ಮಾನುಷ ಬೇಟೆಯ ರೂಪಕ: ಚಿತ್ತಾಲರ ಶಿಕಾರಿ

Date: 31-08-2022

Location: ಬೆಂಗಳೂರು


ಮುಂಬಯಿ ಮಾನವೀಯತೆಯಿಲ್ಲದ ಹಿಂಸಾತ್ಮಕ ಪರಿಸರದ ಪ್ರತಿನಿಧಿಯಾಗುತ್ತದೆ. ಮನುಷ್ಯತ್ವವಿಲ್ಲದ ಈ ನಾಗರಿಕ ಜಗತ್ತಿನಲ್ಲಿ ಪ್ರೀತಿ, ಗೆಳೆತನ, ವಿಶ್ವಾಸ, ಅನುಕಂಪಗಳೆಲ್ಲ ನೆಲಕಚ್ಚಿ ಸ್ವಾರ್ಥ, ದುರಾಸೆ ಮತ್ತು ಪ್ರಾಣಿ ಜಗತ್ತಿನಲ್ಲಿ ಕಾಣುವ ಮೃಗೀಯ ಪ್ರವೃತ್ತಿ ತಲ್ಲಣಗೊಳಿಸುವ ಭಯಾನಕ ಪರಿಸರವನ್ನು ಚಿತ್ರಿಸುತ್ತವೆ. ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ಬದುಕಿನ ಬುತ್ತಿ ಅಂಕಣದಲ್ಲಿ ಯಶವಂತ ಚಿತ್ತಾಲರ ’ಶಿಕಾರಿ’ ಕಾದಂಬರಿ ಕುರಿತು ಚರ್ಚಿಸಿದ್ದಾರೆ.

“ಉತ್ತರ ಕನ್ನಡ ಜಿಲ್ಲೆ ಅದರಲ್ಲೂ ನನ್ನ ಹುಟ್ಟೂರಾದ ಹನೇಹಳ್ಳಿ ಇವು ನನ್ನ ಮಟ್ಟಿಗೆ ಬರೀ ನೆಲದ ಹೆಸರುಗಳಲ್ಲ. ಬದಲಾಗಿ ನನ್ನ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ ಅದರ ಚೈತನ್ಯಕ್ಕೆ ನಿರಂತರವಾಗಿ ಜೀವಸೆಲೆಯಾಗಿ ನಿಂತ ಮೂಲಭೂತವಾದ ಪ್ರೇರಕ ಶಕ್ತಿಗಳೂ ಆಗಿವೆಯೆಂದು ನಾನು ನಂಬಿದ್ದೇನೆ”.

ಹಾಗೂ “ನನ್ನ ಭಾವ ಪ್ರಪಂಚದಲ್ಲಿ ನನ್ನ ಆಂತರಿಕ ವಿಕಾಸದಲ್ಲಿ ಹನೇಹಳ್ಳಿ ಒಂದು ಮಹತ್ವದ ಪಾತ್ರ ವಹಿಸಿದೆ ಎಂದು ನನಗನಿಸುತ್ತದೆ. ಬದುಕಿನ ಬಗ್ಗೆ ನನಗೆ ಇಂದಿರುವ ಭಾವ ಭಾವನೆಗಳು, ಸಂವೇದನೆಗಳು ಇವೆಲ್ಲವುಗಳ ರೂಪ ನಿಶ್ಚಿತವಾದದ್ದೇ ಈ ನನ್ನ ಬಾಲ್ಯದ ತೊಟ್ಟಿಲಲ್ಲಿ. ಎಂತಲೇ ಮುಂಬಯಿಯಲ್ಲೆ ಕುಳಿತು ಇಂದು ಬರೆದ...ನನ್ನೆಲ್ಲ ಕತೆಗಳಲ್ಲಿ, ಕಾದಂಬರಿಯಲ್ಲಿ ಕೂಡ ಹನೇಹಳ್ಳಿ ತಿರುತಿರುಗಿ ಪ್ರಕಟವಾಗುತ್ತದೆ. ನನ್ನ ಭಾವ ವಿಶ್ವದ ಮೂರ್ತರೂಪವಾಗಿ ನನ್ನೆಲ್ಲ ಪ್ರಬಲ ಭಾವನೆಗಳ ಸೆಲೆಯೇ ನನ್ನ ವ್ಯಕ್ತಿತ್ವದ ಬೇರುಗಳೇ ಇಲ್ಲಿವೆ, ಇಂದಿಗೂ ನೆನೆದರೆ ಗಮ್ಮೆಂದು ವಾಸನೆ ಹೊಡೆಯುತ್ತದೋ ಎಂದೆನಿಸುವ ಹನೇಹಳ್ಳಿಯ ನೆಲದಲ್ಲಿ.”

