ನಿತ್ಯ ಜೀವನದ‌ ಮಾರ್ಗದರ್ಶನಕ್ಕಾಗಿ ಓದಬೇಕಾದ ಕೃತಿ ‘ಇರುವುದೆಲ್ಲವ ಬಿಟ್ಟು’


'ಗೆಲುವಿಗಿಂತ ಸೋಲನ್ನೆ ಹೆಚ್ಚು ಪ್ರೀತಿಸುವ ರೈಗಳು ಸೋಲು ನಮ್ಮನ್ನು ನಮ್ರರನ್ನಾಗಿ ಮಾಡಿದರೆ ಗೆಲುವು ನಮ್ಮನ್ನು ಅಹಂಕಾರಿಯನ್ನಾಗಿ ಮಾಡುತ್ತದೆ ಎಂದು ನಂಬಿದವರು ರೈಗಳು' ಎನ್ನುತ್ತಾರೆ ಲೇಖಕ ಉದಯಕುಮಾರ ಹಬ್ಬು. ಅವರು ನಟ ಪ್ರಕಾಶ್ ರೈ ಅವರ ಇರುವುದೆಲ್ಲವ ಬಿಟ್ಟು ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಪ್ರಸಿದ್ಧ ಸಿನೆಮಾ ನಟ. 'ಜನಪ್ರಿಯ' ಖಳನಾಯಕನೆಂದೆ ಖ್ಯಾತಿಯನ್ನು ಪಡೆದ ಪ್ರಕಾಶ್ ರೈ ಅವರ ಈ ಅತ್ಯಂತ ಉಪಯುಕ್ತವಾದ ಪುಸ್ತಕವನ್ನು ವ್ಯಕ್ತಿತ್ವ ವಿಕಸನ ಬರಹಗಳ ಸಂಕಲನವೆ 'ಇರುವುದೆಲ್ಲವ ಬಿಟ್ಟು', ವ್ಯಾವಹಾರಿಕ ಜೀವನ ಮಾರ್ಗದ ಬೋಧನೆಯನ್ನು ಮಾಡುವ ತೋರುಗೈಯೆ, ಆದರ್ಶಗಳು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಇರುವ ತೊಡಕುಗಳನ್ನು ‌ನಿವಾರಿಸುವ ಸೂತ್ರಗಳಿರುವ ಸ್ಪೂರ್ತಿ ತುಂಬಿದ ಬರಹಗಳೆ, ರೈ ಅವರ ಆತ್ಮ ಚರಿತ್ರೆಯ ಬಹು ಮುಖ್ಯ ಭಾಗವೆ, ಹಾಲು ಕಾಸಿ ಕೆನೆಯಾದ ಅನುಭವದ ಗಟ್ಟಿತನವನ್ನು ಅಭಿವ್ಯಕ್ತಿಸುವ ಕವಿತೆಗಳೆ, ಇವೆಲ್ಲವುಗಳಿಂದ ಕೂಡಿದ ಅನನ್ಯ ಕೃತಿ ಎನ್ನಬಹುದಾಗಿದೆ. ರೈಗಳು ಮಗನಾಗಿ ಅಮ್ಮನಲ್ಲಿ ಇರುವ ಪ್ರೀತಿ, ಗಂಡನಾಗಿ ಹೆಂಡತಿಯಲ್ಲಿ ತೋರುವ ಪ್ರೀತಿ, ಅಪ್ಪನಾಗಿ ಮಗಳಲ್ಲಿ ತೋರುವ ಪ್ರೀತಿ ಮತ್ತು ವಾತ್ಸಲ್ಯ ಅನ್ಯಾದೃಶವಾದುದು. ಅಪ್ಪ ಹಿಂದು, ತಾಯಿ ಕ್ರಿಶ್ಚಿಯನ್ ಅವರ ಮಗನಾಗಿ ಮಗಳು ಕೇಳುವ ಪ್ರಶ್ನೆ ನಮ್ಮದು ಯಾವ ಮತ? ಎಂಬ ಪ್ರಶ್ನೆಗೆ ಉತ್ತರವನ್ನು ಅವಳೆ ಕಂಡುಕೊಳ್ಳಲಿ ಎಂಬ ಸ್ವಾತಂತ್ರ್ಯ ಅವಳಿಗೆ ಕೊಡುತ್ತಾರೆ. ದೇವರನ್ನು ನಂಬದ ಆದರೆ ಮನುಷ್ಯರೊಡನೆ ಕಳೆವ ಗಳಿಗೆಗಳು ಅನುಭವಗಳನ್ನು ಕೊಡುತ್ತವೆ. ಅನುಭವವೆ ದೇವರೆಂದವರು ರೈಗಳು. ಗೆಲುವಿಗಿಂತ ಸೋಲನ್ನೆ ಹೆಚ್ಚು ಪ್ರೀತಿಸುವ ರೈಗಳು ಸೋಲು ನಮ್ಮನ್ನು ವಿನಮ್ರರನ್ನಾಗಿ ಮಾಡಿದರೆ ಗೆಲುವು ನಮ್ಮನ್ನು ಅಹಂಕಾರಿಯನ್ನಾಗಿ ಮಾಡುತ್ತದೆ ಎಂದು ನಂಬಿದವರು ರೈಗಳು.

