ಕವಿತೆ ರಚನೆ ಒಂದು ಕಲೆ : ಅಜಿತ್ ಹರೀಶಿ ಸೊರಬ


"ಸುರೇಶ ಅವರ ಕವಿತೆಗಳನ್ನು ಸಂವೇದನಾತ್ಮಕ, ಹಾಗೂ ವಾಸ್ತವಿಕ ಎರಡೂ ನೆಲೆಗಟ್ಟಿನಲ್ಲಿ ನಾನು ನೋಡುತ್ತೇನೆ. ಉದಾಹರಣೆಗೆ “ಹೊಸ ಮನ್ವಂತರ”ಕವಿತೆ ಸಂವೇದನಾತ್ಮಕ ಮತ್ತು ವಾಸ್ತವಿಕ ವ್ಯವಹಾರಗಳ ಸಮಾಗಮದಂತಿದೆ. ಇಲ್ಲಿ ಕವಿ ಯುಗಾದಿ ಹಬ್ಬದೊಂದಿಗಿನ ಭಾವನಾತ್ಮಕ ಆಯಾಮವನ್ನು ಪ್ರಕಟಪಡಿಸುತ್ತಲೇ, ಜಗದಲ್ಲಿ ಎಲ್ಲ ರೀತಿಯಿಂದಲೂ ಬದಲಾವಣೆ ಬರಲೆಂದು ಅಪೇಕ್ಷಿಸುತ್ತ ಬರೆಯುತ್ತಾರೆ" ಎನ್ನುತ್ತಾರೆ ಲೇಖಕ ಅಜಿತ್ ಹರೀಶಿ ಸೊರಬ. ಅವರು ಲೇಖಕ ಸುರೇಶ್‌ಎನ್‌ ಮಲ್ಲಿಗೆಮನೆ ಅವರ ‘ಜುಮುಕಿ ಹೂ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

