ಕೊಂಡ ಹಾಯುವವಳು

Date: 24-08-2020

Location: ಬೆಂಗಳೂರು


ಕನ್ನಡ ಪ್ರಾಧ್ಯಾಪಕಿ ಹಾಗೂ ವಿಮರ್ಶಕರಾಗಿರುವ ಡಾ.ಎಂ.ಎಸ್‌. ಆಶಾದೇವಿ ಅವರು ಬರೆಯುವ ’ನೇಯ್ಗೆ’ ಅಂಕಣದಲ್ಲಿ ಮಹಿಳೆ- ಬದುಕು- ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳನ್ನು ಚರ್ಚಿಸಲಿದ್ದಾರೆ. ಈ ಬರೆಹದಲ್ಲಿ ಅವರು ಲಾಕ್‌ಡೌನ್‌ ಹಾಗೂ ಮಹಿಳೆಯರು ಎದುರಿಸಿದ ಸಂಕಟ-ಸಮಾಧಾನಗಳನ್ನು ಕಟ್ಟಿಕೊಟ್ಟಿದ್ದಾರೆ.

ಲೋಕದ ಕಾಳಜಿ ಮಾಡತಿನಂತಿ
ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ

ಎನ್ನುವ ಶಿಶುನಾಳ ಷರೀಫರ ಮಾತು ಈ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ. ಕೊರೋನಾದ ಈ ಬಿಕ್ಕಟ್ಟು ಮತ್ತು ಹೆಣ್ಣು ಮಕ್ಕಳ ಬಗ್ಗೆ ಬರೆದಷ್ಟೂ ಮುಗಿಯದು ಎನ್ನುವಷ್ಟು ಸಂಗತಿಗಳಿವೆ. ಅವುಗಳ ಬಗ್ಗೆ ಬೇಕಾದಷ್ಟು ಚರ್ಚೆಗಳೂ ಆಗುತ್ತಿವೆ. ದಿನ ಪತ್ರಿಕೆಗಳಲ್ಲಿ ಲಾಕ್ ಡೌನ್ ಸಮಯದ ಹೆಣ್ಣು ಮಕ್ಕಳ ಅನುಭವಗಳನ್ನು ದಿನವೂ ಪ್ರಜಾವಾಣಿಯಲ್ಲಿ ಪ್ರಕಟಿಸಲಾಗುತ್ತಿತ್ತು. ಬಹುತೇಕ ಹೆಣ್ಣು ಮಕ್ಕಳು , ಇದು ಜೀವನದ ಅಪೂರ್ವ ಅವಕಾಶ, ಕುಟುಂಬವಿಡೀ ಒಟ್ಟಿಗೇ ಇರುವುದು, ಕಾಲ ಕಳೆಯುವುದರ ಬಗ್ಗೆ ಹೇಳುತ್ತಿದ್ದರು, ಎಲ್ಲೋ ಕೆಲವರು ಮಾತ್ರ ಕೆಲಸ ಜಾಸ್ತಿ ಆಗಿರುವುದರ ಬಗ್ಗೆ ಪ್ರಸ್ತಾಪ ಮಾಡಿದರೆ, ಬೆರಳೆಣಿಕೆಯ ಹೆಣ್ಣು ಮಕ್ಕಳು ಮಾತ್ರ, ಅಡುಗೆ ಮನೆಯಿಂದ ಹೊರ ಬರುವುದೇ ಕಷ್ಟವಾಗಿದೆ. ಮನೆಯಲ್ಲಿದ್ದೀವಿ ಅಂತ ಎಲ್ಲರೂ ಸ್ಪೆಷಲ್ ಅಡುಗೆಗಳನ್ನೇ ಕೇಳುತ್ತಾರೆ ಎಂದು, ಮಾಡೋದೂ ಕಷ್ಟ, ಬಿಡೋದೂ ಕಷ್ಟ ಎಂದು ಹೇಳಿದ್ದರು.

