ಮಹಿಳಾ ಸಾಹಿತ್ಯ ಚರಿತ್ರೆ ದಾಖಲಿಸಲು ಕಸಾಪ ಪ್ರೇರಣೆ: ಹೇಮಲತಾ ಮಹಿಷಿ ಪ್ರಶಂಸೆ

Date: 17-04-2021

Location: ಬೆಂಗಳೂರು


ಕನ್ನಡ ಸಾಹಿತ್ಯ ಪರಿಷತ್ತು ತನ್ನ ಆರಂಭದ ಕಾಲದಿಂದಲೂ ಮಹಿಳಾ ಸಾಹಿತ್ಯ ಚರಿತ್ರೆ ದಾಖಲಿಸಲು ಪ್ರೇರಣೆ ನೀಡುತ್ತಲೇ ಬಂದಿದೆ ಎಂದು ಲೇಖಕಿ ಹಾಗೂ ನ್ಯಾಯವಾದಿ ಹೇಮಲತಾ ಮಹಿಷಿ ಅಭಿಪ್ರಾಯಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ್ ಪರಿಷನ್ಮಂದಿರದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ಮಹಿಳಾ ಸಾಹಿತ್ಯ ಸಂಪುಟಗಳ ಕುರಿತು ವಿಚಾರ ಸಂಕಿರಣವನ್ನುಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಸಾಹಿತ್ಯದತ್ತ ಗಮನ ಸೆಳೆಯಲು ಕನ್ನಡ ಸಾಹಿತ್ಯ ಪರಿಷತ್ತು ಬಿಡಿಬಿಡಿಯಾಗಿ ಪುಸ್ತಕಗಳನ್ನು ಪ್ರಕಟಿಸಿದೆ. ಆದರೆ, ಇಡಿಯಾಗಿ ಬೃಹತ್ ಗ್ರಂಥವಾಗಿ ಪ್ರಕಟಣೆ ಆಗಿಲ್ಲ. ಹಳೆ ತಲೆಮಾರಿನ ಲೇಖಕಿಯರ ಸಾಧನೆಗಳು ದಾಖಲಿಸಬೇಕು. ಈ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕು ಎಂದು ಸಲಹೆ ನೀಡಿದರು.

ತಾವು ಬೆಂಗಳೂರಿಗೆ ಬಂದು 50 ವರ್ಷಗಳು ಕಳೆಯುತ್ತಿವೆ. ಅಂದಿನಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದೆ. ನಿರ್ಲಕ್ಷ್ಯಕ್ಕೊಳಗಾಗಿದ್ದ ಮಹಿಳಾ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರೇರಣೆ ನೀಡಿದೆ. ವಿವಿಧ ಲೇಖಕಿಯರನ್ನು ಗುರುತಿಸಿ ಅವರ ಗ್ರಂಥಗಳನ್ನು ಕಸಾಪ ಪ್ರಕಟಿಸುತ್ತಲೇ ಬಂದಿದೆ. ಮಹಿಳೆಯರ ಒತ್ತಾಸೆಗೆ ಗೌರವ ನೀಡಿ ಸಂವೇದನೆಗಳಿಗೆ ಸ್ಪಂದಿಸಿದೆ ಎಂದು ಅಭಿಪ್ರಾಯಪಟ್ಟರು.

ಸ್ತ್ರೀವಾದಿ ಚಿಂತನೆ ನಿರ್ಲಕ್ಷ್ಯ ಸಲ್ಲ: ಸಾಹಿತ್ಯ ರಚನೆಯಲ್ಲಿ ಮಹಿಳೆಯರ ಸಾಮರ್ಥ್ಯವನ್ನು ಕಡೆಗಣಿಸಬಾರದು. ಈ ಎಚ್ಚರಿಕೆಯನ್ನು ಜಗತ್ತಿಗೆ ಸಾರುವ ಹೊಣೆಗಾರಿಕೆ ಮಹಿಳಾ ಲೇಖಕಿಯರ ಮೇಲಿದೆ ಎಂದು ಹಂಪಿಯ ಕನ್ನಡ ವಿ.ವಿ. ನಿವೃತ್ತ ಕುಲಪತಿ ಹಾಗೂ ಲೇಖಕಿ ಡಾ. ಮಲ್ಲಿಕಾ ಘಂಟಿ ಹೇಳಿದರು.