ಕನ್ನಡದ ಸುಪ್ರಸಿದ್ಧ ಲೇಖಕರಾದ ಯಶವಂತ ಚಿತ್ತಾಲರ (03.08.1928-22.02.2014) ಮಾತುಗಳ ಈ ಎರಡೂ ಉಲ್ಲೇಖಗಳೂ ಅವರ ಸೃಜನಶೀಲತೆಯ ಮೂಲವಾದ ಹನೇಹಳ್ಳಿಯ ಕುರಿತೇ ಇವೆ. ಬಹುಶಃ ಯಾವ ಕನ್ನಡ ಲೇಖಕರೂ ಇಷ್ಟು ಪುನರಾವರ್ತಿತವಾಗಿ ತಮ್ಮ ಹುಟ್ಟೂರನ್ನು ನೆನೆದ ಉದಾಹರಣೆ ಸಿಗುವುದಿಲ್ಲ. 1949ರಲ್ಲಿ ಬರೆದ ಮೊದಲ ಕತೆ ‘ಬೊಮ್ಮಿಯ ಹುಲ್ಲು ಹೊರೆ’ ಚಿತ್ತಾಲರನ್ನು ಕತೆಗಾರರನ್ನಾಗಿಸಿತು. ಮುಂದೆ ಕಥನವನ್ನೇ ತಮ್ಮ ಸಾಹಿತ್ಯಾಭಿವ್ಯಕ್ತಿಯ ಪ್ರಧಾನ ಮಾಧ್ಯಮವನ್ನಾಗಿಸಿಕೊಂಡ ಅವರು ಸಣ್ಣ ಕತೆಯ ಜೊತೆಗೆ ಕಾದಂಬರಿ ಕ್ಷೇತ್ರವನ್ನೂ ವ್ಯಾಪಿಸಿಕೊಂಡರು. ಎರಡೂ ಪ್ರಕಾರಗಳಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದರು.

ಮೊದಲ ಕಾದಂಬರಿ ‘ಮೂರುದಾರಿಗಳು’ (1964) ಪ್ರಕಟವಾಗಿ ಒಂದೂವರೆ ದಶಕದ ಬಳಿಕ ಪ್ರಕಟವಾದ ‘ಶಿಕಾರಿ’(1979) ಚಿತ್ತಾಲರಿಗೆ ಹೆಚ್ಚಿನ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಬಂಡವಾಳಶಾಹಿ ವ್ಯವಸ್ಥೆ ಮನುಷ್ಯನ ಮೇಲೆ ನಡೆಸುವ ಕ್ರೌರ್ಯ ಹಾಗೂ ಮಾನವ ಸಂಬಂಧಗಳ ಪೊಳ್ಳುತನವನ್ನು ಕಾದಂಬರಿ ಅನ್ಯಾದೃಶವಾಗಿ ಚಿತ್ರಿಸಿದೆ. ಓದುಗರು ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಶಿಕಾರಿ ಹತ್ತಾರು ಮುದ್ರಣಗಳನ್ನು ಕಂಡಿದೆ. ಆರು ಭಾಗ ಹಾಗೂ ಮೂವತ್ತೇಳು ಅಧ್ಯಾಯಗಳಲ್ಲಿ ವಿಭಜನೆಗೊಂಡಿರುವ ಕಾದಂಬರಿಯ ನಾಯಕ; ನಾಗಪ್ಪ.

ಕೆಮಿಕಲ್ ಕಂಪನಿಯೊದರಲ್ಲಿ ಆರ್ ಅಂಡ್ ಡಿ ವಿಭಾಗದಲ್ಲಿ ಕೆಲಸ ಮಾಡುವ ನಾಗಪ್ಪನನ್ನು, ಕಂಪನಿಯ ರಾಸಾಯನಿಕ ಘಟಕವೊಂದಕ್ಕೆ ಬೆಂಕಿ ಬಿದ್ದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕೆಲಸದಿಂದ ‘ಸಸ್ಪೆಂಡ್’ ಮಾಡುವ ಸಂದರ್ಭದಿಂದ ಕಾದಂಬರಿ ಶುರುವಾಗುತ್ತದೆ. ವಿದೇಶಿ ಕಂಪನಿಯಲ್ಲಿ ವಿಜ್ಞಾನಿ ಹಾಗೂ ಸಾಹಿತಿಯಾಗಿರುವ ನಾಗಪ್ಪನ ಆರಂಭದ ಟಿಪ್ಪಣಿಗಳಲ್ಲಿ ಅವನ ವಿಚಾರಗಳು ಹರಡಿಕೊಂಡಿವೆ. ಆತ ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯವನು. ಕೋಳಿಗಿರಿಯಣ್ಣನ ಕೇರಿಯಲ್ಲಿ ಬೆಳೆದ ಅವನಿಗೆ ಗಿರಿಯಣ್ಣನಿಂದಲೇ ಕಲಿತ ಹತ್ತೆಂಟು ಬೈಗುಳಗಳು ನಾಲಿಗೆಯ ತುದಿಯಲ್ಲಿವೆ. ಅವುಗಳಿಗೆ ಸಂಖ್ಯೆಯ ಸಂಕೇತಗಳನ್ನು ನೀಡಿ ‘ಸಾಂಖ್ಯದ ಸುಭಾಷಿತಗಳು’ ಎಂದು ಕರೆಯುತ್ತಾನೆ. ಒಂದು ತಿಂಗಳು ಒತ್ತಾಯದ ರಜೆಯ ಮೇಲಿರುವ ನಾಗಪ್ಪ ಟಿಪ್ಪಣಿ ಮಾಡುತ್ತಿರುವುದು ತನ್ನ ಬಾಲ್ಯದ ಪ್ರತಿಸ್ಪರ್ಧಿ ಶ್ರೀನಿವಾಸನನ್ನು ಕುರಿತ ಕಾದಂಬರಿ ರಚನೆಗೆ. ಅದು ನಾಗಪ್ಪನ ಪರಿಸರದ ಅರಿವಿಗೆ ಸಹಕಾರಿ. ಪಾಶ್ಚಾತ್ಯ ಚಿಂತಕರ ಪ್ರಭಾವಕ್ಕೆ ಒಳಗಾಗಿದ್ದ ನಾಗಪ್ಪನ ಮನಸ್ಸಿನಲ್ಲಿ ಭೂತಾಕಾರವಾಗಿ ಕಾಡುತ್ತಿದ್ದುದು; ಬಾವಿಯಲ್ಲಿ ಬಿದ್ದು ಸತ್ತ ತಂದೆಯ ನೆನಪು. ಎಂದೂ ನೋಡದೆ ಇರುವ ಅಣ್ಣ, ಮುಂಬಯಿಯ ಗದ್ದಲದಲ್ಲಿ ಕಳೆದುಹೋಗಿರುವ ತಂಗಿ, ತನ್ನನ್ನು ಕೊಲ್ಲಲು ತಂದೆ ಮಾಡಿದ ಪ್ರಯತ್ನಗಳು ಇವನ ಮಾನಸಿಕ ನೆಮ್ಮದಿಯನ್ನು ಕಸಿದುಕೊಂಡಿರುವ ಸಂಗತಿಗಳು. ಮದುವೆಯ ವಯಸ್ಸು ಮೀರಿದ್ದರೂ ಈತ ಅವಿವಾಹಿತ. ಆಂಗ್ಲೋ ಇಂಡಿಯನ್ ರೀನಾ ಮತ್ತು ನೇಪಾಳಿ ಹುಡುಗಿ ರಾಣಿಯೊಂದಿಗೆ ಸಂಬಂಧವಿಟ್ಟುಕೊಂಡವನು ನಾಗಪ್ಪ.

