‘ರೆಹಮಾನ್’ ಎಂಬ ‘ಸಹಜ ಪ್ರತಿಭೆ’

Date: 16-01-2021

Location: .


ತಮ್ಮ ಸಂಗೀತ ಮಾತ್ರದಿಂದಲೇ ಒಂದು ಪೀಳಿಗೆಯ ಜನಸಮುದಾಯವನ್ನು ಆರ್ಕಷಿಸಿದ ಸ್ವರ ಮಾಂತ್ರಿಕ ಎ. ಆರ್‌. ರೆಹಮಾನ್. ಎ. ಆರ್. ರೆಹಮಾನ್ ಅವರನ್ನು ನಸ್ರೀನ್ ಮುನ್ನಿ ಕಬೀರ್ ನಾಲ್ಕು ವರ್ಷಗಳ ಕಾಲ ವಿವಿಧ ಸಮಯದಲ್ಲಿ ಮಾತನಾಡಿಸಿ ಬರೆದ ಕೃತಿ `ದಿ ಸ್ಪಿರಿಟ್ ಆಫ್ ಮ್ಯೂಸಿಕ್'’ರ ಆಯ್ದ ಭಾಗವನ್ನು ಶೈಲಜಾ ಮತ್ತು ವೇಣುಗೋಪಾಲ್‌ ಅವರು ಕನ್ನಡಕ್ಕೆ ಅನುವಾದಿಸಿ, ವಿಶ್ಲೇಷಿಸಿದ್ದು ಇಲ್ಲಿದೆ.

ಪದ್ಮಶ್ರೀ ಪುರಸ್ಕೃತ ಅಲ್ಲಾ ರಖ್ಖಾ ಅಬ್ದುಲ್ ರೆಹಮಾನ್ ಅವರ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಬಂದಿರುವ ರಾಷ್ಟ್ರೀಯ ಪ್ರಶಸ್ತಿಗಳು, ಅಕಾಡೆಮಿ ಪ್ರಶಸ್ತಿಗಳು, ಆಸ್ಕರ್ ಪ್ರಶಸ್ತಿ ಇವುಗಳಿಗೆ ಲೆಕ್ಕವೇ ಇಲ್ಲ. ಅವರು ನಿರ್ದೇಶಿಸಿದ ಧ್ವನಿಸುರುಳಿಗಳು ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ’ಮದ್ರಾಸಿನ ಮೊಜ಼ಾರ್ಟ್’, ’ಮ್ಯೂಸಿಕ್ ವಿಜ಼ರ್ಡ್’ ಹೀಗೆ ಹಲವಾರು ಹೆಸರುಗಳಿಂದ ಜನ ಇವರನ್ನು ಬಣ್ಣಿಸುತ್ತಾರೆ. ಯಾವುದನ್ನೂ ತಲೆಗೆ ಅಂಟಿಸಿಕೊಳ್ಳದೆ ತನ್ನಷ್ಟಕ್ಕೆ ತಾನು ಸಂಗೀತ ಸಂಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ.

ತಂದೆ ಸತ್ತಾಗ ಎಂಟನೇ ವರ್ಷದಲ್ಲೇ ಮನೆ ಜವಾಬ್ದಾರಿಯನ್ನು ಹೊತ್ತು, ಓದು ಬಿಟ್ಟು, ಕೀಬೋರ್ಡ್ ಸಹಾಯಕನಾಗಿ ವೃತ್ತಿಯನ್ನು ಪ್ರಾರಂಭಿಸಿ, ಇಂದು ಜಗತ್ತಿನಾದ್ಯಂತ ಎಲ್ಲಾ ಭಾಷೆಯ ಸಿನಿಮಾಗಳಿಗೂ ಬೇಕಾಗಿರುವ ವ್ಯಕ್ತಿ ಎ. ಆರ್. ರೆಹಮಾನ್. ಅವರು ಕ್ರಮಿಸಿದ ದಾರಿ ನಿಜಕ್ಕೂ ರೋಚಕ.

ಮಲೆಯಾಳಂ ಸಿನಿಮಾಗಳಲ್ಲಿ ಸಂಗೀತ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಆರ್. ಕೆ. ಶೇಖರ್ ಅವರ ಮಗ ದಿಲೀಪ್ ಕುಮಾರ್, ಎ.ಆರ್. ರೆಹಮಾನ್ ಆದ ಕ್ಷಣದಿಂದ ಹಿಡಿದು ಜಗದ್ವಿಖ್ಯಾತ ಕಲಾವಿದನಾಗಿ ಬೆಳೆಯುವವರೆಗಿನ ವಿವಿಧ ಹಂತಗಳನ್ನು ರೆಹಮಾನ್ ಅವರ ಮಾತುಗಳಲ್ಲೇ ಕಟ್ಟಿಕೊಡುವ ಪ್ರಯತ್ನ- ಎ. ಆರ್. ರೆಹಮಾನ್- ದಿ ಸ್ಪಿರಿಟ್ ಆಫ್ ಮ್ಯೂಸಿಕ್ ಎಂಬ ಪುಸ್ತಕ. ನಸ್ರೀನ್ ಮುನ್ನಿ ಕಬೀರ್ ಅವರು ಎ. ಆರ್. ರೆಹಮಾನ್ ಅವರನ್ನು ನಾಲ್ಕು ವರ್ಷಗಳ ಕಾಲ ವಿವಿಧ ಸಮಯದಲ್ಲಿ ಮಾತನಾಡಿಸಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಇಡೀ ಪುಸ್ತಕ ಒಂದು ದೀರ್ಘ ಆದರೆ ಆತ್ಮೀಯವಾದ ಮಾತುಕಥೆಯ ರೂಪದಲ್ಲೇ ಇದೆ. ಕಲಾವಿದನ ಬದುಕನ್ನು ತುಂಬಾ ಪ್ರೀತಿಯಿಂದ ಕಟ್ಟಿಕೊಡುತ್ತಾರೆ. ಅವರು ಬರೆದಿರುವ ಎಲ್ಲಾ ಪುಸ್ತಕಗಳೂ ಈ ಮಾದರಿಯಲ್ಲೇ ಇವೆ. ನಸ್ರೀನ್ ಹಲವಾರು ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ. ಅವರಿಗೆ ಹಿಂದಿ ಸಿನಿಮಾ ಜಗತ್ತು ತುಂಬಾ ನಿಕಟವಾಗಿ ಗೊತ್ತು. ಆದರೆ ದಕ್ಷಿಣ ಭಾರತೀಯ ಸಿನಿಮಾಗಳು ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕುರಿತಂತೆ ಅವರಿಗೆ ಅಷ್ಟೇ ಗಂಭೀರವಾದ ಪರಿಶ್ರಮ ಇಲ್ಲದೇ ಹೋದರೂ, ಅವರು ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಇಲ್ಲಿ ಚರ್ಚಿಸಿದ್ದಾರೆ. ರೆಹಮಾನ್ ಕೂಡ ಅಂತಹ ಸಮಯದಲ್ಲಿ ಹೆಚ್ಚೆಚ್ಚು ಅನುಭವವಗಳನ್ನು ಹಂಚಿಕೊಳ್ಳುತ್ತಾ, ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.

ಜನಕ್ಕೆ ಹೊಸದೊಂದು ಸಿಗುವ ತನಕ ಅಂಥದ್ದು ಇತ್ತು ಅಂತ ಗೊತ್ತಿರುವುದಿಲ್ಲ. ನೀವು ಹೊಸದನ್ನು ಸೃಷ್ಟಿಸಬೇಕು. ಮೊದಲು ಜನರಿಗೆ ಏನು ಬೇಕು ಅದನ್ನು ಕೊಡಿ. ನಂತರ ನಿಮಗೆ ಇಷ್ಟವಾದದ್ದನ್ನು ಮಾಡಿ. ಖಂಡಿತಾ ಜನ ಅದನ್ನು ಇಷ್ಟಪಡುತ್ತಾರೆ. ನಾವು ಹೇಗೆ ಇದ್ದೇವೋ ಅದೇ ವಾಸ್ತವ. ಚೆನ್ನಾಗಿದ್ದೀವೋ ಇಲ್ಲವೋ. ನಾವಿರುವುದೇ ಹೀಗೆ. ಈಗ ನಮ್ಮ ರೂಪವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಜಗತ್ತು ನಮ್ಮನ್ನು ನೋಡುವ ಕ್ರಮವನ್ನು ಬದಲಿಸಬಹುದು. ಇದು ರೆಹಮಾನ್ ನಂಬಿದ ನಿಲುವು. ಜಗತ್ತು ರೆಹಮಾನ್ ಅವರನ್ನು ನೋಡುವ ದೃಷ್ಟಿಯನ್ನು ಬದಲಿಸಿಕೊಂಡಿದೆ. ಹಿಂದಿಯೇ ಬಾರದ ಒಬ್ಬ ಪಕ್ಕಾ ತಮಿಳು ಹುಡುಗನನ್ನು ಹಿಂದಿ ಜಗತ್ತು ಆತ್ಮೀಯವಾಗಿ ಸ್ವಾಗತಿಸಿದೆ. ಅಷ್ಟೇ ಅಲ್ಲ ಇಡೀ ಜಗತ್ತೇ ಇಂದು ರೆಹಮಾನ್ ಅವರನ್ನು ಬೆರಗಿನಿಂದ ನೋಡುತ್ತಿದೆ.

