ಕಥೆಯೊಳಗೊಂದು ಕಥೆ ಬರುವುದು ಭಾರತೀಯ ಕಾವ್ಯಗಳಲ್ಲಿ ಸಾಮಾನ್ಯ


‘ಕನ್ನಡದಲ್ಲಿ ರಾಮಾಯಣ ಸಾಹಿತ್ಯ ಅಗಾಧವಾಗಿದೆ .ರಾಮನಂತೆ ಕೃಷ್ಣನೂ ಜನಪ್ರಿಯ ಜನಾರಾಧಿತ ವ್ಯಕ್ತಿಯೇ ಆಗಿದ್ದರೂ ಅವನ ಕಥೆ ಭಾರತ ಭಾಗವತ ಕಾವ್ಯಗಳಾಗಿ ಪರಿಣಮಿಸಿದ್ದರೂ, ಶ್ರೀ ಕೃಷ್ಣನ ಭಗವದ್ಗೀತೆ ಲೋಕಪ್ರಿಯ ಗ್ರಂಥವಾಗಿದೆ’ ಎನ್ನುತ್ತಾರೆ ಜಿ ಅಶ್ವತ್ಥ ನಾರಾಯಣ. ಅವರು ರುಕ್ಮಿಣಿ ರಘುರಾಮ್ ಅವರ ‘ರಾಮಾಯಣ ಪರೀಕ್ಷಣಂ’ ಕೃತಿ ಕುರಿತು ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ರಾಮಾಯಣ ಪಾತ್ರ ಕಥಾ ಮಾಲಿಕೆ ಓದಿದಾಗ ಕನ್ನಡದಲ್ಲಿ ರಾಮಾಯಣವನ್ನು ಕುರಿತಷ್ಟು ಗ್ರಂಥಗಳು ಮಹಾಭಾರತ ಭಾಗವತಕ್ಕೆ ಸಂಬಂಧಿಸಿದಂತೆ ಬಂದಿಲ್ಲ. ಭಾರತೀಯ ಸಂಸ್ಕೃತಿಯ ಕೃತಿಗಳಲ್ಲಿ ವಾಲ್ಮೀಕಿ ವ್ಯಾಸರನ್ನು ಮೊದಲಗೊಂಡು ಅನೇಕ ಮಹಾ ಕವಿಗಳು ರಚಿಸಿರುವ ಕೃತಿಗಳಲ್ಲಿ ರಾಮಾಯಣಕ್ಕೆ ಅಗ್ರಗಣ್ಯ ಜನಪ್ರಿಯ ಸ್ಥಾನ ದೊರಕುತ್ತದೆ. ರಾಮಾಯಣ ಕಾವ್ಯ ಒಂದು ಗಂಗಾ ಪ್ರವಾಹ ಇದ್ದಂತೆ. ಅದನ್ನು ಸ್ಥಾಲಿ ಇಂದ ಹಿಡಿದು ಹಂಡೆಗಳವರಗೆ ,ಬೊಗಸೆಯಿಂದ ಹಿಡಿದು ಸ್ನಾನಾದಿಗಳವರೆಗೆ ಬಳಸಿ ಧನ್ಯರಾಗುತ್ತಿರುವರು ಅನಂತ ಲಕ್ಷ ಮಂದಿ. ಗಂಗೆಯನ್ನು ಸಾಕ್ಷಾತ್ ಆಗಿ ಭೂಲೋಕಕ್ಕೆ ಕರೆತಂದವನು ಭಗೀರಥ ,ಆದರೆ ಅದನ್ನು ಹನಿ ಹನಿಯಾಗಿ ಈಂಟಿ ತಾವೂ ಧನ್ಯರಾಗಿ ಅದನ್ನು ಸಾಹಿತ್ಯ ರೂಪದಲ್ಲಿ ನೀಡಿದವರು ಅನೇಕ ಮಂದಿ. ಇಂಥವರು ರಚಿಸಿದ ಕೃತಿಗಳನ್ನು ಕುರಿತು ಕುಮಾರವ್ಯಾಸ ಮಹಾಕವಿ ಹೇಳಿದ ಮಾತು 'ತಿಣುಕಿದನು ಫಣಿರಾಯ ರಾಮಾಯಣದ ಭಾರದಲ್ಲಿ 'ಎಂಬ ಮಾತು ಅತಿಶಯೋಕ್ತಿಯಲ್ಲ.