ಹೌದು, ಗಂಡಸರ ಅಡುಗೆ ಮನೆ ಪ್ರವೇಶವಾಗಿದೆ, ಸಹಾಯ ಮಾಡುತ್ತಾರೆ ನಿಜ. ಬೇಕಾದ ಪದಾರ್ಥಗಳು, ಆರ್ಡರ್ ಮಾಡಿದ ಅರ್ಧ ಘಂಟೆಯಲ್ಲಿ ಮನೆ ಬಾಗಿಲಲ್ಲಿ ನಿಂತು ನಮ್ಮನ್ನು ಕರೆಯುತ್ತವೆ. ಅಡುಗೆ ಮನೆಯಿಂದ ಮುಕ್ತಿಯೂ ದೊರೆತಿದೆಯಲ್ಲವೆ ಎನ್ನುವ ಅಂಶವೂ ಇದೆ. ಇವತ್ತು ಅಡುಗೆ ಎನ್ನುವುದು ಹೆಚ್ಚಿನ ಸಮಯವನ್ನೇನೂ ಬೇಡುವುದಿಲ್ಲ ಎನ್ನುವುದನ್ನೂ ನಾವೆಲ್ಲರೂ ಒಪ್ಪಲೇಬೇಕು. ಆದರೆ, ಅದು ಅವರಿಗೆ ಆಯ್ಕೆಯಾಗಿರುವಂತೆ ಹೆಣ್ಣಿಗೆ ಇನ್ನೂ ಆಯ್ಕೆಯಾಗಿಲ್ಲ ಎನ್ನುವುದೇ ಪ್ರಶ್ನೆ. ಇದಕ್ಕೆ ನಾವು ಹೆಣ್ಣು ಮಕ್ಕಳೂ ಕಾರಣವೆ? ಅದು ಯಾಕೆ ನಾವು ಅಡುಗೆ ಮನೆಯೂ ಸೇರಿದಂತೆ ಎಲ್ಲವನ್ನೂ ಅತಿ ಎನ್ನುವ ಪ್ರಮಾಣದಲ್ಲಿ ಮೈಮೇಲೆ ಎಳೆದುಕೊಳ್ಳುತ್ತೇವೆ? ಇದು ಶಕ್ತಿಯೋ? ಮಿತಿಯೋ?

ಬಿಡಿ, ಅಡುಗೆ ಎನ್ನುವುದು ನೆಪ ಮಾತ್ರ.ಅಡುಗೆಯಿಂದ ಆರಂಭವಾಗುವ ಹೆಣ್ಣಿನ ಬಂಧ ಮತ್ತು ಬಂಧನ ಅನಂತವಾಗುತ್ತಲೇ ಹೋಗುವುದರ ಬಗೆ ಯಾವಾಗಲೂ ನನ್ನನ್ನು ಕಾಡುತ್ತದೆ. ಬಂಧನವೋ ಬಿಡುಗಡೆಯೋ ಎನ್ನುವುದೂ ಪ್ರಶ್ನೆಯೇ. ಅಯ್ಯೋ ಪಾಪ, ಶಿ ಈಸ್ ಎ ಹೌಸ್ ವೈಫ್, ಹೋಮ್ ಮೇಕರ್ ಎಂದು ಅವಳನ್ನು ಕರುಣೆಯಿಂದ ನೋಡಲು ಹೊರಟರೆ, ಅವಳೋ ತನ್ನದೇ ಅಂತರಂಗದ ಲೋಕಗಳನ್ನು ಯಾರ ಬಿಸಾತಿಲ್ಲದೆ ಸೃಷ್ಟಿಸಿಕೊಂಡು ನಮ್ಮನ್ನೇ ಕರುಣೆಯಿಂದ ನೋಡುವಷ್ಟು ಶಕ್ತಳಾಗಿ ಕಾಣಿಸುತ್ತಾಳೆ! ವಿದ್ಯಾವಂತಳಾಗಿದ್ದಾಳೆ, ಉದ್ಯೋಗಸ್ಥೆ, ಆರ್ಥಿಕವಾಗಿ ಸ್ವಾವಲಂಬಿ ಅಲ್ಲವೆ ಅಂದು ಕೊಂಡರೆ ಅವಳು ಬೇಕಾದ್ದು ಬೇಡವಾದ್ದು ಎಲ್ಲವನ್ನೂ ಕಟ್ಟಿಕೊಂಡು ಒದ್ದಾಡುತ್ತಿರುವ ಹೆಣ್ಣಾಗಿರುವ ಸಾಧ್ಯತೆಗಳೂ ಇರುತ್ತವೆ! ಈ ವಿಪರ್ಯಾಸಗಳನ್ನು ಕುರಿತು ನಾವು ಅಧ್ಯಯನಗಳನ್ನು , ಕೊನೆಯಿಲ್ಲದ ಚರ್ಚೆಗಳನ್ನು ಮಾಡುತ್ತಲೇ ಇರಬಹುದಾಗಲಿ ಇದರ ಬಗ್ಗೆ ಇನ್ನು ಮುಂದೆ ಶಬ್ದವಿಲ್ಲ ಎನ್ನುವಂತೆ ಅಖೈರಾಗಿ ತೀರ್ಪು ಕೊಡಲಾಗಲೀ, ಸಾದಾರಣೀಕರಣ ಮಾಡಲಾಗಲೀ ಸಾಧ್ಯವಿಲ್ಲ.

