ನಿಸ್ತೇಜ ಮನುಷ್ಯನಿಗೆ ಜೀವ ತುಂಬುವ ಕಾತುರ

Date: 26-08-2020

Location: ಬೆಂಗಳೂರು


ಕಲಾಕೃತಿ: ‘ದಿ ಕ್ರಿಯೇಶನ್ ಆಫ್ ಗಾಡ್’
ಕಲಾವಿದ: ಮೈಕೆಲ್ ಏಂಜಿಲೋ ಡಿ ಲೊಡವಿಕೊ ಬೋನರೊಟಿ ಸಿಮೋನಿ
ಜನನ: 6ನೇ ಮಾರ್ಚ, 1475 ಸ್ಥಳ- ಇಟಲಿಯ ಕ್ಯಾಪ್ರಿಸ್
ನಿಧನ: 18ನೇ ಫೆಬ್ರುವರಿ, 1564
ಕಲಾಪಂಥ: ಪುನರುಜ್ಜೀವನ ಕಾಲ

ವ್ಯಾಟಿಕನ್ ನಗರದ ಸಿಸ್ಟೇನ್ ಚಾಪೆಲ್ ಪ್ರಾರ್ಥನಾ ಮಂದಿರದ ಒಳಛಾವಣಿಯಲ್ಲಿರುವ ಚಿತ್ರವೇ ‘ದಿ ಕ್ರಿಯೇಶನ್ ಆಫ್ ಗಾಡ್’. ಮೈಕೆಲ್ಯಾಂಜಿಲೋನ ಹಲವು ಪ್ರಮುಖ ಕೃತಿಗಳಲ್ಲಿ ಇದು ಒಂದು. ಬೈಬಲ್‌ನ ಬುಕ್ ಆಫ್ ಜೆನೆಸಿಸ್‌ನಲ್ಲಿ ದೇವರು ಮೊದಲ ಮನುಷ್ಯನಾದ ಆಡಮ್‌ನಿಗೆ ಜೀವ ತುಂಬುವ ಕಥೆಯಾಧರಿಸಿ ಕಲಾವಿದ ಈ ಕೃತಿಯನ್ನು ರಚಿಸಿದ್ದಾನೆ. ಆಯತಾಕಾರದ ಈ ಭಿತ್ತಿಚಿತ್ರದಲ್ಲಿ ಎಡಭಾಗದ ಕೆಳಗಡೆಯೊಂದು ಮತ್ತು ಬಲಭಾಗದ ಮೇಲ್ತುದಿಯಲ್ಲೊಂದು ಎರಡು ಮುಖ್ಯ ಆಕೃತಿಗಳಿವೆ. ಒಂದು ಆಡಮ್, ಇನ್ನೊಂದು ದೇವರು. ಆಡಮ್ ಬೆತ್ತಲಾಗಿ ಬಂಡೆಯ ಮೇಲೆ ನಿಡಿದಾಗಿ ಕಾಲು ಚಾಚಿ ಕುಳಿತಿದ್ದರೆ, ದೇವರು ಗಾಳಿಯಲ್ಲಿ ಗಾಲಿಯಲ್ಲಿ ಈಜುತ್ತಾ ಆಡಮ್‌ನೆಡೆಗೆ ಧಾವಿಸಿದ್ದಾನೆ. ಪ್ರಾಯಶಃ ಇನ್ನೂ ಮುಂದೆ ಹುಟ್ಟಬಹುದಾದ ಹಲವು ಮನುಷ್ಯಾಕೃತಿಗಳು ಇಲ್ಲಿ ದೇವರಿಗೆ ತೆಕ್ಕೆ ಬಿದ್ದಿರುವಂತೆ ಕಾಣಿಸುತ್ತವೆ. ಅವೆಲ್ಲ ಮಂದವರ್ಣದಲ್ಲಿ ಚಿತ್ರಿಸಿರುವುದರಿಂದ ನಮಗೆ ಮುಖ್ಯವಾಗಿ ಕಾಣುವುದು ದೇವರು ಮತ್ತು ಆಡಮ್ ಮಾತ್ರ. ಇಂಗ್ಲೀಷ ಕಲಾವಿಮರ್ಶಕ ವಾಲ್ಟರ್ ಪ್ಯಾಟರ್ ‘ದೇವರ ಎಡಗೈಯಿಂದ ರಕ್ಷಿಸಲ್ಪಟ್ಟ ಆಕೃತಿಯು