ಸಾಂಸ್ಕೃತಿಕ ನಾಯಕತ್ವದ ಪರಿಕಲ್ಪನೆ

Date: 03-12-2020

Location: .


ಕನಸದಾಸ ಜಯಂತಿಯ ಪ್ರಯುಕ್ತ ಯುವ ಚಿಂತಕ, ಲೇಖಕ ಸುರೇಶ್ ನಾಗಲಮಡಿಕೆಯ ವರು ‘ಸಾಂಸ್ಕೃತಿಕ ನಾಯಕತ್ವದ ಕುರಿತು ವಿಶ್ಲೇಷಿಸಿರುವ ವಿಶೇಷ ಲೇಖನ (ಭಾಗ-೧) ಇಲ್ಲಿದೆ.

ನಾಯಕತ್ವ ಎಂಬ ಗುರುತಿನ ಪ್ರಶ್ನೆ ಯಾರನ್ನು ನಾವು ಸಾಂಸ್ಕೃತಿಕ ನಾಯಕರು ಎಂದು ಕರೆದುಕೊಳ್ಳುತ್ತಿದ್ದೇವೆ? ಯಾವ ಚೌಕಟ್ಟುಗಳಲ್ಲಿ ಕರೆಯಲಾಗುತ್ತದೆ ಎಂಬ ಪ್ರಶ್ನೆಗಳು ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಮೂಡುತ್ತವೆ. ಈ ಶತಮಾನದಲ್ಲಿ ಸಾಂಸ್ಕೃತಿಕ ನಾಯಕತ್ವದ ಪರಿಕಲ್ಪನೆಯೂ ಹೆಚ್ಚು ಚರ್ಚೆಯಲ್ಲಿದೆ. ಇದು ಗುರುತಿನ ರಾಜಕೀಯದ ಪರಿವೇಷದಲ್ಲೂ ನಡೆಯುತ್ತಿದೆ. ಒಂದು ಸಮುದಾಯ ಅಥವಾ ಸಮಾಜ ತನ್ನ `ಗುರುತು’ (ಐಡೆಂಟಿಟಿ)ಗಾಗಿ ತನ್ನ ಸಮಾಜದಲ್ಲೇ ಇರುವ ಒಬ್ಬ ದಾರ್ಶನಿಕನನ್ನು ಅಥವಾ ಕವಿಯನ್ನೋ ರಾಜರನ್ನೋ, ಪಾಳೆಗಾರರನ್ನೋ ಸಂಕೇತವಾಗಿ ಬಳಸಿಕೊಂಡು ಅಭಿವೃದ್ಧಿಗಾಗಿ ಹಾತೊರೆಯುವುದು ಎಂಬ ಅರ್ಥವೂ ಇದೆ. ಹಾಗೆ ಸೃಷ್ಟಿಸಿಕೊಳ್ಳುವಾಗ ಆಯಾ ಸಮುದಾಯಗಳು ತಾವಾಗಿಯೇ ಕೆಲವು ವ್ಯಕ್ತಿಗಳನ್ನು ನಾಯಕರನ್ನಾಗಿ ಮಾಡಿಕೊಂಡಿರುತ್ತಾರೆ. ಇದೊಂದು ಬಗೆಯ ರಾಜಕಾರಣವೇ ಆಗಿದೆ. ಆದರೆ ಚರ್ಚೆಯಾಗಬೇಕಾದ್ದು ಜನಪದರು ಮೂಲದಲ್ಲಿ ಯಾರನ್ನು ತಮ್ಮ ಕುಲಮೂಲ ನಾಯಕರನ್ನಾಗಿ ಮಾಡಿಕೊಂಡಿದ್ದರು? ಅವರ ಆಶಯಗಳು ಏನಾಗಿದ್ದವು? ಇಂದಿನ ಅಕ್ಷರವಂತ ಗುಂಪುಗಳು ನಿರ್ಮಿಸಿರುವ ಸಾಂಸ್ಕೃತಿಕ ನಾಯಕತ್ವದ ಹಿಂದಿನ ರಾಜಕಾರಣವೇನು? ಎಂಬುದು.

ಕರ್ನಾಟಕದಲ್ಲಿ 70ರಿಂದ 80ರ ದಶಕದಿಂದೀಚೆಗೆ ಸಾಂಸ್ಕೃತಿಕ ನಾಯಕತ್ವದ ಪರಿಕಲ್ಪನೆಯು ಚರ್ಚೆಗೆ ಬಂತು. ಕುರುಬರು ಕನಕದಾಸರನ್ನು, ಒಕ್ಕಲಿಗರು ಕೆಂಪೇಗೌಡರನ್ನು, ವೀರಶೈವರು ಬಸವಣ್ಣನನ್ನು, ದೇವಾಂಗರು ದಾಸಿಮಯ್ಯನನ್ನು, ಮಾದಾರರು ಚೆನ್ನಯ್ಯನನ್ನು, ಯಾದವರು ಕೃಷ್ಣನನ್ನು, ಬೇಡರು ವಾಲ್ಮೀಕಿಯನ್ನು ಹೀಗೆ ಇನ್ನೂ ಹಲವು ಜಾತಿಗಳು ತಮ್ಮ ತಮ್ಮ ಸಾಂಸ್ಕೃತಿಕ ನಾಯಕನನ್ನು ಸೃಷ್ಟಿ ಮಾಡಿಕೊಂಡರು. ಹೀಗೆ ಮಾಡಿಕೊಳ್ಳುವುದರ ಜೊತೆಗೆ ಆಯಾ ಜಾತಿಗೊಂದು ಮಠವನ್ನು ಆ ಮಠಕ್ಕೊಬ್ಬ ಪೀಠಾಧಿಪತಿಯನ್ನು ರೂಪಿಸಿಕೊಂಡರು. ಹೀಗೆ ಮಾಡುವುದರ ಹಿನ್ನೆಲೆಯ ರಾಜಕಾರಣವನ್ನು ಅರಿಯದೆ ಹೋದರೆ ಪರಿಕಲ್ಪನೆಯನ್ನು ಸರಿಯಾಗಿ ಅರ್ಥೈಸಲಾಗುವುದಿಲ್ಲ. ಕೆಳವರ್ಗಗಳಿಗೆ ಈ ಬಗೆಯ ರಾಜಕಾರಣ ಹೊಸದು. ಮಠಗಳು ಮತ್ತು ಪೀಠಾಧಿಪತಿಗಳು ಕೇವಲ ಲಿಂಗಾಯತರಿಗೆ, ಬ್ರಾಹ್ಮಣರಿಗೆ ಸೀಮಿತವೆಂಬ ಭಾವನೆ ಇದ್ದ ತಳ ಸಮುದಾಯಗಳಿಗೆ, ತಮ್ಮಲ್ಲೂ ಮಠಗಳು ಮತ್ತು ಪೀಠಾಧಿಪತಿಗಳನ್ನು ನೋಡಿ ಒಮ್ಮೆಲೇ ಸಂತೋಷ, ದಿಗ್ಭ್ರಮೆಯನ್ನು ವ್ಯಕ್ತಪಡಿಸಿದ್ದೂ ಉಂಟು. ಆದರೆ ಅದೇ ಸತ್ಯವಾಗಿತ್ತು. ದಲಿತರು ಈಗಾಗಲೇ ಅಂಬೇಡ್ಕರರನ್ನು ತಮ್ಮ ಪ್ರಶ್ನಾತೀತ ನಾಯಕರೆಂದು, ಶೋಷಿತರ ಧ್ವನಿ ಎಂದು ಒಪ್ಪಿಕೊಂಡಿದ್ದರು. ಆದರೆ ತಳಸಮುದಾಯಗಳು ಯಾಕೆ ಹೀಗೆ ಸಾಂಸ್ಕೃತಿಕ ನಾಯಕರನ್ನು ರೂಪಿಸಿಕೊಂಡವು ಎಂಬುದಕ್ಕೆ ಅನೇಕ ಕಾರಣಗಳನ್ನು ನೀಡಬಹುದು. ಅವರು ತಮ್ಮ ತಮ್ಮ ಸಮುದಾಯಗಳಲ್ಲಿ ಇದ್ದ ಕವಿಗಳು, ಸೈನಿಕರು, ಪಾಳೆಗಾರರು, ದಾರ್ಶನಿಕರನ್ನು ಪತ್ತೆ ಹಚ್ಚುವುದು, ಮತ್ತೊಂದು ಆ ಮೂಲಕ ರಾಜಕೀಯ ಮುನ್ನೆಲೆಗೆ ಬರುವುದು, ಅದರಿಂದ ಒಂದಷ್ಟು ಸಮುದಾಯದ ಅಭಿವೃದ್ಧಿಯನ್ನುಂಟು ಮಾಡುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಆಗುತ್ತಿರುವ ಪ್ರಕ್ರಿಯೆ ಮಾತ್ರ ಬೇರೆ ರೀತಿಯದಾಗಿದೆ.