ನನ್ನ ಅಜ್ಜ, ಅಜ್ಜಿ ಚೆನ್ನೈನ ಪುದುಪೇಟೆಯ ಮೌಂಟ್ ರೋಡಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇದ್ದರು. ಅವರ ಮನೆಯಲ್ಲೇ ನನ್ನ ತಂದೆ, ತಾಯಿ ವಾಸಿಸುತ್ತಿದ್ದರು. ನಾನು ಜನವರಿ 6, 1967 ಬೆಳಗ್ಗೆ 5:50ಕ್ಕೆ ಹುಟ್ಟಿದೆ. ಅಂದು ಶುಕ್ರವಾರ. ಅಮ್ಮನ ಜೊತೆಗೆ ನನ್ನ ಮುತ್ತಜ್ಜ ಹಾಗೂ ಅಪ್ಪ ಇದ್ದರು. ಹೆರಿಗೆ ಮಾಡಿಸುವುದಕ್ಕೆ ಯಾವುದೇ ದಾದಿಯರೂ ಇರಲಿಲ್ಲ.

ನಾನು ತುಂಬಾ ಪೀಚಾಗಿದ್ದೆ. ನಾಲ್ಕು ವರ್ಷವಾಗುವರೆಗೆ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದನಂತೆ. ನನಗೆ ಸ್ನೇಹಿತರೂ ಕಡಿಮೆ. ಯಾವಾಗಲೂ ಒಬ್ಬನೇ ಇರುತ್ತಿದ್ದೆ. ರೂಮಿನಲ್ಲಿ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಹಾರ್ಮೋನಿಯಂ ನುಡಿಸಿಕೊಳ್ಳುತ್ತಿದ್ದೆನಂತೆ. ನಾನು ಮೃದು ಸ್ವಾಭಾವದ ಹುಡುಗ.

ನನ್ನ ತಾತ ಮೈಲಾಪುರದ ದೇವಸ್ಥಾನದಲ್ಲಿ ಭಜನೆಗಳನ್ನು ಹಾಡುತ್ತಿದ್ದರು. ನಮ್ಮ ಮನೆ ತುಂಬಾ ಸಂಗೀತವೇ ಆವರಿಸಿಕೊಂಡಿತ್ತು. ನಮ್ಮಪ್ಪ ಆರು ಕೀ ಬೋರ್ಡುಗಳನ್ನು ಇಟ್ಟುಕೊಂಡಿದ್ದರು. ಎಂತಹ ವೈಭವ! ಇಡೀ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲಿಗೆ ಜಪಾನಿನ ಸಿಂಥಸೈಸರ್ ಕೊಂಡವರು ಅವರೇ ಇರಬೇಕು. ಅದಕ್ಕಾಗಿ ಅವರಿಗೆ ಜಪಾನಿಗೆ ಹೋಗಲು ಪುಕ್ಕಟೆ ಟಿಕೆಟ್ ಬೇರೆ ಸಿಕ್ಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆರೋಗ್ಯ ತಪ್ಪಿತು. ಹಲವು ಆಸ್ಪತ್ರೆಗಳಲ್ಲಿ ಇದ್ದು ಬಂದರು. ಮೂರು ಸಲ ಅಪರೇಷನ್ ಆಯಿತು. ತುಂಬಾ ನೋವು ಅನುಭವಿಸುತ್ತಿದ್ದರು. ಆಧ್ಯಾತ್ಮಿಕ ಚಿಕಿತ್ಸೆಯಿಂದ ಅನುಕೂಲವಾಗಬಹುದು ಅಂತ ಅಮ್ಮನಿಗೆ ಅನ್ನಿಸಿತು. ಕರಿಮುಲ್ಲಾ ಶಾ ಖಾದ್ರಿಯವರನ್ನು ಕಂಡರು. ನಮ್ಮ ಕುಟುಂಬದ ಮೇಲೆ ಅವರ ಪ್ರಭಾವ ತುಂಬಾ ಆಗಿದೆ. ಅವರು ನಮಗೆ ತುಂಬಾ ಬೆಂಬಲ ನೀಡಿದರು. ನೆರವಾದರು. ನನ್ನಪ್ಪ 1976ರಲ್ಲಿ ಹೋಗಿಬಿಟ್ಟರು. ಆಗ ಅವರಿಗೆ ಕೇವಲ 46ವರ್ಷ. ನನಗೆ ಎಂಟು ವರ್ಷ. ಅವರು ಸತ್ತ ದಿನ ಅವರು ಸಂಗೀತ ಸಂಯೋಜಿಸಿದ್ದ ಮೊದಲ ಸಿನಿಮಾ ಬಿಡುಗಡೆ ಆಯಿತು.

ನಮ್ಮ ಅಪ್ಪ ನನಗಾಗಿ ಬಂಗಲೆ ಬಿಟ್ಟು ಹೋಗಲಿಲ್ಲ ನಿಜ. ಆದರೆ ಹಲವಾರು ಸಂಗೀತ ವಾದ್ಯಗಳನ್ನು ಬಿಟ್ಟು ಹೋಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸಂಗೀತಗಾರರ ಗುಡ್‌ವಿಲ್ ಬಿಟ್ಟುಹೋದರು. ಅವರಲ್ಲಿ ಕೆಲವರು ಇಂದಿಗೂ ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ನಮ್ಮಮ್ಮನ ಒಲವೆಲ್ಲಾ ಸದಾ ಆಧ್ಯಾತ್ಮಿಕತೆಯತ್ತಲೇ ಇತ್ತು. ನಾವು ಹಬೀಬುಲ್ಲ ರಸ್ತೆಯಲ್ಲಿದ್ದ ಮನೆಯಲ್ಲಿ ಗೋಡೆಯ ಮೇಲೆಲ್ಲಾ ಬರೀ ಹಿಂದೂ ದೇವರ ಫೋಟೊಗಳೇ ಇದ್ದವು. ಮಧ್ಯದಲ್ಲಿ ಮೇರಿ ಜೀಸಸ್ ಕೈಹಿಡಿದುಕೊಂಡಿದ್ದ ಒಂದು ಚಿತ್ರವೂ ಇತ್ತು. ಮೆಕ್ಕಾ ಮದೀನಾ ನಗರಗಳ ಚಿತ್ರವೂ ಇದ್ದವು.

ನಮ್ಮಪ್ಪ ಸತ್ತ ಹತ್ತು ವರ್ಷಗಳ ನಂತರ ಖಾದ್ರಿ ಸಾಹೇಬರನ್ನು ಮತ್ತೆ ಕಾಣುವ ಪ್ರಸಂಗ ಬಂತು. ಅವರಿಗೆ ಆರೋಗ್ಯ ಸರಿ ಇರಲಿಲ್ಲ. ನಮ್ಮಮ್ಮ ಅವರನ್ನು ನೋಡಿಕೊಂಡರು. ಅವರು ನಮ್ಮಮ್ಮನನ್ನು ಮಗಳಂತೆಯೇ ಕಾಣುತ್ತಿದ್ದರು. ಮರುವರ್ಷ ನಾವು ಕೊಡಂಬಾಕಂನಲ್ಲಿ ಮನೆ ಮಾಡಿಕೊಂಡೆವು. ಸೂಫಿವಾದ ನಮ್ಮನ್ನು ಆಧ್ಯಾತ್ಮಿಕವಾಗಿ ಮೇಲೆತ್ತಿದ್ದು ನಿಜ. ಅದು ನಮಗೆ ಉತ್ತಮ ಮಾರ್ಗವಾಗಿ ತೋರಿತು. ನಾವು ಸೂಫಿ ಇಸ್ಲಾಂಗೆ ಶರಣಾದೆವು.

ನನಗೆ ದಿಲೀಪ್ ಕುಮಾರ್ ಅನ್ನೊ ನನ್ನ ಹೆಸರು ಸ್ವಲ್ಪವೂ ಇಷ್ಟ ಇರಲಿಲ್ಲ. ಕಾರಣ ಗೊತ್ತಿಲ್ಲ. ಸೂಫಿವಾದವನ್ನು ಒಪ್ಪಿಕೊಳ್ಳುವ ಸ್ವಲ್ಪ ಮೊದಲು ಒಬ್ಬ ಹಿಂದೂ ಜ್ಯೋತಿಷಿಯನ್ನು ಕಾಣಲು ಹೋಗಿದ್ದೆವು. ಅವರು ನನ್ನನ್ನು ನೋಡಿ ಅಬ್ದುಲ್ ರೆಹಮಾನ್ ಅನ್ನೋ ಹೆಸರು ನನಗೆ ಒಳ್ಳೆಯದಾಗುತ್ತದೆ ಎಂದು ಸೂಚಿಸಿದರು. ನನಗೆ ಇಷ್ಟ ಆಯಿತು. ಅಮ್ಮ ಅಲ್ಲಾ ರಖ್ಖಾ ಸೇರಿಸಿದರು. ಎ ಆರ್ ರೆಹಮಾನ್ ಆದೆ. ರೋಜಾ ಸಿನಿಮಾದಿಂದಾಚೆಗೆ ಈ ಹೆಸರು ಚಾಲ್ತಿಗೆ ಬಂತು.

