ಪ್ರಭುತ್ವದ ವೈಖರಿಗೆ ವಿರೋಧವಿದೆ...ಇದನ್ನು ಹತ್ತು ಕಡೆಯೂ ಹೇಳುವೆ....: ಹಂಪನಾ ಖಚಿತ ನುಡಿ

Date: 22-01-2021

Location: ಬೆಂಗಳೂರು


‘ಇದ್ದಿದ್ದನ್ನು ಹೇಳಿರುವೆ; ಹತ್ತು ಕಡೆ ಹೋಗಿಯೂ ಹೇಳುವೆ’

‘ಪ್ರಧಾನಿ ಮೋದಿ, ಧರ್ಮರಾಯನಂತೆ ಹೇಳಿ, ದುರ್ಯೋಧನನಂತೆ ವರ್ತಿಸುತ್ತಾರೆ’

‘ಸಾರ್ವಜನಿಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸುಳಿವುಗಳನ್ನು ಸರ್ಕಾರವೇ ನೀಡುತ್ತಿದೆ’ .

‘ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ಸರ್ವಾಧಿಕಾರ ಆಳುತ್ತಿದೆಯೇ ಎಂಬ ಗುಮಾನಿ ಇದೆ’

‘ಅಭಿಪ್ರಾಯ ಸ್ವಾತಂತ್ಯ್ರ ಹರಣ ವಾಗುವ ಘಟನೆಗಳು ನಡೆಯುತ್ತಿವೆ. ವಿರೋಧಿಗಳನ್ನು ಬಗ್ಗು ಬಡಿಯುವ ಹುನ್ನಾರ ನಡೆಯುತ್ತಿದೆ.’

ಹಿರಿಯ ಸಾಹಿತಿ, ಸಂಶೋಧಕ ಡಾ. ಹಂಪ ನಾಗರಾಜಯ್ಯ ಅವರು ಮುಕ್ತವಾಗಿ ವ್ಯಕ್ತಪಡಿಸಿದ ವಿಚಾರಗಳಿವು.

ಸಂದರ್ಭ: ಮಂಡ್ಯದಲ್ಲಿ ಇತ್ತೀಚೆಗೆ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರ ವಿಚಾರಗಳು ಆಕ್ಷೇಪಾರ್ಹವಾಗಿವೆ ಎಂಬ ಆರೋಪದಡಿ ಅವರನ್ನು ಪೊಲೀಸ್ ಅಧಿಕಾರಿಗಳು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದರ ಹಿನ್ನೆಲೆಯಲ್ಲಿ ಬುಕ್ ಬ್ರಹ್ಮ ಡಿಜಿಟಲ್ ಸಂಸ್ಥೆಯು ಆಯೋಜಿಸಿದ್ದ ಫೇಸ್ ಬುಕ್ ಲೈವ್ ನೇರ ಪ್ರಸಾರದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ ಸಂದರ್ಶಿಸಿದರು.

ಮಂಡ್ಯ ಜಿಲ್ಲೆಯೊಂದಿಗೆ ನನ್ನ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ, ಅಲ್ಲಿಯ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಿದ್ದೆ. ಸಾಹಿತಿಗೆ ಸಾಮಾಜಿಕ ಬದ್ಧತೆ ಇರಬೇಕು ಎಂಬ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ವಿಶ್ಲೇಷಿಸಿದ್ದೆ. ಯಾರನ್ನೂ ಟೀಕಿಸಿಲ್ಲ ಎಂದು ವಿವರಿಸಿದರು.