ನಮ್ಮ ಮೂಲ ಜಾನಪದದ ಉತ್ಪನ್ನ ಜನಪದರು ಅರ್ಥೈಸಿಕೊಂಡ ನಾಯಕತ್ವವನ್ನು ಪರಿಶೀಲಿಸುವುದು ಒಳಿತು ಎಂದು ಕಾಣುತ್ತದೆ. ಇವರ ಸಾಂಸ್ಕೃತಿಕ ಪರಿಕಲ್ಪನೆಗೂ ಇಂದು ಅಕ್ಷರವಂತ ಗುಂಪುಗಳು ನಿರ್ಮಿಸಿಕೊಂಡ ಪರಿಕಲ್ಪನೆಗೂ ಸಾಕಷ್ಟು ವ್ಯತ್ಯಾಸಗಳು ಇವೆ. ಜನಪದರ ನಾಯಕರು ಒಂದು ಸಮುದಾಯದ ಸಾಮರಸ್ಯದ ಸಂಕೇತವಾಗಿ ಚಿತ್ರಿತಗೊಂಡಿದ್ದರೆ ಅಕ್ಷರವಂತರ ನಾಯಕರು ಸೀಮಿತ ಚೌಕಟ್ಟನ್ನು ನಿರ್ಮಿಸಿಕೊಂಡಿದ್ದಾರೆ ಅಥವಾ ಹಾಗೆ ಮಾಡಲಾಗಿದೆ. ಜನಪದರ ನಾಯಕರು ಆಚರಣೆಯ ಒಂದು ಲೋಕದೃಷ್ಟಿಯಾದರೆ, ಈ ಕಾಲದ ನಾಯಕರು ಗುಮಾನಿಗೆ ಗುರಿಯಾಗಿದ್ದಾರೆ. ಇಷ್ಟಕ್ಕೂ ನಮ್ಮ ಜನಪದರು ಯಾರನ್ನು ಕುಲಮೂಲ ನಾಯಕರೆಂದು ಭಾವಿಸಿದ್ದರೋ ಅವರೇ ಸಾಂಸ್ಕೃತಿಕ ನಾಯಕರೂ ಆಗಿದ್ದಾರೆ. ಕುರುಬರು ಇಂದು ಕನಕದಾಸರನ್ನು ಮುನ್ನೆಲೆಗೆ ತಂದು, ಇವನೇ ನಮ್ಮ ಸಾಂಸ್ಕೃತಿಕ ನಾಯಕ ಎಂದು ಜನರಲ್ಲಿ ನಂಬಿಸಲಾಗುತ್ತಿದೆ. ಆದರೆ ಅವರಿಗೆ ಸಾಂಸ್ಕೃತಿಕ ನಾಯಕನೆಂದು ಇದ್ದದ್ದು ಕನಕದಾಸರಲ್ಲ ರೇವಣ್ಣಸಿದ್ಧ ಮತ್ತು ಬೀರಪ್ಪ. ಇವರು ಕುಲಮೂಲ ನಾಯಕರೂ ಹೌದು. ಒಕ್ಕಲಿಗರಿಗೆ ಕುಲಮೂಲ ನಾಯಕತ್ವದ ಪ್ರಶ್ನೆ ಇದ್ದೇ ಇದೆ. ಅವರು ಕೆಂಪೇಗೌಡನನ್ನು ನಾಯಕನನ್ನಾಗಿ ಮಾಡಿಕೊಂಡಿರುವುದು ಈಚೆಗೆ. ಬೇಡರು ವಾಲ್ಮೀಕಿಯನ್ನು ಸಾಂಸ್ಕೃತಿಕ ನಾಯಕನೆಂದು ಭಾವಿಸಿದ್ದಾರೆ. ಆದರೆ ಅವರ ಕುಲಮೂಲ ನಾಯಕರು ಬೇಡರಕಣ್ಣಪ್ಪ ಮತ್ತು ಕುಲದೈವ ನರಸಿಂಹ. ಗೊಲ್ಲರಿಗೆ ಜುಂಜಪ್ಪ, ದಲಿತರಿಗೆ ಮಾದಪ್ಪ, ಮಂಟೇಸ್ವಾಮಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರಶ್ನೆ ಇರುವುದು ಅಕ್ಷರಸ್ಥ ಗುಂಪು ತಮ್ಮ ರಾಜಕಾರಣಕ್ಕಾಗಿ ಯಾರನ್ನು ನಾಯಕತ್ವ ಎಂದು ಕರೆದಿದಿಯೋ ಅವರನ್ನು ಜನಪದರು ಸ್ವೀಕರಿಸಿದ್ದಾರೋ ಎಂಬುದು.

ಇದಕ್ಕೆ ಉತ್ತರ ಇಲ್ಲವೆಂದೇ ಹೇಳಬೇಕು. ಕುರುಬರು ಕನಕದಾಸರನ್ನು ನಾಯಕತ್ವದ ಹಂತಕ್ಕೆ ಏರಿಸಿದರೂ ಗ್ರಾಮದ ಜನಪದರಿಗೆ ಮಾತ್ರ ರೇವಣ್ಣಸಿದ್ಧ ಮತ್ತು ಬೀರಪ್ಪರೇ ಅವರಿಗೆ ಮೂಲ. ಇಂದಿಗೂ ತಮ್ಮ ಆಚರಣಾ ಲೋಕದಲ್ಲಿ ಇವರೇ ಅವರ ನಾಯಕರಾಗಿದ್ದಾರೆ, ರೇವಣ್ಣಸಿದ್ಧ ಅವರ ಸಾಲಿಗೆ ದೊಡ್ಡ ನಾಯಕನಾಗಿದ್ದಾನೆ. ಏಕೆಂದರೆ ಕುರುಬರ ಕುಲವನ್ನು ಒಟ್ಟುಗೂಡಿಸಿದವನು, ಲಿಂಗದೀಕ್ಷೆ ನೀಡಿದವನು ರೇವಣ್ಣ. ಕಷ್ಟ ಬಂದಾಗ ಅವರಿಗೆ ಸಹಾಯ ಮಾಡಿದವನೂ ಅವನೇ ಆಗಿದ್ದಾನೆ. ಬೀರಪ್ಪ ಕುರುಬರ ಕುಲದೈವ ಆತನನ್ನು ಈ ಸಮುದಾಯ ಎಂದಿಗೂ ಮರೆಯಲಾಗುವುದಿಲ್ಲ. ಅಷ್ಟೇ ಅಲ್ಲ, ತಮಗೆ ಬೇಕಾದ ರೀತಿಯಲ್ಲಿ ಕುಲಪುರಾಣಗಳನ್ನು ನಿರ್ಮಿಸಿಕೊಂಡಿದೆ. ಈ ಕುಲಪುರಾಣಗಳು ಕೇವಲ ಆಯಾ ಕುಲದ ಚರಿತೆಯನ್ನೋ ಅವರ ಆಚರಣೆಗಳನ್ನು ಅಭಿವ್ಯಕ್ತಿಸುವುದಿಲ್ಲ, ಬದಲಾಗಿ ಈ ನೆಲದ ಸಾಂಸ್ಕೃತಿಕ ಚರಿತ್ರೆಯನ್ನು ಜನಪದ ಲೋಕದೃಷ್ಟಿಗಳನ್ನು ಅನಾವರಣಗೊಳಿಸಿವೆ. ಮಾದಪ್ಪ ಮತ್ತು ಮಂಟೇಸ್ವಾಮಿ ಇಂದು ಕೇವಲ ದಲಿತರ ಆರಾಧ್ಯ ದೈವಗಳಾಗಿ ಕಾಣುವುದಿಲ್ಲ, ಬದಲಾಗಿ ಕರ್ನಾಟಕದ ಬಹುದೊಡ್ಡ ಸಾಂಸ್ಕೃತಿಕ ನಾಯಕರಾಗಿ ಕಾಣುತ್ತಾರೆ.