ಹೈದರಾಬಾದಿನಿಂದ ಮುಂಬಯಿಗೆ ವರ್ಗವಾಗಿ ಬಂದ ನಾಗಪ್ಪ ಶ್ರೀನಿವಾಸನನ್ನು ಕುರಿತು ಕಾದಂಬರಿ ಬರೆಯುವ ಹಂಚಿಕೆಯಲ್ಲಿದ್ದಾನೆ. ಇದನ್ನು ತಿಳಿದ ಶ್ರೀನಿವಾಸ ಸಾಮಾಜಿಕವಾಗಿ ನಾಗಪ್ಪನನ್ನು ಮುಗಿಸುವ ಸಂಚು ಹೂಡುತ್ತಾನೆ. ಈ ಕುತಂತ್ರದ ವಿವರಗಳಲ್ಲೇ ಕಾದಂಬರಿ ಬೆಳೆಯುತ್ತದೆ. ಸಸ್ಪೆಂಡ್ ಆದೇಶ ಬಂದ ಹದಿಮೂರು ದಿನಕ್ಕೆ ಹೊಟೆಲ್ ತಾಜಮಹಲ್‍ನಲ್ಲಿ ನಾಗಪ್ಪನ ವಿಚಾರಣೆ ತೊಡಗುತ್ತದೆ. ತನಿಖೆಯ ಸಂದರ್ಭದಲ್ಲಿ ಸುಳ್ಳು ರಿಪೋರ್ಟ್ ಒಂದಕ್ಕೆ ಸಹಿ ಹಾಕಲು ನಿರಾಕರಿಸಿ ನಾಗಪ್ಪ ತನ್ನ ಕೆಲಸಕ್ಕೆ ರಾಜೀನಾಮೆ ನೀಡುತ್ತಾನೆ. ಭಡ್ತಿ ಪಡೆದು ಅಮೆರಿಕೆಗೆ ಹೋಗುವ ಕನಸು ಕಾಣುತ್ತಿದ್ದಾಗ ಹೀಗೆಲ್ಲಾ ಆದುದು ನಾಗಪ್ಪನಿಗೆ ದಿಗ್ಭ್ರಮೆ ಹುಟ್ಟಿಸುತ್ತದೆ. ತನ್ನ ಮೇಲಿನ ಆರೋಪಕ್ಕೆ ಡಿ.ಎಂ.ಡಿ. ಫಿರೋಜ್, ತನ್ನ ಊರಿನವನೇ ಆದ ಬಾಲ್ಯ ಗೆಳೆಯ ಶ್ರೀನಿವಾಸ, ಪತ್ರಕರ್ತ ಅರ್ಜುನ ರಾವ್, ಆಫೀಸಿನ ಮೇರಿ, ಡಯಾನ, ಥ್ರೀಟಿ, ರೀನಾ, ತಾನು ನಂಬಿದ್ದ ರಾಣಿ, ಆತ್ಮೀಯ ಗೆಳೆಯ ಸೀತಾರಾಮ ಇವರೆಲ್ಲರ ವಿಶ್ವಾಸ ದ್ರೋಹವೇ ಕಾರಣವೆಂದು ಅರಿವಾಗುತ್ತದೆ. ನಾಗಪ್ಪ ಮನುಷ್ಯತ್ವದ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾನೆ. ತನ್ನ ಮೇಲೆ ಶಿಕಾರಿ ಮಾಡಲು ಬಂದವರ ಶಿಕಾರಿ ಮಾಡುವ ಬಯಕೆ ಹುಟ್ಟುತ್ತದೆ. ಬೇಟೆಗಾರರನ್ನು ಗುರುತಿಸಿ ಸುಳ್ಳು ಆರೋಪದಿಂದ ಬಿಡುಗಡೆಯಾಗಲು ಮಾನಸಿಕ ಮತ್ತು ನೈತಿಕ ತಯಾರಿ ನಡೆಸುತ್ತಾನೆ. ಪ್ರತಿಪಕ್ಷವಾಗಿ ಫಿರೋಜ್ ಬಂದೂಕವಾಲ ಮತ್ತು ಶ್ರೀನಿವಾಸ ಸೇರಿ ಸ್ವಾರ್ಥ ಸಾಧನೆಗಾಗಿ ನಾಗಪ್ಪನ ಶಿಕಾರಿಗೆ ಸನ್ನದ್ಧರಾಗುತ್ತಾರೆ.