ಅಮ್ಮನು ಮಕ್ಕಳ ಮೇಲೆ ತೋರಿಸುವ ನಿಗೂಢ ಅಧ್ಯಾತ್ಮವನ್ನು ಇವರಿಗೆ ಮಹಾ ದೊಡ್ಡ ವಿಸ್ಮಯವೆನೆಸಿದೆ. ಸಂಸ್ಕೃತಿಯ ಹೆಸರಿನಲ್ಲಿ ಮಾಡುವ ಕೆಲವು ಅನಾಚಾರಗಳ ಕುರಿತಾಗಿ ವಿಷಾದ ವ್ಯಕ್ತಪಡಿಸುತ್ತ, ಅವರು ಕೊಡುವ ಹೋಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಲೈಂಗಿಕ ಚೇಷ್ಟೆಗಳು, ಗಣಪತಿ ಹಬ್ಬದ ಸಂದರ್ಭದಲ್ಲಿ ನಡೆಯುವ ಕೋಮುಗಲಭೆಗಳ ಕುರಿತಾಗಿ ವಿಷಾದವನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳು ಕಳೆದು ಹೋಗುತ್ತಿದ್ದರೆ ಇದಕ್ಕೆ ಕಾರಣ ಹೆತ್ತವರು ತಮ್ಮ ಮಕ್ಕಳೊಡನೆ ಕಳೆಯಲೇಬೇಕಾದ ಕ್ಷಣಗಳನ್ನು ತಪ್ಪಿಸಿಕೊಳ್ಳುವುದಾಗಿದೆ. ಹಣ ಮಾಡುವ ದುರಾಸೆಯಿಂದ ಮಕ್ಕಳೊಡನೆ ಯಾವ ಸಂಪರ್ಕವನ್ನು ಇಟ್ಟುಕೊಳ್ಳಲಾದವರ ಮಕ್ಕಳು ರೇವ್ ಪಾರ್ಟಿಗೆ ಹೋಗಿ ಹಾಳಾದರೆ, ಇಲ್ಲವೆ ಆತಂಕವಾದಿಗಳ ಬ್ರೇನ್ ವಾಶಿಗೆ ತುತ್ತಾಗಿ ಮಾನವ ಬಾಂಬುಗಳಾದರೆ ಅದಕ್ಕೆ ಹೆತ್ತವರಲ್ಲದೆ ಯಾರು ಹೊಣೆ? ಮಾತೃಭಾಷೆಯನ್ನು ಸರಿಯಾಗಿ ಕಲಿತರೆ ಇತರ ಭಾಷೆಗಳನ್ನು ಚೆನ್ನಾಗಿ ಕಲಿಯಬಹುದು. ಮಾತೃಭಾಷೆಯನ್ನು ನಿರ್ಲಕ್ಷಿಸಿ ಇತರ ಭಾಷೆಯ ಕಲಿಕೆಯ ಬಗ್ಗೆ ಪ್ರೋತ್ಸಾಹಿಸುವ ಹೆತ್ತವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ನಾಳಿನ ಸುಖಕ್ಕಾಗಿ ಇಂದು ಬದುಕುವ ಕ್ಷಣಗಳನ್ನು ಬಲಿ ಕೊಡುತ್ತಿದ್ದಾನೆ ಆಧುನಿಕ ಮನುಷ್ಯ. ಈ ದುರಂತಕ್ಕೆ ಮಾನವನ ತೀಟೆಯೆ ಕಾರಣ. ದುರಾಸೆಗೆ ಬಲಿಯಾಗಿ ಪ್ರಕೃತಿಯನ್ನು ದೋಚಿ ಮನುಷ್ಯ ಜಗತ್ತನ್ನು ಮನುಷ್ಯರು ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಕೆಡಿಸಿಬಿಟ್ಟಿದ್ದಾನೆ. ಹಳ್ಳಿಯಲ್ಲಿ ಬಾವಿ ಪಾಚಿಗೆಟ್ಟಿದೆ. ರೈತನ ಮಗ ಟ್ಯಾಕ್ಸಿ ಡ್ರೈವರ್ ಆಗಿಯೊ, ಮ್ಯಾಕಾನಿಕಲ್ ಆಗಿಯೊ ಬದುಕು ಸಾಗಿಸುತ್ತ, ರೈತನು ಕವಡೆಗೆ ಕಿಮ್ಮತ್ತಲ್ಲಿದ ವ್ಯಕ್ತಿಗಳಾಗಲು ಕಾರಣ ಇಂದಿನ ಕೃಷಿ ಕಮರ್ಷಿಯಲ್ ಮಾಫಿಯಾಗಳ ಕೈಯಲ್ಲಿ, ಮಧ್ಯವರ್ತಿಗಳ ಕೈಯಲ್ಲಿ ಸಿಕ್ಕಿ ಬಿದ್ದು ನರಳುತ್ತಿರುವುದೆ ಆಗಿದೆ. ಹೀಗೆ ಜೀವನದ ಸಮಸ್ಯೆಗಳ ಹಲವು ಮಗ್ಗುಲುಗಳನ್ನು ತನ್ನದೆ ಆದ ಆಕರ್ಷಕ ಶೈಲಿಯಲ್ಲಿ ಬರೆದ ಈ ಪುಸ್ತಕ ಒಂದೆ ತಿಂಗಳಲ್ಲಿ ಎರಡು ಆವೃತ್ತಿಗಳನ್ನು ಕಂಡ ಜನಪ್ರಿಯ ಪುಸ್ತಕವಾಗಿದೆ. ಈ ಪುಸ್ತಕವು ಪ್ರಜಾವಾಣಿಯಲ್ಲಿ ‌ರೈಗಳು ವಾರ ವಾರ ಬರೆಯುತ್ತಿದ್ದ ಅಂಕಣಗಳ ಸಂಕಲನವಾಗಿದೆ. ಈ ಪುಸ್ತಕದಲ್ಲಿ ರೈಗಳ ಬದುಕಿನ ಅನುಭವಗಳ ತುಣುಕುಗಳಿವೆ; ಒಳನೋಟಗಳಿವೆ; ಸಾಂತ್ವನ ಕೊಡುವ ಮಾತುಗಳಿವೆ; ಕಿವಿ ಹಿಂಡಿ ಹೇಳಿದ ಬೋಧನೆಗಳಿವೆ; ಲೌಕಿಕನ ಅಧ್ಯಾತ್ಮವಿದೆ; ಮನುಷ್ಯ ಮನಸ್ಸುಗಳ ಕ್ಷುದ್ರತೆಯ ಕುರಿತಾಗಿ ಬರೆದರೂ ಸಾವಿನ ಕುರಿತು ಯೋಚಿಸದೆ ಇರುವಾಗ ಆರೋಗ್ಯವಂತರಾಗಿ ನಗುನಗುತ, ಸುಖ ಸಂತೋಷ ನೆಮ್ಮದಿಯಲ್ಲಿ ಬದುಕಬೇಕು ಎಂಬ ಆಶಯ ಈ ಬರಹಗಳಲ್ಲಿದೆ.

