ಸುಳ್ಳಿನ ಕೈಗಾರಿಕೆಗಳಲ್ಲಿ ಅರಿವಿನ ಹತ್ಯೆ

Date: 13-10-2020

Location: ಬೆಂಗಳೂರು


ಸುಳ್ಳುಗಳಿಂದ ದಿಕ್ಕೆಟ್ಟ ಜನರು ನಿಜಕ್ಕೂ ಗೊಂದಲದಲ್ಲಿದ್ದಾರೆ. ಗಲಿಬಿಲಿಗೊಂಡಿದ್ದಾರೆ. ಇವರನ್ನು ವಾಸ್ತವದ, ಸತ್ಯದ ದಾರಿಗೆ ಮರಳಿ ಕರೆತರುವುದು ಇಂದಿನ ಅಗತ್ಯವಾಗಿದೆ’ ಎನ್ನುವ ಲೇಖಕ-ವಿಮರ್ಶಕ ರಂಗನಾಥ ಕಂಟನಕುಂಟೆ ಅವರು ’ಸುಳ್ಳುಗಳ ಸಂತೆಯಲ್ಲಿ ಸತ್ಯ ನುಡಿಯುವ ಎಲ್ಲ ‘ಸಂತರು’ ಮೇಳೈಸಿ ಹಾಡಬೇಕಿದೆ ಸಹಬಾಳ್ವೆಯ ಸ್ವಾತಂತ್ರ್ಯದ ಸಮಾನತೆಯ ಜೀವಗಾನ’ ಎಂದು ಆಶಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಪದವಿ ಓದುವಾಗ ನನ್ನ ಗೆಳೆಯನಾಗಿದ್ದವನು ದೊರೆಸ್ವಾಮಿ. ಈತ ಮೂಲತಃ ಮೈಸೂರು ಜಿಲ್ಲೆಯ ಟಿ.ನರಸಿಪುರದ ಬಳಿಯ ಹಳ್ಳಿಯವನು. ದೊಡ್ಡಬಳ್ಳಾಪುರದ ತನ್ನ ಸಂಬಂಧಿಕರ ಮನೆಯಲ್ಲಿದ್ದು ಓದುತ್ತಿದ್ದವನು. ಇವರ ಸಂಬಂಧಿಕರದು ರಸಗೊಬ್ಬರದ ಅಂಗಡಿಯಿತ್ತು. ಕಾಲೇಜು ಮುಗಿದ ನಂತರ ಅಂಗಡಿಯಲ್ಲಿದ್ದು ಅದನ್ನು ನೋಡಿಕೊಳ್ಳುತ್ತಿದ್ದ. ಅವರ ಅಂಗಡಿ ನಗರದ ಬಸ್ ನಿಲ್ದಾಣದಲ್ಲಿಯೇ ಇತ್ತು. ಇದು ನಮಗೆ ದೊರೆಸ್ವಾಮಿ ಮತ್ತಶ್ಟು ಹತ್ತಿರವಾಗಲು ಕಾರಣವಾಯಿತು. ನಾವು ಊರಿಗೆ ಹೋಗುವ ಬರುವ ಸಮಯದಲ್ಲಿ ಅಲ್ಲಿ ಖಾಯಮ್ಮಾಗಿ ಹಾಜರಾತಿ ಹಾಕುತ್ತಿದ್ದೆವು. ಬಸ್ಸಿಗಾಗಿ ಕಾಯುತ್ತ ಬಂದ ಬಸ್ಸುಗಳನ್ನು ಹೋಗಲು ಬಿಟ್ಟು ಅಲ್ಲಿ ಹರಟೆ ಹೊಡೆಯಲು ಜಾಗ ಸಿಕ್ಕಿತ್ತು. ನಮ್ಮಂತೆಯೇ ದೊರೆಸ್ವಾಮಿಯದೂ ಬೇಸಾಯದ ಮನೆತನವಾದ ಕಾರಣ ಅಲ್ಲಿ ಬೇಸಾಯದ ಬಗೆಗೆ ಚರ್ಚೆಗಳು ನಡೆಯುತಿದ್ದವು. ಮುಂಗಾರು ಮಳೆ ಕೈಕೊಟ್ಟಾಗ ರೈತರು ಅಂಗಡಿ ಕಡೆ ತಿರುಗಿ ನೋಡದೆ ಸುಮ್ಮನೆ ಕೂರುತ್ತಿದ್ದ ದಿನಗಳೂ ಇರುತ್ತಿದ್ದವು. ಇದಲ್ಲದೆ ವಿವಿಧ ರೋಗಗಳಿಗೆ ವೈದ್ಯರು ಬರೆದು ಕೊಟ್ಟಿರುತ್ತಿದ್ದ ಚೀಟಿಯನ್ನು ಅನೇಕರು ತೆಗೆದುಕೊಂಡು ಬಂದು ಮದ್ದು ಗುಳಿಗೆಗಳನ್ನು ಕೇಳುತ್ತಿದ್ದರು! ನಾವು ಪಿಳಿಪಿಳಿ ಕಣ್ಣು ಬಿಡುತ್ತಿದ್ದೆವು. ನಂತರ ನಿಧಾನವಾಗಿ ಅವರಿಗೆ ತಿಳಿಸಿ ಹೇಳುತ್ತ ಮೆಡಿಕಲ್ ಶಾಪ್‍ಗಳ ವಿಳಾಸ ತೋರಿಸಿ ಕಳುಹಿಸುತ್ತಿದ್ದೆವು. ಮನದೊಳಗೆ, ಇದು ಬದುಕಿಸುವ ಮದ್ದುಗಳನ್ನು ಮಾರುವ ಅಂಗಡಿಯಲ್ಲ; ಕೊಲ್ಲುವ ಮದ್ದು ಮಾರುವ ಅಂಗಡಿ ಎಂದು ಹುಸಿ ನಗುತ್ತಿದ್ದೆವು. ಇಂತಹ ಹಲವು ಅನುಭವಗಳಿಗೆ ದೊರೆಸ್ವಾಮಿ ಮತ್ತು ಅವರ ಅಂಗಡಿ ನಮಗೆ ಒಂದು ನೆಲೆಯಾಗಿತ್ತು.