ಶಿಷ್ಟ ಸಾಹಿತ್ಯ ಹೇಳಲು ಸಾಧ್ಯವಾಗದ ವಿಚಾರಗಳನ್ನು ಅನಕ್ಷರಸ್ಥರಾದ ಗ್ರಾಮೀಣ ಹೆಣ್ಣುಮಕ್ಕಳು ಉತ್ತಂಗ ಹಾಗೂ ಉನ್ನತವಾದ ಜಾನಪದೀಯ ಸಾಹಿತ್ಯ ರಚಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ಮಹಿಳೆಯರ ಸಾಹಿತ್ಯ ನಿರ್ಲಕ್ಷಿಸಲಾಗಿದೆ. ಸಮಾಜದ ಈಗಿದ್ದ ವ್ಯವಸ್ಥೆಯತ್ತ ಹೆಚ್ಚು ಗಮನ ನೀಡಲಾರದೇ ಮಹಿಳೆಯರು ಹೊಸ ವ್ಯವಸ್ಥೆಯತ್ತ ಮುಖ ಮಾಡುತ್ತಿದ್ದು, ಉತ್ತಮ ಬೆಳವಣಿಗೆಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಕಸಾಪ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಅಧ್ಯಕ್ಷತೆವಹಿಸಿ, ಮೂರು ವರ್ಷಗಳ ಹಿಂದೆ (2015) ದಲಿತ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಿದ್ದು, ಸದ್ಯ, ಮಹಿಳಾ ಸಾಹಿತ್ಯ ಸಂಪುಗಳ ಪ್ರಕಟಣೆಯು ಪರಿಷತ್ತಿನ ಬಹುದೊಡ್ಡ ಸಾಧನೆಯೇ ಆಗಿದೆ ಎಂದು ಹೇಳಿದರು.

ಸಂಪುಟಗಳ ಲೋಕಾರ್ಪಣೆ: ಕಾವ್ಯ ಸಂಪುಟ (ಸಂ: ಡಾ. ಪಿ. ಚಂದ್ರಿಕಾ),ಕಥೆ ಸಂಪುಟ (ಸಂ: ಡಾ. ಪದ್ಮಿನಿ ನಾಗರಾಜ್) ವಿಮರ್ಶೆ ಸಂಪುಟ (ಸಂ: ಎಂ..ಎಸ್. ಆಶಾದೇವಿ), ಸ್ತ್ರೀವಾದಿ ಚಿಂತನೆ ಸಂಪುಟ (ಸಂ: ಡಾ. ಧರಣಿದೇವಿ ಮಾಲಗತ್ತಿ), ಲಲಿತ ಪ್ರಬಂಧಗಳ ಸಂಪುಟ (ಸಂ: ಡಾ. ಬಾ.ಹ. ರಮಾಕುಮಾರಿ), ಅಂಕಣಗಳ ಸಂಪುಟ- ಈ ಎಲ್ಲ ವಿಷಯಗಳ ಬೃಹತ್ ಸಂಪುಟಗಳು ಲೋಕಾರ್ಪಣೆಗೊಂಡವು.

ಲೇಖಕಿ ಹಾಗೂ ಪೊಲೀಸ್ ಅಧಿಕಾರಿ ಸವಿತಾ ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಪದ್ಮರಾಜ್ ದಂಡಾವತಿ ಸ್ವಾಗತಿಸಿದರು. ಕಸಾಪ ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ನಿರೂಪಿಸಿದರು. ಮೈಸೂರು ಕನ್ನಡ ಜಿಲ್ಲಾ ಪರಿಷತ್ತು ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ, ಡಾ. ಪದ್ಮಿನಿ ನಾಗರಾಜ್ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಬುಕ್ ಬ್ರಹ್ಮ ಸಂಸ್ಥೆಯು ಈ ಸಮಾರಂಭವನ್ನು ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಪ್ರಸಾರ ಮಾಡಿತು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...