ನಾನು ಸಂಗೀತಗಾರನಾಗುತ್ತೇನೆ ಅಂದುಕೊಂಡಿರಲಿಲ್ಲ. ಕಂಪ್ಯೂಟರ್ ಇಂಜಿನಿಯರ್ ಆಗಬೇಕೆಂದುಕೊಂಡಿದ್ದೆ. ಅಪ್ಪ ಸತ್ತ ಮೇಲೆ ಆದಾಯದ ಮೂಲವೇ ತಪ್ಪಿ ಹೋಯಿತು. ಅಮ್ಮ ಮನೆಯಲ್ಲಿದ್ದ ಸಂಗೀತ ವಾದ್ಯಗಳನ್ನು ಬಾಡಿಗೆಗೆ ಕೊಟ್ಟು ಒಂದಿಷ್ಟು ಹಣ ಸಂಪಾದಿಸುತ್ತಿದ್ದರು. ನಮ್ಮನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರು. ಬರುಬರುತ್ತಾ ಸಂಗೀತಗಾರರು ತಮ್ಮದೇ ಆದ ಕೀಬೋರ್ಡುಗಳನ್ನು ಕೊಳ್ಳತೊಡಗಿದರು. ನಮ್ಮ ವಾದ್ಯಗಳನ್ನು ಬಾಡಿಗೆಗೆ ಕೊಳ್ಳುವವರು ಕಡಿಮೆಯಾದರು. ನಮ್ಮಮ್ಮ ನೀನೆ ಕೀಬೋರ್ಡ್ ನುಡಿಸುವುದನ್ನು ಕಲಿತಕೋ ಅಂದರು. ಹಾಗೆ ಶುರುವಾಯಿತು ನನ್ನ ಸಂಗೀತಯಾತ್ರೆ. ನನಗೆ ಮೊದಲು ಕೆಲಸ ಕೊಟ್ಟವರು ನಮ್ಮ ತಂದೆಯ ಗೆಳೆಯರಾಗಿದ್ದ ಅರ್ಜುನ್ ಮಾಸ್ತರ್. ತಿಂಗಳಿಗೆ 50ರೂಪಾಯಿ ಸಂಬಳ ಕೊಟ್ಟರು.

ನನಗೆ ಒಂದು ಸ್ವಂತ ಸಂಗೀತದ ಕೋಣೆ ಇರಬೇಕು ಅಂತ ಆಸೆ ಇತ್ತು. ಅದು ಹೇಗೋ ಸಾಧ್ಯವಾಯಿತು. ಆದರೆ ವಾದ್ಯಗಳೇ ಇರಲಿಲ್ಲ. ನಮ್ಮಮ್ಮ ಹೆಣ್ಣುಮಕ್ಕಳ ಮದುವೆಗೆಂದು ಇಟ್ಟಿದ್ದ ಚಿನ್ನ ಮಾರಿ ನನಗೆ ಹಣಕೊಟ್ಟರು. ಅದರಲ್ಲಿ ನನ್ನ ಮೊದಲ ಫಾಸ್ಟೆಕ್ಸ್೬- ಟ್ರಾಕ್ ಮಿಕ್ಸರ್/ರೆಕಾರ್ಡರ್ ಕೊಂಡುಕೊಂಡೆ. ಹಲವು ವರ್ಷಗಳ ನಿರಾಸೆ, ಅವಮಾನ ಎಲ್ಲಾ ಮಾಯವಾಯಿತು. ನನ್ನ ಹೊಸ ಕೊಠಡಿಯಲ್ಲಿ, ಹೊಸ ರೆಕಾರ್ಡರ್ ಮುಂದೆ ಕೂತಾಗ ರಾಜನ ಹಾಗೆ ಅನಿಸಿತು.

ಸಿನಿಮಾದಲ್ಲಿ ಇಳೆಯರಾಜ ಮೊದಲಾದ ಪ್ರಖ್ಯಾತ ಸಂಗೀತ ನಿರ್ದೇಶಕರಿಗೆ ಕೀ ಬೋರ್ಡ್ ನುಡಿಸತೊಡಗಿದೆ. ಬರುಬರುತ್ತಾ ತುಂಬಾ ಬ್ಯುಸಿಯಾಗಿಬಿಟ್ಟೆ. ಶಾಲೆಯನ್ನು ಬಿಡಲೇಬೇಕಾಯಿತು. ಎರಡು ಶಿಫ್ಟಿನಲ್ಲಿ ಕೆಲಸ ಮಾಡುತ್ತಿದ್ದೆ. ರಾಜ-ಕೋಟಿಯವರಲ್ಲಿ ಬೆಳಗ್ಗೆ ೯ರಿಂದ ರಾತ್ರಿ ೯ರವರೆಗೆ ಕೆಲಸ ಮಾಡಿ, ನನ್ನ ವಾದ್ಯಗಳನ್ನೆಲ್ಲಾ ಕಾರಿನಲ್ಲಿ ತುಂಬಿಕೊಂಡು ಮತ್ತೊಂದು ಕಡೆ ಜಿಂಗಲ್ ನುಡಿಸಿ ಮನೆಗೆ ಬೆಳಗ್ಗೆ 4ಕ್ಕೆ ತಲುಪುತ್ತಿದ್ದೆ. ನಾಲ್ಕು ಗಂಟೆಗಳ ಕಾಲ ಮಲಗಿ ಮತ್ತೆ 9 ಗಂಟೆಗೆ ಕೆಲಸಕ್ಕೆ ಹಾಜರ್.

ಮೊದಲು ಶಿಫ್ಟಿಗೆ 200 ರೂಪಾಯಿ ಸಿಗುತ್ತಿತ್ತು. ಕೊನೆಗೆ ಅದು 15000ರೂಪಾಯಿವರೆಗೆ ಆಯಿತು. ತುಂಬಾ ಕಷ್ಟವಾಗುತ್ತಿತ್ತು. ಆದರೆ ಹಣದಿಂದ ಮನೆ ನಡೆಯುತ್ತಿತ್ತು. ಇನ್ನಷ್ಟು ವಾದ್ಯಗಳನ್ನು ಕೊಳ್ಳುವುದಕ್ಕೂ ಸಾಧ್ಯವಾಯಿತು. ಜಿಂಗಲ್ಸ್ ರಚಿಸುವುದರಲ್ಲಿ ಒಂದು ರೀತಿಯ ತೃಪ್ತಿ ಸಿಗುತ್ತಿತ್ತು. ಅಲ್ಲಿ ಸೃಜನಶೀಲತೆಗೆ ಸ್ವಾತಂತ್ರ್ಯವಿತ್ತು. ಜಾಹೀರಾತು ಕ್ಷೇತ್ರ ಆಗ ಹೊಸದು. ಹೊಸ ಹೊಸ ಜನರನ್ನು ಹೊಸ ಹೊಸ ರೀತಿಯ ಚಿಂತನೆಗಳೊಂದಿಗೆ ಮುಖಾಮುಖಿಯಾಗುವುದು ಉಲ್ಲಾಸ ಮೂಡಿಸುತ್ತದೆ.

ನಿಮೇತರ ಸಂಗೀತ ನೀಡುವುದು ಚೆನ್ನಾಗಿರುತ್ತದೆ. ಅಂತದೊಂದು ಮಾಡಬೇಕು ಅಂತ ತುಂಬಾ ತವಕ ಇತ್ತು. ವಂದೇ ಮಾತರಂ ಅಂತ ಒಂದು ಆಲ್ಬಂ ಮಾಡಿದೆ. ನಸ್ರತ್ ಫತೇ ಅಲಿ ಖಾನ್ ಅವರೊಂದಿಗಿನ ಗುರೂಸ್ ಆಫ್ ಪೀಸ್ ಅಂತ ಒಂದು ಜನಪ್ರಿಯ ಡ್ಯುಯೆಟ್ ಹಾಡಿದೆ. 1990ರಲ್ಲಿ ನನ್ನ ಗೆಳೆಯ ಸಾರಂಗನ್ ನನಗೆ ಫತೇ ಅಲಿ ಖಾನ್ ಅವರ ಸಂಗೀತ ಕೇಳಿಸಿದ. ನನಗೆ ಕವ್ವಾಲಿಯ ಜಗತ್ತು ತೆರೆದುಕೊಂಡಿತು. ಅದು ನನ್ನ ಮೇಲೆ ತುಂಬಾ ಪರಿಣಾಮ ಬೀರಿದೆ. 15ವರ್ಷಗಳ ಕಾಲ ನಸ್ರತ್ ಸಾಹೇಬರ ಹಾಡುಗಳನ್ನು ಕೇಳಿದ್ದೇನೆ. ಅವರ ಬಹುತೇಕ ಹಾಡುಗಳಲ್ಲಿ ಅವರ ವ್ಯಕ್ತಿತ್ವನ್ನು ಕಾಣಬಹುದು. ವಂದೇ ಮಾತರಂ ವಿಡಿಯೋ ಭಾರತದಾದ್ಯಂತ ಟಿ. ವಿ. ಛಾನಲ್ಲುಗಳಲ್ಲಿ ಪ್ರಸಾರವಾಯಿತು ಭಾರತದ ಐವತ್ತನೇ ವರ್ಷದ ಸ್ವಾತಂತ್ರ್ಯದ ಆಚರಣೆಗೆ ಅದನ್ನು ಸಿದ್ಧಪಡಿಸಲಾಗಿತ್ತು. 1997ರ ಆಗಸ್ಟ್ 12ರಂದು ಅದರ ಬಿಡುಗಡೆಯಾಯಿತು.

ಸಮಯ ಸಿಕ್ಕಾಗಲೆಲ್ಲಾ ಸಂಗೀತದ ತುಣಕುಗಳನ್ನು ಸಂಯೋಜಿಸಿ ಇಟ್ಟುಕೊಳ್ಳುತ್ತಿದ್ದೆ. ಒಂದು ಸಲ ಮಣಿರತ್ನಂ ಅವರನ್ನು ನನ್ನ ಸ್ಟುಡಿಯೋಗೆ ಆಹ್ವಾನಿಸಿದೆ. ಮೊದಲು ಅವರ ಸಿನಿಮಾಗಳಿಗೆ ಇಳೆಯರಾಜ ಸಾರ್ ಸಂಗೀತ ಸಂಯೋಜಿಸುತ್ತಿದ್ದರು. ಅವರು ನನ್ನ ಸ್ಟುಡಿಯೋಗೆ ಬಂದಾಗ ನಾನು ಸಂಯೋಜಿಸಿದ್ದ ಕೆಲವು ತುಣಕುಗಳನ್ನು ಅವರಿಗೆ ಕೇಳಿಸಿದೆ. ಅವರು ಒಂದಿಷ್ಟು ಟೀಪುಗಳನ್ನು ತೆಗೆದುಕೊಂಡು ಮಾಯವಾಗಿಬಿಟ್ಟರು. ಹಲವು ದಿನಗಳ ನಂತರ ನನಗೆ ಹಲವು ಸಂಯೋಜನೆಗಳು ಇಷ್ಟವಾದವು. ಭೇಟಿಯಾಗೋಣ. ನನಗೆ ಏನು ಬೇಕು ಅಂತ ಹೇಳುತ್ತೇನೆ ಅಂತ ಫೋನ್ ಮಾಡಿದರು.

ರೋಜಾ ಸಿನಿಮಾಕ್ಕೆ ಸಂಗೀತ ನಿರ್ದೇಶಿಸಲು ಹೇಳಿದರು. ಅದು ತುಂಬಾ ಹೆಸರು ಮಾಡಿತು. ಹಿಂದಿಯಲ್ಲೂ ಡಬ್ ಆಯಿತು. ಮಣಿ ಸಾರ್ ಇಷ್ಟವಾದರು. ಅವರು ಪ್ರಯೋಗ ಮಾಡೋದಕ್ಕೆ ಹಿಂದೆ ಮುಂದೆ ನೋಡೋದಿಲ್ಲ. ಹೊಸದನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ವಿಫಲವಾಗಬಹುದು. ಆದರೆ ಅಂಜುವುದಿಲ್ಲ. ಸಂಗೀತದಲ್ಲಿ ಪರಸ್ಪರ ವೈದೃಶ್ಯವಾಗಿರುವ ಮೂಡುಗಳನ್ನು ಒಟ್ಟಿಗೆ ತಂದುಬಿಡುತ್ತಾರೆ. ಅವರಿಗೆ ವಿಚಿತ್ರವಾದ ಆಲೋಚನೆಗಳು ಬರುತ್ತವೆ. ಮೊದಲು ನಿಮಗೆ ಅದು ಒಪ್ಪಿಗೆಯಾಗುವುದಿಲ್ಲ. ಅದರೆ ಕೊನೆಗೆ ಒಪ್ಪಿಕೊಳ್ಳುತ್ತೀರಿ.

ಒಮ್ಮೆ ತಿರುಡಾ ತಿರುಡಾ ಸಿನಿಮಾಕ್ಕೆ ಥಿ ಥಿ ಅಂತ ಒಂದು ಜೋಗುಳ ಕಂಪೋಸ್ ಮಾಡಿದ್ದೆ. ಅದಕ್ಕೆ ಯಾಕೆ ಬಿರುಗಾಳಿಯ ಶಬ್ದವನ್ನು ಸೇರಿಸಬಾರದು? ಅಂತ ಮಣಿರತ್ನಂ ಕೇಳಿದರು ಅದರಿಂದ ಮೆಲೊಡಿ ಹಾಳಾಗಿಬಿಡುತ್ತದೆ ಅಂದೆ. ಇಲ್ಲ ಪ್ರಯತ್ನಿಸು ಅಂದರು. ನಾನು ಸೈಕ್ಲೋನ್ ಎದ್ದು ಇಳಿದು ಹೋಗುವ ರೀತಿಯಲ್ಲಿ ಡ್ರಂ ಬಳಿಸಿದೆ. ಸಂಗೀತ ಇದ್ದಕ್ಕಿದ್ದ ಹಾಗೆ ಪ್ರಶಾಂತತೆಯನ್ನು ಪಡೆದುಕೊಂಡು ಮತ್ತೆ ಮೇಲಕ್ಕೆ ಏರಿತು. ಅದು ತುಂಬಾ ಪರಿಣಾಮಕಾರಿಯಾಗಿತ್ತು. ಮಣಿ ಸಾರ್ ಅವರಿಗೆ ಸಾಧ್ಯವಾದರೆ, ನನಗೆ ಸಾಧ್ಯವಾಗಬಹುದು ಅನ್ನಿಸಿತು. ನಾನು ಸಂಗೀತದಲ್ಲಿ ವೈದೃಶ್ಯದ ಶೈಲಿಗಳನ್ನು ಸೇರಿಸತೊಡಗಿದೆ.

ರೋಜಾದ ಯಶಸ್ಸು ನನಗೆ ಒಂದು ಸ್ಥಾನವನ್ನು ತಂದುಕೊಟ್ಟಿತು. ಜನ ನನ್ನನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದರು.

ಸಿನಿಮಾದಲ್ಲಿ ನಿರ್ದೇಶಕರು ಕೇವಲ ಸಂಗೀತವನ್ನಷ್ಟೇ ಗಮನಿಸುವುದಿಲ್ಲ. ಅದು ಕಥೆಯ ಜೊತೆ ಹೇಗೆ ಹೊಂದಿಕೊಳ್ಳುತ್ತದೆ, ದೃಶ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಜನ ಹೇಗೆ ಸ್ವೀಕರಿಸುತ್ತಾರೆ ಇವುಗಳನ್ನು ಕುರಿತೂ ಚಿಂತಿಸುತ್ತಾರೆ. ನೀವು ಅದ್ಭುತವಾದ ಸಂಗೀತವನ್ನು ಸಂಯೋಜಿಸಬಹುದು, ಆದರೆ ಆ ಚಿತ್ರವನ್ನದು ಶ್ರೀಮಂತಗೊಳಿಸದೇ ಹೋದರೆ ಅದು ನಿಷ್ಪ್ರಯೋಜಕ.

ಹೀಗೆ ತುಂಬಾ ಕಲ್ಪನಾಶೀಲರಾದ ಹಲವು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರಿಂದಲೇ ನನಗೆ ಕಟ್ಟುಪಾಡುಗಳನ್ನು ಮೀರಿಕೊಂಡು ಹೊಸದನ್ನು ಪ್ರಯತ್ನಿಸುವುದಕ್ಕೆ ಸಾಧ್ಯವಾಯಿತು.

1990ರಲ್ಲಿ ರಾಂಗೋಪಾಲ್ ವರ್ಮಾ ಅವರ ರಂಗೀಲಾ ಚಿತ್ರಕ್ಕೆ ಸಂಗೀತ ನಿರ್ದೇಶಿಸುವ ಅವಕಾಶ ಸಿಕ್ಕಿತು. ಯುವ ಪೀಳಿಗೆಯ ಜನ ಅಂತರರಾಷ್ಟ್ರೀಯ ಸಂಗೀತ ಕೇಳೋದಕ್ಕೆ ಶುರುಮಾಡಿದ್ದರು. ಅವರು ಹೊಸ ಧ್ವನಿಗಳನ್ನು ಬಯಸುತ್ತಿದ್ದರು. ರಂಗೀಲಾದ ಸಂಗೀತ ಹಿಂದಿ ಅಥವಾ ತಮಿಳು ಸಿನಿಮಾದ ಸಂಗೀತದ ಹಾಗೆ ಇರಲಿಲ್ಲ. ರಂಗೀಲಾ ಒಂದು ಟ್ರೆಂಡ್ ಹುಟ್ಟುಹಾಕಿತು. ಅಮೇಲೆ ಹಿಂದಿ ನಿರ್ಮಾಪಕರಿಂದ ಬೇಡಿಕೆ ಪ್ರಾರಂಭವಾಯಿತು. ನನಗೆ ಹಿಂದಿಯಾಗಲಿ, ಉರ್ದುವಾಗಲಿ ಬರುತ್ತಿರಲಿಲ್ಲ. ಉರ್ದು ಕಲಿಯುವ ಪ್ರಯತ್ನಮಾಡಿದೆ. ಸಲೀಸಾಗಿ ಮಾತನಾಡುವುದಕ್ಕೆ ಬರೊಲ್ಲ. ಆದರೆ ಚೆನ್ನಾಗಿ ಅರ್ಥ ಆಗುತ್ತೆ.

ಸಾಮಾನ್ಯವಾಗಿ ಎರಡು ರೀತಿಯ ನಿರ್ದೇಶಕರಿರುತ್ತಾರೆ. ಮೊದಲನೆಯವರು ಸಂಗೀತದ ಬಗ್ಗೆ ತುಂಬಾ ಪರ್ಟಿಕ್ಯುಲರ್ ಆಗಿರುತ್ತಾರೆ. ಅವರಿಗೆ ಹಾಡುಗಳು ಕಥೆಗೆ ಪೂರಕವಾಗಿರಬೇಕು. ಬಳಸುವ ವಾದ್ಯಗಳು ಕಥೆಗೆ ಹೊಂದಿಕೆಯಾಗುವಂತೆ ಇರಬೇಕು. ಅದು ಸಿನಿಮಾದ ಭಾವನೆಗಳನ್ನು ಪೋಷಿಸಬೇಕು ಮತ್ತು ಕಥೆಯನ್ನು ಮುಂದಕ್ಕೆ ಒಯ್ಯಬೇಕು.

