ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳಿಂದ ಮನೆಮಾತಾದ ತರಾಸು ಅವರ ಕುರಿತ ಒಳನೋಟ


ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳಿಂದ ಮನೆಮಾತಾದ ತರಾಸು ಅವರ ಕುರಿತ ಒಳನೋಟ.

ಎಷ್ಟು ಮಾತಾಡ್ತಿಯ ಮಾತಾಡೋದು ಬಿಟ್ಟು ಬರೆದು ತೋರಿಸು ಅಂತ ದೊಡ್ಡಪ್ಪ ಟಿ. ಎಸ್‌. ವೆಂಕಣ್ಣಯ್ಯನವರ ಸವಾಲು ಸ್ವೀಕರಿಸಿ ಕಥೆ ಬರೆದ ಹುಡುಗ ಮುಂದೆ ದೊಡ್ಡ ಕಾದಂಬರಿಕಾರರಾದರು. ಅವರೇ ತರಾಸು ಅಂದ್ರೆ ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್.

ತರಾಸು ಅವರದ್ದು ತೆಲುಗು ಮೂಲ. ಸುಬ್ಬರಾವ್ ಜನಿಸಿದ್ದು ದಾವಣಗೆರೆ ಜಿಲ್ಲೆಯ ಮಲೆಬೆನ್ನುರಿನಲ್ಲಿ. ಆದರೆ ಅವರ ಹೆಸರಿನ ಜೊತೆಯಲ್ಲಿ ತಳುಕು ಹಾಕಿಕೊಂಡಿರುವ ತಳುಕು ಎಂಬ ಊರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿದೆ. ಇದು ಅವರ ಪೂರ್ವಜರು ಆಂಧ್ರದಿಂದ ವಲಸೆ ಬಂದು ನೆಲೆಸಿದ ಸ್ಥಳ.

ಸುಬ್ಬರಾವ್‌ ಅವರು ಓದಿದ್ದು ಇಂಟರ್‌ಮೀಡಿಯೇಟ್‌ ವರೆಗೆ ಮಾತ್ರ. ನಂತರ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಮನೆಯಲ್ಲಿ ಸಾಹಿತ್ತಿಕ ಪರಿಸರ ಇದ್ದಿದ್ದರಿಂದ ಇವರಿಗೂ ಬರವಣಿಗೆ ಕೈ ಹಿಡಿಯಿತು. ಕನ್ನಡದ ಅಶ್ವಿನಿ ದೇವತೆಗಳು ಎಂದು ಕರೆಸಿಕೊಳ್ಳುವ ಟಿ. ಎಸ್‌. ವೆಂಕಣ್ಣಯ್ಯ ಮತ್ತು ತ. ಸು. ಶಾಮರಾಯರು ತರಾಸು ಅವರ ತಂದೆಯ ಸೋದರರು.

ತರಾಸು ತಮ್ಮ ಬರವಣಿಗೆಗೆ ಗುರುಗಳಾಗಿ ಅನಾಕೃ ಅವರನ್ನು ಸ್ವೀಕರಿಸಿದ್ದಾರೆ. ಗುರುವಿನಂತೆ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕಾದಂಬರಿಗಳ ಕೊಡುಗೆಯನ್ನು ನೀಡಿದ್ದಾರೆ.

ತರಾಸು ಅವರು ‘ರೂಪಸಿ’ ಎಂಬ ಕಥಾ ಸಂಕಲನದಿಂದ ತಮ್ಮ ಸಾಹಿತ್ಯ ಪಯಣ ಆರಂಭಿಸಿದರು. ‘ಮನೆಗೆ ಬಂದ ಮಹಾಲಕ್ಷ್ಮಿ’ ಇವರ ಮೊದಲ ಕಾದಂಬರಿ. ಕಾದಂಬರಿ ಸಾಹಿತ್ಯದ ಮೂಲಕ ಕನ್ನಡದಲ್ಲಿ ಓದುವ ವರ್ಗವನ್ನು ಸೃಷ್ಟಿಸಿದ ಕೀರ್ತಿ ಶಿವರಾಮ ಕಾರಂತ, ಅನಕೃ ಹಾಗೂ ತರಾಸು ಅವರಿಗೆ ಸಲ್ಲುತ್ತದೆ.