ಸ್ತ್ರೀಲಿಂಗವಾಗಿದೆ. ಅದರ ನೋಟ ಆಡಮ್‌ನ ಕಡೆಗೆ ಇರುವುದರಿಂದ ಈ ಆಕೃತಿ ಈವ್ ಅನ್ನು ಪ್ರತಿನಿಧಿಸುತ್ತಾಳೆ. ಮತ್ತು ಇತರ ಹನ್ನೊಂದು ವ್ಯಕ್ತಿಗಳು ಆಡಮ್ ಮತ್ತು ಈವ್ ಅವರಿಗೆ ಹುಟ್ಟಲಿರುವ ಸಂತತಿಯ ಆತ್ಮಗಳನ್ನು ಪ್ರತಿನಿಧಿಸುತ್ತಾರೆ’ ಎಂದಿದ್ದಾನೆ. ಆದರೆ ಕ್ಯಾಥೋಲಿಕ್ ಚರ್ಚ್‌ಗಳು ಆತ್ಮಗಳ ಪೂರ್ವ ಅಸ್ತಿತ್ವದ ಬೋಧನೆಯನ್ನು ಧರ್ಮದ್ರೋಹ ಎಂದಿರುವುದರಿಂದ ವಾಲ್ಟರ್ ಪ್ಯಾಟರ್ ಈ ವ್ಯಾಖ್ಯಾನ ಪ್ರಶ್ನಾರ್ಹವಾಗಿದೆ.

ಆಯತಾಕಾರದ ಈ ಚಿತ್ರದಲ್ಲಿ ಎರಡು ಭಾಗಗಳು ಮಾತ್ರ ಎದ್ದು ಕಾಣುತ್ತವೆ. ಚೌಕಟ್ಟಿನ ಎಡಭಾಗದ ಮೇಲ್ತುದಿಯಿಂದ ಬಲಭಾಗದ ಕೆಳಮೂಲೆಗೆ ಒಂದು ಕಾಲ್ಪನಿಕ ಕರ್ಣರೇಖೆಯನ್ನು ಎಳೆದರೆ ಚಿತ್ರವು ಸ್ಪಷ್ಟವಾಗಿ ಎರಡು ತ್ರಿಕೋನ ಭಾಗವಾಗುತ್ತದೆ. ಈ ಎರಡು ಭಾಗದಲ್ಲಿ ಮುಖ್ಯ ಚಿತ್ರಣ ಕಂಡು ಬರುತ್ತದೆ. ಹಿನ್ನೆಲೆಯಲ್ಲಿ ಒಂದಿಷ್ಟು ಭೂಭಾಗ, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಕಾಶವು ಆವರಿಸಿಕೊಂಡಿದೆ.
ಭೂಮಿಯ ಹಸಿರು ದಿಬ್ಬದ ಮೇಲೆ ನಿರಾಯಾಸವಾಗಿ ಕುಳಿತಿರುವ ಮನುಷ್ಯನಿಗೆ ಭಗವಂತನೇ ಬಹು ಕಾತುರದಿಂದ ಜೀವ ತುಂಬಬೇಕೆಂದು ಧಾವಿಸಿ ಬರುತ್ತಿರುವಂತಿದೆ. ಆಕಾಶದಲ್ಲಿ ದೇವರು ತೇಲುತ್ತ ಆಡಮ್‌ನೆಡೆಗೆ ತನ್ನ ಬಲಗೈಯನ್ನು ಚಾಚಿದ್ದಾನೆ. ಆಡಮ್ ತನ್ನ ಎಡಗೈಯನ್ನು ಎಡ ಮೊಣಕಾಲಿನ ಮೇಲೆ ಊರಿ ದೇವರತ್ತ ಚಾಚಿದ್ದಾನೆ. ದೇವರು ತನ್ನ ತೋರುಬೆರಳನ್ನು ಆಡಮ್‌ನ ಬೆರಳನ್ನು ಮುಟ್ಟಿದನೋ ಇಲ್ಲವೋ.. ಎಂಬಷ್ಟು ಅಂತರ ಉಳಿಸಿ ಚಿತ್ರ ಸ್ಥಿರವಾಗಿ ನಿಂತುಬಿಟ್ಟಿದೆ.

