ನನ್ನ ಕೈಗೆ ಜೇನುಕಚ್ಚಿದರೂ ಚಿಂತೆಯಿಲ್ಲ, ಕನ್ನಡಿಗರಿಗೆ ಜೇನು ದೊರೆತರೆ ಸಾಕು: ಎ.ಆರ್. ಕೃಷ್ಣಶಾಸ್ತ್ರಿ

Date: 27-11-2021

Location: ಬೆಂಗಳೂರು


‘ಕೃಷ್ಣಶಾಸ್ತ್ರಿಗಳು ನೂರಾ ಎರಡು ವರ್ಷಗಳ ಆಯಸ್ಸನ್ನು ಪೂರೈಸಿ ಮುನ್ನಡೆಯುತ್ತಿರುವ ಈ ತಮ್ಮ ಕನಸಿನ ಕೂಸಿಗೆ ಅದೆಂಥಾ ಅದ್ಭುತ ಅಡಿಪಾಯದ ಚಾಲನೆಯೊದಗಿಸಿದರೆಂದರೆ ಅವರು ತಮ್ಮ ಸ್ವಂತ ಬರವಣಿಗೆಯ ಕಡೆಗೆ ಗಮನ ಕೊಡಲಿಲ್ಲ’ ಎನ್ನುತ್ತಾರೆ ಲೇಖಕ ಎಚ್.ಎಸ್. ಸತ್ಯನಾರಾಯಣ. ಅವರ ಅಂಕಣ ‘ಸಂಪ್ರಾತ’ದಲ್ಲಿ ಕನ್ನಡ ಪರಿಚಾರಕರಾದ ಎ.ಆರ್. ಕೃಷ್ಣಶಾಸ್ತ್ರಿಗಳು ಹಾಗೂ ಪ್ರಬುದ್ಧ ಕರ್ನಾಟಕದ ಪಯಣವನ್ನು ವಿವರಿಸಿದ್ದಾರೆ.

ಎ.ಆರ್. ಕೃಷ್ಣಶಾಸ್ತ್ರಿಗಳ ಕನ್ನಡ ಪ್ರೇಮಕ್ಕೆ ಸಾಟಿಯಾದುದು ಯಾವುದೂ ಇಲ್ಲ. ಮಾಸ್ತಿಯವರು ಶಾಸ್ತ್ರಿಗಳನ್ನು ಮತ್ತು ವೆಂಕಣ್ಣಯ್ಯನವರನ್ನು ಸುಖಾಸುಮ್ಮನೆ ಅಶ್ವಿನಿ ದೇವತೆಗಳೆಂದು ಹೊಗಳಿಲ್ಲ. ಎ.ಆರ್. ಕೃ ಕನ್ನಡದ ಏಳ್ಗೆಗಾಗಿ ಹಗಲಿರುಳು ದುಡಿದರು. ಅಂತಹ ಅನೇಕ ಮಹತ್ಕಾರ್ಯಗಳಲ್ಲಿ ಪ್ರಬುದ್ಧ ಕರ್ನಾಟಕದ ಕನಸೂ ಒಂದಾಗಿದೆ.

ಆಧುನಿಕ ಕನ್ನಡ ಸಾಹಿತ್ಯವನ್ನು ನಿರಂತರವಾಗಿ ಪೊರೆದ ಶಕ್ತಿಗಳಲ್ಲಿ ಪ್ರಬುದ್ಧ ಕರ್ನಾಟಕದ ಪಾತ್ರ ಗಣ್ಯವಾದುದು ಮತ್ತು ಚಿರಕಾಲಿಕವಾದುದು. ಕನ್ನಡ ಭಾಷೆ-ಸಾಹಿತ್ಯಗಳಿಗೆ ಮೀಸಲಾಗಿರುವ ಸುಸಂಸ್ಕೃತ ಓದಿನ ಅಭಿರುಚಿಯನ್ನು ಬೆಳೆಸಿದ ಪ್ರಬುದ್ಧ ಕರ್ನಾಟಕಕ್ಕೀಗ ನೂರಾ ಎರಡು ವರ್ಷ! 2021ರ ಯುಗಾದಿಯನ್ನು ಇಂದು ಆಚರಿಸುತ್ತಿದ್ದೇವೆ. ಪ್ಲವ ಸಂವತ್ಸರ ಕಾಲಿಟ್ಟಿದೆ. 1919ರಲ್ಲಿ ಸಿದ್ಧಾರ್ಥಿ ಸಂವತ್ಸರದ ಯುಗಾದಿ ಸಂಚಿಕೆಯಾಗಿ ಈ ಸಾಹಿತ್ಯ ಪತ್ರಿಕೆಯ ಮೊತ್ತಮೊದಲ ಸಂಚಿಕೆ ಪ್ರಕಟವಾಗಿತ್ತು. ಇದನ್ನು ತಪಸ್ಸಿನಂತೆ ಕಟ್ಟಿ ಬೆಳೆಸಿದ ಪ್ರೊ.ಎ.ಆರ್.ಕೃಷ್ಣಶಾಸ್ತ್ರಿಗಳಿಗೂ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕನ್ನಡ ಸಂಘಕ್ಕೂ ಬಿಡಿಸಲಾಗದ ನಂಟಿದೆ. 1918ರಲ್ಲಿ ಪ್ರಾರಂಭವಾದ ಸೆಂಟ್ರಲ್ ಕಾಲೇಜಿನ ಕನ್ನಡ ಸಂಘವೇ ಪ್ರಬುದ್ಧ ಕರ್ನಾಟಕದ ಯೋಜನೆಯಲ್ಲಿ ಕೃಷ್ಣಶಾಸ್ತ್ರಿಗಳ ಮನದಲ್ಲಿ ಮೂಡಿಸಿದ್ದು. ಈ ವಿವರಗಳನ್ನು ಮೆಲುಕು ಹಾಕಿ ಮುಂದುವರೆಯುವುದು ಸೂಕ್ತವಾದೀತು.