ಫಿರೋಜನು ನಾಗಪ್ಪನನ್ನು ಸದೆಬಡಿಯಲು ತನಿಖಾದಳದಲ್ಲಿ ಶ್ರೀನಿವಾಸ, ರೀನಾ, ಥ್ರೀಟಿ ಇವರೆಲ್ಲರಿಂದ ನಾಗಪ್ಪನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಸಂಗ್ರಹಿಸತೊಡಗುತ್ತಾನೆ. ನಾಗಪ್ಪನನ್ನು ಇಂದಿಗೂ ಹಿಂಸಿಸುತ್ತಿರುವ ಸಂಗತಿಗಳಾದ; ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದು, ತಂದೆ ಇವನನ್ನು ಬೆಂಕಿಹಚ್ಚಿ ಸುಡಲು ಯತ್ನಿಸಿದ್ದರಿಂದ ಈಗಲೂ ಎದೆಯ ಮೇಲಿರುವ ಸುಟ್ಟ ಗುರುತುಗಳು, ತಂದೆಯ ಆತ್ಮಹತ್ಯೆ, ತಾಯಿಯ ಕಲಾವಿದ ಜಾತಿ, ತಾಯಿ-ತಂದೆಯರ ಅಂತರ್ಜಾತೀಯ ವಿವಾಹ ಓರಗೆಯವರ ಹಾಸ್ಯಕ್ಕೆ ಗುರಿಯಾದುದು ಇವೆಲ್ಲವೂ ನಾಗಪ್ಪನಲ್ಲಿ ಕೀಳರಿಮೆಯನ್ನು ಹುಟ್ಟಿಸಿದ ವಿಚಾರಗಳಾಗಿದ್ದವು. ಇಂತಹ ತನ್ನ ನೆನಪುಗಳನ್ನು ತಾನೇ ಎದುರಿಸಲಾಗದೇ ಒದ್ದಾಡುತ್ತಿರುವಾಗ ಮುಂಬಯಿಯ ವ್ಯಾಪಾರಿ ವರ್ಗವು ಅದನ್ನೇ ಬಂಡವಾಳವನ್ನಗಿಸಿಕೊಂಡು ನಾಗಪ್ಪನನ್ನು ಹಣಿಯಲು ತೊಡಗುತ್ತದೆ. ನಾಗಪ್ಪ ಈ ಸಂಚನ್ನು ಸಮರ್ಥವಾಗಿ ಎದುರಿಸುತ್ತಾನೆ.

ತನ್ನ ಸಂಕಟಗಳಿಗೆ ಫಿರೋಜ ಮತ್ತು ಶ್ರೀನಿವಾಸನ ಒಳಸಂಚು ಕಾರಣವೆಂದು ತಿಳಿದ ನಾಗಪ್ಪ ತನಿಖೆಯಲ್ಲಿ ಅವರ ಸವಾಲಿಗೆ ಹೆದರದೆ ಸೂಕ್ತ ಪ್ರತ್ಯುತ್ತರ ನೀಡುತ್ತಾನೆ. ತಾನು ಹಿತೈಷಿಯೆಂದು ತಿಳಿದ ಮೇರಿಗಿಂತ ಗಗನಸಖಿಯರಾದ ಥ್ರೀಟಿ ಮತ್ತು ರಾಣಿ ಹೆಚ್ಚು ಉತ್ತಮರೆಂದು ನಾಗಪ್ಪನಿಗೆ ಅರ್ಥವಾಗುತ್ತದೆ. ತಾನು ರಾಜೀನಾಮೆ ನೀಡಿದ್ದು ಕೇವಲ ಕೆಲಸಕ್ಕಲ್ಲ, ಅದು ಆ ಕೆಲಸ ಪ್ರತಿನಿಧಿಸುವ ಸ್ವಾರ್ಥಮೂಲವಾದ ಬಂಡವಾಳಶಾಹಿ ಜಗತ್ತಿಗೆ ಎಂದು ಸಮಾಧಾನ ತಳೆಯುತ್ತಾನೆ. ನಾಗಪ್ಪ ಈ ತೀರ್ಮಾನಕ್ಕೆ ಬರಲು; ತನ್ನವರೆಂದು ನಂಬಿಕೊಂಡವರಿಂದ ವಿಶ್ವಾಸಘಾತವಾದುದೂ ಕಾರಣವಾಗುತ್ತದೆ. ಬೇಟೆಗಾರರಾದ ಫಿರೋಜ, ಶ್ರೀನಿವಾಸ, ಅರ್ಜುನರಾವ್, ಜಾನಕಿ, ಸೀತಾರಾಮ ಇವರೆಲ್ಲ ತಂಡವಾಗಿ ನಾಗಪ್ಪನ ತೇಜೋವಧೆ ಮಾಡುತ್ತಾರೆ. ಆದರೆ ನಾಗಪ್ಪ ಅದನ್ನು ಸಮರ್ಥವಾಗಿ ಎದುರಿಸುತ್ತಾನೆ. ಬೇಟೆಯ ಪ್ರಾಣಿಯಾದ ತಾನು ಮುಗ್ಧ ಮೃಗವಲ್ಲ ಎಂದು ತೋರಿಸುತ್ತಾನೆ. ಕೇವಲ ಪುರುಷ ಜಗತ್ತು ಮಾತ್ರವಲ್ಲ ಅದರ ಕೈಗೊಂಬೆಯಾಗಿ ಶ್ರೀನಿವಾಸನ ತಾಯಿ ಪದ್ದಕ್ಕ, ಮೇರಿ, ರೀನಾ, ಥ್ರೀಟಿ, ಡಯಾನ ಮುಂತಾದ ಹೆಂಗಳೆಯರು ಮಾಡುವ ವಿಶ್ವಾಸಘಾತವು ಬಂಡವಾಳಶಾಹಿಯ ಕ್ರೌರ್ಯದ ಅನಾವರಣ ಮಾಡುತ್ತದೆ. ಗಂಡು-ಹೆಣ್ಣು ಎಲ್ಲರೂ ನ್ಯಾಯವನ್ನು ಬಲಿಗೊಟ್ಟು ಹಣವನ್ನೇ ಮೌಲ್ಯವೆಂದು ಭಾವಿಸಿ ಹೃದಯಶೂನ್ಯರಾಗಿ ವರ್ತಿಸುತ್ತಾರೆ ಎಂಬುದು ಚಿತ್ರವತ್ತಾಗಿ ಕಾಣಿಸುತ್ತದೆ. ಕಾದಂಬರಿ ತನ್ನ ಒಡಲೊಳಗೆ ರಹಸ್ಯವಾಗಿಟ್ಟುಕೊಂಡಿರುವ ವಸ್ತುನಿಷ್ಠ ಒಳಪದರಗಳ ಶೋಧನೆಯಿಂದಾಗಿ ಬಂಡವಾಳಶಾಹಿ ವ್ಯವಸ್ಥೆಯ ಭಯಾನಕ ಕ್ರೌರ್ಯದ ದರ್ಶನವಾಗುತ್ತದೆ. ಇದಕ್ಕೆ ಬೇಸತ್ತ ನಾಗಪ್ಪ ಈ ಪ್ರಪಂಚ ಭಂಡ ಸ್ವರೂಪದ್ದೆಂಬ ತೀರ್ಮಾನಕ್ಕೆ ಬರುತ್ತಾನೆ. ಅಮೆರಿಕಾದ ಮಾತೃ ಸಂಸ್ಥೆ ನಾಗಪ್ಪನ ಸಾಮರ್ಥ್ಯವನ್ನು ಗುರುತಿಸಿ ಪದೋನ್ನತಿ ನೀಡಲು ಸಿದ್ಧವಿದ್ದರೂ ಅದನ್ನು ಒಪ್ಪಿಕೊಳ್ಳದೇ ರಾಜಿನಾಮೆ ಕೊಟ್ಟ ಕೆಲಸಕ್ಕೆ ಮತ್ತೆ ಸೇರಿಕೊಳ್ಳದೇ ಇನ್ನೂ ಕಂಡಿರದ ಅಣ್ಣ, ಕಾಣೆಯಾದ ತಂಗಿಯನ್ನು ಹುಡುಕುವ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾನೆ.

