ಸೃಜನಶೀಲ ಸಾಹಿತ್ಯ ಕೃತಿಯ ಸೊಗಸಾದ ಓದಿನ ಅನುಭವ ‘ರಾತ್ರಿಗೆ ಸಾವಿರ ಕಣ್ಣುಗಳು’..


‘ಬ್ಯಾರಿಕೊನ ‘ವಿದೌಟ್ ಬ್ಲಡ್’ ಕಾದಂಬರಿಯು ದುರಾಸೆ ಹಾಗೂ ಅಧಿಕಾರಕ್ಕಾಗಿ ಹಪಾಹಪಿಸುವ ಮನುಷ್ಯನ ಕ್ರೌರ್ಯವನ್ನು ಹಾಗೂ ಆ ಕ್ರೌರ್ಯದಲ್ಲಿ ಸಿಕ್ಕು ಒದ್ದಾಡುವ ಪಾಡನ್ನು ಚಿತ್ರಿಸುತ್ತದೆ. ಹಿಂಸೆಯ ಬೋನಿನೊಳಗೆ ಬಿದ್ದಾಗ ಮನುಷ್ಯನ ಮನಸ್ಸು ಅನುಭವಿಸುವ ಯಾತನೆಯ ವಿವಿಧ ಬಗೆಗಳನ್ನು ಈ ಕಾದಂಬರಿಯು ನವಿರಾಗಿ ನಿರೂಪಿಸುತ್ತದೆ’.. ಸುಭಾಷ್ ರಾಜಮಾನೆ ಅವರ ‘ರಾತ್ರಿಗೆ ಸಾವಿರ ಕಣ್ಣುಗಳು’ ಕೃತಿಯಲ್ಲಿ ಅನುವಾದಕರ ಅರಿಕೆ ಹಾಗೂ ಸಾಹಿತಿ ದೇವು ಪತ್ತಾರ ಅವರು ಬರೆದಿರುವ ಬೆನ್ನುಡಿ ನಿಮ್ಮ ಓದಿಗಾಗಿ..

ಮನುಷ್ಯಲೋಕಕ್ಕೆ ಬಂದು ಅಪ್ಪಳಿಸಿದ ಕೊರೋನ ವೈರಸ್ ಹಾವಳಿಯನ್ನು ತಡೆಗಟ್ಟಲು 2020ರ ಮಾರ್ಚ್ ತಿಂಗಳ ಕೊನೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಆದೇಶ ಹೊರಡಿಸಲಾಯಿತು. ಕೋವಿಡ್-19 ಸೋಂಕಿನಿಂದ ಪಾರಾಗಲು ‘ಗೃಹ ಬಂಧನ’ದಲ್ಲಿ ಉಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಈ ಕರಾಳ ನಲವತ್ತು ದಿನಗಳಲ್ಲಿ ವಿಯೆಟ್ನಾಂ ದೇಶದ ಬೌದ್ಧ ಸಂನ್ಯಾಸಿ ತಿಚ್ ನ್ಹಾತ್ ಹಾನ್ ಅವರ ಎರಡು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಇಟಾಲಿಯನ್ ಲೇಖಕನ ಒಂದು ಕಾದಂಬರಿಯನ್ನು ಅನುವಾದಿಸಿದೆ. 