ಪ್ರಭುತ್ವದ ವೈಖರಿಗೆ ವಿರೋಧ! ಪ್ರಧಾನಿ ಮೋದಿ ಅವರ ಮಾತು ಒಂದು ಕೃತಿ ಮತ್ತೊಂದು. ಅವರು ಧರ್ಮರಾಯನಂತೆ ಹೇಳಿ ದುರ್ಯೋಧನನಂತೆ ವರ್ತಿಸುತ್ತಾರೆ. ದೆಹಲಿಯಲ್ಲಿ ರೈತರು ಗಾಳಿ-ಮಳೆ-ಚಳಿ ಎನ್ನದೇ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸ್ವತಃ ಪ್ರಧಾನಿಯಾಗಿ ಮಾತುಕತೆಗೆ ಹೋದರೆ ಏನಾಗುತ್ತದೆ. ಅದಕ್ಕೊಂದು ಸಮಿತಿ ರಚಿಸಿ ಕಾಲಹರಣ ಮಾಡುತ್ತಿದ್ದಾರೆ ಎನಿಸುತ್ತದೆ. ವ್ಯಕ್ತಿಯಾಗಿ ಮೋದಿಯ ಬಗ್ಗೆ ನನಗೆ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲ. ಪ್ರಭುತ್ವದ ಮೇಲಿನ ಸಿಟ್ಟು ವ್ಯಕ್ತಪಡಿಸಿರುವುದಾಗಿ ಹೇಳಿದರು.

ಸರ್ಕಾರದ ಭರವಸೆಗಳ ಕುರಿತು ರೈತರಲ್ಲಿ ನಂಬಿಕೆ ಇಲ್ಲ. ಏಕೆ ಹೀಗೆ ಎಂದು ತಿಳಿಯುವುದು ಪ್ರಧಾನಿ ಅವರ ಕರ್ತವ್ಯವಲ್ಲವೆ? . ನಮ್ಮ ರೈತರಿಗೆ ಪ್ರಧಾನಿ ಮೇಲೆ ವಿಶ್ವಾಸ ಬರುತ್ತಿಲ್ಲ. ಮೋದಿ ಮಾತು ಒಂದು; ಮಾಡುವುದು ಮತ್ತೊಂದು ಎಂದು ಅಭಿಪ್ರಾಯಪಟ್ಟರು.

ಸರ್ವಾಧಿಕಾರ ಆಳುತ್ತಿದೆಯೇ? : ದೇಶದ ಸ್ವಾತಂತ್ಯ್ರಕ್ಕಾಗಿ ಲಕ್ಷಾಂತರ ಜನತೆ ತ್ಯಾಗ-ಬಲಿದಾನ ಮಾಡಿದ್ದು, ಅದರ ಮೇಲೆ ಸರ್ವಾಧಿಕಾರ ಮಾಡಲು ಬಿಡಬಾರದು. ಪ್ರಧಾನಿ ಮೋದಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇವತ್ತಿನ ಸರ್ಕಾರಕ್ಕೆ ಹೌದಪ್ಪಗಳು ಬೇಕು. ಈಗಿರುವ ಸರ್ಕಾರ ಸರ್ವಾಧಿಕಾರದತ್ತ ಹೋಗುತ್ತಿದೆಯೇ ಎಂಬ ಗುಮಾನಿ ಬರುತ್ತದೆ ಎಂದರು

‘ನನಗೆ ಯಾರೂ ಶತ್ರುಗಳಲ್ಲ. ಮೋದಿಯೂ ಸಹ. ಅವರ ವಿರುದ್ಧ ಮಾತನಾಡುವ ಅನಿವಾರ್ಯತೆ ನನಗಿಲ್ಲ ಆದರೆ, ಪ್ರಸಕ್ತ ಪ್ರಭುತ್ವದ ವೈಖರಿ ಕುರಿತು ಮಾತನಾಡಿದ್ದೇನೆ. ಆಡಳಿತದ ವಿರುದ್ಧ ಮಾತನಾಡಿದರೆ ಜೈಲಿಗೆ ಹಾಕುವುದು, ಹಲ್ಲೆ ನಡೆಸುವ ಘಟನೆಗಳು ನಡೆಯುತ್ತಿವೆ. ಇದನ್ನು ಪ್ರಶ್ನಿಸದೇ ಹೋದರೆ ಸಾಹಿತಿಗಳ ಸಾಮಾಜಿಕ ಹೊಣೆಗಾರಿಕೆಯ ಪ್ರಶ್ನೆ ಕಾಡುತ್ತದೆ. ಸಾಹಿತಿಗಳು, ಚಿಂತಕರು ತಮ್ಮ ನಾಲಗೆಯನ್ನು ಒತ್ತೆ ಇಟ್ಟವರಲ್ಲ’ ಎಂದರು.

