ಕಥೆಯ ಅಂತ್ಯ, ಅಚ್ಚರಿ, ಹೃದಯಸ್ಪರ್ಶಿ ಅಂಶಗಳಿಂದ ಸಮೃದ್ಧವಾಗಿದೆ


"ಸಾಹಿತ್ಯಕ, ಭಾಷೆ ಮತ್ತು ಮನೋರಂಜನೆಯ ಪರಿಭಾಷೆಯಿಂದ ನೋಡುವುದಾದರೆ “ಯಾವುದೀ ಹೊಸ ಒಗಟು?" ಕಾದಂಬರಿ ಒಂದು ಉತ್ತಮ ಪ್ರಯತ್ನವೆಂದು ಹೇಳಬಹುದು. ಇದನ್ನು ಕೇವಲ ಆತ್ಮಪ್ರಶಂಸೆಯಿಂದ ಹೇಳುತ್ತಿಲ್ಲ! ಇದು ಈ ಕಾದಂಬರಿಯನ್ನು ಓದಿದ ಹಲವು ನನ್ನ ಸ್ನೇಹಿತರ ಮತ್ತು ಹಿತೈಷಿಗಳ ಒಟ್ಟಾಭಿಪ್ರಾಯ," ಎನ್ನುತ್ತಾರೆ ಸಸಿಹಿತ್ಲು ಪಿ. ಸುಬ್ರಮಣ್ಯ. ಅವರು ತಮ್ಮ ‘ಯಾವುದೀ ಹೊಸ ಒಗಟು?’ ಕೃತಿ ಕುರಿತು ಬರೆದ ಸ್ವಾವಲೋಕನ.

ಬರವಣಿಗೆ ನನಗೆ ಹೊಸದಲ್ಲದಿದ್ದರೂ ಸಹಾ ವೃತ್ತಿಯ ಒತ್ತಡದಿಂದಾಗಿ ಯಾವುದೇ ವಿಷಯಕ್ಕೂ ಒಂದು ನಿರ್ದಿಷ್ಟ ರೂಪ ಕೊಡುವುದಕ್ಕೆ ನನಗೆ ವ್ಯವಧಾನವಿರುತ್ತಿರಲಿಲ್ಲ, ಅಥವಾ ಹಾಗೆಂದುಕೊಂಡಿದ್ದೆನೇನೋ?! ಈಗ ವೃತ್ತಿಯಿಂದ ನಿವೃತ್ತಿ ಹೊಂದಿದ ಮೇಲೆ ಯಾವ ಸಬೂಬೂ ಇಲ್ಲದ್ದರಿಂದ ಬರೆಯಬೇಕೆಂದು ನಿರ್ಧರಿಸಿದೆ. ನಾನು ಬರೆದಿದ್ದು ಓದುಗರಿಗೆ ಖುಷಿ ಕೊಡಬೇಕೇ ವಿನಃ ಅವರ ಸಹನೆಯನ್ನು ಪರೀಕ್ಷಿಸುವಂತಿರಬಾರದೆಂಬುದೇ ನನ್ನ ಬರವಣಿಗೆಯ ಮೂಲ ಉದ್ದೇಶ. ಹಾಗೆಯೇ ಮೂಡಿ ಬಂದದ್ದು ಎಂಟತ್ತು ಕವಿತೆಗಳು ಹಾಗೂ ಒಂದು ಕಾದಂಬರಿ.