ನಾನು ಬೆಂಗಳೂರಿನಲ್ಲಿ ಮತ್ತೆ ಮತ್ತೆ ಎಡತಾಕುವ ಪುಸ್ತಕದಂಗಡಿಗಳೆಂದರೆ ರಾಜಾಜಿನಗರದ ಗುರುಪ್ರಸಾದರ ‘ಆಕೃತಿ ಪುಸ್ತಕ’, ಪುಟ್ಟಸ್ವಾಮಿಯವರ ‘ಲಾವಣ್ಯ ಪುಸ್ತಕ’, ಮಲ್ಲೇಶ್ವರಂನ ಪ್ರಸಾದ್ ಸಾಲ್ಯಾನರ ‘ಸೂರ್ಯ ಬುಕ್ಸ್’, ಚರ್ಚ್ಸ್ಟಟಿನ ಕೃಷ್ಟೇಗೌಡರ ‘ಬುಕ್‌ವರ್ಮ್’, ಮಾಯಿಗೌಡರ ‘ಬ್ಲಾಸಮ್ ಬುಕ್ ಹೌಸ್’ ಹಾಗೂ ಸಂಜಯ್ ಅವರ ‘ಸೆಲೆಕ್ಟ್ ಬುಕ್ಸ್’. ಇವುಗಳ ಒಳಹೊಕ್ಕರೆ ಸಮಯ ಸರಿದದ್ದೇ  ಗೊತ್ತಾಗುವುದಿಲ್ಲ. ಪುಸ್ತಕಗಳ ಹುಡುಕಾಟವು ತಲೆನೋವಿಲ್ಲದ ತಾಳ್ಮೆಯನ್ನು ಹಾಗೂ ಜನಸಂತೆಯ ನಡುವೆಯೂ ಏಕಾಗ್ರತೆಯನ್ನು ಅಪೇಕ್ಷಿಸುತ್ತದೆ. ಆದ್ದರಿಂದ ಪುಸ್ತಕಗಳ ಬೇಟೆಗೆ ಏಕಾಂಗಿಯಾಗಿ ಹೊರಡುವುದೇ ರೂಢಿಯಾಗಿದೆ. ಅಂಗಡಿಯಲ್ಲಿ ರಾಶಿ ರಾಶಿ ತುಂಬಿಕೊಂಡಿರುವ ಪುಸ್ತಕಗಳನ್ನು ನೋಡುತ್ತ ನಿಲ್ಲುವುದು ನನಗೆ ಅಂಟಿಕೊಂಡಿರುವ ವಿಚಿತ್ರ ವ್ಯಸನ. ಅವುಗಳಲ್ಲಿ ನನಗೆ ಇಷ್ಟವಾಗಿರುವ ಲೇಖಕರ ಕೃತಿಗಳನ್ನು ಹಾಗೂ ನನ್ನ ಅರಿವನ್ನು ಬೆಳೆಸುವ ಪುಸ್ತಕಗಳನ್ನು ಹೆಕ್ಕಿ ತೆಗೆಯುವುದು ದುಸ್ಸಾಹಸವೇ ಆಗಿರುತ್ತದೆ. ಯಾವುದೋ ಪುಸ್ತಕವನ್ನು ಹುಡುಕಿಕೊಂಡು ಹೋದರೆ ಮತ್ತಾವುದೋ ಕಂಡು ಕೇಳರಿಯದ ಅದ್ಭುತ ಪುಸ್ತಕವೇ ಕಣ್ಣಿಗೆ ಬಿದ್ದಿರುತ್ತದೆ. ಆಗ ಮನಸ್ಸಿಗಾಗುವ ಸಂತೋಷ ಹೇಳತೀರದು.

ನನಗೆ ಈ ಪುಸ್ತಕದಂಗಡಿಗಳಲ್ಲಿ ವ್ಯಾಪಾರವನ್ನು ಮೀರಿ ಮಿತ್ರರಾಗಿರುವ ಪುಟ್ಟಸ್ವಾಮಿ, ಗುರುಪ್ರಸಾದ್, ಪ್ರಸಾದ್ ಸಾಲ್ಯಾನ್, ಸಂಜಯ್, ಪ್ರೀತಂ ಎಷ್ಟೋ ಸಲ ತಮಗೆ ಗೊತ್ತಿರುವ ಅಪರೂಪದ ಕ್ಲಾಸಿಕ್ ಪುಸ್ತಕಗಳನ್ನು ನನ್ನೆದುರಿಗೆ ಹಿಡಿಯುವುದುಂಟು. ಮೂಗಿಗೆ ಅಡರುವ ಮಲ್ಲಿಗೆಯ ಪರಿಮಳದಂತೆ ಕೆಲವು ಆ ಕ್ಷಣಕ್ಕೆ ಇಷ್ಟವಾಗುತ್ತವೆ. ಇನ್ನು ಕೆಲವು ದುಬಾರಿ ಬೆಲೆ ಎನಿಸಿದ್ದುಂಟು. ಈ ಗೆಳೆಯರು ಪುಸ್ತಕ ಜಗತ್ತಿನೊಂದಿಗೆ ಹಾಗೂ ತರಹೇವಾರಿ ಓದುಗರೊಂದಿಗೆ, ಪುಸ್ತಕ ಸಂಗ್ರಾಹಕರೊಂದಿಗೆ ನಿರಂತರ ಒಡನಾಟವನ್ನು ಹೊಂದಿರುತ್ತಾರೆ. ಪುಸ್ತಕಗಳ ಬಗ್ಗೆ ಶಾಲಾ ಕಾಲೇಜು ಮೇಷ್ಟ್ರುಗಳಿಗಿಂತ ಹೆಚ್ಚು ತಿಳಿದುಕೊಂಡಿರುವ ಈ ಮಿತ್ರರು ನಾನು ನೋಡಿರದ, ಕೇಳಿರದ ಎಷ್ಟೋ ಲೇಖಕ/ಲೇಖಕಿಯರ ಅನುವಾದದ ಕೃತಿಗಳನ್ನು ಕೊಟ್ಟು ನನ್ನ ಅರಿವನ್ನು ವಿಸ್ತರಿಸಿದ್ದಾರೆ.  

