ಸ್ಥಳೀಯತೆಯ ಸುಂದರ ಬರಹಕ್ಕೊಂದು ಮಾದರಿ ಕೃತಿ-ಪುರಾತನ ಲಖನೌ


‘ಸ್ಥಳೀಯತೆ’ಯ ಸಮಗ್ರ ಆಯಾಮಗಳನ್ನುಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿ, ಉತ್ಕೃಷ್ಟ ಸಾಹಿತ್ಯ ರೂಪು ನೀಡಿದ ಅಬ್ದುಲ್ ಹಲೀಮ್ ಶರರ್ ಅವರ ಉರ್ದು ಭಾಷೆಯ ‘ಗುಜಸ್ತಾ ಲಕ್ನೌ’ ಕೃತಿಯ ಕನ್ನಡ ರೂಪಾಂತರ ‘ಪುರಾತನ ಲಖನೌ’. ಅನುವಾದಕರು ಡಾ. ಪಂಚಾಕ್ಷರಿ ಹಿರೇಮಠ. ಈ ಕೃತಿಗೆ ಕನ್ನಡ ಅನುವಾದ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ. ಪ್ರಾಚೀನ ‘ಲಖನೌ’ ವಿವರವಷ್ಟೇ ಅಲ್ಲ; ಓದುಗರು ‘ಲಖನೌ’ ಆತ್ಮವನ್ನೇ ತಲುಪುತ್ತಾರೆ ಎಂಬ ವಿಶೇಷಣೆಗಳು, ಇಲ್ಲಿಯ ಆಕರ್ಷಕ ಶೈಲಿ, ಆಳ ಅಧ್ಯಯನ, ಅನುಭವದ ಗಟ್ಟಿತನ, ಅಭಿವ್ಯಕ್ತಿ ಸೂಕ್ಷ್ಮತೆ, ಅನುವಾದದ ಸೌಂದರ್ಯಗಳಿಗೆ ಕನ್ನಡಿ ಹಿಡಿಯುತ್ತವೆ. ಈ ಕೃತಿಯ ಕುರಿತು ಪತ್ರಕರ್ತ ವೆಂಕಟೇಶ ಮಾನು ಅವರ ಅಭಿಪ್ರಾಯದ ಪಠ್ಯವಿದು;

ಪುರಾತನ ಲಖನೌ- ಅತ್ಯಂತ ವಿರಳ ಹಾಗೂ ಅಪರೂಪ ಸಂಗತಿಗಳ ಐತಿಹಾಸಿಕ ಲೇಖನವಲ್ಲ; ಕಲ್ಪನಾ ಸೌಂದರ್ಯದ, ಕಟು ವಾಸ್ತವದ ಸಾಹಿತ್ಯ ಕೃತಿ ಇಲ್ಲವೇ ಮನರಂಜನೆಯ ಕೃತಿಯೂ ಅಲ್ಲ; ಎಲ್ಲೋ ಹುಟ್ಟಿ ಎಲ್ಲೋ ತೇಲುವ ವಿಷಯ ವಸ್ತುವಿನ ಪ್ರಬಂಧವಂತೂ ಅಲ್ಲವೇ ಅಲ್ಲ; ಈ ಕೃತಿಯನ್ನು ಯಾವ ಪ್ರಕಾರಕ್ಕಾದರೂ ಸೇರಿಸಿ. ಓದಿಸಿಕೊಂಡು ಹೋಗುವ ಗುಣ ಇದ್ದರೆ ಅದು ‘ಶ್ರೇಷ್ಠ ಕೃತಿ’ಗೆ ಮಾನದಂಡವೇ.

ಕನ್ನಡ ಸಾಹಿತ್ಯದಲ್ಲಿ‘ಸ್ಥಳೀಯತೆ’ಯ ಪರಿಕಲ್ಪನೆಯನ್ನುಸುಂದರವಾಗಿ ಕಟ್ಟಿಕೊಡುವ ಕೆಲವೇ ಕೆಲವು ಕೃತಿಗಳ ಪೈಕಿ-‘ಪುರಾತನ ಲಖನೌ’ ಸಹ ಒಂದು.ಲಖನೌ ಮೂಲದ ಅಬ್ದುಲ್ ಹಲೀಮ್ ಶರರ್ ಅವರ ‘ಗುಜಸ್ತಾ ಲಕ್ನೌ’ ಕೃತಿಯನ್ನು ಕನ್ನಡಕ್ಕೆ ರೂಪಾಂತರಿಸಿದವರು-ಡಾ. ಪಂಚಾಕ್ಷರಿ ಹಿರೇಮಠ. ಕೃತಿಯನ್ನು ಪ್ರಕಟಿಸಿದ್ದು-ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ.