“ಪ್ರೀತಿ, ಅಂತಃಕರಣ, ಸ್ವಾತಂತ್ರ್ಯ ಮೊದಲಾದ ಮಾನವೀಯ ಮೌಲ್ಯಗಳಿಗೆ ಕವಡೆಯ ಬೆಲೆಯನ್ನೂ ಕೊಡದೆ ಜಾತಿ ಮೊದಲಾದ ಎಲ್ಲ ವ್ಯವಸ್ಥೆಗಳಲ್ಲೂ ಕಾರ್ಯಪ್ರವೃತ್ತವಾಗಿರುವ ಫ್ಯಾಸಿಸ್ಟ್ ಶಕ್ತಿಗಳು ಒಂದು ಕಡೆ ಕಂಡುಬರುತ್ತಿರುವ ಇಂದಿನ ಸಂದರ್ಭದಲ್ಲಿ ಈ ವ್ಯವಸ್ಥೆಯ ಮೂಲದಲ್ಲಿರುವ ಮನುಷ್ಯನ ಸ್ವಾರ್ಥ, ಅಹಂಗಳನ್ನು, ಕ್ರೌರ್ಯಗಳನ್ನು ಮೀರಿ ಬೆಳೆಯಬೇಕಾದ ಅಗತ್ಯವನ್ನು ತೋರಿಸುವ ಕಾರಣಕ್ಕಾಗಿ ಶಿಕಾರಿ ಗಮನಾರ್ಹ ಕಾದಂಬರಿಯಾಗಿದೆ” ಎಂಬುದು ಜಿ. ಎನ್. ರಂಗನಾಥರಾವ್ ಅವರ ಅಭಿಪ್ರಾಯ. ಬಂಡವಾಳಶಾಹಿ ಜಗತ್ತು ಮನುಷ್ಯತ್ವವನ್ನು ನಾಶಮಾಡಿ ಎಲ್ಲರನ್ನೂ ಕೈಗೊಂಬೆಗಳನ್ನಾಗಿ ಮಾಡಿಕೊಳ್ಳುತ್ತದೆ. ಇಲ್ಲಿ ಮಾನವೀಯತೆಗಿಂತ ಹಣವೇ ಮುಖ್ಯವಾಗಿದೆ. ಹಣವೊಂದಿದ್ದರೆ ಎಲ್ಲವೂ ಗೌರವಾರ್ಹವೇ ಆಗಿದ್ದು, ಅದರ ಸಂಪಾದನೆಗಾಗಿ ಎಲ್ಲ ಬಗೆಯ ಕೆಟ್ಟ ಕೆಲಸಗಳನ್ನೂ ಮಾಡಲು ಹೇಸದ ಅನೈತಿಕ ಜನರ ಸಕೃದ್ದರ್ಶನವನ್ನು ಕಾದಂಬರಿ ಮಾಡಿಸುತ್ತದೆ. ನೇತ್ರಾವತಿಯನ್ನು ಕೊಂದ ಶ್ರೀನಿವಾಸನೇ ಆಸ್ತಿಗಾಗಿ ಬಸುರಿ ಶಾರದೆಯನ್ನು ಮದುವೆಯಾಗುತ್ತಾನೆ. ಜಾತಿಗೆ ಹಿರಿಯನಾಗುತ್ತಾನೆ. ಒಂದು ಹಂತದಲ್ಲಿ ತನ್ನ ಮಾನದ ರಕ್ಷಣೆಗಾಗಿ ಶಾರದೆಯನ್ನು ಬೇಕಾದರೂ ಕೊಡುವ ಮನಸ್ಸು ಮಾಡುತ್ತಾನೆ. ಸಭ್ಯತೆಯ ಮುಖವಾಡದ ಹಿಂದಿರುವ ಕ್ರೌರ್ಯವನ್ನು ಕಾದಂಬರಿ ಅನಾವರಣ ಮಾಡುತ್ತದೆ.