ನಾನು ಪುಸ್ತಕ ಅಂಗಡಿಯೊಳಗೆ ಕಾಲಿಡುತ್ತಲೇ ಬೇಕಿರುವ ಪುಸ್ತಕಗಳನ್ನು ಕೇಳುತ್ತೇನೆ. ಹಾಗೆ ಕೇಳಿದ ತಕ್ಷಣಕ್ಕೆ ಜಗತ್ತಿನ ಯಾವುದೋ ಮೂಲೆಯ ಲೇಖಕನ ಕೃತಿಗಳು ಸಿಗುತ್ತವೆ ಎಂಬುದಕ್ಕೆ ಯಾವ ಗ್ಯಾರಂಟಿಯು ಇರುವುದಿಲ್ಲ. ನಮ್ಮಲ್ಲಿ ಸಿಗದಿರುವ ಪುಸ್ತಕಗಳನ್ನೇ ಕೇಳುತ್ತೀರಿ ಎಂಬುದು ಕೆಲವು ಮಿತ್ರರ ಖಾಯಂ ತಕರಾರು. ಆದರೂ ನನ್ನ ಆಸಕ್ತಿಯನ್ನು ಕೆರಳಿಸುವ ಸಾಕಷ್ಟು ಪುಸ್ತಕಗಳನ್ನು ತಂದು ಗುಡ್ಡೆ ಹಾಕುತ್ತಲೇ ಇರುತ್ತೇನೆ. ಈಗೊಂದು ವರುಷದ ಹಿಂದೆ ‘ಬುಕ್‌ವರ್ಮ್’ನಲ್ಲಿ ‘ವಿದೌಟ್ ಬ್ಲಡ್’ ಎಂಬ ಸಣ್ಣ ಪುಸ್ತಕವು ಸಿಕ್ಕಿತು. ಪುಸ್ತಕದ ಮುಖಪುಟದಲ್ಲಿ ಗೋಧಿಯ ಹೊಲದಲ್ಲಿ ಕಗ್ಗತ್ತಲಿನತ್ತ ನಡೆದುಕೊಂಡು ಹೋಗುತ್ತಿರುವ ಸಣ್ಣ ಮಗುವಿನ ಚಿತ್ರವು ನನ್ನ ಮನಸಿನಲ್ಲಿ ಹಲವು ಭಾವನೆಗಳನ್ನು ಮೂಡಿಸಿತು. ಅಲ್ಲೇ ಪುಸ್ತಕದ ಪುಟಗಳನ್ನು ತಿರುವಿ ಹಾಕುವಾಗ ಅದರೊಳಗಿನ ಸಣ್ಣ ಸಣ್ಣ ವಾಕ್ಯಗಳಿಂದ ಆಕರ್ಷಿತನಾದೆ. ಅಲ್ಲಲ್ಲಿ ಪ್ಯಾರಾಗಳ ನಡುವಿನ ಖಾಲಿ ಸ್ಪೇಸು ಮನಸ್ಸಿಗೆ ಹಿಡಿಸಿತು. ಈ ಪರಿಯ ಕಿರುವಾಕ್ಯಗಳೇ ತುಂಬಿರುವ ಪುಸ್ತಕವನ್ನು ನಾನು ನೋಡಿರಲಿಲ್ಲ. ಆ ಪುಸ್ತಕದ ಮೇಲಿದ್ದ ಅಲೆಸ್ಸಂಡ್ರೊ ಬ್ಯಾರಿಕೊ ಎಂಬ ಲೇಖಕನ ಹೆಸರನ್ನು ನಾನು ಈ ಮೊದಲು ಕೇಳಿರಲಿಲ್ಲ. ಮೂಲತಃ ಇಟಾಲಿಯ ಭಾಷೆಯಲ್ಲಿ ಈ ಕಾದಂಬರಿಯ ಹೆಸರು ‘ಸೆಂಜಾ಼ ಸ್ಯಾಂಗ್ಯೂ’. ಆನ್ಯ್ ಗೋಲ್ಡ್ಸ್ಟೀನ್ ಅವರು ಇದನ್ನು ಇಂಗ್ಲಿಷಿಗೆ ಅನುವಾದಿಸಿ ಇಟಾಲಿಯ ಅರ್ಥಕ್ಕನುಸಾರವಾಗಿ ‘ವಿದೌಟ್ ಬ್ಲಡ್’ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಇದನ್ನು ಮನೆಗೆ ತಂದು ಒಂದೇ ಗುಕ್ಕಿನಲ್ಲಿ ಓದಿದೆ. ಎಂಬತ್ತೇಳು ಪುಟಗಳ ಈ ಕಾದಂಬರಿಯನ್ನು ಎಂದಾದರೂ ಕನ್ನಡಕ್ಕೆ ತರಬೇಕೆಂಬ ಆಸೆ ಮೂಡಿತು.  