ಜನ ಸಮುದಾಯಗಳ ಅಸ್ಮಿತೆಯನ್ನು ಸೃಷ್ಟಿಸುವವರು ಯಾರೇ ಆಗಿರಲಿ, ಅದು ಯಾವ ಬಗೆಯ ಚೌಕಟ್ಟುಗಳನ್ನು ನಿರ್ಮಿಸುತ್ತದೆ ಎಂಬುದನ್ನು ತಿಳಯಬೇಕಾಗುತ್ತದೆ. ಸಮಕಾಲೀನ ರಾಜಕಾರಣವು ಜಾತಿಗೊಂದು ಗುರುತಾಗಿ ಕೆಲವು ನಾಯಕರನ್ನು ಮಾಡಿದಾಗ ಅದರಿಂದಾಗುವ ಲಾಭಗಳು ಮೇಲುನೋಟಕ್ಕೆ ಗೋಚರಿಸುತ್ತವೆ. ಆದರೆ ಈ ಗುರುತಿನ ರಾಜಕೀಯವನ್ನು ಅಥವಾ ಸಾಂಸ್ಕೃತಿಕ ನಾಯಕತ್ವದ ಪರಿಕಲ್ಪನೆಯನ್ನು ಚರಿತ್ರೆಯ ದೃಷ್ಟಿಯಿಂದ ತಾತ್ವಿಕವಾಗಿ ಗಮನಿಸುವುದು ಕೂಡ ಅವಶ್ಯಕ. ಅಂಬೇಡ್ಕರ್ `ನಾಯಕತ್ವ’ವನ್ನು ವ್ಯಾಖ್ಯಾನಿಸಿದ್ದು, `ದಲಿತ’ ಎಂಬ ಪದವನ್ನು ಅರ್ಥೈಸಿದ್ದು ಸಮುದಾಯ ಪ್ರಜ್ಞೆಯ ಹಿನ್ನೆಲೆಯಲ್ಲಿ. ದಲಿತರು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕಾದರೆ ಶಿಕ್ಷಣ ಸಂಘಟನೆ ಮತ್ತು ಹೋರಾಟಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. ಆಯಾ ಜಾತಿಗಳು ಒಗ್ಗೂಡುವುದರಲ್ಲಿ ತಪ್ಪೇನಿಲ್ಲ ಎಂದಿದ್ದರು. ಆದರೆ ಇಂದು ಆಗುತ್ತಿರುವುದೇ ಬೇರೆ. ದಲಿತರಲ್ಲೇ ಮೀರಿ ಹೋಗುತ್ತಿರುವ ಎಡ-ಬಲಗಳ ಸಂಘರ್ಷ, ಬಿಕ್ಕಟ್ಟುಗಳು, ಶೂದ್ರರಲ್ಲಿ ನಡೆಯುತ್ತಿರುವ ತಾರತಮ್ಯ ನೀತಿಗಳು ಬಯಲಾಗುತ್ತಿವೆ. ಅಂಬೇಡ್ಕರ್ ಅಂದೇ ಹೇಳಿರುವ ಹಾಗೆ ``ಬ್ರಾಹ್ಮಣಿಕೆಯಂದರೆ ಒಂದು ಸಮುದಾಯವಾಗಿ ಬ್ರಾಹ್ಮಣರ ಶಕ್ತಿ, ಅಧಿಕಾರ, ಅವಕಾಶ ಆಸಕ್ತಿಯೆಂದಷ್ಟೇ ನಾನು ತಿಳಿಯುವುದಿಲ್ಲ. ಬ್ರಾಹ್ಮಣಿಕೆಯೆಂದರೆ ಸ್ವಾತಂತ್ರ್ಯ, ಸೋದರತೆ, ಸಮಾನತೆಯನ್ನು ನಾಶ ಮಾಡುವ ಶಕ್ತಿ. ಈ ಅರ್ಥದಲ್ಲಿ ಎಲ್ಲ ವರ್ಗಗಳಲ್ಲೂ ಬ್ರಾಹ್ಮಣಿಕೆಯಿದೆ ಮತ್ತು ಅದನ್ನು ಹುಟ್ಟುಹಾಕಿದವರು ಬ್ರಾಹ್ಮಣರಾದರೂ ಅವರಿಗಷ್ಟೇ ಇದು ಸೀಮಿತವಾಗಿಲ್ಲ. ಎಲ್ಲ ಕಡೆ ಕಾಣುವ, ಎಲ್ಲರ ಯೋಚನೆ ಕ್ರಿಯೆಯನ್ನು ಹಿಡಿತದಲ್ಲಿಟ್ಟುಕೊಂಡಿರುವುದು. ಇದೇ ಬ್ರಾಹ್ಮಣಿಕೆಯೆಂಬುದು ಅವಿವಾದಿತ ಸತ್ಯ. ಇದು ಕೆಲವರಿಗಷ್ಟೇ ಹೆಚ್ಚು ಅವಕಾಶ ಮಾಡಿಕೊಡುತ್ತದೆಂಬದೂ ವಿವಾದಾತೀತ ಸಂಗತಿ. ಕೆಲವರ್ಗಗಳಿಗೆ ಇದು ಅವಕಾಶಗಳಲ್ಲಿ ಸಮಾನತೆಯನ್ನ ನಿರಾಕರಿಸುತ್ತದೆ.’’