ಈ ಪುಸ್ತಕದಲ್ಲಿ ಬಂದ ಕೆಲವು ವಾಕ್ಯಗಳು ಹೀಗಿವೆ:" ನಾವೆಲ್ಲ ನಾಳೆಗೋಸ್ಕರ ಬದುಕುತ್ತಿದ್ದೇವೆ. ಇದಕ್ಕಾಗಿ‌ ಈವೊತ್ತನ್ನು ಕೊಲ್ಲುತ್ತಿದ್ದೇವೆ. ಕೊಲ್ಲುವ ಪ್ರಕ್ರಿಯೆಯಲ್ಲಿ ತೊಡಗಿರುವುದರಿಂದ ನೆಮ್ಮದಿ ಇಲ್ಲದಂತಾಗಿ, ಅದನ್ನು ಹುಡುಕಲು‌ ಎಲ್ಲೆಂದರಲ್ಲಿ ಅಲೆಯುತ್ತಿದ್ದೇವೆ" ಪುಟ ಸಂಖ್ಯೆ 18, "ವ್ಯಕ್ತಿಯನ್ನು ಅವನು ಏರಿದ ಎತ್ತರದಿಂದಲ್ಲ ಅಳತೆ ಮಾಡಬೇಕಾಗಿರೋದು‌. ಅವನು ಎತ್ತರಕ್ಕೆ ಏರಿ, ಎಷ್ಟು ಜನರನ್ನು ಜೊತೆಗೆ ಕರೆದುಕೊಂಡು ಹೋದ, ಎಷ್ಟು ಜನರ ಮೇಲೆ ಪ್ರಭಾವಬೀರಿದ್ದಾನೆ, ಎಷ್ಟರ ಮಟ್ಟಿಗೆ ಪಡೆದದ್ದರಲ್ಲಿ ಸಮಾಜದ ಮೇಲೆ ಹೂಡಿದ್ದಾನೆ ಅನ್ನೋದರ ಮೇಲೆ ಲೆಕ್ಕ ಹಾಕಬೇಕು" ಪುಟ ಸಂಖ್ಯೆ 27,