ಎರಡನೆಯವರು ಕಮರ್ಷಿಯಲ್ ಸಿನಿಮಾ ನಿರ್ದೇಶಿಸುವವರು. ನಾಲ್ಕೈದು ಹಾಡುಗಳನ್ನು ಸಂಯೋಜಿಸಲು ಕೇಳುತ್ತಾರೆ. ಒಂದು ಐಟಂ ಸಾಂಗೂ ಇರಬೇಕು. ಅದಕ್ಕೂ ಕಥೆಗೂ ಸಂಬಂಧವಿರಬೇಕು ಅಂತೇನಿಲ್ಲ.

ಸಾಮಾನ್ಯವಾಗಿ ಸಂಗೀತ ಕಥೆಗೆ ಹೊಂದಿಕೊಂಡೇ ಹೋಗುತ್ತದೆ. ಕೆಲವೊಮ್ಮೆ ಕಥನಕ್ಕೆ ವ್ಯತಿರಿಕ್ತವಾಗಿ ಹೋಗುವುದೂ ಚೆನ್ನಾಗಿರುತ್ತದೆ. ಸಂಭಾಷಣೆಗಳನ್ನು ಈಗಾಗಲೇ ಹೇಳಿರುವುದನ್ನು ಹಾಡು ಮತ್ತೆ ಅದನ್ನೇ ಹೇಳಬೇಕಾಗಿಲ್ಲ. ರಂಗ್ ದೆ ಬಸಂತಿ ಸಿನಿಮಾದಲ್ಲಿ ಹೀಗೇ ಆಯಿತು. ಅಲ್ಲಿ ಮಾಧವನ್ ಒಬ್ಬ ಪೈಲಟ್. ಅವನು ವಿಮಾನ ಅಪಘಾತದಲ್ಲಿ ಸಾಯುತ್ತಾನೆ. ಅಮ್ಮನಿಗೆ ಮಗ ಸತ್ತಿದ್ದು ತಿಳಿಯುತ್ತೆ. ಆಗ ದುಃಖದ ಹಾಡನ್ನು ಹಾಡುವ ಬದಲು ಒಂದು ಜೋಗುಳವನ್ನು ಹಾಕೋಣ ಅಂತ ನಾನು ನಿರ್ದೇಶಕ ರಾಕೇಶ್ ಮೆಹ್ರಾಗೆ ಸೂಚಿಸಿದೆ. ಆ ಹಾಡಿನ ಮೂಲಕ ಮಗ ಅಮ್ಮನಿಗೆ ನಾನು ಚೆನ್ನಾಗಿದ್ದೇನೆ, ಶಾಂತಿಯಿಂದ ಇದ್ದೇನೆ ಮತ್ತು ಎಲ್ಲಾ ನೋವುಗಳಿಂದ ದೂರ ಇದ್ದೇನೆ ಅನ್ನೋ ಭರವಸೆ ಕೊಡುತ್ತಾನೆ. ಲುಕಾ ಚುಪ್ಪಿ ಸಂಯೋಜಿಸಿದೆ. ಜನ ಸಿನಿಮಾ ನೋಡುವಾಗ ಅತ್ತಿದ್ದಾರೆ. ಹಾಡು ದೃಶ್ಯದ ಮೂಡನ್ನೇ ಹೇಳಬೇಕಾಗಿಲ್ಲ.

ಭಾರತೀಯ ಸಿನಿಮಾದಲ್ಲಿ ಇನ್ನೊಂದು ರೂಢಿ ಇದೆ. ಒಂದು ಸಿನಿಮಾದಲ್ಲಿ ಒಬ್ಬ ನಟನ ಎಲ್ಲಾ ಹಾಡುಗಳನ್ನು ಒಬ್ಬನೇ ಗಾಯಕ ಹಾಡುತ್ತಾನೆ. ಶ್ರೋತೃಗಳೂ ಕೂಡ ಒಬ್ಬ ಗಾಯಕನ ಜೊತೆಯಲ್ಲಿ ಒಬ್ಬ ನಟನನ್ನು ಗುರುತಿಸುತ್ತಾರೆ. ಟಿ ಎಂ ಸೌಂದರರಾಜನ್ ಅಂದರೆ ಶಿವಾಜಿ ಗಣೇಶನ್ ದ್ವನಿ, ರಾಜಕಪೂರ್ ಅಂದರೆ ಮುಖೇಶ್ ಹೀಗೆ. ಯಾಕೆ ಒಬ್ಬರೇ ಗಾಯಕರಿಗೆ ಅಂಟಿಕೊಳ್ಳಬೇಕು ಅನ್ನಿಸಿತು. ಹೊಸಬರು ಬಂದರೆ ತಾಜಾತನ ಬರುತ್ತದೆ. ಬೇರೆಯವರಿಗೂ ಅವಕಾಶ ಸಿಗುತ್ತದೆ ಅನ್ನಿಸಿತು.

ಕಲಾವಿದನಿಗೆ ಒಳ್ಳೆ ಧ್ವನಿ ಇರಬೇಕು ಅಷ್ಟೆ. ಅವನು ತನ್ನದೇ ಆದ ಧ್ವನಿಯನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಧ್ವನಿ ಅನ್ನೋದು ಸುಗಂಧ ಇದ್ದ ಹಾಗೆ. ಎಲ್ಲರಿಗೂ ಹಿತ ನೀಡುತ್ತದೆ. ಪ್ರಾರಂಭದಲ್ಲಿ ಕಲಾವಿದನಿಗೆ ಕೆಲವು ಪ್ರಭಾವಗಳು ನೆರವಾಗಿರುತ್ತವೆ. ಕಲಾವಿದನಿಗೆ ನಂತರದ ದಿನಗಳಲ್ಲಿ ಅವುಗಳನ್ನು ಮೀರಿ ಬೆಳೆಯುವುದಕ್ಕೆ ಸಾಧ್ಯವಾಗಬೇಕು. ಯಾವಾಗಲೂ ಬೇರೆಯವರನ್ನು ನಕಲು ಮಾಡುವುದರಿಂದ ಒಬ್ಬ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಕಲಾವಿದನಲ್ಲಿ ಇರುವ ಸಂಗೀತಾತ್ಮಕ ಗುಣ, ದೇವರು ಅವರನ್ನು ಸೃಷ್ಟಿಸಿದ ರೀತಿ, ಅವರ ಅನುಭವ ಇವೆಲ್ಲಾ ಅವರಲ್ಲಿ ಸ್ವತಂತ್ರ ವ್ಯಕ್ತಿತ್ವ ಬೆಳೆಸುತ್ತದೆ. ಒಬ್ಬನ ಅಂತರಾಳಕ್ಕೂ ಧ್ವನಿಗೂ ಸಂಬಂಧ ಇದೆ ಅನ್ನಿಸುತ್ತದೆ. ಮುಖ ಮನುಷ್ಯನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಅಂತಾರಲ್ಲ, ಹಾಗೆ ಧ್ವನಿಯೂ ಗಾಯಕನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಬಹುಶಃ ಜನ ಅದನ್ನು ಗುರುತಿಸುತ್ತಾರೆ. ಗಾಯಕನಿಗೆ ಚೆನ್ನಾಗಿ ಹಾಡುವುದರ ಜೊತೆಗೆ ನಟನೆಯ ಹಾಗೂ ಸಂಯೋಜನೆಯ ಶಕ್ತಿಯೂ ಇದ್ದರೆ ಒಳ್ಳೆಯದು. ಪ್ರತಿಯೊಬ್ಬ ಗಾಯಕನಿಗೂ ತನ್ನ ಸ್ವಾಭಾವಿಕ ಸಾಮರ್ಥ್ಯಕ್ಕೆ ಪೋಷಕವಾಗಬಲ್ಲ ಇತರ ಸಾಮರ್ಥ್ಯಗಳೂ ಇರಬೇಕು.

ಸಿನಿಮಾ ಸಂಗೀತದಲ್ಲಿ ಸಂಗೀತ ಸಂಯೋಜಕ ಅಂದ ತಕ್ಷಣ, ಅವನು ಜಾನ್ ವಿಲಿಯಂಸ್, ಮೈಕೇಲ್ ಜಾಕ್ಸನ್ ಹಾಗೂ ತಾನ್‌ಸೇನ್ ಎಲ್ಲಾ ಆಗಿಬಿಡಬೇಕೆಂದು ಬಯಸುತ್ತಾರೆ. ಅಥವಾ ನನಗೆ ತೋರಿದ್ದು ಹಾಗೆ. ನಮ್ಮ ಸಿನಿಮಾ ಒಂದು ಸಂಗೀತಕ್ಕೆ ಅಂಟಿಕೊಂಡಿಲ್ಲ. ಒಂದೇ ಸಿನಿಮಾದಲ್ಲಿ ಹಲವು ರೀತಿಯ ಮೂಡುಗಳು ಬರುತ್ತವೆ. ಪ್ರೇಮ ಅದರ ಕೇಂದ್ರವಾಗಿರಬಹುದು. ಎಲ್ಲೋ ಹೊಡೆದಾಟದ ದೃಶ್ಯ ಬರುತ್ತದೆ. ಸ್ವಲ್ಪ ಹೊತ್ತಿಗೆ ಅದು ತಮಾಷೆಗೆ ಬದಲಾಗುತ್ತದೆ. ಜೊತೆಗೆ ಭಾರತೀಯರು ಸಂಗೀತಕ್ಕೆ ಬಂದಾಗ ಅವರು ಯಾವುದನ್ನು ಇಷ್ಟಪಡುತ್ತಾರೆ ಅಂತ ಒಟ್ಟಾರೆಯಾಗಿ ಹೇಳುವುದಕ್ಕೆ ಆಗುವುದಿಲ್ಲ. ಇಲ್ಲಿ ಸಂಗೀತದ ಅಭಿರುಚಿ ಅನ್ನೋದು ತುಂಬಾ ವಿಶಾಲವಾದದ್ದು. ತಮಿಳಿನ ಪ್ರೇಕ್ಷಕರಿಗೆ ಇಂದಿಗೂ ಶಾಸ್ತ್ರೀಯ ಸಂಗೀತವನ್ನು ಆಧರಿಸಿದ ಸಂಗೀತ ಇಷ್ಟ ಆಗುತ್ತದೆ. ಉಳಿದವರಿಗೆ ಆಧುನಿಕ ಅಥವಾ ಪ್ರಯೋಗತ್ಮಕ ಸಂಗೀತ ಬೇಕು.