ಮುಂಬಯಿ ಮಾನವೀಯತೆಯಿಲ್ಲದ ಹಿಂಸಾತ್ಮಕ ಪರಿಸರದ ಪ್ರತಿನಿಧಿಯಾಗುತ್ತದೆ. ಮನುಷ್ಯತ್ವವಿಲ್ಲದ ಈ ನಾಗರಿಕ ಜಗತ್ತಿನಲ್ಲಿ ಪ್ರೀತಿ, ಗೆಳೆತನ, ವಿಶ್ವಾಸ, ಅನುಕಂಪಗಳೆಲ್ಲ ನೆಲಕಚ್ಚಿ ಸ್ವಾರ್ಥ, ದುರಾಸೆ ಮತ್ತು ಪ್ರಾಣಿ ಜಗತ್ತಿನಲ್ಲಿ ಕಾಣುವ ಮೃಗೀಯ ಪ್ರವೃತ್ತಿ ತಲ್ಲಣಗೊಳಿಸುವ ಭಯಾನಕ ಪರಿಸರವನ್ನು ಚಿತ್ರಿಸುತ್ತವೆ. ವಿಮರ್ಶಕ ಡಿ. ಎ. ಶಂಕರ್ ಗುರುತಿಸುವಂತೆ; “ಬೇಟೆಯಾಡಿ ಬದುಕುವ ಮೃಗೀಯ ಪ್ರವೃತ್ತಿ, ಹಿಂಸೆ ಮಾಡುವ, ನಾಶ ಮಾಡುವ ಉದ್ದೇಶ ಮನುಷ್ಯತ್ವವನ್ನೇ ಕೊಂದುಹಾಕಿದೆ”. ಇಲ್ಲಿಯ ಪಾತ್ರಗಳು ಭಿನ್ನ ಕಾರಣಗಳಿಗಾಗಿ ಭೀತಿಯಡಿಯಲ್ಲೇ ಬದುಕುತ್ತವೆ. ಶ್ರೀನಿವಾಸ ಮತ್ತು ಅವನ ತಾಯಿ ಪದ್ದಕ್ಕನಿಗೆ ತಮ್ಮ ಮರ್ಯಾದೆಯ ಭಯ, ಎಂ.ಡಿ., ಡಿ.ಎಂ.ಡಿ ಪಟೇಲರಿಗೆ ಷೇರುದಾರರ ಎದುರು ಕಂಪನಿಯ ಹೆಸರು, ಮರ್ಯಾದೆ, ಹಣ ನಷ್ಟವಾಗುವ ಭಯ, ಜಾತಿ, ಹಣ, ವರ್ಚಸ್ಸು ಕಳೆದುಕೊಳ್ಳುವ ತಲ್ಲಣ ಎಲ್ಲ ಪಾತ್ರಗಳಲ್ಲೂ ಆಂತರಂಗಿಕವಾಗಿ ಸುಪ್ತ ಪ್ರಜ್ಞೆಯಾಗಿದೆ.

