ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ

Date: 09-03-2022

Location: ಬೆಂಗಳೂರು


'ನಸುಕಿನ ಕಾವಳ ಸಡಿಲುಗೊಂಡು ಸಣ್ಣ ಬೆಳಕಿನ ಚೂರುಗಳು ವಿಲಿನಗೊಳ್ಳುವಾಗ, ಇಡೀ ಕಾಡ ಮೊಗ್ಗುಗಳ ಗರ್ಭದೊಳಗೆ ಒಂದು ತುರ್ತಿಗೆ ಕಾದ ಕಾತುರದ ಸೆಳೆತ ಇದೆ' ಎನ್ನುತ್ತಾರೆ ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ ಪ್ರಕೃತಿಯ ಅಚ್ಚರಿಗಳ ಜೊತೆ ಕೌತುಕದ ಹಾದಿಗಳ ಕುರಿತು ಬರೆದಿದ್ದಾರೆ.

ಮಲೆಯ ಮಾರುತದ ರಭಸಕ್ಕೆ ಬೆನ್ನುಕೊಟ್ಟು, ಕಾಲ್ಕಿತ್ತಿ ಓಡುವ ಮಾನ್ಸೂನ್ ಮೋಡಗಳು, ಪಶ್ಚಿಮ ಘಟ್ಟದ ತಪ್ಪಲಿನ ಸೆಳೆತಕ್ಕೆ ಎಡವಿಬಿದ್ದು, ಬಿಸಿಗಾಳಿಯನು ಒಡಲೊಳಗೆ ಬಸಿದುಕೊಳ್ಳುತ್ತಾ, ಮೈಸಡಲಿಸಿ ಸುರಿಸುವಾಗ ಹೆಪ್ಪುಗಟ್ಟಿದ ಕಪ್ಪು ಮೋಡ, ಹಸಿರ ಸಂಪತ್ತಿಗೆ ಚೊಚ್ಚಲ ಜಳಕ ಮಾಡಿಸಲು ಶುರುವಿಡುತ್ತದೆ! ಆಹಾ, ಅದೆಷ್ಟು ಹಸಿ ಹನಿಗಳ ಮೊನಚು ಮೊಳೆಯ ಸಿಟ್ಟು ಒಟ್ಟಿಗೆ ನೆತ್ತಿಗೇರಿ ಪಶ್ಚಿಮ ಘಟ್ಟದ ತಪ್ಪಲಿನ ತಲೆಗೆ ಬಾರಿಸುತ್ತಿದೆ. ಎಷ್ಟು ಚೆಂದದ ಹಸಿ ಸಂಕಟ! ಬಿದ್ದ ಹನಿಗಳ ಬಾಚಿ ತಬ್ಬುವ ಕಲ್ಲರಮನೆ ಘಾಟ್ ನ ಕಾಡುಗಳು ಅಮಲೇರಿಸುವ ಘಮಲೊಂದು ಸಣ್ಣಗೆ ಗಾಳಿಯೊಟ್ಟಿಗೆ ಬೆರೆಸಿ ಕೊಡುತ್ತದೆ. ತಣ್ಣಗೆ ಮೈಕೊಡವಿ ಮಳೆಯ ಹಸಿಯನೆಲ್ಲಾ ಇಂಗಿಸಿಕೊಳ್ಳುವ ಹಸಿಬಿಸಿ ನೆಲ ಬಸಿದು ಕೊಡುವ ಕಂಪು ಎಂಥವರನ್ನೂ ಸಹ ಒಂದರೆಕ್ಷಣ ಮೈಮರೆತು ಕಣ್ಮುಚ್ಚಿ ಅನುಭವಿಸಲು ತೆಕ್ಕೆಗೆಳೆದು ಕೊಡುತ್ತದೆ!