‘ಸ್ಥಳೀಯತೆ’ ಸೌಂದರ್ಯ : ಸ್ಥಳೀಯತೆಯು: ನಿಶ್ಚಿತ ಅಥವಾ ಸೀಮಿತವಾದ ಒಂದು ಪ್ರದೇಶದ ಇತಿಹಾಸ, ಸಾಹಿತ್ಯ, ಜನಜೀವನ, ವೈಭವ, ಕರಾಳತೆ, ಹೆಣ್ಣಿನ ಸ್ಥಾನಮಾನ...ಹೀಗೆ ವಿವಿಧ ಆಯಾಮಗಳಲ್ಲಿ ಭೂತ ಹಾಗೂ ವರ್ತಮಾನಗಳ ದಾಖಲೀಕರಣವೂ ಆಗಿದೆ. ಈ ಪ್ರಕ್ರಿಯೆಯಲ್ಲಿ ಸಣ್ಣ-ಅತೀ ಸಣ್ಣ ಘಟನೆ, ವ್ಯಕ್ತಿ, ಸನ್ನಿವೇಶ, ಸಾಮಾಜಿಕ -ಸಾಂಸ್ಕೃತಿಕ, ರಾಜಕೀಯ, ಆರ್ಥಿಕ.. ಹೀಗೆ ಯಾವುದೇ ಚಟುವಟಿಕೆಯು ಆ ಪ್ರದೇಶದ ಜೀವಂತಿಕೆಯಾಗಿರುತ್ತದೆ. ಒಂದು ಪ್ರದೇಶಕ್ಕೆ ಸೀಮಿತವಾದ ಸಾಮಂತರೂ, ಶ್ರೀಮಂತರೂ, ಅವರ ವಿಲಾಸ ಕೂಟಗಳೂ, ದರಿದ್ರರ ಮೂಕ ರೋದನ, ನೋವನ್ನೇ ಉಸಿರಾಡುವ ಮುಷಾಯಿರಾಗಳು, ಅವುಗಳಿಂದಲೇ ಒಂದಿಷ್ಟು ನೆಮ್ಮದಿ ಪಡೆಯುವ ಓಣಿ ಓಣಿಯ ಗಲ್ಲಿಗಳು, ಒಂದು ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾದ ಕಿರು ರಸ್ತೆಗಳು, ಆ ರಸ್ತೆಯಲ್ಲಿಯ ನತದೃಷ್ಟ ವ್ಯಕ್ತಿಯ ಇಲ್ಲವೇ ಗುಂಪುಗೂಡಿ ಸಂತಸಿಸುವ ಕಟ್ಟೆ, ಒಂದು ಮನೆಯಿಂದ ಹೊರಡುವ ಸಂಗೀತ…..ಹೀಗೆ ಒಂದೇ ಎರಡೇ..! ವೃದ್ಧೆಯರು, ಗರತಿಯರು, ವೇಶ್ಯೆಯರು, ಯುವತಿಯರು, ವಿಧುರರು, ವಿಧವೆಯರು, ವ್ಯಾಪಾರ, ಹಬ್ಬ-ಆಚರಣೆ, ಆಹಾರ ಪದ್ಧತಿ, ವಿಶಿಷ್ಟ್ಯ ತಿನಿಸು ಹೀಗೆ ಎಲ್ಲವನ್ನೂ ಸ್ಥಳೀಯತೆ ಒಳಗೊಂಡಿದೆ. ಸ್ಥಳೀಯ ವೈಶಿಷ್ಟ್ಯಗಳನ್ನು ದಾಖಲಿಸಿದರೆ ಬಹುದೊಡ್ಡ ಇತಿಹಾಸವಾಗದು.ಆದರೆ, ಸ್ಥಳೀಯ ಮಟ್ಟದಲ್ಲಿ ಯಾವುದೇ ಪೂರ್ವಗ್ರಹವಿಲ್ಲದೇ ಇತಿಹಾಸವನ್ನು ಗ್ರಹಿಸಲು ಪೂರಕವಾಗುವ ಒಳನೋಟಗಳನ್ನು ನೀಡುತ್ತದೆ. ಇತಿಹಾಸ ಅಧ್ಯಯನಕ್ಕೆ ಈ ಸ್ಥಳೀಯತೆಯು ಹಿಂಬೆಳಕು ಮಾತ್ರವಲ್ಲ ಮುನ್ನೋಟವೂ ಆಗಿರುತ್ತದೆ. ವಿಸ್ತಾರದ ಮೊಗಲ್ ಸಾಮ್ರಾಜ್ಯ-ಅರಸರು-ಅವರ ವೈಭವ ಮಾತ್ರ ಇತಿಹಾಸವಲ್ಲ; ಮಹಾಕಾವ್ಯವೇ ಸಾಹಿತ್ಯವಲ್ಲ; ಸಣ್ಣ ಊರಿನ ಸಣ್ಣ ಘಟನೆಯೂ ಸಾಹಿತ್ಯದ ಸುಂದರ ಸ್ಪರ್ಶದಿಂದ ಉತ್ತಮ ಸಾಹಿತ್ಯವಾಗುತ್ತದೆ. ಘಟನೆಯ ತೀವ್ರತೆಯು ಇತಿಹಾಸವಾಗುತ್ತದೆ. ಅದರಂತೆ, ‘ಲಖನೌ’ದಂತಹ ಸಾಂಸ್ಕೃತಿಕ ನಗರಿಯ ಲವಲವಿಕೆಯನ್ನು, ಅಪರೂಪದ ಸಂಗತಿಗಳನ್ನು, ವ್ಯಕ್ತಿ ಹಾಗೂ ಸಾಮೂಹಿಕ ಚಟುವಟಿಕೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ದಾಖಲಿಸಿದ್ದೇ ಈ ಕೃತಿಯ ಸೌಂದರ್ಯ.