ದೇವರು ಮತ್ತು ಮನುಷ್ಯನಿಗೆ ಇಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ. ಆಕಾರ, ಗಾತ್ರ, ಮೈಬಣ್ಣ (ಭಾರತೀಯ ಪೌರಾಣಿಕ ಕಥೆಗಳಲ್ಲಿ ಮನುಷ್ಯನಿಗೂ ದೇವರಿಗೂ ಅಜಗಜಾಂತರ ವ್ಯತ್ಯಾಸವಿದೆ. ವೇಷಭೂಷಣಗಳು, ವಸ್ತ್ರಾಲಂಕಾರಗಳಿಂದಲೇ ಇದು ದೇವರ ಪಾತ್ರ ಥಟ್ಟನೇ ಹೇಳಿಬಿಡಬಹದು.) ಇವುಗಳಲ್ಲೆಲ್ಲ ದೇವರು ಮನುಷ್ಯನನ್ನೇ ಹೋಲುತ್ತಾನೆ. ಆಕಾಶದಲ್ಲಿ ತೇಲುತ್ತಿರುವ ಅತೀಂದ್ರಿಯ ಶಕ್ತಿಯ ಕಾರಣದಿಂದ ಮಾತ್ರ ದೇವರು ಇಲ್ಲಿ ಒಂದಷ್ಟು ಭಿನ್ನವಾಗಿ ಕಾಣುತ್ತಾನೆ.
ಅಂದಿನ ಮನುಷ್ಯನಲ್ಲಿ ಇಂದಿನವನ ಭಾವ: ಆಡಮ್‌ನ ಮುಖಚರ್ಯೆಯನ್ನೊಮ್ಮೆ ಗಮನಿಸಿದರೆ ಅವನಲ್ಲಿ ಯಾವುದೇ ಉತ್ಸಾಹವು ಕಾಣಿಸದೇ ನಿರಾಶೆ, ನಿರಾಸಕ್ತಿ ತುಂಬಿರುವುದು ಗೋಚರವಾಗುತ್ತದೆ. ಸಾಕ್ಷಾತ್ ದೇವರೇ ಅವನಿಗೆ ಜೀವಚೈತನ್ಯ ತುಂಬಲು ಬಂದಿದ್ದಾನೆಂದರೆ ಅವನಿಗೆಷ್ಟು ರೋಮಾಂಚನ, ಖುಶಿ ಆಗಬೇಕಿತ್ತು!? ಅಂಥದು ಆಡಮ್‌ನಲ್ಲಿ ಕಾಣಿಸುತ್ತಿಲ್ಲ. ಬಹು ಉತ್ಸುಕತೆಯಿಂದ ದೇವರು ಅವನೆಡೆಗೆ ಕೈ ಚಾಚಿದ್ದರೆ ಆಡಮ್ ಕೈ ನೀಡಲೋ ಬೇಡವೋ ಎಂಬಂತೆ ನೀಡಿದ್ದಾನೆ. ಈ ನಿರಾಸಕ್ತಿ ಇಂದಿನ ಆಧುನಿಕ ಮನುಷ್ಯನ ಪ್ರತಿರೂಪವಾಗಿ ನಮಗೆ ಕಾಣುತ್ತಲಿದೆ. ಈ ಹೊತ್ತು ಎಷ್ಟೆಲ್ಲಾ ಅನುಕೂಲತೆಗಳು, ಸೌಕರ್ಯಗಳು ಇದ್ದರೂ ಇನ್ನೂ ಏನೋ ಕೊರತೆಯನ್ನು ಅನುಭವಿಸುತ್ತಾ ಅನ್ಯಮನಸ್ಕನಾಗಿ ಯಾವುದಕ್ಕೋ ಹಪಹಪಿಸುತ್ತಿರುವ ಆಧುನಿಕ ಕಾಲದ ಮನುಷ್ಯನಂತೆ ಮೊದಲ ಮನುಷ್ಯನಾದ ಆಡಮ್‌ನೂ ಕೂಡಾ ದೇವರೇ ಮುಂದಿದ್ದರೂ ನಿಸ್ತೇಜನಾಗಿ ಕುಳಿತಿದ್ದಾನೆ.