ಕನ್ನಡದಲ್ಲಿ ರಾಮಾಯಣ ಸಾಹಿತ್ಯ ಅಗಾಧವಾಗಿದೆ .ರಾಮನಂತೆ ಕೃಷ್ಣನೂ ಜನಪ್ರಿಯ ಜನಾರಾಧಿತ ವ್ಯಕ್ತಿಯೇ ಆಗಿದ್ದರೂ ಅವನ ಕಥೆ ಭಾರತ ಭಾಗವತ ಕಾವ್ಯಗಳಾಗಿ ಪರಿಣಮಿಸಿದ್ದರೂ, ಶ್ರೀ ಕೃಷ್ಣನ ಭಗವದ್ಗೀತೆ ಲೋಕಪ್ರಿಯ ಗ್ರಂಥವಾಗಿದ್ದರೂ ,ರಾಮಾಯಣದ ಕೃತಿಗಳ ಕಥೆ , ಕಾದಂಬರಿ, ನಾಟಕ ,ವಿಮರ್ಶೆ, ಜೀವನ ಚರಿತ್ರೆ ಪಾತ್ರ ಚಿತ್ರಣ ಸಂವಾದ ಸಾಹಿತ್ಯ ಸಂಶೋಧನೆ ,ಪಾರಾಯಣ ಗ್ರಂಥ, ಸಂಗ್ರಹ ,ಅನುವಾದ ತಾತ್ವಿಕ ವಿವೇಚನೆ ವೇದಾಂತ ಗ್ರಂಥ ಹೀಗೆ ನಾನಾ ಸಾಹಿತ್ಯಪ್ರಕಾರಗಳಲ್ಲಿ ಹೊರ ಹೊಮ್ಮಿರುವ ರಾಮಾಯಣದ ಕೃತಿಗಳ ಸಂಖ್ಯೆ ಶ್ರೀ ಕೃಷ್ಣನ ಕೃತಿಗಳ ಸಂಖ್ಯೆಗಳಿಗಿಂತ ಹೆಚ್ಚಾಗಿವೆ.ಕನ್ನಡದಲ್ಲಿ ಸುಮಾರು 1500 ರಾಮಾಯಣಕ್ಕೆ ಸಂಬಂಧಿಸಿದ ಕೃತಿಗಳು ಸಿಗುತ್ತವೆ.ಶ್ರೀ. ಟಿ.ವಿ .ವೆಂಕಟಚಲ ಶಾಸ್ತ್ರಿ ಅವರು ಸುಮಾರು ಸಾವಿರ ರಾಮಾಯಣ ಕೃತಿಗಳ ಕೈಪಿಡಿಯನ್ನು ಪ್ರಕಟಿಸಿದ್ದಾರೆ. ಇನ್ನು ಕಥೆಗಳ ರೂಪದಲ್ಲಿ ಕನ್ನಡದಲ್ಲಿ ಮಕ್ಕಳಿಗಾಗಿ ಹಿರಿಯರಿಗಾಗಿ ಹೇಳಿರುವ ರಾಮಾಯಣ ಕೃತಿಗಳು ಹಲವಾರಿವೆ. ಆ ಪೈಕಿ ಸಾಕಷ್ಟು ಕೃತಿಗಳು ಭಾಗಶಃ ರಾಮಾಯಣದ ಕಥೆ ಹೇಳಿರುವಂಥವು.

ಹನುಮನ ಕಥೆ, ಸೀತೆ ಕತೆ, ಅಹಲ್ಯಕತೆ ಶಬರಿಯ ಕಥೆ ಇತ್ಯಾದಿ. ಸಮಗ್ರ ರಾಮಾಯಣದ ಮುಖ್ಯ ಪಾತ್ರಗಳನ್ನು ಕಥಾ ರೂಪದಲ್ಲಿ ಹೇಳಿರುವ ಕಥೆಗಳು ಕಡಿಮೆಯೇ. ಆ ಪೈಕಿ ರುಕ್ಮಿಣಿ ಅವರ ಸಂಗ್ರಹ ಒಂದಾಗಿದೆ. ಎಲ್ಲಾ ಪಾತ್ರಗಳ ಚಿತ್ರಣ ನೀಡಿರುವ ಕೃತಿಗಳ ಸಂಖ್ಯೆ ತೀರ ಕಡಿಮೆ.

(ಆತ್ಮ ಸಾಕ್ಷಾತ್ಕಾರ ಎರಡು ಆಧ್ಯಾತ್ಮಿಕ ಮಾರ್ಗಗಳ ಮೂಲಕ ಸಾಧಿತ ವಾಗುತ್ತದೆ. ಪಿಪೀಲಿಕಾ ಮಾರ್ಗ ಶುಕ ಮಾರ್ಗಗಳೆಂದು ಇವನ್ನು ಶಾಸ್ತ್ರಗಳಲ್ಲಿ ವಿವರಿಸಿದೆ.

ಪಿಪೀಲಿಕ ಎಂದರೆ ಇರುವೆ ,ಶುಕವೆಂದರೆ ಗಿಳಿ .ಸಾಮಾನ್ಯ ಮುಮುಕ್ಷುಗಳ ಮಾರ್ಗ ಪಿಪೀಲಿಕಾ ಮಾರ್ಗ .ನೆಲದ ಮೇಲೆ ಹರಿಯುವ ಇರುವೆ ಮಾವಿನ ಮರದ ಮೇಲೆ ತೂಗುವ ಮಾವಿನ ಹಣ್ಣಿನ ಪರಿಮಳವನ್ನು ಪರಿಗ್ರಹಿಸಿದಂತೆ ಇದು. ಇರುವೆ ಮೆಲ್ಲ ಮೆಲ್ಲನೆ ನೆಲದಿಂದ ಮರಕ್ಕೆ ಮೇಲಕ್ಕೆ ಹರಿಯುತ್ತಾ ಸಾಗುತ್ತದೆ .ಮರದ ಕಾಂಡವನ್ನು ಅದರ ಉಬ್ಬು ತಗ್ಗುಗಳನ್ನು ರೆಂಬೆಗಳನ್ನು ಅದರ ಟಿಸಿಲು ಎಲೆಗಳನ್ನು ದಾಟಿ ಕೊನೆಗೆ ಹಣ್ಣನ್ನು ತಲುಪಿ ಅದನ್ನು ಸವಿಯುತ್ತದೆ. ಇದು ಧೀರ್ಘ ಕಾಲ ತೆಗೆದುಕೊಳ್ಳುವ ಕಷ್ಟಕರವಾದ ಮಾರ್ಗ. ಇದಕ್ಕೆ ದೃಢ ಸಂಕಲ್ಪ ಶ್ರದ್ಧೆ ಸಹನೆಗಳ ಪರಮ ಪ್ರಯತ್ನ ಅಗತ್ಯ.