ಸಾಧಾರಣವಾಗಿ ಓದುಗರು ತಮ್ಮ ನೆಚ್ಚಿನ/ ಪ್ರಸಿದ್ಧ ಬರಹಗಾರರ ಕೃತಿಗಳನ್ನು ಓದಿ ಅದಕ್ಕೆ ವಿಮರ್ಶೆ/ ಅವಲೋಕನಗಳನ್ನು ಬರೆಯುತ್ತಾರಲ್ಲದೆ, ಹೊಸ ಲೇಖಕರ ಪುಸ್ತಕಗಳನ್ನು ಓದುವುದು ಬಹಳ ಅಪರೂಪ. ಹಾಗಾಗಿ ಹೊಸ ಲೇಖಕರ ಬರವಣಿಗೆ ಚೆನ್ನಾಗಿದ್ದರೂ ಸಹಾ, ಕೆಲವೊಮ್ಮೆ ಅದು ಬೆಳಕಿಗೆ ಬಾರದೆಯೇ ಕಮರಿ ಹೋಗುತ್ತದೆ. (ಕಾಳು ಯಾವುದು? ಜೊಳ್ಳು ಯಾವುದು? ಎಂದು ಓದುಗರಿಗೆ ಗೊತ್ತಾಗದಿರುವುದರಿಂದ ಇದು ಸಹಜವೇ ಆಗಿದೆ) ನಾನೀಗ ಬರೆಯಲು ಹೊರಟಿರುವುದು ನನ್ನ “ಯಾವುದೀ ಹೊಸ ಒಗಟು?” ಕಾದಂಬರಿಯ ಬಗ್ಗೆ.

ಸಾಹಿತ್ಯಕ, ಭಾಷೆ ಮತ್ತು ಮನೋರಂಜನೆಯ ಪರಿಭಾಷೆಯಿಂದ ನೋಡುವುದಾದರೆ “ಯಾವುದೀ ಹೊಸ ಒಗಟು?" ಕಾದಂಬರಿ ಒಂದು ಉತ್ತಮ ಪ್ರಯತ್ನವೆಂದು ಹೇಳಬಹುದು. ಇದನ್ನು ಕೇವಲ ಆತ್ಮಪ್ರಶಂಸೆಯಿಂದ ಹೇಳುತ್ತಿಲ್ಲ! ಇದು ಈ ಕಾದಂಬರಿಯನ್ನು ಓದಿದ ಹಲವು ನನ್ನ ಸ್ನೇಹಿತರ ಮತ್ತು ಹಿತೈಷಿಗಳ ಒಟ್ಟಾಭಿಪ್ರಾಯ.

ಈ ಕಾದಂಬರಿಯಲ್ಲಿ ನಾನು ಹಲವು ಅಪರೂಪದ ಪದಗಳನ್ನು ಬಳಸಿದ್ದು, ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂದಿರುವ ಆಸಕ್ತರಿಗೆ, ಅದರಲ್ಲೂ ಇಂದಿನ ಯುವ ಪೀಳಿಗೆಗೆ ಸಹಕಾರಿಯಾಗಲಿದೆ, ಉದಾಹರಣೆಗಾಗಿ: ಗತ್ಯಂತರ, ತಾರಾತಿಗಡಿ, ಸುಧರ್ಮಸಭೆ, ಬವಳಿ, ಸಾವರಿಸು, ಹರವು, ಚಾತಕಪಕ್ಷಿ, ನಿಕಷ, ಇತ್ಯಾದಿ; ಇವುಗಳನ್ನು ಬಳಸುವಾಗ, ಕಥೆಯನ್ನು ಓದುವ ಓಘಕ್ಕೆ ತಡೆಯಾಗದಂತೆ ಜಾಗರೂಕತೆ ವಹಿಸಿದ್ದೇನೆ.

