ಕವಲೇದುರ್ಗದ ಕೌತುಕಗಳು

Date: 16-04-2022

Location: ಬೆಂಗಳೂರು


ಭುವನಗಿರಿ ದುರ್ಗ, ಕೌಲೇದುರ್ಗ ಎಂದು ಕರೆಯಲ್ಪಡುವ ಕವಲೇದುರ್ಗ, ಗತ ಕಾಲದ ಇತಿಹಾಸವನ್ನು ಕೆದಕಿ ನಮ್ಮ ಪೀಳಿಗೆಗೆ ಒಪ್ಪಿಸಲು ಇರುವ ಕುರುಹು. ಅದನ್ನು ನಾವು ಇನ್ನೂ ತುಂಬಾ ಜಾಗರುಕತೆಯಿಂದ ಕಾಯ್ದು ಕಾಪಾಡಿ ಕಾಪಿಟ್ಟುಕೊಳ್ಳಬೇಕಾದ ತುರ್ತು ನಮಗಿದೆ ಎನ್ನುತ್ತಾರೆ ಮೌನೇಶ ಕನಸುಗಾರ. ಅವರು ಕವಲೇದುರ್ಗದ ಅನುಭವಗಳನ್ನು ‘ಬುಕ್ ಬ್ರಹ್ಮ’ ‘ಅಲೆಮಾರಿಯ ಅನುಭವಗಳು’ ಸರಣಿಯಲ್ಲಿ ಹಂಚಿಕೊಂಡಿದ್ದು ಈ ಅಂಕಣ ನಿಮ್ಮ ಮುಂದಿದೆ..

ಪಶ್ಚಿಮಘಟ್ಟದ ದಟ್ಟ ತಪ್ಪಲಿನಲಿ ಕೋಟ್ಯಾಂತರ ವರ್ಷಗಳ ಮೌನವನ್ನು ಕಾಪಿಟ್ಟುಕೊಂಡು ಗಡತ್ತಾಗಿ ಮಲಗಿರುವ ದೊಡ್ಡ ದೊಡ್ಡ ಬಂಡೆಗಲ್ಲುಗಳಿಗೆ ನಿರಂತರವಾಗಿ ಹಸಿರು ಪಾಚಿ ಮೆತ್ತುತ್ತಲೆ ಲಕ್ಷಾಂತರ ಮಳೆಗಾಲಗಳನ್ನು ಅತಿ ನವನವಿನವಾಗಿ ಸುರಿಸಿದ ಶ್ರಾವಣಗಳಲ್ಲೊಂದು ಶ್ರಾವಣ ಮಧ್ಯಾಹ್ನಕ್ಕೆ ನಮ್ಮ ಬೈಕಿನ ಗಾಲಿಗಳು ದಣಿವಾರಿಸಿಕೊಳ್ಳಲು ಕೆಳದಿ ಸಂಸ್ಥಾನದ ರಾಜಧಾನಿಯಾದ ದಟ್ಟ ಕಾಡಿನ ಸಹ್ಯಾದ್ರಿ ಶ್ರೇಣಿಯೊಳಗವಿತು ಕೂತ ಮೂರು ಸುತ್ತಿನ ಕೋಟೆಯ ಈ ದುರ್ಗದ ಪಾದಕ್ಕೆ ಬಂದು ಆಶ್ರಯ ಪಡೆದು ನಿಂತಿತು! ಅದು ಕವಲೇದುರ್ಗ!