ಕೃಷ್ಣಶಾಸ್ತ್ರಿಗಳು ಅಧ್ಯಾಪನ ವೃತ್ತಿಗೆಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಬಂದಾಗ ಅಲ್ಲಿ ಎಲ್ಲ ಭಾಷಾ ವಿಷಯಗಳಿಗೆ ಸಂಘಗಳಿದ್ದು ಕನ್ನಡಕ್ಕಿಲ್ಲದಿರುವುದನ್ನು ಮನಗಂಡರು. ಕನ್ನಡ ಸಂಘ ಸ್ಥಾಪಿಸುವ ತಮ್ಮ ಕನಸಿಗೆ ಕನ್ನಡ ಭಾಷಾ ವಿದ್ಯಾರ್ಥಿಗಳಿಲ್ಲದೆ ವಿಜ್ಞಾನದ ವಿದ್ಯಾರ್ಥಿಗಳನ್ನೂ ಕಲೆಹಾಕಿಕೊಂಡು 1918ರಲ್ಲಿ ಕನ್ನಡ ಸಂಘಕ್ಕೆ ಚಾಲನೆ ನೀಡಿದರು. ಈ ಸಂಘಕ್ಕೆ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರೂ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಬೆಳೆಸಲು ಶ್ರಮಿಸಿದ ಮೊದಲಿಗರಲ್ಲೊಬ್ಬರಾದ ಬೆಳ್ಳಾವೆ ವೆಂಕಟ ನಾರಾಯಣಪ್ಪನವರನ್ನು ಅಧ್ಯಕ್ಷರನ್ನಾಗಿಸಿದ ಶಾಸ್ತ್ರಿಗಳು ತಾವು ಆ ಸಂಘದ ಉಪಾಧ್ಯಕ್ಷರಾಗುಳಿದು ಕಾರ್ಯದರ್ಶಿಯಾಗಿ ಚುರುಕಾಗಿದ್ದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು. ಶಾಸ್ತ್ರಿಗಳ ಆಯ್ಕೆಯಿಂದ ತಮ್ಮ ವಿದ್ಯಾರ್ಥಿದೆಸೆಯಲ್ಲಿ ಈ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದ ಡಾ.ಬಿ.ಜಿ.ಎಲ್.ಸ್ವಾಮಿಯವರು ತಮ್ಮ ಅವಧಿಯಲ್ಲಿ ಗಳಿಸಿದ ಅನುಭವಗಳನ್ನು ‘ಪಂಚ ಕಲಶ ಗೋಪುರ’ ಎಂಬ ನವಿರು ಹಾಸ್ಯದ ಕೃತಿಯಲ್ಲಿ ಸೊಗಸಾಗಿ ನಿರೂಪಿಸಿರುವುದನ್ನು ಕನ್ನಡದ ಓದುಗರೆಂದೂ ಮರೆಯರು. ಇಂಗ್ಲೀಷ್‌ಮಯ ವಾತಾವರಣದಲ್ಲೇ ಶಾಸ್ತ್ರಿಗಳ ದೃಢಸಂಕಲ್ಪ ಬಲದಿಂದ ಹೆಮ್ಮರವಾಗಿ ಬೆಳೆದು ನಿಂತ ಕನ್ನಡ ಸಂಘವು ಲಾಟರಿ ಮೂಲಕ ನಿಗದಿಯಾಗಿ ತಮ್ಮ ಪಾಲಿಗೆ ದೊರಕುತ್ತಿದ್ದ ದಿನಾಂಕಗಳನ್ನು ಕನ್ನಡದ ವಿವಿಧ ಕಾರ್ಯಕ್ರಮಗಳಿಗೆ ಮೀಸಲಾಗಿಟ್ಟಿತು. ಕವಿಗೋಷ್ಠಿ, ಉಪನ್ಯಾಸ, ವಿಚಾರ ಸಂಕಿರಣಗಳು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳನ್ನಲ್ಲದೇ ಸಾಹಿತ್ಯಾಸಕ್ತ ಸಾರ್ವಜನಿಕರನ್ನೂ ಸೆಳೆದು ಕನ್ನಡ ಸಂಘದ ಸಮಾರಂಭಗಳೆಂದರೆ ಸಭಾಂಗಣ ತುಂಬಿಹೋಗುತ್ತಿತ್ತು. ಆರ್.ನರಸಿಂಹಾಚಾರ್ಯರು ಕನ್ನಡ ಸಂಘದ ಆರಂಭಿಕ ಉಪನ್ಯಾಸ ನೀಡಿದ ಶುಭಗಳಿಗೆಯಿಂದಾಗಿ ಸಂಘದ ಚಟುವಟಿಕೆಗಳು ನಾಡಿನಾದ್ಯಂತ ಪ್ರಸಿದ್ಧಿ ಪಡೆದವು. ನಾಡಿನ ತರುಣ ಕವಿಗಳನ್ನು ಕನ್ನಡ ಸಂಘಕ್ಕೆ ಬರಮಾಡಿಕೊಂಡು ನಡೆಸಿದ ಕವಿಗೋಷ್ಠಿಗೆ ವಿದ್ಯಾರ್ಥಿಯಾಗಿದ್ದ ಕುವೆಂಪು ಅಧ್ಯಕ್ಷರಾಗಿದ್ದು, ಬಿ.ಎಂ.ಶ್ರೀ., ಗೊರೂರು, ರಾವ್ ಬಹಾದ್ದೂರ್, ಸಿ.ಕೆ.ವೆಂಕಟರಾಮಪ್ಪ, ವೀ.ಸೀ., ಡಿ.ವಿ.ಜಿ., ಮುಂತಾದವರು ಉಪನ್ಯಾಸ ನೀಡಿದ್ದು-ಎಲ್ಲವೂ ಈಗ ನಮ್ಮ ಚರಿತ್ರೆಯ ಒಂದು ಭಾಗವಾಗುಳಿದಿದೆ.