ಇದಕ್ಕೆ ಪ್ರತಿಯಾಗಿ ಅಸಾಧಾರಣ ಮಹಾಪುರುಷನೊಬ್ಬನು ಬಳಸುವ ನೇರವೂಹತ್ತಿರದ್ದೂ ಆದ ಮಾರ್ಗ ಒಂದಿದೆ ಅದೇ. ಅದೇ ಶುಕ ಮಾರ್ಗ. ದೂರದಲ್ಲಿ ಇರುವ ಗಿಳಿ ಮಾವಿನ ಹಣ್ಣಿನ ಪರಿಮಳದ ಸುಳಿವು ಪಡೆದು ನೇರವಾಗಿ ಹಾರಿ ಹೋಗಿ ಹಣ್ಣನ್ನು ಸಮೀಪಿಸಿ ಅದರ ರುಚಿ ಸವಿಯುತ್ತದೆ. ಇದು ಬಹಳ ಸರಳವೂ ಸಮೀಪವೂ,ಅನಾಯಾಸಕರವೂ ಆದ ಮಾರ್ಗ. ಮೊದಲಿನದು ಕ್ರಮವಾಗಿ ಕಠೋಪಾಸನೆಗಳ ದಾರಿ. ಎರಡನೆಯದು ತೀವ್ರವಾದ ಜ್ಞಾನ ವೈರಾಗ್ಯಗಳ ದಾರಿ .

ಈ ಎರಡರಲ್ಲಿ ಡಿವಿಜಿಯವರ ಶ್ರೀರಾಮ ಪರೀಕ್ಷಣಂ ಪಿಪೀಲಿಕಾ ಮಾರ್ಗ ಎಂದರೆ ತಪ್ಪಿಲ್ಲ .ಹಳೆಗನ್ನಡದ ಈ ಕಾವ್ಯ ಬಿಗಿಯಾದ ಕಾವ್ಯ ಬಂಧದಿಂದ ವಿಮರ್ಶಾ ಯುಕ್ತ ರಾಮಾಯಣವನ್ನು ಕುರಿತ ಸಂದೇಹಗಳಿಗೆ ಪರಿಹಾರ ರೂಪವಾಗಿ ಪ್ರಶ್ನೋತ್ತರಗಳನ್ನು ಒಳಗೊಂಡ ರಮ್ಯಾ ಕಾವ್ಯವಾಗಿದೆ. ಕನ್ನಡದಲ್ಲಿ ಬಂದಿರುವ ರಾಮಾಯಣವನ್ನು ಕುರಿತ ಕೃತಿಗಳಲ್ಲಿ ವಿಶಿಷ್ಟವಾಗಿದೆ. ರಾಮಾಯಣದ ಮುಖ್ಯ ಪಾತ್ರಗಳಾದ ಶ್ರೀ ರಾಮ ಲಕ್ಷ್ಮಣ ಹನುಮಂತ ಮೊದಲಾದ ಪುರುಷ ಪಾತ್ರಗಳನ್ನು ಕುರಿತು ಸೀತೆ ತಾರೆ ಅಹಲ್ಯ ಮಂಡೋದರಿ ಮುಂತಾದ ಸ್ತ್ರೀ ಪಾತ್ರಗಳ ಚಿತ್ರಣವನ್ನು ಅಮೋಘವಾಗಿ ಚಿತ್ರಿಸಿದ್ದಾರೆ.