ಯಾಕೆ ಹೆಣ್ಣುಮಕ್ಕಳಿಗೆ ಮನೆಯನ್ನೇ ಲೋಕವೆಂದು ನೋಡಲು ಸಾಧ್ಯವಾಗುತ್ತದೆ? ಶರೀಫರು ಹೇಳುವ ಲೋಕದ ಕಾಳಜಿಯ ಅರ್ಥ, ಸೂಚನೆಗಳಿಗೂ ಹೆಣ್ಣಿನ ಲೋಕದ ಅರ್ಥ, ವ್ಯಾಪ್ತಿಗಳಿಗೂ ವ್ಯತ್ಯಾಸವಿದೆ ನಿಜ. ನಿನ್ನ ಲೋಕ ಯಾವುದೆಂದರೆ, ನನ್ನ ಕುಟುಂಬವೇ ನನ್ನ ಲೋಕ ಎಂದು ಅನೇಕ ಸಲ ನಾವು ಹೆಣ್ಣುಮಕ್ಕಳು ಭಾವುಕವಾಗಿ, ಸಾರ್ಥಕ ಭಾವದಲ್ಲಿ ಹೇಳುವುದೂ, ಅದನ್ನು ಲೋಕ ಗೌರವದಲ್ಲಿ , ಕೃತಜ್ಞತೆಯಲ್ಲಿ ಒಪ್ಪಿ ತಲೆಯಾಡಿಸುವುದು ಬದಲಾಗದ ವಿನ್ಯಾಸವಾಗಿದೆ. ಭಿನ್ನವಾದ, ರೂಢಿಯ ಮಾದರಿಗೆ ಹೊರತಾದ ಹೆಣ್ಣುಮಕ್ಕಳನ್ನು ಅದೆಷ್ಟು ಮೆಚ್ಚಿಕೊಂಡರೂ ಒಳಗೊಳಗೇ ಗಂಡಸರು ಇಂಥವರನ್ನೇ ಬಯಸುತ್ತಾರೆ ಎನ್ನುವುದು ಗುಟ್ಟೇನೂ ಅಲ್ಲ. ಲೇಖಕರೊಬ್ಬರು ಒಮ್ಮೆ ನನ್ನ ಹತ್ತಿರ ಹೇಳಿದ್ದೇನೆಂದರೆ, " ನೋಡಮ್ಮಾ ಸ್ತ್ರೀವಾದಿಗಳೇನಿದ್ದರೂ ಗೆಳತಿಯರಾಗೇ ಇರಬೇಕು, ಅವರನ್ನ ಮದುವೆಯಾಗೋಕ್ಕಾಗೋಲ್ಲ," ಮತ್ತೆ , ಹೆಂಡತಿ ಅಂದ್ರೆ ಹೇಗಪ್ಪಾ ಇರಬೇಕು ಅಂದ್ರೆ, "ಟಿಪಿಕಲ್ ಹೆಂಡತಿಯಾಗಿರಬೇಕು" ಅನ್ನುವ ಉತ್ತರ ಬಂತು. ಮತ್ತೆ ಅದೇ ಕೇಂದ್ರ, ಹೊರಟಿದ್ದಲ್ಲಿಗೇ ಬಂದಂತೆ. ಟಿಪಿಕಲ್ ಹೆಂಡತಿ ಅಂದ್ರೆ? ಬಿಡದೇ ಕೇಳಿದೆ, ಅಂದ್ರೆ, ಎಂದು ಆರಂಭವಾದ ಉತ್ತರ ತೊಡರುತ್ತಿತ್ತು, ಅಂದ್ರೆ, ’ಅನುಕೂಲ ಸತಿ’ಯಾಗಿರಬೇಕು ಅಂತಾನ? ಅಂತ ನಾನೇ ಸಹಾಯ ಮಾಡಿದೆ. ಕರೆಕ್ಟ್, ಎಕ್ಸಾಕ್ಟ್ಲಿ ಎಂದು ಉತ್ತರ ಮುಕ್ತಾಯವಾಯಿತು. ಬಿಡಪ್ಪಾ ಜಿ ಎಸ್ ಎಸ್ ವಾದಿ ನೀನು ಅಂದೆ. ಕಾಲೆಳಿ ಬೇಡ, ಏನು ಕರೆಕ್ಟ್ ಆಗಿ ಹೇಳಮ್ಮಾ, ಸ್ತ್ರೀವಾದಿ ಹತ್ತಿರ ಸಿಕ್ಕಾಕೊಂಡೆ ನೋಡು ಎಂದು ಗೊಣಗಿದ. ಏನಿಲ್ಲ ಬಿಡಪ್ಪಾ, ಹೊತ್ತಿಗೊತ್ತಿಗನ್ನ ಉಣಿಸಿ, ತಂದೆ ಮಕ್ಕಳ ತಬ್ಬಿದಾಕೆ, ಸ್ತ್ರೀ ಅಂದರೆ ಅಷ್ಟೆ ಸಾಕೆ ’ಇಷ್ಟಿದ್ದರೆ ಸಾಕಲ್ವೇನಪ್ಪಾ ಅಂದರೆ, ಹಂಗಲ್ಲಾ, ಅವಳಿಗೆ ಬೇಕಾದಷ್ಟು ಸ್ವಾತಂತ್ರ್ಯ ಕೊಟ್ಟಿದ್ದೀನಿ ಅಂದ. ಓ ತಾವು ಕೊಟ್ಟು, ಅವರು ತೊಗೊಂಡು ಏ ಬಿಡಿ, ತಾವು ಬಹಳ ಸುಧಾರಣಾವಾದಿಗಳು, ಸನ್ಮಾನ ಒಂದು ಬಾಕಿ ಅಂದದ್ದೇ, ಏನು ಮತಾಡಿದ್ರೂ ತಪ್ಪು ಕಂಡು ಹಿಡೀತೀಯಾ ನಿನ ಹತ್ರ ಮಾತಾಡೋಕೆ ಸಾಧ್ಯ ಇಲ್ಲ ಎಂದು ಮುಖ ಊದಿಸಿಕೊಂಡು ಹೊರಟೇ ಹೋದ.ಮತ್ತೊಮ್ಮೆ ಸಿಕ್ಕಾಗ ನಾನೇ ಹೇಳಿದೆ, ನೋಡು ಎರಡು ಜಿ ಎಸ್ ಎಸ್ ವಾದಗಳಿದ್ದಾವೆ ಹೆಣ್ಣಿನ ಬಗ್ಗೆ, ನೀನು ಸದ್ಯಕ್ಕೆ ಮೊದಲನೇ ಮಾದರಿಯಲ್ಲಿದ್ದೀಯಾ, ಎರಡನೆಯದಕ್ಕೆ ಬಾ ಅಂದು, ದಾಟಿ ಬಾ ನಿರ್ಭಯದ ನಿಲುವಿಗೆ ಅಂತ ಹೇಳ್ತಾರಲ್ಲ ಜಿ ಎಸ್ ಎಸ್ ಅದು ಎರಡನೆಯದ್ದು, ನಿನ್ನ ದೃಷ್ಟಿಕೋನಾನೂ ಹಾಗೇ ಬದಲಾಗಬೇಕು, ನೀನೊಬ್ಬ ಬರೆಹಗಾರ, ನೀನು ಇದೆಲ್ಲದರ ಬಗ್ಗೆ ಇನ್ನೂ ಸೂಕ್ಷ್ಮವಾಗಿರಬೇಕು, ಅದು ಬಿಟ್ಟು ಕೋಪ ಮಾಡ್ಕೊಳ್ಳೋದರಿಂದ ನೀನೊಬ್ಬ ಟಿಪಿಕಲ್ ಗಂಡಸು ಅನ್ನೋದನ್ನ ಮಾತ್ರ ಪ್ರೂವ್ ಮಾಡ್ತಾ ಇರ್ತೀಯಾ ಅಲ್ವಾ ಎಂದದ್ದಕ್ಕೆ ಇನ್ನೂ ತನಕ ಉತ್ತರ ಬಂದಿಲ್ಲ. ಹೆಣ್ಣಿನ ಬಗ್ಗೆ ಅಮಾನವೀಯವಾಗಿ ಮಾತನಾಡುವುದು, ನಡೆದುಕೊಳ್ಳುವುದು ಅದೆಷ್ಟು ಸಲೀಸು, ಹಕ್ಕಿನದು ಅನ್ನಿಸಿ ಬಿಡುತ್ತಲ್ಲ, ಅದು ಹೇಗೆ? ಇದೆಲ್ಲಕ್ಕಿಂತ ಅದು ಸಹಜಾತಿಸಹಜ ಅಂತ ಗಂಡು ಹೆಣ್ಣು ಇಬ್ಬರಿಗೂ ಅನ್ನಿಸಿಬಿಟ್ಟಿದೆ. ಆದ್ದರಿಂದಲೇ ಅದನ್ನ ಪ್ರಶ್ನೆ ಮಾಡೋದು ಅನಗತ್ಯ, ಅಧಿಕಪ್ರಸಂಗ, ಅತಿ , ಹುಚ್ಚು ಅಂತೆಲ್ಲಾ ಭಾಸವಾಗುತ್ತಾ ಹೋಗುತ್ತದೆ.

