ಮಯೂರ ವರ್ಮನ ತಟಾಕದ ನಗರ ಚಂದ್ರವಳ್ಳಿ

Date: 30-09-2020

Location: ಬೆಂಗಳೂರು


ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ (ICHR) ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿರುವ ಡಾ. ಶಿವಶರಣ ಅರುಣಿ ಅವರು ಪ್ರಾಗೈತಿಹಾಸಿಕ ಇತಿಹಾಸ ಮತ್ತು ಕಲಾ ಇತಿಹಾಸದಲ್ಲಿ ಆಸಕ್ತರು. ಕರ್ನಾಟಕದಲ್ಲಿ ನಗರೀಕರಣ ಪ್ರಕ್ರಿಯೆಯ ಸ್ವರೂಪ ಹಾಗೂ ನಗರಗಳು ರೂಪುಗೊಂಡ ಬಗೆಯನ್ನು ವಿವರಿಸುವ ಈ ಸರಣಿಯ ಈ ಬರೆಹದಲ್ಲಿ ಚಂದ್ರವಳ್ಳಿ ನಗರದ ಸ್ವರೂಪದ ಬಗ್ಗೆ ಚರ್ಚಿಸಿದ್ದಾರೆ.

ಕರ್ನಾಟಕದಲ್ಲಿ ಇತಿಹಾಸದ ಆರಂಭಿಕ ಕಾಲದ ನಗರೀಕರಣ ಪ್ರಕ್ರಿಯೆಯಲ್ಲಿ ಗುರುತಿಸಬಹುದಾದ ನಗರವೆಂದರೆ ಚಂದ್ರವಳ್ಳಿ. ನವಶಿಲಾಯುಗದಿಂದ ಕ್ರಮೇಣವಾಗಿ ಕಬ್ಬಿಣ ಯುಗದ ಲೋಹ ಬಳಕೆಯ ಸಂಸ್ಕೃತಿಯಲ್ಲಿ ಉಂಟಾದ ಕೃಷಿ ಕ್ರಾಂತಿ ಹಾಗೂ ಅಶೋಕನ ಕಾಲದಲ್ಲಿ ಒದಗಿಬಂದ ಅಕ್ಷರ ಜ್ಞಾನ ಮತ್ತು ದೂರದ ವ್ಯಾಪಾರ ಸಂಪರ್ಕಗಳಿಂದಾಗಿ ಆಯಕಟ್ಟಿನ ಸ್ಥಳವೊಂದು ನಗರವಾಗಿ ಹೊಮ್ಮಿದ ಪ್ರಕ್ರಿಯೆಯನ್ನು ಚಂದ್ರವಳ್ಳಿಯ ನಗರಿಕರಣ ಚರಿತ್ರೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಮೌರ್ಯ ಸಾಮ್ರಾಜ್ಯದ ಗಡಿಗೆ ಹೊಂದಿಕೊಂಡಂತೆ ಇದ್ದ ಆಯಕಟ್ಟಿನ ಸ್ಥಳಗಳು ಕ್ರಮೇಣವಾಗಿ ಮುಖ್ಯ ಪಟ್ಟಣಗಳಾಗಿ ನೆಲೆಗೊಳ್ಳಲು ಅಣಿಯಾದವು ಎಂಬುದಕ್ಕೆ ಚಿತ್ರದುರ್ಗದ ಬಳಿಯ ಚಂದ್ರವಳ್ಳಿ ಪುರಾತನ ನಗರ ಉತ್ತಮ ಉದಾಹರಣೆ. ಮಯೂರ ವರ್ಮನ ಶಾಸನದಿಂದ ಚಂದ್ರವಳ್ಳಿ ಕನ್ನಡ ನಾಡಿನಲ್ಲಿ ಹೆಸರುವಾಸಿಯಾದ ಸ್ಥಳ. ಇದು ನಾಡಿನ ಆರಂಭಿಕ ರಾಜಧಾನಿ ನಗರಗಳಲ್ಲಿ ಒಂದು ಎಂಬುದು ಗಮನಿಸುವ ಅಂಶ. ಶಾತವಾಹನರ ನಂತರ ಆಳ್ವಿಕೆಗೆ ಬಂದ ಪ್ರಾಂತೀಯ ಅರಸರಾದ ಮಹಾರಥಿ ಅರಸರು ಇದನ್ನು ತಮ್ಮ ರಾಜ್ಯದ ರಾಜಧಾನಿಯಾಗಿ ಮಾಡಿಕೊಂಡಿದ್ದರೆಂದು ವಿದ್ವಾಂಸರ ಅಭಿಪ್ರಾಯ. ಬನವಾಸಿಯಲ್ಲಿ ರಾಜ್ಯ ಸ್ಥಾಪನೆಗೂ ಮುಂಚೆಯೇ ಚಂದ್ರವಳ್ಳಿಯಲ್ಲಿ ನೆಲೆಸಿದ್ದನು. ಆ ಕಾಲಾವಧಿಯಲ್ಲಿಯೇ ಮಯೂರ ವರ್ಮ ಇಲ್ಲಿಯ ಕೆರೆಯನ್ನು ಭದ್ರಪಡಿದನೆಂದು ಹೇಳಬಹುದು. ಇದು ತನ್ನ ಆಯಕಟ್ಟಿನ ಸ್ಥಳದಿಂದಾಗಿ ಪ್ರಾಚೀನ ಕಾಲದಲ್ಲಿ ಒಂದು ವಾಣಿಜ್ಯ ನಗರವಾಗಿ ಪರಿವರ್ತನೆಯಾಯಿತು ಎಂಬುದಕ್ಕೆ ಇಲ್ಲಿ ದೊರೆಯುವ ಅಸಂಖ್ಯ ಪುರಾತನ ನಾಣ್ಯಗಳು ಸಾಕ್ಷಿ. ಚಂದ್ರವಳ್ಳಿಯು ದಕ್ಷಿಣ ಭಾರತದ ಪುರಾತತ್ವದ ಅಧ್ಯಯನದ ಹಿನ್ನೆಲೆಯಲ್ಲಿ ಪ್ರಮುಖ ನೆಲೆಯಾಗಿ ಗುರುತಿಸಲ್ಪಡುತ್ತದೆ. ಚಂದ್ರವಳ್ಳಿಯ ಪುರಾತನ ನೆಲೆಯಲ್ಲಿ ಒಂದು ಶತಮಾನಕ್ಕೂ ಅಧಿಕ ಕಾಲ ಸಂಶೋಧನೆಗಳು ನಡೆದು ಕೊಂಡು ಬಂದಿವೆ. ನೈಸರ್ಗಿಕ ಬೆಟ್ಟಗಳ ಮಧ್ಯದ ಕಣಿವೆಯಲ್ಲಿ ಉಗಮಗೊಂಡ ಈ ನಗರ ಸುಮಾರು 1500 ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ನಗರವಾಗಿತ್ತು. ಈ ಹಳೆಯ ಪಟ್ಟಣದಲ್ಲಿ ಶಾತವಾಹನರ, ಅವರ ಸಾಮಂತ ಅರಸರಾಗಿದ್ದ ಮಹಾರಥಿಗಳ; ಮತ್ತು ರೋಮನ್‌ರ, ಚೀನಾ ದೇಶಗ ಅರಸರಾದ ಸುಂಗ್ ಆಳ್ವಿಕೆಯ ನಾಣ್ಯಗಳು ಇಲ್ಲಿ ದೊರೆತಿವೆ. ಈ ಎಲ್ಲಾ ಐತಿಹಾಸಿಕ ದಾಖಲೆಗಳ ಹಿನ್ನೆಲೆಯಲ್ಲಿ ಚಂದ್ರವಳ್ಳಿಯನ್ನು ವಿದ್ವಾಂಸರು ಅಧ್ಯಯನ ಮಾಡಿದ್ದಾರೆ. ಆದರೆ ಇಲ್ಲಿಯ ಪ್ರಾಚೀನ ನಗರದ ವಿನ್ಯಾಸ, ಅದರ ಐತಿಹಾಸಿಕ ಸ್ವರೂಪ ಹಾಗೂ ಸಮಕಾಲೀನ ನಗರಗಳ ಮೇಲಾದ ಪ್ರಭಾವ ಇತ್ಯಾದಿಗಳನ್ನು ಗುರುತಿಸುವ ಕಾರ್ಯ ಇನ್ನು ನಡೆಯಬೇಕಾಗಿದೆ. ಪ್ರಸ್ತುತ ಲೇಖನ ಈ ನಿಟ್ಟಿನಲ್ಲಿ ಒಂದು ಪ್ರಯತ್ನ.
ಸಂಶೋಧನೆಗಳು :