ಬೈಕ್ ನಿಲ್ಲಿಸಿದಾಗ ಸಣ್ಣ ಮಳೆ ಸುಮ್ಮನಾಗಿ ಹಸಿ ತಂಗಾಳಿ ಕಂಪನ್ನು ಮೈಯ ಜೀವವೀಣೆಯನ್ನೆ ಮೀಟುತ್ತಿತ್ತು. ಮನೆಗಂಟಿದ ಗೂಡಂಗಡಿಯೊಂದರಲ್ಲಿ ಒಂದು ಬೆಚ್ಚನೆಯ ಚಹಾ ಗುಟುಕಿಸಿ ತಿನ್ನಲು ಒಂದಷ್ಟು ತಿಂಡಿತಿನಿಸುಗಳನ್ನು ತುಂಬಿಕೊಂಡು ಬ್ಯಾಗೊಂದು ಹೆಗಲಿಗೇರಿಸಿಕೊಂಡು ಗದ್ದೆಯ ದಾರಿ ಹಿಡಿದು ಹೊರಟೆವು. ಎಡಬಲಕೆ ಹಸಿರು ಸಿರಿ. ನಡು ನೇರ ನೋಟಕೆ ರಹದಾರಿ. ಗೊಜ್ಜಲಿ ಮೂಡಿದ ಹೆಜ್ಜೆಗೆ ಹೆಜ್ಜೆಯ ಬೆರೆಸಿ ನಡೆದೆವು. ಗದ್ದೆ ದಾಟುತ್ತಲೆ ಕವಲೇದುರ್ಗದ ಪಾದ ಅಚ್ಚುಕಟ್ಟಾಗಿ ಬಂಡೆಗಲ್ಲುನ್ನು ಹಾಸಿ ಸ್ವಾಗತಿಸುತ್ತಿತ್ತು.

ಇಲ್ಲಿಂದ ಕೋಟೆಯ ಅಸಲಿ ದಾರಿ ಶುರುವಾಗಿತ್ತು. ತುಂಬಾ ಅಚ್ಚುಕಟ್ಟಾಗಿ ಕಟ್ಟಿದ ಕೋಟೆಯ ದಾರಿಯನ್ನು ಸಹ ಕಲ್ಲುಗಳಿಂದ ಹಾಸಿ ಜೋಡಿಸಲಾಗಿತ್ತು. ಕಲ್ಲುಗಳ ಇಕ್ಕೆಲಗಳಲ್ಲಿ ಬೆಳೆದ ಹಸಿರು ಇಡೀ ರಸ್ತೆಯನ್ನು ಸಮೃದ್ಧವಾಗಿಸಿತ್ತು. ಈಗ ಎಡಬಲಕೆ ಕೋಟೆಯ ಗೋಡೆ, ಅದಕ್ಕಂಟಿದ ಪಾಚಿ, ಗೋಡೆಯ ಪಕ್ಕದಲ್ಲಿ ಆಳವಾದ ಕಂದರ, ಕಣ್ಣು ಹಾಯಿಸಿದಷ್ಟು ಹಸಿರುಟ್ಟ ಮಲೆನಾಡ ಹೆಣ್ಣು. ಅಹಾ! ಈಗ ಮಳೆ ಮತ್ತೆ ಸಣ್ಣಗೆ ಶುರುವಾಯಿತು. ಮಂಜು ಮುಸುಕಿತು. ಸಂಜೆಗೆ ಇಳಿದು ಕಳೆದು ಮುಳುಗಿ ಹೋಗಬೇಕಾದ ಸೂರ್ಯನೂ ಸಹ ಅಗೋಚರ. ಹಸಿರ ಸಿರಿಗೆ ಮಂಜಿನ ಶಾಲು ಹೊದಿಸಿ ತಣ್ಣಗೆ ಇಡೀ ಕೋಟೆಯ ಕಂದರಗಳು ಉಸಿರಾಡುತ್ತಿದ್ದವು. ಇಡೀ ಬೆಟ್ಟವನ್ನೆ ಬಳಿದು ಕಟ್ಟಿದ ಕಿಲವಿದು ಅಂತ ಅನ್ನಿಸಿತು. ಬೆಟ್ಟದ ದಿಣ್ಣೆಗಳ ನೈಸರ್ಗಿಕ ಬಾಹ್ಯರೇಖೆಗಳನ್ನು ಅನುಸರಿಸಿ ಬೃಹದ್ಗಾತ್ರದ ಪೆಡಸುಕಲ್ಲುಗಳ ಇಟ್ಟಿಗೆಗಳನ್ನುಪಯೋಗಿಸಿ ನಿರ್ಮಿಸಲಾಗಿರುವ ಕೋಟೆಯ ಪ್ರತಿ ಸುತ್ತಿನಲ್ಲೂ ಒಂದು ಮಹಾದ್ವಾರವಿದ್ದು ಅದರ ಇಕ್ಕೆಲಗಳಲ್ಲೂ ರಕ್ಷಣಾ ಕೊಠಡಿಗಳಿವೆ.