ಈ ಕೃತಿಯ ಹಿರಿಮೆ ರುಕ್ಮಿಣಿ ಅವರು" ಶ್ರೀರಾಮ ಪರೀಕ್ಷಣಂ"ಅನ್ನು ವಸ್ತುವಿಗಾಗಿ ಆಕರವನ್ನಾಗಿ ಇಟ್ಟುಕೊಂಡಿದ್ದಾರೆ .ಹಳಗನ್ನಡದ ಕಾವ್ಯ ರೂಪದಲ್ಲಿರುವ ರಾಮಾಯಣದ ಪ್ರಸಂಗಗಳನ್ನು ಡಿವಿಜಿ ಅವರು ಪ್ರಶ್ನೋತ್ತರ ರೂಪದಲ್ಲಿ ರಸಗವಳ ನೀಡಿದ್ದಾರೆ. ಆದರೆ ತಿರುಳು ಎಳನೀರು ಎಷ್ಟೇ ಮಧುರವಾಗಿದ್ದರೂ, ತೆಂಗಿನ ಕಾಯಿನ ಸಿಪ್ಪೆ, ಕರಟಗಳನ್ನು ಭೇದಿಸುವುದು ಕಠಿಣ. ಡಿವಿಜಿಯವರ ಹಳೆಗನ್ನಡ ಪಾಂಡಿತ್ಯ ಛಂದಸ್ಸಿನಲ್ಲಿ ಬಂಧ,ಸಂಸ್ಕೃತ ಭೂಯಿಷ್ಠವಾದ ಬಳಕೆ ಸೂತ್ರ ಪ್ರಾಯವಾಗಿ ವಿಚಾರಗಳನ್ನು ವಿಮರ್ಶಗಳನ್ನು ಹೇಳುವ ಪರಿ ಇವೆಲ್ಲಾ ಕಂಡಾಗ ಶ್ರೀರಾಮ ಪರೀಕ್ಷಣಂ ಇಂದಿನ ಓದುಗರಿಗೆ ಕಬ್ಬಿಣದ ಕಡಲೆ, ನಾರಿಕೇಳ ಎಂದರೆ ತಪ್ಪಾಗದು. ಇದನ್ನು ಮೂಲಕ್ಕೆ ಧಕ್ಕೆ ಆಗದ ಹಾಗೆ ಅದರ ತಿರುಳು ಸಿಯಾಳಗಳನ್ನು ಸೊಗಸಾಗಿ ರುಕ್ಮಿಣಿಯವರು ಕಥಾ ರೂಪದಲ್ಲಿ ಸರಳವಾದ ಪ್ರಶ್ನೆ ವಾಕ್ಯಗಳ ಮೂಲಕ ನೀಡಿದ್ದಾರೆ .ಓದಿದವರಿಗೆ ಇದೊಂದು ರಾಮಾಯಣದ ಪಾತ್ರಗಳ ಕನ್ನಡದ ಕಥೆಗಳು ಎನಿಸುತ್ತದೆಯೇ ಹೊರತು ,ಶ್ರೀ ರಾಮಾಯಣ ಪರೀಕ್ಷಣಂನ ಸಾರಾನುವಾದ ಭಾವಾನವಾದ ವಿವರಣಾನುವಾದ ಎಂದು ಅನಿಸುವುದಿಲ್ಲ. ಇದು ಶ್ರೀ ರಾಮಾಯಣ ಪರೀಕ್ಷಣಂ ಕೃತಿಯನ್ನು ಆಧರಿಸಿ ಬರೆದದ್ದು ಎಂದು ಯಾರಾದರೂ ಹೇಳಿದರೆ ಮಾತ್ರ ಓದುಗರಿಗೆ ಹೌದ ಎನಿಸುತ್ತದೆ .ಅಷ್ಟರ ಮಟ್ಟಿಗೆ ಸ್ವತಂತ್ರ ಕೃತಿಯಾಗಿ ಇಲ್ಲಿ ಕಥೆಗಳು ಮೂಡಿವೆ. ಈ ಕೃತಿಯನ್ನು ಕಂಡಾಗ ಎ.ಆರ್. ಕೃಷ್ಣಶಾಸ್ತ್ರಿಗಳು ವಚನ ಭಾರತದ ಬಗ್ಗೆ ಹೇಳಿದ ಮಾತುಗಳು ನೆನಪಾಗುತ್ತದೆ (ವಚನ ಭಾರತ ಪುಟ 17)

ನನ್ನ ಉದ್ದೇಶ ಸರ್ವಾಯವ ಸಂಗ್ರಹವಲ್ಲ; ಕಬ್ಬಿನ ಜಲ್ಲೆಯಲ್ಲಿ ಬೇರು, ಗರಿ ಗಿಣ್ಣುಗಳನ್ನು ಕತ್ತರಿಸಿ ಹಾಕಿ ,ಸಿಪ್ಪೆ ಹೆರೆದು ,ಸಿಗುರು ಕಳೆದು, ಹೋಳು ಮಾಡಿ ಅದನ್ನು ಬಟ್ಟಲಲ್ಲಿ ತುಂಬಿಕೊಡುವಂತದ್ದು. ಕಿತ್ತಲೆಯ ಹಣ್ಣಿನ ಸಿಪ್ಪೆ ಸುಲಿದು, ತೊಳೆ ಬಿಡಿಸಿ, ನಾರು ಬೀಜಗಳನ್ನು ತೆಗೆದು ಹಾಕಿ ,ಕುಸುಮವನ್ನು ಒಂದು ಅಡಕವಾದ ಬೆಳ್ಳಿ ತಟ್ಟೆಯಲ್ಲಿ ಜೋಡಿಸಿಡುವಂಥದ್ದು.' ಈ ಕೆಲಸವನ್ನು ರಾಮಾಯಣದ ಬಗ್ಗೆ ಮಾಡಿ, "ಶ್ರೀರಾಮ ಪರೀಕ್ಷಣಂ" ಅನ್ನು ಕಥಾ ರೂಪದಲ್ಲಿ ಕಡಾಯಿಯಲ್ಲಿರುವ ಪಾಯಸವನ್ನು ಚಿಕ್ಕ ಚಿಕ್ಕ ಬಟ್ಟಲಲ್ಲಿಟ್ಟು ತಟ್ಟೆಯಲ್ಲಿ ತಂದು ನೀಡಿದಂತೆ ರುಕ್ಮಿಣಿ ಅವರು ಹಂಚಿದ್ದಾರೆ.