ಚಂದ್ರವಳ್ಳಿಯ ಕುರಿತಾದ ಶೋಧನಗಳು ಪ್ರಾರಂಭವಾಗಿದ್ದು 19ನೇ ಶತಮಾನದ ಕೊನೆಯ ದಶಕದಿಂದ ಎಂದು ಹೇಳಬಹುದು. ಹೆಸರಾಂತ ಶಾಸನತಜ್ಞ ಬಿ.ಎಲ್. ರೈಸ್ 1892ರಲ್ಲಿ ಚಿತ್ರದುರ್ಗ ಜಿಲ್ಲೆಯ ಕೊಳಕಾಲ್ಮೂರು ತಾಲೂಕಿನ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟ್ಟಿಂಗ ರಾಮೇಶ್ವರ ಸ್ಥಳಗಳಲ್ಲಿ ಮೌರ್ಯ ಅರಸ ಅಶೋಕನ ಶಾಸನಗಳು ಶೋಧಿಸಿದ ನಂತರ ಈ ಜಿಲ್ಲೆಯ ಪ್ರಾಚೀನತೆಯ ಬಗ್ಗೆ ಹೆಚ್ಚು ಆಸಕ್ತಿಯು ಅವರಿಗೆ ಮೂಡಿತು. ಚಿತ್ರದುರ್ಗ ಜಿಲ್ಲೆಯ ಶಾಸನ ಸಂಪುಟವನ್ನು ಪ್ರಕಟಿಸುವ ಕಾರ್ಯದ ಅಂಗವಾಗಿ ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯ ಪ್ರದೇಶದಲ್ಲಿಯೂ ಅವರು ಶಾಸನಗಳನ್ನು ಹುಡುಕಿ ಅವುಗಳನ್ನು ಸಂಪುಟದಲ್ಲಿ ಸೇರಿಸಿದ್ದಾರೆ. ರೈಸ್ ಅವರು ಚಂದ್ರವಳ್ಳಿಯ ಅಂಕಲಿಮಠದ ಬಳಿಯ ಹುಲಿಗೊಂದಿಯ ಸಿದ್ಧೇಶ್ವರ ದೇಗುಲದ ಹಿಂಭಾಗದ ಬಂಡೆಯ ಮೇಲಿರುವ ಶಾಸನ (ಸಂಖ್ಯೆ-82); ಹಣಮಂತ ದೇವರ ಗುಡಿಯ ಬಳಿಯ ಹುಣಿಸೆ ಮರದ ಬಳಿಯ ಬಂಡೆಯ ಮೇಲಿನ ಎರಡು ಸಾಲಿನ ಶಾಸನ (ಸಂಖ್ಯೆ-83) ಹಾಗೂ ಚಂದ್ರವಳ್ಳಿಯ ಪೂರ್ವಕ್ಕೆ ಇರುವ ಪಚ್ಚೆ-ಕಣಿವೆ ಪ್ರದೇಶದಲ್ಲಿರುವ ತಣ್ಣೀರು ದೊಣೆಯ ಬಳಿಯ ಬಂಡೆಯ ಮೇಲೆ ಮಯಮ ಎಂಬ ಬ್ರಾಹ್ಮಿ ಲಿಪಿಯ ಬರಹವನ್ನು (ಸಂಖ್ಯೆ-8) ಅವರು ಶೋಧಿಸಿದರು. 1903ರಲ್ಲಿ ಪ್ರಕಟಗೊಂಡ ಚಿತ್ರದುರ್ಗ ಜಿಲ್ಲೆಯ ಶಾಸನ ಸಂಪುಟ 11ರಲ್ಲಿ ಪ್ರಕಟಿಸಿದ್ದರು. ರೈಸ್ ಅವರಿಗೆ ಚಂದ್ರವಳ್ಳಿಯ ಕದಂಬರ ಮಯೂರ ವರ್ಮನ ಶಾಸನವು ಕೈ ತಪ್ಪಿತು. ಅದು ಅವರ ಕಣ್ಣಿಗೆ ಬೀಳಲಿಲ್ಲ ಎಂಬ ವಿಷಯ ಗಮನಿಸುವಂತದ್ದು.
ಪ್ರಾಚೀನ ಪಟ್ಟಣದ ಸುಳಿವು ನೀಡಿದ ರೋಮನ್ ನಾಣ್ಯಗಳು :
ಮೈಸೂರು ಸಂಸ್ಥಾನವು ಕಮೀಷನರ್ ಅವರ ಆಳ್ವಿಕೆಯಲ್ಲಿದ್ದ ಕಾಲದಲ್ಲಿ ಬೆಟ್ಟಗಳಿಂದ ಹರಿದು ಬರುತ್ತಿದ್ದ ನೀರನ್ನು ಕಾಲವೆಯ ಮೂಲಕ ಸಂತೆ ಹೊಂಡದ ಕಲ್ಯಾಣಿಗೆ ಹರಿಸುವ ಯೋಜನೆಯ ಕಾರ್ಯದಲ್ಲಿ, ಕಾಲುವೆಯನ್ನು ಅಗೆಯುತ್ತಿದ್ದಾಗ ಹಲವು ಪ್ರಾಚೀನ ನಾಣ್ಯಗಳು ದೊರೆತವು. ಅವುಗಳನ್ನು ಲಂಡನ್ನಿನ ಬ್ರಿಟಿಷ ಮ್ಯೂಸಿಯಮ್‌ಗೆ ನೀಡಲಾಯಿತು. ಪ್ರಾಚೀನ ನಾಣ್ಯಗಳನ್ನು ಬ್ರಿಟಿಷ ನಾಣ್ಯಶಾಸ್ತ್ರಜ್ಞ ಈ. ಜೆ. ರ್‍ಯಾಪ್‌ಸನ್ ಎಂಬವರು ಅಧ್ಯಯನ ಮಾಡಿ ಪ್ರಕಟಿಸುವುದರೊಂದಿಗೆ ಹೊರ ಜಗತ್ತಿಗೆ ಚಂದ್ರವಳ್ಳಿಯ ಪ್ರಾಚೀನತೆಯ ಬಗ್ಗೆ ಮಾಹಿತಿ ದೊರೆಯಿತು. ಸುಮರು 1908ರಲ್ಲಿ ಈ ಬೆಟ್ಟಗಳ ಪ್ರದೇಶದಲ್ಲಿ ಖನಿಜಗಳ ಸರ್ವೇಯನ್ನು ಮಾಡುತಿದ್ದ ಇಂಜಿನಿಯರ್‌ಗಳು ಪುರಾತನ ನಾಣ್ಯಗಳು ಚಂದ್ರವಳ್ಳಿಯಲ್ಲಿ ದೊರೆತಿರುವ ಬಗ್ಗೆ ಅಂದಿನ ಮದ್ರಾಸ ಮೇಲ್ ಎಂಬ ಆಂಗ್ಲ ವೃತ್ತ ಪತ್ರಿಕೆಯಲ್ಲಿ ವರದಿ ಮಾಡಿದರು. ಕೇಂದ್ರ ಪುರಾತತ್ವ ಇಲಾಖೆಯ ಮುಖ್ಯಸ್ಥರಾಗಿದ್ದ ಜಾನ್ ಮಾರ್ಷಲ್ ಅವರ ಗಮನಕ್ಕೆ ಈ ಶೋಧನೆಯು ಬಂದಿತು. ತಕ್ಷಣವೇ ಅವರು ಮೈಸೂರು ಸಂಸ್ಥಾನದ ಪುರಾತತ್ವ ಇಲಾಖೆಗೆ ಮಾಹಿತಿಯನ್ನು ಕಳುಹಿಸಿ ಅದರ ಬಗ್ಗೆ ಹೆಚ್ಚಿನ ಶೋಧನೆ ಕೈಕೊಳ್ಳುವಂತೆ ಸೂಚಿಸಿದರು. ಅದರಂತೆ ಮೈಸೂರು ಸಂಸ್ಥಾನದ ಪ್ರಾಕ್ತನ ಇಲಾಖೆಯ ಮುಖ್ಯಸ್ಥರಾಗಿದ್ದ ರಾವ್ ಬಹಾದ್ದೂರ ಆರ್. ನರಸಿಂಹಾಚಾರ್ ಅವರು 1909ರಲ್ಲಿ ಈ ಹಳೆಯ ಊರಿನಲ್ಲಿ ಎಂಟು ಸ್ಥಳಗಳನ್ನು ಗುರುತಿಸಿ ಉತ್ಖನನಗಳನ್ನು ಕೈಕೊಂಡರು. ಇವರ ಶೋಧನೆಯಲ್ಲಿ ಶಾತವಾಹನರ, ಮಹಾರಥಿ ಮತ್ತು ರೋಮನ್‌ರ ನಾಣ್ಯಗಳು, ಇಟ್ಟಿಗೆಗಳಿಂದ ನಿರ್ಮಿಸಿದ ಕಟ್ಟಡಗಳು ಮತ್ತು ಹೊಳಪಿನ ಕೆಂಪು ವರ್ಣದ ಮಣ್ಣಿನ ಪಾತ್ರೆಗಳು ಹಾಗೂ ಅನೇಕ ಮಡಿಕೆಗಳು ದೊರೆತವು. ಶಾತವಾಹನರು ಮತ್ತು ಅವರ ಸಾಮಂತರಾಗಿದ್ದ ಮಹಾರಥಿ ಅರಸರ ಹಲವು ನಾಣ್ಯಗಳು ದೊರೆತಿದ್ದರಿಂದ ಇವುಗಳನ್ನು ಆಂಧ್ರದ ಕಾಲವೆಂದು ಗುರುತಿಸಿದರು ಎಂಬುದು ಗಮನಿಬೇಕಾದ ಅಂಶ. ಮುಂದುವರೆದು, ಇವರು ಇದು ಪ್ರಾಚೀನದಲ್ಲಿ ಆಳಿದ ಮಹಾರಥಿ ಅರಸರ ರಾಜಧಾನಿ ಪಟ್ಟಣವಾಗಿತ್ತೆಂಬ ಅಭಿಪ್ರಾಯ ಅವರು ವ್ಯಕ್ತಪಡಿಸುತ್ತಾರೆ. ಇವರ ಮತ್ತೊಂದು ಮುಖ್ಯ ಶೋಧನೆಯೆಂದರೆ, ಕ್ರಿ.ಶ. 1ನೇ ಶತಮಾನದಲ್ಲಿ ಆಳ್ವಿಕೆಯ ರೋಮನ್ ಅರಸ ಅಗಸ್ಟಸ್ ಹೊರಡಿಸಿದ ದೆನಾರಿ ನಾಣ್ಯ. ಇದರಿಂದ ಈ ಪುರಾತನ ನೆಲೆಯು ಸುಮಾರು ಕ್ರಿ.ಶ. 1ನೇ ಶತಮಾನದಲ್ಲಿತ್ತು ಎಂಬುದನ್ನು ನಿರ್ಧರಿಸುತ್ತಾರೆ. ಮಣ್ಣಿನಲ್ಲಿ ಮಾಡಿದ ಮುದ್ರಿಕೆಯೊಂದನ್ನು ಹುಡುಕಿದರು. ಬ್ರಾಹ್ಮಿ ಲಿಪಿಯಲ್ಲಿ ನಾಲ್ಕು ಅಕ್ಷರಗಳನ್ನು ಇದರ ಮೇಲೆ ಬರೆಯಲಾಗಿದೆ. ಇವುಗಳಲ್ಲದೇ ಒಂದು ಚೀನೀ ನಾಣ್ಯ ಕೂಡ ಅವರು ಪತ್ತೆ ಹಚ್ಚಿದರು. ಈ ಅವಶೇಷಗಳು ಇಲ್ಲಿಯ ಪ್ರಾಚೀನ ಪಟ್ಟಣದ ಬಗ್ಗೆ ಸ್ಪಷ್ಟವಾದ ಮಹಿತಿಗಳನ್ನು ಒದಗಿಸಿದವು. ಇವರು ಪುರಾತನ ನೆಲೆಯ ನಕ್ಷೆಯನ್ನು ತಯಾರಿಸಿ ಜೊತೆಗೆ ಶೋಧಿಸಿದ ಅವಶೇಷಗಳನ್ನು ಚಿತ್ರಗಳ ಸಮೇತ ಇಲಾಖೆಯ 1909 ಮತ್ತು 1910ರ ವಾರ್ಷಿಕ ವರದಿಗಳಲ್ಲಿ ಪ್ರಕಟಿಸಿದರು.