ಕವಲೇದುರ್ಗ ಎನ್ನುವುದು ಕಾವಲು ದುರ್ಗ ಎಂಬ ಹೆಸರಿನ ಅಪಭ್ರಂಶ. ಕರ್ನಾಟಕದ ಇತಿಹಾಸದಲ್ಲಿ ನಾಗರಖಂಡ ಬನವಾಸಿ ನಾಡೆಂದು ಖ್ಯಾತಿಗೊಂಡಿದ್ದ ಮಲೆನಾಡು ಪ್ರದೇಶದ ಕವಲೇದುರ್ಗ ಒಂದು ಐತಿಹಾಸಿಕ ತಾಣ. ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗ, ಭುವನಗಿರಿ ದುರ್ಗ ಸಂಸ್ಥಾನವಾಗಿ ಮಾರ್ಪಟ್ಟ ಹಿನ್ನಲೆಯ ಹಿಂದೆ ಯುದ್ಧ ನಡೆದಿದೆ. ಮಲ್ಲವರು ಮೊದಲು ಸಾಗರದ ಸಮೀಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ(ನಗರ) ಕೋಟೆಕೊತ್ತಲ ನಿರ್ಮಿಸಿ ರಾಜ್ಯಭಾರ ಮಾಡುತ್ತಿದ್ದರು. ಆಗ ಕವಲೇದುರ್ಗದ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾಧೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂದು ಹೆಸರಿಟ್ಟು ಆಳ್ವಿಕೆ ನಡೆಸಿದರು. ಮಲ್ಲವ ವಂಶದಲ್ಲಿ ಪ್ರಖ್ಯಾತರಾದವರೆಂದರೆ, ಶಿವಪ್ಪ ನಾಯಕ,ರಾಣಿ ಚೆನ್ನಮ್ಮಾಜಿ ಮತ್ತು ರಾಣಿ ವೀರಮ್ಮಾಜಿ. ಛತ್ರಪತಿ ಶಿವಾಜಿ ಮಹಾಹಾರಾಜರ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿದ್ದು ಕವಲೇದುರ್ಗ ಸಂಸ್ಥಾನ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಇದೇ ವಿಷಯವಾಗಿ ಮೊಘಲ್ ದೊರೆ ಔರಂಗಜೇಬನೊಂದಿಗೆ ಯುದ್ಧಮಾಡಿ ಗೆದ್ದ ಕೀರ್ತಿ ರಾಣಿ ಚೆನ್ನಮ್ಮಾಜಿಯವರಿಗೆ ಸಂದಿದೆ. 18ನೇ ಶತಮಾನದಲ್ಲಿ ಮೈಸೂರು ರಾಜ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನರ ದಾಳಿಗೆ ಗುರಿಯಾಗಿ ಕವಲೇದುರ್ಗ ಸಾಕಷ್ಟು ನಾಶವಾಯಿತು.

ಈ ಕೋಟೆಯನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಯಿತು. ನಂತರ 14ನೇ ಶತಮಾನದಲ್ಲಿ ಚೆಲುವರಂಗಪ್ಪನಿಂದ ನವೀಕರಿಸಲ್ಪಟ್ಟಿತು. ಇದು ವಿಜಯಯನಗರ ಅರಸರ ಸಾಮಂತರಾಗಿದ್ದು, ಅದರ ಪತನದ ನಂತರ ಸ್ವತಂತ್ರರಾದ ಕೆಳದಿಯ ನಾಯಕರ ಭದ್ರಕೋಟೆಯಾಗಿತ್ತು. ವೆಂಕಟಪ್ಪ ನಾಯಕನು(ಕ್ರಿ.ಶ. 1582-1629) ಇಲ್ಲಿ ಒಂದು ಅರಮನೆಯನ್ನು ಕಟ್ಟಿ ಅದನ್ನು ಒಂದು ಅಗ್ರಹಾರವನ್ನಾಗಿಸಿದ. ಮತ್ತು ಮತ್ತಿನ ಮಠ ಎಂಬ ಶೃಂಗೇರಿ ಮಠದ ಉಪಮಠ,ಒಂದು ಖಜಾನೆ, ಒಂದು ಕಣಜ, ಆನೆಗಳಿಗಾಗಿ ಗಜಶಾಲೆ, ಕುದುರೆಗಳಿಗಾಗಿ ಅಶ್ವಶಾಲೆ ಮತ್ತು ಕೊಳಗಳನ್ನು ನಿರ್ಮಿಸಿದನು.