"ಕೃಷಿ ಅನ್ನುವುದು ಬದುಕುವ ಕ್ರಮ. ಅದನ್ನು ಕಮರ್ಷಿಯಲ್ ಆಗಿ ಏಕೆ‌ ನೋಡ್ತೀರಾ? ಹೀಗೆ ನೋಡೋಕೆ ಶುರುವಾದ ಮೇಲೆ ಒತ್ತಡಗಳು ಜಾಸ್ತಿಯಾಗಿದ್ದು; ಮಾಫಿಯಾಗಳು‌ ಹುಟ್ಟಿದ್ದು." ಪುಟ ಸಂಖ್ಯೆ 31, "ಈವತ್ತು ರೈತನಿಗೆ ಕೊಡಬೇಕಾದ ಮರ್ಯಾದೆ ಕೊಡಲಿಲ್ಲ ಅಂದರೆ, ಅವನನ್ನು ಉಳಿಸಿಕೊಳ್ಳದೆ ಹೋದರೆ ಇಬ್ಬರೂ ಅಳೀತೀವಿ." ಪುಟ ಸಂಖ್ಯೆ33, "ಒಟ್ಟಾರೆ ನಾವು ತಿನ್ನೋ ಆಹಾರ ಎಲ್ಲಿಂದ ಬರುತ್ತದೆ, ಹೇಗೆ ಬೆಳೆಯುತ್ತದೆ ಅಂತ ತಿಳಿಯದೆ ಬದುಕೋದು ಅನ್ನೋದೆಲ್ಲಾ ನಮ್ಮ ಪಟ್ಟಣಗಳು ಹೇಳಿ ಕೊಟ್ಟ ಪಾಠ." ಪುಟ ಸಂಖ್ಯೆ 37,

"ಅದ್ಸರಿ, ಹಣ ಇಲ್ಲದೆ ಬದುಕೋಕೆ ಸಾಧ್ಯವೆ?