ಹೀಗಿರುವಾಗ 2003ರಲ್ಲಿ ಒಮ್ಮೆ ಇದ್ದಕ್ಕಿದ್ದಂತೆ ದೊರೆಸ್ವಾಮಿ ಕಣ್ಮರೆಯಾದ. ನಾವು ನಮ್ಮ ನಮ್ಮ ಕಾರ್ಯಕ್ಷೇತ್ರ ಬದಲಾದ ಕಾರಣ ಆ ಕಡೆಗೆ ಕೆಲವು ತಿಂಗಳ ಕಾಲ ತಲೆಹಾಕಿರಲಿಲ್ಲ. ನಂತರ ತಿಳಿದು ಬಂದ ವಿಚಾರವೆಂದರೆ ದೊಡ್ಡಬಳ್ಳಾಪುರ ಬಿಟ್ಟು ತನ್ನ ಸ್ವಂತ ಊರಿಗೆ ತೆರಳಿದ್ದನೆಂದು ತಿಳಿಯಿತು. ನಮಗೆ ಹಲವು ವರುಶಗಳ ಕಾಲ ಹರಟೆಗೆ ನೆಲೆ ಕಲ್ಪಿಸಿದ್ದ ಅಂಗಡಿ ಇಲ್ಲವಾಯಿತು. ಆಗ ಇನ್ನೂ ಮೊಬೈಲ್ ಫೋನ್ ಈಗಿನಶ್ಟು ವ್ಯಾಪಕವಾಗಿಲ್ಲದ ಕಾರಣ ಆತನ ಸಂಪರ್ಕವೇ ಕಳೆದುಹೋಗಿತ್ತು. ಹದಿನೈದು ವರುಶಗಳ ಕಾಲ ಸಂಪರ್ಕವೇ ಇರಲಿಲ್ಲ. ಆತನ ಬಗೆಗೆ ಸುಳಿವು ಕೊಡುವ ಸಂಪರ್ಕ ನಮಗೂ ಇರಲಿಲ್ಲ. ಗೆಳೆತನದ ಒಂದು ಕೊಂಡಿ ಕಳಚಿದಂತೆ ಅನ್ನಿಸಿತ್ತು.

ಹೀಗೆ ಕೊಂಡಿ ಕಳಚಿಕೊಂಡು ಹೊನ್ನಾವರದಲ್ಲಿದ್ದಾಗ 2018ರಲ್ಲಿ ಯಾವುದೋ ತಿಂಗಳ ಒಂದು ಸಂಜೆ ಕರೆ ಬಂತು. ಹಳೆಯ ಸಲಿಗೆಯಿಂದಲೇ ಮಾತುಕತೆ ಆರಂಭವಾಯಿತು. ಕೆಲ ಹೊತ್ತಾದ ನಂತರ ಆತನ ಧ್ವನಿಯನ್ನು ಗುರುತಿಸಿ ದೊರೆಸ್ವಾಮಿ ಎಂಬುದನ್ನು ಖಚಿತಪಡಿಸಿಕೊಂಡೆ. ನಂತರ ಹದಿನೈದು ವರುಶಗಳ ಮಾತುಕತೆ ಚುಟುಕಾಗಿ ನಡೆಯಿತು. ಈಗ ಕಳೆದ ಎರಡು ವರುಶಗಳಿಂದ ಮಾತುಕತೆ ನಿರಂತರವಾಗಿ ಮುಂದುವರಿದಿದೆ. ಆದರೆ ಮುಖಾಮುಖಿ ಭೇಟಿಯಾಗಿ ಮಾತನಾಡಿ ಹದಿನೇಳು ವರುಶಗಳು ಕಳೆದಿವೆ. ಈಗ ವಾರಕ್ಕೊಮ್ಮೆಯಾದರೂ ಫೋನ್ ಮೂಲಕ ಮಾತನಾಡುತ್ತೇವೆ. ಆತ ಈಗ ಸದ್ಯ ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡಿದ್ದಾನೆ. ಪದವಿಯನ್ನು ಪೂರ್ಣಗೊಳಿಸದೆ ಇದ್ದುದರ ಬಗೆಗೆ ಮತ್ತು ಹಳ್ಳಿಯಲ್ಲಿ ದುಡಿಯುವುದರ ಬಗೆಗೆ ಯಾವ ಬೇಸರವೂ ಇಲ್ಲದೆ ಸ್ವಾಭಿಮಾನಿಯಾಗಿ ನೆಲ್ಲು, ಎಳ್ಳು, ಉದ್ದು, ರಾಗಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತ ಕಬಿನಿಯ ಮಗನಾಗಿ ‘ಸಂತೋಶ’ವಾಗಿದ್ದಾನೆ. ಹಳ್ಳಿಗಳ ಬದಲಾವಣೆ, ಕೃಶಿ ಬಿಕ್ಕಟ್ಟು, ಕಾರ್ಮಿಕರ ಸಮಸ್ಯೆ, ದೇಶದ ರಾಜಕೀಯ ಪರಿಸ್ಥಿತಿ ಹೀಗೆ ಅನೇಕ ವಿಚಾರಗಳ ಬಗೆಗೆ ಬಹಳ ಮಾತುಕತೆ ನಡೆಯುತ್ತದೆ. ಹಳ್ಳಿಗಳ ನೈತಿಕತೆಯ ಅವಸಾನ, ಆರ್ಥಿಕ ಬಿಕ್ಕಟ್ಟುಗಳು ಹಾಗೂ ಚಿದ್ರತೆಯ ಬಗೆಗೆ ಎಲ್ಲರಂತೆ ಆತನೂ ಕಂಗಾಲಾಗಿದ್ದಾನೆ. ಇದನ್ನು ಅರಿಯುವ ಸವಾಲು ಸಮಾಜ ವಿಜ್ಞಾನಿಗಳದಾಗಿದೆ. ಇದಕ್ಕೆ ಏನೂ ಮಾಡಲು ಸಾಧ್ಯವಿಲ್ಲವೆಂದು ತಿಳಿದು ಕೈಚೆಲ್ಲಿ ಬಂದದ್ದರ ಜೊತೆಗೆ ಹೊಂದಿಕೊಂಡು ಲೋಕದ ಎಲ್ಲರಂತೆ ಬಾಳುತ್ತಿದ್ದಾನೆ.