ಕೋಟೆಯ ಮದ್ಯದಲ್ಲಿ ದೇವಾಲಯಗಳು, ಒಂದು ಪಾಳುಬಿದ್ದ ಅರಮನೆ ಹಾಗೂ ಇತರ ರಚನೆಗಳಿವೆ. ದುರ್ಗದ ತುತ್ತತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ಎಂಬ ಸಣ್ಣ ದೇವಸ್ಥಾನವಿದೆ. ದೇವಸ್ಥಾನವು ಗರ್ಭಗೃಹವನ್ನು ಹೊಂದಿದ್ದು ಎದುರಿಗೆ ಒಂದು ನಂದಿಮಂಟಪ ಮತ್ತು ಮುಖಮಂಟಪವಿದೆ. ಸೂರ್ಯಾಸ್ತದ ಸಮಯದಲ್ಲಿ ಇಲ್ಲಿಂದ ಪಶ್ಚಿಮ ಕ್ಷಿತಿಜದಲ್ಲಿ ಮುಳುಗುವ ಸೂರ್ಯನ ಸುಂದರ ನೋಟ ಕಾಣಸಿಗುತ್ತದೆ ಆದರೆ ನಾವು ಹೋದ ದಿನ ಸುರಿವ ಮಳೆಗೆ ಮುಸುಕಿದ ಮಂಜಿಗೆ ಸೂರ್ಯನ ಒಂದು ಬಿಸಿಲು ಕೋಲು ಸಹ ತಾಕುತ್ತಿರಲಿಲ್ಲ. ಕೋಟೆ ಒಳಗಿರುವ ಅರಮನೆಯ ಜಾಗದಲ್ಲಿ ದೊಡ್ಡ ಅಡಿಪಾಯ ಕಂಡುಬರುತ್ತದೆ. ಇತ್ತೀಚಿನ ಉತ್ಖನನದಿಂದ, ಪರಸ್ಪರ ಹೊಂದಿಕೊಂಡಿರುವ ಕೊಠಡಿಗಳು, ವಿಶಾಲವಾದ ಕಂಬದ ಜಗುಲಿ, ಪೂಜಾಗೃಹ,ಅಡಿಗೆ ಕೋಣೆ ಮತ್ತು ಅದರಲ್ಲಿರುವ ಕಲ್ಲಿನ ಐದು ಉರಿಕದ(ಬರ್ನರ್)ಒಲೆ, ಕಲ್ಲಿನ ವೇದಿಕೆಯಿರುವ ಸ್ನಾನದ ಕೋಣೆ, ಉತ್ತಮ ನೀರು ಸರಬರಾಜು ವ್ಯವಸ್ಥೆ, ಒಂದು ವಿಶಾಲವಾದ ಒಳ ಪ್ರಾಂಗಣ ನಂತರ ಮೆಟ್ಟಿಲಿನಿಂದ ಕೂಡಿದ ಒಂದು ಕೊಳ ಇವುಗಳಿಂದ ಕೂಡಿದ ಅರಮನೆಯ ವಾಸ್ತುಶಿಲ್ಪದ ಒಳನೋಟ ಕಾಣಸಿಗುತ್ತದೆ.