ಅಂದು ಅಂಬೇಡ್ಕರ್ ದಲಿತರು ಮತ್ತು ಬ್ರಾಹ್ಮಣಿಕೆಯ ತಾತ್ವಿಕತೆಯನ್ನು ಹೇಳಿದರೂ ಇಂದು ಅದು ಸಾಮಾಜಿಕ, ರಾಜಕೀಯ ವಿಚಾರಗಳಲ್ಲೂ ಸತ್ಯವಾಗುತ್ತಿದೆ. ಯಾರು ಗುರುತುಗಳನ್ನು ನೀಡುವರೋ ಅವರಿಗೆ ಅವಕಾಶ ದಕ್ಕುವುದು ಇಲ್ಲದವರಿಗೆ ದಕ್ಕದೇ ಇರುವುದು ಕಂಡು ಬರುತ್ತದೆ. ದಲಿತರು ತಮ್ಮ ನಾಯಕ ಅಂಬೇಡ್ಕರ್ ಅವರೇ ಎಂದು ಘೋಷಿಸಿಕೊಂಡರೂ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಾಕಷ್ಟು ಗೊಂದಲದಲ್ಲಿದ್ದಾರೆ. ಇತ್ತೀಚೆಗೆ ಗ್ರಾಮ್ಯ ದಲಿತರು ಮತ್ತು ನಗರ ದಲಿತರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಸಾಂಸ್ಕೃತಿಕ ರಾಜಕಾರಣದಿಂದ ಹಿಡಿದು ಸಣ್ಣಪುಟ್ಟ ರಾಜಕಾರಣದವರಿಗೂ ಯಾವ ಮೂಲದ ದಲಿತರು ಹೆಚ್ಚು ಅವಕಾಶ ಪಡೆಯುತ್ತಿದ್ದಾರೆ? ಯಾವ ಯಾವ ವಲಯಗಳಲ್ಲಿ ತಮ್ಮ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಾರೆ? ಇದಕ್ಕೆ ಕಾರಣಗಳೇನು? ಎಂಬ ಪ್ರಶ್ನೆಗಳು ಸಮಕಾಲೀನ ಪರಿಸ್ಥಿತಿಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿವೆ. ಹಳ್ಳಿಯ ದಲಿತರು ಇಂದಿಗೂ ಸಮಗ್ರ ಅಭಿವೃದ್ಧಿಯ ಮುಖವನ್ನು ಕಾಣುವಲ್ಲಿ ಯಶಸ್ವಿಯಾಗಿಲ್ಲ. ಕೇರಿಗಳ ಸ್ವರೂಪ ಹಾಗೇ ಇದೆ. ದೇವಾಲಯಗಳ ಪ್ರವೇಶ ಸದ್ಯಕ್ಕಿಲ್ಲ. ಶಾಲೆಯಲ್ಲಿ ಕಲಿಯುವ ಅವಕಾಶವನ್ನು ಸರ್ಕಾರ ಎಲ್ಲ ರೀತಿಯಲ್ಲಿ ಒದಗಿಸಿಕೊಟ್ಟಿದ್ದರೂ ಮೇಲು-ಕೀಳು ಭಾವನೆಗಳು ಇಂದಿಗೂ ಅಂಟಿಕೊಂಡಿವೆ. ಈ ಬಗೆಯ ಸಮಸ್ಯೆಗಳು ನಗರಗಳ ದಲಿತರಿಗೆ ಕಾಣುವುದಿಲ್ಲ.

ಅಂಬೇಡ್ಕರ್‍ವಾದಿಗಳ ಬಿಕ್ಕಟ್ಟನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆ ಮಾಡುವ ಡಾ. ಆನಂದ ತೇಲ್ತುಂಬ್ಡೆಯವರ ಪ್ರಕಾರ, ದಲಿತ ಅಧಿಕಾರಿ ಹಾಗೂ ಆತನ ಮನೆಗೆಲಸದವರ ನಡುವೆ ಅಥವಾ ಅಧಿಕಾರಿ ಹಾಗೂ ಅವನು ಹಿಂದೆ ಬಿಟ್ಟುಬಂದ ಕೇರಿಯವರ ನಡುವೆ ಸಾಮಾನ್ಯ ಅಂಶಗಳು ಬಹಳ ಕಡಿಮೆ ಇವೆ. ಹೀಗೆಯೇ ಮೇಲ್ಕಾಣಿಸಿದ ಭಿನ್ನ ಭಿನ್ನ ಗುಂಪುಗಳ ಹಿತಾಸಕ್ತಿಗೆ ಅನುಗುಣವಾಗಿ ಏಕಮಾತ್ರ ಅಂಬೇಡ್ಕರ್‍ವಾದಿ ಐಡೆಂಟಿಟಿ ಸಾಧ್ಯವಿಲ್ಲದಾಗಿದೆ. ದಲಿತರ ಒಳಗೇ ಅಂಬೇಡ್ಕರ್ ಐಡೆಂಟಿಟಿ ಬಗ್ಗೆ ಹೆಚ್ಚು ಚರ್ಚೆ ಶುರುವಾಗಿದ್ದರೂ ಅವರು ಇತರರೊಂದಿಗಿನ ತಮ್ಮ ಒಡನಾಟದ ವೇಳೆ ಅದನ್ನು ಮುಚ್ಚಿಡಬಯಸುತ್ತಾರೆ. ಅಂಬೇಡ್ಕರ್‍ವಾದಿ ಅಸ್ಮಿತೆಯು ಕೆಳವರ್ಗದ ಅದೃಶ್ಯ ಐಡೆಂಟಿಟಿ ಜೊತೆಗೆ ಸಂಬಂಧ ಹೊಂದಿರುವುದರಿಂದ ಮೇಲ್ಚಲನೆ ಹೊಂದಿರುವ ಎಷ್ಟೋ ದಲಿತರು ತಮ್ಮ ಮನೆತನದ ಹೆಸರುಗಳನ್ನು ಬದಲಿಸಿ, ತಮ್ಮ ಜಾತಿ ಗುರುತು ಹೇಳಿಬಿಡಬಹುದೆನ್ನುವ ಕಾರಣಕ್ಕೆ ಅವರು ತಮ್ಮ ಡ್ರಾಯಿಂಗ್ ರೂಮಿನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವುದಿಲ್ಲ. ಮೇಲ್ಜಾತಿಯವರ ಭಾಷೆ, ನಡವಳಿಕೆ, ಸಂಸ್ಕೃತಿ ಹಾಗೂ ಇನ್ನಿತರ ರೂಢಿ ಆಚರಣೆಗಳನ್ನು ಅನುಸರಿಸಿ ತಮ್ಮ ಜಾತಿ ಗುರುತು ಮುಚ್ಚಿಡುವವರು ಬಹಳಷ್ಟು ಜನ ಇದ್ದಾರೆ.’’