ಅಂತಹ ಅವಕಾಶವನ್ನು ಆಕಸ್ಮಿಕವಾಗಿ ಏಪ್ರಿಲ್ ತಿಂಗಳ ಲಾಕ್‌ಡೌನ್ ಒದಗಿಸಿದ್ದರಿಂದ ‘ವಿದೌಟ್ ಬ್ಲಡ್’ ಕಾದಂಬರಿಯ ಅನುವಾದಕ್ಕೆ ತೊಡಗಿದೆ. ಹದಿನೈದು ದಿನಗಳಲ್ಲಿ ಈ ಅನುವಾದ ಕಾರ್ಯವನ್ನು ಮುಗಿಸಿದೆ. ಕಥನ ನಿರೂಪಣೆಯ ಎಳೆಯನ್ನು ಅನುಸರಿಸಿಕೊಂಡು ಹೋಗುವುದು ಕಾದಂಬರಿಯ ಅನುವಾದದಲ್ಲಿ ಮುಖ್ಯವಾಗಿರುತ್ತದೆ. ಕಾದಂಬರಿಯ ಪಾತ್ರಗಳಿಂದ, ವಾಕ್ಯಗಳಿಂದ, ಮಾತುಗಳಿಂದ, ಸಂಭಾಷಣೆಗಳಿಂದ, ನಿರೂಪಣೆಯ ತಂತ್ರದಿಂದ ಹಾಗೂ ಇವುಗಳ ಮೂಲಕ ಹೊರಡುವ ಧ್ವನಿಪೂರ್ಣತೆಯನ್ನು ಅರ್ಥಮಾಡಿಕೊಂಡು ಭಾಷಾಂತರ ಮಾಡಬೇಕಾಗುತ್ತದೆ. ಇಂದು ಕಾದಂಬರಿ ಪ್ರಕಾರವು ಹುಲುಸಾಗಿ ಬೆಳೆದು ನಿಂತಿದೆ. ಅದೊಂದು ಸೃಜನಶೀಲ ಕಲಾತ್ಮಕ ರಚನೆಯಾಗಿ ಎಂತಹ ಮೌಲ್ಯಗಳನ್ನು, ನೈತಿಕತೆಯನ್ನು ಹಾಗೂ ನಿಲುವುಗಳನ್ನು ಪ್ರತಿನಿಧಿಸುತ್ತದೆ ಎಂಬುದರ ನೆಲೆಯಲ್ಲಿ ಆ ಲೇಖಕನ ಮಹತ್ವವನ್ನು ಅರಿಯಬಹುದು. ಲೇಖಕನ ಆಶಯಗಳನ್ನು ಮೀರಿ ಆ ಕೃತಿಯು ಬೆಳೆಯಬಹುದು.

ಬ್ಯಾರಿಕೊನ ‘ವಿದೌಟ್ ಬ್ಲಡ್’ ಕಾದಂಬರಿಯು ದುರಾಸೆ ಹಾಗೂ ಅಧಿಕಾರಕ್ಕಾಗಿ ಹಪಾಹಪಿಸುವ ಮನುಷ್ಯನ ಕ್ರೌರ್ಯವನ್ನು ಹಾಗೂ ಆ ಕ್ರೌರ್ಯದಲ್ಲಿ ಸಿಕ್ಕು ಒದ್ದಾಡುವ ಪಾಡನ್ನು ಚಿತ್ರಿಸುತ್ತದೆ. ಹಿಂಸೆಯ ಬೋನಿನೊಳಗೆ ಬಿದ್ದಾಗ ಮನುಷ್ಯನ ಮನಸ್ಸು ಅನುಭವಿಸುವ ಯಾತನೆಯ ವಿವಿಧ ಬಗೆಗಳನ್ನು ಈ ಕಾದಂಬರಿಯು ನವಿರಾಗಿ ನಿರೂಪಿಸುತ್ತದೆ. ಇದನ್ನು ಓದುವಾಗ ಪೂರ್ಣಚಂದ್ರ ತೇಜಸ್ವಿಯವರ ‘ನಿಗೂಢ ಮನುಷ್ಯರು’ ನೀಳ್ಗತೆ ನೆನಪಾಯಿತು. ಆಲನಹಳ್ಳಿ ಕೃಷ್ಣ, ದೇವನೂರ ಮಹಾದೇವ ಹಾಗೂ ಯಶವಂತ ಚಿತ್ತಾಲರ ಕೆಲವು ಕತೆಗಳ ಶೈಲಿಯು ಕೂಡ ನೆನಪಾದವು. ತೇಜಸ್ವಿಯವರ ಪತ್ತೇದಾರಿ ಕಥಾನಕದ ಶೈಲಿಯು ಬ್ಯಾರಿಕೊನಲ್ಲಿದೆ. ಆದರೆ ತೇಜಸ್ವಿಯವರ ಭಾಷೆಗಿರುವ ವ್ಯಂಗ್ಯ ವಿಡಂಬನೆ ವೈನೋದಿಕ ಪ್ರಜ್ಞೆಯು ಬ್ಯಾರಿಕೊನಲ್ಲಿ ಇಲ್ಲ. ಹಾಗೆ ಇರಬೇಕೆಂದು ಹೇಳುವುದು ನನ್ನ ಉದ್ದೇಶವಲ್ಲ. ಓದುವಾಗ ಮನಸ್ಸು ಬೇರೆ ಬೇರೆ ಓದುಗಳಿಗೆ ತೆರೆದುಕೊಳ್ಳುವ ಬಗೆಯನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಅಷ್ಟೇ.