ಮೈಕೆಲ್ಯಾಂಜಿಲೋನ ಇತರ ಚಿತ್ರಗಳನ್ನು ನೋಡಿ ಈ ಚಿತ್ರ ನೋಡಿದರೆ ಇಲ್ಲಿ ಬಟ್ಟೆಗಳಿಗೆ ತುಸು ತಿಳಿಯಾದ ಬಣ್ಣ ಬಳಸಿದ್ದು ಕಂಡುಬರುತ್ತದೆ. ಉಳಿದ ಕೃತಿಗಳಲ್ಲಿ ಬಟ್ಟೆಬರೆಗಳಿಗೆ ಹೆಚ್ಚು ಪ್ರಖರವಾದ ಬಣ್ಣಗಳನ್ನು ಬಳಸಿದ್ದಾನೆ. ಇವನ ಕೃತಿಗಳಲ್ಲಿ ಬಹುಮುಖ್ಯವಾಗಿ ಎದ್ದು ಕಾಣುವ ಸಂಗತಿಯೆಂದರೆ ಚಿತ್ರದ ಪಾತ್ರಗಳು ಧರಿಸಿದ ಬಟ್ಟೆಯ ಮಡಿಕೆಗಳು (Foldings). ಸಹಜವಾಗಿ, ಅಡ್ಡಾದಿಡ್ಡಿಯಾಗಿ, ತಿರುಗಮುರುಗಿಯಾಗಿ ಹೊರಳಾಡಿರುವ ಆ ಮಡಿಕೆಗಳನ್ನು ಯಥಾವತ್ತಾಗಿ ಹಿಡಿದಿಟ್ಟಿರುವುದು. ಬಟ್ಟೆಯ ನೆರಿಗೆಗಳನ್ನು ವಕ್ರವಕ್ರವಾಗಿ ಹರಿದಾಡಿ ಒಂದಾದ ಮೇಲೊಂದು ಒರಗಿ, ಒಂದು ಹಿಂದೆ ಬಿದ್ದು ಮತ್ತೊಂದು ಮೇಲೆ ಬಂದಾಗ ಕಾಣಿಸುವಾಗಿನ ಬಟ್ಟೆಯ ಆ ಮೈವಳಿಕೆಯನ್ನು ನೆರಳು-ಬೆಳಕುಗಳಿಂದ ತೋರಿಸಿದ ಪರಿ ನೋಡಿದರೆ ನೋಡುಗನಿಗೆ ಆ ನೆರಿಗೆಗಳನ್ನೊಮ್ಮೆ ನೇವರಿಸಬೇಕು ಎಂದೆನಿಸುತ್ತದೆ. ಈ ತೆರನ ಚಿತ್ರಿಸುವಿಕೆ ರೆನೈಸ್ಸಾನ್ಸ್ ಯುಗದ ಪರಿಣಾಮವೆಂದು ನಮಗೆ ಕಾಣುತ್ತದೆ. ಈ ಕಾಲದಲ್ಲಿಯೇ ಸಮತಟ್ಟಾದ ಮೇಲ್ಮೈ ಮೇಲೆ ವಸ್ತುವಿನ ಮೂರು ಪರಿಮಾಣಗಳನ್ನು ಕಾಣಿಸುವಂತೆಯೂ, ಯಥಾದರ್ಶನ ವಿಧಾನದಿಂದ ವಸ್ತುವಿನ ಹತ್ತಿರ-ದೂರ ಕಾಣಿಸುವಂತೆ ಚಿತ್ರಸಲು ತೊಡಗಿದ್ದರು. ಇದೇ ಅವಧಿಯಲ್ಲಿ ಜಾನ್‌ವಾನ್ ಆಯಿಕ್‌ನು ಶೋಧಿಸಿದ್ದ ತೈಲವರ್ಣದ ಸಾಧ್ಯತೆಗಳು ಕಲಾವಿದರನ್ನು ಬೆರಗಾಗಿಸಿದ್ದವು. ನೀರಿನ ಬಣ್ಣದಂತೆ ಬೇಗನೆ ಈ ತೈಲವರ್ಣವು ಒಣಗುತ್ತಿಲ್ಲವಾದ್ದರಿಂದ ಮಿಶ್ರಣಕ್ಕೆ ವಿಫುಲ ಅವಕಾಶ ಕಲಾವಿದರಿಗೆ ಸಿಗುತ್ತಿತ್ತು. ಇದರಿಂದ ಹೊಸ ಹೊಸ ಸೃಷ್ಟಿಗಳು ಮೂಡಿಬರತೊಡಗಿದವು.