ಸದ್ಯ ಇಲ್ಲಿನ ಮುಖ್ಯ ವಿಚಾರವೆಂದರೆ ನಮ್ಮ ಗೆಳೆತನ ನವೀಕರಣಗೊಂಡ ನಂತರ ಎಲ್ಲರಂತೆ ಆತನು ನಿತ್ಯ ಅನೇಕ ವಾಟ್ಸಪ್ ಸಂದೇಶಗಳನ್ನು ಕಳಿಸುತ್ತಾನೆ. ಆ ಯಾವ ಸಂದೇಶಗಳನ್ನೂ ಅವನು ತಯಾರಿಸಿದ್ದಲ್ಲ. ಅವನ ಸ್ವಂತ ಅಭಿಪ್ರಾಯಗಳೂ ಅಲ್ಲ. ಎಲ್ಲ ಸಂದೇಶಗಳೂ ‘ಸುಳ್ಳಿನ ಕೈಗಾರಿಕೆ’ಗಳಲ್ಲಿ ಸೃಶ್ಟಿಯಾಗಿರುವ ಕಲ್ಪಿತ ಸುದ್ದಿಗಳು. ಇಲ್ಲವೇ ತಿರುಚಿದ ಮಾಹಿತಿಗಳು. ನೆಹರು, ಕಾಂಗ್ರೆಸ್, ಬುದ್ಧಿಜೀವಿಗಳು, ಜನಚಳವಳಿ ನಾಯಕರು; ದೇವರು, ಧರ್ಮ, ಭಕ್ತಿ ಹೀಗೆ ಎಲ್ಲವನ್ನೂ ಒಳಗೊಂಡ ಸಂದೇಶಗಳಿರುತ್ತವೆ. ಆ ಸಂದೇಶಗಳನ್ನು ನೋಡಿದ ಕೂಡಲೆ ಕೆಲವರನ್ನು ಹಳಿಯಲು ಸೃಶ್ಟಿಸಿರುವ ದ್ವೇಶಭರಿತ ಸುದ್ದಿಗಳು ಎಂಬುದು ಕೂಡಲೆ ತಿಳಿಯುತ್ತದೆ. ಆ ಸಂದೇಶಗಳ ಅಡಿಯಲ್ಲಿ ಇದನ್ನು ಹೆಚ್ಚು ಜನರಿಗೆ ರವಾನಿಸುವಂತೆ ಉಲ್ಲೇಖಿಸಿರುವ ಸೂಚನೆಯೂ ಇರುತ್ತದೆ. ಅಂತಹ ಸೂಚನೆಯನ್ನು ನಂಬಿಯೇ ರವಾನಿಸುವ ಕೆಲಸವನ್ನೂ ಮಾಡಿರಬಹುದು. ಈ ಸಂದೇಶಗಳ ಬಗೆಗೆ ಆತನ ಜೊತೆಗೆ ಮಾತನಾಡಿದಾಗ ಆತ ಉಗ್ರವಾದಿಯಾಗಿ ಅವನ್ನು ಸಮರ್ಥಿಸಿಕೊಳ್ಳುವುದೂ ಇಲ್ಲ. ಹಾಗಂತ ಅವನ್ನು ಪೂರ್ತಿಯಾಗಿ ವಿರೋಧಿಸುವುದೂ ಇಲ್ಲ. ಅವು ಎಲ್ಲಿಯೋ ಒಂದು ಕಡೆ ಅವನ ಮನದ ಮೂಲೆಯಲ್ಲಿ ನೆಲೆಸಿರುವ ಸಾಧ್ಯತೆ ಇರುತ್ತದೆ. ಅವುಗಳಿಂದ ಅವನನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಸದ್ಯಕ್ಕೆ ಸಾಧ್ಯವಿಲ್ಲ. ನಿತ್ಯವೂ ಅದೆಶ್ಟೋ ಸಂದೇಶಗಳು ಅವನ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ.

ಹೀಗೆ ಸಂದೇಶಗಳ ದಾಳಿಗೆ ಇಂದು ಕೋಟ್ಯಾಂತರ ಜನರು ಬಲಿಯಾಗುತ್ತಿದ್ದಾರೆ. ಅದರಲ್ಲಿಯೂ ತರಗತಿಗಳಲ್ಲಿ ನಿತ್ಯವೂ ಬೋಧನೆ ಮಾಡುವ ಅಧ್ಯಾಪಕರಿಗೆ ದೊಡ್ಡ ಸವಾಲು ಎದುರಾಗಿದೆ. ಇಂತಹ ಸಂದೇಶಗಳಿಂದ ಪ್ರಭಾವಿತರಾಗಿರುವ ಅನೇಕ ವಿದ್ಯಾರ್ಥಿಗಳು ನೇರವಾಗಿ ಮತ್ತು ಕೆಲವೊಮ್ಮೆ ವ್ಯಗ್ರವಾಗಿ ಪ್ರಶ್ನೆಗಳನ್ನು ಹಾಕುತ್ತಾರೆ. ಅವರು ಮುಂದಿಡುವ ಮಾಹಿತಿಗಳಲ್ಲಿರುವ ತಪ್ಪನ್ನು ಎತ್ತಿ ತೋರಿಸಲೂ ಕೂಡ ಸಾಧ್ಯವಾಗದ ಮಟ್ಟಿಗೆ ಇದು ಬೆಳೆದಿದೆ. ಅಶ್ಟರ ಮಟ್ಟಿಗೆ ಅವರ ಆಲೋಚನೆಯ ಕ್ರಮ ರೂಪಿತವಾಗಿರುತ್ತದೆ. ಅವರ ವಿಚಾರಗಳನ್ನು ಸಮರ್ಥಿಸುವಂತೆ ಇದ್ದರೆ ಸರಿ, ಇಲ್ಲವಾದರೆ ಮಾತಿನ ಚಕಮಕಿಗಳೇ ನಡೆಯುತ್ತವೆ. ಇನ್ನು ಅಧ್ಯಾಪಕರೂ ಅಂತಹದೇ ಮಾಹಿತಿಗಳಿಂದ ಪ್ರಭಾವಿತರಾಗಿದ್ದರೆ ಮುಗಿಯಿತು. ಅಲ್ಲಮ ಹೇಳಿದಂತೆ ‘ಅಂಧಕನ ಕೈಯನ್ನು ಅಂಧಕನೇ ಹಿಡಿವಂತೆ’ ಆಗುತ್ತದೆ. ಇಂದು ಅಲ್ಲಮನ ಮಾತು ನಿಜವಾಗಿದೆ. ಅಂದರೆ ಇದು ಸಮಾಜ ಮತ್ತು ಒಂದು ತಲೆಮಾರಿನ ಜನರು ಸುಳ್ಳು ಸಂದೇಶಗಳ ದಾಳಿಗೆ ಒಳಗಾಗಿ ಇಡೀ ದೇಶ ಅಜ್ಞಾನದ ದಾರಿಯಲ್ಲಿ ಸಾಗುವಂತೆ ಮಾಡಿರುವ ಚಾರಿತ್ರಿಕ ಸತ್ಯ. ಜ್ಞಾನದ, ಅರಿವಿನ ಮೂಲ ಸೆಲೆಗಳನ್ನು ನಾಶ ಮಾಡಲೆಂದೇ ಸುಳ್ಳು ಸಂದೇಶಗಳನ್ನು ಸೃಶ್ಟಿಸಿ ಅವುಗಳನ್ನು ಸುನಾಮಿಯ ಅಲೆಗಳ ರೂಪದಲ್ಲಿ ಹರಿಯಬಿಡಲಾಗುತ್ತಿದೆ. ಕೆಲವು ರಾಜಕೀಯ ಪಕ್ಶಗಳು ಲಕ್ಶಾಂತರ ಕಾರ್ಯಕರ್ತರನ್ನು ಇಂತಹ ಸಂದೇಶಗಳನ್ನು ರವಾನಿಸಲೆಂದೇ ನೇಮಕ ಮಾಡಿಕೊಂಡಿರುವುದು ರಹಸ್ಯದ ಸಂಗತಿಯಾಗಿ ಉಳಿದಿಲ್ಲ. ಲಕ್ಶಾಂತರ ವಾಟ್ಸಪ್ ಗುಂಪುಗಳನ್ನು ಸೃಶ್ಟಿಸಿ ಅವುಗಳ ಮೂಲಕ ಸಂದೇಶಗಳನ್ನು ಪ್ರತಿ ದಿನ ಪಂಪ್ ಮಾಡಲಾಗುತ್ತದೆ. ಕಳೆದ ಕೆಲವು ಚುನಾವಣೆಗಳ ಸಂದರ್ಭದಲ್ಲಿ ಬಿತ್ತರಗೊಂಡ ಸುಳ್ಳು ಸುದ್ದಿಗಳು ಹೇಗೆ ಜನರನ್ನು ಪ್ರಭಾವಿಸಿವೆ ಎಂಬುದನ್ನು ನೆನೆದರೆ ಇದು ಅರ್ಥವಾಗುತ್ತದೆ.