`ಲಖನೌ’ ಆತ್ಮ ತಲುಪುವ ಬರಹ : ಸ್ಥಳೀಯತೆ ಎಂದರೆ ಘಟನಾವಳಿಗಳ ವಿಶೇಷ ವರದಿಗಾರಿಕೆಯಲ್ಲ. ಒಂದು ಊರಿನ ಸಾಂಸ್ಕೃತಿಕ ಸ್ಪಂದನ ಸೇರಿದಂತೆ ಸಮಗ್ರವಾಗಿ ಕಾಣುವ ಸೂಕ್ಷ್ಮತೆ, ಪರಿಚಯಿಸುವ ವಿಧಾನ, ಆಪ್ತವಾಗುವ ಮಾಹಿತಿ, ಆ ಮೂಲಕ ಸಂದೇಶದ ಸೌಂದರ್ಯಕ್ಕೆ ಆಕರ್ಷಕ ಚೌಕಟ್ಟು ನೀಡುವ ಭಾಷೆ….ಎಲ್ಲವೂ ಆ ಊರಿನ ಬಗ್ಗೆ ಅಭಿಮಾನ ಹೆಚ್ಚಿಸುತ್ತದೆ. ಊರಿನ ಬಾಹ್ಯ ಇಲ್ಲವೇ ಭೌತಿಕ ಲಕ್ಷಣಗಳು ಮಾತ್ರವಲ್ಲ; ಆ ಊರಿನ ಆತ್ಮವನ್ನೇ ಪರಿಚಯಿಸುವ ಭಾಷೆಯ ಶೈಲಿ ಸಹ ಸುಂದರ, ಸಧೃಡ. ಎಲ್ಲ ಕಾಲಕ್ಕೂ ಅಪ್ಯಾಯಮಾನವಾಗುವ ತಾರುಣ್ಯ. ಅದಕ್ಕೆ ಒಂದು ಮಾದರಿ ಹೀಗಿದೆ;