ಮಯೂರ ವರ್ಮನ ಶಾಸನದ ಶೋಧನೆ:
ಚಂದ್ರವಳ್ಳಿಯು ಪ್ರಸಿದ್ಧಿಗೆ ಬರುವುದಕ್ಕೆ ಡಾ|| ಎಂ. ಹೆಚ್. ಕೃಷ್ಣ ಅವರು ಕಾರಣರೆಂದು ಹೇಳಬಹುದು. ಇವರು 1929ರಲ್ಲಿ ಮೈಸೂರು ಸಂಸ್ಥಾನದ ಪ್ರಾಕ್ತನ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡ ನಂತರ ಮೊದಲಿಗೆ ಅಧ್ಯಯನ ಪ್ರಾರಂಭಿಸಿದ್ದು ಚಂದ್ರವಳ್ಳಿಯಿಂದ. 1929ರಲ್ಲಿ ಚಂದ್ರವಳ್ಳಿಯಲ್ಲಿ ಸರ್ವೇ ಕೈಕೊಂಡ ಸಂದರ್ಭದಲ್ಲಿ ಅವರು ಹುಡುಕಿದ್ದು ನಾಡಿನ ಪ್ರಥಮ ಅರಸು ಮನೆತನ ಕದಂಬರ ಮಯೂರ ವರ್ಮನ ಅಪರೂಪದ ಶಿಲಾಶಾಸನ. ಈ ಹಿಂದೆ ಬಿ.ಎಲ್. ರೈಸ್ ಸರ್ವೇ ಮಾಡುವಾಗ ಅವರಿಂದ ಇದನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಚಂದ್ರವಳ್ಳಿಯ ಹಳೆಯ ಊರಿನ ಭೈರವೇಶ್ವರ ದೇಗುಲದ ಮುಂಭಾಗದಲ್ಲಿರುವ ದೊಡ್ಡ ಒರಟಾದ ಬಂಡೆಯ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾದ ಈ ಶಾಸನವನ್ನು 1929ರಲ್ಲಿ ಶೋಧಿಸಿ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದರು. ಇದರಿಂದ ಚಂದ್ರವಳ್ಳಿಯ ಪ್ರಾಚೀನತೆ ಮತ್ತು ಕದಂಬರ ಮಯೂರ ವರ್ಮನ ಕುರಿತು ಹೊಸ ದಾಖಲೆ ದೊರೆತಂತಾಯಿತು. ಮೂರು ಸಾಲಿನ ಈ ಶಾಸನವನ್ನು ಕೃಷ್ಣ ಅವರು ಪ್ರಾಕೃತ ಭಾಷೆಯಲ್ಲಿ ಬೆರೆಯಲಾಗಿದೆ ಎಂದು ಗುರುತಿಸಿದರಲ್ಲದೇ ಕದಂಬ ಅರಸ ಮಯೂರ ವರ್ಮನು ತ್ರೈಕೂಟರನ್ನು, ಆಭೀರನ್ನು, ಪುನ್ನಾಟರನ್ನು, ಸೇಂದ್ರಕರನ್ನು, ಮೌಖರಿಯರನ್ನು ಮತ್ತು ಪಲ್ಲವರನ್ನು ಸೋಲಿಸಿ ಚಂದ್ರವಳ್ಳಿಯಲ್ಲಿ ಹೊಸದಾಗಿ ಕೆರೆಯೊಂದನ್ನು ನಿರ್ಮಿಸಿದ ಬಗ್ಗೆ ಉಲ್ಲೇಖಿಸುತ್ತದೆ ಎಂದು ಪಾಠವನ್ನು ಓದಿದರು. ಆವರೆಗೆ ಶಾತವಾಹನರ ಅವಶೇಷಗಳಿಂದ ಗುರುತಿಸಲ್ಪಡುತ್ತಿದ್ದ ಚಂದ್ರವಳ್ಳಿಯು ಕದಂಬರ ಕಾಲದಲ್ಲಿಯೂ ತನ್ನ ಉಚ್ಛ್ರಾಯ ಸ್ಥಿತಿಯನ್ನು ಹೊಂದಿತ್ತು ಎಂದು ಗುರುತಿಸಲ್ಪಟ್ಟಿತು. ಅವರು ಶಾಸನದಲ್ಲಿ ಕೃಷ್ಣ ಅವರು ಗುರುತಿಸಿದ ಪ್ರಾಚೀನ ಅರಸು ಮನೆತನಗಳ ಬಗ್ಗೆ ಅನೇಕ ವಿದ್ವ್ವಾಂಸರು ಅನೇಕ ಜಿಜ್ಞಾಸೆಗಳನ್ನು ಮತ್ತು ಚರ್ಚೆಗಳು ಪ್ರಾರಂಭವಾದವು. ನಂತರ ಚಿತ್ರದುರ್ಗದವರಾದ ಪ್ರೊ|| ಬಿ. ರಾಜಶೇಖರಪ್ಪ ಅವರು ಇದನ್ನು ಮರುಪರಿಶೀಲಿಸಿದರು. ಮುಂದೆ ಇದರ ಬಗ್ಗೆ ವಿವರಿಸಲಾಗಿದೆ.
1929ರ ಉತ್ಖನನಗಳು :
ಕದಂಬ ಮೈಯೂರ ವರ್ಮನ ಶಾಸನ ಶೋಧನೆಯಿಂದ ಸ್ಪೂರ್ತಿಗೊಂಡ ಕೃಷ್ಣ ಅವರು ವ್ಯವಸ್ಥಿತವಾದ ಪುರಾತತ್ವೀಯ ಅಧ್ಯಯನಕ್ಕೆ ಮುಂದಾದರು. ಈ ಪುರಾತನ ನೆಲೆಯಲ್ಲಿ ಸುಮಾರು 35ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ ಅಲ್ಲಿ ಭೂಶೋಧನೆಯನ್ನು ಕೈಗೊಂಡು ಅಲ್ಲಿ ಅನೇಕ ಪ್ರಾಚೀನ ಕಟ್ಟಡಗಳು, ರಸ್ತೆಗಳು, ಹಾಗೂ ಪುರಾತನ ಮಡಿಕೆಗಳು, ಕಲ್ಲುಗಳಿಂದ ಕಟ್ಟಿದ ಒಳಚರಂಡಿ ವ್ಯವಸ್ಥೆ ಇತ್ಯಾದಿಗಳು ಅವರು ಶೋಧಿಸಿದರು. ಇವುಗಳ ಜೊತೆಗೆ ಪ್ರಾಚೀನ ಶಾತವಾಹನರ ಮತ್ತು ಮಹಾರಥಿ ಅರಸರ ಕಾಲದ ಪೊಟಿನ್, ಸೀಸದ ನಾಣ್ಯಗಳನ್ನು ಅವರು ಶೋಧಿಸಿದರು. ಅವರ ಈ ವ್ಯವಸ್ಥಿತ ಅಧ್ಯಯನಗಳ ಪ್ರಾಥಮಿಕ ಮಾಹಿತಿಗಳನ್ನು 1931ರಲ್ಲಿ ಚಂದ್ರವಳ್ಳಿ ಉತ್ಖನನ ಎಂಬ ವರದಿಯಲ್ಲಿ ಪ್ರಕಟಿಸಿದರು. ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಇತಿಹಾಸ ಆರಂಭ ಕಾಲದ ಪುರಾತತ್ವ ಉತ್ಖನನಗಳು ಕೈಕೊಂಡ ನೆಲೆಯೆಂದು ಚಂದ್ರವಳ್ಳಿಯನ್ನು ಗುರುತಿಸಲಾಗುತ್ತದೆ. ಹಾಗೂ ಎಂ. ಹೆಚ್. ಕೃಷ್ಣ ಅವರು ಕರ್ನಾಟಕದ ಇತಿಹಾಸ ಆರಂಭ ಕಾಲದ ಪುರಾತತ್ವ ಪಿತಾಮಹ ಎಂದು ಕರೆಯಬಹುದು.
ಮಾರ್ಟಿಮರ್ ವೀಲ್ಹರ್‌ರ 1947ರ ಉತ್ಖನನಗಳು :
