‘ಮಕ್ಕಳಲ್ಲಿ ಕನಸು ಬಿತ್ತುವ ಕೆಲಸವಾಗಬೇಕು’ - ನರಹಳ್ಳಿ ಬಾಲಸುಬ್ರಹ್ಮಣ್ಯ

Date: 27-06-2022

Location: ಧಾರವಾಡ


"ದೊಡ್ಡವರಾದಂತೆ ನಾವು ದುಡ್ಡು ಗಳಿಸುತ್ತಿದ್ದೇವೆ, ಆದರೆ ಬಾಲ್ಯ ಸಹಜತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳಲ್ಲಿ ಕನಸು ತುಂಬುವ ಕೆಲಸವಾಗಬೇಕು, ಮಕ್ಕಳನ್ನು ಸೃಜನಶೀಲರನ್ನಾಗಿಸಬೇಕು. ಇದಕ್ಕೆಲ್ಲ ಪುಸ್ತಕಗಳೇ ದೊಡ್ಡ ಸಾಧನೆಗಳು. ಮಕ್ಕಳ ಸಾಹಿತ್ಯ ಇದಕ್ಕೆ ಪೂರಕವಾಗಿ ಬೆಳೆಯಬೇಕು." ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಧಾರವಾಡದ ಮಕ್ಕಳ ಸಾಹಿತ್ಯಾಸಕ್ತ ಗೆಳೆಯರ ಬಳಗ ಮತ್ತು ಬೆಂಗಳೂರಿನ ಅಭಿನವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಡಾ. ಆನಂದ ಪಾಟೀಲ ಅವರ ಹತ್ತು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

"ಮಕ್ಕಳ ಸಾಹಿತ್ಯಕ್ಕಾಗಿ ಬಹು ಮುಖ ನೆಲೆಯಲ್ಲಿ ಕೆಲಸ ಮಾಡುತ್ತಿರುವವರು ಡಾ. ಆನಂದ ಪಾಟೀಲರು. ಮಕ್ಕಳ ಸಾಹಿತ್ಯವನ್ನು ಸ್ವತಃ ಲಚಿಸುತ್ತ, ಮಕ್ಕಳ ಸಾಹಿತ್ಯ ವೇದಿಕೆ ಹುಟ್ಟು ಹಾಕಿ, ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ, ಅಂತರ್ಜಾಲ ಪತ್ರಿಕೆ ಪ್ರಕಟಿಸುತ್ತ , ಮಕ್ಕಳ ಸಾಹಿತ್ಯಕ್ಕೆ ಮೀಮಾಂಸೆ ಕಲ್ಪಿಸುವ ಪ್ರಯತ್ನ ಮಾಡುತ್ತ -ವಿವಿಧ ಆಯಾಮಗಳಿಂದ ಚಲನಶೀಲರಾಗಿದ್ದಾರೆ. ಇಂಥ ವ್ಯಕ್ತಿತ್ವವುಳ್ಳವರು ಅಪರೂಪ." ಎಂದರು

ಬಿಡುಗಡೆಗೊಂಡ ಹತ್ತು ಕೃತಿಗಳ ಲೇಖಕರಾದ ಡಾ. ಆನಂದ ಪಾಟೀಲರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತ "ಕನ್ನಡದಲ್ಲಿ ಚಿತ್ರ ಪುಸ್ತಕಗಳ (ಪಿಕ್ಚರ್ ಬುಕ್ಸ್) ಕೊರತೆ ದೊಡ್ಡದಿದೆ. ಆ ನಿಟ್ಟಿನಲ್ಲಿ ಈ ದಿನ 5 ಪುಸ್ತಕಗಳು ಬಿಡುಗಡೆಯಾಗಿದ್ದು ವಿಶೇಷ. ಇಂಗ್ಲೀಷಿನ ಅಪರೂಪದ ಕೃತಿ 'ವಿನ್ನಿ ಪೂಹಾ' ಮತ್ತು ಹಿಂದಿಯ ಮಹತ್ವದ ಮಕ್ಕಳ ಕವಿ 'ರಮೇಶ ತೈಲಂಗ ಅವರ ಕವಿತೆಗಳು' ಕನ್ನಡಕ್ಕೆ ಬಂದಿರುವುದು ಖುಷಿಯ ಸಂಗತಿ" ಎಂದು ಹೇಳಿದರು.