‘ಲಖನೌ ಸಭ್ಯತೆಯೆಂದರೆ, ‘ದಾಕ್ಷಿಣ್ಯ’ ಹಾಗೂ ‘ಮೊದಲು ನೀವು’ ಎಂಬ ಸಾಮಾನ್ಯ ಮಾತುಗಳೆಂದು ತಿಳಿದ ಜನ, ಇದರ ಕೋಮಲತೆ, ವಿನಮ್ರತೆ ಮತ್ತು ಚೆಲುವಿನ ಕಡೆ ದೃಷ್ಟಿ ಹರಿಸಲಿಲ್ಲ. ಸಭ್ಯತೆಯ ಬಗೆಗೆ ಚೇಷ್ಟೆಯ ಮಾತುಗಳನ್ನಾಡುವುದು ಸುಲಭ. ಆದರೆ, ಸಭ್ಯತೆಯ ವಿವಿಧ ಸ್ತರಗಳನ್ನು ಕಂಡು ಹಿಡಿಯುವುದು, ಅರಿತುಕೊಳ್ಳುವುದು ಹಾಗೂ ಅದರ ಆತ್ಮದವರೆಗೂ ತಲುಪುವುದು ಸುಲಭವಲ್ಲ. ಸಭ್ಯತೆಯೆಂದರೆ, ಕೇವಲ ನಮಸ್ಕಾರ, ಒಪ್ಪೋರಣ, ರೀತಿ-ಪದ್ಧತಿ ಮತ್ತು ಶಿಷ್ಟಾಚಾರಗಳಷ್ಟೇ ಅಲ್ಲ; ವೇಷಭೂಷಣ, ಊಟ, ಮನೋರಂಜನೆಯ ಸಾಧನೆಗಳು ಜಾತ್ರೆ-ಗೀತ್ರೆಗಳೂ ಅಲ್ಲ; ಇವೆಲ್ಲ ಸಭ್ಯತೆಯ ಬಾಹ್ಯ ಲಕ್ಷಣಗಳು. ಇವುಗಳ ಆಧಾರದಿಂದ ಯಾವುದೇ ಯುಗದ ಸಭ್ಯತೆಯ ಆತ್ಮದ ವರೆಗೆ ತಲುಪುವ ಪ್ರಯತ್ನ ಮಾಡಬೇಕು’ ……

.ಹೀಗೆ ಸಾಹಿತ್ಯ ಬರಹದ ಔನ್ನತ್ಯವನ್ನು ಘನತೆ-ಗಾಂಭೀರ್ಯ ಅನುಭವಿಸುವ ಜೊತೆಗೆ ಓದುಗ ‘ಲಖನೌ’ ನಗರವನ್ನು ಅದರ ಪುರಾತನ ವೈಭವದ ದ್ವಾರದ ಮೂಲಕ ಪ್ರವೇಶಿಸುತ್ತಾನೆ. ಮೊಗಲ್ ಸಾಮ್ರಾಜ್ಯದ ಸಾಂಸ್ಕೃತಿಕವಾದ ಎಲ್ಲ ಆಯಾಮಗಳು ದೆಹಲಿಯಲ್ಲಿ ಪಲ್ಲವಿಸಿದರೂ, ಅದರ ಘಮಲು ಪಸರಿಸಿದ್ದು ಲಖನೌದಲ್ಲಿ. ಅರಬ್ಬೀ, ಫಾರ್ಸಿ, ಶಿಯಾ, ಸುನ್ನಿ, ಹಿಂದೂ ಹೀಗೆ ಪುರಾತನವಾದ ಏನೆಲ್ಲಆಚಾರ-ವಿಚಾರಗಳು, ಸಾಹಿತ್ಯ, ಸಂಗೀತ, ಚಿತ್ರಕಲೆ, ರುಚಿರುಚಿಯಾದ ತಿನಿಸು-ಊಟ ಎಲ್ಲದರ ಸುಂದರ ಚಿತ್ರಣವಿದೆ. ಹಳೆಯದು ಬಿಡದೇ ಹೊಸತನ್ನೂ ಸ್ವೀಕರಿಸಿ ಮೆರೆದ ಲಖನೌ ಉತ್ಸಾಹವನ್ನು ಬಣ್ಣಿಸಲಾಗಿದೆ. ಐತಿಹಾಸಿಕವಾದ ಈ (ಲಖನೌ) ನಗರದ ವೈವಿಧ್ಯಮಯತೆ ಭಾರತೀಯ ಯಾವುದೇ ನಗರಕ್ಕಿಲ್ಲ ಎಂಬಷ್ಟು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