ಇದರರ್ಥ ಅಂಬೇಡ್ಕರ್ ಯಾರಿಗೆ, ಎಲ್ಲಿ ಬೇಕಾಗಿದ್ದಾರೆ ಎಂಬುದು ಅರಿವಾಗುತ್ತದೆ. ಹಾಗೆ ನೋಡಿದರೆ `ಅಹಿಂದ’ ಎಂದು ಕರೆಯುವ ವಲಯಕ್ಕೆ ಬಹುದೊಡ್ಡ ಸಾಂಸ್ಕೃತಿಕ ನಾಯಕನಾಗಬೇಕಾಗಿದ್ದ ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಸೀಮಿತಗೊಂಡಿದ್ದು ಅಥವಾ ಸೀಮಿತಗೊಳಿಸಿದ್ದು ಈ ಕಾಲದ ದೊಡ್ಡ ದುರಂತ. ತಳಸಮುದಾಯಗಳು ಇದನ್ನು ಅರಿತುಕೊಂಡೇ ಬೇರೆ ಬೇರೆ ನಾಯಕತ್ವಕ್ಕೆ ಹಾತೊರೆದವು ಎಂದು ಕಾಣುತ್ತದೆ. ಅಂಬೇಡ್ಕರರ ತಾತ್ವಿಕತೆಯನ್ನು ಬಂಧಿಸಿದ್ದು ಕೂಡ, ಈ ಕಾಲಮಾನದ ದುರಂತವೇ. ಇಲ್ಲದಿದ್ದರೆ ಅಂಬೇಡ್ಕರ್ ಶೋಷಣೆಗೆ ಒಳಪಟ್ಟ ಸಮುದಾಯಗಳಿಗೆ ಸಾಂಸ್ಕೃತಿಕ ನಾಯಕನಾಗಬಹುದಾದ ಎಲ್ಲಾ ಸಾಧ್ಯತೆಗಳೂ ಇದ್ದವು. ಆ ಬಗೆಯ ಕೆಲಸವನ್ನು ಅವರು ಮಾಡಿದ್ದರು. ವಿಚಿತ್ರವೆಂದರೆ ತಳಸಮುದಾಯಗಳು ನಮ್ಮ ಕಾಲದಲ್ಲೇ ನಮಗೆ ಸ್ಪಂದಿಸಿದ ನಾಯಕನೊಬ್ಬನನ್ನು ಬಿಟ್ಟು ಹಿಂದೆ ಆಗಿಹೋದ ದಾರ್ಶನಿಕರನ್ನು, ಕವಿಗಳನ್ನು ನಾಯಕರನ್ನಾಗಿ ಆರಿಸಿಕೊಂಡಿರುವುದು. ಸಂತರನ್ನು ಆರಿಸಿಕೊಳ್ಳುವಾಗ ಅವರಿಗೆ ಇದ್ದ ಧೋರಣೆಗಳೇನು ಎಂಬುದು ಇನ್ನೂ ಸ್ಪಷ್ಟ ಆಗಬೇಕಾಗಿದೆ. ಅನೇಕ ವಚನಕಾರರನ್ನು ಆಯಾ ಜಾತಿಗಳು ನಾಯಕರನ್ನಾಗಿ ಮಾಡಿಕೊಂಡಿವೆ. ದಾಸರಲ್ಲಿ ಒಬ್ಬನಾದ ಕನಕದಾಸನನ್ನು ಆರಿಸಿಕೊಂಡಿದ್ದು ಈ ಬಗೆಯಲ್ಲಿಯೇ. ಕುರುಬರೂ ಸೇರಿದಂತೆ ಅನೇಕ ಹಿಂದುಳಿದ ಸಮುದಾಯಗಳಿಗೆ ಒಬ್ಬನೇ ನಾಯಕನಿಲ್ಲ. ಇದಕ್ಕೆ ರಾಜಕೀಯ ಕಾರಣಗಳೂ ಇರಬಹುದು. ಎಲ್ಲಾ ಸಮುದಾಯಗಳೂ ಹಿಂದೆ ಕುಲದೇವರನ್ನು ಸ್ಮರಿಸುತ್ತಿದ್ದವು. ಆದರೆ ಈಗ ಕುಲ ಪ್ರತಿಷ್ಠೆಯ ದೃಷ್ಟಿಯಿಂದ ಲಗ್ನಪತ್ರಿಕೆಯಲ್ಲಿ, ವಾಹನಗಳ ಹಿಂಭಾಗಗಳಲ್ಲಿ ಅಂಗಡಿಗಳಲ್ಲಿ, ಹೋಟೆಲ್‍ಗಳಲ್ಲಿ ತಮ್ಮ ತಮ್ಮ ಸಾಂಸ್ಕೃತಿಕ ನಾಯಕರನ್ನು ಮೆರೆದಾಡಿಸುತ್ತಿದ್ದಾರೆ. ಬೀರಪ್ಪ, ರೇವಣ್ಣಸಿದ್ದೇಶ್ವರರ ಜಾಗದಲ್ಲಿ ಕನಕದಾಸರಿದ್ದಾರೆ. ಜುಂಜಪ್ಪ, ಎತ್ತಪ್ಪಗಳ ಜಾಗದಲ್ಲಿ ಕೃಷ್ಣನೋ ಮತ್ತೊಬ್ಬರೋ ಇದ್ದಾರೆ. ಹೀಗೆ ದಾಸಿಮಯ್ಯ, ಚೆನ್ನಯ್ಯ, ಚೌಡಯ್ಯ ಮುಂತಾದವರೂ ಜಾಗ ಪಡೆದಿದ್ದಾರೆ.

ವಾಸ್ತವವಾಗಿ ಕಾಯಕ ಪ್ರಜ್ಞೆಯ ವಚನಕಾರರು ಜಾತಿಯನ್ನು ವಿರೋಧಿಸಿದ್ದು ಅಂತರಂಗದ ನೆಲೆಯಲ್ಲಿ ಎಂಬುದು ತಿಳಿದ ವಿಚಾರವೇ. ಆದರೆ ಈ ಜನ ಗುರುತಿನ ಅವಶ್ಯಕತೆಯಿಂದ ಅವರನ್ನು ಆತುಕೊಳ್ಳುತ್ತಿದ್ದಾರೆ. ಹೀಗೆ ಮಾಡುತ್ತಿರುವುದು ಕೇವಲ ಅಕ್ಷರ ಹೊಂದಿದ ಪರಂಪರೆ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು. ಆಯಾ ಸಮುದಾಯದ ಸಂಘಗಳು ಕಾಲೇಜುಗಳು, ಹಾಸ್ಟೆಲ್‍ಗಳು ಈಗಾಗಲೇ ತಲೆಎತ್ತಿವೆ. ಆದರೆ ಇವರ್ಯಾರೂ ತಮ್ಮ ಜಾತಿಯವರಿಗೆ ರಿಯಾಯಿತಿ ರೂಪದಲ್ಲೇನೂ ಜಾಗ ನೀಡುವುದಿಲ್ಲ. ಹೀಗೆ ಮಾಡುವವರಿಗೆ ಸಾಕಷ್ಟು ಲಾಭವನ್ನು ಆಯಾ ಜಾತಿಗಳು ನೀಡಿವೆ. ``ಎಲ್ಲ ಜಾತಿಗಳಿಂದಲೂ ಸಾಕಷ್ಟು ಮಂದಿ ಆಧುನೀಕರಣದ ಲಾಭ ಪಡೆದವರಿದ್ದಾರೆ. ಮೇಲ್ಜಾತಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ತಳ ಸಮುದಾಯಗಳಿಂದ ಕಡಿಮೆ ಪ್ರಮಾಣದಲ್ಲಿ ಆಧುನೀಕರಣದಿಂದ ಲಾಭ ಪಡೆದವರನ್ನು ನೋಡಬಹುದು. ಭೂಮಿ ಅಥವಾ ಬಂಡವಾಳದ ಮರು ಹಂಚಿಕೆಯಿಂದ ಈ ಎಲ್ಲ ಬದಲಾವಣೆಗಳು ಪ್ರಾಪ್ತವಾಗಿಲ್ಲ.