ಹೇಳಿದ್ದೇ ಸರಿ, ಹತ್ತು ಕಡೆ ಹೇಳುವೆ: ‘ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಹೇಳಿರುವ ವಿಚಾರಗಳನ್ನು ಮತ್ತೆ ಮತ್ತೆ ಹೇಳುವೆ. ಹತ್ತು ಕಡೆ ಹೋಗಿ ಹೇಳುವೆ. ವಾಸ್ತವಿಕ ಪ್ರಭುತ್ವದ ವಿದ್ಯಮಾನಗಳ ಕುರಿತು ಮಾತನಾಡಿದ್ದೇನೆ. ಸಾಹಿತಿಗಳು ರೈತರ ಪರ ನಿಲ್ಲಬೇಕು ಮಾತ್ರವಲ್ಲ; ಸಾರ್ವಜನಿಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲ ಸುಳುವುಗಳನ್ನು ಸರ್ಕಾರ ನೀಡುತ್ತಿದೆ. ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ಘಟನೆ ವಿರೋಧಿಸಿ ಬರಗೂರು ರಾಮಚಂದ್ರಪ್ಪ ಸದಾಶಿವ, ಆರ್.ಜಿ. ಹಳ್ಳಿ ನಾಗರಾಜ್ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾಹಿತಿ ಮಿತ್ರರು ದೂರವಾಣಿ ಮೂಲಕ ಮಾತನಾಡಿ ತಮ್ಮ ನೈತಿಕ ಬೆಂಬಲ ನೀಡಿದ್ದಾರೆ. ಹೀಗಾಗಿ, ನಾನು ಸರಿಯಾಗೇ ಹೇಳಿದ್ದರ ಬಗ್ಗೆ ನನಗೆ ವಿಶ್ವಾಸವಿದೆ. ಮತ್ತೆ ಮತ್ತೇ ಹೇಳುವೆ’ ಎಂದು ಪುನರುಚ್ಛಿಸಿದರು.

ಪೊಲೀಸರು ನಮ್ಮ ಮನೆ ಬಾಗಿಲಿಗೆ ಬರಬೇಕಿತ್ತು: ‘ನನ್ನ ಭಾಷಣದ ವಿರುದ್ಧ ದೂರು ಬಂದಿದ್ದರೆ ಪೊಲೀಸರು ನಮ್ಮ ಮನೆ ಬಾಗಿಲಿಗೆ ಬಂದು ವಿವರಣೆ ಕೇಳಬಹುದಿತ್ತು. ಆದರೆ, ಠಾಣೆಗೆ ಕರೆಸಿಕೊಳ್ಳುವ ಅನಿವಾರ್ಯತೆ ಇರಲಿಲ್ಲ. ಸರ್ಕಾರವೇ ಹಾಗಿರುವಾಗ ಪೊಲೀಸರ ನಡೆಯೂ ಹಾಗಿತ್ತು ಎಂದು ವಿಷಾದಿಸಿದರು.

‘ನಾನು ಠಾಣೆಗೆ ಹೋಗಬಾರದಿತ್ತು ಎಂದು ಸಾಹಿತಿ ಮಿತ್ರರು ಹೇಳಿದರು. ಆದರೆ, ಅಲ್ಲಿಗೆ ಹೋಗದಿದ್ದರೆ ದೂರಿನ ಸಾರಾಂಶ ತಿಳಿಯುತ್ತಿರಲಿಲ್ಲ. ಅದಕ್ಕೆ ಹೋಗಬೇಕಾಯಿತು. ಅಲ್ಲಿ ಪೊಲೀಸರು ಗೌರವದಿಂದ ನಡೆದುಕೊಂಡರೇನೋ ನಿಜ. ಆದರೆ, ಅವರ ವಿಚಾರಣೆ ರೀತಿ ಪ್ರಶ್ನಾರ್ಹ ಎಂದು ಪ್ರಭುತ್ವದ ವೈಖರಿ ಕುರಿತು ಅಚ್ಚರಿ ವ್ಯಕ್ತಪಡಿಸಿದರು.