ಮೈಕೆಲ್ಯಾಂಜಿಲೋ ವರ್ಣಚಿತ್ರಕಾರ, ಶಿಲ್ಪಿ, ವಾಸ್ತುಶಿಲ್ಪಿ, ಕವಿ ಎಂದೆನಿಸಿಕೊಂಡಿದ್ದರೂ ಅವನ ಹೆಚ್ಚಿನ ಒಲವು ಇದ್ದದ್ದು ಶಿಲ್ಪಕಲೆಯಲ್ಲಿಯೇ. ಹಾಗಾಗಿ ಸಿಸ್ಟೇನ್ ಚಾಪೆಲ್‌ನ ಛಾವಣಿ ಮೇಲೆ ಚಿತ್ರಿಸಲು ಪೋಪ್ ಎರಡನೇ ಜೂಲಿಯಸ್ ಕೇಳಿದಾಗ ಎಷ್ಟು ನಯವಾಗಿ ನಿರಾಕರಣೆಯ ಮಾತನಾಡುತ್ತಾನೆಂದರೆ- ‘ನನಗೆ ಭಿತ್ತಿಚಿತ್ರ ವಿಧಾನದಲ್ಲಿ ಅಷ್ಟೊಂದು ಅನುಭವವಿಲ್ಲ. ಓರ್ವ ಅನುಭವಸ್ಥ ಕಲಾವಿದನಿಗೆ ಈ ಕಾರ್ಯ ವಹಿಸುವದೊಳಿತು’ ಎನ್ನುತ್ತಾನೆ ಮಹಾನುಭಾವ. ಆದರೆ ಪೋಪ್ ಒತ್ತಾಯದ ಮೇರೆಗೆ ಚಿತ್ರಿಸಲು ಮುಂದಾಗುತ್ತಾನೆ.
ಸ್ವತಃ ಕಲಾವಿದ ಮೈಕೆಲ್ಯಾಂಜಿಲೋ ಗುರುತಿಸಿಕೊಂಡಿದ್ದ ಮಿತಿಯನ್ನು ನಾವು ಕೂಡಾ ಅವನ ಶಿಲ್ಪ ಮತ್ತು ವರ್ಣಚಿತ್ರಗಳನ್ನು ಹೋಲಿಸಿ ನೋಡಿದಾಗ ತಿಳಿದುಬರುತ್ತದೆ. ಈ ಭಿತ್ತಿಚಿತ್ರವನ್ನು ರಚಿಸುವ ೧೦-೧೨ ವರ್ಷ ಮೊದಲೇ ರಚಿಸಿದ್ದ ‘ಪಿಯೆಟಾ’ ಮತ್ತು ‘ಡೇವಿಡ್’ ಪ್ರಸಿದ್ಧ ಶಿಲ್ಪಕೃತಿಗಳನ್ನು ಮೈಕೆಲ್ಯಾಂಜಿಲೋ ನಿರ್ಮಿಸಿದ್ದನು. ಶಿಲ್ಪ ನಿರ್ಮಾಣದಲ್ಲಿ ಅವನು ತೋರಿದ ನಿಖರತೆ, ಒಡಮೂಡಿರುವ ಪಕ್ವತೆ ಭಿತ್ತಿಚಿತ್ರಗಳಲ್ಲಿ ಸಾಧಿಸಲಾಗಿಲ್ಲ.