ಲಾಕ್ಡೌನ್ ನಿಂದ ಶುರುವಾದ ಮಾತು ಎಲ್ಲಿಂದ ಎಲ್ಲಿಗೋ ಹೋಯಿತು, ಲಾಕ್ಡೌನ್ ನ ಹಾಗೆಯೇ. ಲಾಕ್ಡೌನ್ ಒಂದು ರೀತೀಲಿ, ಬೋಧಿವೃಕ್ಷದ ಹಾಗೆ ಅನ್ನಿಸುತ್ತೆ. ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಅನೇಕ ಜ್ಞಾನೋದಯಗಳು ಆದವಲ್ಲ. ನಮ್ಮಂತ ಮಧ್ಯಮ ವರ್ಗದವರಿಗೆ ಆದ ಜ್ಞಾನೋದಯ ಅಂದರೆ, ಏನೇ ಆದರೂ ನಾವು ಮಿಕ್ಕರಿಗಿಂತ ಖಂಡಿತ ಸೇಫ್ ಅನ್ನೋದು ಇನ್ನೇನಲ್ಲದಿದ್ದರೂ ಇರೋದಿಕ್ಕೆ ಮನೆ, ಉಣ್ಣೋದಿಕ್ಕೆ ಅನ್ನ, ನೋಡೋದಿಕ್ಕೆ ಟಿ ವಿ ಇತ್ತಲ್ಲ. ಆದರೂ ಭಯಂಕರವಾಗಿ ಗೊಣಗಿದ್ದೂ ನಾವೇ, ಆಕಾಶವೇ ಕಳಚಿ ಬಿದ್ದಿದೆಯೇನೋ ಅನ್ನುವ ಹಾಗೆ. ಸೂರು, ಹಚಡ, ಅನ್ನ ಇಲ್ಲದಿದ್ದ ಲಕ್ಷಾಂತರ ಜನರ ಪ್ರತಿನಿತ್ಯದ ಅತಂಕ ನಮ್ಮನ್ನು ತಟ್ಟುವುದಿಲ್ಲವಲ್ಲ ಯಾಕೆ? ಬದುಕೇ ಮುಗಿದು ಹೋದ ಅತಂತ್ರದಲ್ಲಿ ತಮ್ಮ ತಮ್ಮ ಊರುಗಳಿಗೆ ಮರಳಿದವರು, ನಾಲ್ಕು ದಿನಕ್ಕೆ ಮತ್ತೆ ನಗರಗಳ ಕಡೆ ಮುಖ ಮಾಡುವ ಅನಿವಾರ್ಯತೆಗೆ ಯಾರು ಹೊಣೆ? ಇದಕ್ಕೇನು ದಾರಿ? ನಮ್ಮ ಅಹಂಕಾರಕ್ಕಿಷ್ಟು ಶಾಖ ಕೊಟ್ಟುಕೊಳ್ಳುವಂತೆ ಕೈಲಾದ ಸಹಾಯ ಮಾಡಿ ಬೀಗಿದ್ದೇ ಬಂತು.