ಕನ್ನಡ ಸಂಘದ ಈ ಬಗೆಯ ಚಟುವಟಿಕೆಯ ಫಲವಾಗಿ ಅನೇಕರು ಬರೆದ ಲೇಖನಗಳು, ಕಥೆ, ಕವನ, ಕಾದಂಬರಿಗಳೆಲ್ಲ ಶಾಸ್ತ್ರಿಗಳ ಬಳಿ ಹೇರಳವಾಗಿ ಶೇಖರಗೊಂಡವು. ಮೇಧಾವಿ ವಿದ್ವಾಂಸರುಗಳ ಕನ್ನಡ ಸಂಘದಲ್ಲಿ ಮಾಡಿದ ಭಾಷಣದ ಹಸ್ತಪ್ರತಿಯೂ ಬೇಕಾದಷ್ಟಿದ್ದವು. ಇದನ್ನೆಲ್ಲಾ ಮುದ್ರಿತ ರೂಪದಲ್ಲಿ ಪ್ರಕಟಿಸಿದರೆ ಕನ್ನಡಿಗರ ಜ್ಞಾನವೃದ್ಧಿಯಾಗುತ್ತದೆಂಬ ಆಲೋಚನೆ ಎ.ಆರ್.ಕೃಷ್ಣಶಾಸ್ತ್ರಿಗಳ ಮನಸ್ಸಿಗೆ ಕಾಲಿಟ್ಟಿದ್ದೇ ತಡ ‘ಪ್ರಬುದ್ಧ ಕರ್ನಾಟಕ’ ರೂಪುಗೊಳ್ಳಲು ವೇದಿಕೆ ಸಿದ್ಧವಾಯ್ತು. ಇದೇನು ಸುಲಭದಲ್ಲಿ ಆಗುವ ಮಾತೇ ? ಮುಖ್ಯವಾಗಿ ಕಾಡುವುದೇ ಹಣಕಾಸಿನ ಸಮಸ್ಯೆ. ಆದರೆ ಶಾಸ್ತ್ರಿಗಳ ಸಂಕಲ್ಪ ಬಲ ಎಷ್ಟು ಗಟ್ಟಿಯಾಗಿತ್ತೆಂದರೆ, ಒಂದು ರೂ. ಕೊಟ್ಟು ಸದಸ್ಯರಾಗುವ ಅನೇಕ ವಿದ್ಯಾರ್ಥಿಗಳು, ಮೂರು ರೂ. ಕೊಟ್ಟು ಪೋಷಕರಾದ ಅನೇಕ ಹಿರಿಯರು ಶಾಸ್ತ್ರಿಗಳೊಂದಿಗೆ ಹೆಗಲು ಕೊಟ್ಟರು. ಸ್ವತಃ ಶಾಸ್ತ್ರಿಗಳು ಸೈಕಲ್ ಏರಿ ಹೋಗಿ ಚಂದಾದಾರರ ಮನೆಯಿಂದ ಚಂದಾ ವಸೂಲಿ ಮಾಡಿಕೊಂಡು ಬರುತ್ತಿದ್ದರು. “ಸಾಹಿತ್ಯವು ಜನರಿಗೆ ಬೇಕಿಲ್ಲವೆನ್ನುವುದು ನಿಜವಲ್ಲ, ಉತ್ತಮ ಸಾಹಿತ್ಯವು ಶಾಶ್ವತವಾಗಿ ನಿಲ್ಲಬಹುದು. ಕಾಲನು ಉತ್ತಮ ಸಾಹಿತ್ಯ ರತ್ನಗಳಿಗೆ ಮನಸೋತು ಅವುಗಳನ್ನೆಲ್ಲ ಆರಿಸಿ, ಕಟ್ಟಿ, ಕಂಠದಲ್ಲಿ ಧರಿಸಿಕೊಂಡು ಹೋಗುವನು” ಎಂಬುದಾಗಿ ಪ್ರಬುದ್ಧ ಕರ್ನಾಟಕದ ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಬರೆದುಕೊಂಡಿರುವ ಶಾಸ್ತ್ರಿಗಳು ನಾವು ಮಾಡತಕ್ಕ ಕೆಲಸವು ದೃಢವಾಗಿಯೂ, ನಿರ್ವಂಚನೆಯಿಂದಲೂ ಇದ್ದರೆ ಲಕ್ಷ್ಮೀ-ಸರಸ್ವತಿಯರು ತಾವಾಗಿಯೇ ಸಹಾಯಕ್ಕೆ ನಿಲ್ಲುವರೆಂಬುದಾಗಿ ನಂಬಿದ್ದರು. ಹಾಗೇ ಬದುಕಿದರು ಕೂಡ! ಶತಮಾನ ತುಂಬಿರುವಾಗ ಕನ್ನಡದ ಪ್ರಗತಿಯಲ್ಲಿ ಪ್ರಬುದ್ಧ ಕರ್ನಾಟಕದ ಪಾತ್ರವೇನು, ಅದರಿಂದಾದ ಮಹದುಪಕಾರಗಳೇನು ಎಂಬುದನ್ನು ಚರ್ಚಿಸಲು ಇದು ಸಕಾಲ.