ಹೂವು ಪಲ್ಲವಿಸುವ ಪರಿಯಂತೆ….!ಮೊಘಲ್ ಸಾಮ್ರಾಜ್ಯದ ಅವನತಿಯ ಹೊತ್ತಿಗೆ ಉತ್ತರಪ್ರದೇಶದ ‘ಅವಧ ದರ್ಬಾರಿನ ವೈಭವದ ಇತಿಹಾಸದ ವರ್ಣನೆಯೊಂದಿಗೆ ಆರಂಭವಾಗುವ ಈ ಕೃತಿಯು, ‘ಹೂವು ಪಲ್ಲವಿಸುವ ಪರಿ’ಯಂತೆ ಓದುಗರನ್ನು ಅಚ್ಚರಿಗೊಳಿಸುತ್ತದೆ.

ನವಾಬರ ಗತ್ತು, ರಾಣಿಯರ ಗಾಂಭೀರ್ಯ, ಊಟ-ಉಡುಪು-ಸಂಗೀತ, ಅರಮನೆಯ ದೌಲತ್ತು, ಊಟದ ಪುರಾತನ ವೈಭವ, ಊಟ ಬೇರೆಡೆಗೆ ಸಾಗಿಸುವಾಗಿನ ಪಾರಂಪರಿಕ ಅಚ್ಚುಕಟ್ಟು, ರುಚಿರುಚಿ ಅಡುಗೆ ಮಾಡುವುದಷ್ಟೇ ಅಲ್ಲ; ತಿನಿಸುಗಳ ಪ್ರದರ್ಶನದ ಜಾಣ್ಮೆ, ನಯ-ನಾಜೂಕು, ಮಣ್ಣಿನ ಪಾತ್ರೆಗಳ ವರ್ಣನೆ, ಮದ್ಯಪಾನದ ಅಂಗಡಿಗಳು, ಹುಕ್ಕಾಗಳ ವೈವಿಧ್ಯತೆ, ವಿದೇಶಿಯ ತಿನಿಸು ಲಖನೌ ವಿಶೇಷತೆಗಳಾದ ಬಗೆ,

ನೃತ್ಯಾಂಗನೆಯರು ಹಾಗೂ ಅವರ ಮನೆಗಳು, ಅಲ್ಲಿಗೆ ಬರುವ ಗಿರಾಕಿಗಳ ಮನಸ್ಥಿತಿ, ತಲೆಯ ಟೋಪಿಗಳು; ಅವುಗಳನ್ನು ತಲೆಯ ಮೇಲೆ ಇಟ್ಟುಕೊಳ್ಳುವುದು ನೈತಿಕ ಕರ್ತವ್ಯ ಎಂಬ ಎಚ್ಚರಿಕೆ, ಮನೆ-ಹಜಾರಗಳು, ಸಂತೆಯ ಗದ್ದಲ, ಸಾಮಾನ್ಯ ವ್ಯಕ್ತಿಯ ವಿಶೇಷ, ಸನ್ನಿವೇಶಗಳ ಕುಸುರಿ ಹೆಣಿಕೆ, ಉರ್ದು ಭಾಷೆಯ ಸೊಗಡು, ಗಲ್ಲಿ ಗಲ್ಲಿಯಲ್ಲಿ ನಡೆಯುವ ಮುಷಾಯಿರ್ ಗಳು, ಖವ್ವಾಲಿಗಳು, ಉರ್ದು ಕವಿಗಳು, ಲಖನೌ ಹೆಸರಿಗೆ ಪ್ರಸಿದ್ಧಿ ತಂದ ಮತ್ತು ಮಸಿ ಹಚ್ಚಿದ ವೇಶ್ಯಾವಾಟಿಕೆ, ಕುಸ್ತಿ, ಗ್ರಾಮೀಣ ಕ್ರೀಡೆಗಳು, ಜೂಜಾಟಗಳು, ರಸ್ತೆಗಳ ಐತಿಹಾಸಿಕ-ಸಾಂದರ್ಭಿಕ ವೈಶಿಷ್ಟ್ಯ ಹೀಗೆ ‘ಲಖನೌ’ ಆತ್ಮದ ಪ್ರತಿ ಸೂಕ್ಷ್ಮ ಆಯಾಮಗಳನ್ನು ದುರ್ಬೀನು ಹಚ್ಚಿ ನೋಡಿದ್ದು ಮಾತ್ರವಲ್ಲ; ಅದನ್ನು ಸುಂದರ ಪದಪುಂಜಗಳಲ್ಲಿ ಸಾಹಿತ್ಯಕ ಉತ್ಕೃಷ್ಠತೆಯ ಸ್ಪರ್ಶ ನೀಡಲಾಗಿದೆ. ಉದಾ: ಸಂಗೀತದಲ್ಲಿ ಲಖನೌ ವಿಶೇಷತೆ ಹೇಳುವ ಪರಿ ನೋಡಿ; ಒಬ್ಬ ಕಲಾವಿದ ಆಲಾಪ ಆರಂಭಿಸಿದ ಕೂಡಲೇ ಆತನ ಯೋಗ್ಯತೆಯನ್ನು ಕಟ್ಟುವಷ್ಟು ಸಂಗೀತದಲ್ಲಿ ನೈಪುಣ್ಯವನ್ನು ಇಲ್ಲಿಯ ಶ್ರೀಮಂತರು, ಸಾಮಂತರು ಸಂಗೀತದಲ್ಲಿ ಪ್ರಾವಿಣ್ಯತೆ ಪಡೆದಿದ್ದರು’.