ನಮ್ಮಲ್ಲಿ ಹಲವು ಸಂಸ್ಕೃತಿಗಳ ಪ್ರಭಾವ ಇದೆ. ಬ್ರಿಟಿಷರು, ಮೊಘಲರು ಈಗ ಪಾಶ್ಚಾತ್ಯರು - ಹೀಗೆ ಹಲವು ಸಂಗೀತದ ಪ್ರಭಾವ ನಮ್ಮ ಮೇಲಿವೆ. ಇವೆಲ್ಲಾ ಪರಸ್ಪರ ಬೆರೆಯುತ್ತಲೇ ಇರುತ್ತವೆ. ಹಾಗಾಗಿ ಫ್ಯೂಷನ್ ಸಂಗೀತ ಇಂದು ಜನಪ್ರಿಯವಾಗಿದೆ.

ಹೀಗೆ ನೂರಾರು ಭಾವನೆಗಳಿಗೆ ಹೊಂದಿಕೊಳ್ಳುವಂತೆ, ವಿಭಿನ್ನ ಬಗೆಯ ಸಂಗೀತವನ್ನು ಸಂಯೋಜಿಸಬೇಕೆಂಬ ನಿರೀಕ್ಷೆ ಇರುತ್ತದೆ. ಅದು ಕೆಟ್ಟದಲ್ಲ. ಯಾಕೆಂದರೆ ಅದು ಸಂಗೀತ ಸಂಯೋಜಕನ ಸಂಗೀತಾತ್ಮಕ ಪರಿಧಿಯನ್ನು ವಿಸ್ತರಿಸುತ್ತದೆ. ಒಟ್ಟಲ್ಲಿ ಒಂದು ನಿರ್ದಿಷ್ಟ ಸಿನಿಮಾಕ್ಕೆ ಸರಿಹೋಗುವಂತಹ ಸಂಗೀತವನ್ನು ನಾವು ರಚಿಸಬೇಕು ಅಷ್ಟೆ.

ಸಂಗೀತವನ್ನು ಜನ ವಿಭಿನ್ನ ಮೂಡುಗಳಲ್ಲಿ ಅನುಭವಿಸುತ್ತಿರುತ್ತಾರೆ. ಒಂದು ಸಂಗೀತ ನಿಮ್ಮಲ್ಲಿ ಹಲವು ರೀತಿಯ ಭಾವನೆಗಳನ್ನು, ಕಲ್ಪನೆಗಳನ್ನು ಸೃಷ್ಟಿಸಿರುತ್ತದೆ. ಸಂಗೀತ ಕೇಳುತ್ತಿರುವಾಗ ನಿಮ್ಮ ಕಲ್ಪನೆಗಳಿಗೆ ಮಿತಿಯೇ ಇರುವುದಿಲ್ಲ. ಅದಕ್ಕೆ ಬಜೆಟ್ ಇಲ್ಲ. ಸಿನಿಮಾಕ್ಕೆ ಇದೆ! ಸಿನಿಮಾದಲ್ಲಿ ಆ ಹಾಡಿಗೆ, ಸಂಗೀತಕ್ಕೆ ಸಂಬಂಧಿಸಿದ ದೃಶ್ಯ ಅದಕ್ಕೆ ಒಂದು ಅರ್ಥ ಕೊಟ್ಟುಬಿಡುತ್ತದೆ.

ನನಗೆ ಸಿನಿಮಾದ ಕಥೆ ಮುಖ್ಯ. ಮುಖ್ಯವಾಗಿ ಅದು ನನ್ನ ಗಮನದಲ್ಲಿರುತ್ತದೆ. ನಿರ್ದೇಶಕನ ಅವಶ್ಯಕತೆಯನ್ನು ಹಾಗೂ ಸಿನಿಮಾದ ವಿವರಗಳನ್ನು ತಿಳಿದುಕೊಳ್ಳುತ್ತೇನೆ. ಅದಕ್ಕೆ ಹೊಂದುವಂತೆ ಸಂಗೀತ ಸಂಯೋಜಿಸುತ್ತೇನೆ. ನಂತರ ಅದಕ್ಕೆ ಇತ್ತೀಚಿನದನ್ನು, ಹೊಸದನ್ನು ಒಂದಿಷ್ಟು ಸೇರಿಸುತ್ತೇನೆ.

ಮೊದಲು ಸಂಗೀತ ಸಂಯೋಜಿಸುವುದಕ್ಕೆ ಪ್ರಾರಂಭಿಸಿದಾಗ ನಿರ್ದೇಶಕರ ಸೂಚನೆಗಳಿಗೆ ಬದ್ಧನಾಗಿರುತ್ತಿದ್ದೆ. ಬೆಳೆದಂತೆ ನನಗೆ ಏನೇನೋ ಮಾಡಬೇಕು ಅನ್ನಿಸತೊಡಗಿತು. ಯಾವುದೇ ಕಾಲಕ್ಕೂ ಪ್ರಸ್ತುತವಾಗಬಹುದುದಾದ ಸಂಗೀತವನ್ನು ರಚಿಸಬಹುದು ಅನ್ನಿಸಿತು.

ಸಂಗೀತ ಎಲ್ಲರೂ ಊಹಿಸಿಬಿಡಬಹುದಾದ ರೀತಿಯಲ್ಲಿ ಇರಬಾರದು. ಜನಕ್ಕೆ ಹೊಸ ದಿಕ್ಕನ್ನು ನೀಡಬೇಕು. ಜನರಿಗೆ ಹೊಸ ದನಿ ಬೇಕು. ಆದರೆ ಹಾಗೆ ಹೊಸ ಧ್ವನಿ ಕೊಟ್ಟಾಗ ಜನ ಇನ್ನೂ ಹೊಸದನ್ನು ಬಯಸುತ್ತಾರೆ. ಮುಂದೆ ಹೋಗು, ಹೋಗು ಅನ್ನುತ್ತಾರೆ. ನನಗೆ ಅಲ್ಲೇ ಒಂದಿಷ್ಟು ಹೊತ್ತು ಇರಬೇಕು ಅಥವಾ ಹಿಂದಿನ ದನಿಗೆ ಮರಳಬೇಕು ಅನ್ನಿಸುತ್ತಿರುತ್ತದೆ. ಸವಾಲುಗಳು ಒಳ್ಳೆಯವೆ. ಅವು ನಿಮ್ಮನ್ನು ಸದಾ ಎಚ್ಚರದಿಂದ ಇರುವಂತೆ ಮಾಡುತ್ತದೆ.

ಸಾಂಪ್ರದಾಯಿಕವಾಗಿ ಒಂದೊಂದು ಭಾವನೆಗಳಿಗೆ ಒಂದೊಂದು ವಾದ್ಯವನ್ನು ಬಳಸುವ ವಾಡಿಕೆ ಇದೆ. ದುಃಖದ ದೃಶ್ಯ ಬಂದರೆ ಷಹನಾಯಿ, ಖುಷಿ ಬಂದರೆ ಸಿತಾರಿನ ತರನಮ್‌ಗಳು ಹೀಗೆ. ಇಂತಹ ರೂಢಿಗತ ಮಾದರಿಗಳನ್ನು ಒಡೆಯುವುದು ಒಳ್ಳೆಯದು. ಅನಿವಾರ್ಯ ಅಲ್ಲದೇ ಹೋದರೆ ನನಗೆ ಅವವೇ ವಾದ್ಯಗಳನ್ನು ಮತ್ತೆ ಬಳಸುವುದು ಇಷ್ಟವಿಲ್ಲ.

ಸಾಮಾನ್ಯವಾಗಿ ಭಾರತದಲ್ಲಿ ಸಂಗೀತ ಸಂಯೋಜಕನಿಗೆ ಸಂಕಲನವಾದ ನಂತರದ ಫೈನಲ್ ಕಟ್ ನೀಡುತ್ತಾರೆ. ಆದರೆ ನಾನು ಅಂತಿಮಗೊಳ್ಳದ ಕರಡು ಆವೃತ್ತಿಯನ್ನು ನೋಡುತ್ತೇನೆ. ಆಗ ಅಂತಿಮ ಸಂಕಲನವನ್ನು ಪ್ರಭಾವಿಸಬಹುದಾದ ಸಂಗೀತವನ್ನು ಸಂಯೋಜಿಸಲು ಪ್ರಯತ್ನಿಸಬಹುದು.