ಅಲೆಸ್ಸಂಡ್ರೊ ಬ್ಯಾರಿಕೊನ ಈ ಕಾದಂಬರಿಯಲ್ಲಿ ಹರಳುಗಟ್ಟಿರುವ ಸ್ಪಟಿಕದ ಸಲಾಕೆಯಂತಹ ಭಾಷಿಕ ರಚನೆಯು ಅನನ್ಯವಾಗಿದೆ. ಇದರಲ್ಲಿ ಅಲಂಕಾರಿಕ ಭಾಷೆಯಿಲ್ಲ; ಯಾವುದೇ ವ್ಯಕ್ತಿ, ಪಾತ್ರ, ಊರು, ಘಟನೆಗಳಿಗೆ ವಿಶೇಷಣಗಳನ್ನು ಲೇಪಿಸಿಲ್ಲ; ಸರಳವಾದ ಭಾಷಿಕ ನಿರೂಪಣೆಯಲ್ಲಿಯೇ ಸಂಕೀರ್ಣತೆಯನ್ನು ಸೃಷ್ಟಿಸಲಾಗಿದೆ. ಇದನ್ನು ನಿರಾಭರಣ ಭಾಷೆ ಎಂದೇ ಹೇಳಬೇಕು. ಆದರೂ ಆ ನಿರಾಭರಣತೆಯ ಒಳಗಿನಿಂದಲೇ ಒಂದು ಅಮೂರ್ತ ಚೆಲುವು ಒಡಮೂಡಿದೆ. ಬ್ಯಾರಿಕೊನ ಎಲ್ಲ ಕಾದಂಬರಿಗಳಲ್ಲಿ ಎದ್ದುಕಾಣುವ ಗುಣವೆಂದರೆ ಭಾಷೆಯ ಹಿತಮಿತವಾದ ಬಳಕೆ ಹಾಗೂ ನಿರೂಪಣೆಯ ವಿಭಿನ್ನ ಮಾದರಿಗಳು. ಇವು ಲೇಖಕನ ನಿರ್ದಿಷ್ಟ ಶೈಲಿಯನ್ನು ಹಾಗೂ ಬರಹದ ವಿಧಾನವನ್ನು ಎತ್ತಿ ತೋರಿಸುತ್ತವೆ. 

ಈ ಕೃತಿಯು ಸಂಭಾಷಣಾ ಪ್ರಧಾನ ಕೃತಿಯಂತೆಯೇ ಕಾಣುತ್ತದೆ. ಆದರೆ ಈ ಸಂಭಾಷಣೆಗಳಲ್ಲಿ ಬಂದಿರುವ ಸುದೀರ್ಘ ಮೌನಗಳು ಅಚ್ಚರಿಯನ್ನು ಹುಟ್ಟಿಸುತ್ತದೆ. ಸಂಭಾಷಣೆಯನ್ನು ನಿರೂಪಣೆಯೊಳಗೆ ಹದವಾಗಿ ಬೆರೆಸಲಾಗಿದೆ. ಸಂಭಾಷಣೆಗಳು ಅತಿಯಾದರೆ ಅದು ವಾಚಾಳಿತನದ ರೂಪವನ್ನು ಪಡೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ; ಇದರಿಂದಾಗಿ ಕೃತಿಯ ಬಂಧವು ತನ್ನ ಬಿಗಿಯನ್ನು ಕಳೆದುಕೊಂಡು ಸಡಿಲವಾಗುತ್ತದೆ. ಆದರೂ ಈ ಕಾದಂಬರಿಯು ಹೆಚ್ಚು ಮಾತುಕತೆಯನ್ನು ಒಳಗೊಂಡಿದ್ದರೂ ಕೃತಿಯ ಆಶಯಕ್ಕೆ ಎಲ್ಲಿಯೂ ಧಕ್ಕೆಯಾಗಿಲ್ಲ. 