ಕ್ಷಮಾಪಣೆ ಪತ್ರವಲ್ಲ: ‘ನಾನು ಯಾವುದಕ್ಕೂ ಕ್ಷಮಾಪಣೆ ಕೇಳುವುದಿಲ್ಲ. ಕ್ಷಮಾಪಣೆ ಪತ್ರವೂ ಬರೆದು ಕೊಟ್ಟಿಲ್ಲ. ಪ್ರಧಾನಿ ವಿರುದ್ಧ ಮಾತನಾಡಿದ್ದೀರಿ ಎಂಬ ದೂರಿನೊಂದಿಗೆ ಒಬ್ಬ ದೂರುದಾರ ಠಾಣೆಗೆ ಬಂದಿದ್ದರು. ಆದರೆ, ನಾನು ಅವರ ಆರೋಪವನ್ನು ಒಪ್ಪಲಿಲ್ಲ. ಪ್ರಭುತ್ವದ ವಿರುದ್ಧ ಮಾತನಾಡಿದ್ಧೇನೆ ಎಂದಷ್ಟೇ ಹೇಳಿದೆ. ಯಾವುದೋ ಪತ್ರಿಕೆಯಲ್ಲಿ ಪ್ರಧಾನಿ ವಿರುದ್ಧ ಮಾತನಾಡಿದ್ದರ ಬಗ್ಗೆ ಪ್ರಸ್ತಾಪವಿದೆ. ಆದರೆ, ಅಲ್ಲಿ ಪ್ರಕಟವಾದ ಬಹುತೇಕ ವಿಚಾರಗಳ ಕುರಿತು ನಾನು ಮಾತನಾಡಿಯೇ ಇಲ್ಲ. ಅದನ್ನು ಮುಂದಿಟ್ಟುಕೊಂಡು ದೂರು ದಾಖಲಿಸಲಾಗಿದೆ. ಕೇಸ್ ಪೂರ್ಣಗೊಳಿಸಬೇಕಿದೆ ಎಂಬ ಪೊಲೀಸರ ಮನವಿಗೆ ನಾನು ರೈತರ ಸಮಸ್ಯೆ ಕುರಿತು ಮಾತನಾಡಿದ್ದೇನೆ. ಯಾರನ್ನೂ ಟೀಕಿಸಿಲ್ಲ ಎಂದಷ್ಟೇ ಬರೆದುಕೊಟ್ಟಿದ್ದೇನೆ. ಅದು ಕ್ಷಮಾಪಣಾ ಪತ್ರವಲ್ಲ. ಈಗಲೂ ನನ್ನ ಹೇಳಿಕೆಗೆ ಬದ್ಧ’ ಎಂದು ಹೇಳಿದರು.

ಬೆದರಿಕೆ ಕರೆಗಳು ಬಂದಿಲ್ಲ: ಪ್ರಭುತ್ವ ವಿರುದ್ಧ ಮಾತನಾಡಿದ ತಮಗೆ ಬೆದರಿಕೆ ಕರೆಗಳು ಬಂದಿವೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು. ಬೆದರಿಕೆ ಕರೆಗಳು ಬಂದಿಲ್ಲ. ರಾಜ್ಯದ ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಹಾಗೂ ಡಿ.ಕೆ. ಶಿವಕುಮಾರ ದೂರವಾಣಿಯಲ್ಲಿ ಮಾತನಾಡಿ ಘಟನೆ ಕುರಿತು ವಿಷಾದಿಸಿದರು ಎಂದು ಮಾಹಿತಿ ನೀಡಿದರು..

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...