ನಿಜ ಹೇಳಬೇಕಾದರೆ ಆಗೋಲ್ಲ. ಆದರೆ ಹಣ ಮಾತ್ರ ಇಟ್ಟುಕೊಂಡು ಬದುಕೋಕೂ ಆಗೋಲ್ಲ. ಅವಶ್ಯಕತೆಗೆ ಹಣ ಬೇಕು; ಆಸೆಗಳಿಗಲ್ಲ. ಹಸಿವು ಮತ್ತು ನೋವು‌ ಎರಡನ್ನೂ ಗೆದ್ದವನು ಬದುಕನ್ನೇ ಜಯಿಸಿದವನು ಅಂತ ಅರ್ಥ." ಪುಟ ಸಂಖ್ಯೆ 43, "ನನ್ನ ಮಕ್ಕಳಿಗೆ ಹೆತ್ತವರನ್ನು ಹೇಗೆ ನೋಡ್ಕೊಳ್ಬೇಕು ಅಂತ ಪಾಠ ಮಾಡೋಲ್ಲ. ಬದುಕಿ ತೋರಿಸ್ತೀನಿ." ಪುಟ ಸಂಖ್ಯೆ 58, "ಕ್ಷಮೆ ಕೇಳುವವನು ಮನುಷ್ಯ, ಕ್ಷಮಿಸುವವನು ದೊಡ್ಡ ಮನುಷ್ಯ‌" ಪುಟ ಸಂಖ್ಯೆ 70, "ಬದುಕು ಎನ್ನುವುದು ನಮಗೆ ಸಿಕ್ಕಿದ ವರ.ಅದನ್ನು ಸರಿಯಾಗಿ ಬಳಸಲು ತಿಳಿದಿರಬೇಕು. ಇಲ್ಲವಾದಲ್ಲಿ ಭಸ್ಮಾಸುರರಾಗಿಬಿಡುತ್ತೇವೆ." ಪುಟ ಸಂಖ್ಯೆ 98, "ಎಷ್ಟೇ ಚತುರ ಓಟಗಾರನಾದರೂ ಬೀಳುವುದನ್ನು ತಪ್ಪಿಸಲಾಗದು. ಸೋಲೋ, ಗೆಲುವೋ, ನಮ್ಮ ಜೀವನದಲ್ಲಿ ನಿರಂತರ ಹುಡುಕಾಟ ಇದ್ದಾಗಲೇ ಬದುಕು ಯಾವಾಗಲೂ ಹೊಸತನದಿಂದ ಕೂಡಿರುತ್ತದೆ. ಈ ಕಾರಣದಿಂದಲೇ ನಿಂತ ಕೊಳಕ್ಕಿಂತ ಹರಿಯುವ ನದಿಗೆ ಹೆಚ್ಚು ಕವಿತೆಗಳೂ, ಕತೆಗಳೂ ಇವೆ." ಪುಟ ಸಂಖ್ಯೆ 113,

"ದೇವರನ್ನು ತೀವ್ರವಾಗಿ ನಂಬುವವರೇ ದೇವರ ಸ್ಥಾನಗಳನ್ನು ಕೆಡವುವ ಈ ಲೋಕದಲ್ಲಿ ದೇವರ ಮಹಿಮೆಗಳನ್ನು ನನ್ನ ಮಕ್ಕಳಿಗೆ ಬೋಧಿಸುವುದಕ್ಕಿಂತ, ಸಹ ಮನುಷ್ಯರನ್ನು ಪ್ರೀತಿಸಲು, ಗೌರವಿಸಲು ಕಲಿಸಿಕೊಟ್ಟರಷ್ಟೇ ಸಾಕು ಎನ್ನುವುದು ನನ್ನ ಪಕ್ಷ. ನಂಬಿಕೆ ಇಲ್ಲದಿರುವ ಒಂದು ವಿಷಯಕ್ಕೆ ವೇಷ ಹಾಕುವುದಕ್ಕಿಂತ ನಿಜವಾಗಿ, ನೈಜವಾಗಿ ....ಬದುಕುವುದನ್ನೇ ದೇವರು ಇಷ್ಟಪಡುತ್ತಾನೆ.