ಅರ್ನೆಸ್ಟ್ ಹೆಮಿಂಗ್ವೆ, ಮಾರ್ಕ್ವೆಸ್‌ನಂತೆ ಮೂಲತಃ ಪತ್ರಕರ್ತನಾಗಿರುವ ಬ್ಯಾರಿಕೊಗೆ ಸಾಹಿತ್ಯ ಕೃತಿಯನ್ನು ಓದುಗರಿಗೆ ಮನಮುಟ್ಟುವ ಹಾಗೆ ಸಂವಹನಗೊಳಿಸುವ ಕಲೆಯು ಕರಗತವಾಗಿದೆ. ಆತ ಸಿನಿಮಾ ಚಿತ್ರಕತೆಗಳನ್ನು ಬರೆದು ನಿರ್ದೇಶನವನ್ನೂ ಮಾಡಿರುವುದರಿಂದ ಅವನ ಕಾದಂಬರಿಗಳು ಸಹಜವಾಗಿಯೇ ಸಿನಿಮೀಯ ದೃಶ್ಯಗಳನ್ನು ಒಳಗೊಂಡಿರುತ್ತವೆ. ಬೆಳ್ಳಿ ಪರದೆಯ ಮೇಲೆ ನಡೆಯುವ ಸಿನಿಮಾ ದೃಶ್ಯಗಳಂತೆಯೇ ಕಾದಂಬರಿಯ ವಿವರಗಳು ಕಣ್ಮುಂದೆ ಘಟಿಸುತ್ತಿರುವ ತಂತ್ರವನ್ನು ಬಳಸುತ್ತಾನೆ. ‘ವಿದೌಟ್ ಬ್ಲಡ್’ ಓದುವಾಗ ಅಲ್ಲಿಯ ವಿವರಣೆಗಳು ಸಿನಿಮಾದಂತೆಯೇ ಮನಸ್ಸಿನ ಕನ್ನಡಿಯಲ್ಲಿ ಬಿಂಬಗಳಾಗಿ ಗೋಚರಿಸುತ್ತವೆ. 

‘ವಿದೌಟ್ ಬ್ಲಡ್’ ಕಾದಂಬರಿಯ ಕನ್ನಡ ಅನುವಾದದ ಕೃತಿಗೆ ‘ರಾತ್ರಿಗೆ ಸಾವಿರ ಕಣ್ಣುಗಳು’ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದೇನೆ. ಇದು ೧೯ನೇ ಶತಮಾನದ ಫ್ರಾನ್ಸಿಸ್ ವಿಲಿಯಂ ಬಾರ್ಡಿಲನ್ ಎಂಬ ಬಿಟಿಷ್ ಕವಿಯ ‘ದಿ ನೈಟ್ ಹ್ಯಾಸ್ ಅ ಥೌಸಂಡ್ ಐಸ್’ ಎಂಬ ಕವಿತೆಯ ಮೊದಲ ಸಾಲು. ಈ ಕವಿತೆಯನ್ನು ಕುವೆಂಪು ಅವರು ೧೯೪೭ರಲ್ಲಿ ‘ಮನಸ್ಸು-ಹೃದಯ’ ಹೆಸರಲ್ಲಿ ಅನುವಾದಿಸಿದ್ದಾರೆ. ಇದು ಅವರ ‘ಷೋಡಶಿ’ ಕವನ ಸಂಕಲನದಲ್ಲಿದೆ. ಕುವೆಂಪು ಅವರ ಅನುವಾದವು ಮೂಲ ಕವಿತೆಯನ್ನು ಮೀರಿಸುವಷ್ಟು ಶಕ್ತಿಶಾಲಿಯಾಗಿ ಅರಳಿದೆ. ಇದರ ಮೊದಲ ಸಾಲು ‘ವಿದೌಟ್ ಬ್ಲಡ್’ ಕಾದಂಬರಿಯ ಕಥಾನಕದ ದೃಷ್ಟಿಯಿಂದ ಸೂಕ್ತವೆಂದು ಭಾವಿಸಿದ್ದೇನೆ. 