ಈ ಭಿತ್ತಿಚಿತ್ರಗಳ ನಿರ್ಮಾಣದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇದೊಂದು ದೊಡ್ಡ ಮಿತಿಯೇನೂ ಅಲ್ಲ. ಏಕೆಂದರೆ 40 ಮೀಟರ್ ಎತ್ತರದ ಪ್ರಾರ್ಥನಾ ಮಂದಿರದ ಒಳಛಾವಣಿಯ ಮೇಲೆ ಚಿತ್ರ ರಚಿಸುವುದು ಸುಲಭವೇನೂ ಅಲ್ಲ. ಛಾವಣಿಯ ಎತ್ತರದವರೆಗೆ ಅಟ್ಟಣಿಗೆಯನ್ನು ಕಟ್ಟಿ ಅದರ ಮೇಲೆ ಅಂಗಾತ ಮಲಗಿಕೊಂಡು ಚಿತ್ರಿಸಬೇಕಾಗುತ್ತಿತ್ತು. ಸಿಸ್ಟೇನ್ ಚಾಪೆಲ್‌ನ ಒಳಮೈ ಛಾವಣಿ ಸುಮಾರು 10,000 ಚದರಡಿಯ ಜಾಗದಲ್ಲಿ ನಿರಂತರವಾಗಿ ನಾಲ್ಕು ವರ್ಷಗಳ ಕಾಲ ಹಗಲು-ರಾತ್ರಿಗಳು ಒಂದೆಂಬಂತೆ ಬಗೆದು ನಿರ್ಮಾಣದಲ್ಲಿ ತೊಡಗಿದ್ದನವನು. ರಾತ್ರಿಯಂತೂ ಒಂದು ಕೈಯಲ್ಲಿ ಬ್ರಶ್ ಇದ್ದರೆ ಇನ್ನೊಂದು ಕೈಯಲ್ಲಿ ಮೇಣದಬತ್ತಿಯನ್ನು ಹಿಡಿದಿರಬೇಕಾಗುತ್ತಿತ್ತು. ಇನ್ನೂ ಫ್ರೆಸ್ಕೊ ಚಿತ್ರ ನಿರ್ಮಾಣ ಎಷ್ಟು ಸವಾಲಿನದೆಂದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ್ನು ಛಾವಣಿಯ ಮೇಲ್ಮೈಗೆ ಮಲಗಿಕೊಂಡೆ ಲೇಪಿಸಿ ಅದು ಒಣಗುವ ಮುನ್ನವೇ ತ್ವರಿತವಾಗಿ ನೀರಿನಲ್ಲಿ ಕರಗಿಸಿದ ಬಣ್ಣದಿಂದ ಚಿತ್ರ ರಚನೆ ಮಾಡಬೇಕಿತ್ತು. ಪ್ಲಾಸ್ಟರ್ ಒಣಗಿಬಿಟ್ಟರೆ ಬಣ್ಣವನ್ನು ಹಿಡಿಯುತ್ತಿರಲಿಲ್ಲ.

