ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 


"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದು ಮಹತ್ವದ ವಿಚಾರವನ್ನು ಹೇಳುತ್ತವೆ. ಎಷ್ಟು ಬೇಕೋ ಅಷ್ಟನ್ನೇ ಹೇಳಿದ್ದಾರೆ ಮತ್ತು ಹೇಳಿರುವುದೆಲ್ಲಾ ಬೇಕಾದುದೇ ಎನ್ನುವಂತಿದೆ," ಎನ್ನುತ್ತಾರೆ ಪೂರ್ಣಿಮಾ ಮಾಳಗಿಮನಿ. ಅವರು ಹರೀಶ್ ಕೇರ ಅವರ ‘ಗಿಣಿ ಬಾಗಿಲು’ ಕೃತಿ ಕುರಿತು ಬರೆದ ವಿಮರ್ಶೆ.

ಅಷ್ಟು ಸೊಗಸಾಗಿ ಸರಳವಾದ ವಿಚಾರವೊಂದನ್ನು ಪ್ರಸ್ತುತ ಪಡಿಸುತ್ತಾರೆ ಹರೀಶ್. ಪುಸ್ತಕ ಪರಿಚಯ ಮಾಡಿಸಲು ಪ್ರಕಾಶಕರು ಮತ್ತು ಲೇಖಕರು ಹರೀಶ್ ಅವರನ್ನೇ ಏಕೆ ಆರಿಸಿಕೊಳ್ಳುತ್ತಾರೆ ಎಂದೂ ಈಗ ಅರ್ಥವಾಯಿತು.

ಈ ಕೃತಿಯಲ್ಲಿ ನನಗೆ ಬಹಳ ಇಷ್ಟವಾದ ಕೆಲವು ಸಾಲುಗಳು ಇಲ್ಲಿವೆ;

*ಎಲ್ಲರಿಗೂ ‘ಕನ್ನಡಿ ನೋಡುತ್ತಿರುವುದಕ್ಕಿಂತಲೂ ಕಿಟಕಿಯಲ್ಲಿ ನೋಡುವುದು ಒಳ್ಳೆಯದು. ಕನ್ನಡಿಯಲ್ಲಿ ನೀವು ನಿಮ್ಮನ್ನು ಮತ್ತು ನಿಮ್ಮ ಹಿಂದಿರುವುದನ್ನು ಮಾತ್ರ ನೋಡುತ್ತಿರುತ್ತೀರಿ’
*ಪ್ರತಿಯೊಬ್ಬರ ಕಿಟಕಿಯೂ ಬೇರೆ ಬೇರೆ. ಅವರವರು ಕಾಣುವುದೇ ಬೇರೆ. ಕಲೆ, ಸಾಹಿತ್ಯ, ಸಂಗೀತ, ಪುಸ್ತಕಗಳು ಎಲ್ಲವೂ ಅಂಥದೊಂದು ಗಿಣಿಬಾಗಿಲು.
*ಎಷ್ಟು ಕಾಣುವುದೋ ಅಷ್ಟೇ ಪ್ರಾಪ್ತಿ.
*ಅಲ್ಲಿ ಯಾರೋ ಸುಳಿದಾಡಿದಂತಾದರೆ ಕಿಂಡಿಯೀಚೆ ಕುಳಿತವರ ಕಣ್ಣು ಹೊಳಪೇರುತ್ತದೆ.
*‘ಬೆಚ್ಚನೆಯ ನೆನಪುಗಳು ಇಲ್ಲದವರಿಗೆ ಚಳಿಗಾಲ ಮತ್ತಷ್ಟು ಶೀತಲವಾಗಿರುತ್ತದೆ’.
ಓದುಗರನ್ನು ಚಿಂತನೆಗೊಡ್ಡುವ ಹಲವು ವಿಚಾರಗಳೂ ಇಲ್ಲಿವೆ.

ಶಿಪ್ ಆಫ್ ಥಿಸಿಯಸ್, ಧ್ಯಾನೋದಯದ ಆ ಒಂದು ಕ್ಷಣ, ನಿಷ್ಫಲತೆಯ ಅರಿವಿನ ಕ್ಷಣ, ನನಗಾಗಿ ನಾನು ಬದುಕುವ ಕ್ಷಣ, ಅರ್ಥಪೂರ್ಣ ಮತ್ತು ಅರ್ಥಹೀನತೆಯ ಕ್ಷಣ, ಒಳಗಿನ ನಾವು ಹೊರಗಿನ ನಾವು ಏಕೀಭವಿಸುವ ಸಂಗಮ, ಧ್ಯಾನದ ಕ್ಷಣ- ಈ ಮಿಂಚಿ ಹೋಗುವ ಕ್ಷಣಗಳ ಮಹತ್ವವನ್ನು ಅದೆಷ್ಟು ಚೆನ್ನಾಗಿ ಕಲೆ ಹಾಕಿದ್ದಾರೆ.

ಬಂಕೆಯಿ ಯೋತಾಕು ಎಂಬ ಜಪಾನಿನ ಜೆನ್ ಗುರು ಹೇಳುವ ‘ನೀನು ಇಲ್ಲೂ ಇಲ್ಲ, ಅಲ್ಲೂ ಇಲ್ಲ’ Vs ‘ನೀನು ಇಲ್ಲೂ ಇರುವೆ, ಅಲ್ಲೂ ಇರುವೆ’ ವಿಸ್ಮಯ ಅನಿಸಿತು.