ಸುಖಾಸುಮ್ಮನೆ, ಬರಿಗಾಲ ಹೆಜ್ಜೆಗಳನು ಮಾನ್ಸೂನ್ ಮಳೆಗಾಲದ ಕೆಸರಿಗೆ ಅಂಟಿಸಿ ಕಿತ್ತಿಡುವಾಗ, ನಖಶಿಖಾಂತ ನಡುಗುವಷ್ಟು ಹಸಿ ತೇವದ ಸುಖ ಈ ಮೈ ಹೊಕ್ಕು ಜೀವವೀಣೆಯ ಪ್ರತಿ ತಂತಿಯನು ತಟ್ಟಿ ಬಾರಿಸುತ್ತದೆ! ಈ ಮೈ ಮಳೆಗೆ ಚಾಚುತ್ತಲೆ, ಬೆಚ್ಚಗಿನ ಗೂಡೊಂದು ಬಯಸುತ್ತಾ ಏದುಸಿರ ಬಿಸಿ ಗಾಳಿ ಹೊರ ಚೆಲ್ಲಿ ಬರಿಗಾಲ ಹೆಜ್ಜೆ ಬರೆಯುತ್ತದೆ! ಶರಂಪರ ಸುರಿಯುವ ಮಳೆಯ ಹೊಡೆತಕ್ಕೆ ದಖ್ಖನಿನ ಅನಾವೃಷ್ಟಿಯು ತೊಳೆದು ಪಶ್ಚಿಮ ಘಟ್ಟದ ಜೀವನದಿಗಳು ತುಂಬಿ ಮೈದುಂಬಿಕೊಂಡು ಹರಿಯುತ್ತವೆ!

ಕಾಳಿ ತನ್ನ ರಭಸವನ್ನು ಹೆಚ್ಚಿದಂತೆಲ್ಲಾ ದಾಂಡೇಲಿ ಕಾಡುಗಳ ಹಸಿರು ಇಮ್ಮಡಿಗೊಳ್ಳುತ್ತದೆ. ಕಾಳಿ, ಕಲ್ಲು ಬಂಡೆಗಳ ಮಧ್ಯೆ ತೆವಳುವುದಕ್ಕಿಂತ ಭೋರ್ಗರೆದು ಸಾಗುವ ರಭಸಕ್ಕೆ ರಕ್ಕಸ ಹೊಡೆತದ ಸುಖ ಪ್ರತಿ ಕರಿಕಲ್ಲಿಗೆ ತಾಕಿ ಬಿಳಿನೊರೆ ಸೃಷ್ಟಿಗೊಳ್ಳುತ್ತದೆ. ಸೂರಬ್ಬಿ ಹಳ್ಳ ಕಲ್ಲರಮನೆ ಘಾಟ್ ನ ಕಾಳಿ ಕಣಿವೆಗಳ ಸಣ್ಣ ಪುಟ್ಟ ದ್ವೀಪಗಳನ್ನು ಸವರಿಕೊಂಡು, ಕಾಡಿನ ತೇವಾಂಶದಿಂದ ಬಸಿದು ಬಂದ ನೀರಿನ ಝರಿಗಳನ್ನು ಒಗ್ಗೂಡಿಸಿಕೊಂಡು ಧುಮ್ಮಿಕ್ಕುವ ಸುಖಕ್ಕೆ ಜಲಪಾತಗಳು ಸೃಷ್ಟಿಗೊಳ್ಳುತ್ತವೆ! ಪಶ್ಚಿಮ ಘಟ್ಟದ ಹೆಬ್ಬಾಗಿಲಿಗೆ ತಲೆಮಾರುಗಳಿಂದ ಅಂಟಿಕೊಂಡು ಜೋತು ಬಿದ್ದ ಜನಜೀವನ ಕಾಲಕ್ರಮೇಣ ಹಲವಾರು ಯೋಜನೆಗಳಿಗೆ ಒಗ್ಗಿಕೊಂಡು ಬದುಕಬೇಕಾದ ಅನಿವಾರ್ಯತೆಗೆ ಸಿಕ್ಕು ನಲುಗಿದ್ದೂ ಉಂಟು. ಒಂದು ಜಲಾಶಯದ ಯೋಜನೆ ಅಲ್ಲಿನ ಜನವಸತಿಯನ್ನ ಅವರ ಮೂಲ ನೆಲೆಗಳನ್ನ ಅವರ ಜೀವನ ಸೆಲೆಯ ಬೇರನ್ನು ಒಂದು ಇಡೀ ಪೀಳಿಗೆಗೆ ತಾಕುವಂತೆ ಅಲುಗಾಡಿಸಿದ್ದು ಸಹ ಸಹಜ ಸಂಗತಿಯಲ್ಲ! ನಿಲ್ಲದ ಬದುಕು ಮತ್ತೆ ಮತ್ತೆ ಅಲೆಮಾರಿತನಕೆ ಜೋತು ಬೀಳುವಂತೆ ಒತ್ತಾಯಿಸಿಬಿಡುವುದು ಸಹ ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿಯೆ. ಮತ್ತೆ ಮಲೆಯ ಮೂಲೆಯ ಮತ್ತೊಂದು ತಿರುವಿನ ಹಿನ್ನೀರೊ ಮುನ್ನೀರೊ ಸಣ್ಣ ಜಲದ ಜಾಲ ಸಿಕ್ಕರೆ ಸಾಕು ಮತ್ತೊಂದು ಠಿಕಾಣಿ ಹೂಡಿ ಬದುಕಿನ ಬುತ್ತಿ ಬಿಚ್ಚಿ ಸವಿಯುವುದೆ ಸುಖಸಂಕಟ!