ಪ್ರತಿ ವಿಷಯವು ಲಖನೌ ನಗರವನ್ನು ಕೇಂದ್ರೀಕರಿಸಿದೆ. ಆದರೂ, ಪ್ರಸ್ತಾಪಿಸುವ ಯಾವುದೇ ವಿಷಯದ ಇತಿಹಾಸ, ಅದು ವಿಶ್ವದ ವಿವಿಧೆಡೆ ಪಡೆದ ಆಯಾಮಗಳು, ಅವುಗಳು ಉಂಟು ಮಾಡಿವ ಹಾಗೂ ಮಾಡಿದ ಪರಿಣಾಮಗಳು….ಹೀಗೆ ವಿಷಯ ವಿಸ್ತಾರ ಹೆಚ್ಚುತ್ತಾ ಹೋಗುವುದು ಬರಹಗಾರನೊಬ್ಬನ ಅಧ್ಯಯನದ ಆಳ ಹಾಗೂ ಅನುಭವದ ಗಟ್ಟಿತನ, ಅಭಿವ್ಯಕ್ತಿಯ ಕಲೆಯ ದರ್ಶನವಾಗುತ್ತದೆ. ಉದಾ: ಭಾರತದ ಎಲ್ಲ ಪ್ರಾಚೀನ ಮಂದಿರಗಳಲ್ಲಂತೆ ಇಲ್ಲಿಯೂ ನೂರಾರು ಸಾವಿರಾರು ಹೆಂಗಸರು ಭಗವಂತನ ಮೂರ್ತಿಯ ಸಮ್ಮುಖದಲ್ಲಿ ನರ್ತಿಸುತ್ತಿದ್ದರು. ದೊಡ್ಡ ದೊಡ್ಡ ಮಂದಿರಗಳಲ್ಲಿ ನರ್ತಕಿಯರ ದೊಡ್ಡ ಸಮೂಹವೇ ಇರುತ್ತಿತ್ತು.ನೃತ್ಯಕಲೆಯ ಗುರು ಮಾತ್ರ ಪುರುಷನೇ ಆಗಿರುತ್ತಿದ್ದ’ ಕವಿಗೋಷ್ಠಿಗಳು ಹೆಚ್ಚಾಗಿ ನಡೆಯುತ್ತಿದ್ದವು. ಲಖನೌದಲ್ಲಿ ಕವಿಗಳ ಸಂಖ್ಯೆ ಬಹುದೊಡ್ಡದು. ಕೃತಿಯಲ್ಲಿ ಇರುವ ಬರಹರೂಪದ ಸೌಂದರ್ಯ ನೋಡಿ; ‘ಕಾವ್ಯವನ್ನು ಅರ್ಥ ಮಾಡಿಕೊಳ್ಳುವ, ಅದನ್ನು ಒರೆಗೆ ಹಚ್ಚುವ ಸಾಮರ್ಥ್ಯ ಈಗ ಜನರಲ್ಲಿ ಬೆಳೆಯುತ್ತಿದೆ. ಆದರೆ, ಲಖನೌ ನಿವಾಸಿಗಳಲ್ಲಿ ಇದೆಲ್ಲ ಅವರ ಜೀವನದ ಅಂಗವಾಗಿ ಬಿಟ್ಟಿದೆ. ಸರಸವಾದ ಮಾತುಗಾರಿಕೆ, ವಿನೋದಪ್ರೀಯತೆ, ಸದಭಿರುಚಿ ಇವರಲ್ಲಿದ್ದಷ್ಟು ಇನ್ನೆಲ್ಲಿಯೂ ಇಲ್ಲ.