ಪುರುಷಾಕಾರದ ಸೌಂದರ್ಯ ಲೋಲುಪತೆ: ಮೈಕೆಲ್ಯಾಂಜಿಲೋ ತನ್ನ ಚಿತ್ರ, ಶಿಲ್ಪಗಳಲ್ಲಿ ಪುರುಷಾಕೃತಿಗಳನ್ನು ಆಸ್ಥೆಯಿಂದ ಹೆಚ್ಚಿನ ಒತ್ತುಕೊಟ್ಟು ರಚಿಸಿದ್ದು ಕಂಡುಬರುತ್ತದೆ. ಪುರುಷನನ್ನು ಆಜಾನುಬಾಹುವಾಗಿ, ತೋಳು ತೊಡೆಗಳಲ್ಲಿ ಬಲಿಷ್ಠತೆಯನ್ನು ತುಂಬುವುದರ ಜೊತೆಗೆ ದೇಹದಲ್ಲಿ ಎದ್ದು ಕಾಣುವ ಮಾಂಸಖಂಡಗಳು ಉಬ್ಬಿನಿಂತ ಸ್ನಾಯುಗಳನ್ನು ಕಾಣಿಸುತ್ತಾ ಪುರುಷಾಕಾರಗಳನ್ನು ಬಲು ಆಕರ್ಷಕ ಅಂಗಸೌಸ್ಠವದಿಂದ ಚಿತ್ರಿಸಿದ್ದಾನೆ. ಇದಕ್ಕೆ ‘ಆಡಮ್’ (ವರ್ಣಚಿತ್ರ), ‘ಡೇವಿಡ್’, ‘ಏಂಜಲ್’ (ಶಿಲ್ಪಗಳು) ಮುಂತಾದ ಪಾತ್ರಗಳಲ್ಲೆಲ್ಲ ಪುರುಷಾಕಾರದ ಒಲವನ್ನು ಕಾಣಬಹುದು. ಈ ರೀತಿಯ ಚಿತ್ರಣ ಸೌಂದರ್ಯ ಮೀಮಾಂಸೆಯ ದೃಷ್ಟಿ ಮತ್ತು ಭಾವನಾತ್ಮಕ ದೃಷ್ಟಿಯಿಂದಲೂ ಅವನನ್ನು ಆಕರ್ಷಿಸಿದಂತೆ ಕಂಡುಬರುತ್ತದೆ. ಇದಕ್ಕೆ ಹಿನ್ನೆಲೆಯಾಗಿ ಕೆಲಸ ಮಾಡಿದ್ದು ಪುನರುಜ್ಜೀವನ ಕಾಲದ ಪುರುಷಕೇಂದ್ರಿತ ನೆಲೆಯ ಆದರ್ಶೀಕರಣವೂ ಆಗಿದೆ.

ಮೈಕೆಲ್ಯಾಂಜಿಲೋನಿಗೆ ಪುರುಷ ದೇಹಾಕಾರದ ಮೇಲಿನ ಮಮಕಾರ ಎಷ್ಟಿತ್ತೆಂದರೆ ಸ್ತ್ರೀಯ ದೇಹಗಳನ್ನು ಅವನು ಪುರುಷ ದೇಹದಂತೆ ಸುಪುಷ್ಟವಾಗಿ, ದಾರ್ಢ್ಯತೆಯಿಂದ ಚಿತ್ರಿಸಿದ್ದಾನೆ. `Creation of Eve’, `The Fall and Expulsion from Paradise’ ಇವೆ ಮೊದಲಾದ ಕೃತಿಗಳಲ್ಲಿ ಸ್ತ್ರೀಯ ಶರೀರಗಳನ್ನು ನೋಡಿದರೆ ಅಲ್ಲಿ ಹೆಣ್ಣು ದೇಹದ ಸಪೂರತೆ, ಕೋಮಲತೆ ಕಾಣಿಸುವುದೇ ಇಲ್ಲ. ಇವು ಎಷ್ಟರಮಟ್ಟಿಗೆ ಪುರುಷಾಕಾರಗಳನ್ನು ಹೋಲುತ್ತವೆಂದರೆ ಇವುಗಳ ಲಿಂಗಸೂಚಿ ಅಂಗಗಳನ್ನು ನೋಡುವತನಕ ಇವು ಸ್ತ್ರೀ ದೇಹಗಳು ಎಂದು ತಿಳಿಯುವುದೇ ಇಲ್ಲ.