ಈ ಕೃತಿಯ ಆರಂಭದಲ್ಲಿಯೇ ಒಂದು ಕರಾಳ ರಾತ್ರಿಯಲ್ಲಿ ತಂದೆ ಮಕ್ಕಳ ಮೇಲೆ ಹಿಂಸಾತ್ಮಕ ದಾಳಿಯು ನಡೆಯುತ್ತದೆ ಹಾಗೂ ಅದೇ ಘಟನೆಯು ಅಂತ್ಯದವರೆಗೂ ಲೀಡ್ ಮಾಡಿಕೊಂಡು ಹೋಗುತ್ತದೆ. ಈ ದಾಳಿಯಲ್ಲಿ ನಾಲ್ಕು ವರ್ಷದ ಮಗು ಬದುಕುಳಿಯುತ್ತದೆ. ಈ ಮಗುವಿನ ಜೀವನವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಅಂದು ತನ್ನ ಪ್ರಾಣವನ್ನು ರಕ್ಷಿಸಿದವನೊಂದಿಗೆ ಕೆಲವು ದಶಕಗಳ ನಂತರದಲ್ಲಿ ಆಕೆಯ ಮುಖಾಮುಖಿ ಆಗುತ್ತದೆ. ಆಗ ಅದೇ ಘಟನೆಯ ಬೇರೆ ಬೇರೆ ದೃಷ್ಟಿಕೋನಗಳು ನಿರೂಪಿತವಾಗುತ್ತವೆ. ಆದರೂ ಇದೊಂದು ಮಾಮೂಲಿ ಸೇಡು, ದ್ವೇಷಗಳ ಕತೆಯಾಗದೇ ಪ್ರೀತಿಯನ್ನು ತುಂಬಿದ ಅಮೃತವಾಹಿನಿಯ ಕಥನವಾಗಿ ಮಾರ್ಪಡುತ್ತದೆ. 

ಇಟಲಿಯ ಜಗದ್ವಿಖ್ಯಾತ ಲೇಖಕ, ಕತೆಗಾರ, ಕಾದಂಬರಿಕಾರ ಇಟಾಲೊ ಕ್ಯಾಲ್ವಿನೊ (1923-1985) ಅವರ ಪ್ರಭಾವವನ್ನು ಬ್ಯಾರಿಕೊ ಮೇಲಾಗಿರುವುದನ್ನು ವಿಮರ್ಶಕರು ಗುರುತಿಸಿದ್ದಾರೆ. ಕ್ಯಾಲ್ವಿನೊ ಅವರ ಕಥನ ನಿರೂಪಣೆಯ ಶೈಲಿಯನ್ನು ಬ್ಯಾರಿಕೊ ಮತ್ತೊಂದು ರೂಪದಲ್ಲಿ ಹಾಗೂ ವಿಭಿನ್ನವಾದ ರೀತಿಯಲ್ಲಿ ಮುಂದುವರೆಸಿದ್ದಾನೆ ಎಂದು ಹೇಳಲಾಗುತ್ತದೆ. ನನಗೆ ತಿಳಿದಂತೆ ಮೊದಲ ಬಾರಿಗೆ ಅಲೆಸ್ಸಂಡ್ರೊ ಬ್ಯಾರಿಕೊನ ಕೃತಿಯೊಂದನ್ನು ಕನ್ನಡಕ್ಕೆ ಭಾಷಾಂತರ ಮಾಡಿರುವ ಸಂತೋಷ ನನಗಿದೆ.               

ಕೃತಿಯ ಬೆನ್ನುಡಿ

ಸಿನಿಮೀಯ ದೃಶ್ಯ ಮತ್ತು ನಾಟಕೀಯ ತಿರುವುಗಳಿರುವ ಅಲೆಸ್ಸಂಡ್ರೊ ಬ್ಯಾರಿಕೊನ ಕಿರುಕಾದಂಬರಿ Without Blood.. ವಸ್ತು ಹಾಗೂ ಗಾತ್ರದ ದೃಷ್ಟಿಯಿಂದ ನೀಳ್ಗತೆಯಂತಿರುವ ಈ ಕೃತಿಯು ಸಂಭಾಷಣಾ ಪ್ರಧಾನ ನಿರೂಪಣಾ ತಂತ್ರ ಒಳಗೊಂಡಿದೆ. ಇಟಾಲಿಯಾ ಭಾಷೆಯಿಂದ ಇಂಗ್ಲಿಷಿಗೆ ಅನುವಾದಗೊಂಡಿರುವ ಕೃತಿಯನ್ನು ಸುಭಾಷ್ ರಾಜಮಾನೆ ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. 