ಲಾಕ್ಡೌನ್ ನಿಜವಾದ ಸವಾಲು ಒಡ್ಡಿದ್ದು ಹೆಣ್ಣುಮಕ್ಕಳಿಗೆ, ಅವರು ಮಾತ್ರ ಇದನ್ನು ಅವರಿಗೇ ಸಾಧ್ಯವಾದ ಧೀಶಕ್ತಿಯಲ್ಲಿ ಎದುರಿಸಿದರು. ಅವರಿಗೂ ದುಸಾಧ್ಯವಾದ ಪ್ರಸಂಗಗಳು ಇದ್ದೇ ಇದ್ದವು. ಲೈಂಗಿಕ ದೌರ್ಜನ್ಯಗಳು ಎಣಿಕೆ ಮೀರಿ ನಡೆಯುತ್ತಾ ಹೋದವು. ರಾತ್ರಿ ಹಗಲೆನ್ನದೆ ಹೆಣ್ಣು ಮಕ್ಕಳ ಮೇಲೆ, ಅವರಲ್ಲಿ ಹೆಂಡತಿಯರೂ ಸೇರುತ್ತಾರೆ. ಕಣ್ಮರೆಯಾದ ಉದ್ಯೋಗ, ಸವೆಯದು ಎನ್ನುವಂತೆ ಕಾಣಿಸುತ್ತಿದ್ದ ಸಮಯ, ದಿಕ್ಕೆಟ್ಟ ಮನಸ್ಸು, ಭವಿಷ್ಯದ ಆತಂಕ, ಅದನ್ನು ಮೀರಿಕೊಳ್ಳಲು ಸಿಕ್ಕದ್ದು ಹೆಣ್ಣಿನ ದೇಹ ಎನ್ನುವಂತೆ ಅವಳ ಮೇಲೆ ದಾಳಿ ನಡೆಯಿತು. ಈ ಎಲ್ಲ ಪ್ರಶ್ನೆಗಳೂ ಗಂಡಿನಷ್ಟೇ ಅಥವಾ ಅವನಿಗಿಂತ ಹೆಚ್ಚಾಗಿ ಹೆಣ್ಣನ್ನೂ ಕಾಡುತ್ತಲೇ ಇದ್ದವಲ್ಲ. ಮುಂದಿನ ಹೊತ್ತಿಗೆ ಅನ್ನ ಬೇಯಿಸುವ ಜವಾಬ್ದಾರಿ ಅವಳದೇ. ಗಂಡಿನಂತೆ ಅವಳು ಯಾರ ಮೇಲೆ ದಾಳಿ ಮಾಡಬಹುದು? ಮತ್ತದೇ ಗಂಧವ್ರತ ಬದುಕು. ತೇದದ್ದೂ ತೇದದ್ದೇ. ನನ್ನ ಮನೆಯಲ್ಲಿರುವ ಸಹಾಯಕಿ ಭಯಂಕರ ಸ್ವಾಭಿಮಾನದವಳು. ಆರಂಭದಲ್ಲಿ ಕೊಟ್ಟ ಅಕ್ಕಿ ಬೇಳೆಗಳನ್ನು ತುಸು ಸಂಕೋಚದಲ್ಲೇ ಇಸಿದುಕೊಂಡಳು. ಅವಳ ಕಣ್ಣುಗಳಲ್ಲಿನ ನೋವು ಯಾರನ್ನೂ ತಟ್ಟಬಲ್ಲದಾಗಿತ್ತು. ನಾನೇ ಒಂದು ಉಪಾಯ ಸೂಚಿಸಿದೆ. ಮನು, ಇನ್ನು ಮೇಲೆ ದಿನಾ ಮಧ್ಯಾಹ್ನ ಸ್ವಲ್ಪ ಹೊತ್ತು ಕ್ಲೀನ್ ಮಾಡೋಣ. ದಿನಾ ಎರಡರಿಂದ ಐದರವರೆಗೆ ಇದು ನಡೆಯಿತು. ಇರುವ, ಇಲ್ಲದ ಧೂಳನ್ನೆಲ್ಲ ತೆಗೆದು ಸ್ವಚ್ಚ ಮಾಡಿದ್ದಾಯಿತು.ಹಕ್ಕಿನಿಂದ ಅವಳು ದಿನಾ ಹಣ ಪಡೆದು ಹೋದಳು. ಆತ್ಮವಿಶ್ವಾಸ ಬೀಗುತ್ತಿತ್ತು ಅವಳ ಮುಖದಲ್ಲಿ. ಇದು ತಾನು ದುಡಿದ ಹಣ, ಯಾರೋ ಕರುಣೆಯಿಂದ ನೀಡಿದ ದಾನವಲ್ಲ ಅದು. ಕೆಲಸವಿಲ್ಲದೇ ಕೂತ ಗಂಡ, ಇಬ್ಬರು ಸಣ್ಣ ಮಕ್ಕಳನ್ನು ತಾನು ಸಾಕಬಲ್ಲೆ ಎನ್ನುವ ವಿಶ್ವಾಸ ಅದು. ಗಮನಿಸಿ, ಅದು ಅಹಂಕಾರವಲ್ಲದ ವಿಶ್ವಾಸ. ಅದರ ಮೂಲ, ಇದು ತನ್ನ ಕರ್ತವ್ಯ ಎಂಬುದು. ಆದರೆ ಗಂಡಸರಿಗೆ ಅದೆಷ್ಟು ಬೇಗ ಇದೇ ಕಾರಣಕ್ಕಾಗಿ ಅಹಂಕಾರ ತೂಗಿ ತೊನೆಯುತ್ತದೆ. ಮನುವಿನ ಗಂಡನೇ ಅದೆಷ್ಟು ಸಲ ಫೋನ್ ಮಾಡುತ್ತಿದ್ದ, ಬೇಗ ಬಾ, ನನ್ ಕೈಲಿ ನಿನ್ನ ಮಕ್ಕ್ಳನ್ನ ನೋಡ್ಕೊಳ್ಳೋಕ್ಕಾಗಕಿಲ್ಲ. ಕಳೆದ ತಿಂಗಳು ಮಾತಿನ ಮಧ್ಯದಲ್ಲೊಮ್ಮೆ ಅವಳು, ಅಮ್ಮಾ ಆ ಎರಡು ತಿಂಗಳು ನೀವು ದಿನಾ ಕೊಡ್ತಿದ್ದ 200-300 ರೂಪಾಯಲ್ಲೇ ಎಲ್ಲ ಖರ್ಚೂ ನಿಭಾಯಿಸ್ದೆ.ಸಂಬಳದ ದುಡ್ಡೇಲ್ಲಾ ಚೀಟಿ ಕಟ್ಟೋಕ್ಕೆ ಆಯ್ತಿತ್ತು. ’ಅಂದಾಗ ನಾನೆಂದೆ, ಅದು ನಾನು ಕೊಟ್ಟದ್ದಲ್ಲ ಮೇಡಂ, ನೀವು ದುಡಿದದ್ದು ಅಂತ. ಆಹಾ ನನ್ನ ನಾಯಕಿ ಇವಳು, ಎಲ್ಲ ಹೆಣ್ಣು ಮಕ್ಕಳೂ ನಾಯಕಿಯರೇ ಅನ್ನುವ ನನ್ನ ನಂಬಿಕೆ ಇನ್ನಷ್ಟು ಗಟ್ಟಿಯಾಯಿತು.