ಈ ಕಾದಂಬರಿಯ ಬೆನ್ನುಡಿಯಲ್ಲಿ ಪ್ರಸಿದ್ಧ ಬರಹಗಾರರಾದ ಶ್ರೀ ಸಂತೋಷಕುಮಾರ ಮೆಹೆಂದಳೆಯವರು ಹೀಗೆ ಹೇಳುತ್ತಾರೆ “ಅಗತ್ಯದ ಪಾತ್ರಗಳನ್ನು ದುಡಿಸಿಕೊಳ್ಳುವ, ಅಲ್ಲಲ್ಲಿ ಅಗತ್ಯಕ್ಕೆ ತಕ್ಕಂತೆ ಸ್ಥಳೀಯತೆ ಮತ್ತು ಪರಕೀಯ ಭಾವಗಳ ತಾಕಲಾಟವನ್ನು ಬಿಡಿಸಿಡುತ್ತಾ, ಕ್ರಮೇಣ ಓದುಗನ ಮೇಲೆ ಹಿಡಿತ ಸಾಧಿಸುವ ತಂತ್ರಗಾರಿಕೆ ಕನ್ನಡದಮಟ್ಟಿಗೆ ಕೆಲವೇ ಬರಹಗಾರರು ಬಳಸುವ ನೈಪುಣ್ಯತೆ, ಅದೇ ಪ್ರಯತ್ನ ಮತ್ತು ವಿಶೇಷತೆ ಇಲ್ಲೂ ಎದ್ದು ಕಾಣುತ್ತದೆ. ಪಾತ್ರ ಮತ್ತು ಅಕ್ಷರಗಳ ಜೊತೆ ಆಟವಾಡಿಸುತ್ತಾ ಕತೆಯನ್ನು ಒಯ್ಯವಪರಿ ಗಮನೀಯ ವಿಧಾನ ಕೂಡಾ…”

ಇನ್ನೊಂದು ವಿಶೇಷವೆಂದರೆ, ಕಾದಂಬರಿಯಲ್ಲಿ ಗಾದೆಮಾತುಗಳನ್ನು (ಕಾದಂಬರಿಯಲ್ಲಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಗಾದೆಗಳಿವೆ) ಮತ್ತು ಕೆಲವು ಪ್ರಸಿದ್ಧ ಕವಿಗಳ/ ವಾಗ್ಗೇಯಕಾರರ ಕೃತಿಗಳ ಕೆಲವು ಸಾಲುಗಳನ್ನು ಸಂದರ್ಭೋಚಿತವಾಗಿ ಕಥೆಯೊಳಗೆ ಅಳವಡಿಸಿಕೊಂಡಿದ್ದು. ಇದು ಕಥೆಯ ಹರವು ಮತ್ತು ಸ್ತರಗಳನ್ನು ಮತ್ತಷ್ಟು ವಿಸ್ತರಿಸುತ್ತದೆ.

ಕಾದಂಬರಿಯ ಮುಖ್ಯ ಕಥಾವಸ್ತು, ಸಮಾಜದಲ್ಲಿ ನಡತೆಗೆಟ್ಟವಳೆಂಬ ಹಣೆಪಟ್ಟಿ ಹೊತ್ತುಕೊಂಡವಳ ಮಗಳು, ಅವಳದಲ್ಲದ ತಪ್ಪಿಗೆ ಸಮಾಜದಲ್ಲಿ ಅನುಭವಿಸಿದ ಅಸಹಾಯಕತೆ, ತಿರಸ್ಕಾರ ಮತ್ತು ನಿಂದನೆಗಳ ಕುರಿತದ್ದಾಗಿದೆ. ಬದುಕಿನಲ್ಲಿ ಅವಳು ಎದುರಿಸಿದ ದುರ್ಭರ ಪ್ರಸಂಗಗಳನ್ನು ಎಳೆ ಎಳೆಯಾಗಿ ಓದುಗರ ಮುಂದಿಟ್ಟಾಗ ಎಂತಹ ಕಲ್ಲು ಹೃದಯವಾದರೂ ಕರಗಿ ನೀರಾಗುತ್ತದೆ. ಕೊನೆಗೆ ಎಂತಹವರನ್ನೂ ಸಹಾ ನಿಷ್ಕಲ್ಮಷ ಪ್ರೀತಿಯಿಂದ ಗೆಲ್ಲಬಹುದೆಂಬ ಸಂದೇಶವಿದೆ.