ಕವಿತೆಯನ್ನು ರಚಿಸುವುದು ಒಂದು ಕಲೆ. ಕವಿತೆಯು ಸಾಹಿತ್ಯದ ಒಂದು ಪ್ರಕಾರ ಎಂಬುದನ್ನೆಲ್ಲ ಬದಿಗಿರಿಸಿ ನೋಡಿದರೆ ಅದೊಂದು ಭಾವಾಭಿವ್ಯಕ್ತಿ. ಭಾವನೆ, ಸಂವೇದನೆಗಳು ಸ್ಫುರಿಸಿದಂತೆಲ್ಲ ಕವಿತೆಯೇ ತನ್ನನ್ನು ತಾನು ಬರೆಸಿಕೊಳ್ಳುತ್ತದೆ. ಇದೇ ಸೃಜನಶೀಲ ಸಾಹಿತ್ಯದ ಶೃಂಗವೂ ಹೌದು. ಹುಟ್ಟಿದ ಭಾವಗಳನ್ನು ಅಕ್ಷರಗಳಲ್ಲಿ ಕವಿಯು ಕಟ್ಟುತ್ತಾನೆ. ಒಲಿದು ಬಂದ ಕವಿತೆಯನ್ನು ವಿವಿಧ ಅಲಂಕಾರಿಕ ಶಬ್ದಗಳಿಂದ ಸಿಂಗರಿಸಿದರೂ ಚೆಂದ, ಹೆಚ್ಚು ಸಿಂಗರಿಸದೇ ಅದು ಇರುವಂತೆಯೇ ಸಹಜವಾಗಿ ಇಟ್ಟರೂ ಶ್ರೇಷ್ಠವೇ ಆದೀತು. ಕವಿತೆಯಿಂದ ಓದುಗನಲ್ಲಿ ರಸ ಸ್ಫುರಣವಾಗುವುದು ಆದ್ಯ ಮತ್ತು ಕವಿತೆ ಬಲವಂತದ ಕ್ರಿಯೆಯಾಗದೇ ಸಹಜ ಪ್ರಕ್ರಿಯೆಯಾಗುವುದು ಮುಖ್ಯ. ಹಾಗೇ ಅಂತರಂಗದಲ್ಲಿ ಸಹಜವಾಗಿ ಹೊಮ್ಮಿದ ಭಾವತೀವ್ರತೆ, ಅನುಭೂತಿಗಳನ್ನು ಅಷ್ಟೇ ಸಹಜವಾಗಿ ಕವಿತೆಯಾಗಿಸಿದ್ದಾರೆ ಸುರೇಶ ಮಲ್ಲಿಗೆಮನೆಯವರು. ಒಟ್ಟಾರೆಯಾಗಿ ನೋಡಿದಾಗ ಇಲ್ಲಿರುವ ಬಹುತೇಕ ಕವಿತೆಯ ವಸ್ತುಗಳು ತೀರಾ ಹೊಸದಲ್ಲವಾದರೂ, ಪ್ರಕೃತಿ, ಮೌನ, ವಿರಹ, ಪ್ರೀತಿ, ಹಬ್ಬಗಳು, ಹುಟ್ಟೂರು- ಇಂತಹ ವಿಷಯಗಳು ಎಂದೂ ಹಳತಾಗದ ನಿತ್ಯನೂತನ ಭಾವಗಳಷ್ಟೇ. ಹಾಗಾಗಿ ಈ ಕವಿತೆಗಳು ಈಗಾಗಲೇ ಬಂದ ನಿಸರ್ಗದ ಕವಿತೆಗಳಿಗಿಂತ ಹೊಸದಾದ ನಾವೀನ್ಯತೆಯ ಸಾಲಿಗೆ ಸೇರ್ಪಡೆ ಎನ್ನಬಹುದು. ಇದು ಸಾಹಿತ್ಯದ ನಿರಂತರತೆಗೆ ಸಾಕ್ಷಿ ಕೂಡ. ಇಲ್ಲಿರುವ ನವಿರುತನದಿಂದ ಸಂಕಲನಕ್ಕೆ ಒಂದು ವಿಶಿಷ್ಟತೆ ದೊರಕಿದೆ. ಅಲ್ಲದೇ, ವಸ್ತು - ವಿಷಯ ಏನೇ ಇರಲಿ, ಪ್ರತಿ ಕವಿತೆಗೂ ಅದರದೇ ಆದ ಅನನ್ಯತೆಯು ಇರುತ್ತದೆ ಎಂಬುದೂ ಅಷ್ಟೇ ನಿಜ.

ಸುರೇಶ ಅವರ ಕವಿತೆಗಳನ್ನು ಸಂವೇದನಾತ್ಮಕ, ಹಾಗೂ ವಾಸ್ತವಿಕ ಎರಡೂ ನೆಲೆಗಟ್ಟಿನಲ್ಲಿ ನಾನು ನೋಡುತ್ತೇನೆ. ಕೆಲವು ಸಂವೇದನಾತ್ಮಕವಾಗಿದ್ದರೆ, ಕೆಲವು ವಾಸ್ತವಿಕ. ಇನ್ನು ಕೆಲವು ಎರಡೂ ಆಯಾಮಗಳಿಂದ ದಕ್ಕಬಲ್ಲಂತವು. ಉದಾಹರಣೆಗೆ “ಹೊಸ ಮನ್ವಂತರ”ಕವಿತೆ ಸಂವೇದನಾತ್ಮಕ ಮತ್ತು ವಾಸ್ತವಿಕ ವ್ಯವಹಾರಗಳ ಸಮಾಗಮದಂತಿದೆ. ಇಲ್ಲಿ ಕವಿ ಯುಗಾದಿ ಹಬ್ಬದೊಂದಿಗಿನ ಭಾವನಾತ್ಮಕ ಆಯಾಮವನ್ನು ಪ್ರಕಟಪಡಿಸುತ್ತಲೇ, ಜಗದಲ್ಲಿ ಎಲ್ಲ ರೀತಿಯಿಂದಲೂ ಬದಲಾವಣೆ ಬರಲೆಂದು ಅಪೇಕ್ಷಿಸುತ್ತ ಬರೆಯುತ್ತಾರೆ. ಅಲ್ಲಲ್ಲಿ ಕವಿಯು ಕಲ್ಪನೆಯ ಜಗತ್ತಿನಲ್ಲಿ ವಿಹರಿಸುತ್ತಾ ಕಾಣ್ಕೆಯಾಗಿಸುವ ವಿಹಂಗಮ ನೋಟವನ್ನು ಓದುಗರು ಆಸ್ವಾದಿಸಬಹುದಾಗಿದೆ. ಸುರೇಶ್ ಅವರು ಬಳಸುವ ಪ್ರಾಸ, ಅಲಂಕಾರ, ಪ್ರತಿಮೆ ಮತ್ತು ನುಡಿಮಿಶ್ರಣಗಳು ಗಮನಾರ್ಹವಾಗಿವೆ. ಕಾವ್ಯ ಪರಿಕರಗಳನ್ನು ಬಳಸುವಲ್ಲಿ ಈ ಕವಿಗೆ ಶ್ರದ್ಧೆಯಿದೆ.