ಎಷ್ಟೋ ಬಾರಿ ನನ್ನಷ್ಟಕ್ಕೆ ನಾನು ಸಂಗೀತ ರಚಿಸುತ್ತಿರುತ್ತೇನೆ. ಸಿನಿಮಾದ ಒತ್ತಡ ಅಥವಾ ಬಂಧವಿಲ್ಲದೆ ನನ್ನಷ್ಟಕ್ಕೆ ರಚಿಸೋದು ಒಂದು ರೀತಿ ವಿಮೋಚನೆಯಾಗಿ ತೋರುತ್ತದೆ. ಯಾರೂ ಬಂದೂಕ ಹಿಡಿದುಕೊಂಡು ಒಂದು ಹಿಟ್ ಸಾಂಗ್ ರಚಿಸು ಅಂತ ಹೇಳುತ್ತಿರುವುದಿಲ್ಲ. ಹಾಗೆ ನಿರ್ದೇಶನವಿಲ್ಲದೆ ರಚಿಸುತ್ತಿರುವಾಗ ಅದು ಹೀಗೇ ಆಗುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ನೀವು ಹೊಸ, ಈವರೆಗೂ ಪ್ರಯತ್ನಿಸದ ಹಾದಿಯಲ್ಲಿ ಹೋಗುತ್ತಿರುತ್ತೀರಿ. ಯಾವುದೋ ಒಂದು ಪದ್ಯವೋ, ಪ್ರಕೃತಿಯ ಒಂದು ದೃಶ್ಯವೋ ನಿಮ್ಮ ಪ್ರೇರಣೆಯಾಗಬಹುದು. ಕಲ್ಪನೆ ಸ್ವಚ್ಛಂದವಾಗಿ ಚಲಿಸುತ್ತಿರುತ್ತದೆ. ಮೆಲೊಡಿಗೊಂದು ಆಧ್ಯಾತ್ಮಿಕ ಸ್ಪರ್ಷ ಸಿಕ್ಕಿಬಿಡಬಹುದು. ಅದರದೇ ಆದ ವ್ಯಕ್ತಿತ್ವ ಪಡೆದುಕೊಂಡು ಮೇಲ್‌ಸ್ತರಕ್ಕೆ ಹೋಗಿಬಿಡಬಹುದು. ಕೆಲವೊಮ್ಮೆ ಸಂಗೀತವನ್ನು ನಾನು ರಚಿಸುತ್ತಿಲ್ಲ ಅದು ನನ್ನ ಮೂಲಕ ಹರಿಯುತ್ತದೆ ಅಂತಲೇ ತೋರುತ್ತದೆ.

ಕೆಲವೊಮ್ಮೆ ಟ್ಯೂನ್ ದಕ್ಕುವುದೇ ಇಲ್ಲ. ಆಗ ತಮಿಳು ಕವಿ ಸುಬ್ರಮಣ್ಯ ಭಾರತೀಯವರ ಪದ್ಯಗಳಿಗೆ ಶರಣಾಗುತ್ತೇನೆ. ಅಲ್ಲಿಂದ ಸ್ಪೂರ್ತಿ ಪಡೆದುಕೊಳ್ಳುತ್ತೇನೆ. ಹಿಂದಿ ಅಥವಾ ಉರ್ದು ಹಾಡುಗಳನ್ನು ರಚಿಸುವಾಗ ಸ್ಟ್ರಕ್ ಆದರೆ ಅಮೀರ್ ಖುಸ್ರೊ ಅಥವಾ ಬುಲ್ಲೆ ಶಾ ಅವರ ಕವಿತೆಗಳನ್ನು ಬಳಸುತ್ತೇನೆ. ನಂತರ ಸಿನಿಮಾಕ್ಕೆ ಬರೆದ ಹಾಡನ್ನು ಅಲ್ಲಿ ಹಾಕುತ್ತೇನೆ. ಚೆಯ್ಯ ಚೆಯ್ಯ ಬುಲ್ಲೆ ಶಾ ಅವರ ರಚನೆಯನ್ನು ಆಧರಿಸಿದ್ದು. ಆಧ್ಯಾತ್ಮಿಕ ಭಾವನೆ ಹಾಗೂ ಗುಣ ಇರೊ ಹಾಡಿನಿಂದ ಸ್ಪೂರ್ತಿ ಪಡೆದುಕೊಂಡಿದ್ದರೆ, ಸಾಹಿತ್ಯ ಬದಲಾದಾಗಲೂ ಮೆಲೊಡಿಯಲ್ಲಿ ಆ ಆಧ್ಯಾತ್ಮಿಕತೆ ಉಳಿಯುತ್ತದೆ. ಒಳ್ಳೆ ಸಂಗೀತಗಾರ ಆಗಬೇಕಾದರೆ ನೀವು ಒಳ್ಳೆಯ ಮನುಷ್ಯನಾಗಬೇಕು.

ನಿಜ, ಶುದ್ಧವಾದ ಯಾವುದೇ ಶೃಂಗಾರವೂ ಇಲ್ಲದ ಮೆಲೊಡಿ ಸಾಕು. ಗಿಟಾರ್ ಹಿಡಿದುಕೊಂಡು ಅಥವಾ ಪಿಯಾನೊ ಮುಂದೆ ಕೂತು ಒಂದು ಹಾಡನ್ನು ಹಾಡಬಹುದು. ಅದು ಸಾಕು ಅಂತಲೇ ನನ್ನ ಅಭಿಪ್ರಾಯ. ಆದರೆ ಮೂಲ ಮೆಲೊಡಿಯನ್ನು ಬಿಟ್ಟುಕೊಡದೆ ಅದಕ್ಕೆ ಹಲವು ಧ್ವನಿಗಳನ್ನೂ ಸೇರಿಸಬಹುದು. ಅದಕ್ಕೆ ಒಂದು ಲಯವನ್ನು ಸೇರಿಸಿದರೆ ಅದು ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಮೆಲೊಡಿ ಹಾಗೂ ಹಾರ್ಮೊನಿಯೇ ನನ್ನ ಕೃತಿಯಲ್ಲಿ ಎಲ್ಲವೂ ಆಗಿರುವುದರಿಂದ ವಾದ್ಯಗಳು ಹಾಗೂ ವಿಭಿನ್ನ ದನಿಗಳನ್ನು ಬಳಸಿ ಅದಕ್ಕೆ ಹೆಚ್ಚಿನ ಟೆಕ್‌ಶ್ಚರ್ ಸೇರಿಸಬೇಕಾಗುತ್ತದೆ. ಅದೊಂದು ರೀತಿ ಶ್ರೋತೃಗಳನ್ನು ಸೆಡ್ಯೂಸ್ ಮಾಡಿದ ಹಾಗೆ. ಬೇರೆ ಏನನ್ನೂ ಕೇಳಬೇಡ. ಇದನ್ನೇ ಕೇಳು ಅಂತ.

ಹಲವು ಪದರಗಳನ್ನು ಸೇರಿಸುತ್ತಾ ಹೋಗುವುದು ನನ್ನ ಶೈಲಿಯಾಗಿದೆ. ಅದಕ್ಕೆ ನನ್ನ ಮಿತಿಯೇ ಕಾರಣವಿರಬಹುದು. ನನಗೆ ಪೂರ್ಣಪ್ರಮಾಣದ ಆರ್ಕೆಷ್ಟ್ರಾ ಬಳಸೋದು ತುಂಬಾ ದುಬಾರಿಯಾಗಿತ್ತು. ಅದು ಸಾಧ್ಯವಾಗಿದ್ದರೆ ಹೆಚ್ಚಿನ ವಾದ್ಯಗಳನ್ನು ಮತ್ತು ಸಂಗೀತಗಾರರನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿತ್ತು. ಆದರೆ ನನ್ನ ಮನೆಯ ಸ್ಟುಡಿಯೊದಲ್ಲಿ ನನ್ನ ಸಂಗೀತ ಸೃಷ್ಟಿಯಾಗುತ್ತಿತ್ತು. ಅಲ್ಲಿರುವುದನ್ನು ಬಳಸಿಕೊಂಡೇ ನಾನು ಸಂಯೋಜಿಸಬೇಕಿತ್ತು. ಮುದ್ರಿಸಿಕೊಂಡಿದ್ದ ಸಾಮಗ್ರಿಗಳು ಮುಗಿದು ಹೋದಾಗ ಇನ್ಯಾವುದೊ ಧ್ವನಿಯನ್ನು ಸೇರಿಸುವುದು ಅನಿವಾರ್ಯವಾಗಿತ್ತು. ಈಗ ಅದೇ ಒಂದು ಶೈಲಿಯಾಗಿದೆ. ಜನ ಅದನ್ನು ಒಪ್ಪಿಕೊಂಡಿದ್ದಾರೆ.

ಹೊಸ ಹೊಸ ಪ್ರಭಾವಗಳು, ಅವಕಾಶಗಳು ನಿಮ್ಮ ಸಂಗೀತವನ್ನು ಹಿಗ್ಗಿಸುತ್ತದೆ. ಹಾಲಿವುಡ್ ಸಿನಿಮಾ, ಇರಾನಿಯನ್ ಸಿನಿಮಾ, ಇತ್ಯಾದಿ ಹಲವು ಬಗೆಯ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಶೇಖರ್ ಕಪೂರ್ ಜೊತೆ ಬಾಂಬೆ ಡ್ರೀಮ್ಸ್‌ನಲ್ಲಿ ಮಾಡಿದೆ. ಅವರು ಪಾಶ್ಚಾತ್ಯ ಸಿನಿಮಾ ಕ್ಷೇತ್ರಕ್ಕೆ ನನ್ನನ್ನು ಪರಿಚಯಿಸಿದರು. ಬಾಂಬೆ ಡ್ರೀಮ್ಸ್ ನಾಟಕದಲ್ಲಿ ಅಂಡ್ರ್ಯೂ ಲಾಯ್ಡ್ ವೆಬ್ಬರ್ ಜೊತೆ ಕೆಲಸ ಮಾಡಿದೆ. ಅದು ಪಾಶ್ಚಾತ್ಯರು ನನ್ನ ಸಂಗೀತವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ, ನನ್ನ ಮಿತಿಗಳೇನು ಅನ್ನೋದನ್ನು ಅರ್ಥಮಾಡಿಕೊಳ್ಳೋಕ್ಕೆ ನೆರವಾಯಿತು.