ಕೇಂದ್ರ ಪುರಾತತ್ವ ಇಲಾಖೆಯ ಮುಖ್ಯಸ್ಥರಾಗಿದ್ದ ಮಾರ್ಟಿಮರ್ ವೀಲ್ಹರ್ ಅವರು ದಕ್ಷಿಣ ಭಾರತದ ಪುರಾತತ್ವ ಅಧ್ಯಯನದ ಭಾಗವಾಗಿ ಪಾಂಡಿಚೇರಿಯ ಬಳಿಯ ಅರೀಕೆಮೇಡು ಸ್ಥಳದಲ್ಲಿ ವಿಸ್ತೃತ ಉತ್ಖನನಗಳನ್ನು 1945ರಲ್ಲಿ ಕೈಕೊಂಡರಲ್ಲದೇ ಅಲ್ಲಿ ದೊರೆತ ಅರೇಟೈನ್ ಮಡಿಕೆಗಳು, ರೊಲೇಟೆಡ್ ಮಡಿಕೆಗಳು ಮತ್ತು ರೋಮನ್ ನಾಣ್ಯಗಳನ್ನು ಆಧರಿಸಿ ಅರೀಕೆಮೇಡು ದಕ್ಷಿಣ ಭಾರತದ ಪೂರ್ವದ ಕೋರಮಂಡಲ ಕರಾವಳಿಯಲ್ಲಿದ್ದ ರೋಮನ್ ವಾಣಿಜ್ಯ ನಗರವೆಂದು ಗುರುತಿಸಿದರು. ಅವರು ದಕ್ಷಿಣದ ಒಳನಾಡಿನಲ್ಲಿ ರೋಮನ್ ವಾಣಿಜ್ಯ ವ್ಯವಹಾರದ ಸ್ಥಳಗಳನ್ನು ಗುರುತಿಸುವ ಕಾರ್ಯಕ್ಕೆ ಅಣಿಯಾದರು. ಈಗಾಗಲೇ ಶಾತವಾಹನರ, ಮಹಾರಥಿಗಳ ರೋಮನ್‌ರ ನಾಣ್ಯಗಳು ಮತ್ತು ಪ್ರಾಚೀನ ಮಡಿಕೆಗಳು ದೊರೆತಿರುವ ಮಾಹಿತಿಗಳನ್ನು ಎಂ. ಹೆಚ್. ಕೃಷ್ಣ ಅವರು ತಮ್ಮ ವರದಿಯಲ್ಲಿ ಪ್ರಕಟಿಸಿದ್ದರು. ಆ ಮಾಹಿತಿಯನ್ನು ಆಧರಿಸಿ ವೀಲ್ಹರ್ ಅವರು ಬ್ರಹ್ಮಗಿರಿ ಮತ್ತು ಚಂದ್ರವಳ್ಳಿ ಎರಡು ಸ್ಥಳಗಳಲ್ಲಿ ಕೇಂದ್ರ ಪುರಾತತ್ವ ಇಲಾಖೆಯ ವತಿಯಿಂದ ಪುರಾತತ್ವದ ಭೂಶೋಧನೆ ಮತ್ತು ಉತ್ಖನನಗಳನ್ನು 1945ರಲ್ಲಿ ಕೈಕೊಂಡರು. ಇವರ ಚಂದ್ರವಳ್ಳಿ ಉತ್ಖನನಗಳು ಇಲಾಖೆಯ ಏನ್ಸಿಯಂಟ್ ಇಂಡಿಯಾ ಸಂಪುಟ 4ರಲ್ಲಿ ಪ್ರಕಟಿಸಿದರು. ಇಟ್ಟಿಗೆಗಳಿಂದ ನಿರ್ಮಿಸಿದ ಭದ್ರವಾದ ಒಳಚರಂಡಿಯ ವ್ಯವಸ್ಥೆಯನ್ನು ವೀಲ್ಹರ್ ಅವರು ಗುರುತಿಸಿದರು. ಅಲ್ಲದೇ ಈ ಪುರಾತನ ಪಟ್ಟಣದಲ್ಲಿ ಶಾತವಾಹನರ ಮತ್ತು ಆನಂತರ ಕಾಲಾವಧಿಯಲ್ಲಿ ಪ್ರಚಲಿತದಲ್ಲಿದ್ದ ಹೊಳಪಿನ ಕೆಂಪು ವರ್ಣದ ಮೇಲೆ ಶ್ವೇತ ಬಣ್ಣದಲ್ಲಿ ಚಿತ್ತಾರಗಳನ್ನು ಬಿಡಿಸಿದ ಮಡಿಕೆಗಳು ಅವರ ಗಮನ ಸೆಳೆಯಿತು. ಈ ಮಾದರಿಯ ಮಡಿಕೆಗಳು ಬ್ರಹ್ಮಗಿರಿಯ ನೆಲೆಯಲ್ಲಿಯೂ ದೊರೆತಿದ್ದರಿಂದ ಕ್ರಿ.ಶ. 1ನೇ ಶತಮಾನದಲ್ಲಿ ಚಂದ್ರವಳ್ಳಿಯು ರೋಮನ್ ವಾಣಿಜ್ಯ ಸಾಮ್ರಾಜ್ಯದ ಪರಿದಿಯಲ್ಲಿದ್ದ ನಗರವಾಗಿರುವ ಸಾಧ್ಯತೆಯನ್ನು ಅವರು ಗುರುತಿಸಿದರು. ಇವರ ಉತ್ಖನನದಲ್ಲಿ ರೊಲೆಟೆಡ್ ಮಣ್ಣಿನ ಮಡಿಕೆಯನ್ನು ಕೂಡ ಅವರು ಶೋಧಿಸಿದರು. ಅಲ್ಲದೇ ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡಲು ಬಳಸುತ್ತಿದ್ದ ಹಿಡಿಕೆಗಳಿಗುವ ಉದ್ದನೆಯ ಹೂಜಿ ಅಥವಾ ಆಂಪೊರಾ ಮಡಿಕೆಯೊಂದನ್ನು ಗುರುತಿಸಿದರು. ಇದರ ಜೊತೆಗೆ ಹಲವಾರು ರೊಮನ್ ನಾಣ್ಯಗಳು, ಹೊಳಪಿನ ಕೆಂಪು ವರ್ಣದ ಮೇಲೆ ಶ್ವೇತ ಬಣ್ಣದಲ್ಲಿ ಚಿತ್ತಾರಗಳನ್ನು ಬಿಡಿಸಿದ ಮಡಿಕೆಗಳು ಇತ್ಯಾದಿಗಳನ್ನು ಶೋಧಿಸಿದರು. ಈ ಎಲ್ಲಾ ಆಧಾರದ ಮೇಲೆ ಚಂದ್ರವಳ್ಳಿಯೂ ಕ್ರಿಸ್ತ ಶಕೆಯ ಆರಂಭದ ಶತಮಾನದಲ್ಲಿ ಒಂದು ವಾಣಿಜ್ಯ ನಗರವೆಂದು ಅವರು ಇಲ್ಲಿಯ ಉತ್ಖನನಗಳ ಮೂಲಕ ಗುರುತಿಸಿದರು.
ಸ್ವಾತಂತ್ರೋತ್ತರದ ಅಧ್ಯಯನಗಳು:
ದೇಶದ ಸ್ವಾತಂತ್ರದ ವೇಳೆಯಲ್ಲಿಯೇ [1947] ವೀಲ್ಹರ್ ಅವರು ನಡೆಸಿದ ಚಂದ್ರವಳ್ಳಿಯ ಭೂಶೋಧನೆಗಳು ಚಂದ್ರವಳ್ಳಿಯ ಪುರಾತನ ನೆಲೆಯ ಕುರಿತು ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಕಾರಣವಾಯಿತು. ಕೇಂದ್ರ ಪುರಾತತ್ವ ಇಲಾಖೆಯವರು ಈ ಪುರಾತನ ನೆಲೆಯಲ್ಲಿ ಅಸ್ತಿತ್ವದಲ್ಲಿದ್ದ ವಿವಿಧ ಸಂಸ್ಕೃತಿಗಳ ಸಮಗ್ರ ಚಿತ್ರಣವನ್ನು ಅರಿಯಲು 1977ರಲ್ಲಿ ಚಿಕ್ಕ ಪ್ರಮಾಣದ ಉತ್ಖನನಗಳನ್ನು ಕೈಕೊಂಡರು ಪುರಾತತ್ವಜ್ಞ ವಿ. ಮಿಶ್ರಾ ಅವರ ನೇತೃತ್ವದಲ್ಲಿ ನಡೆದ ಉತ್ಖನನದಲ್ಲಿ ಮೂರು ಹಂತದ ಸಂಸ್ಕೃತಿಗಳ ಅವಶೇಷಗಳನ್ನು ಶೋಧಿಸಲಾಯಿತು (ಐ.ಎ.ಆರ್ 1977-78:27). 4500 ವರ್ಷಗಳ ಪುರಾತನದ ನವಶಿಲಾಯುಗ ಸಂಸ್ಕೃತಿ; ಕಬ್ಬಿಣ ಯುಗದ ಸಂಸ್ಕೃತಿ ಮತ್ತು ಇತಿಹಾಸ ಆರಂಭ ಕಾಲದ ಸಂಸ್ಕೃತಿಯ ಹಂತಗಳನ್ನು ಇಲ್ಲಿ ಗುರುತಿಸಲಾಯಿತು. ಇವರ ಶೋಧನೆಯಲ್ಲಿ ಗಮನಾರ್ಹವಾದ ಅವಶೇಷವೆಂದರೆ ಆಯತಾಕಾರದ ಇಟ್ಟಿಗೆಗಳಿಂದ ನಿರ್ಮಿಸಿದ ಹಲವು ಕೋಣೆಗಳಿರುವ ಕಟ್ಟಡ ಹಾಗೂ 25 ನಾಣ್ಯಗಳು. ಕೆಲವು ನಾಣ್ಯಗಳ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾಗಿದ್ದು ಅವು ಮಹಾರಥಿ ಅರಸರ ಕಾಲದ ನಾಣ್ಯಗಳೆಂದು ಗುರುತಿಸಬಹುದಾಗಿದೆ. ಬಹಳ ವಿಶೇಷವಾದ ಮಾಹಿತಿ ಎಂದರೆ ಈ ಉತ್ಖನನದಲ್ಲಿ ವಿದೇಶ ಮಡಿಕೆಯೆಂದೆ ಗುರುತಿಸುವ ಆಂಪೋರಾ (ಮದ್ಯ ಅಥವಾ ದ್ರವ್ಯ ಕೂಡಿಡುವ ಮಡಿಕೆ) ಮಡಿಕೆ. 1977ರ ಉತ್ಖನನವು ಈ ಹಿಂದೆ ಕೈಕೊಂಡಿದ್ದ ಎಂ. ಹೆಚ್. ಕೃಷ್ಣ ಮತ್ತು ವೀಲ್ಹರ್ ಅವರ ಉತ್ಖನನಗಳ ಶೋಧನೆಗಳಿವೆ ಪೂರಕ ಮಾಹಿತಿಗಳನ್ನು ಒದಗಿಸಿತು.