ಒಂದು ವೇಳೆ ಅವನಿದ್ದರೆ?

ಏನಂತೀರಾ? " ಪುಟ ಸಂಖ್ಯೆ 129, "ಹೆಣ್ಣಿನ ಕ್ಷಮಿಸುವ ಉದಾರ ಗುಣದಿಂದಲೇ ನಾವು ಬಹಳಷ್ಟು ಗಂಡಸರು ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರೋದು. ಎಲ್ಲಾ ದ್ರೋಹಗಳನ್ನು ಕ್ಷಮಿಸು,ಮರೆತು, ಸಹಜ ಪ್ರೀತಿಯಿಂದ ನಗಬಲ್ಲರು ಹೆಣ್ಣುಮಕ್ಕಳು." ಪುಟ ಸಂಖ್ಯೆ 140,

"ನಾವು ಎಷ್ಟು ಜನರಿಗೆ ಬೇಕಾಗುತ್ತೇವೆ,ಎಷ್ಟು ಜನ ನಮಗೆ ಬೇಕಾಗುತ್ತಾರೆ? ಈ ಒಗಟಿಗೆ ಅಷ್ಟು ಬೇಗ ಉತ್ತರ ಸಿಗುವುದಿಲ್ಲ. ಅಲ್ಲವೆ?" ಪುಟ ಸಂಖ್ಯೆ 152

ಈ ಪುಸ್ತಕವನ್ನು ಓದಿರಿ ನಿತ್ಯ ಜೀವನದ‌ ಮಾರ್ಗದರ್ಶನಕ್ಕಾಗಿ.

-ಉದಯಕುಮಾರ ಹಬ್ಬು

 

MORE FEATURES

ಒಂದು ಕ್ಲಾಸಿಕ್ ಕಾದಂಬರಿಯನ್ನು ಓದಿದ ಸಾರ್ಥಕತೆ ನೀಡುವ ಕೃತಿ ‘ಗಂಗಾಪಾಣಿ’

02-05-2024 ಬೆಂಗಳೂರು

"ಗಂಗಾಪಾಣಿ" ಒಂದು ವಿಶಿಷ್ಠವಾದ ಕಾದಂಬರಿ. ಈ ಕಾದಂಬರಿ ತಳಸ್ಥರದ ಸಮುದಾಯಗಳ, ಕೃಷಿ ಸಂಸ್ಕೃತಿಯ ತಲಸ್ಪರ್ಶಿ ಬ...

ಇಂದಿನ ವಿಜ್ಞಾನಿಗಳ ಸಾಧನೆ ಹಿಂದಿನ ತಲೆಮಾರಿನ ಅದ್ಭುತ ಪ್ರತಿಭೆಗಳ ಮೇಲೆ ಅವಲಂಬಿತವಾಗಿದೆ.

02-05-2024 ಬೆಂಗಳೂರು

‘ಆಧುನಿಕ ವಿಜ್ಞಾನವು ಭಾರತವನ್ನು ಪ್ರವೇಶಿಸಲು ಎರಡು ಶತಮಾನಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದೆ. ದಾಖಲಾದ ಹಲ...

ವೆಬ್‌ ಸಿರೀಸ್ ಕಥೆಯೊಂದನ್ನು ಕಾದಂಬರಿಯ ಮುಖಾಂತರ ನಿಮ್ಮ ಮುಂದಿಟ್ಟಿದ್ದೇನೆ: ಭಗೀರಥ

01-05-2024 ಬೆಂಗಳೂರು

‘ಕಲೆ ಎಂಬುದನ್ನು ವಿಸ್ತರಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಅವಳಿ ಸಹೋದರರಾದ ಸಾಹಿತ್ಯ ಕ್ಷೇತ್ರ ಮತ್ತು ಸಿನಿಮಾ ಜ...