ನಂತರ ಸ್ಲಂ ಡಾಗ್ ಮಿಲಿಯನೇರ್ ಸಿನಿಮಾದಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ಸಿಕ್ಕಿತು. ಅದು ನನಗೆ ಸಾಕಷ್ಟು ಹೆಸರು ಮತ್ತು ಅವಕಾಶಗಳನ್ನು ತಂದುಕೊಟ್ಟಿತು. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂತು. ಆಸ್ಕರ್ ಪ್ರಶಸ್ತಿಗಳು ನನ್ನ ಸಂಗೀತ ಪ್ರಯಾಣದಲ್ಲಿ ನನಗೆ ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿತು.

ಲಾರ್ಡ ಆಫ್ ದಿ ರಿಂಗ್ಸ್ ಸ್ಟೇಜ್ ಪ್ರೊಡಕ್ಷನ್ನಿನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅದು ತುಂಬಾ ದುಬಾರಿಯಾದ ಪ್ರಾಜೆಕ್ಟ್. ಸುಮಾರು 25 ಮಿಲಿಯನ್ ಕೆನೇಡಿಯನ್ ಡಾಲರ್ ಬಜೆಟ್. ಅದರಲ್ಲಿ ಕೆವಿನ್ ವ್ಯಾಲೇಸ್ ಜೊತೆ ಕೆಲಸ ಮಾಡೋದು ದೊಡ್ಡ ಸವಾಲಿನ ಕೆಲಸವಾಗಿತ್ತು. ನನಗೆ ತುಂಬಾ ಗಾಬರಿಯಾಗಿತ್ತು. ಸ್ಟೇಜ್ ಪ್ರೊಡಕ್ಷನಿನಲ್ಲಿ ಕೆಲಸ ಮಾಡೋದು ಅಂದರೆ ಇನ್ನೊಂದು ಜಗತ್ತಿಗೆ ಪ್ರಯಾಣ ಮಾಡಿದ ಹಾಗೆ. ಅದು ಗುರಿ ತಲುಪೋದಕ್ಕಿಂತ ಒಂದು ರೀತಿಯ ಹುಡುಕಾಟ. ಕಪಲ್ಸ್ ರಿಟ್ರೀಟ್ ಸಿನಿಮಾದಲ್ಲಿ ಕೆಲಸ ಮಾಡುವಾಗ ಲಾಸ್ ಅಂಜಲಿಸ್‌ನಲ್ಲೆ ಇದ್ದುಕೊಂಡು ಕೆಲಸ ಮಾಡೋದು ಅನಿವಾರ್ಯವಾಯಿತು. ಹಾಗಾಗಿ ಅಲ್ಲೇ ಒಂದು ಮನೆ ಮಾಡಿಕೊಂಡೆ.

ಊರೂರು ಸುತ್ತುತ್ತಿರುತ್ತೇನೆ. ಆದರೆ ಆಶ್ಚರ್ಯ ಅಂದರೆ ನನಗೆ ನನ್ನ ಮನೆಯ ಕನಸು ಬಿದ್ದಾಗಲೆಲ್ಲಾ ಅದರಲ್ಲಿ ಕಾಣುವುದು ನಾನು ಬೆಳೆದ ಹಬೀಬುಲ್ಲಾ ರಸ್ತೆಯ ಮನೆ. ಭಾರತೀಯ ಸಂಗೀತದ ಕಲೆಯನ್ನು ಗೌರವಿಸುತ್ತ, ಹಾಗೇ ಬಲಗೊಳಿಸುತ್ತಲೇ ಭಾರತೀಯ ಸಂಗೀತಗಾರರಲ್ಲಿ ಪಾಶ್ವಾತ್ಯ ಸಂಗೀತ ಹಾಗೂ ತಂತ್ರಜ್ಞಾನದ ಅರಿವನ್ನು ಹೆಚ್ಚಿಸುವ ಉದ್ದೇಶದಿಂದ ಕೆ ಎಂ ಮ್ಯೂಸಿಕ್ ಕನ್ಸರ್ವೇಟರಿ ಪ್ರಾರಂಭಿಸಿದೆ. ತುಂಬಾ ಒಳ್ಳೆಯ ಗುರುಗಳಿದ್ದಾರೆ. ಒಳ್ಳೆಯ ವಿದ್ಯಾರ್ಥಿಗಳು ತಯಾರಾಗುತ್ತಿದ್ದಾರೆ.

ಹೀಗೆ ರೆಹಮಾನ್ ಅವರ ಬದುಕು ಅನಾವರಣಗೊಳ್ಳುತ್ತಾ ಹೋಗುತ್ತದೆ. ಇದೊಂದು ನಿರ್ದಿಷ್ಟ ಕಾಲಾನುಕ್ರಮಣಿಯಲ್ಲಿ ಸಾಗುವುದಿಲ್ಲ. ಹಿಂದೆ ಮುಂದೆ ಮಾತು ಹೋದ ಹಾದಿಯಲ್ಲಿ ಹೋಗುತ್ತಿರುತ್ತದೆ. ಅವರ ಬದುಕಿನ ವಿಭಿನ್ನ ಮಜಲುಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ರೆಹಮಾನ್ ಅವರಿಗೆ ಎಲ್ಲಾ ರೀತಿಯ ಸಂಗೀತದಲ್ಲೂ ಪರಿಶ್ರಮವಿತ್ತು. ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಪಾಶ್ಚಾತ್ಯ ಸಂಗೀತ ಎಲ್ಲವನ್ನೂ ಗುರುಮುಖೇನ ಕಲಿತಿದ್ದರು. ಸೂಫಿ ದರ್ಶನದಲ್ಲಿ ಅಪಾರ ನಂಬಿಕೆ ಇರುವ ರೆಹಮಾನ್ ಒಂದು ರೀತಿಯಲ್ಲಿ ಆಧ್ಯಾತ್ಮಿಕ ಜೀವಿ. ಭಗವದ್ಗೀತೆಯ ನಿಷ್ಕಾಮ ಕರ್ಮದ ಬಗ್ಗೆ ಮಾತನಾಡುತ್ತಲೇ ಮೈಕಲೇಂಜಲೋ ಉದಾಹರಣೆಯನ್ನು ನೆನೆದುಕೊಳ್ಳುತ್ತಾರೆ. ಒಂದು ಛಾಪೆಲ್ಲಿನ ಹಿಂಬಾಗದಲ್ಲಿ ಮೈಕಲೇಂಜಲೋ ಒಂದು ಚಿತ್ರ ರಚಿಸುತ್ತಿರುತ್ತಾನೆ. ಆಗ ಯಾರು ನೋಡದ ಕಡೆ ಯಾಕೆ ಚಿತ್ರ ರಚಿಸುತ್ತಿದ್ದೀಯೆ? ಎಂದು ಯಾರೊ ಕೇಳಿದಾಗ ಮೈಕಲೇಂಜಲೋ ನನಗೆ ಜನರ ಮೆಚ್ಚುಗೆ ಬೇಕಾಗಿಲ್ಲ. ದೇವರ ಮೆಚ್ಚುಗೆ ಬೇಕು ಅನ್ನುತ್ತಾನೆ. ಇದನ್ನು ಹಲವು ಕಡೆ ರೆಹಮಾನ್ ಉಲ್ಲೇಖಿಸುತ್ತಾರೆ. ಸಂಗೀತಕ್ಕೆ ಜನರನ್ನು ಒಂದು ಮಾಡುವ ಶಕ್ತಿ ಇದೆ ಎಂದು ರೆಹಮಾನ್ ಅಚಲವಾಗಿ ನಂಬಿರುವಂತೆ ಕಾಣುತ್ತದೆ. ಸಂಗೀತ, ತಂತ್ರಜ್ಞಾನ ಎಲ್ಲವನ್ನು ಒಟ್ಟಿಗೆ ತಂದು ತಮ್ಮದೇ ಆದ ಧ್ವನಿಯನ್ನು, ಇಂಪನ್ನು ಕಂಡುಕೊಳ್ಳುತ್ತಾ ಸಾಗುತ್ತಿರುವ ರೆಹಮಾನ್ ತಮಗೆ ಬೇಕಾದ, ಆಳವಾದ, ಬಹುಕಾಲ ಉಳಿಯಬಲ್ಲ ಸಂಗೀತವನ್ನು ಕಂಡುಕೊಳ್ಳಲು ಸದಾ ಹಾತೊರೆಯುತ್ತಾ ಇರುತ್ತಾರೆ. ರೆಹಮಾನ್ ಅವರ ಸಂಗೀತವನ್ನು, ಅವರ ವ್ಯಕ್ತಿತ್ವವನ್ನು, ಸಿನಿಮಾ ಸಂಗೀತ ಇಂದು ಹಿಡಿದಿರುವ ದಾರಿಯನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಉಪಯುಕ್ತ ಪುಸ್ತಕ.

ಈ ಅಂಕಣದ ಹಿಂದಿನ ಬರಹಗಳು

ಒಂದು ಸಂಜೆಗಣ್ಣಿನ ಹಿನ್ನೋಟ...!

ಮೃದಂಗದ ಜಾಡು ಹಿಡಿದು ಹೊರಟ 'ವರ್ಗೀಕರಣ' ಮೀರಿದ ಕೃತಿ

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...