ಒಮ್ಮೆ, ಮತ್ತೊಮ್ಮೆ
ಮಗದೊಮ್ಮೆ
ಹಾಯುವಳು ಕೊಂಡ
ನೋಡುವನವಳ ಗಂಡ
ದೂರದಿಂದಲೇ ಮಂಕಾಗಿ

ಇಷ್ಟೇ ಮುಖ್ಯವಾದ ಅಂತಃಕರಣದ ಕತೆ ಹೇಳುತ್ತೇನೆ ಕೇಳಿ. ಲಾಕ್ಡೌನ್ ಶುರುವಾದ ಎರಡು ಮೂರು ದಿನಕ್ಕೇ ವೈದೇಹಿಯವರ ಫೋನ್, ಹೇಗಿದಿಯೇ, ಹುಷಾರು ಕಣೆ. ಮನೆ ಕಡೆ ಜೋಪಾನ. ಏನೂ ತೊಂದರೆ ಇಲ್ಲ ಅಲ್ಲವಾ ಅಮ್ತ ನೂರು ಬಾರಿ ಕೇಳಿ ಫೋನ್ ಇಟ್ಟರು. ಏನೇನೋ ಕಾರಣಗಳಿಗೆ, ನನ್ನ ಫೋನ್ ಕೆಟ್ಟದ್ದೂ ಸೇರಿ ವೀಣಾ ಶಾಂತೇಶ್ವರ ಅವರ ಫೋನ್ ನನಗೆ ಸಿಕ್ಕಿರಲಿಲ್ಲ.ಒಂದು ದಿನ ಅವರ ಮೆಸೇಜ್ ಬಂತು, ನೀನು ಹೇಗಿದ್ದೀಯಾ ಅಂತ ತಿಳಿಯುವುದು ನನ್ನ ಹಕ್ಕು ಅಂತ. ಅತ್ತು ಮುಗಿಸಿದ ಮೇಲೆಯೇ ನಾನು ಅವರಿಗೆ ಫೋನ್ ಹಚ್ಚಿದ್ದು. ಮಾತನಾಡುವಾಗ ಸಿಕ್ಕಾಗ ಗೊತ್ತಾಗಿದ್ದೆಂದರೆ, ಅವರಿಗೆ ವಿಪರೀತ ಆತಂಕವಾಗಿ, ಎಲ್ಲಿಂದಲೋ ನನ್ನ ಕಾಲೇಜ್ ಫೋನ್ ನಂಬರ್ ಪತ್ತೆ ಹಚ್ಚಿ, ಅಲ್ಲಿಗೋ ಅವರು ಫೋನ್ ಮಾಡಿ ವಿಚಾರಿಸಿದ್ದಾರೆ! ಈ ಅಂತಃಕರಣ, ಅದರಿಂದ ಹುಟ್ಟುವ ಅಂತಃಶಕ್ತಿ ಮಾತ್ರ ನಿಜಕ್ಕೂ ಹೆಣ್ಣಿಗೆ ಮಾತ್ರ ಸಾಧ್ಯ. ಕಂಗೆಡದೆ ಯಾವ ಸನ್ನಿವೇಶವನ್ನೂ ಹೆಣ್ಣು ಎದುರಿಸಬಲ್ಲಳು ಎನ್ನುವುದನ್ನು ಕೊರೊನಾ ಮಗದೊಮ್ಮೆ ಸಾಬೀತು ಪಡಿಸಿತು.

ಹೆಣ್ಣುಮಕ್ಕಳು ಇದನ್ನು ಅತ್ಯಂತ ದಕ್ಷವಾದ ಆರ್ಥಿಕ ಮೀಮಾಂಸೆಯಲ್ಲೂ, ಶಕ್ತವಾದ ಭಾವ ಮೀಮಾಂಸೆಯಲ್ಲೂ ಎದುರಿಸಿದರು. ಇದಕ್ಕೆ ಯಾಕೆ ಅಧಿಕೃತತೆ ದೊರೆಯುವುದಿಲ್ಲ? .ಲಂಕೇಶರ ಜೀವನದ ಪ್ರಸಂಗವೊಂದು ನೆನಪಾಗುತ್ತಿದೆ. ಅವರು ವಿಶ್ವವಿದ್ಯಾಲಯದ ಕೆಲಸವನ್ನು ಬಿಟ್ಟ ಸಮಯ ಅದು. ಅವರ ಪತ್ನಿ ಇಂದಿರಮ್ಮನವರು ಸೀರೆ ವ್ಯಾಪಾರ ಆರಂಭ ಮಾಡಿ ಮನೆಯ ಖರ್ಚು ವೆಚ್ಚಗಳನ್ನ ನೋಡಿಕೊಳ್ಳುತ್ತಿದ್ದರು. ಗೆಳೆಯರ ಜೊತೆ (ಬಹುಶಃ ಕಿ ರಂ) ಮನೆಯಲ್ಲಿ ಊಟ ಮಾಡುತ್ತಿದ್ದ ಸಮಯದಲ್ಲಿ ಅವರು. ’ನೋಡ್ರಿ , ಇದು ನನ್ನ ಹೆಂಡತಿ ದುಡಿದು ತಂದಿರೋದು’ ಅಂತ ಹೆಮ್ಮೆಯಿಂದ ಹೇಳಿದ್ದರಂತೆ. ಇದು ಹೆಣ್ಣೀನ ಬದುಕು, ಹೋರಾಟ ಮತ್ತು ವ್ಯಕ್ತಿತ್ವಕ್ಕೆ ಸಿಕ್ಕಬೇಕಾದ ಅಧಿಕೃತತೆ. ಇದು ಬಲು ಕಷ್ಟ ಎಂದೇ ಈ ಸಂದರ್ಭದಲ್ಲಿ ಡೈವೋರ್ಸ್ ಪ್ರಕರಣಗಳು ಹೆಚ್ಚಾದವು. ಆದರೆ ಅದು ಅನಿವಾರ್ಯವಾದ ಬೆಳವಣಿಗೆ ಎಂದೇ ನಾನು ತಿಳಿಯುತ್ತೇನೆ. ಈ ಬಿಕ್ಕಟ್ಟನ್ನು ಲಾಕ್ ನ್ ನ ಆಚೆಗೂ ನಾವು ಎದುರಿಸಲೇ ಬೇಕು. ಪಲ್ಲಟವೊಂದು ಸ್ಥಾಪಿತವಾಗುವ ತನಕ ಗಂಡು ಹೆಣ್ಣು ಇಬ್ಬರೂ ಇದಕ್ಕೆ ತಮ್ಮನ್ನು ಒಡ್ಡಿಕೊಳ್ಳಲೇ ಬೇಕು. ತಪ್ಪೋ, ಧಾವಂತವೋ, ಅಹಂಕಾರವೋ ಇಂಥ ಸನ್ನಿವೇಶಗಳನ್ನು ಸೃಷ್ಟಿಸುತ್ತದೆ. ಇಬ್ಬರೂ ಬದಲಾಗಬೇಕಾದ್ದು ಇದಕ್ಕೆ ಉತ್ತರವೆಂದರೆ, ನಡೆಯಬೇಕಾದ ದಾರಿ ಬಲು ದೂರವಿದೆ.