ಇಲ್ಲಿ ಇನ್ನೊಂದು ಉದಾಹರಣೆಯನ್ನು ಗಮನಿಸಬೇಕಿದೆ. ಈಚೆಗೆ ಕೃಶಿ, ಭೂಮಿ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ತಿಂಗಳ 28ರಂದು ಕರೆ ಕೊಟ್ಟಿದ್ದ ‘ಕರ್ನಾಟಕ ಬಂದ್’ನ ಹಿಂದಿನ ದಿನ ಹೀಗೆ ಪಂಪ್ ಆಗಿ ರೈತಚಳವಳಿ ನಾಯಕರನ್ನು ಅವಹೇಳನ ಮಾಡಿರುವ ಸಂದೇಶ ಬಂದಿತ್ತು. ಅದನ್ನು ಕಂಡು, ಕಳವಳಗೊಂಡು ಸಂಜೆ ಫೋನ್ ಮಾಡಿ ಮಾತನಾಡಿದೆ. ಅವನು ಅದರ ಸಮರ್ಥನೆಗೆ ಇಳಿಯಲಿಲ್ಲ. ಕೊನೆಗೆ ಇಂತಹ ಸಂದೇಶಗಳು ಬರುತ್ತವೆ; ಅದಕ್ಕೆ ವಿರುದ್ಧವಾದ ಸಂದೇಶಗಳು ಬರುತ್ತವೆ. ಇದರಲ್ಲಿ ಯಾವುದು ಸರಿ? ಯಾವುದು ತಪ್ಪು? ಎಂಬುದೇ ಗೊತ್ತಾಗುವುದಿಲ್ಲ ಎಂದ. ಒಟ್ಟು ಎಲ್ಲ ಜನರು ಗೊಂದಲ ಮತ್ತು ಗಲಿಬಿಲಿ ಸ್ಥಿತಿಯಲ್ಲಿರುವುದನ್ನು ತಿಳಿಸಿದ. ಇಂತಹ ಸಂದೇಶಗಳು ಬರುತ್ತಲೇ ಇರುತ್ತವೆ ಮತ್ತು ಅಂತಹ ಸಂದೇಶಗಳೇ ಅವರ ಸುತ್ತಮುತ್ತಲಿರುವ ಗೆಳೆಯರ ಬಳಿ ಹರಿದಾಡುತ್ತಿರುವ ಸುದ್ದಿಯನ್ನೂ ತಿಳಿಸಿದ. ಇದು ಜನರನ್ನು ಆವರಿಸಿರುವ ಸುಳ್ಳು ಸಂದೇಶಗಳ ವಿರಾಟ್ ಸ್ವರೂಪದ ಪರಿಯನ್ನು ಪರಿಚಯಿಸುತ್ತದೆ. ಮತ್ತು ಇಂತಹ ಗೆಳೆಯರು ಸರಿತಪ್ಪುಗಳ ಬಗೆಗೆ ಯೋಚಿಸದೆ ಇಂತಹ ಸಂದೇಶಗಳನ್ನು ರವಾನಿಸುತ್ತಲೇ ಇರುತ್ತಾರೆ. ಇಂದು ಇಡೀ ದೇಶದಾದ್ಯಂತ ಇಂತಹ ಲಕ್ಶಾಂತರ ಕೋಟ್ಯಾಂತರ ಜನರು ಸಂದೇಶಗಳನ್ನು ರವಾನಿಸುತ್ತಾರೆ. ಇದನ್ನು ದೇಶರಕ್ಶಣೆಯ ಪವಿತ್ರ ಕರ್ತವ್ಯವೆಂದು ನಂಬಿಯೇ ಈ ಕೆಲಸ ಮಾಡುತ್ತಾರೆ. ಆದರೆ ‘ಸ್ವರ್ಗದ ಕನಸು ತೋರಿಸಿ ತಮ್ಮ ಸುತ್ತ ಕಟ್ಟುತ್ತಿರುವ ನರಕದ ಬೇಲಿಗಳು’ ಇಂತಹ ಕೋಟ್ಯಂತರ ಜನರಿಗೆ ಗೋಚರಿಸುವುದೇ ಇಲ್ಲ. ಇದು ಇಂದಿನ ದುರಂತದ ವಿದ್ಯಮಾನ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಹೀಗೆ ರವಾನೆಯಾಗುವ ‘ಸುಳ್ಳು ಸಂದೇಶ’ಗಳೇ ಜನರ ಪ್ರಜ್ಞೆಯನ್ನು ರೂಪಿಸುತ್ತಿರುವುದು. ಇಂದಿನ ದಿನಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಮತ್ತು ಫೇಸ್ಬುಕ್, ವಾಟ್ಸಪ್ ನಂತಹ ಹಲವು ಸಾಮಾಜಿಕ ಮಾಧ್ಯಮಗಳು; ಎಲ್ಲವೂ ಅವಾಸ್ತವಿಕ ಇಲ್ಲವೇ ಅತಿರಂಜಿತ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವಲ್ಲಿ ಕಾರ್ಯನಿರತವಾಗಿವೆ ಇಲ್ಲವೇ ಅಂತಹ ಕೆಲಸ ಮಾಡುವವರಿಗೆ ವೇದಿಕೆ ರೂಪಿಸಿಕೊಟ್ಟಿವೆ. ಪರ್ವತದಂತೆ ಬೆಳೆದಿರುವ ಸುಳ್ಳು ಸುದ್ದಿಗಳ ರಾಶಿಯ ನಡುವೆ ಅಲ್ಲೊಂದು ಇಲ್ಲೊಂದು ‘ಸತ್ಯ’ದ ಸುದ್ದಿಗಳು ಬಿತ್ತರಗೊಂಡರೆ ಅವನ್ನೂ ಯಾರೂ ಗಮನಿಸುವುದೇ ಇಲ್ಲ. ಅಥವಾ ಸತ್ಯ ಯಾವುದು? ಸುಳ್ಳು ಯಾವುದು? ಎಂಬುದನ್ನು ತಿಳಿಯಲಾಗದಶ್ಟು ಜನರು ಗೊಂದಲಗೊಂಡಿದ್ದಾರೆ. ಅಂತಹ ಸಂದೇಶಗಳಿಂದ ಜನರ ವಿವೇಕ ದುರ್ಬಲವಾಗಿದೆ. ಜನರ ವಿವೇಕ ದುರ್ಬಲವಾದಂತೆ ಅವರು ಆಕ್ರಮಣಕಾರಿಯಾಗಿ ತಮಗಿಂತ ಭಿನ್ನ ಅಭಿಪ್ರಾಯ ಹೊಂದಿರುವವರ ವಿರುದ್ಧ ದಾಳಿಗೂ ಮುಂದಾಗುತ್ತಾರೆ. ತಮ್ಮ ವಾದವೇ ಸರಿ. ಅದನ್ನೇ ಎಲ್ಲರೂ ಒಪ್ಪಬೇಕು ಎಂದು ಬಲವಂತ ಮಾಡುತ್ತಾರೆ. ಇಲ್ಲಿ ಜನರ ಸ್ವಂತ ಆಲೋಚನೆ, ಸೃಜನಶೀಲತೆ ಮತ್ತು ಮಾನವೀಯ ಮೌಲ್ಯಗಳು ಗತಿಸುತ್ತವೆ. ಇಂತಹ ಹೊತ್ತಿನಲ್ಲಿಯೇ ನಿರಂಕುಶಾಧಿಕಾರ ವ್ಯವಸ್ಥೆ ಬೆಳೆಯಲು ಭೂಮಿ ಹದಗೊಂಡಂತೆ ಆಗುತ್ತದೆ. ಇದು ಎಲ್ಲವೂ ದೇವರು, ಧರ್ಮ, ಭಕ್ತಿ ಮತ್ತು ದೇಶದ ಹೆಸರಿನಲ್ಲಿಯೇ ನಡೆಯುತ್ತಿರುತ್ತದೆ.