ಉಪ ಕಥೆಗಳ ಪ್ರಸ್ತಾವ; ಕಥೆಯೊಳಗೊಂದು ಕಥೆ ಬರುವುದು ಭಾರತೀಯ ಕಾವ್ಯಗಳಲ್ಲಿ ಸಾಮಾನ್ಯ. ಹರಿ ಕಥೆಗಳಲ್ಲಿ ಉಪಕಥೆಗಳಿದ್ದಂತೆ, ಅಜ್ಜಿ ಕಥೆ ಹೇಳುವಾಗ ಮೊಮ್ಮಕ್ಕಳು ಪ್ರಶ್ನೆ ಕೇಳಿದಾಗ ನಡುವೆ ಹೇಳಲು ಸಣ್ಣ ಕಥೆಗಳು ಇದ್ದಂತೆ ಈ ಕೃತಿ "ಶ್ರೀ ರಾಮಾಯಣ ಪಾತ್ರ ಕಥಾ ಮಾಲಿಕೆ"ಯಲ್ಲಿ ಲಕ್ಷ್ಮಣನ ಪಾತ್ರ ಚಿತ್ರಿಸುವಾಗ, ವಾಲಿಯು ಮಾತಂಗ ಮುನಿಗಳ ಆಶ್ರಮಕ್ಕೆ ಬರುವುದಿಲ್ಲ, ಅಲ್ಲಿ ನಾವು ನಿರ್ಭಯವಾಗಿ ಇರಬಹುದು ಎಂದಾಗ ,ವಾಲಿ ಏಕೆ ಬರುವುದಿಲ್ಲ ಎಂದಾಗ ವಾಲಿಗೆ ಇದ್ದ ಶಾಪದ ಕಥೆಯನ್ನು ಲೇಖಕಿ ಇಲ್ಲಿ ಹೇಳಿದ್ದಾರೆ. ಈ ರೀತಿ ಇಲ್ಲಿ ಪ್ರಸಂಗ ನಿರೂಪಣೆಗಳ ನಡುವೆ ಬರುವ ಕಥೆಗಳು ಓದುಗನಿಗೆ ರಂಜನೀಯವಾಗಿವೆ.

ರಾವಣ ಸೀತೆಯನ್ನು ಬಲಾತ್ಕಾರದಿಂದ ಕರೆದೊಯ್ದನು ಸರಿ. ಆದರೆ ರಂಭೆಯನ್ನು ಮೋಹಿಸಿ ಅತ್ಯಾಚಾರ ಮಾಡಿ ನಳಕೂಬರನಿಂದ ಶಾಪಗ್ರಸ್ತನಾಗಿದ್ದ .ಪ್ರೇಮವಿಲ್ಲದ ಸ್ತ್ರೀಯನ್ನು ಭೋಗಿಸಲು ಯತ್ನಿಸಿದರೆ ನಿನ್ನ ತಲೆಗಳು ಸೀಳು ಸೀಳಾಗಿ ಸಿಡಿದು ಸಾಯುವೆ ಎಂದು ನಳಕೂಬರ ಶಾಪವಿತ್ತ. ಅದರಿಂದ ರಾವಣ ಸೀತೆಯನ್ನು ಬಲಾತ್ಕರಿಸಲಿಲ್ಲ ಎಂಬ ಉಪ ಕಥೆಯನ್ನು ಮಾಂಡವಿಗೆ ಸೀತೆ ಹೇಳುತ್ತಾಳೆ .ಇಂಥ ರಸ ಪೂರ್ಣ ಉಪ ಕಥೆಗಳು ಈ ಕೃತಿಗಳಲ್ಲಿ ಅಲ್ಲಲ್ಲಿ ಬಂದು ಕಥೆ ಕುತೂಹಲ ಜನಕವಾಗಿ ಮುಂದುವರೆಯುತ್ತದೆ.