ಬರುತಿದೆ ಯುಗಾದಿ
ಮತೀಯ ಜಗಳಗಳ
ಕಿತ್ತೊಗೆಯಲು; ಜಾತಿ
ಧರ್ಮದ ಹೆಸರಿನಲಿ..!

ನವವಸಂತ ಕಾಲಿರಿಸಿದೆ
ಪಕ್ಷಭೇದದ ಹೊಲಸು
ರಾಜಕೀಯಕೆ ಇತಿಯನಿಟ್ಟು
ಎಲ್ಲರೊಂದಾಗಲು...!

ಇಲ್ಲಿ ರಾಜಕೀಯ, ಜಾತಿ ಧರ್ಮಗಳ ದೆಸೆಯಿಂದಾದ ಮನಸ್ತಾಪಗಳನ್ನು ಕೊನೆಗೊಳಿಸುವ ಆಕಾಂಕ್ಷೆ ಇದೆ.

ಒಡೆದ ಮನಸುಗಳ ಒಂದಾಗಿಸಿ
ನೊಂದ ಹೃದಯಕೆ ಮುಲಾಮಾಗಿ
ಮುದುಡಿದ ಹೂಪಕಳೆಯ ಅರಳಿಸಿ
ಹೊಸ ಮನ್ವಂತರ ಸೃಷ್ಟಿಸಿದೆ ಯುಗಾದಿ..!

ಈ ಸಾಲುಗಳಲ್ಲಿ ನೊಂದ ಮನಸುಗಳು ಹೊಸ ಉತ್ಸಾಹ ಪಡೆದು ಅರಳಲಿ ಎಂಬ ಮಾನವೀಯ ಹಂಬಲವಿದೆ.

ಅದೇ ಕವಿತೆಯ ಮುಂದಿನ ಸಾಲುಗಳು…
ಜೀವಸಂಕುಲದಂಕುರ ಮೊಳೆತು
ತಾಜಾತನದಿ ಚಿಗುರೊಡೆಸಿದಂತೆ
ಹೊಸ ಬದುಕು ಭಾವ ವಿಚಾರವ
ಹೊತ್ತು ತರಲೆಮಗೆ ಯುಗಾದಿಯು..!

ಪ್ರಕೃತಿಯು ಹೇಗೆ ವಸಂತಕ್ಕೆ ತೆರೆದುಕೊಳ್ಳುತ್ತಾ, ಹೊಸ ರೂಪ ತಳೆಯುವುದೋ ಹಾಗೆ ಎಲ್ಲ ರೀತಿಯಿಂದಲೂ ನಿಜಾರ್ಥದಲ್ಲಿ ಯುಗಾದಿ ಹೊಸ ಯುಗಕ್ಕೆ, ಹೊಸ ಜಗಕ್ಕೆ ನಾಂದಿಯಾಗಲಿ. ಹಬ್ಬವೆಂಬುದು ತೋರಿಕೆಗೆ ಮಾತ್ರವಲ್ಲದೇ, ಸಮಾಜದಲ್ಲೂ ಬದಲಾವಣೆಯ ಹಬ್ಬವಾಗಲಿ ಎಂಬ ಸದಾಶಯವನ್ನು ಇಲ್ಲಿ ವ್ಯಕ್ತಗೊಳಿಸುತ್ತಾರೆ.