ಹೊಸ ಕಥನಕ್ರಮದಲ್ಲಿರುವ ಈ ಕಾದಂಬರಿ, ನನ್ನದೇ ರಚನೆಯ ಹಾಡೊಂದರ ಮೂಲಕ ಕಥೆ ಮುಂದೆ ಸಾಗುತ್ತದೆ. ಕೌತುಕತೆ, ಹಾಸ್ಯ, ಭಾವನಾತ್ಮಕತೆ ಇಡೀ ಕಾದಂಬರಿಯ ಜೀವಾಳ. ಇದರಲ್ಲಿರುವ ಸಸ್ಪೆನ್ಸ್‌ ಕಥೆಯನ್ನು ಮತ್ತೊಂದು ಮಜಲಿನತ್ತ ಒಯ್ಯುತ್ತದೆ (ಆದರೆ ಇದು ಪತ್ತೇದಾರಿ ಕಾದಂಬರಿ ಅಲ್ಲ). ಎರಡು ವಿಭಿನ್ನ ಹಂತಗಳಲ್ಲಿ ಅನಾವರಣಗೊಳ್ಳುವ ಸಸ್ಪೆನ್ಸ್‌, ಅತ್ಯಂತ ಕುತೂಹಲಕರವಾಗಿ ಮೂಡಿಬಂದಿದೆ. ಆದರೆ ಆ ಸಸ್ಪೆನ್ಸ್‌ ಏನು? ಎಂಬುದನ್ನು ಕಾದಂಬರಿಯನ್ನು ಓದಿಯೇ ತಿಳಿಯಬೇಕು!

ಆರಂಭದಲ್ಲಿ ಇದೊಂದು ಜನಪ್ರಿಯ ಮಾದರಿಯ ಪ್ರೇಮ ಕಥೆ ಎನಿಸಿದರೂ ಕೂಡಾ, ಕಥೆಯ ಅಂತ್ಯ, ಅಚ್ಚರಿ, ಹೃದಯಸ್ಪರ್ಶಿ ಅಂಶಗಳಿಂದ ಸಮೃದ್ಧವಾಗಿದೆ.

ಪ್ರಾರಂಭದಿಂದಲೂ ಚಾರಿತ್ರ್ಯ ಹೀನಳೆಂದೂ, ವಿಷ ಜಂತುವೆಂದೂ, ಅಡಿಗಡಿಗೂ ಹೀಯಾಳಿಸುತ್ತಿದ್ದ ಅರುಣಾಚಲಯ್ಯ, ಕಾದಂಬರಿಯ ಕೊನೆಯಲ್ಲಿ… "ನಿಪುಣ ಶಿಲ್ಪಿ, ಶಿಲೆಯನ್ನು ಆರಿಸಿಕೊಳ್ಳುವಾಗ ಅದರ ಸತ್ವವನ್ನು ಪರೀಕ್ಷಿಸಿಯೇ ಆಯ್ದುಕೊಳ್ಳುತ್ತಾನೆ! ಜೀವನದಲ್ಲಿ ನೀನು ಸೊಸೆ, ಮಗಳು, ಮಡದಿ, ಸೋದರಿ, ತಾಯಿ ಅಥವಾ ಇನ್ಯಾವುದೋ ಪಾತ್ರವಾದರೂ ಆಗು! ನೀನು ಆ ಮನೆಯ ನಂದಾದೀಪವಾಗುವುದರಲ್ಲಿ ಯಾವುದೇ ಸಂಶಯವಿಲ್ಲ! ಈ ಸತ್ಯವನ್ನು ನಾನೊಬ್ಬನೇ ಹೇಳುತ್ತಿರುವುದಲ್ಲ ಮಗಳೇ! ಇದು ನಿಕಷಕ್ಕೊಳಪಟ್ಟು ಸಿದ್ಧವಾದ ಸಾರ್ವಕಾಲಿಕ ಸತ್ಯ!" ಎಂದು ಮನತುಂಬಿ ನಾಯಕಿಯನ್ನು ಹೊಗಳುವ ಮನಸ್ಥಿತಿಗೆ ತಲುಪಲು ಕಾರಣವಾಗುವ ಸನ್ನಿವೇಶಗಳು ವಸ್ತುನಿಷ್ಠವಾಗಿ ಮತ್ತು ಮನಮಿಡಿಯುವಂತೆ ಮೂಡಿ ಬಂದಿದೆ.