1980ರ ದಶಕದಲ್ಲಿ ಚಿತ್ರದುರ್ಗದವರೆ ಆದ ಡಾ|| ಬಿ. ರಾಜಶೇಖರಪ್ಪ ಅವರು ಚಂದ್ರವಳ್ಳಿಯ ಮಯೂರ ವರ್ಮನ ಶಾಸನವನ್ನು ಮರುಪರಿಶೀಲಿಸುವುದರೊಂದಿಗೆ ಕದಂಬ ಅರಸ ಮಯೂರ ವರ್ಮನ ಇತಿಹಾಸದ ಬಗ್ಗೆ ಹೊಸ ಹೊಳವು ನೀಡಿದರು. ಈ ಹಿಂದೆ ಎಂ. ಹೆಚ್. ಕೃಷ್ಣ ಅವರು ಮಯೂರ ವರ್ಮನ ಶಾಸನವನ್ನು ಪ್ರಾಕೃತ ಭಾಷೆಯ ಶಾಸನವೆಂದು ಮತ್ತು ಅದರಲ್ಲಿ ಪ್ರಾಚೀನ ಏಳು ಅರಸರಾದ ತ್ರೈಕೂಟರನ್ನು, ಆಭೀರನ್ನು, ಪುನ್ನಾಟರನ್ನು, ಸೇಂದ್ರಕರನ್ನು, ಮೌಖರಿಯರನ್ನು ಮತ್ತು ಪಲ್ಲವರನ್ನು ಸೋಲಿಸಿ ಇಲ್ಲಿ ಹೊಸದಾಗಿ ಕೆರೆಯನ್ನು ಕಟ್ಟಿಸಿದನೆಂದು ಓದಿದ್ದರು. ಆದರೆ ರಾಜಶೇಖರಪ್ಪ ಅವರು ಈ ಶಾಸನವನ್ನು ಮರು ಪರಿಶೀಲಿಸುವುದರ ಜೋತೆಗೆ ಇದೊಂದು ಪ್ರಾಕೃತ ಶಾಸನವಲ್ಲ ಇದು ಸಂಸ್ಕೃತ ಭಾಷೆಯಲ್ಲಿ ಬರೆಯಲಾದ ಶಾಸನವಾಗಿದೆ. ಲಿಪಿ ಬ್ರಾಹ್ಮಿಯಾಗಿದ್ದು; ಮಯೂರ ವರ್ಮನು ಚಂದ್ರವಳ್ಳಿಯಲ್ಲಿ ಕೆರೆಯನ್ನು ಜೀರ್ಣೋದ್ದಾರಗೊಳಿಸಿದ್ದಾನೆ ಹೊರತು ಹೊಸದಾಗಿ ಕೆರೆಯನ್ನು ನಿರ್ಮಿಸಿಲ್ಲ ಎಂಬ ಮಾಹಿತಿಯನ್ನು ಮರುಪರಿಶೀಲನೆಯಿಂದ ವ್ಯಕ್ತಪಡಿಸಿದರು, ಮತ್ತು ಶಾಸನದಲ್ಲಿ ಸಮಕಾಲೀನ ಅರಸರ ಉಲ್ಲೇಖಗಳಿಲ್ಲ ಅದು ಕೆರೆಯನ್ನು ಭದ್ರಪಡಿಸಿದ ಬಗ್ಗೆ ಮಾತ್ರ ಉಲ್ಲೇಖಿಸುತ್ತದೆ ಎಂದು ಅವರು ವಿವರಿಸಿದರು. 'ಕುಪಣ' ಎಂಬ ಉಲ್ಲೇಖವನ್ನು ಆಧರಿಸಿ ಅದು ಇಂದಿನ ಕೊಪ್ಪಳದ ಉಲ್ಲೇಖವೆಂದು ಅವರು ಗುರುತಿಸಿದ್ದಾರೆ. ರಾಜಶೇಖರಪ್ಪ ಅವರ ಶಾಸನದ ಮರು ಓದು ಒಂದು ರೀತಿಯಲ್ಲಿ ಹೊಸ ಆಲೋಚನೆಗೆ ಎಡೆಮಾಡಿತು. ಇದು ಚಂದ್ರವಳ್ಳಿಯ ಬಗ್ಗೆ ಸಂಶೋಧಕರಲ್ಲಿ ಈ ಪುರಾತನ ನೆಲೆಯ ಇತಿಹಾಸ ಮತ್ತು ಅಲ್ಲಿಯ ಪುರಾತನ ಕೆರೆಯ ಬಗ್ಗೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು. ಚಿತ್ರದುರ್ಗದವರೆ ಆದ ಪ್ರೊ|| ಲಕ್ಷ್ಮಣ ತೆಲಗಾವಿ ಅವರು ಚಿತ್ರದುರ್ಗ ಮತ್ತು ಅದರ ಪರಿಸರದ ಇತಿಹಾಸದ ಸಂಶೋಧನೆಗಳು ಸ್ವಾತಂತ್ರೋತ್ತರ ಕಾಲದ ಬಹು ಮುಖ್ಯ ಅಧ್ಯಯನಗಳು ಎಂದು ಹೇಳಬಹುದು. ಇವರು ಸಂಶೋಧನಾ ತಂಡವನ್ನು ಕಟ್ಟಿಕೊಂಡು ಕ್ಷೇತ್ರ ಕಾರ್ಯಗಳನ್ನು ಕೈಕೊಂಡು ಪ್ರಾಚೀನ ಕಾಲದಿಂದ ಆಧುನಿಕ ಕಾಲದ ಇತಿಹಾಸದ ವಿವಿಧ ಮಗ್ಗಲುಗಳನ್ನು ಪರಿಚಯಿಸಿದರು. ಚಂದ್ರವಳ್ಳಿಯಲ್ಲಿ ಕಂಚಿನ ಎರಡು ಪ್ರತಿಮೆಗಳನ್ನು ಅವರ ತಂಡದ ಸದಸ್ಯರಾದ ಶ್ರೀಶೈಲ ಆರಾಧ್ಯ ಅವರೊಂದಿಗೆ ಶೋಧಿಸಿದರು. ಈ ಪ್ರತಿಮೆಗಳು ಅಪರೂಪದ ಶಿಲ್ಪಗಳಾಗಿದ್ದು ಅವುಗಳ ರಚನೆಯ ಶೈಲಿಯನ್ನು ಆಧರಿಸಿ ಪ್ರೊ|| ಎ. ಸುಂದರ ಅವರು ಇತಿಹಾಸ ಆರಂಭದ ಕಾಲದವು ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದರು (ಸುಂದರ 1996). ಪ್ರೊ|| ತೆಲಗಾವಿ ಅವರು ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟಿಸಿದ ಮೌರ್‍ಯ ಮತ್ತು ಶಾತವಾಹನ ಯುಗ (ಕ್ರಿ.ಪೂ.3) ಕೃತಿಯಲ್ಲಿ ಚಂದ್ರವಳ್ಳಿಯಲ್ಲಿ ಕೈಕೊಂಡ ಕ್ಷೇತ್ರ ಕಾರ್ಯದ ಹಿನ್ನೆಲೆಯಲ್ಲಿ ದೀರ್ಘವಾದ ಬರಹವನ್ನು ನೀಡಿದ್ದಾರೆ. ಇದರಲ್ಲಿ ಅವರು ಚಂದ್ರವಳ್ಳಿಯ ಪುರಾತನ ನೆಲೆಯ ವಿಸ್ತಾರ ಮತ್ತು ಅದರ ವಿಶೇಷತೆಗಳನ್ನು ಆಧಾರಗಳ ಸಮೇತ ವಿವರಿಸಿದ್ದಾರೆ. ಇದು ಪ್ರಾಯಶಃ ಚಂದ್ರವಳ್ಳಿಯ ಪುರಾತನ ನೆಲೆಯ ಸಮಗ್ರವಾದ ಐತಿಹಾಸಿಕ ಮಾಹಿತಿಗಳನ್ನು ನೀಡುವ ಬರಹವೆಂದು ಹೇಳಬಹುದು. 2016ರಲ್ಲಿ ಹೇಮಾ ಠಾಕೂರ ಅವರು ಚಂದ್ರವಳ್ಳಿ- ಆನ್ ಅರ್‍ಲಿ ಹಿಸ್ಟೊರಿಕಲ್ ಸೆಟ್ಲಲಮೆಂಟ್ ಎಂಬ ಕಿರು ಲೇಖನದಲ್ಲಿ ಇಲ್ಲಿಯ ಪುರಾತನ ಪಟ್ಟಣದ ವಿವರಣೆಗಳನ್ನು ನೀಡಲು ಪ್ರಯತ್ನಿಸಿದ್ದಾರೆ. ಆದರೆ ಈ ಎಲ್ಲಾ ಅಧ್ಯಯನಗಳು ಮತ್ತು ಸಂಶೋಧನೆಗಳು ಪ್ರಾಚೀನ ನೆಲೆಯ ಪ್ರಾಕ್ತನ ಅವಶೇಷಗಳ ಸಂಗ್ರಹ ಮತ್ತು ಪ್ರಾಚೀನ ಸಂಸ್ಕೃತಿಗಳ ಚರಿತ್ರೆಯನ್ನು ಕಟ್ಟುವಲ್ಲಿ ಅವುಗಳ ಪಾತ್ರ ಇತ್ಯಾದಿಗಳಿಗೆ ಸೀಮಿತವಾಗಿವೆ. ಆದರೆ ಚಂದ್ರವಳ್ಳಿಯ ಪುರಾತನ ನಗರದ ಸ್ವರೂಪ ಮತ್ತು ಅದರ ವಿಸ್ತಾರ ಕುರಿತಾದ ಅಧ್ಯಯನಗಳು ನಡೆದಿಲ್ಲವೆಂದು ಹೇಳಬಹುದು. ತೆಲಗಾವಿ ಅವರು ಈ ನಿಟ್ಟಿನಲ್ಲಿ ತಮ್ಮ ಸಂಶೋಧನಾ ಕೃತಿಯಲ್ಲಿ ವಿವರಿಸಿದ್ದಾರೆ. ಆದರೂ ಪ್ರಾಚೀನ ಕಾಲದ ಪಟ್ಟಣದ ರಚನೆಯ ಸ್ವರೂಪ ಮತ್ತು ಅಲ್ಲಿ ನೆಲೆಗೊಳಿಸದ್ದ ನಗರ ರಚನೆ ವಿನ್ಯಾಸ ಕುರಿತಂತೆ ಹೆಚ್ಚಿನ ಅಧ್ಯಯನಗಳು ನಡೆದಿಲ್ಲವೆಂದು ಹೇಳಬಹುದು. ಪ್ರಸ್ತುತ ಲೇಖನ ಈ ನಿಟ್ಟಿನಲ್ಲಿ ಒಂದು ಪ್ರಯತ್ನ.
ಪ್ರಾಚೀನ ಚಂದ್ರವಳ್ಳಿ ಪಟ್ಟಣದ ರಚನೆ :