‘ಪ್ರಬುದ್ಧ ಕರ್ನಾಟಕ’ ಎಂಬ ಹೆಸರು ಈ ಪತ್ರಿಕೆಗೆ ಬರಲು ಕಾರಣ ಕೂಡ ತುಂಬ ಸ್ವಾರಸ್ಯಕರವಾಗಿದೆ. ವಿದ್ಯಾರ್ಥಿಗಳ ಲೇಖನ, ಅವರ ಹಣಕಾಸಿನ ನೆರವು, ಉತ್ಸಾಹದ ಪಾಲ್ಗೊಳ್ಳುವಿಕೆ ಮುಂತಾದವನ್ನು ನೆನೆದು ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿರಲೆಂದು ಯೋಚಿಸಿದ ಎ.ಆರ್.ಕೃಷ್ಣಶಾಸ್ತ್ರಿಗಳು ತಮ್ಮ ಸಾರಥ್ಯದ ಸಾಹಿತ್ಯ ಪತ್ರಿಕೆಗೆ ‘ವಿದ್ಯಾರ್ಥಿ’ ಎಂಬ ಹೆಸರಿಡುವ ಉದ್ದೇಶ ಹೊಂದಿದ್ದರಂತೆ. ಅದೇ ಹೊತ್ತಿನಲ್ಲಿ ಶಾಸ್ತ್ರಿಗಳು ವೆಂಕಣ್ಣಯ್ಯನವರು ಶ್ರೀರಾಮಕೃಷ್ಣ ಪರಮಹಂಸರ ಬಗ್ಗೆ ಬರೆದಿದ್ದ ಕಿರುಹೊತ್ತಿಗೆಯ ಬಗ್ಗೆ ಚರ್ಚಿಸಲು ರಾಮಕೃಷ್ಣ ಮಠಕ್ಕೆ ಹೋದರು. ಅಲ್ಲಿ ಸ್ವಾಮಿ ವಿವೇಕಾನಂದರು ಕೃಷ್ಣಶಾಸ್ತ್ರಿಗಳು ಕನ್ನಡ ಸಂಘ ಹೊರತರಲು ಉದ್ದೇಶಿಸಿರುವ ಸಾಹಿತ್ಯ ಪತ್ರಿಕೆಯ ವಿಚಾರ ಪ್ರಸ್ತಾಪಿಸಲು ಸ್ವಾಮೀಜಿಯವರು ‘ಉತ್ತರ ಭಾರತದಲ್ಲಿ ‘ಪ್ರಬುದ್ಧ ಭಾರತ’ ಎಂಬ ಧಾರ್ಮಿಕ ಪತ್ರಿಕೆ ಪ್ರಸಿದ್ಧವಾಗಿದೆ. ನೀವು ಯಾಕೆ ‘ಪ್ರಬುದ್ಧ ಕರ್ನಾಟಕ’ ಎಂಬ ಹೆಸರನ್ನು ನಿಮ್ಮ ಪತ್ರಿಕೆಗಿಡಬಾರದು?” ಎಂದು ನೀಡಿದ ಸಲಹೆ ನಮ್ಮ ಅಶ್ವಿನಿ ದೇವತೆಗಳಿಬ್ಬರಿಗೂ ಒಪ್ಪಿತವಾಯಿತು. ವಿವೇಕಾನಂದ ಸ್ವಾಮೀಜಿಯವರು ನಾಮಕರಣ ಮಾಡಿದ ‘ಪ್ರಬುದ್ಧ ಕರ್ನಾಟಕ’ ಪತ್ರಿಕೆಯ ಮೊದಲ ಸಂಚಿಕೆಗೆ ಕೃಷ್ಣಶಾಸ್ತ್ರಿಗಳು ತಾವೇ ಕೈಯ್ಯಾರೆ ಮುಖಪುಟ ವಿನ್ಯಾಸ ಮಾಡಿ, ಚಿತ್ರವನ್ನೂ ಬಿಡಿಸಿದರು. 100 ವಿದ್ಯಾರ್ಥಿಗಳಿಂದ ತಲಾ 1 ರೂ. ಚಂದಾ ಪಡೆದು ಸಂಪಾದಕೀಯ, ಸಂಪುಟ ಸಂಚಿಕೆಯ ಸಕಲ ವಿವರಗಳೊಂದಿಗೆ ‘ಪ್ರಬುದ್ಧ ಕರ್ನಾಟಕ’ದ ಮೊದಲ ಸಂಚಿಕೆ ಐತಿಹಾಸಿಕ ದಾಖಲೆಯೊಂದಿಗೆ ಮೊದಲ ಹೆಜ್ಜೆ ಇಟ್ಟಿದ್ದು ಹೀಗೆ...

ಕೃಷ್ಣಶಾಸ್ತ್ರಿಗಳು ನೂರಾ ಎರಡು ವರ್ಷಗಳ ಆಯಸ್ಸನ್ನು ಪೂರೈಸಿ ಮುನ್ನಡೆಯುತ್ತಿರುವ ಈ ತಮ್ಮ ಕನಸಿನ ಕೂಸಿಗೆ ಅದೆಂಥಾ ಅದ್ಭುತ ಅಡಿಪಾಯದ ಚಾಲನೆಯೊದಗಿಸಿದರೆಂದರೆ ಅವರು ತಮ್ಮ ಸ್ವಂತ ಬರವಣಿಗೆಯ ಕಡೆಗೆ ಗಮನ ಕೊಡಲಿಲ್ಲ. ಆ ಮೂಲಕ ಲಭಿಸುವ ಪ್ರಸಿದ್ಧಿಯತ್ತಲೂ ಲಕ್ಷ್ಯ ಹರಿಸಲಿಲ್ಲ. ‘ಪ್ರಬುದ್ಧ ಕರ್ನಾಟಕ’ಕ್ಕೆ ಲೇಖನಗಳನ್ನು ಬರೆಸುವುದರಲ್ಲಿ, ಬಂದ ಲೇಖನಗಳನ್ನು ತಿದ್ದಿ ತೀಡಿ ಪರಿಷ್ಕರಿಸುವುದರಲ್ಲಿ, ಗುಣಮಟ್ಟ ಕಾಯ್ದುಕೊಳ್ಳಲು ಶ್ರಮಿಸುವಲ್ಲಿ ತಮ್ಮ ಜೀವನದ ಅಮೂಲ್ಯ ಸಮಯವನ್ನು ಶಾಸ್ತ್ರಿಗಳು ಸವೆಸಿದ್ದಾರೆ. ಈಗಿನ ಸಂಪಾದಕರುಗಳಿಂದ ಇಂತಹ ತ್ಯಾಗವನ್ನು ನಾವು ನಿರೀಕ್ಷಿಸಲಾಗದು. ಪ್ರಬುದ್ಧ ಕರ್ನಾಟಕದ ಗುರಿ ಕನ್ನಡದ ಅಭಿವೃದ್ಧಿ, ಪರಿಷ್ಕರಣೆ ಮತ್ತು ಪ್ರಗತಿ ಮಾತ್ರವಾಗಿತ್ತು.