ಆಹಾರ ಪದ್ಧತಿ ಕುರಿತೂ ಮಹತ್ವದ ಹಾಗೂ ಐತಿಹಾಸಿಕ ಹಿನ್ನೆಲೆಯ ತಿನಿಸುಗಳು ಲಖನೌ ಪಾರಂಪರೆಯ ತಿನಿಸುಗಳಲ್ಲಿ ಸೇರಿ ಹೋದ ಬಗೆಯನ್ನು, ಯಾವ ತಿನಿಸು ಯಾವ ದೇಶದಿಂದ ಬಂತು ಎಂಬುದರ ಮಾಹಿತಿ, ಒಂದು ವಿಶೇಷ ತಿನಿಸು ಪ್ರಸಿದ್ಧಿಗೆ ಬಂದ ಬಗೆ, ಲಖನೌ ಜನ ಇಷ್ಟ ಪಡುವ ತಿನಿಸಿನ ವರ್ಣನೆ-ವೈಭವ, ಆ ತಿನಿಸು ತಯಾರಿಕೆಯ ಮನೆಗಳು, ಪಾತ್ರೆಗಳ ವೈಶಿಷ್ಟ್ಯ, ಊಟವಾದ ಮೇಲೆ ತಿನ್ನುವ ಎಲೆಗಳಲ್ಲಿಯ ಪರಿಕರಗಳು, ಹುಕ್ಕಾ ಸೇದುವ ಸಂಭ್ರಮ, ಉದಾಹರಣೆಗೆ ಇಲ್ಲಿಯ ವಿವರ ನೋಡಿ; ಲಖನೌ ರಸಿಕರ ಪಾನದಾನಗಳಲ್ಲಿ ಮಧುರವಾದ ಹಾನಿಕಾರಕವಲ್ಲದ ಸುಣ್ಣವಿರುತ್ತದೆ. ಅನ್ಯ ಸ್ಥಳಗಳಲ್ಲಿ ಇಂತಹ ಸುಣ್ಣ ಸಿಕ್ಕುವುದೇ ಇಲ್ಲ’.

ಲಖನೌ ಹಾಗೂ ಉರ್ದು : ತುಂಬಾ ಕಾವ್ಯಾತ್ಮಕ ಭಾವದ ಭಾಷೆ ಎಂದೇ ಜನಜನಿತವಾದ ಉರ್ದು, ಲಖನೌ ಜೀವನಾಡಿಯಾದ ಬಗೆಯನ್ನು ‘ಭಾಷಾ ಅಧ್ಯಯನ ಹಾಗೂ ಸಾಹಿತ್ಯಕ ಸಿರಿವಂತಿಕೆಯ ದೃಷ್ಟಿಯಿಂದ ಗಮನಿಸುವಂತೆ ಮಾಡುವುದು ಈ ಕೃತಿಯ ಹೆಗ್ಗಳಿಕೆ. ಕೆಲ ಸಾಲುಗಳು ಹೀಗಿವೆ;‘ ಯಾರಿಗೂ ನೋವಾಗದಂತೆ ಮಾತನಾಡುವುದು ಲಖನೌ ಜನ ಸಿದ್ಧಹಸ್ತರು. ಇಲ್ಲಿಯ ಸುಸಂಸ್ಕೃತ ಜನಾಂಗದ ಸ್ವತ್ತಾಗಿರುವ ಮಾತಿನ ಈ ಕಲೆ, ಹಿಂದೂಸ್ತಾನದ ಯಾವುದೇ ಪಟ್ಟಣದ ಸುಸಂಸ್ಕೃತ ಜನಾಂಗದಲ್ಲಿ ಸಿಗುವುದಿಲ್ಲ. ಏಕೆಂದರೆ, ಉರ್ದು ಭಾಷೆಯು ಶಿಷ್ಟತೆಯ-ಸಭ್ಯತೆಯ ಸಂಸ್ಕೃತಿಯನ್ನು ಒಳಗೊಂಡಿದೆ. ವ್ಯಕ್ತಿಯನ್ನು ಕುರಿತು ಸಂಬೋಧಿಸಲು ಹಲವಾರು ಪದಗಳ ಸಿರಿವಂತಿಕೆ ಇದೆ. ಉರ್ದು, ಸುಸಂಸ್ಕೃತರ ಭಾಷೆಯಾಗಿದೆ…..’; ಹೀಗೆ ಲಖನೌದಲ್ಲಿ ಉರ್ದು ಭಾಷೆಯ ಸೊಗಡು, ಇದರೊಂದಿಗೆ ಫಾರ್ಸಿ, ಅರಬ್ಬಿ, ಹಿಂದಿ ಇವುಗಳ ಸಂಗಮವಾಗಿ ಚೆಂದವಾಗಿ ಮೈದಳೆದಿರುವ ಪರಿಯನ್ನು ವಿವರಿಸಲಾಗಿದೆ.