ಪ್ರಾಚೀನ ಚಂದ್ರವಳ್ಳಿ ಪಟ್ಟಣವು ಬಹು ವಿಸ್ತಾರದಿಂದ ಕೂಡಿತ್ತು. ಇದು ಚಿತ್ರದುರ್ಗ ನಗರದ ವಾಯುವ್ಯಕ್ಕೆ ನಾಲ್ಕು ಕಿ.ಮೀ. ದೂರದಲ್ಲಿದ್ದು, ಇದು ಬೆಟ್ಟಗಳ ನಡುವಿನ ಕಣಿವೆಯಲ್ಲಿ ನೆಲೆಗೊಂಡಿದೆ. ತ್ರಿಕೋನಾಕಾರದ ವಿನ್ಯಾಸದಲ್ಲಿರುವ ಈ ಪುರಾತನ ಪಟ್ಟಣವು ತನ್ನ ಸುತ್ತಲಿನ ನೈಸರ್ಗಿಕ ಬೆಟ್ಟಗಳಿಂದ ರಕ್ಷಣೆ ಪಡೆದಿತ್ತು ಎಂದು ತೋರುತ್ತದೆ. ಪ್ರಾಚೀನ ಕಾಲದ ಪಟ್ಟಣಗಳಾದ ಬನವಾಸಿ ಅಥವಾ ಸನ್ನತಿಯಂತೆ ಎತ್ತರವಾದ ಕೋಟೆಯಿಂದ ಸುತ್ತುವರೆದಿರಲಿಲ್ಲ ಎಂದು ತೋರುತ್ತದೆ. ಇದಕ್ಕೆ ಇರುವ ಸುತ್ತಲೀನ ಬೆಟ್ಟಗಳಾದ ಚಿತ್ರದುರ್ಗದ ಬೆಟ್ಟ, ಕಿರುಬನಕಲ್ಲು ಬೆಟ್ಟ ಮತ್ತು ಚೋಳಗುಡ್ಡದ ಶ್ರೇಣಿಗಳೇ ರಕ್ಷಣೆ ಒದಗಿಸುವ ಕೋಟೆಯಂತೆಯಾಗಿದ್ದವು. ಈ ನೆಲೆಯ ನೆಲೆಯ ದಕ್ಷಿಣದ ತುದಿಯ ಅಂಕಲಿಮಠದಿಂದ ಪ್ರಾರಂಭಗೊಂಡು ಉತ್ತರದ ಅಂಚಿನ ಸಿಹಿನೀರಿನ ಹೊಂಡದ ಹತ್ತಿರದ ಆಂಜನೇಯ ಗುಡಿಯವರೆಗೂ ವಿಸ್ತರಿಸಿತ್ತು. ಇದರ ದಕ್ಷಿಣ ಅಂಚಿನಲ್ಲಿ ಒಂದು ಕಿ.ಮೀ. ಅಗಲವಾಗಿದ್ದು; ಉತ್ತರದ ಅಂಚಿನಲ್ಲಿ ಅಗಲ ಕಡಿಮೆಯಾಗಿದೆ. ನೆಲೆಯ ಸುತ್ತಲೂ ಬಸವನಗೊಂದಿ; ಬಾರಲಗೊಂದಿ; ಹುಲಿಯಗೊಂದಿ ಮತ್ತು ನೇರಲಗೊಂದಿ ಎಂಬ ಉಪ-ಕಣಿವೆಗಳಿವೆ. ಚೋಳಗುಡ್ಡಗಳ ಮತ್ತು ದುರ್ಗದ ಬೆಟ್ಟದ ಸಾಲುಗಳಿಂದ ಹರಿದು ಬರುತ್ತಿದ್ದ ಮಳೆಯ ನೀರು ಚಿಕ್ಕ ತೋರೆಯಾಗಿ ಚಂದ್ರವಳ್ಳಿಯ ಕಣಿವೆಯನ್ನು ಪ್ರವೇಶಿಸಿ ಉತ್ತರಾಭಿಮುಖವಾಗಿ ಚಲಿಸಿ ಸಿಹಿ ನೀರಿನ ಹೊಂಡದ ಪ್ರದೇಶಕ್ಕೆ ಸೇರುತ್ತಿತ್ತು. ಈ ತೋರೆಯು ಚಂದ್ರವಳ್ಳಿಯು ಪಶ್ಚಿಮ ಮತ್ತು ಪೂರ್ವ ಭಾಗಗಳಾಗಿ ವಿಂಗಡಿಸುತ್ತಿತ್ತು. ಪ್ರಾಚೀನ ಕಾಲದಲ್ಲಿ ಈ ತೋರೆಗೆ ಕಾಲುವೆಯನ್ನು ಕಟ್ಟಿ ಅದನ್ನು ಊರಿನ ಹೊರಭಾಗಕ್ಕೆ ಸೇರುವ ವ್ಯವಸ್ಥೆ ಮಾಡಲಾಗಿತ್ತು ಎಂಬುದು 1947ರಲ್ಲಿ ವೀಲ್ಹರ್ ಅವರ ಉತ್ಖನನದ ವೇಳೆಯಲ್ಲಿ ದೊರೆತ ಒಳಚರಂಡಿಯ ಅವಶೇಷದ ಆಧಾರದಿಂದ ಹೇಳಬಹುದು. ಅದೇ ರೀತಿಯಾಗಿ ಈ ಪುರಾತನ ಪಟ್ಟಣದ ಕೇಂದ್ರ ಬಿಂದುವೆಂದರೆ ನೇರಲಗೊಂದಿ ಕಣಿವೆ ಮುಂಭಾಗದಲ್ಲಿರುವ ಮಧ್ಯದ ಗುಡ್ಡ ಎಂದು ಕರೆಯುವ ಚಿಕ್ಕ ಬೆಟ್ಟ. ಇದರ ಎರಡು ಬದಿಗಳನ್ನು ಬೂದಿಪಟ್ಟಿ ಮತ್ತು ಕೆಳಗಿನಪಟ್ಟಿ ಎಂದು ಕರೆಯಲಾಗುತ್ತಿದ್ದು. ಈ ಸ್ಥಳಗಳಲ್ಲಿ ಎಂ.ಹೆಚ್. ಕೃಷ್ಣ ಅವರು ಕೈಕೊಂಡ ಉತ್ಖನನಗಳಲ್ಲಿ (ಸಂಖ್ಯೆ 15 ಮತ್ತು 16) ಅನೇಕ ಅವಶೇಷಗಳು ದೊರೆತಿದ್ದು ಮತ್ತು ಅಸಂಖ್ಯ ಪ್ರಾಚೀನ ನಾಣ್ಯಗಳು ದೊರೆತಿವೆ. ಇದರಿಂದ ಸ್ಪಷ್ಟವಾಗುವುದು ಈ ಸ್ಥಳವು ನಗರದ ಕೇಂದ್ರಸ್ಥಳವಾಗಿದ್ದು; ಪಟ್ಟಣದ ನಾಲ್ಕು ದಿಕ್ಕಿನ ರಸ್ತೆಗಳು ಇಲ್ಲಿ ಬಂದು ಸೇರುತ್ತಿದ್ದವು ಎಂದು ತೋರುತ್ತವೆ. ಈ ಪುರಾತನ ಪಟ್ಟಣಕ್ಕೆ ಇದರ ಉತ್ತರದ ಅಂಚಿನಲ್ಲಿ ದ್ವಾರವನ್ನು ನೆಲೆಗೊಳಿಸಿದಂತೆ ತೋರುತ್ತದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎತ್ತರದ ಬೆಟ್ಟಗಳಿರುವೆ, ಉತ್ತರ ದಿಕ್ಕಿನಲ್ಲಿ ವಿಶಾಲವಾಗಿ ತೆರೆದುಕೊಂಡಿದೆ. ಪ್ರಾಯಶಃ ಉತ್ತರದ ಅಂಚಿನಲ್ಲಿಯೇ ಮುಖ್ಯ ದ್ವಾರವನ್ನು ಮಾಡಲಾಗಿತ್ತು. ಅದರಂತೆ ಇನ್ನೊಂದು ಪ್ರವೇಶವು ಮಧ್ಯದ ಗುಡ್ಡದ ಪಶ್ಚಿಮಕ್ಕೆ ನೆಲೆಗೊಳಿಸಿದಂತೆ ತೋರುತ್ತದೆ. ಈ ಎರಡು ದ್ವಾರಗಳಿಂದ ಒಳ ಬರುವ ರಸ್ತೆಗಳು ಊರಿನ ಮಧ್ಯದ ಗುಡ್ಡದ ಬಳಿ ಸಂಧಿಸುತ್ತಿದ್ದವು. ಲಕ್ಷ್ಮಣ ತೆಲಗಾವಿ (2004) ಅವರು ದುರ್ಗದ ಕೋಟೆಯ ಪಚ್ಚೆ ಕಣಿವೆ ಮತ್ತು ತಣ್ಣೀರು ದೊಣೆಯ ಬಳಿಯ ಬಂಡೆಯ ಮೇಲೆ ಬಿ.ಎಲ್. ರೈಸ್ ಅವರು ಶೋಧಿಸಿದ್ದ ಮಯಮ ಎಂಬ ಮೂರು ಅಕ್ಷರಗಳಿರುವ ಬ್ರಾಹ್ಮಿ ಲಿಪಿಯ ಬಂಡೆಯ ಪ್ರದೇಶ ಮತ್ತು ನಾಗತೀರ್ಥ ಕಣಿವೆಗಳು ಕೂಡ ಪುರಾತನ ಚಂದ್ರವಳ್ಳಿ ಪಟ್ಟಣದ ಭಾಗವಾಗಿದ್ದವು ಎಂಬ ಅವರ ಅಭಿಪ್ರಾಯ ಪಟ್ಟಿದ್ದಾರೆ. ಇದು ಪ್ರಾಯಶಃ ಪುರಾತನ ರಾಜಧಾನಿ ಪಟ್ಟಣದ ರಾಜವಾಡೆ ಅಥವಾ ಅರಸರ ಅರಮನೆ ಆವರಣವಾಗಿರುವ ಸಾಧ್ಯತೆಗಳಿವೆ.
ಪಂಚಲಿಂಗೇಶ್ವರ, ಅಂಕಲಿಮಠ ಮತ್ತು ಪರದೇಶಪ್ಪನ ಗುಹೆ ಇತ್ಯಾದಿ :
ಚಂದ್ರವಳ್ಳಿಯ ಪಟ್ಟಣವು ಇತಿಹಾಸ ಆರಂಭದ ಕಾಲದಲ್ಲಿ ಒಂದು ಮುಖ್ಯ ಪಟ್ಟಣವೆನಿಸಿದರೂ ಇದು ಹಲವು ಶತಮಾನಗಳ ಕಾಲ ತನ್ನ ಅಸ್ತಿತ್ವನ್ನು ಮುಂದುವರೆಸಿಕೊಂಡು ಬಂದಿತ್ತು ಎಂಬುದು ಇಲ್ಲಿ ದೊರೆತ ಹಳೆಯ ದೇಗುಲಗಳು ಮತ್ತು ಹಳೆಯ ಶಾಸನಗಳು ಸಾಕ್ಷಿ. ದಕ್ಷಿಣದ ಅಂಚಿನಲ್ಲಿರುವ ಅಂಕಲಿಮಠವು ಬಂಡೆಗಳ ಆಶ್ರಯದಲ್ಲಿ ರೂಪಗೊಂಡ ನೈಸರ್ಗಿಕ ಗುಹೆಗಳ ಸಮೂಹ. ಇಲ್ಲಿ ಸುಮಾರು ಬಂಡೆಗಳಲ್ಲಿ ರೂಪಗೊಂಡ ಸುಮಾರು 12 ನೈಸರ್ಗಿಕ ಗುಹೆಗಳಿವೆ. ಇವುಗಳಲ್ಲಿ ಪಂಚಲಿಂಗೇಶ್ವರ ಗುಹೆಯು ಹೆಚ್ಚು ಪ್ರಸಿದ್ಧವಾದದು. ಈ ಗುಹೆಯಲ್ಲಿ ಹತ್ತು ಶಿವಲಿಂಗಗಳಿವೆ. ಐತಿಹ್ಯದ ಪ್ರಕಾರ ಈ ಶಿವಲಿಂಗಗಳು ಪಾಂಡವರು ಪ್ರತಿಷ್ಠಾಪನೆ ಮಾಡಿದರೆಂದು ಹೇಳಲಾಗುತ್ತದೆ. ಈ ಗುಹೆಯಲ್ಲಿ ಹೊಯ್ಸಳ ಅರಸ ನರಸಿಂಹನ ಮಂತ್ರಿ ಪೆರುಮಾಳ ದಣ್ಣಾಯಕನು ಕ್ರಿ.