ಸಂಭಾಷಣಾ ಸೊಗಸು; ಇಲ್ಲಿ ರುಕ್ಮಿಣಿಯವರು ಕೇವಲ ಕಥೆಯನ್ನಷ್ಟೇ ಹೇಳುತ್ತಿಲ್ಲ .ಪರಸ್ಪರ ಮಾತನಾಡುವ ದಾಟಿಯಲ್ಲಿ ಒಬ್ಬರನ್ನೊಬ್ಬರು ಹಾಸ್ಯ ಮಾಡುವ ರೀತಿಯಲ್ಲಿ ಮಾತು ಕಥೆಗಳನ್ನು ಮುಂದುವರೆಸುತ್ತಾರೆ .ಒಂದು ಪ್ರಸಂಗ ಹೀಗಿದೆ . ನಿದ್ದೆ ಬಾರದೆ ಕೌಸಲ್ಯ ಮತ್ತು ಲಕ್ಷ್ಮಣ ಇಬ್ಬರು ಶತಪಥ ಹಾಕುತ್ತಿರುತ್ತಾರೆ. ಆಗ ರಾತ್ರಿ ಚಳಿಯಲ್ಲಿ ಅವರು ಅಡ್ಡಾಡುತ್ತಿರುವುದನ್ನು ಕಂಡು ಭರತ ಶತ್ರುಘ್ನರು ಅಲ್ಲಿಗೆ ಬರುತ್ತಾರೆ .ಇದೇನಿದು ಇಲ್ಲಿ ಇಬ್ಬರೂ ಈ ಚಳಿಯಲ್ಲಿ ಕುಳಿತಿದ್ದೀರಿ , ಎಂದಾಗ ಕೌಸಲ್ಯ ಹೇಳುತ್ತಾಳೆ, ಲಕ್ಷ್ಮಣನಿಗೆ ನಿದ್ದೆ ಬರದೆ ಠಳಾಯಿಸುತ್ತಿದ್ದ .ಅವನೊಡನೆ ನಾನೂ ಕುಳಿತಿದ್ದೇನೆ ಎನ್ನುತ್ತಾಳೆ. ಆಗ ಲಕ್ಷ್ಮಣನನ್ನು ಕುರಿತು ಶತ್ರುಘ್ನ ವ್ಯಂಗ್ಯವಾಗಿ ನುಡಿಯುತ್ತಾನೆ." ಲಕ್ಷ್ಮಣನಿಗೆ ನಿದ್ದೆ ಬರಲಿಲ್ಲವೇ ಅಮ್ಮ? ಅವನಿಗೆ ನಿದ್ದೆ ಬರಲು ಹೇಗೆ ಸಾಧ್ಯ ನೀನೇ ಹೇಳು? ಅವನಿಗೆ ಕಾಡಿನ ಪರ್ಣಕುಟಿಯಲ್ಲಿ ದರ್ಭೆಯ ಹಾಸಿಗೆಯ ಮೇಲೆ ಮಲಗಿಯೇ ಅಭ್ಯಾಸ .ಜೊತೆಗೆ ಕಾಡು ಪ್ರಾಣಿಗಳ ಕೂಗು ,ಪಕ್ಷಿಗಳ ಚಿಲಿಪಿಲಿ, ನದಿ ನೀರಿನ ಜುಳು ಜುಳು ಸದ್ದು ಇವೆಲ್ಲ ಇದ್ದರೆ ಮಾತ್ರ ನಿದ್ದೆ ಬರುವುದು. ಜೊತೆಗೆ ಆಗಾಗ ರಾಕ್ಷಸರ ದರ್ಶನವಾಗಬೇಕು ,ಅವರ ಭೀಕರ ಹೆಣಗಳು ಉರುಳಿದ ಮೇಲೆ ಅವರ ರಕ್ತ ನದಿಯಂತೆ ಹರಿಯುವುದನ್ನು ನೋಡಿದ ಮೇಲೆ ಅವನಿಗೆ ನಿದ್ದೆ ಬರುತ್ತದೆ .ಅಲ್ಲವೇ ಲಕ್ಷ್ಮಣ" ಎಂದು ಹಾಸ್ಯ ಮಾಡುತ್ತಾನೆ. ಈ ರೀತಿ ಮಾತು ಕಥೆಗಳ ನಡುವೆ ವ್ಯಂಗ್ಯ ವಿಡಂಬನೆ ಹಾಸ್ಯದ ನುಡಿಗಳು ಕಾಣಿಸಿಕೊಂಡು ಇಲ್ಲಿಯ ಕಥೆಗಳಲ್ಲಿ ಬರುವ ಸಂಭಾಷಣೆಗಳು ರಂಜನೀಯವಾಗಿದೆ.