ಬೆಂಗಳೂರಿನ ಅಭಿನವದ ನ. ರವಿಕುಮಾರ ಮಾತನಾಡುತ್ತ "ಧಾರವಾಡ ಅಂದ್ರೆ ಠಾಕೂರ್ ಪೇಡಾ, ಧಾರವಾಡ ಅಂದ್ರೆ ಬೇಂದ್ರೆ ಅಜ್ಜ, ಧಾರವಾಡ ಆಂದ್ರೆ ಗಂಗೂಬಾಯಿ ಹಾನಗಲ್ ಸಂಗೀತ, ಈಗೀಗ ಧಾರವಾಡ ಅಂದ್ರೆ ಆನಂದ ಪಾಟೀಲರ ಮಕ್ಕಳ ಪುಸ್ತಕವೇ. ಬರೆಯುವವರ ಬೆನ್ನು ತಟ್ಟುತ್ತಾ ಕನ್ನಡದಲ್ಲಿ ಮಕ್ಕಳ ಬರಹಗಾರರ ಪಡೆಯನ್ನೇ ಕಟ್ಟಿದವರು ಪಾಟೀಲರು. ಕನ್ನಡದಲ್ಲಿ ಹಿರಿಯರ ಸಾಹಿತ್ಯದಂತೆ ಮಕ್ಕಳ ಸಾಹಿತ್ಯಕ್ಕೂ ಅಷ್ಟೆ ಪಾಮುಖ್ಯತೆ ಕೊಟ್ಟು ಮಕ್ಕಳ ಕಾದಂಬರಿಯ ಪರಂಪರೆಯನ್ನೇ ನಿರ್ಮಿಸಿದ್ದು ಅಭಿನವ. ವೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿ ಮಾಲೆಯನ್ನು ಆರಂಭಿಸಿ 12 ಪುಸ್ತಕಗಳನ್ನು ಪ್ರಕಟಿಸಿದ್ದು ಒಂದು ದಾಖಲೆ. ಅವು ಪಡೆದ ಜನಪ್ರೀತಿಯೂ ಅಷ್ಟೇ ದೊಡ್ಡದು. ಮಕ್ಕಳ ಪುಸ್ತಕವೆಂದರೆ ಕೇವಲ ಅಕ್ಷರಗಳಲ್ಲ ಅವುಗಳ ಜತೆಗೆ ಚಿತ್ರಗಳಿಗೂ ಪ್ರಾಮುಖ್ಯವಿರಬೇಕೆಂಬುದನ್ಮು ಇಂಗ್ಲಿಷ್ ಪುಸ್ತಕಗಳು ತೋರಿಸಿಕೊಟ್ಟಿವೆ. ಅಂಥದೇ ಪುಸ್ತಕಗಳು ಕನ್ನಡದ ಮಕ್ಕಳಿಗೂ ಸಿಗಬೇಕೆಂಬ ಇಚ್ಛೆಯಿಂದ ಅಭಿನವ ಅಂಕಲ್ ಪೈ ಅವರ ನೆನೆಪಿನ ಪುಸ್ತಕಮಾಲೆಯನ್ನು ಆರಂಭಿಸಿದೆ. 3 ಪುಸ್ತಕಗಳು ಈ ಮಾಲಿಕೆಯಲ್ಲಿ ಈ ದಿನ ಬಿಡುಗಡೆಯಾಗುತ್ತಿವೆ. ಈ ಮಾಲಿಕೆಯಲ್ಲಿ ಇಂಥ 100 ಪುಸ್ತಕಗಳನ್ನು ತರುವ ಅಭಿಲಾಷೆ ಅಭಿನವದ್ದು." ಎಂದು ಹೇಳಿದರು.

ಧಾರವಾಡದ ಮಕ್ಕಳ ಸಾಹಿತ್ಯಾಸಕ್ತ ಗೆಳೆಯರ ಬಳಗದ ಅಧ್ಯಕ್ಷರಾದ ಜಿ.ಬಿ.ಹೊಂಬಳ ಅವರು ಮಾತನಾಡಿ "ಧಾರವಾಡದಲ್ಲಿ ಒಂದೇ ದಿನ ಹತ್ತು ಮಕ್ಕಳ ಸಾಹಿತ್ಯದ ಪುಸ್ತಕಗಳು ಬಿಡುಗಡೆ ಆಗುತ್ತಿರುವುದು ಒಂದು ದಾಖಲೆ" ಎಂದು ಹೇಳಿದರು.

ಡಾ. ಮಾಲತಿ ಪಟ್ಟಣಶೆಟ್ಟಿ ಮತ್ತು ಸಿ.ಯು.ಬೆಳ್ಳಕ್ಕಿ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ , ಡಾ. ಬಸು ಬೇವಿನಗಿಡದ, ಶಂಕರ ಹಲಗತ್ತಿ, ರಜನಿ ನರಹಳ್ಳಿ, ನಿಂಗಣ್ಣ ಕುಂಟಿ, ರಾಜಶೇಖರ ಕುಕ್ಕುಂದಾ, ಅಶೋಕ ಚೊಳಚಗುಡ್ಡ, ಬಸಯ್ಯ ಶಿರೋಳ, ಅಶೋಕ ಉಳ್ಳೇಗಡ್ಡಿ ಉಪಸ್ಥಿತರಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದ. ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಫೋಟೋಗಳು:

 

 

 

 

 

 

 

 

 

 

 

 

 

 

 

 

 

 

 

 

 

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...