ಕ್ರೌರ್ಯ-ಹಿಂಸೆಯ ಮೂಲಕ ಆರಂಭವಾಗುವ ಈ ಕಾದಂಬರಿಯು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಜೀವಪರ ಕಾಳಜಿಯ ಕ್ಲೈಮ್ಯಾಕ್ಸ್ ಗಮನ ಸೆಳೆಯುತ್ತದೆ. ಓ ಹೆನ್ರಿಯ ಸಣ್ಣಕತೆಗಳಲ್ಲಿ ಇರುವ ಹಠಾತ್ ಬೆರಗು-ಅಚ್ಚರಿ ಮೂಡಿಸುವ ಅಂತ್ಯದ ಮಾದರಿ ಈ ಕಾದಂಬರಿಯಲ್ಲಿಯೂ ಇದೆ. ಕತೆಯುದ್ದಕ್ಕೂ ಇರುವ ಪಾತ್ರ, ವಿವರಗಳು ‘ಅಂತ್ಯ’ಕ್ಕಾಗಿ ದುಡಿಯುತ್ತಿರುತ್ತವೆ. ಇಟಾಲಿಯಾ ಹಾಗೂ ಇಂಗ್ಲಿಷಿನ ಮೂಲಕ ಯುರೋಪಿನ ಓದುಗರಿಗೆ ಪ್ರಿಯವಾಗಿದ್ದ ಈ ಕಾದಂಬರಿಯ ನೇಯ್ಗೆಯ ರೀತಿ ಓದುಗನಲ್ಲಿ ಆಸಕ್ತಿ ಹುಟ್ಟಿಸಿ, ಕುತೂಹಲ ಹೆಚ್ಚಿಸಿ ಅದನ್ನು ತಣಿಸುತ್ತದೆ.

ಒಂದು ಕರಾಳ ರಾತ್ರಿಯ ಹಿಂಸಾತ್ಮಕ ದಾಳಿ ಇಡೀ ಕುಟುಂಬದ ‘ನಾಶ’ ಹಾಗೂ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿಯುವ ನೈನಾಳ ಆಘಾತಕ್ಕೆ ಕಾರಣವಾಗುತ್ತದೆ. ಐದು ದಶಕಗಳ ನಂತರ ಹತ್ಯೆಯ ಭಾಗವಾಗಿದ್ದೂ ಬದುಕುಳಿದಿದ್ದ ಏಕೈಕ ವ್ಯಕ್ತಿ ಹಾಗೂ ನೈನಾಳ ನಡುವಿನ ಮುಖಾಮುಖಿ, ಮಾತು-ಕತೆ, ನೆನಪುಗಳು ಕರುಣೆ, ಕ್ಷಮೆ, ಮಾನವೀಯತೆಗಳನ್ನು ಹಿಡಿದಿಡುತ್ತವೆ. ಒಂದು ಸೃಜನಶೀಲ ಸಾಹಿತ್ಯ ಕೃತಿಯ ಸೊಗಸಾದ ಓದಿನ ಅನುಭವ ಕಟ್ಟಿಕೊಡುವ ಕಾದಂಬರಿಯಿದು.

ಸುಭಾಷ್ ರಾಜಮಾನೆ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ರಾತ್ರಿಗೆ ಸಾವಿರ ಕಣ್ಣುಗಳು’ ಕೃತಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

ಲೇಖಕ ದೇವು ಪತ್ತಾರ ಅವರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ..


 

MORE FEATURES

ಬಾಬಾ ಸಾಹೇಬರ ಜ್ಞಾನಾಮೃತವನ್ನು ಕನ್ನಡಕ್ಕೆ ತಂದಿರುವ ಕಾರ್ಯ ಮೆಚ್ಚುವಂತಹದ್ದು

10-05-2024 ಬೆಂಗಳೂರು

ಆರಡಿ ಮಲ್ಲಯ್ಯ ಅವರ ವೈಚಾರಿಕ ಚಿಂತನೆಯ ದೂರದೃಷ್ಟಿಯಿಂದ ಬಾಬಾ ಸಾಹೇಬರ ಜ್ಞಾನಾಮೃತವನ್ನು ಕನ್ನಡಕ್ಕೆ ತಂದಿರುವ ಕಾರ್ಯವಂತ...

ಈ ಕಾದಂಬರಿ ನನ್ನ ಶಾಲಾ ಅನುಭವಗಳ ಒಟ್ಟು ಮೊತ್ತ: ಮಧು ವೈ.ಎನ್

10-05-2024 ಬೆಂಗಳೂರು

‘ಕಳೆದ ನಾಲೈದು ವರುಷಗಳಲ್ಲಿ ಆಗಾಗ್ಗೆ ಮೊಳಕೆಯೊಡೆದು ಅಲ್ಲಲ್ಲೆ ಮುದುಡಿಕೊಳ್ಳುತ್ತಿದ್ದ ಕತೆ ಈ ರೂಪ ತಾಳಿರುವುದು ...

ವಚನಗಳ ಮೂಲಕ ಮಾನವೀಯತೆ ಬಿತ್ತಿದ ಮಾನವತಾವಾದಿ ಬಸವಣ್ಣ

10-05-2024 ಬೆಂಗಳೂರು

" ಬಸವಣ್ಣ ಶರಣರನ್ನು ಒಗ್ಗೂಡಿಸಿ ಸಮಾಜದ ಅಂಕುಡೊಂಕು ತಿದ್ದಲು ಪ್ರೇರೇಪಿಸಿದರು. ಇಡೀ ಜೀವನವನ್ನು ಮನುಕುಲದ ಕಲ್ಯಾಣ...