ಕೆಲವು ದಿನಗಳ ಹಿಂದೆ ಡಿ.ಆರ್ .ವೆಂಕಟರಮಣನ್ ಅವರ ಪುತ್ರಿ ರುಕ್ಮಿಣಿ, ನಿಟ್ಟೂರು ಶ್ರೀನಿವಾಸ ರಾಯರ ಮೊಮ್ಮಗ ರಘುರಾಮ್ ದಂಪತಿಗಳು ಅನಿರೀಕ್ಷಿತವಾಗಿ ನಮ್ಮ ಮನೆಗೆ ಬಂದರು.ಗೋಖಲೆ ಸಂಸ್ಥೆಯನ್ನು ಬಲ್ಲವರಿಗೆಲ್ಲ ನಿಟ್ಟೂರು ,ವೆಂಕಟರಮಣನ್, ಪದ್ಮನಾಭನ್, ಚೈತನ್ಯ ,ಸುಬ್ಬರಾಯ, ರಾಮಸ್ವಾಮಿ ಮುಂತಾದ ಡಿವಿಜಿ ಬ್ರಿಗೇಡ್ ಮಂದಿ ಚಿರಪರಿಚಿತರು .ಸಾರ್ವಜನಿಕ ಸಂಸ್ಥೆ ಒಂದು ಪರಿಶುದ್ಧ ರೀತಿಯಲ್ಲಿ ನಿಸ್ವಾರ್ಥವಾಗಿ ಜನ ಸೇವೆಯನ್ನು ಸಾಹಿತ್ಯ ಸೇವೆಯನ್ನು ಹೇಗೆ ಮಾಡಬೇಕೆಂಬ ಮಾದರಿಯನ್ನು ಡಿವಿಜಿಯವರು ಇಂಥ ನಿಸ್ವಾರ್ಥ ಕನ್ನಡ ನುಡಿ ಸೇವಕರನ್ನು ಸಿದ್ಧಪಡಿಸಿ ನಾಡಿಗೆ ಅಪೂರ್ವ ಸೇವೆ ಸಲ್ಲಿಸಿದ್ದಾರೆ. ಡಿವಿಜಿಯವರು ಸಾರ್ವಜನಿಕ ಸೇವೆ ಪತ್ರಿಕಾ ಸೇವೆ ಸಾಹಿತ್ಯ ಸೇವೆಗಳ ಭೀಷ್ಮರು. ಇಂದೂ ಗೋಖಲೆ ಸಾರ್ವಜನಿಕ ಸಂಸ್ಥೆ ನಮ್ಮ ನಾಡಿನ ಆದರ್ಶ ಸೇವಾ ಸಂಸ್ಥೆಗಳಲ್ಲಿ ಅಗ್ರ ಗಣ್ಯವಾಗಿದೆ .ಈ ಸಂಸ್ಥೆಯಲ್ಲಿ ಗಂಧದ ಕೊರಡಿನಂತೆ ಸೇವೆ ಸಲ್ಲಿಸಿದ ಅನುಪಮ ವ್ಯಕ್ತಿಗಳ ಮಕ್ಕಳಾದ ರುಕ್ಮಿಣಿ ರಘುರಾಮ್ ದಂಪತಿಗಳು ನಾಡು ನುಡಿಗಳಲ್ಲಿ ಅಭಿಮಾನ ಇದ್ದು ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸೇವಾ ನಿರತರಾದ ರುಕ್ಮಿಣಿ ಅವರು ಕನ್ನಡ ಸಾಹಿತ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡವರು .ಅವರು ಡಾ.ಎ.ಆರ್. ಕೃಷ್ಣ ಶಾಸ್ತ್ರಿಗಳನ್ನು ಕುರಿತು ರಚಿಸಿದ ಮಹಾ ಪ್ರಬಂಧ ಕನ್ನಡದ ಸತ್ವ ಪೂರ್ಣ ಮಹಾ ಪ್ರಬಂಧಗಳಲ್ಲಿ ಒಂದಾಗಿದೆ. ಈಕೆ ಒಳ್ಳೆಯ ಕಥೆಗಾರ್ತಿಯೂ ಹೌದು ಕಾವ್ಯಾಭ್ಯಾಸಿಯೂ ಹೌದು.

ಡಿ.ವಿ. ಜಿಯವರ ಶ್ರೀ ರಾಮಾಯಣ ಪರೀಕ್ಷಣಂ ಕೃತಿಯನ್ನು ಸಾಮಾನ್ಯನಿಗೆ ಎಟುಕಿಸಬೇಕೆಂದು ಜಿ.ಪಿ. ರಾಜರತ್ನಂ, ರಂಗನಾಥ ಶರ್ಮಾ ಮೊದಲಾದ ವಿದ್ವದ್ವರೇಣ್ಯಯರು ,ಸಾಹಿತಿಗಳು ,ಸುಲಭದ ಕೈತುತ್ತಿನಂತೆ ಶ್ರೀ ರಾಮಾಯಣ ಶ್ರೀರಾಮ ಪರೀಕ್ಷಣಂ ಕುರಿತು ಗ್ರಂಥ ರಚನೆ ಮಾಡಿದ್ದಾರೆ. ಈ ಮಾರ್ಗದಲ್ಲಿ ಕಥೆಗಳ ರೂಪದಲ್ಲಿ ರುಕ್ಮಿಣಿ ಅವರು ಹೊಸ ಕನ್ನಡದಲ್ಲಿ, ಸರಳ ಗದ್ಯದಲ್ಲಿ ಪ್ರಶ್ನೋತ್ತರಗಳನ್ನು ಪೂರ್ವ ಕಥೆಗಳನ್ನು ಒಳಗೊಂಡಂತೆ ಶ್ರೀ ರಾಮಾಯಣ ಪರೀಕ್ಷಣಂ ಗ್ರಂಥವನ್ನು ಹೊಸ ಶೈಲಿಯಲ್ಲಿ ವಿದ್ಯಾರ್ಥಿಗಳಿಗೆ, ಸಾಮಾನ್ಯ ಓದುಗರಿಗೆ, ಮನೋಹರ ಕಥೆಗಳ ರೂಪದಲ್ಲಿ ನೀಡಿದ್ದಾರೆ. ಹಳೆಗನ್ನಡ ಅರಿಯದ ಹೊಸ ಕನ್ನಡ ಓದುವವರಿಗೆ ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ರಾಮಾಯಣದ ಭಕ್ತರಿಗೆ ಡಿವಿಜಿಯವರ ಕೃತಿಗಳ ಓದುಗರಿಗೆ ವಿಶೇಷ ರೀತಿಯಲ್ಲಿ ಶ್ರೀ ರಾಮಾಯಣ ಪರೀಕ್ಷಣಂ ಗ್ರಂಥವನ್ನು ಸ್ವತಂತ್ರ ಗ್ರಂಥದ ರಚನೆ ಎಂಬಂತೆ ರಚಿಸಿದ್ದಾರೆ . ಹಳೆಗನ್ನಡದಲ್ಲಿ ರಚಿತವಾದ ರಾಮಾಯಣದ ಕಾವ್ಯ ಕೃತಿಗಳು ನೂರಾರಿವೆ. ಅವುಗಳನ್ನು ಹೊಸಗನ್ನಡ ಗದ್ಯದಲ್ಲಿ ಸ್ವಾರಸ್ಯಕರವಾಗಿ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಲೇಖಕಿಯರಲ್ಲಿ