ಶ. 1286ರಲ್ಲಿ ಧರ್ಮೆಶ್ವರ ದೇವಸ್ಥಾನವೆಂದು ಕರೆಯಲಾಗುತ್ತಿದ್ದ ಈ ಗುಹೆಯ ದೇಗುಲಕ್ಕೆ ದಾನಗಳನ್ನು ನೀಡಿದ ಬಗ್ಗೆ ಉಲ್ಲೇಖಿಸುವ 90 ಸಾಲುಗಳ ಶಿಲಾಶಾಸನವಿದೆ (ಸಂಖ್ಯೆ-32). ಪಂಚಲಿಂಗೇಶ್ವರ ದೇಗುಲದ ಪಕ್ಕದಲ್ಲಿರುವ ಅಂಕಲಿಮಠವು ಕೂಡ ನೈಸರ್ಗಿಕ ಬಂಡೆಗಳ ಮಧ್ಯದಲ್ಲಿ ರೂಪಗೊಂಡ ಗುಹೆಗಳು. ಇಲ್ಲಿ ಆರು ಗುಹೆಗಳಿವೆ. ದೊಡ್ಡ ಬಂಡೆಗಳ ನಡುವಿನ ತೆರೆದ ಭಾಗಗಳನ್ನು ಗೋಡೆಗಳಿಂದ ಮುಚ್ಚಲಾಗಿದೆ. ಕೆಲ ಶತಮಾನಗಳ ಹಿಂದೆ ಈ ಗುಹೆಯನ್ನು ಮಠವನ್ನಾಗಿ ಮಾಡಿಕೊಂಡಿದ್ದರೆಂದು ಅದಕ್ಕೆ ಅಂಕಲಿಮಠವೆಂದು ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಈ ಮಠದಲ್ಲಿ ಒಂದು ಪುರಾತನ ಪಾಣಿಪೀಠದ ಶಿವಲಿಂಗವಿದೆ. ಇದರ ರಚನಾ ಶೈಲಿಯ ಹಿನ್ನೆಲೆಯಲ್ಲಿ ಇದು ಕದಂಬರ ಕಾಲದ ಶಿವಲಿಂಗ ಶಿಲ್ಪವಿರುವ ಸಾಧ್ಯತೆಯನ್ನು ಡಾ|| ಸುಂದರ ಅವರು ವ್ಯಕ್ತಪಡಿಸುತ್ತಾರೆ. ಪಕ್ಕದಲ್ಲಿ ಇನ್ನೂ ಏಳು ನೈಸರ್ಗಿಕ ಗುಹೆಗಳಿದ್ದು ಅವುಗಳನ್ನು ಪರದೇಶಪ್ಪನ ಗವಿ ಎಂದು ಕರೆಯುದುಂಟು. ಈ ಹಿಂದೆ ಲಿಂಗಾಯತ ಮುನಿ ಪರದೇಶಪ್ಪ ಎಂಬವರು ಇಲ್ಲಿ ವಾಸವಾಗಿದ್ದರೆಂದು ಅದಕ್ಕಾಗಿ ಇದನ್ನು ಪರದೇಶಪ್ಪನ ಗವಿ ಎಂದು ಕರೆಯುತ್ತಾರೆಂದು ಹೇಳಲಾಗುತ್ತದೆ. ಇಲ್ಲಿಯೂ ಕೂಡ ಶಿವಲಿಂಗಗಳನ್ನು ಸ್ಥಾಪಿಸಲಾಗಿವೆ. ಈ ಎಲ್ಲಾ ದೇಗುಲಗಳು ಮುಖ್ಯವಾಗಿ ಪಂಚಲಿಂಗೇಶ್ವರ ದೇಗುಲವು ಮಧ್ಯಕಾಲೀನ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ಬಗ್ಗೆ ಸ್ಪಷ್ಟವಾಗುತ್ತದೆ.
ರಾಜಧಾನಿಯಿಂದ ವಾಣಿಜ್ಯ ನಗರಿಯಾದ ಚಂದ್ರವಳ್ಳಿ :
ಮೌರ್ಯರೊತ್ತರ ಕಾಲದಲ್ಲಿ ಈ ಪಟ್ಟಣ ಉಗಮಗೊಂಡಿತು ಎಂಬುದು ಸ್ಪಷ್ಟಾಗುತ್ತದೆ. ಕ್ರಿ.ಶ. 1ನೇ ಶತಮಾನದಲ್ಲಿ ಆಳಿದ ಶಾತವಾಹನರ ಕಾಲದಲ್ಲಿ ಇದೊಂದು ಆಯಕಟ್ಟಿನ ಊರು ಆಗಿ ರೂಪಿತಗೊಳ್ಳು ಪ್ರಕ್ರಿಯೆ ಒಳಪಟ್ಟು ಕ್ರಮೇಣ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಂತೆ ತೋರುತ್ತದೆ. ಮೌರ್ಯ ಅರಸ ಅಶೋಕನ ಸಾಮ್ರಾಜ್ಯದ ಗಡಿ ಪಟ್ಟಣವೆನಿಸಿದ್ದ ಇಸಿಲಾ ಅಥವಾ ಬ್ರಹ್ಮಗಿರಿಯು ಮೌರ್ಯರ ನಂತರ ತನ್ನ ಅಸ್ತಿತ್ವನ್ನು ಕಳೆದುಕೊಂಡು ಆನಂತರ ಆಳ್ವಿಕೆಗೆ ಬಂದ ಶಾತವಾಹನ ಕಾಲದಲ್ಲಿ ಒಂದು ಚಿಕ್ಕ ಪಟ್ಟಣವಾಗಿ ಮುಂದುವರೆಯಿತು. ತೆರವಾಗಿದ್ದ ಇಸಿಲಾ ಪಟ್ಟಣದ ಆಯಕಟ್ಟಿನ ಸ್ಥಾನವನ್ನು ನೆರೆಯ ಚಂದ್ರವಳ್ಳಿಯು ಪಡೆದುಕೊಂಡಿತು. ಶಾತವಾಹನರ ಸಾಮಾಂತ ಅರಸರಾಗಿದ್ದ ಮಹಾರಥಿಗಳು ಇದನ್ನು ತಮ್ಮ ರಾಜಧಾನಿ ನಗರವಾಗಿ ಮಾಡಿಕೊಂಡು ವ್ಯವಸ್ಥಿತವಾದ ರಾಜಧಾನಿ ನಗರವನ್ನು ನಿರ್ಮಿಸಿರುವ ಸಾಧ್ಯತೆಯನ್ನು ಇಲ್ಲಿ ಗುರುತಿಸಬಹುದು ಎಂದು ಡಾ|| ಎಂ. ಹೆಚ್. ಕೃಷ್ಣ ಅವರು ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಕ್ಕೆ ಪೂರಕವೆಂಬಂತೆ ಚಂದ್ರವಳ್ಳಿಯಲ್ಲಿ ಮಹಾರಥಿ ಅರಸರ ಅನೇಕ ನಾಣ್ಯಗಳು ದೊರೆತಿದ್ದು ಮುಖ್ಯವಾಗಿ ಸಡಕಣ ಕಳರಾಯ ಮಹಾರಥಿ; ಮುಡಾನಂದ; ಮತ್ತು ಚುಟುಕುಡಾನಂದ ಮಹಾರಥಿ ಅರಸರ ನಾಣ್ಯಗಳು ದೊರೆಕಿದ್ದು ಗಮನಿಸಿಬೇಕು. ಅಲ್ಲದೇ ಚಂದ್ರವಳ್ಳಿಯ ಸುತ್ತಲಿನ ಪರಿಸರದಲ್ಲಿಯೂ ಮಹಾರಥಿಗಳ ನಾಣ್ಯಗಳು ದೊರೆತಿರುವ ಮಾಹಿತಿಗಳಿವೆ. ಅದರಂತೆ, ನೆರೆಯ ರಾಜ್ಯ ಆಂಧ್ರಪ್ರದೇಶದ ಗುತ್ತಿ ಊರಿನಲ್ಲಿಯೂ ಮಹಾರಥಿ ಅರಸ ನಾಣ್ಯಗಳು ದೊರೆತಿರುವ ಮಾಹಿತಿಗಳಿವೆ. ಮಹಾರಥಿ ಅರಸರ ನಂತರ ಚಂದ್ರವಳ್ಳಿ ತನ್ನ ರಾಜಧಾನಿ ನಗರದ ಸ್ಥಾನ ಕಳೆದುಕೊಂಡರೂ ಕದಂಬರ ಕಾಲದಲ್ಲಿ ಒಂದು ಆಯಕಟ್ಟಿನ ಊರು ಆಗಿ ಮುಂದುವರೆಯಿತು. ಮಯೂರ ವರ್ಮ ಅರಸನು ಇಲ್ಲಿಯ ಕೆರೆಯನ್ನು ಮತ್ತಷ್ಟು ಭದ್ರಗೊಳಿಸಿದನು. ನಂತರ ರಾಷ್ಟ್ರಕೂಟರ ಕಾಲದಲ್ಲಿಯೂ ಇದು ತನ್ನ ಆಯಕಟ್ಟಿನ ಸ್ಥಳದಿಂದಾಗಿ ತನ್ನ ಅಸ್ತಿತ್ವವು ಬೆಳೆಸಿಕೊಂಡಿತು. ಇದಕ್ಕೆ ಪೂರಕವೆಂಬಂತೆ ಚಂದ್ರವಳ್ಳಿಯಲ್ಲಿ 11ನೇ ಶತಮಾನದಲ್ಲಿ ಚೀನಾ ದೇಶ ಆಳಿದ ಸುಂಗ ಮನೆತನದ ತಾಮ್ರ ಮತ್ತು ಮಿಶ್ರ ಲೋಹದ ನಾಣ್ಯಗಳು ದೊರೆತಿವೆ. 13ನೇ ಶತಮಾನದಲ್ಲಿ ಸುರಕ್ಷಿತ ಪ್ರದೇಶವೆನಿಸಿದ ಚಿತ್ರದುರ್ಗದ ಬೆಟ್ಟಗಳಲ್ಲಿ ಮುಖ್ಯವಾಗಿ ಪಚ್ಚೆ ಕಣಿವೆ ಮತ್ತು ಹಿಡಿಂಬೆಶ್ವರ ದೇಗುಲದ ಪರಿಸರವು ವಾಸಕ್ಕೆ ಬಳಕೆಗೆ ಬರತೊಡಗಿದರು. ದುರ್ಗದ ಹಿಡಿಂಬೇಶ್ವರ ಮತ್ತು ಚಂದ್ರವಳ್ಳಿಯ ಪಂಚಲಿಂಗೇಶ್ವರದ [ಧರ್ಮೇಶ್ವರ] ದೇಗುಲಗಳಿಗೆ ಏಕಕಾಲದಲ್ಲಿ ಹೊಯ್ಸಳರ ಮಂತ್ರಿ ಪೆರುಮಾಳ ದಣ್ಣಾಯಕ ದಾನ ನೀಡಿದ್ದನ್ನು ಇಲ್ಲಿ ಗಮನಿಸಬಹುದು. ಕ್ರಿ.ಶ. 13ನೇ ಶತಮಾನದ ಅಂತ್ಯ ಕಾಲದವರೆಗೂ ಈ ಪಟ್ಟಣವು ತನ್ನ ಅಸ್ತಿತ್ವವನ್ನು ಹೊಂದಿತ್ತೆಂದು ದೊರೆತ ಶಾಸನಗಳು; ನಾಣ್ಯಗಳು; ಶಿಲ್ಪಗಳು, ಹಾಗೂ ಇತರೆ ಅವಶೇಷಗಳ ಆಧಾರಗಳಿಂದ ಹೇಳಬಹುದು.