ಈ ಅಂಕಣಕ್ಕೆ ’ ನೇಯ್ಗೆ’ ಎನ್ನುವ ಶೀರ್ಷಿಕೆಯನ್ನು ಆರಿಸಿಕೊಳ್ಳುವಾಗ ನನ್ನ ಮನಸ್ಸಿನಲ್ಲಿದ್ದದ್ದು, ನೇಯ್ಗೆಯಲ್ಲಿ ಮೇಲೊಂದು, ಕೆಳಗೊಂದು ಎಳೆಯನ್ನು ಹಾಕಿ ನೇಯಲಾಗುತ್ತದೆ. ಎರಡರಲ್ಲಿ ಯಾವುದಿಲ್ಲದೆಯೂ ನೇಯ್ಗೆಯಾಗಲಾರದು. ಆದ್ದರಿಂದ ಯಾವುದೂ ಹೆಚ್ಚಲ್ಲ, ಕಡಿಮೆಯಲ್ಲ. ಮೇಲೆ, ಕೆಳಗೆ, ಅಡ್ಡ, ಉದ್ದ. ಇದು ಹೇಳಲು, ಕೇಳಲು ಅದೆಷ್ಟು ಸಹಜ ಅನ್ನಿಸುತದೆ. ಆದರೆ ಬದುಕಿನಲ್ಲಿ ಮಾತ್ರ ಅದಕ್ಕೆ ತದ್ವಿರುದ್ಧವಾದ ವಾಸ್ತವ. ಇನ್ನೂ ಒಂದು ಕಾರಣವಿತ್ತು ಇದನ್ನು ಆರಿಸಿಕೊಳ್ಳಲು. ಹೆಣ್ಣಿನ ವ್ಯಕ್ತಿತ್ವವೇ ನೇಯ್ಗೆಯದ್ದು. ಅವಳು ಎಲ್ಲೆಲ್ಲಿಂದಲೋ , ಏನೇನನ್ನೋ ತಂದು ’ನೇಯ್ದು’ ಅದನ್ನು ’ಧರಿಸು’ತ್ತಾಳೆ.ಒಂದನ್ನು ಇನ್ನೊಂದರ ಜೊತೆ ಸೇರಿಸಿ ನೇಯುವುದು ಅವಳ ಹುಟ್ಟು ಗುಣ. ಲೋಕದ ಕಾಳಜಿ ಎಂದರೆ ಅವಳಿಗೆ ಅದೊಂದು ಅಜೆಂಡಾ ಅಲ್ಲ, ಸ್ವಾರ್ಥವಲ್ಲ, ಕಾರ್ಯತಂತ್ರವಲ್ಲ, ಹೊರಗಿನದ್ದಲ್ಲ. ಅವಳ ಲೋಕದಲ್ಲಿ ಅಂತರಂಗ ಬಹಿರಂಗಗಳಿಲ್ಲ. ಅದು ಅಖಂಡ. ಇಡಿಗಾಳು. ಆದ್ದರಿಂದಲೇ ವೀಣಾ , ವೈದೇಹಿ ಎನ್ನುವ ನೇಯ್ಗೆಯಲ್ಲಿ ನಾನೂ ಒಂದು ಎಳೆ, ನನ್ನ ನೇಯ್ಗೆಯಲ್ಲಿ ಅವರದ್ದೇ ಬಣ್ಣ.
*

ಸಾಂದರ್ಭಿಕ ಚಿತ್ರಗಳು: ಪಂಢರಿನಾಥ

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...