ರುಕ್ಮಿಣಿ ರಘುರಾಮ್ ಅವರ ಈ ಗ್ರಂಥ ,ಕನ್ನಡಕ್ಕೆ ಒಂದು ವಿಶಿಷ್ಟ ಕೊಡುಗೆ ಆಗಿದೆ .ಅಚ್ಚಿಗೆ ಮೊದಲು ಕೊಟ್ಟು ಓದಿ ಆನಂದಿಸಲು ,ನನ್ನ ಅನಿಸಿಕೆಯನ್ನು ತಿಳಿಸಲು ಅವಕಾಶ ಮಾಡಿಕೊಟ್ಟದ್ದಕ್ಕೆ ರುಕ್ಮಿಣಿ ರಘುರಾಮ್ ಅವರಿಗೆ ವಂದನೆಗಳು . ಇಂದು ಎಲ್ಲೆಡೆ ರಾಮಾಯಣದ ಪ್ರಚಾರ ಹೆಚ್ಚುತ್ತಿದೆ .ಅಯೋಧ್ಯೆಯ ಶ್ರೀರಾಮ ಮಂದಿರದ ನಿರ್ಮಾಣವಾದ ಮೇಲಂತೂ ಶ್ರೀ ರಾಮಾಯಣದ ಪ್ರಚಾರ ಪ್ರಸಾರ ಎಲ್ಲೆಡೆ ಹಬ್ಬುತ್ತಿದೆ. ಈ ಸಂದರ್ಭದಲ್ಲಿ ರುಕ್ಮಿಣಿ ರಘುರಾಮ್ ಅವರ ಈ ಗ್ರಂಥ ಕನ್ನಡಿಗರಿಗೆ ಸಮಯೋಚಿತ ರಸ ಪೂರ್ಣ ಕಥಾಮೃತ ಕೊಡುಗೆ ಆಗಿದೆ. ಕನ್ನಡದ ಜನ ಕೊಂಡೋದಿ, ಕೊಂಡಾಡಲಿ ಕೋದಂಡ ರಾಮನ ಪುಣ್ಯ ಕಥನವನ್ನು ಎಂದು ಹಾರೈಸುವೆ .

-ಜಿ ಅಶ್ವತ್ಥ ನಾರಾಯಣ

( ನಿವೃತ್ತ ಕನ್ನಡ ಪ್ರಾಧ್ಯಾಪಕರು)

MORE FEATURES

ಬಾಬಾ ಸಾಹೇಬರ ಜ್ಞಾನಾಮೃತವನ್ನು ಕನ್ನಡಕ್ಕೆ ತಂದಿರುವ ಕಾರ್ಯ ಮೆಚ್ಚುವಂತಹದ್ದು

10-05-2024 ಬೆಂಗಳೂರು

ಆರಡಿ ಮಲ್ಲಯ್ಯ ಅವರ ವೈಚಾರಿಕ ಚಿಂತನೆಯ ದೂರದೃಷ್ಟಿಯಿಂದ ಬಾಬಾ ಸಾಹೇಬರ ಜ್ಞಾನಾಮೃತವನ್ನು ಕನ್ನಡಕ್ಕೆ ತಂದಿರುವ ಕಾರ್ಯವಂತ...

ಈ ಕಾದಂಬರಿ ನನ್ನ ಶಾಲಾ ಅನುಭವಗಳ ಒಟ್ಟು ಮೊತ್ತ: ಮಧು ವೈ.ಎನ್

10-05-2024 ಬೆಂಗಳೂರು

‘ಕಳೆದ ನಾಲೈದು ವರುಷಗಳಲ್ಲಿ ಆಗಾಗ್ಗೆ ಮೊಳಕೆಯೊಡೆದು ಅಲ್ಲಲ್ಲೆ ಮುದುಡಿಕೊಳ್ಳುತ್ತಿದ್ದ ಕತೆ ಈ ರೂಪ ತಾಳಿರುವುದು ...

ಕವನಗಳನ್ನೇಕೆ ಬರೆಯಬೇಕು? ಬರೆದ ಕವನಗಳನ್ನೆಲ್ಲಾ ಪ್ರಕಟಿಸಲೇಬೇಕೆ?

10-05-2024 ಬೆಂಗಳೂರು

‘ಕವಿತೆಗಳು ಹುಟ್ಟುವಾಗ ನಮಗೇ ಅರಿವಿಲ್ಲದಂತೆ ನಮ್ಮ ಪೂರ್ವಗ್ರಹಗಳನ್ನೂ ಮೀರಿ ನಮ್ಮ ನಿಜವಾದ ಒಳಗಿನ ನಿಶ್ಯಬ್ದ ಮಾತ...