ತರಾಸು ತಮ್ಮ ಜೀವಿತಾವಧಿಯಲ್ಲಿ 68 ಕಾದಂಬರಿ, ಮೂರು ಕಥಾ ಸಂಕಲನ, ನಾಲ್ಕು ನಾಟಕ ಇವರ ಸೃಜನಶೀಲ ಸಾಹಿತ್ಯ ಕೃತಿಗಳಾಗಿದೆ. ಅನಕೃ ಅವರ ಜೀವನ ಚರಿತ್ರೆಯನ್ನು ಒಳಗೊಂಡಂತೆ ಆರು ಜೀವನ ಚರಿತ್ರೆ, ಹಲವು ಅನುವಾದ, ಸಂಪಾದನಾ ಕೃತಿಗಳು ಅವರ ಸೃಜನೇತರ ಸಾಹಿತ್ಯದ ಕೃಷಿ.

ಸಾಹಿತ್ಯ, ಸಿನಿಮಾ, ಪತ್ರಿಕೋದ್ಯಮ ಹೀಗೆ ಬಹುಮುಖಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ತರಾಸು ಹಲವು ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. ‘ದುರ್ಗಾಸ್ತಮಾನ’ ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ‘ಯಕ್ಷಪ್ರಶ್ನೆ’ ಕಾದಂಬರಿಗೆ ಮೈಸೂರು ಸಾಹಿತ್ಯ ಅಕಾಡೆಮಿ, ‘ಶಿಲ್ಪಶ್ರೀ’ ಕಾದಂಬರಿಗೆ ಗೊಮ್ಮಟೇಶ್ವರ ಪುರಸ್ಕಾರ ಸಂದಿವೆ. ಹಿಂದಿಯ ‘ಬಸಂತ ಬಹರ್‌’ ಕನ್ನಡದ ‘ಹಂಸಗೀತೆ’, ‘ಚಂದವಳ್ಳಿಯತೋಟ’ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇಷ್ಟೆಲ್ಲಾ ಮಹತ್ತರ ಕೊಡುಗೆ ನೀಡಿದ ಮಹಾನ್‌ ಚೈತನ್ಯ ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ ಏಪ್ರಿಲ್ 10, 1984 ರಂದು ಹೃದಯಾಘಾತಕ್ಕೆ ತುತ್ತಾದರು.

- ಕುಮಾರ್ ಸುಬ್ರಹ್ಮಣ್ಯ

MORE FEATURES

ಅಪರಿಚಿತ ದೇವಾಲಯಗಳ ಬಗ್ಗೆ ಅಪೂರ್ವ ಮಾಹಿತಿ

30-04-2024 ಬೆಂಗಳೂರು

‘ಇದು ಪುರಾತನ ದೇವಾಲಯಗಳ ಅಸಂಖ್ಯ ಸಾಗರದ ನಡುವಿನ ಚಿಕ್ಕ ಬಿಂದು ಮಾತ್ರ. ಜನಮಾನಸದಿಂದ ದೂರವಾದ ದೇವಾಲಯಗಳನ್ನು ಜನರ...

ಹವ್ಯಕ ಸಮಾಜದ ಸಮಾಜೊ-ಸಾಂಸ್ಕೃತಿಕ ಪಠ್ಯವಾಗಿ ಮಹತ್ವ ಪಡೆದಿರುವ ಕೃತಿ 'ಬಯಲ ಬೆಟ್ಟ'

30-04-2024 ಬೆಂಗಳೂರು

‘ಕನಸುಗಳನ್ನು ಕಂಡರಷ್ಟೆ ಸಾಲದು; ಅವುಗಳನ್ನು ನನಸುಗಳನ್ನಾಗಿ ಮಾಡಿಕೊಳ್ಳುವ ಛಲ, ಹಠ, ಮತ್ತು ನಿರಂತರ ಪರಿಶ್ರಮ , ...

‘ದೇವನೂರ ಮಹಾದೇವ ಜೊತೆ ಮಾತುಕತೆ’ಯ ಪ್ರಸ್ತಾವನೆ

30-04-2024 ಬೆಂಗಳೂರು

'ನಮಗೆ ಸಿಕ್ಕದಿರುವ ಸಂದರ್ಶನಗಳೂ ಸಂಕಲನದೊಳಗೆ ಸೇರದೇ ಉಳಿದು ಹೋಗಿವೆ. ಸಂಗ್ರಹವಾದ ಆಯ್ದ ಮಾತುಕತೆ, ಸಂದರ್ಶನಗಳದ್ದೊ...