ಈ ವಿದ್ಯಮಾನದಲ್ಲಿ ಕಲಿತವರು ಕಲಿಯದವರು ಎಂಬ ಯಾವ ವ್ಯತ್ಯಾಸವೂ ಇಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಸಂದೇಶಗಳಿಂದಲೆ ತಮ್ಮ ಪ್ರಜ್ಞೆಯನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಮಕ್ಕಳಿಗೆ ಬೋಧನೆ ಮಾಡುವ ಅಧ್ಯಾಪಕರಿಗೂ ಯಾವುದು ಸರಿ? ಯಾವುದು ತಪ್ಪು? ಎಂದು ತಿಳಿಸಿಕೊಡಲಾಗದಶ್ಟು ಅವರ ವಿವೇಕವೂ ಮಸುಕಾಗಿದೆ. ಅವರು ಕೂಡ ಜನಪ್ರಿಯವಾದ ಇಲ್ಲವೇ ವಾಟ್ಸಪ್ ಸಂದೇಶಗಳನ್ನೇ ಅಧಿಕೃತ ಮಾಹಿತಿ ಎಂದು ನಂಬುತ್ತಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮಾಹಿತಿಗಳೇ ಸತ್ಯವೆಂದು ನಂಬುತ್ತಾರೆ. ತಮ್ಮ ಸುತ್ತ ಬೆಟ್ಟದಂತೆ ಬೆಳೆಸಿರುವ ಸುಳ್ಳುಗಳಲ್ಲಿ ಸತ್ಯವನ್ನು ಗುರುತಿಸಲಾಗದಶ್ಟು ದಣಿದಿದ್ದಾರೆ. ಇದು ಇಂದಿನ ಸಮಾಜ ತನ್ನ ಸಾಮಾನ್ಯ ವಿವೇಕ, ಜೀವಪರ ಧೋರಣೆ, ನೈಜ ಧರ್ಮ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳಿಂದ ದೂರವಾಗಿ ಅವಸಾನದ ಹಾದಿ ಹಿಡಿದಿರುವುದರ ಸೂಚಕ. ನೈತಿಕತೆ, ದಯೆ, ಪ್ರೀತಿ, ಕರುಣೆಗಳೇ ಇಲ್ಲದೇ ದ್ವೇಶದ ಪಾಚಿಯ ಮೇಲೆ ಕಾಲಿರಿಸಿದ್ದಾರೆ. ಅದು ಎಳೆದೊಯ್ದು ಕೆಡವಿದ ಕಡೆ ಬೀಳುತ್ತಿದ್ದಾರೆ.