ಮೀಸಲಾತಿ ಮತ್ತು ಇತರ ಸರಕಾರಿ ಯೋಜನೆಗಳ ಮೂಲಕ ತಳಸ್ತರದ ಜನರು ಸ್ಕಿಲ್ ಪಡೆಯಲು ಸಾಧ್ಯವಾಯಿತು. ಆದರೆ ಆಧುನಿಕ ಸಂಸ್ಥೆಗಳಲ್ಲೂ ಸಾಂಪ್ರದಾಯಿಕ ಗುರುತಿನ ನೆಲೆಯಲ್ಲಿ ಗುರುತಿಸಿಕೊಳ್ಳುವುದು ಬದಲಾಗಲಿಲ್ಲ. ಹಾಗಾಗಿ ಈ ಶತಮಾನದಲ್ಲಿ ಎಲ್ಲ ಜಾತಿಗಳಲ್ಲೂ ಮುಂದುವರಿದವರೂ ಹಿಂದುಳಿದವರೂ ಇದ್ದಾರೆ. ಗುರುತಿನ ರಾಜಕಾರಣ ಮಾಡುತ್ತಿರುವವರು ಮೊದಲನೆಯವರೂ ಆಗಿರಬಹುದು. ಎರಡನೆಯವರು ಅಭಿವೃದ್ಧಿಗಾಗಿ ಕಾಯುವ ಸ್ಥಿತಿಯಲ್ಲಿದ್ದಾರೆ. ರಾಜಕೀಯದ ಪಲ್ಲಟಗಳು ಮತ್ತು ವಿಕೇಂದ್ರಿಕರಣ ಈ ಶತಮಾನದ ಬಹುದೊಡ್ಡ ಸಾಧನೆ ಎಂದಾದರೆ, ಅದರಲ್ಲೂ ಸಾಕಷ್ಟು ಹಿನ್ನಡೆಯನ್ನು ಪಡೆಯುತ್ತಿದ್ದೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಗಮನಿಸಬೇಕಾದ ಸಂಗತಿ ಎಂದು ಯಾರು ಬೇಕಾದರೂ ಹೇಳಬಹುದು. ದಲಿತ ಮತ್ತು ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ಅಧಿಕಾರದ ಹಂಚಿಕೆ ಸರಿಯಾಗಿ ನಡೆಯುತ್ತದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಮಹಿಳೆಯರದಂತೂ ಇನ್ನೂ ಶೋಚನೀಯ ಸ್ಥಿತಿ ಮೀಸಲಾತಿ ಹೆಸರಲ್ಲಿ ಗೆಲ್ಲುವುದು ದಲಿತ ಮಹಿಳೆಯರು, ತಳಸಮುದಾಯವರೇ ಆದರೂ ಗೆದ್ದ ಮೇಲೆ ಅಧಿಕಾರ ಪಡೆಯುವುದು ಮಾತ್ರ ಅವರವರ ಗಂಡಂದಿರೇ ಆಗಿದ್ದಾರೆ ಅಥವಾ ಇವರಿಗೆ ಚುನಾವಣೆಯಲ್ಲಿ ಸಹಕರಿಸಿದ ಮೇಲುಜಾತಿಯವರೇ ಅಧಿಕಾರವನ್ನು ಕಸಿದುಕೊಳ್ಳುತ್ತಾರೆ. ಗೆದ್ದಿರುವ ಆ ದಲಿತ ಮಹಿಳೆಯರು ಸಹಜವಾಗಿಯೇ ಗೆದ್ದ ಮರುಗಳಿಗೆಯಿಂದಲೇ ಕೂಲಿ ಕೆಲಸಕ್ಕೆ ಹೋಗಿ ಕುಟುಂಬವನ್ನು ನಿರ್ವಹಿಸಬೇಕಾಗುತ್ತದೆ. ಅಲ್ಲಿಂದ, ಅಂದರೆ ಗ್ರಾಮೀಣ ರಾಜಕಾರಣದಿಂದ ಹಿಡಿದು ದೊಡ್ಡ ರಾಜಕಾರಣದ ತನಕ ಇದು ವಾಸ್ತವವಾಗಿದೆ. ``ಇಂತಹ ಸಾಂಸ್ಕೃತಿಕ ರಾಜಕೀಯ ಸಮಾಜದ ವಿವಿಧ ವರ್ಗಗಳನ್ನು ವಿವಿಧ ಬಗೆಯಲ್ಲಿ ಪ್ರಭಾವಿಸುತ್ತಿದೆ. ಕೆಳವರ್ಗದವರಲ್ಲಿ ತಾವು ನಿಜವಾಗಿಯೂ ಸಣ್ಣವರು ಮೇಲಿದ್ದವರು ನಿಜವಾಗಿಯೂ ನಮ್ಮಿಂದ ದೊಡ್ಡವರು ಮಾತ್ರವಲ್ಲ, ಆ ದೊಡ್ಡಸ್ತಿಕೆಯನ್ನು ಪ್ರಾಮಾಣಿಕವಾಗಿ ದುಡಿದು ಗಳಿಸಿದ್ದರೆನ್ನುವ ನಂಬಿಕೆಯನ್ನು ಸಾಂಸ್ಕೃತಿಕ ಯಜಮಾನಿಕೆ ಸೃಷ್ಟಿಸುತ್ತಿದೆ. ಒಮ್ಮೆ ಈ ನಂಬಿಕೆ ಸೃಷ್ಟಿಯಾದರೆ ನಂತರದ ನಡಿಗೆ ಸುಲಭ. ಕೆಳಸ್ತರದ ಜನರೇನು ಉಣ್ಣಬೇಕು, ಕುಡಿಯಬೇಕು, ಓದಬೇಕು, ಕೇಳಬೇಕು ಎನ್ನುವುದನ್ನು ಮೇಲ್ವರ್ಗ ನಿರ್ಧರಿಸಿದರೆ ಕೆಳವರ್ಗಕ್ಕೆ ಅಸಹಜವಾಗುವುದಿಲ್ಲ. "

ಬಹುಶಃ ಸಾಂಸ್ಕೃತಿಕ ನಾಯಕತ್ವವೂ ಹೀಗೇ ಇರಬಹುದೇನೋ? ಯಾರು ತಮ್ಮ ಸಮುದಾಯಗಳಿಗೆ ಇಂತಹವರನ್ನೇ ನೀವು ಆರಿಸಿಕೊಳ್ಳಬೇಕು, ಇಂತಹವರನ್ನೇ ಕುರಿತು ಭಾವಚಿತ್ರವನ್ನು ರಚಿಸುವುದು, ಜಯಂತಿಗಳನ್ನು ಮಾಡುವುದು, ಆ ಮೂಲಕ ರಾಜಕಾರಣಕ್ಕೆ ಕೈಹಾಕುವುದು ಎಲ್ಲಾ ನಡೆಯುತ್ತವೆ. ಪ್ರಸ್ತುತ ಎಲ್ಲಾ ತಳಸಮುದಾಯಗಳು ತಮ್ಮ ಜಾತಿಯಲ್ಲಿ ಹುಟ್ಟಿದ ದಾರ್ಶನಿಕರನ್ನು, ಕವಿಗಳನ್ನು, ವಚನಕಾರರನ್ನು ಶೋಧಿಸುವ ಪರಿಪಾಠ ಕಳೆದ ಶತಮಾನದಲ್ಲಿ ನಡೆದಿದ್ದು ಅದರಲ್ಲಿ ಯಶಸ್ವಿಯಾಗಿವೆ. ಶೂದ್ರರಲ್ಲಿ ಮೇಲುವರ್ಗದವರಾದ ಒಕ್ಕಲಿಗರಿಂದ ತಳಸಮುದಾಯದ ಬೆಸ್ತ ಮತ್ತು ಬೋವಿ ಜನಾಂಗಗಳ ತನಕ ತಮ್ಮ ನಾಯಕರನ್ನು ನಿರ್ಮಿಸಿಕೊಂಡಿದ್ದಾರೆ. ಹೀಗೆ ಸೃಷ್ಟಿಸಿಕೊಳ್ಳುವುದರಿಂದ ತಮ್ಮ ಎಲ್ಲಾ ಬೇಡಿಕೆಗಳು ಮತ್ತು ತಾವು ಇರುವ ಸ್ಥಿತಿ ಬದಲಾಗಬಹುದು ಎಂದು ಅವರು ನಂಬಬಹುದು. ಆದರೆ ಇದು ಸಾಧ್ಯವಾಗದ ಮಾತು. ಆಯಾ ಜಾತಿಗಳಿಗೆ ವೋಟ್‍ಬ್ಯಾಂಕಿನ ಹಿನ್ನೆಲೆಯಲ್ಲಿ ಕೆಲವು ಪ್ಯಾಕೇಜ್‍ಗಳನ್ನು ನೀಡಬಹುದು. ಆದರೆ ಅದೆಲ್ಲ ಆಯಾ ಜನಾಂಗದ ಕಟ್ಟ ಕಡೆಯ ಮನುಷ್ಯನಿಗೆ ತಲುಪಿದೆ ಎಂದು ಪ್ರಾಮಾಣಿಕವಾಗಿ ಹೇಳಲಾಗುವುದಿಲ್ಲ. ಕರ್ನಾಟಕದಲ್ಲಿ ಕುರುಬರು ಕನಕದಾಸರ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನುವುದು ಹಳೇ ಮಾತು. ಆದರೆ ಈ ಜನಾಂಗದಲ್ಲೇ ಅತಿ ಹಿಂದುಳಿದವರಾದ ಬುಡಕಟ್ಟು ಜನರಾದ ಕಾಡು ಕುರುಬರು, ಬೆಟ್ಟ ಕುರುಬರು, ಜೇನು ಕುರುಬರು, ಗೊಂಡಾ ಮುಂತಾದ ಪಂಗಡಗಳನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರಗಳು ಹೆಣಗಾಡುತ್ತಿವೆ. ಬುಡಕಟ್ಟು ಜನಾಂಗಗಳ ಸರಿಯಾದ ಮಾಹಿತಿ ಸಂಗ್ರಹ ಮಾಡಿ ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಪ್ರಯತ್ನಗಳು ಸಮಗ್ರವಾಗಿ ನಡೆಯಬೇಕಾಗಿದೆ. ಈ ಜನಾಂಗದ ಹೆಣ್ಣು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಬಾಲ್ಯ ವಿವಾಹದಿಂದ ನರಳುತ್ತಿರುವ, ಶಿಕ್ಷಣದಿಂದ ವಂಚಿತರಾಗುತ್ತಿರುವ ಪರಿಯನ್ನು ಗಮನಿಸಬಹುದು. ಬುಡುಕಟ್ಟು ಕುರುಬರಿಗೆ ಕನಕದಾಸರು ಯಾರೆಂದು ಬಹುಶಃ ಗೊತ್ತಿರಲಾರದು. ಅವರ ಆಚರಣಾ ಲೋಕದ ನಾಯಕರು ಬೇರೆ ಇದ್ದಾರೆ. ಇದನ್ನು ಮಾಸ್ತಿ `ಕಾಕನಕೋಟೆ’ಯಲ್ಲಿ ಸರಿಯಾಗಿ ಅಭಿವ್ಯಕ್ತಿಸಿದ್ದಾರೆ. ಇನ್ನು ಒಕ್ಕಲಿಗ ಸಮುದಾಯವು ಪಾಳೇಗಾರನಾದ ಕೆಂಪೇಗೌಡನನ್ನು ನಾಯಕನನ್ನಾಗಿ ಮಾಡಿಕೊಂಡಿದ್ದು, ಕರ್ನಾಟಕದ ಶ್ರೀಮಂತ ಸಮುದಾಯವೂ ಆಗಿದೆ. ಮೇಲೆ ಹೇಳಿದಂತೆ ಇದು ಕೂಡ ಕಟ್ಟಕಡೆಯ ಜನರಿಗೆ ಅಧಿಕಾರವಿತರಿಸುತ್ತಿದೆ ಎಂದು ಹೇಳಲಾಗುವುದಿಲ್ಲ.