ಬರೆಸುವ, ತಿದಿಯೊತ್ತುವ ಕೆಲಸವನ್ನು ಶಾಸ್ತ್ರಿಗಳಂತೆ ಮಾಡಬಲ್ಲವರು ವಿರಳ. ಇವನಿಗೆ ಎರಡು ಸಾಲು ಬರೆಯಲು ಬರುತ್ತದೆ, ಎರಡು ಮಾತಾಡಲು ಬರುತ್ತದೆ ಎಂಬ ಚಿಕ್ಕ ಸುಳಿವು ಸಿಕ್ಕಿದರೂ ಅವರನ್ನು ಹುಡುಕಿಕೊಂಡು ಹೋಗಿ ಸ್ನೇಹ ಸಂಪಾದಿಸಿಬಿಡುತ್ತಿದ್ದರು. ಕಿರಿಯ ಲೇಖಕರ ಸಮೂಹವನ್ನೇ ಶಾಸ್ತ್ರಿಗಳು ಬೆನ್ನುಬಿದ್ದು ರೂಪಿಸಿದ್ದಾರೆ. ಬರೆಯುವವರನ್ನು ಹುಡುಕಿ, ಅವರ ಶಕ್ತಿಯನ್ನು ಗುರುತಿಸಿ, ಅವರ ಆಸಕ್ತಿ ಕ್ಷೇತ್ರವನ್ನು ಪತ್ತೆಮಾಡಿ, ಉತ್ತೇಜಿಸಿ ಆ ಬಗ್ಗೆ ಬರೆಯುವಂತೆ ಮಾಡುವುದು ಸಾಮಾನ್ಯದ ಕೆಲಸವೆ? ಪ್ರಬುದ್ಧ ಕರ್ನಾಟಕವನ್ನು ನೆಪವಾಗಿಸಿಕೊಂಡು ಶಾಸ್ತ್ರಿಗಳು ಬರೆಸಿದ ಸೃಜನಶೀಲ ಸಾಹಿತ್ಯ, ವಿಚಾರ ಸಾಹಿತ್ಯ, ಸಮಾಜ ಸಾಹಿತ್ಯ, ಶಾಸ್ತ್ರ ಸಾಹಿತ್ಯ, ವಿಜ್ಞಾನ ಸಾಹಿತ್ಯ, ವಿಮರ್ಶಾ ಸಾಹಿತ್ಯದ ಬೆಳೆ ಹೊಸಗನ್ನಡದಲ್ಲಿ ಹೊಸ ಕವಲುಗಳನ್ನು ಸೃಷ್ಟಿಸಿತು.

‘ಪ್ರಬುದ್ಧ ಕರ್ನಾಟಕ’ಕ್ಕೆ ಬರುವ ಲೇಖನಗಳಿಗೆ ಗೌರವ ಸಂಭಾವನೆ ಕೊಡಲಾಗದೆಂದು ಆರಂಭದಿಂದಲೂ ನಿರ್ಧರಿಸಿಯಾಗಿತ್ತು. ಕೆಲವರು ಇದನ್ನು ತೀಕ್ಷ್ಣವಾಗಿ ಟೀಕಿಸಿದ್ದೂ ಉಂಟು. “ಸಂಭಾವನೆಯ ಪ್ರಶ್ನೆ ಬಂದೊಡನೆ ಪತ್ರಿಕೆ ಬೀದಿಗೆ ಬರಬೇಕಾಗುತ್ತದೆ. ಈ ಆಸೆ, ಅಗತ್ಯ ಇರುವವರು ಈ ಪತ್ರಿಕೆಯನ್ನು ಸಂಪರ್ಕಿಸಬೇಕಿಲ್ಲ. ಆದಷ್ಟು ಕಾಲ ಪತ್ರಿಕೆಗೆ ಹೀಗೆಯೇ ನಡೆದುಕೊಂಡು ಹೋಗಲಿ” ಎಂದು ಸಂಪಾದಕರು ಉತ್ತರಿಸಿದ್ದೂ ಆಯ್ತು! ಬೇರೆ ಲೇಖಕರ ಬರಹಗಳನ್ನು ತಿದ್ದಿ ಪರಿಷ್ಕರಣೆ ಮಾಡುವ ವಿಚಾರದಲ್ಲೂ ತೀವ್ರ ಅಸಮಾಧಾನ ಎದುರಿಸಬೇಕಾಯ್ತು. ಏನೇ ಆದರೂ ಭಾಷೆ-ನಿರೂಪಣೆಗಳ ವಿಷಯದಲ್ಲಿ ತಪ್ಪೆಂದು ಕಂಡಿದ್ದನ್ನು ಶಾಸ್ತ್ರಿಗಳು ತಿದ್ದದೇ ಪ್ರಕಟಿಸುತ್ತಿರಲಿಲ್ಲ.