ಆದರೆ ಈ ಪ್ರಕ್ರಿಯೆ ಸ್ವಾಭಾವಿಕವಾಗಿ, ತನ್ನಿಂದ ತಾನೇ ಮ್ಯಾಜಿಕ್‍ನಂತೆ ಇಲ್ಲವೇ ಆಕಸ್ಮಿಕವಾಗಿ ನಡೆಯುತ್ತಿರುವುದಲ್ಲ. ಇದು ಬಹಳ ವ್ಯವಸ್ಥಿತವಾಗಿ ನಡೆಯುತ್ತಿರುವ ಬೃಹತ್ ರಾಜಕೀಯ ಮೇಲಾಟದ ಯೋಜನೆಯ ಭಾಗವಾಗಿರುವುದು ರಹಸ್ಯವಾಗಿ ಉಳಿದಿಲ್ಲ. ಮಾಧ್ಯಮಗಳು, ಆಳುವ ಜನರು, ಪ್ರಭುತ್ವ ಹಾಗೂ ಬಂಡವಾಳವಾದಿ ಉದ್ಯಮಗಳ ಅಪವಿತ್ರ ಮೈತ್ರಿಯಿಂದ ಇದು ನಡೆಯುತ್ತಿದೆ. ಫೇಸ್ಬುಕ್‍ನಂತಹ ಬಹುರಾಶ್ಟ್ರೀಯ ಕಂಪನಿ ಭಾರತದಲ್ಲಿ ಆಳುವ ಜನರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವುದು ಬಹಿರಂಗವಾಗಿದೆ. ಈ ಬಗೆಗೆ ಅಮೆರಿಕದ ‘ವಾಲ್ ಸ್ಟ್ರೀಟ್’ ಪತ್ರಿಕೆ ವಿವರವಾದ ವರದಿ ಪ್ರಕಟಿಸಿದೆ. ಈ ವರದಿ ಭಾರತದಲ್ಲಿ ಫೇಸ್ಬುಕ್ ಆಳುವವರ ಜೊತೆಗೆ ಕೈಜೋಡಿಸಿರುವುದನ್ನು ವಿವರವಾಗಿ ಚರ್ಚಿಸಿದೆ. ರಾಜಕೀಯ ನಾಯಕರ ದ್ವೇಶ ಭಾಶಣಗಳಿಗೆ ಕಡಿವಾಣ ಹಾಕಿದರೆ ಸಂಸ್ಥೆಯ ವಹಿವಾಟಿಗೆ ಹಿನ್ನೆಡೆಯಾಗುವುದಾಗಿ ಅದರ ಅಧಿಕಾರಿಗಳು ಹೇಳಿರುವುದನ್ನು ಉಲ್ಲೇಖಿಸಿದೆ. ನಂತರ ಈ ಬಗೆಗೆ ಅನೇಕ ಭಾರತೀಯ ಪತ್ರಿಕೆಗಳಲ್ಲಿ ಈ ಬಗೆಗೆ ಚರ್ಚೆಯಾಗಿದೆ. ಇಲ್ಲಿ ಮತ್ತೊಂದು ಉದಾಹರಣೆ ನೋಡಬಹುದು. ಕಳೆದ ಜೂನ್‍ನಲ್ಲಿ ಮೃತಪಟ್ಟಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವನ್ನು ಕೊಲೆಯೆಂದು ಬಿಂಬಿಸಲು ಮತ್ತು ಪೋಲಿಸರ ತನಿಖೆಯ ಹಾದಿ ತಪ್ಪಿಸಲು ಎಂಬತ್ತು ಸಾವಿರ ಫೇಸ್ಬುಕ್ ಮತ್ತು ವಾಟ್ಸಪ್‍ನ ನಕಲಿ ಐಡಿಗಳನ್ನು ಸೃಶ್ಟಿಸಿದ್ದಾಗಿ ‘ಹಿಂದೂಸ್ಥಾನ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ. ನಕಲಿ ಅಕೌಂಟ್‍ಗಳು ಇಟಲಿ, ಜಪಾನ್, ಅಮೆರಿಕ ಮುಂತಾದ ದೇಶಗಳಿಂದ ಕಾರ್ಯನಿರ್ವಹಿಸಿರುವುದು ಬಹಿರಂಗಗೊಂಡಿದೆ. ಅಲ್ಲದೆ ‘ರಿಪಬ್ಲಿಕ್’ನಂತಹ ರಾಶ್ಟ್ರೀಯ ವಾಹಿನಿಯೂ ಕೂಡ ಟಿಆರ್‍ಪಿ ಹಗರಣದಲ್ಲಿ ಮುಳುಗಿರುವ ಬಗೆಗೆ ಮುಂಬೈ ಪೋಲಿಸರು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ. ಇದಲ್ಲದೆ ಇಂದಿನ ಬಹುತೇಕ ವಾಹಿನಿಗಳು ಒಂದಲ್ಲ ಒಂದು ರೀತಿಯಲ್ಲಿ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವಲ್ಲಿ ತೊಡಗಿಕೊಂಡಿವೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ನಮ್ಮ ಸಮಾಜದಲ್ಲಿ ಈ ಮೊದಲಿನಿಂದಲೂ ಅನೇಕ ಬಗೆಯ ಮೌಢ್ಯಗಳನ್ನು, ಮನುಶ್ಯ ವಿರೋಧಿ ಮೌಲ್ಯಗಳನ್ನು ಪೋಶಿಸಿಕೊಂಡು ಬರಲಾಗುತ್ತಿದೆ. ಇದನ್ನು ಬದಲಿಸಲು ನಿಡುಗಾಲದಿಂದ ಪ್ರಯತ್ನ ಮಾಡುತ್ತ ಬಂದರೂ ಅದನ್ನು ಇಡಿಯಾಗಿ ಬದಲಿಸಲು ಸಾಧ್ಯವಾಗುತ್ತಿಲ್ಲ. ಆದರೆ ಕಳೆದ ಒಂದು ಶತಮಾನದಲ್ಲಿ ನಮ್ಮ ಸಮಾಜದಲ್ಲಿ ಒಂದು ಸಣ್ಣ ಚಲನೆ ಕಾಣಿಸಿಕೊಂಡಿತ್ತು. ಇದು ಸಮಾನತೆಯ ಕನಸುಗಳನ್ನು ಚಿಗುರಿಸಿತ್ತು. ಆದರೆ ನಮ್ಮ ದೇಶದಲ್ಲಿ ಇಂತಹ ಕನಸುಗಳನ್ನು ನಾಶಪಡಿಸುವ ಕೆಲಸವನ್ನು ಇಂದಿನ ಆಳುವ ವರ್ಗ ಮತ್ತು ಪ್ರಭುತ್ವ ಶಕ್ತಿಗಳು ಮಾಡುತ್ತಿವೆ. ಇಲ್ಲಿ ಜಾತಿ, ಧರ್ಮ, ಉಳ್ಳವರ-ಇಲ್ಲವರ ನಡುವಿನ ಅಂತರಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತಿವೆ. ಸಂಪತ್ತನ್ನು ಮೇಲ್ಜಾತಿಗಳ ಕೈಗೆ ದೊರೆಯುವಂತೆ ಮಾಡಲಾಗುತ್ತಿದೆ. ಸಾರ್ವಜನಿಕ ಸಂಪತ್ತನ್ನು ಖಾಸಗೀಕರಿಸಲಾಗುತ್ತಿದೆ. ಇದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆ ಮೂಲಕ ಜನರನ್ನು ದಿಕ್ಕೆಡಿಸಲು ವ್ಯವಸ್ಥಿತವಾಗಿಯೇ ಸುಳ್ಳುಗಳನ್ನು ಸೃಶ್ಟಿಸಲಾಗುತ್ತಿದೆ. ತಮಗಿರುವ ರಾಜಕೀಯ ಆರ್ಥಿಕ ಅಧಿಕಾರದ ಪ್ರಭಾವದಿಂದ ಎಲ್ಲ ಬಗೆಯ ಮಾಧ್ಯಮಗಳನ್ನು ಈ ಶಕ್ತಿಗಳು ಬಳಸಿಕೊಳ್ಳುತ್ತಿವೆ. ಜನರನ್ನು ಸದಾ ಸುಳ್ಳಿನ ನಶೆಯ ಗುಂಗಿನಲ್ಲಿಯೇ ಇಡುವ ಕೆಲಸ ಮಾಡುತ್ತಿವೆ. ಜನರ ನೈಜ ಸಮಸ್ಯೆಗಳನ್ನು ಚರ್ಚೆಯ ಕೇಂದ್ರದಲ್ಲಿಡುವ ಬದಲು ‘ನಕಲಿ’ ಸಮಸ್ಯೆಗಳನ್ನು ಮಾತ್ರವೇ ಸದಾ ಕೇಂದ್ರದಲ್ಲಿರುವಂತೆ ನೋಡಿಕೊಳ್ಳುತ್ತವೆ. ಧರ್ಮ, ಭಕ್ತಿಗಳಂತಹ ಕೆಲವು ಭಾವನಾತ್ಮಕ ಸಂಗತಿಗಳನ್ನು ಮಾತ್ರ ಪ್ರಸಾರ ಮಾಡುತ್ತ ನಿಜವಾದ ಸಮಸ್ಯೆಗಳು ಜನರ ಗಮನಕ್ಕೆ, ಬಾರದಂತೆ ನೋಡಿಕೊಳ್ಳುತ್ತಿವೆ.