ಒಕ್ಕಲಿಗರಲ್ಲಿ ಬುಡಕಟ್ಟಾದ ಹಾಲಕ್ಕಿ ಮುಂತಾದವರ ಬಗ್ಗೆ ಗಮನಹರಿಸಲಿಲ್ಲ. ಇವರು ಇತ್ತೀಚೆಗೆ ರಾಷ್ಟ್ರಕವಿ ಕುವೆಂಪು ಅವರನ್ನೂ ಕೂಡ ಒಕ್ಕಲಿಗರ ನಾಯಕರನ್ನಾಗಿ ಬಿಂಬಿಸುತ್ತಿರುವುದು ಅಪಾಯದ ಮುನ್ಸೂಚನೆ. ಬ್ಯಾನರ್‍ಗಳಲ್ಲಿ, ಟ್ರಸ್ಟ್‌ಳಿಗೆ, ಬ್ಯಾಂಕ್‍ಗಳಿಗೆ ಕುವೆಂಪು ಅವರ ಹೆಸರುಗಳನ್ನು ಇಡಲು ಇವರು ಪ್ರಾರಂಭಿಸಿದ್ದಾರೆ. ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದಲ್ಲಿ ಸ್ವಲ್ಪಮಟ್ಟಿಗೆ ರಾಜಕೀಯದಲ್ಲಿ ತಮ್ಮ ಗುರುತನ್ನು ಸ್ಥಾಪಿಸಿಕೊಂಡಿರುವ ಬೇಡ ಅಥವಾ ನಾಯಕ ಜನಾಂಗವು ಮಹರ್ಷಿ ವಾಲ್ಮೀಕಿಯನ್ನು, ಕೆಲವು ಕಡೆ ಮದಕರಿ ನಾಯಕನನ್ನು ತನ್ನ ನಾಯಕರನ್ನಾಗಿ ಮಾಡಿಕೊಂಡಿದೆ. ಇವರ ಜೊತೆಯಲ್ಲಿ ಗುರುತಿಸಿಕೊಂಡಿರುವ ಮತ್ತೊಂದು ಸಮುದಾಯ ಬೋವಿ ಜನಾಂಗದವರು. ಇವರು ಮೊದಲು ತಮ್ಮ ಕುಲದೈವವನ್ನು ನಾಯಕನನ್ನಾಗಿ ಮಾಡಿಕೊಂಡಿದ್ದರು. ಆದರೆ ಬೇರೆ ಜನಾಂಗಗಳ ದಾರಿಯಲ್ಲಿ ಇವರೂ ಕೂಡ ಕೆರೆ, ಬಾವಿಗಳನ್ನು ಕಟ್ಟಿಸುತ್ತಿದ್ದ ಸಿದ್ಧರಾಮನನ್ನು ನಮ್ಮವನೆಂದು ಕರೆದುಕೊಳ್ಳುತ್ತಿದ್ದಾರೆ. ಲಿಂಗಾಯತರು ಬಸವಣ್ಣ ಕೇವಲ ವೀರಶೈವರಿಗೆ ಅಲ್ಲದೆ ಇನ್ನೂ ಕೆಲವು ತಳಮಟ್ಟದ ಉಪಲಿಂಗಾಯತರಿಗೆ ನಾಯಕನಾಗಿದ್ದಾನೆ. ಕರ್ನಾಟಕದ ನಾಯಕತ್ವವನ್ನು ವಹಿಸಿಕೊಳ್ಳುವ ಸಾಮರ್ಥ್ಯವನ್ನುಳ್ಳ ಬಸವಣ್ಣ, ವಿಶ್ವೇಶ್ವರಯ್ಯ, ರಾಜಕುಮಾರ್‍ರಿಗೆ ರಾಜಕಾರಣದ ದೃಷ್ಟಿಯಿಂದ ಅದು ಸಾಧ್ಯವಾಗಿಲ್ಲವೇನೋ? ಆದರೂ ಕರ್ನಾಟಕದ ಜನಸಮುದಾಯದಲ್ಲಿ ಬಸವಣ್ಣ ಒಂದು ಬಗೆಯಲ್ಲಿ ಈಗಲೂ ದೊಡ್ಡ ನಾಯಕನಾಗಿ ಆಚರಣಾಲೋಕದಲ್ಲಿ ಲೀನವಾಗಿದ್ದಾರೆ.

