರೆದು ದೂರದ ಬೀದರಗೆ ತನ್ನ ರಾಜಧಾನಿಯನ್ನು ಸ್ಥಳಾಂತರಿಸಿದನು. ಇದರೊಂದಿಗೆ ಫಿರೋಜಾಬಾದ ನಗರ ತನ್ನ ಅಸ್ತಿತ್ವ ಕಳೆದುಕೊಂಡಿತು. ಕ್ರಿ.ಶ.1400 ರಿಂದ 1422 ಅವಧಿಯವರೆಗೆ ಅಸ್ತಿತ್ವದಲ್ಲಿದ್ದ ಫಿರೋಜಾಬಾದ ಕ್ರಮೇಣವಾಗಿ ಹಳೆಯ ಅವಶೇಷಗಳ ಸ್ಥಳವಾಗಿ ಪರಿವರ್ತನೆಯಾಯಿತು. ಆದರೆ ಇತಿಹಾಸಕಾರರಿಗೆ ಮತ್ತು ವಾಸ್ತುಶಿಲ್ಪ ಕಲೆ ಅಧ್ಯಯನಕಾರರಿಗೆ ಫಿರೋಜಾಬಾದ ನಗರ ಅನೇಕ ವೈವಿಧ್ಯಮಯ ಐತಿಹಾಸಿಕ ಮಾಹಿತಿಗಳನ್ನು ನೀಡುತ್ತದೆ. ಬಹಮನಿ ಸುಲ್ತಾನರ ಕಲೆ ಮತ್ತು ಸಂಸ್ಕೃತಿಗಳ ವಿವಿಧ ಆಯಾಮಗಳನ್ನು ಗುರುತಿಸುವಲ್ಲಿ ಫಿರೋಜಾಬಾದದ ಸ್ಮಾರಕಗಳು ಅತ್ಯಂತ ಉತ್ತಮ ಉದಾಹರಣೆಯಾಗಿವೆ.

ಈ ಅಂಕಣದ ಹಿಂದಿನ ಬರೆಹಗಳು:
ಬಿಜಾಪುರ: ಮಧ್ಯಕಾಲೀನ ರಾಜಧಾನಿ ನಗರ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...