ನವೋದಯ ಕಾಲದಿಂದಲೂ ಅನೇಕ ಲೇಖಕರ ಮುಖ್ಯ ಬರಹಗಳು ಪ್ರಬುದ್ಧ ಕರ್ನಾಟಕದಲ್ಲಿ ಮೊದಲು ಬೆಳಕು ಕಂಡಿವೆ. ಪ್ರಬುದ್ಧ ಕರ್ನಾಟಕದಲ್ಲಿ ಬರಹವೊಂದು ಪ್ರಕಟವಾಯಿತೆಂದರೆ ಆತ ಪರೀಕ್ಷೆಯಲ್ಲಿ ಪಾಸಾಗಿ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದನೆಂದೇ ಅರ್ಥ. ಹಾಗಿತ್ತು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಗುವ ಬರಹಗಳ ಗುಣಮಟ್ಟ! ಆರ್.ನರಸಿಂಹಾಚಾರ್, ಬಿ.ಎಂ.ಶ್ರೀ., ಪಂಜೆ ಮಂಗೇಶರಾವ್, ಡಿ.ವಿ.ಜಿ., ಮಾಸ್ತಿ, ಟಿ.ಎಸ್.ವೆಂಕಣ್ಣಯ್ಯ, ದ.ರಾ.ಬೇಂದ್ರೆ, ಕುವೆಂಪು, ವೀ.ಸೀ. ಪು.ತಿ.ನ., ಸಂಸ, ಎಂ.ಆರ್.ಶ್ರೀ., ನಾ.ಕಸ್ತೂರಿ, ಎ.ಎನ್.ಮೂರ್ತಿರಾವ್, ತೀ.ನಂಶ್ರೀ., ರಾಜರತ್ನಂ, ಆನಂದ, ರಾಳಪಳ್ಳಿ ಅನಂತಕೃಷ್ಣಶರ್ಮ, ಶಂ.ಬಾ.ಜೋಶಿ, ಶ್ರೀರಂಗ, ಡಿ.ಎಲ್.ಎನ್., ಕೆ.ಎಸ್.ನ., ಯಮುನಾಚಾರ್ಯ, ಗೊರೂರು, ಸಿ.ಕೆ.ವೆಂಕಟರಾಮಯ್ಯ ಮೊದಲಾದ ಗಣ್ಯ ಲೇಖಕರ ಪಡೆಯೇ ತಮ್ಮ ಪ್ರತಿಭಾಪೂರ್ಣ ಲೇಖನಿಯಿಂದ ಪ್ರಬುದ್ಧ ಕರ್ನಾಟಕವನ್ನು ಸಿಂಗರಿಸಿದೆ. ಕುವೆಂಪು ಅವರ ಮಲೆನಾಡಿನ ಚಿತ್ರಗಳು, ವಿ.ಸೀ.ಯವರ ‘ಪಂಪಾಯಾತ್ರೆ’, ನರಸಿಂಹಸ್ವಾಮಿಯವರ ‘ಮೈಸೂರು ಮಲ್ಲಿಗೆ’, ಪು.ತಿ.ನ. ಅವರ ‘ಅಹಲ್ಯೆ’, ಮೂರ್ತಿರಾಯರ ‘ಹಗಲುಗನಸುಗಳು’ ಮಾಸ್ತಿಯವರ ‘ಸುಬ್ಬಣ್ಣ’ ಮುಂತಾದ ಸುಪ್ರಸಿದ್ಧ ಕೃತಿಗಳೆಲ್ಲವೂ ಮೊದಲು ಪ್ರಬುದ್ಧ ಕರ್ಣಾಟಕದಲ್ಲಿ ಬಿಡಿಬಿಡಿಯಾಗಿ ಪ್ರಕಟವಾದವೇ.

ಎ.ಆರ್.ಕೃಷ್ಣಶಾಸ್ತ್ರಿಗಳು ಮೊದಲು ಈ ಸಂಚಿಕೆಯನ್ನು ನಾಲ್ಕು ತಿಂಗಳಿಗೊಂದರಂತೆಯೂ, ಮರುವರ್ಷದಿಂದ ಮೂರು ತಿಂಗಳಿಗೊಂದರಂತೆಯೂ ಹೊರತಂದರು. ಗಣೇಶನ ಹಬ್ಬ, ದೀಪಾವಳಿ, ಸಂಕ್ರಾಂತಿ ಮತ್ತು ಕಾಮನ ಹುಣ್ಣಿಮೆಯ ಸಂಚಿಕೆಗಳಾಗಿ ಹೊರಬರುತ್ತಿದ್ದ ಇವು ಈಗ ಚೈತ್ರ, ಆಷಾಡ, ಅಶ್ವಯುಜ ಮತ್ತು ಪುಷ್ಯ ಸಂಚಿಕೆಗಳಾಗಿ ಪ್ರಕಟವಾಗುತ್ತಿವೆ. “ಕೈಗೆ ಜೇನು ಕಚ್ಚಿದರೂ ಚಿಂತೆಯಿಲ್ಲ, ಕನ್ನಡಿಗರಿಗೆ ಜೇನು ದೊರೆತರೆ ಅಷ್ಟೇ ಸಾಕು” ಎಂಬುದಾಗಿ ಹೇಳಿದ್ದ ಶಾಸ್ತ್ರಿಗಳಿಗೆ ತಮ್ಮ ಈ ಪತ್ರಿಕೆಯ ಹೊಸಗನ್ನಡ ಸಾಹಿತ್ಯದ ತರುಣ ಬರಹಗಾರರಿಗೆ ಮುಖ್ಯ ವೇದಿಕೆಯಾಗಿ ಅವರ ಸುಪ್ತ ಪ್ರತಿಭೆಯನ್ನು ಹೊರಗೆಳೆಯುವಲ್ಲಿ ತೀವ್ರತರ ಉತ್ಸಾಹಿಯಾಗಿದೆಯಾದರೂ ಹಣಕಾಸಿನ ಅಡಚಣೆಯಿಂದ ಅದನ್ನು ನಿಲ್ಲಿಸಿಬಿಡಬೇಕೆಂಬ ಆಲೋಚನೆ ಆಗಾಗ ಮನದಲ್ಲಿ ಸುಳಿದರೂ ಪತ್ರಿಕೆಯ ಆಯಸ್ಸು ಎಷ್ಟಿದೆಯೋ ಅಷ್ಟು ಕಾಲ ನಡೆದುಕೊಂಡು ಬರಲೆಂಬ ಆಸೆಯೂ ಬಲವಾಗಿತ್ತು. ಬಿ.ಎಂ.ಶ್ರೀ. ಮತ್ತು ಟಿ.ಎಸ್.ವೆಂಕಣ್ಣಯ್ಯನವರೊಡನೆ ಮೈಸೂರು ವಿ.ವಿ.ಯು ಪತ್ರಿಕೆಯನ್ನು ಮುನ್ನಡೆಸಲು ಸಾಧ್ಯವೇ ಎಂದು ಕೇಳುತ್ತಿದ್ದರಂತೆ. ಬಿ.ಎಂ.ಶ್ರೀ.ಯವರು ಮೂರ‍್ನಾಲ್ಕು ಸುತ್ತಿನ ಮಾತುಕತೆ ನಡೆಸಿ 1932ರಲ್ಲಿ ಪ್ರಬುದ್ಧ ಕರ್ನಾಟಕವು ಮೈಸೂರು ವಿ.ವಿ.ಯ ವ್ಯಾಪ್ತಿಗೆ ಸೇರ್ಪಡೆಯಾಯಿತು. ಪ್ರಕಾಶನದ ಹೊಣೆ ವಿ.ವಿ.ಯದಾದರೂ ಸಂಪಾದಕರಾಗಿ ಆಗ ತೀ.ನಂ.ಶ್ರೀ., ಕುವೆಂಪು, ವೀ.ಸೀ., ಮುಂತಾದವರು ಇದ್ದರು. ಟಿ.ಎಸ್.ವೆಂಕಣ್ಣಯ್ಯ- ಶಾಸ್ತ್ರಿಗಳ ಜೋಡಿಯಂತೂ ಜೊತೆಗಿದ್ದೇ ಇತ್ತು. ಡಿ.ಎಲ್.ನರಸಿಂಹಾಚಾರ್, ಕೆ.ವಿ.ರಾಘವಾಚಾರ್, ಎಸ್.ಅನಂತರಂಗಾಚಾರ್, ಎಸ್.ವಿ.ಪರಮೇಶ್ವರಭಟ್ಟ, ದೇ.ಜ.ಗೌ., ಹಾ.ಮಾ.ನಾಯಕ, ಜಿ.ಎಚ್.ನಾಯಕ, ರಾ.ಗೌ., ಸಿ.ಪಿ.ಕೆ., ಮುಂತಾದ ಹಿರಿಯರು ಪ್ರಬುದ್ಧ ಕರ್ನಾಟಕವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹುದ್ದೆಯಲ್ಲಿರುವವರೇ ಇದರ ಪ್ರಧಾನ ಸಂಪಾದಕರಾಗಿರುವ ಪರಂಪರೆ ಸದ್ಯಕ್ಕೆ ಚಾಲ್ತಿಯಲ್ಲಿದೆ.