ನಸುಕಿನ ಕಾವಳ ಸಡಿಲುಗೊಂಡು ಸಣ್ಣ ಬೆಳಕಿನ ಚೂರುಗಳು ವಿಲಿನಗೊಳ್ಳುವಾಗ, ಇಡೀ ಕಾಡ ಮೊಗ್ಗುಗಳ ಗರ್ಭದೊಳಗೆ ಒಂದು ತುರ್ತಿಗೆ ಕಾದ ಕಾತುರದ ಸೆಳೆತ ಇದೆ. ಮಾಘ ಮಾಸಕ್ಕೆ ಉದುರಿ ಬಿದ್ದ ತರೆಗೆಲೆಗಳ ರಾಶಿಗೆ ಅಂಗಾಲ ಅಂಟಿಸಿ ನಡೆಯುವಾಗ, ಮೈಮುರಿದ ಎಲೆಗಳ ಸದ್ದು, ಮೌನವನ್ನೆಲ್ಲಾ ಅತಿಕ್ರಮಿಸಿ ಗರ್ಜಿಸುತ್ತವೆ. ಕಾಡು ಹಕ್ಕಿಯ ಕೊರಳೊಳಗಿಂದ ಹೊರಡಿದ ಇಂಚರ ಇಡೀ ಕಾನನವೆ ಪ್ರತಿಧ್ವನಿಸುವಂತೆ ತರಂಗಳ ಬಾಚಿ ತಬ್ಬುತ್ತದೆ. ಮೊಗ್ಗರಳಿ ಹೂ ಹದಗೊಳ್ಳುವ ಕ್ರಿಯೆಗೆ ಜೇನು ಝೇಂಕಾರದ ಭ್ರಮರ ನಾದ ನಾರಯಣ ನಾಬಿ ಕಮಲದುತ್ಪತ್ತಿ ಬ್ರಹ್ಮಲೋಕವೆ ಆ-ವರಿಸಿದಂತಿದೆ! ಬೆಳಕೂ ಅಲ್ಲದ ಬೆಳಗೂ ಅಲ್ಲದ ಅತಿ ತಮಿಸ್ರವೂ ಎನ್ನಲಾಗದ ಸೂಕ್ಷ್ಮಾತಿಸೂಕ್ಷ್ಮ ಸುಂದರ ಗಳಿಗೆಯೊಂದು ಕತ್ತಲೆ ತನ್ನ ಹೊದಿಕೆ ಮಡಚಿಡುವ ಮುನ್ನ ಬೆಳಕನ್ನು ಬರಮಾಡಿಕೊಳ್ಳಲು ಸುಸಜ್ಜಿತಗೊಳ್ಳುವ ಪರಿಗೆ ಈ ಜಗದ ಬೆಳಗೇ ಬೆರಗುಗೊಳ್ಳುತ್ತದೆ! ಬಸವನ ಹುಳು ತನ್ನ ಶಂಕು ಮೈ ತೆವಳಿಕೊಂಡು ಸಾಗುವ ರಭಸಕ್ಕೆ, ಇಡೀ ಯುಗದೊಳಗೆ ಶೇಕರಗೊಂಡ ಮೌನ ಸಾಕ್ಷಿ ಬರೆಯುತ್ತದೆ. ಪ್ರತಿ ನಿತ್ಯವೂ ನೂತನವಾದ ವಿನೂತನವಾದ ನವನವೀನವಾದ ಅಚ್ಚರಿಗಳನು ಈ ಪ್ರಕೃತಿ ನಮಗೆ ಎದುರುಗೊಳಿಸುತ್ತದೆ. ಯಾವುದನ್ನು ಅಲ್ಲಗಳೆಯದೆ ಹಾಳುಗೆಡವದೆ ಸುಮ್ಮನೆ ಅನಂತ ಸುಖವನ್ನು. ಕಣ್ಮುಚ್ಚಿ ಅನುಭವಿಸಿ ಸಾಗಬೇಕು.

ಮೌನೇಶ್ ಕನಸುಗಾರ ಅವರ ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರಗಳು:



ಈ ಅಂಕಣದ ಹಿಂದಿನ ಬರೆಹಗಳು:
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...