ರಾಜಕುಮಾರ್‍ರವರನ್ನು ಕರ್ನಾಟಕವು ನಾಯಕನಂತೆ ಕಾಪಿಟ್ಟುಕೊಂಡಿದೆ. ಚಲನಚಿತ್ರರಂಗದಲ್ಲಿ ಅವರು ವಹಿಸಿದ ಪಾತ್ರಗಳಿಂದಲೂ ಇದು ಸತ್ಯ. ಬೇಡರ ಕಣ್ಣಪ್ಪನಿಂದ ಬೇಡರಿಗೆ, ಕನಕದಾಸರಿಂದ ಕುರುಬರಿಗೆ, ಅಪ್ಪಣ್ಣನಿಂದ ಸವಿತಾ ಸಮಾಜಕ್ಕೆ, ಹೀಗೆ ಆಯಾ ಪಾತ್ರಗಳಿಂದ ಆಯಾ ಸಮುದಾಯಗಳಿಗೆ ಸಾಂಸ್ಕೃತಿಕವಾಗಿ ಒಂದು ಗುರುತಾಗಿ ಮಾರ್ಪಾಡು ಹೊಂದಿರುವುದನ್ನು ಕಾಣಬಹುದು. ಆದರೆ ರಾಜ್‍ಕುಮಾರ್ ಮತ್ತು ಬಸವಣ್ಣನವರನ್ನು ಸ್ವೀಕರಿಸುವುದು ಯಾವ ಮಟ್ಟದಲ್ಲಿ ಎಂಬ ಪ್ರಶ್ನೆಯೂ ಇದೆ. ಇತರೆ ಜನಾಂಗಗಳೂ ಇವರನ್ನು ಎಲ್ಲಾ ವಲಯಗಳಿಂದಲೂ ಒಪ್ಪಿಕೊಂಡಿಲ್ಲವೆನಿಸುತ್ತದೆ. ``ಹಾಗಾಗಿ ಈ ನಾಯಕತ್ವಕ್ಕೆ ಬೆಂಬಲ ಕೊಡುವ ಜನರು ಮೈಮರೆಯದಂತೆ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಉಡುಪಿಯಿಂದ ಕನಕದಾಸರ ಹಿನ್ನೆಲೆಯಲ್ಲಿ ಎದ್ದಿರುವ ದಿಕ್ಕು ತಪ್ಪಿಸುವ ಪ್ರಶ್ನೆಗಳಿಗೆ ಮನ್ನಣೆ ಕೊಡುವುದಕ್ಕಿಂತ ಸಮುದಾಯಗಳು ಎದುರಿಸುತ್ತಿರುವ ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಕೈಗೊತ್ತಿಕೊಳ್ಳಬೇಕಾಗಿದೆ. ಇಂತಹ ವಾದಗಳು ಪ್ರಗತಿಯೆಡೆಗೆ ಸಾಗಬೇಕಾದ ಜನರ ಗಮನವನ್ನು ಅಡ್ಡದಾರಿಗೆಳೆಯುತ್ತವೆ.’’ ಎಂಬ ವಸು ಅವರ ಮಾತುಗಳು ಎಲ್ಲರಿಗೂ ಅನ್ವಯಿಸುತ್ತವೆ. ಸಾಮಾಜಿಕವಾಗಿ ಮೇಲು ಹಂತದಲ್ಲಿರುವ ಬ್ರಾಹ್ಮಣ ಸಮುದಾಯಗಳು ನಾಯಕತ್ವದ ಕೊರತೆಯನ್ನು ಅನುಭವಿಸುತ್ತಿಲ್ಲ. ಅವರಿಗೆ ಅದರ ಅವಶ್ಯಕತೆಯೂ ಇಲ್ಲ. ಏಕೆಂದರೆ ಅವರ ಮಠಗಳಿಗೆ ಮತ್ತು ಬ್ರಾಹ್ಮಣ್ಯಕ್ಕೆ ಚರಿತ್ರೆಯೇ ಇದೆ. ಮಧ್ವರು ಇದಕ್ಕೆ ತಕ್ಕ ಬುನಾದಿಯನ್ನು ಹಾಕಿಕೊಟ್ಟವರು. ಇದನ್ನು ಉಡುಪಿಯ ಅಷ್ಟ ಮಠಗಳು ಚೆನ್ನಾಗಿ ನಿರ್ವಹಿಸುತ್ತಿವೆ. ಮಾಧ್ವ ಬ್ರಾಹ್ಮಣರಿಗೆ ಅಷ್ಟಮಠಗಳು ನಾಯಕತ್ವವನ್ನು ವಹಿಸಿಕೊಂಡಿವೆ. ಪುರಂದರನನ್ನು ಬ್ರಾಹ್ಮಣರು ನಾಯಕನನ್ನಾಗಿ ಸ್ವೀಕರಿಸಬೇಕೇ ಬೇಡವೇ ಎಂಬ ಸಂಕಷ್ಟದಲ್ಲಿ ಮುಳುಗಿದ್ದರೂ ಅವರೂ ಕೂಡ ಬ್ರಾಹ್ಮಣರಲ್ಲದ ಕಾರಣ ಹೊರಗೆ ಇದ್ದಾರೆ. ಪುರಂದರರು ಸಂಗೀತ, ಭಜನೆ, ಆರಾಧನೆಗೆ ಸೀಮಿತಗೊಂಡಿದ್ದಾರೆ. ಸ್ವಲ್ಪ ಮಟ್ಟಿಗೆ ನಾಯಕತ್ವದ ಸ್ಥಾನ ಹೊಂದಿರುವವರು ರಾಘವೇಂದ್ರ ಯತಿಗಳೊಬ್ಬರೇ ಕರ್ನಾಟಕದಲ್ಲಿ ಬಲಿಷ್ಠ ಜಾತಿಗಳಾದ ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗರ ಸಮುದಾಯಗಳು ತಮ್ಮ ಮಠಗಳನ್ನು ಬಲಿಷ್ಠಗೊಳಿಸಿಕೊಂಡಿವೆ. ಆ ಮೂಲಕ ಅವರು ಸಾಂಸ್ಕೃತಿಕ ಐಡೆಂಟಿಟಿಯ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಮಟ್ಟಕ್ಕೆ ತಳಸಮುದಾಯಗಳ ಮಠಗಳು ಏರಿಲ್ಲ.

ಲಿಂಗಾಯತ ಮತ್ತು ಒಕ್ಕಲಿಗರ ಮಠಗಳು ತಕ್ಕಮಟ್ಟಿಗಾದರೂ ಶೂದ್ರ ಸಮುದಾಯಗಳನ್ನು ಒಳಗು ಮಾಡಿಕೊಂಡಿವೆ. ಬ್ರಾಹ್ಮಣ ಮಠಗಳಿಗೆ ಈ ಮಾತು ಹೇಳುವ ಹಾಗಿಲ್ಲ. ಮಡಿವಂತಿಕೆಯೇ ಅಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ಉಡುಪಿಗೂ ಕನಕದಾಸರಿಗೂ ಕೊಂಡಿಯನ್ನು ಕಲ್ಪಿಸಿ ಸಾಕಷ್ಟು ಚರ್ಚೆಗಳು ಸಾಂಸ್ಕೃತಿಕ ವಲಯದಲ್ಲಿ ಸ್ಥಾನ ಪಡೆದುಕೊಂಡಿವೆ. ಉಡುಪಿಗೆ ಕನಕದಾಸರ ಪ್ರವೇಶ ಆದಾಗಿಂದ ಬೇರೆ ಬೇರೆ ಕಾರಣಗಳಿಗೆ ಚರ್ಚೆಯಾಗುತ್ತಲಿದೆ. ಕನಕದಾಸರು ವೈಷ್ಣವ ಸಿದ್ಧಾಂತವನ್ನು ಬೋಧಿಸಿದ್ದರಿಂದ ಕುರುಬರಿಗೆ ವೈಷ್ಣವ ದೀಕ್ಷೆ ನೀಡುವುದಾಗಿ ಬಹಿರಂಗವಾಗಿ ಪೇಜಾವರ ಸ್ವಾಮಿಗಳು ಹೇಳಿಕೆ ನೀಡಿದ್ದರು.

ಇದರ ಮುಂದುವರೆದ ಭಾಗ-೨ ನಾಳೆ ಪ್ರಕಟವಾಗಲಿದೆ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...