ದಟ್ಟ ಅರಣ್ಯದ ನಟ್ಟ ನಡುವೆ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಅರಮನೆ ಕಲ್ಲು ಕಂಬಗಳ ಆಸರೆ ಹೊಂದಿದೆ. ಅರಮನೆಗೀಗ ಆಕಾಶವೇ ಛಾವಣಿ. ಕಂಬಗಳು ಮತ್ತು ಮಣ್ಣಿನ ಗೋಡೆಗಳು ಮಾತ್ರ ಉಳಿದಿವೆ. ಇತಿಹಾಸ ಕೆದಕಿದಂತೆ ಇಡೀ ಕೋಟೆಯ ಪಕ್ಷಿನೋಟವನ್ನು ಅವಲೋಕಿಸಿದರೆ ಶಿಖರೇಶ್ವರ ದೇವಾಲಯವೇ ಈಗ ಕೋಟೆಯ ಮುಖ್ಯ ನೋಡುಗರ ಕೇಂದ್ರಬಿಂದುವಾಗಿದೆ. ಪರ್ವತದ ತುದಿಯಲ್ಲಿಯೂ ಒಂದು ಶಿವ ದೇವಾಲಯವಿದ್ದು ಅಲ್ಲಿಂದ ಶಿಖರೇಶ್ವರ ದೇವಸ್ಥಾನದ ಪಕ್ಷಿನೋಟ ಮತ್ತು ಉದ್ದಕ್ಕೂ ಕಾಣುವ ಕೋಟೆಯ ಆವರಣದ ಜೊತೆ ಜೊತೆಗೆ ಕಿಲದ ರಚನೆ ಚೆಂದವಾಗಿ. ಕಣ್ತುಂಬಿಕೊಳ್ಳಬಹುದು. ಶಿಖರೇಶ್ವರ ದೇವಾಲಯದ ಒಳಗಡೆ ಮತ್ತೊಂದು ಸಣ್ಣ ಗರ್ಭ ದೇವಾಲಯವಿದ್ದು ಇದು ಅನೇಕಾನೇಕ ಕಲ್ಲು ಸುರುಳಿ ಬಳ್ಳಿಗಳಿಂದಾವೃತವಾದ ಶಿಲ್ಪಕಲೆಯಿಂದ ಸಮೃದ್ಧವಾಗಿದೆ. ಕೋಟೆಯ ಒಳಾಂಗಣದಲ್ಲಿ ಶಾರ್ದೂಲ ವಿಗ್ರಹ ಭಗ್ನಗೊಂಡ ನಂದಿ ಕೋಟೆ ಗೋಡೆಯ ಮೇಲಿರುವ ಮಂಗನ ಕೆತ್ತನೆ, ಭಗ್ನಗೊಂಡ ನೀರಿನ ಬಾನಿ, ಏಳು ಹೆಡೆಯ ಸರ್ಪದ ವಿಗ್ರಹ ಕೆತ್ತನೆ, ಈಜು ಕೊಳ, ಶಿವಲಿಂಗ ಹೀಗೆ ಎಲ್ಲವೂ ಕಾಣಬಹುದು.

ಭುವನಗಿರಿ ದುರ್ಗ, ಕೌಲೇದುರ್ಗ ಎಂದು ಕರೆಯಲ್ಪಡುವ ಕವಲೇದುರ್ಗ, ಗತ ಕಾಲದ ಇತಿಹಾಸವನ್ನು ಕೆದಕಿ ನಮ್ಮ ಪೀಳಿಗೆಗೆ ಒಪ್ಪಿಸಲು ಇರುವ ಕುರುಹು. ಅದನ್ನು ನಾವು ಇನ್ನೂ ತುಂಬಾ ಜಾಗರುಕತೆಯಿಂದ ಕಾಯ್ದು ಕಾಪಾಡಿ ಕಾಪಿಟ್ಟುಕೊಳ್ಳಬೇಕಾದ ತುರ್ತು ನಮಗಿದೆ. ಹಸಿರುಂಡ ಕಣ್ಣು ದಣಿಯಲಿಲ್ಲ ಕತ್ತಲೂ ಮಲೆನಾಡನ್ನು ಆಕ್ರಮಿಸುವುದರಲ್ಲಿತ್ತು. ಸಣ್ಣಗೆ ಹೆಜ್ಜೆ ಕೊಟೆಯ ಕೆಳಮುಖವಾದವು. ಕೋಟೆಯ ಬಾಗಿಲಿಗೆ ಬಂದಾಗ ಇತಿಹಾಸದಲ್ಲಿ ಈ ಕೋಟೆಯ ಪಾತ್ರ ಎಲ್ಲವೂ ಕಣ್ಮುಂದೆ ಬಂದಂತಾಯಿತು. ಮತ್ತದೆ ಗೂಡಂಗಡಿಗೆ ಬಂದು ಚಹಾ ಕುಡಿದು ಬೈಕ್ ತಿರುಗಿಸಿ ಕೋಟೆಯ ನೆನಪುಗಳನ್ನೆ ಮೆಲುಕು ಹಾಕುತ್ತಾ ನಮ್ಮ ಪಯಣ ಮುಂದಿನ ಗಮ್ಯೆದೆಡೆಗೆ ಸಾಗಿತು.

***

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...