ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ


"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕೆಲವೆಡೆ ಪದ್ಯದ ರೀತಿಯಲ್ಲಿ ಗದ್ಯವನ್ನು ಬಳಸಿರುವುದು ಬಿಟ್ಟರೆ 'ಮಿಸ್ಟರ್ A ' ನಿಮಗೊಂದು ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ನೀಡುವುದಂತೂ ಖಂಡಿತ," ಎನ್ನುತ್ತಾರೆ ಸಂಜಯ್‌ ಚಿತ್ರದುರ್ಗ. ಅವರು ಸೋಮೇಶ್ವರ ಗುರುಮಠ ಅವರ 'ಮಿಸ್ಟರ್ A' ಕೃತಿ ಕುರಿತು ಬರೆದ ವಿಮರ್ಶೆ ಇಲ್ಲಿದೆ.

ಲೇಖಕ :ಸೋಮೇಶ್ವರ ಗುರುಮಠ
ಪ್ರಕಾಶನ: ಸ್ನೇಹ ಬುಕ್ ಹೌಸ್
ಪುಟ: 160
ಬೆಲೆ: 195

`ಮಿಸ್ಟರ್. A' ಭಾರತ ಎಂದಿಗೂ ಕೇಳಿರದ ಕಥೆ. ಇದು ಲೇಖಕ ಸೋಮೇಶ್ವರ ಗುರುಮಠ ಅವರ ಹೊಸ ಕಾದಂಬರಿ ಹಾಗೂ ಅವರ ಮೊದಲ ಕನ್ನಡ ಕಾದಂಬರಿ. ಉಜಿರೆಯ ಎಸ್‌ಡಿ‌ಎಂ ಸ್ನಾತಕೋತ್ತರ ಕೇಂದ್ರದ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ ಸೋಮೇಶ್ವರ ಗುರುಮಠ ಅವರು ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು', 'ಅನನ್ಯ ನಮನಗಳು' ಹೆಸರಿನ ಮೂರು ಕವನ ಸಂಕಲನ ಹಾಗೂ 'ಲವ್ ಇಸ್ ನಾಟ್ ಬ್ಲೈಂಡ್ ಬಟ್ ದಿ ಲವರ್ಸ್ ' ಎಂಬ ಇಂಗ್ಲಿಷ್ ಕೃತಿಯನ್ನು ಹೊರತಂದಿದ್ದಾರೆ‌.

ಇದೀಗ 'ಮಿಸ್ಟರ್ A' ಕಾದಂಬರಿಯ ಮೂಲಕ ಕನ್ನಡ ಕಾದಂಬರಿ ಲೋಕದಲ್ಲಿ ಹೊಸ ವಸ್ತುವೊಂದರ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದಾರೆ.