ಆಧಾರಗಳು :

* ಲಕ್ಷ್ಮಣ ತೆಲಗಾವಿ 2004. ಮೌರ್‍ಯ ಮತ್ತು ಶಾತವಾಹನರ ಯುಗ. ಕನ್ನಡ ವಿಶ್ವವಿದ್ಯಾಲಯ, ಹಂಪಿ.
* ಬಿ. ರಾಜಶೇಖರಪ್ಪ. 2001. ಚಂದ್ರವಳ್ಳಿಯ ಶಾಸನದ ಮೇಲೆ ಹೊಸಬೆಳಕು. ದುರ್ಗಶೋಧನ. ಸಂಶೋಧನಾ ಲೇಖನಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು. ಪುಟಗಳು: 1-10.

  • B.L. Rice (Ed). 1903. Epigraphia Carnatica Volume-XI : Inscriptions in the Chitaldroog District. Bangalore: Mysore Government Press.

  • Hema Thakur. 2016. ‘Chandravalli- an Early Historical Settlement in Karnataka, India’. Journal of Ancient History and Archaeology Vol. 3 (3). Pages- 49-54.

  • Indian Archaeology- A Review for the year 1977-78.

  • Murthy, Narasimha A.V. “Early Historical Cultures of Karnataka”. in Kamalakar, et al [Eds.] South Indian Archaeology. Delhi: Bharatiya Kala Prakashan. Pp. 29-34.

  • Sundara, A. 1996. “Two Rare Bronze Images from Chandravalli- Their Significance” in C. Margabandhu& K.S. Ramachandran (eds.) Spectrum of Indian Culture- Professor S.B. Deo Felicitation Volume. Delhi: Agam Kala Prakashan. Pp. 371-373.

  • Wheeler R.E.M. 1947-48 “Brahmagiri and Chandravalli” Ancient India. No.4. Pp.180-310.

ಈ ಅಂಕಣದ ಹಿಂದಿನ ಬರೆಹಗಳು

ಕರ್ನಾಟಕದ ಐತಿಹಾಸಿಕ ನಗರಗಳು

ಕರ್ನಾಟಕದಲ್ಲಿ ಮೌರ್ಯ ಚಕ್ರಚರ್ತಿ ಅಶೋಕನ ಆಳ್ವಿಕೆಯ ನಗರಗಳು

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...