ಇದನ್ನು ನೋಡಿದರೆ ಇಂದಿನ ಮಾಧ್ಯಮ ಜಗತ್ತು ‘ಸತ್ಯ ಶೋಧನೆ’ ಮತ್ತು ಸತ್ಯದ ಪ್ರಚಾರದ ಬದಲು ಸುಳ್ಳುಗಳ ಪ್ರಚಾರದ ಮೂಲಕ ಇಡೀ ದೇಶದ ಮನಸ್ಸನ್ನು ಹತ್ಯೆ ಮಾಡುತ್ತಿರುವುದು ಗೋಚರಿಸುತ್ತದೆ. ಚಾಕುಚೂರಿಗಳು ಜನರ ದೇಹವನ್ನು ಕೊಂದರೆ ಸುಳ್ಳು ಸಂದೇಶಗಳು ಜನರ ಪ್ರಜ್ಞೆಯನ್ನು ಕೊಲ್ಲುತ್ತವೆ ಮತ್ತು ಅವರನ್ನು ದ್ವೇಶಮಯಗೊಳಿಸುತ್ತವೆ. ದುರಂತವೆಂದರೆ ಜನರಿಗೆ ತಮ್ಮ ಬುದ್ಧಿ, ಪ್ರಜ್ಞೆ, ಅರಿವುಗಳ ಹತ್ಯೆಯಾಗಿರುವುದು ಗೋಚರಿಸುವುದಿಲ್ಲ. ಉದಾಹರಣೆಗೆ, ಕಳೆದ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಹಬ್ಬುತ್ತಿದ್ದ ಆರಂಭದಲ್ಲಿ ದೆಹಲಿಯ ಮಸೀದಿಯೊಂದರಲ್ಲಿ ನಡೆದ ಕಾರ್ಯಕ್ರಮದ ಬಗೆಗೆ ಮಾಧ್ಯಮಗಳು ನಡೆಸಿದ ಅಪಪ್ರಚಾರವನ್ನು ಗಮನಿಸಿದರೆ ಇದು ತಿಳಿಯುತ್ತದೆ. ಆ ಸಂದರ್ಭದಲ್ಲಿ ಅನ್ಯ ಧರ್ಮೀಯರನ್ನು ದ್ವೇಶಿಸುವುದು ಮತ್ತಶ್ಟು ಹೆಚ್ಚಾಯಿತು. ಮುಸ್ಲಿಮರು ‘ಕೊರೊನಾ ಜೆಹಾದ್’ ನಡೆಸುತ್ತಿದ್ದಾರೆ ಎಂದು ಸುದ್ದಿ ಮಾಡಲಾಯಿತು. ಇದು ಅವಾಸ್ತವಿಕವಾಗಿದ್ದು ಜನರ ಮನಸ್ಸಿನಲ್ಲಿ ನಿರ್ದಿಶ್ಟ ಸಮುದಾಯದ ಎದುರು ಅಪಪ್ರಚಾರ ಮಾಡಲಾಯಿತು. ಭಾರತದಲ್ಲಿ ಕೊರೊನಾ ಹರಡಲು ಒಂದು ನಿರ್ದಿಶ್ಟ ಸಮುದಾಯವೇ ಕಾರಣ ಎಂದು ಜನರು ಬೀದಿ ಬೀದಿಗಳಲ್ಲಿ ಮಾತನಾಡಿಕೊಳ್ಳುವಂತೆ ಮಾಡಲಾಯಿತು. ಇಂತಹ ಸುದ್ದಿಗಳಿಂದ ಹುಟ್ಟಿಕೊಂಡ ಅಪನಂಬಿಕೆ ಬಹುಸಂಖ್ಯಾತರ ಮನಸ್ಸಿನಾಳದಲ್ಲಿ ಕೆಂಡವಾಗಿ ನಿಗಿನಿಗಿಸುವಂತೆ ಆಯಿತು. ಇದು ಸಮಯ ಬಂದಾಗ ಇದು ಸ್ಫೋಟಿಸಬಹುದು. ಅಂದರೆ ಸುಳ್ಳುಗಳು ಮತ್ತು ದ್ವೇಶಮಯ ವಿಚಾರಗಳಿಂದ ಜನರನ್ನು ಸ್ಫೋಟಕ ವಸ್ತುಗಳಂತೆ ರೂಪಿಸಲಾಗುತ್ತಿದೆ. ಇದಕ್ಕೆ ಸುಳ್ಳು ಕೈಗಾರಿಕೆಗಳದೇ ಪ್ರಮುಖ ಕಾಣಿಕೆಯಲ್ಲದೆ ಬೇರಾರದೂ ಅಲ್ಲ. ಮಾಧ್ಯಮಗಳು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಬಗೆಗೆ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.

ಇದನ್ನು ಗಮನಿಸಿದರೆ ಆಳುವವರು ತಮಗೆ ಬೇಕಾದಂತೆ ಜನರ ಅಭಿಪ್ರಾಯಗಳನ್ನು ತಿದ್ದುತ್ತಾರೆ. ನೋಮ್ ಚಾಮ್ಸ್ಕಿ ಅವರು ಹೇಳಿದಂತೆ ಇದು ‘ಜನಾಭಿಪ್ರಾಯಗಳನ್ನು ನಿರ್ಮಿಸಿ (ಮ್ಯಾನ್ಯುಫ್ಯಾಕ್ಚರಿಂಗ್ ಕನ್ಸೆಂಟ್) ಕೊಳ್ಳುವುದಾಗಿದೆ. ಹೀಗೆ ರೂಪಿಸಿಕೊಳ್ಳುವ ಬಗೆ ಜನರ ಆಲೋಚನೆಯ ಸ್ವಾತಂತ್ರ್ಯವನ್ನೇ ನಾಶ ಮಾಡುತ್ತದೆ. ಕುವೆಂಪು ಅವರು ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಹೇಳಿದ್ದರು. ಆದರೆ ಇಂದು ಆಲೋಚನೆಯ ಸ್ವಾಯತ್ತತೆ ಸ್ವಾತಂತ್ರ್ಯಗಳನ್ನೇ ನಾಶಮಾಡಲಾಗುತ್ತಿದೆ. ಇಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲವನ್ನೂ ನಾಶ ಮಾಡಲಾಗುತ್ತದೆ. ಇವು ಕೇವಲ ಆಶಯಾತ್ಮಕವಾದ ಪದಪುಂಜಗಳು ಮಾತ್ರವಾಗಿ ಉಳಿದಿವೆ. ದೇಶದ ಸಂವಿಧಾನವೂ ಕೂಡ ನೆಪ ಮಾತ್ರವಾಗಿಬಿಡುತ್ತದೆ. ಜನರನ್ನು ಮಾನಸಿಕವಾಗಿ ಸೋಲಿಸಿ ಅಧಿಕಾಸ್ಥರ ಗುಲಾಮಗಿರಿಯಲ್ಲಿ ಖಾಯಮ್ಮಾಗಿ ಬಿದ್ದಿರುವಂತೆ ನೋಡಿಕೊಳ್ಳಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಜನರ ಕನಸುಗಳೂ ಸ್ವಂತದವುಗಳಾಗಿ ಉಳಿದಿರುವುದಿಲ್ಲ. ಅವುಗಳನ್ನು ಕೂಡ ಬಲಿಶ್ಟರು ತಮಗೆ ಬೇಕಾದಂತೆ ರೂಪಿಸಿಕೊಳ್ಳುತ್ತಾರೆ. ಜನರ ಕನಸುಗಳು ಆಳುವವರ ಉಕ್ಕಿನ ಪಾದದಡಿ ಅಪ್ಪಚ್ಚಿಯಾಗುತ್ತವೆ.