`ಮಿಸ್ಟರ್ A' ಕಾದಂಬರಿಯ ಕಥಾ ನಾಯಕನ ಹೆಸರೂ ಮಿಸ್ಟರ್ A. ಅವನ ಸುತ್ತಲೂ ಇಡೀ ಕಾದಂಬರಿ ಗಿರಕಿ ಹೊಡೆಯುತ್ತದೆ. ಕಾದಂಬರಿಯ ಆರಂಭದಲ್ಲಿ ಮಿಸ್ಟರ್ A ಪಾತ್ರವು, ಕನ್ನಡದ ಖ್ಯಾತ ಸಾಹಿತಿ ಜೋಗಿಯವರ ' L ' ಪಾತ್ರವನ್ನು ನೆನಪಿಗೆ ತಂದರೂ, L ಕಾದಂಬರಿಯ ಕಥಾ ನಾಯಕ ವಾಸ್ತವದಲ್ಲಿ ಮಾತ್ರ ಬದುಕುತ್ತಾನೆ. ಅವನ ಜೀವನದ ಸಮಸ್ಯೆಗಳ ಸುತ್ತಲೇ ಕತೆ ಸುತ್ತುತ್ತದೆ. ಆದರೆ 'ಮಿಸ್ಟರ್ .A ' ಕಥಾ ನಾಯಕ ಕೇವಲ ವಾಸ್ತವದಲ್ಲಿ ಮಾತ್ರವಲ್ಲದೇ, ಅವನು ವಾಸ್ತವದಾಚೆಗೂ ಬದುಕಿದ್ದಾನೆ. ಅವನು ಅವನ ಕನಸಿನಲ್ಲೂ ಬದುಕುತ್ತಾನೆ. ಕನಸಿನೊಳಗೇ ಭವಿಷ್ಯಕ್ಕೆ ತೆರಳಿ, ಭವಿಷ್ಯದ ವಾಸ್ತವವನ್ನು ನಮಗೆ ಕಟ್ಟಿಕೊಡುತ್ತಾನೆ‌. ಅವನ ಜೀವನದ ಸಮಸ್ಯೆಗಳ ಜೊತೆಗೆ ಸಮಾಜದ ಹುಳುಕುಗಳನ್ನು, ಭವಿಷ್ಯದಲ್ಲಿ ಸಮಾಜ ಹೇಗೆಲ್ಲಾ ತಪ್ಪು ದಾರಿ ತುಳಿಯಬಹುದು ಎಂಬುದರ ಕಲ್ಪನೆಯನ್ನು ಮಿಸ್ಟರ್ A ಮಾಡಿಕೊಡುತ್ತಾ ಸಾಗುತ್ತದೆ.ಈ ಕಾದಂಬರಿಯಲ್ಲಿ ವೈಚಾರಿಕತೆ, ಸಿನಿಮಾ, ರಾಜಕೀಯ, ಆಧ್ಯಾತ್ಮಿಕತೆ, ಸಮಾಜ, ವಾಸ್ತವ, ಭವಿಷ್ಯ, ಮನುಷ್ಯನ ಮನಸ್ಥಿತಿ, ನೀರಿನ ಸಮಸ್ಯೆ ಹೀಗೆ ಹಲವಾರು ಜ್ಞಾನ ಶಾಖೆಗಳ ವಿಷಯಗಳನ್ನು ಒಂದೇ ಕಾದಂಬರಿಯ ಒಳಗೆ ತರುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಮನುಷ್ಯನ ಬದುಕಿನ ಸಾಮಾನ್ಯ ಸಂಗತಿಗಳಿಂದ ವಿಶ್ವ ವಿದ್ಯಮಾನಗಳವರೆಗೂ ಈ ಕಾದಂಬರಿಯ ಕಥಾನಾಯಕ ಮಿಸ್ಟರ್ A ಮಾತನಾಡುತ್ತಾನೆ. ಅದರ ಚಿತ್ರಣವನ್ನು ನಮಗೆ ಕಟ್ಟಿಕೊಡುತ್ತಾನೆ.

ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕೆಲವೆಡೆ ಪದ್ಯದ ರೀತಿಯಲ್ಲಿ ಗದ್ಯವನ್ನು ಬಳಸಿರುವುದು ಬಿಟ್ಟರೆ ' ಮಿಸ್ಟರ್ A ' ನಿಮಗೊಂದು ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ನೀಡುವುದಂತೂ ಖಂಡಿತ.

- ಸಂಜಯ್‌ ಚಿತ್ರದುರ್ಗ

MORE FEATURES

ಗಜಲ್ ಕನ್ನಡ ಸಾಹಿತ್ಯದಲ್ಲಿ ಮಹತ್ತರವಾದ ಕಾವ್ಯ ಶಕ್ತಿಯಾಗಿ ಬೆಳೆಯುತ್ತಿದೆ

27-04-2024 ಬೆಂಗಳೂರು

"ಗಜಲ್ ನ ಕಾವ್ಯ ಬೀಜ ಮೊಳಕೆಯೊಡೆಯಲು ಆರಂಭಿಸಿದಾಗ ಶಾಂತರಸರ ಮಗಳಾದ ಶ್ರೀಮತಿ ಮುಕ್ತಾಯಕ್ಕನವರು ನೀರೆರೆದು ಪೋಷಿಸಿ ...

ಒಂದೆಲೆ ಮೇಲೆ ಕಾಡನ್ನು ನೋಡುವ ಮುನ್ನ

20-04-2024 ಬೆಂಗಳೂರು

"ಸುಳ್ಳು ಸುಳ್ಳು ಪುಸ್ತಕಗಳ ಕಾಲ ಅಂತಲೂ ಮುಂದೊಮ್ಮೆ ಈ ಕಾಲವನ್ನು ನೆನಪಿಸಿಕೊಳ್ಳುವ ಪ್ರಕಾಶನ ಕ್ಷೇತ್ರದಲ್ಲಿ ಹಾಡ್...

ಕಾಡಿನೊಳಗಿನ ಪ್ರಾಣಿ ಬದುಕಿನಲ್ಲಿ ಕಂಡು ಕೇಳರಿಯದ ಅಚ್ಚರಿಗಳಿವೆ

27-04-2024 ಬೆಂಗಳೂರು

'ಉಳಿವಿಗಾಗಿ ಓಡು, ಇಲ್ಲವೇ ಹೋರಾಡು' ಎನ್ನುವುದು ಸಸ್ಯಾಹಾರಿಗಳ ಪಾಡಾದರೆ 'ಹೋರಾಡಿ ಕೊಂದು ಹೊಟ್ಟೆ ತುಂಬಿಸ...