ಪ್ರಬುದ್ಧ ಕರ್ನಾಟಕದ ಮೂಲಕ ನಾಡಿಗೆ ದೊರೆತ ದೊಡ್ಡ ದೊಡ್ಡ ಲೇಖಕರ ಸಂಖ್ಯೆ ಆರುನೂರಕ್ಕೂ ಹೆಚ್ಚು. ಪ್ರಬುದ್ಧ ಕರ್ನಾಟಕದ ಮತ್ತೊಂದು ವಿಶೇಷ ಕೊಡುಗೆಯೆಂದರೆ ಅದು ಹೊರತಂದಿರುವ ವಿಶೇಷ ಸಂಚಿಕೆಗಳು. ಚಿನ್ನದ ಹಬ್ಬದ ಸಂಚಿಕೆಯಂತೂ ಅಪರೂಪದ ಆಕರ ಗ್ರಂಥವಾಗಿದೆ. ರವೀಂದ್ರನಾಥ ಟಾಗೋರ್, ವಿವೇಕಾನಂದ, ವಿಜ್ಞಾನ ವಿಶೇಷಾಂಕ ಮುಂತಾದ ವಿಶೇಷ ಸಂಚಿಕೆಗಳು ಉಲ್ಲೇಖಾರ್ಹ. ಎ.ಆರ್.ಕೃಷ್ಣಶಾಸ್ತ್ರಿಗಳನ್ನು ಕುರಿತೇ ಒಂದು ಸಂಚಿಕೆ ಪ್ರಕಟವಾಗಿದೆ. ಕೃಷ್ಣಶಾಸ್ತ್ರಿಗಳ ನಂತರ ಈ ಪತ್ರಿಕೆಯನ್ನು ಮುನ್ನಡೆಸಿದ ಪ್ರತಿಭಾಶಾಲಿ ಸಂಪಾದಕರುಗಳು ಕೂಡ ತಮ್ಮ ಧೀಮಂತಿಕೆಯ ಪಾಲನ್ನು ಧಾರೆಯೆರೆದಿದ್ದಾರೆ. ಇಂದಿಗೂ ಇದೊಂದು ಪ್ರೌಢಪತ್ರಿಕೆ ಎನಿಸಿ ಸಾಹಿತ್ಯ ಪ್ರಿಯರ ಮನದಲ್ಲಿ ಪಾಲು ಪಡೆದಿದೆ.