‘ಕತೆ ಕೇಳುತ್ತ ಕೇಳುತ್ತ ಮಕ್ಕಳು ನಿದ್ದೆಯ ಮಡಿಲು ಸೇರುವಾಗ ಅಜ್ಜಿ ತುಟಿಗೆ ಬಂದ ಇನ್ನೊಂದಷ್ಟು ಕತೆಗಳನ್ನು ನಾಳೆಗೆ ಎತ್ತಿಟ್ಟುಕೊಳ್ಳುತ್ತಾಳೆ’ -ಅದೆಷ್ಟು ಅರ್ಥಗರ್ಭಿತವಾದ ಸಾಲು! ಆಷಾಡ ಎನ್ನುವ ಒಂದು ಬಹು ಬೋರಿಂಗ್ ಪದಕ್ಕೆ ಕೂಡ ಒಂದು ಸೊಗಸಾದ ಪರಿಭಾಷೆ ಕೊಟ್ಟಿದ್ದಾರೆ. ‘ಭಗ್ನ ಲಾಲಸೆಗಳೂ ದಿವ್ಯ ಕನಸುಗಳೂ ಸುಷುಪ್ತಿಯ ಕಾಂಕ್ಷೆಗಳೂ ಮೇಲಾಟವಾಡುವ ಘಳಿಗೆ’ ಗನ್ ಇದ್ದರೆ ಗುಂಡು ಕಾರಬೇಕು - ಎನ್ನುವ ಅಧ್ಯಾಯ ನನಗೆ ಬಹಳ ಇಷ್ಟವಾಯಿತು. ಒಬ್ಬ ಅದ್ಭುತ ಕಥೆಗಾರರೂ ಆದ ಹರೀಶ್ ಅವರಿಗೆ ತಮ್ಮ ಕತೆಗಳಲ್ಲಿ ಸಿದ್ಧಾಂತವೊಂದನ್ನು ಹುಡುಕುವವರ ಕಂಡರೆ ಭಯವಂತೆ. ಆಂಟನ್ ಚೆಕಾವ್ ನ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸುತ್ತಾ ‘ಸಮಸ್ಯೆಯ ಪರಿಹಾರ’ ಮತ್ತು ‘ಸಮಸ್ಯೆಯ ಸಮರ್ಪಕವಾದ ಮಂಡನೆ’ ಎಂಬ ಎರಡು ವಿಚಾರಗಳಲ್ಲಿ ಎರಡನೆಯದೇ ಕಲೆಗಾರನಿಗೆ ಮುಖ್ಯ ಎಂದು ಹೇಳುತ್ತಾರೆ. ಇದು ಹೊಸದಾಗಿ ಕತೆ ಬರೆಯಲು ಶುರು ಮಾಡಿರುವ ನನ್ನಂಥವರಿಗೆ ಬಹಳ ಮುಖ್ಯವಾದ ಪಾಠ!

ಕತೆಯಂತೆ ಸುಮ್ಮನೆ ಓದಿ ಕಪಾಟಿನಲ್ಲಿಟ್ಟು ಮರೆಯಬಹುದಾದ ಪುಸ್ತಕ ಇದಲ್ಲ. ಸಾಧ್ಯವಾದಾಗಲೆಲ್ಲಾ ಒಂದೊಂದೇ ಅಧ್ಯಾಯವನ್ನು ಓದಿ ಧ್ಯಾನಿಸುವುದೇ ಇದನ್ನು ದಕ್ಕಿಸಿಕೊಳ್ಳುವ ದಾರಿ ಎಂದು ನನಗಾದರೂ ಅನಿಸುತ್ತದೆ.

ಹರೀಶ್ ಅವರಿಂದ ಬಹಳಷ್ಟು ಲೇಖನಗಳು, ಕತೆಗಳು ಬರಲಿ ಎಂದು ಆಶಿಸುವೆ.

- ಪೂರ್ಣಿಮಾ ಮಾಳಗಿಮನಿ

MORE FEATURES

ಗಜಲ್ ಕನ್ನಡ ಸಾಹಿತ್ಯದಲ್ಲಿ ಮಹತ್ತರವಾದ ಕಾವ್ಯ ಶಕ್ತಿಯಾಗಿ ಬೆಳೆಯುತ್ತಿದೆ

27-04-2024 ಬೆಂಗಳೂರು

"ಗಜಲ್ ನ ಕಾವ್ಯ ಬೀಜ ಮೊಳಕೆಯೊಡೆಯಲು ಆರಂಭಿಸಿದಾಗ ಶಾಂತರಸರ ಮಗಳಾದ ಶ್ರೀಮತಿ ಮುಕ್ತಾಯಕ್ಕನವರು ನೀರೆರೆದು ಪೋಷಿಸಿ ...

ಒಂದೆಲೆ ಮೇಲೆ ಕಾಡನ್ನು ನೋಡುವ ಮುನ್ನ

20-04-2024 ಬೆಂಗಳೂರು

"ಸುಳ್ಳು ಸುಳ್ಳು ಪುಸ್ತಕಗಳ ಕಾಲ ಅಂತಲೂ ಮುಂದೊಮ್ಮೆ ಈ ಕಾಲವನ್ನು ನೆನಪಿಸಿಕೊಳ್ಳುವ ಪ್ರಕಾಶನ ಕ್ಷೇತ್ರದಲ್ಲಿ ಹಾಡ್...

ಕಾಡಿನೊಳಗಿನ ಪ್ರಾಣಿ ಬದುಕಿನಲ್ಲಿ ಕಂಡು ಕೇಳರಿಯದ ಅಚ್ಚರಿಗಳಿವೆ

27-04-2024 ಬೆಂಗಳೂರು

'ಉಳಿವಿಗಾಗಿ ಓಡು, ಇಲ್ಲವೇ ಹೋರಾಡು' ಎನ್ನುವುದು ಸಸ್ಯಾಹಾರಿಗಳ ಪಾಡಾದರೆ 'ಹೋರಾಡಿ ಕೊಂದು ಹೊಟ್ಟೆ ತುಂಬಿಸ...