...ಹೀಗೆ ‘ಪುರಾತನ ಲಖನೌ’ ಕೃತಿಯು ತನ್ನೆಲ್ಲಾ ಸಮಗ್ರ ಜನಜೀವನದ ಸೊಗಡುಗಳಿಂದ ಕಂಗೊಳಿಸುತ್ತದೆ. ಭಾಷಾ ವೈಶಿಷ್ಟ್ಯತೆಯಿಂದ ಬೀಗುತ್ತದೆ. ಆಚಾರ-ವಿಚಾರಗಳಲ್ಲಿ ಸಾಂಸ್ಕೃತಿಕ ವಿಭಿನ್ನತೆಯನ್ನು ಕಾಯ್ದುಕೊಳ್ಳುತ್ತದೆ. ‘ಲಖನೌ’ದ ಪ್ರಾಚೀನ ಸಿರಿವಂತಿಕೆಯನ್ನು ಮೆರೆಯುತ್ತದೆ. ಒಂದು ನಗರದ ನಾಡಿ ಮಿಡಿತವನ್ನು, ಮನೋಸೌಂದರ್ಯವನ್ನು, ಭೌಗೋಳಿಕ ಹಾಗೂ ಐತಿಹಾಸಿಕ ಮಹತ್ವವನ್ನು ಸರಳವಾಗಿ, ಸಹಜವಾಗಿ ಹಾಗೂ ಸಮಗ್ರವಾಗಿ ಚಿತ್ರಿಸಿದ ಮತ್ತು ‘ಸ್ಥಳೀಯತೆ’ಯನ್ನು ಕನ್ನಡದಲ್ಲಿ ಕಟ್ಟಿಕೊಟ್ಟ ಕೆಲವೇ ಕೆಲವು ಕೃತಿಗಳಲ್ಲಿ ‘ಪುರಾತನ ಲಖನೌ’ ಗೆ ಮೊದಲ ಸ್ಥಾನ. ಸಾಹಿತ್ಯವನ್ನು ಎಷ್ಟು ಚೆನ್ನಾಗಿ ಅನುವಾದಿಸಬಹುದು ಎಂಬುದಕ್ಕೆ ಈ ಕೃತಿ ಮಾದರಿಯೂ ಹೌದು.

MORE FEATURES

ಸಮಕಾಲೀನ ಸಮಾಜದ ಸ್ಥಿತಿಗತಿಯ ಅನಾವರಣ ‘ಆವರ್ತನ’

27-04-2024 ಬೆಂಗಳೂರು

'ಆವರ್ತನದಲ್ಲಿ ಸ್ವಸ್ಥ ಸಮಾಜ ನಿರ್ಮಾಣದ ತುಡಿತ ವ್ಯಕ್ತವಾಗುತ್ತದೆ. ಮನುಷ್ಯರೊಳಗಿನ ಅಮಾನವೀಯತೆಯ ಬಗೆಗೆ ಅಸಹನೆಯಿದೆ...

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...