ಮೈಕೆಲ್ಯಾಂಜಿಲೋನ ಈ ಪುರುಷಾಕಾರದ ಲೋಲುಪತೆಯು ಅವನೊಬ್ಬ ಸಲಿಂಗಕಾಮಿಯಾಗಿರಬಹುದೇ.. ಎಂದು ಅನುಮಾನಿಸುವಂತೆ ಮಾಡುತ್ತದೆ. ಅವನು ಕೆಲವು ವ್ಯಕ್ತಿಗಳೊಂದಿಗೆ ಇರಿಸಿಕೊಂಡಿದ್ದ ಸಂಬಂಧಗಳು, ಅವನ ಚಿತ್ರಗಳು, ಬರೆಹಗಳು ಈ ಅನುಮಾನಕ್ಕೆ ಪೂರಕವಾಗಿಯೇ ನಿಲ್ಲುತ್ತವೆ. ಟೊಮಾಸೊ ಡೀ ಕ್ಯಾವಲಿಯೇರಿ ಎಂಬುವನನ್ನು ಮೈಕೆಲ್ಯಾಂಜಿಲೋ 1532 ರಲ್ಲಿ ಭೇಟಿಯಾಗುತ್ತಾನೆ. ಕ್ಯಾವಲಿಯೇರಿಗೆ ತನ್ನ ಪ್ರೇಮದ ಕುರಿತಾದ ಒಂದು ಬರೆಹವನ್ನು ನೀಡುತ್ತಾನೆ.
I shware to return your love
never have i loved a man
more than i love you
never have i wished for
friendship more than i wish
yours


ಎಂಬುದು ಆ ಬರೆಹದ ವ್ಯಾಖ್ಯಾನ. ಈ ಕ್ಯಾವಲಿಗೆ 23ವರ್ಷ ವಯಸ್ಸು, ಮೈಕೆಲ್ಯಾಂಜಿಲೋನಿಗೆ ಆಗ 57 ವರ್ಷ. ಇವರಿಬ್ಬರ ನಡುವಣ ಅಭಿವ್ಯಕ್ತಿಗಳಿಂದ ಅವನಿದ್ದ ಕಾಲದಲ್ಲಿ ಸಲಿಂಗಕಾಮಿಯೆಂದೇ ಗುರುತಿಸಿದ್ದರು. ಆದರೆ ಆಧುನಿಕ ಕಾಲದ ವಿಮರ್ಶಕರು ಮೈಕೆಲ್ಯಾಂಜಿಲೋನದು ನಿಷ್ಕಾಮ ಪ್ರೇಮವಾಗಿತ್ತು, ಆ ಸಮಯದಲ್ಲಿ ಅವನಿಗೆ ಪುತ್ರವಾತ್ಸಲ್ಯದ ಅಗತ್ಯವಿತ್ತೆಂದು ಹೇಳುತ್ತಾರೆ.

ಶಿಲ್ಪ ಮತ್ತು ವರ್ಣಚಿತ್ರಗಳಲ್ಲಿ ಮೂಡಿಬಂದಿರುವ ಮೈಕೆಲ್ಯಾಂಜಿಲೋನ ಮನುಷ್ಯಾಕೃತಿಗಳು ನಮಗೆ ಇನ್ನೊಂದು ಬಗೆಯಿಂದಲೂ ಗಮನಾರ್ಹವಾಗುತ್ತವೆ. ಅದು ಅವುಗಳ ಪ್ರಮಾಣಬದ್ಧತೆಯ ಕಾರಣಕ್ಕೆ. ಮನುಷ್ಯ ಶರೀರಗಳ ತುಂಬಾ ಹತ್ತಿರದ, ಎಲ್ಲ ಅವಯವಗಳ ತುಲನಾತ್ಮಕ ಅಧ್ಯಯನ ಅವನಿಗೆ ಈ ತಜ್ಞತೆಯನ್ನೊದಗಿಸಿದೆ. ಚರ್ಚ್‌ನ ಆಸ್ಪತ್ರೆಯೊಂದರಲ್ಲಿ ಕಳೇಬರಗಳ ಶರೀರಛೇದನ ಮಾಡಿ ಅಭ್ಯಾಸ ಕೈಗೊಳ್ಳಲು ಅವಕಾಶ ದೊರೆತಿದ್ದರಿಂದ ಮೈಕೆಲ್ಯಾಂಜಿಲೋ ಶರೀರ ರಚನಾಶಾಸ್ತ್ರದಲ್ಲಿ ಉನ್ನತವಾದ ಪರಿಣತಿಯನ್ನು ಸಾಧಿಸಿಕೊಂಡಿದ್ದನು.

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...