ಮನೋವಿಜ್ಞಾನದ ಅರಿವು ‘ಶಿಕಾರಿ’ ಕಾದಂಬರಿಯ ಹಿನ್ನೆಲೆಯಲ್ಲಿ ಉದ್ದಕ್ಕೂ ಕೆಲಸ ಮಾಡಿದೆ. ಇದನ್ನು ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಗುರುತಿಸಿಯೂ ಇದ್ದಾರೆ; “ಇಡೀ ಕಾದಂಬರಿ ಅದರ ಅಪರಾಧ ಪರಿಶೋಧನೆಯ ಮಾರ್ಗದಿಂದಾಗಿ ಚಿತ್ತಾಲರು ನಂಬಿರುವ ಮನಃಶಾಸ್ತ್ರ ಸಿದ್ಧಾಂತವನ್ನು ನಿರೂಪಿಸುವಂತಿದೆ”. ತನಿಖಾ ಆಯೋಗದ ಎದುರು ನಾಗಪ್ಪ ಹಾಜರಾದಾಗ ಅವನ ವರ್ತನೆಯಲ್ಲಿ ಮನಃಶಾಸ್ತ್ರದ ಗಾಢ ಪ್ರಜ್ಞೆಯನ್ನು ಕಾಣಬಹುದು. ಸಭ್ಯತೆಯ ಮುಖವಾಡದ ಹಿಂದೆ ಇರುವ ಕೌರ್ಯವನ್ನು ಅವನು ಕಾಣಬಲ್ಲ. “ಪ್ರಾರಂಭದಲ್ಲಿ ಸಸ್‍ಪೆನ್ಷನ್‍ನಿಂದ ಉಂಟಾದ ತಾತ್ಕಾಲಿಕ ನಿರುದ್ಯೋಗ ಸಮಸ್ಯೆ ನಾಗಪ್ಪನಿಗೆ ಮನಃಶಾಸ್ತ್ರಜ್ಞರ one of the greatest problems of human mind is the structuring of the time ಎಂಬ ಮಾತುಗಳನ್ನು ನೆನಪಿಗೆ ತರುತ್ತದೆ” (ಜಿ. ಎನ್. ರಂಗನಾಥರಾವ್). ನಾಗಪ್ಪ ತನ್ನ ಕೆಲಸವನ್ನು ಕಳೆದುಕೊಂಡಾಗ ಹೆದರದೆ ತನ್ನ ಮನಃಶಾಸ್ತ್ರದ ಜ್ಞಾನದ ಮೂಲಕ ಶಿಕಾರಿಯ ತಂಡವನ್ನು ಎದುರಿಸುತ್ತಾನೆ. ಕೊನೆಯಲ್ಲಿ ಗೆದ್ದು, ಪುಸ್ತಕದ ಅಂಗಡಿ ತೆಗೆಯುವ, ಇನ್ನೂ ಕಾಣದಿರುವ ಅಣ್ಣ ಹಾಗೂ ಕಾಣೆಯಾದ ತಂಗಿಯನ್ನು ಹುಡುಕುವ ಕಾರ್ಯಕ್ಕೆ ಸಿದ್ಧನಾಗುತ್ತಾನೆ. ಶಿಕಾರಿಯ ಪ್ರಮುಖ ವೈಚಾರಿಕ ನೆಲೆಯನ್ನು ರೂಪಿಸಿರುವ ಸಾಮಾಜಿಕ ವಿಷಮತೆಯ ದೃಷ್ಟಿಕೋನ ನಾಗಪ್ಪನ ಮಾತುಗಳಲ್ಲೇ (ಟಿಪ್ಪಣಿ) ಹೀಗೆ ವ್ಯಕ್ತವಾಗಿದೆ; “ಮನುಷ್ಯನಿಗೆ ತನ್ನ ಮನಸ್ಸಿನ ಆರೋಗ್ಯಕ್ಕೆ, ತನ್ಮೂಲಕ ಹುಟ್ಟುವ ಅವನ ಕ್ರಿಯೆಯ ಆರೋಗ್ಯಕ್ಕೆ ಈ ಕೇಂದ್ರದ ಸಂಪರ್ಕ ಅತ್ಯವಶ್ಯ. (ಕೇಂದ್ರ= ನಿತ್ಯ ವ್ಯವಹಾರಗಳಲ್ಲಿ ಅವುಗಳಿಂದ ಹುಟ್ಟುವ ರಾಗದ್ವೇಷಗಳಲ್ಲಿ, ಆತಂಕ, ದುಗುಡಗಳಲ್ಲಿ ತೊಡಗಿಕೊಂಡಿರದ ಮನಸ್ಸಿನ ಯಾವುದೋ ಆಳದ ಭಾಗ) ಈ ಕೇಂದ್ರಕ್ಕೆ ಜೀವವಿಕಾಸದ ದೀರ್ಘಕಾಲದ ಇತಿಹಾಸದಲ್ಲಿ ಹುಟ್ಟಿಕೊಂಡ ಪ್ರವೃತ್ತಿ ಬಲವಿದೆ. ಹಗೆಯ ವಿರುದ್ಧ ಹೋರಾಡುವ, ಜೀವ ರಕ್ಷಿಸಿಕೊಳ್ಳುವ ಪ್ರಾಣಿಗಳ ನೈಸರ್ಗಿಕ ಜಾಣತನದಂತೆಯೇ ಮನುಷ್ಯನಿಗೇ ವಿಶಿಷ್ಟವಾದ ಸೃಜನಶೀಲತೆ, ನೈತಿಕತೆ ಇವು ಕೂಡ ಈ ಕೇಂದ್ರದಲ್ಲೇ ಜನಿಸಿದವುಗಳು. ಮನುಷ್ಯನ ಸಾಮಾಜಿಕ ಜೀವನದಲ್ಲಿಯ ಇಂದಿನ ಅಧೋಗತಿಗೆ ಮುಖ್ಯ ಕಾರಣ ಇದೇ ಎಂದು ನನ್ನ ನಂಬಿಕೆ. ಈ ಸೃಷ್ಟಿಗೆ ಮೂಲವಾದ, ನೀತಿಗೆ ಮೂಲವಾದ, ಈ ಪ್ರವೃತ್ತಿ ಬಲವಿದ್ದ ಮನಸ್ಸಿನ ಕೇಂದ್ರದ ಸಂಪರ್ಕ ಕಳೆದುಕೊಂಡದ್ದು. ಇಂದಿನ ರಾಜಕಾರಣ ಈ ದುರಂತಕ್ಕೆ ಒಳ್ಳೆಯ ದೃಷ್ಟಾಂತ. ರಾಜಕಾರಣದ ಭ್ರಷ್ಟಾಚಾರದ ಮೂಲ ಹುಡುಕಬೇಕಾದರೆ ಆಧುನಿಕ ಔದ್ಯೋಗೀಕರಣದಿಂದಾಗಿ ಒದಗಿದ ಸೃಜನಶೀಲತೆಯ, ಆದ್ದರಿಂದಲೇ ನೈತಿಕತೆಯ ನಷ್ಟಕ್ಕೇ ಬರಬೇಕು”.