ಮನುಜ ಮತ, ಜಾತಿ ಎಲ್ಲಿಹುದು?, ಸಸ್ಯಾಹಾರಿ ಮಾಂಸಾಹಾರಿ ಇಂಥ ಕವಿತೆಗಳಲ್ಲಿ ಕವಿ ನಯವಾಗಿ ಬಂಡಾಯದ ಹಾದಿ ತುಳಿದಿದ್ದಾರೆ. ಜಾತೀಯತೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಸಂವೇದನೆಯುಳ್ಳ ಕವಿಮನಸಿಗೆ ಇಂತಹ ಕೆಲವು ವಿಚಾರಗಳಲ್ಲಿ ಆಕ್ಷೇಪವಿರುವುದು ಸಹಜವೇ ಮತ್ತು ಅವಶ್ಯಕವೂ ಸಹ.

“ಹೊತ್ತಾರೆಯ ಸೊಗಡು”ಮತ್ತು “ಹೊಂಬಿಸಿಲು” ಕವನಗಳು ಮತ್ತು ಶೀರ್ಷಿಕೆ ಕವನ 'ಜುಮುಕಿ ಹೂವು' ಕವಿಯ ಕಲ್ಪನಾ ಶಕ್ತಿ ಮತ್ತು ವರ್ಣನೆಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ. 'ಶೀರ್ಷಿಕೆ' ಕವಿತೆಯಲ್ಲಿ ಬರುವ ಸಾಲುಗಳು

'ಬೆದೆಯ ಕಡಲಿನ
ಇಕ್ಷು ಒಡಲವಳು,
ಸುಷುಪ್ತಿಯ ರಸೋನಿದ್ರೆ
ಉಣಿಸುವವಳು'

ಇಲ್ಲಿ ಕವಿಯು ವರ್ಣನೆಯ ಉತ್ತುಂಗವನ್ನು ತಲುಪಿದಂತೆನಿಸುತ್ತದೆ.

“ಕೊಟ್ಟಿಗೆಯ ಹಾಲ್ಗೆಚ್ಚಲಿನ ದೇಸಿಹಸುವು
ಅರೆಗಣ್ಣಲಿ ಹುಲ್ಲ ಮೆಲುಕಿ ಕರುವ ನೆಕ್ಕುತ
ನಿಟ್ಟಿಸುತಲಿದೆ ದಣಪೆಯ ದಾಟಿ ಮೇಯಲು..!” (ಹೊತ್ತಾರೆಯ ಸೊಗಡು)
ಈ ವಾಕ್ಯಗಳು ನಮ್ಮ ಕಣ್ಣ ಮುಂದೆ ಒಂದು ಸುಂದರವಾದ ಚಿತ್ರವನ್ನು ಸೃಷ್ಟಿಸುತ್ತವೆ.

“ಎಳೆಬಿಸಿಲ ಜೇನ್ ಕಿರಣಗಳು
ಮಲೆಯ ಮುಕುಟಕೆ ತೊಡಿಸಿದೆ
ಹೊನ್ನಕಳಶದ ಶಿರೋಭೂಷಣವ..!”
(ಹೊಂಬಿಸಿಲು ಕವನ)
ಹೊಂಬಿಸಿಲನ್ನು ಜೇನಿನ ಕಿರಣಗಳು ಎಂದು ಕರೆದಿರುವಲ್ಲಿ ಕವಿಯ ಕೌಶಲ್ಯವು ಸ್ಪಷ್ಟವಾಗುತ್ತದೆ. ಮುಂದುವರೆದು ಕವಿ ಹೇಳುತ್ತಾರೆ,

“ಓ.. ಹೊಂಬಿಸಿಲೇ ಕೃಪೆದೋರು,
ಬಂದಿಲ್ಲಿ ಸಂಭವಿಸಿಬಿಡು; ಜಗಕೆ
ದೃಶ್ಯಕಾವ್ಯವನೊಮ್ಮೆ ಸೃಷ್ಟಿಸಿಬಿಡು..!”