ಗ್ರಂಥಾಲಯಗಳಲ್ಲಿ ಕಾಣಸಿಗುವ ಪ್ರಬುದ್ಧ ಕರ್ನಾಟಕದ ಹಳೆಯ ಸಂಚಿಕೆಗಳನ್ನೂ ನೂರರ ಹೊಸ್ತಿಲನ್ನು ದಾಟಿ ಮುನ್ನಡೆದಿರುವ ಇತ್ತೀಚಿನ ಕೆಲವು ಸಂಚಿಕೆಗಳನ್ನೂ ಗಮನಿಸಿದರೆ ಅದು ಕಾಲಕ್ಕೆ ತಕ್ಕಂತೆ ಸ್ವರೂಪದಲ್ಲಿಯೂ ಗುಣಮಟ್ಟದಲ್ಲಿಯೂ ಬದಲಾಗುತ್ತ ಬಂದಿರುವುದನ್ನು ಕಾಣಬಹುದು. ಸಾಹಿತ್ಯ ಸಂಬಂಧಿ ಲೇಖನಗಳಲ್ಲದೆ ಸಾಹಿತ್ಯೇತರ ವಿಷಯಗಳ ಹರಹನ್ನೂ ಹೆಚ್ಚಿಸಿಕೊಂಡಿರುವ ಸಂಚಿಕೆಗಳು ಸಾಹಿತ್ಯ ಸಂಶೋಧನೆ, ವಿಜ್ಞಾನ, ಮಾನವಿಕ ವಿಷಯಗಳತ್ತ ಗಮನವನ್ನು ಕೇಂದ್ರೀಕರಿಸಿರುವುದು ಮೆಚ್ಚಬಹುದಾದ ಅಂಶಗಳಲ್ಲೊಂದು. ಕೃಷ್ಣಶಾಸ್ತ್ರಿಗಳು ಸಂಚಿಕೆಯನ್ನು ಆರಂಭಿಸಿದಾಗ ‘ಪತ್ರಿಕೆ ಮಡಿವಂತಿಕೆಯಿಂದ ಕೂಡಿದೆ’ ಎಂಬ ಟೀಕೆ ಬಲವಾಗಿತ್ತು. ಅದರಿಂದ ಶಾಸ್ತ್ರಿಗಳು ವಿಚಲಿತರಾಗಲಿಲ್ಲ. ಮಾಸ್ತಿಯವರ ಸುಬ್ಬಣ್ಣ ಕಿರು ಕಾದಂಬರಿಯನ್ನು ‘ಮುಜುಗರ ತರುವ ವಿಚಾರಗಳಿವೆ’ ಎಂಬ ಕಾರಣಕ್ಕೆ ಹಿಂದಿರುಗಿಸಿದ್ದುದೂ ಉಂಟು. ಮಾಸ್ತಿಯವರೂ ಅಷ್ಟು ಸುಲಭವಾಗಿ ರಾಜಿ ಮಾಡಿಕೊಳ್ಳಲಿಲ್ಲ. ಆಮೇಲೆ ಮೂಲ ಸ್ವರೂಪದಲ್ಲೇ ಪ್ರಕಟವಾಯಿತೆಂಬುದು ಬೇರೆ ವಿಚಾರ. ಪ್ರಸ್ತುತದ ಸಂಚಿಕೆಗಳನ್ನು ಗಮನಿಸಿದರೆ ಪ್ರಬುದ್ಧ ಕರ್ನಾಟಕ ಇಂಥ ಸಂಗತಿಗಳನ್ನೆಲ್ಲಾ ಮೀರಿ ಬೆಳೆಯುತ್ತಿರುವುದು ಸಮಾಧಾನ ತರುವ ಸಂಗತಿ.

2011ರಲ್ಲಿ ಪ್ರಬುದ್ಧ ಕರ್ಣಾಟಕದ ಮೂವತ್ತೈದು ಸಂಚಿಕೆಗಳನ್ನು ಇಂಟರ್‌ನೆಟ್‌ನಲ್ಲಿ ಉಚಿತವಾಗಿ ಒದಗಿಸಲಾಯಿತು. ಮೈಸೂರಿನ ಜೆಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಸಿ.ಎಸ್.ಯೋಗಾನಂದ ನೇತೃತ್ವದ ಕನ್ನಡ ಸಾಹಿತ್ಯಾಸಕ್ತರ ತಂಡವು ಪತ್ರಿಕೆಯ ಸಂಚಿಕೆಗಳನ್ನು ತನ್ನ www.sirinudi.org ವೆಬ್‌ಸೈಟಿನಲ್ಲಿ ಲಭ್ಯವಾಗುವಂತೆ ಮಾಡಿತು. 1960ರ ದಶಕದ ಸಂಚಿಕೆಗಳಿವು. ಆಸಕ್ತರು ಈಗಲೂ ಇದನ್ನು ನೋಡಬಹುದು. ಮೈಸೂರಿನ ಪ್ರಸಾರಾಂಗ ಹಾಗೂ ಇತರೆ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪ್ರಬುದ್ಧ ಕರ್ನಾಟಕದ ಸಾಹಿತ್ಯ ಮತ್ತು ವಿಜ್ಞಾನ ಸಂಚಿಕೆಗಳನ್ನು ಡಿಜಿಟಲೀಕರಣದ ಮೂಲಕ ದೊರಕಿಸುವ ಆಶಯವನ್ನು ಈಗ ಪತ್ರಿಕೆಯ ಪ್ರಧಾನ ಸಂಪಾದಕರೂ, ಅಂದಿನ ಪ್ರಸಾರಾಂಗದ ನಿರ್ದೇಶಕರೂ ಆಗಿದ್ದ ಡಾ.ಎಂ.ಜಿ.ಮಂಜುನಾಥ್ ಅವರು ಪತ್ರಿಕೆಗಳಲ್ಲಿ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಬೇಕಿದೆ.

ಕೃಷ್ಣಶಾಸ್ತ್ರಿಗಳ ಕನಸಿನ ಕೂಸಾದ, ಶತಮಾನ ಪೂರೈಸಿ ಮುನ್ನಡೆದಿರುವ ಈ ಪತ್ರಿಕೆಯನ್ನು ಅರ್ಥಪೂರ್ಣವಾಗಿ ಮುಂದುವರೆಸಿಕೊಂಡು ಹೋಗುವುದು ಸುಲಭದ ಮಾತಲ್ಲ, ಹೊಸ ಕಾಲಧರ್ಮಕ್ಕನುಗುಣವಾಗಿ, ಹೊಸ ಪರಿವೇಷ, ಹೊಸ ಆಶಯ, ಹೊಸ ಉತ್ಸಾಹದಲ್ಲಿ ಭಿನ್ನ ಆಯಾಮಗಳನ್ನು ಜೋಡಿಸುವ ಪಕ್ವ ದೃಷ್ಟಿಕೋನದೊಂದಿಗೆ ಇನ್ನಷ್ಟು ಕಸುವು ತುಂಬಿಕೊಂಡು ‘ಪ್ರಬುದ್ಧ ಕರ್ನಾಟಕ’ ಇಪ್ಪತ್ತೊಂದನೆಯ ಶತಮಾನವನ್ನೂ ದಾಟುವಂತಾಗಲೆಂಬುದು ಕನ್ನಡಿಗರೆಲ್ಲರ ಹಾರೈಕೆ.

ಈ ಅಂಕಣದ ಹಿಂದಿನ ಬರಹಗಳು:
ಮಾಸ್ತಿ ಪುರಸ್ಕಾರದ ಗೌರವ: ಎಚ್.ಎಸ್. ಸತ್ಯನಾರಾಯಣ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...