ಚಿತ್ತಾಲರು ಶಿಕಾರಿಯ ನಿರೂಪಣೆಗೆ ರೂಪಿಸಿಕೊಂಡಿರುವ ತಂತ್ರ ಅಪೂರ್ವವಾದುದು. ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದು ಆದಿಮ ಪ್ರವೃತ್ತಿ. ಇಂದು ಸಮಾಜದಲ್ಲಿ ಸ್ವಾರ್ಥ ಸಾಧನೆಗಾಗಿ ಮನುಷ್ಯನನ್ನೇ ಶಿಕಾರಿ ಮಾಡುವ ಆಧುನಿಕ ಮಾನುಷ ಬೇಟೆಯ ವಿಧಾನ ರೂಪುಗೊಂಡಿರುವುದನ್ನು ಕಾದಂಬರಿ ಹೇಳುತ್ತದೆ. ಆಯುಧಗಳನ್ನು ಬಳಸಿ ಪ್ರಾಣಿಗಳನ್ನು ಬೇಟೆಯಾಡುವ ಸಂಸ್ಕೃತಿಯ ಬದಲಿಗೆ, ಸ್ವಾರ್ಥಕ್ಕಾಗಿ ಕಾನೂನು ಕಟ್ಟಳೆಗಳನ್ನು ನಿರ್ಮಿಸಿಕೊಂಡು ಅದರ ಮೂಲಕವೇ ಮನುಷ್ಯನನ್ನು ಬೇಟೆಯಾಡಬಹುದು ಎಂಬ ಜ್ವಲಂತ ವಾಸ್ತವ ಕಾದಂಬರಿಯಲ್ಲಿ ಧ್ವನಿಪೂರ್ಣವಾಗಿ ಅನಾವರಣಗೊಂಡಿದೆ. ಆಯುಧಗಳ ಸಾವಿನಂತೆ ಈ ಬೇಟೆ ತರುವ ಸಾವು ತಕ್ಷಣದ್ದಲ್ಲ. ಮಾನಸಿಕ ಹಿಂಸೆಗೆ ಗುರಿಪಡಿಸಿ, ಉಸಿರುಗಟ್ಟಿಸಿ ಸಾಯಿಸುವ ಅಥವಾ ವ್ಯಕ್ತಿಯೇ ಇನ್ನು ಬದುಕಲಾರೆ ಎಂಬ ಹತಾಶೆಗೆ ಹೋಗುವ ವಾತಾವರಣವನ್ನು ಈ ಆಧುನಿಕತೆ ಸೃಷ್ಟಿಸಿದೆ ಎಂಬುದನ್ನು ಕಥನದ ಮೂಲಕ ಶಿಕಾರಿ ಕಟ್ಟಿಕೊಟ್ಟಿದೆ. ಮಹಾನಗರವಾದ ಮುಂಬೈ ಮಾತ್ರ ಕೆಟ್ಟಿಲ್ಲ, ಸಣ್ಣ ಹಳ್ಳಿಯಾದ ಹನೇಹಳ್ಳಿಯ ಬದುಕೂ ಈ ಒತ್ತಡದಲ್ಲಿ ಹಾಳಾಗಿದೆ. ಹದಗೆಟ್ಟ ಬದುಕಿನ ಉಭಯಚಿತ್ರಣಗಳೂ ಕಾದಂಬರಿಯ ಕಥನದ ಯಶಸ್ಸಿಗೆ ಪೂರಕವಾಗಿ ದುಡಿದಿವೆ. ಅಸ್ತಿತ್ವವಾದದ ಹಿನ್ನೆಲೆಯಲ್ಲಿ ಕಾದಂಬರಿಯನ್ನು ಒಂದು ಪಠ್ಯವಾಗಿ ಸ್ವೀಕರಿಸುವಷ್ಟು ಚರ್ಚೆಯೂ ‘ಶಿಕಾರಿ’ ಕಾದಂಬರಿಯ ಬಗ್ಗೆ ನಡೆದಿದೆ. ಮುಂಬಯಿ ಮಹಾನಗರದ; ರಸ್ತೆ, ವಾಹನ ಸಂಚಾರ, ಪಾರಿವಾಳದ ಗೂಡಿನಂತಹ ಚಾಳುಗಳು, ಹಾಲು ಮಾರುವ ಬೈಯ್ಯಾಗಳು, ಹೂವು ಮಾರುವ ಹುಡುಗಿಯರು, ಉಡುಪಿ ಹೋಟೆಲುಗಳು ಕಾದಂಬರಿಯಲ್ಲಿ ಸಜೀವವಾಗಿವೆ. ಮುಂಬಯಿಯ ಸ್ಥಳಗಳಾದ; ಖೇತವಾಡಿಯ ಗಲ್ಲಿ, ಪ್ರಾರ್ಥನಾ ಸಮಾಜ, ಠಾಕೂರ್ ದ್ವಾರ, ಗ್ರಾಂಟ್ ರೋಡ್, ಚರ್ನೀ ರೋಡ್, ಚೌಪಾಟಿ, ದೋಬೀತಲಾವ್, ಟಿಳಕ್ ಬ್ರಿಜ್, ದಾದರ್ ಟ್ರ್ಯಾಮ್ ಟರ್ಮಿನಸ್, ಕಿಂಗ್ಸ್ ಸರ್ಕಲ್, ಸಾಯನ್ನಿನ ಹಳೆಯ ಕೋಟೆಯ ಭಗ್ನ ಅವಶೇಷಗಳು, ಅಲ್ಲಿನ ಕಾರ್ಖಾನೆ, ಹೊಗೆಯ ರಾಶಿ, ಅಲ್ಲಿಯ ಗಂಧಕಾಮ್ಲದ ವಾಸನೆ, ಉಪ್ಪಿನ ಆಗರಗಳು ಹೀಗೆ...ನಗರ ಪ್ರಜ್ಞೆಯ ಪರಿಣಾಮಕಾರೀ ಚಿತ್ರಣದಿಂದ ಕಾದಂಬರಿ ಇನ್ನೊಂದು ಮಗ್ಗುಲಿನ ಚರ್ಚೆಗೆ ಹೊರಳಿಕೊಳ್ಳುತ್ತದೆ.

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...