ಇಲ್ಲಿ ನನಗೆ ಅನ್ನಿಸುವಂತೆ ಹೊಂಬಿಸಿಲ ಅನುಭವ ದೇಹಕ್ಕೂ, ಮನಸ್ಸಿಗೂ ಹಿತವಾದುದು. ಜೀವಕ್ಕೆ ಚೈತನ್ಯವನ್ನು ತುಂಬುವಂತದ್ದು. ಇಂಥ ಹೊಂಬಿಸಿಲ ಬೆಚ್ಚನೆಯ ಸೊಬಗು ಜಗದ ತುಂಬೆಲ್ಲ ಹಬ್ಬಲಿ ಎಂದು ಕವಿ ಹೇಳುವಲ್ಲಿ ಹೊಂಬಿಸಿಲಿನಂತ ಒಂದು ಚೈತನ್ಯವು ಜಗವನ್ನು ಉಲ್ಲಾಸಪೂರ್ಣವಾಗಿಡಲಿ ಎಂಬ ಸದಾಶಯ ಕೂಡ ಧ್ವನಿಸುತ್ತದೆ.

ಬಹಳಷ್ಟು ಕವನಗಳಲ್ಲಿ ಸುರೇಶರು ಪ್ರಕೃತಿ, ಪರಿಸರ ಅದರಲ್ಲೂ ವಿಶೇಷವಾಗಿ ಹುಟ್ಟೂರು - ಮಲೆನಾಡಿನ ಪರಿಸರವನ್ನು ಧೇನಿಸುತ್ತಾರೆ. ನಾನು ಗಮನಿಸಿದಂತೆ ಇಂಥ ಕವಿತೆಗಳು ಪದ ಸಂಪದ್ಭರಿತವಾಗಿವೆ ಮತ್ತು ಅಲ್ಲಿ ಭಾವನೆಗಳು ಅಂತ್ಯಂತ ಸಹಜವಾಗಿ ಹರಿದಿವೆ. ನನ್ನಪ್ಪ, ಜಾತ್ರೆ, ತೆಪ್ಪೋತ್ಸವ, ಅಪ್ಪನಿಲ್ಲದ ಊರು, ಋಣ ಭಾರ ಕವಿತೆಗಳಲ್ಲಿ ಹೆತ್ತವರು ಮತ್ತು ಊರೆಂಬ ಬೇರಿಗೆ ಅಂಟಿದ ಭಾವನೆಗಳು ಪ್ರಕಟಗೊಂಡಿವೆ. ಇವು ವಾಸ್ತವದಲ್ಲಿ ಪದಗಳಲ್ಲಿ ಹಿಡಿದಿಡಲು ಸಾಧ್ಯವಾಗದಷ್ಟು ಆಳವಾದ ಭಾವನೆಗಳು. ಹಾಗಾಗಿ ಅವುಗಳ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲವೆಂದು ಭಾವಿಸುತ್ತೇನೆ. ಉಳಿದಂತೆ ಪ್ರೀತಿ, ವಿರಹ,ಮೌನ, ಮಳೆ ಇತ್ಯಾದಿ ಪ್ರತಿಯೊಬ್ಬ ಕವಿಯೂ ಸ್ಫೂರ್ತಿ ಪಡೆದು, ಬರೆದು, ಸಂಭ್ರಮಿಸುವ ವಿಷಯಗಳು. ಅಂತ ನವಿರಾದ ಕವನಗಳೂ ಇಲ್ಲಿವೆ. ದಿಪೋಳಿಗೆ, ಭೂಮಿ ಹುಣ್ಣಿಮೆ, ಸಂಕ್ರಾಂತಿ ಕವನಗಳಲ್ಲಿ ಮಲೆನಾಡ ಹಬ್ಬಗಳ ಝಲಕು, ಮೆಲುಕು ಇವೆ. 'ಕಾಲಾಯ ತಸ್ಮೈ ನಮಃ' ಕವಿತೆಯಲ್ಲಿ ಜಗತ್ತು ಧಾವಂತದಿಂದ ಬದಲಾಗುತ್ತಿರುವುದರ ಬಗ್ಗೆ ಕಳವಳ ಇದೆ.