ಇದೊಂದು ಜೀವನದ ನೋವು ನಲಿವುಗಳನ್ನೂ, ಭಾವನೆಗಳನ್ನೂ, ಇದ್ದ ಹಾಗೆಯೇ ತೆರೆದಿಡುವ, ಸರಾಗವಾಗಿ ಓದಿಸಿಕೊಂಡು ಹೋಗುವ, ಸಾದಾ ಸೀದಾ ಕಾದಂಬರಿ. ಬದುಕಿನ ಇನ್ನಷ್ಟು ದ್ವಂದ್ವಗಳನ್ನೂ, ಸಂಕೀರ್ಣತೆಗಳನ್ನೂ, ಜಿಜ್ಞಾಸೆಗಳನ್ನೂ ಕಾದಂಬರಿಯಲ್ಲಿ ಅಳವಡಿಸಿಕೊಳ್ಳಬಹುದಿತ್ತೆಂಬ ಭಾವ ಕೆಲವು ಓದುಗರನ್ನು ಕಾಡಲೂ ಬಹುದು! ಆದರೆ ಓದುಗರಿಗೆ ಹೆಚ್ಚು ಹೊರೆಯಾಗಬಾರದೆಂಬ ದೃಷ್ಟಿಯಿಂದ ಆ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಲಿಲ್ಲ.

ಕಾದಂಬರಿ: ಯಾವುದೀ ಹೊಸ ಒಗಟು?
ಲೇಖಕರು: ಸಸಿಹಿತ್ಲು ಪಿ. ಸುಬ್ರಮಣ್ಯ
ಮೊ.ಸಂ. 86180 57960

MORE FEATURES

ಬದುಕನ್ನು ನೋಡುವ ಲೇಖಕಿಯ ಪಕ್ವತೆಯಿಂದಾಗಿ

29-04-2024 ಬೆಂಗಳೂರು

'ಮುಗ್ಧತೆ, ಸರಳತೆ ಮತ್ತು ಬದುಕನ್ನು ನೋಡುವಾಗ ಮೈಗೂಡಿಸಿಕೊಂಡ ಹೆಣ್ತತನ ಭಾವಗಳು ಕೂಡ ಪೂರ್ಣಿಮಾ ಅವರ ಬರಹಗಳನ್ನು ಗಟ...

ಇಂದಿನ ಮಾನವನಿಗಾಗಿ ಹಾಗೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಇರುವ ಕಾಡನ್ನಾದರೂ ಉಳಿಸಿ

29-04-2024 ಬೆಂಗಳೂರು

‘ವನಸಂಪತ್ತು ಮಾನವನಿಗೆ ಪ್ರಕೃತಿದತ್ತ ವರ. ಮರಗಳೇ ಮಾನವನ ಮೊದಲ ಮನೆ. ಆದಿಮಾನವನು ವನ್ಯ ಮೃಗಗಳೊಂದಿಗೆ ಹಾಸುಹೊಕ್ಕ...

ಮೌರ್ಯ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ

29-04-2024 ಬೆಂಗಳೂರು

'ರಾಣಿಯಾಗಿ ಹುಟ್ಟಿದರೂ ಅದೃಷ್ಟಹೀನೆಯಾಗಿ ಬದುಕಿದ ಮುರಾ ಎಂಬಾಕೆಯ ಪುತ್ರ ಚಂದ್ರಗುಪ್ತ ತಂತ್ರ ನಿಪುಣ ಚಾಣಕ್ಯ ಅಥವಾ ...