ನನಗೆ ಈ ಸಂಕಲನದಲ್ಲಿ ಹೆಚ್ಚು ಇಷ್ಟವಾದ ಕವನ “ದೇವರೆಲ್ಲಿದ್ದಾನೆ?.”

“ದೇವರ ಮುಂದೆ ಬೇಡುವ ಕರಗಳಿಗಿಂತ, ಸಹಾಯ ಹಸ್ತದ ಕರಗಳೇ ಶ್ರೇಷ್ಠ” ಎಂಬ ಕೊನೆಯ ನಾಲ್ಕು ಸಾಲುಗಳು ಇಡೀ ಪದ್ಯದ ವರ್ಣನೆಯನ್ನು ಹಿಡಿದಿಟ್ಟಿವೆ. ರಚನೆ ಸರಳವಿದ್ದರೂ, ಕವಿತೆಯ ವಸ್ತು ಹೆಚ್ಚು ಆಪ್ತವೆನಿಸುತ್ತದೆ.ಹೀಗೆ ಈ ಕವನಸಂಕಲನ ವೈವಿಧ್ಯಮಯ ಕವಿತೆಗಳ ಗುಚ್ಛವಾಗಿದೆ. ಸರಳ ಕವಿತೆಗಳೂ ಇವೆ. ಗಹನವಾದವೂ ಇವೆ. ಶಬ್ದಗಳಿಂದ ಸಿಂಗಾರಗೊಂಡು ಕಂಗೊಳಿಸುವ ಕವಿತೆಗಳೂ ಇವೆ, ಹೆಚ್ಚಿನ ಆಡಂಬರವಿಲ್ಲದೇ ಸಹಜವಾಗಿ ತಮ್ಮ ಮೂಲಸೌಂದರ್ಯವನ್ನು ತೋರುವ ಕವಿತೆಗಳೂ ಇವೆ. ಆದರೆ ಎಲ್ಲ ಕವಿತೆಗಳೂ ಓದುಗನ ಆಳಕ್ಕಿಳಿಯುವುದು ಖಚಿತ. ಸುರೇಶರು ಈ ಸಂಕಲನವನ್ನು “ಮಲೆನಾಡ ಮಲೆಮಗಳ ಕಿವಿಯೋಲೆ” ಎಂದಿದ್ದಾರೆ. ನಾನು ಇದು ಅವರ ಅಂತರಂಗದ ಓಲೆಯೂ (ಪತ್ರ) ಮತ್ತು ಜುಮುಕಿ ಹೂವೂ..ಹೌದು ಎನ್ನುತ್ತೇನೆ. ಸೂಕ್ಷ್ಮ, ಸಂವೇದನಾಶೀಲ ಶಿಕ್ಷಕರಾದ- ಮಲ್ಲಿಗೆ ಮನಸ್ಸಿನ- ಸುರೇಶ ಮಲ್ಲಿಗೆಮನೆಯವರು ಇನ್ನಷ್ಟು ಪ್ರಕಾರಗಳಲ್ಲಿ ಬರೆಯಲಿ, ಸಾಹಿತ್ಯ ಸೃಷ್ಟಿ ಅಕ್ಷಯವಾಗಲಿ ಎಂದು ಆಶಿಸುತ್ತೇನೆ.

- ಅಜಿತ್ ಹರೀಶಿ ಸೊರಬ

ಅಜಿತ್ ಹರೀಶಿ ಸೊರಬ ಅವರ ಲೇಖಕ ಪರಿಚಯಕ್ಕಾಗಿ

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...