ಮಾರುಕಟ್ಟೆಯಲ್ಲಿ ಲಾಭ ಗಳಿಸಿಕೊಳ್ಳಲು ಕೈಗಾರಿಕೆಗಳಲ್ಲಿ ಉತ್ಪನ್ನಗಳನ್ನು ತಯಾರಿಸಿದಂತೆ, ತಮಗೆ ಬೇಕಾದ ಜನಾಭಿಪ್ರಾಯವನ್ನು ರೂಪಿಸಿಕೊಳ್ಳುವುದು ಜನರ ಮೇಲೆ ನಡೆಸುವ ಬೌದ್ಧಿಕ ಆಕ್ರಮಣದ ಮಾರ್ಗವಾಗಿದೆ. ಇದನ್ನು ನಿತ್ಯವೂ ಮಾಡಲಾಗುತ್ತಿದೆ. ಶೇ 99.99ರಶ್ಟು ‘ಸತ್ಯ’ವನ್ನು ನುಡಿಯುವ ಬಹುತೇಕ ವಾಣಿಜ್ಯ ಜಾಹೀರಾತುಗಳು ಕೂಡ ಇಂತಹ ಆಕ್ರಮಣದ ಭಾಗವೇ ಆಗಿವೆ. ಇದರಲ್ಲಿ ಇಡೀ ಜಗತ್ತಿನ ಮುಖ್ಯವಾಹಿನಿಯ ಎಲ್ಲ ಮಾಧ್ಯಮಗಳೂ ತೊಡಗಿವೆ. ಇಂತಹ ವ್ಯವಸ್ಥಿತ ದಾಳಿಯ ಭಾಗವಾಗಿ ಸುಳ್ಳು ಮಾಹಿತಿಗಳನ್ನು ಉತ್ಪಾದಿಸಿ ಅವುಗಳನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತ ಜನರನ್ನು ವ್ಯವಸ್ಥಿತವಾಗಿ ದಿಕ್ಕು ತಪ್ಪಿಸಲಾಗುತ್ತಿದೆ. ಇಂತಹ ಸುಳ್ಳುಗಳ ಸೃಶ್ಟಿಯಲ್ಲಿ ಕೆಲವರು ಗೊತ್ತಿದ್ದೂ ಉದ್ದೇಶಪೂರಕವಾಗಿ ಸೇರಿಕೊಂಡಿರುತ್ತಾರೆ. ಬಹುಸಂಖ್ಯಾತ ಜನರ ಗುಂಪು ಇಂತಹ ತಯಾರಿಕೆಯ ಭಾಗವಾಗಿರುವುದಿಲ್ಲ. ಆದರೆ ಪ್ರಸಾರ ಮಾಡಲಾದ ಮಾಹಿತಿಯನ್ನು ದಿಟವೆಂದು ನಂಬಿ ಅವನ್ನು ಎಲ್ಲರಿಗೂ ರವಾನಿಸುತ್ತಾರೆ. ಇವರಿಗೆ ಸರಿತಪ್ಪುಗಳನ್ನು ಪರಿಶೀಲಿಸುವ ತಾಳ್ಮೆ, ಸಿದ್ದತೆಗಳು ಇರುವುದಿಲ್ಲ. ಇವರು ಸುಳ್ಳು ಸಂದೇಶಗಳನ್ನು ಸ್ರುಶ್ಟಿಸುವುದರ ಹಿಂದಿರುವ ಹುನ್ನಾರಗಳನ್ನು ಅರಿಯವಲ್ಲಿ ಸೋಲುತ್ತಾರೆ.

ಹೀಗೆ ಸೋಲುವ ಜನರು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ, ಧರ್ಮ, ಶ್ರೇಶ್ಟ ಕನಿಶ್ಟ, ಹೆಣ್ಣು ಗಂಡುಗಳ ನಡುವಿನ ಲಿಂಗತಾರಮ್ಯದ ನೆಲೆಗಳು; ಚರಿತ್ರೆಯ ಪಾಠಗಳು, ಹೀಗೆ ಅಸಂಖ್ಯ ವಿಚಾರಗಳ ಬಗೆಗೆ ಈಗಾಗಲೇ ಜನಪ್ರಿಯವಾಗಿರುವ ಸ್ಥಾಪಿತ ಮೌಲ್ಯಗಳನ್ನೇ ಸಮರ್ಥಿಸುತ್ತಾರೆ. ಇವರಿಗೆ ಅದಕ್ಕಿಂತ ಭಿನ್ನವಾದ ಮಾಹಿತಿಗಳನ್ನು ನೀಡಿದರೆ ಅದನ್ನು ನಂಬಲು ಸಿದ್ದರಿರುವುದಿಲ್ಲ. ಇಲ್ಲವೇ ನೈಜ ನೆಲೆಗಳ ವಿಚಾರಗಳ ಬಗೆಗೆ ಅಸಂಖ್ಯ ಪ್ರಶ್ನೆಗಳನ್ನು ಕೇಳುತ್ತ ಅಸಹನೆಯಿಂದ ವಿರೋಧ ವ್ಯಕ್ತಪಡಿಸುತ್ತಾರೆ. ಇಂತಹ ವಿಚಾರಗಳಿಂದ ರೂಪುಗೊಂಡ ಮನಸ್ಥಿತಿಗಳನ್ನು ಬದಲಿಸುವುದು ಕಶ್ಟಸಾಧ್ಯವಾದ ಕೆಲಸವಾಗಿರುತ್ತದೆ. ಇಂತಹ ಮಸ್ಸುಗಳು ನಿಧಾನವಾಗಿ ಜಡಗೊಳ್ಳುತ್ತ ಹೋಗುತ್ತವೆ. ಇಂತಹ ಜಡಮನಸ್ಸುಗಳನ್ನು ರೂಪಿಸುವುದೇ ಯಾವುದೇ ಆಳುವ ವ್ಯವಸ್ಥೆಯ, ಪ್ರಬಲ ವರ್ಗಗಳ ಉದ್ದೇಶವಾಗಿರುತ್ತದೆ.

ಒಟ್ಟಾರೆಯಾಗಿ ಈಗ ಗಮನಿಸಿದರೆ ಸುಳ್ಳುಗಳಿಂದ ದಿಕ್ಕೆಟ್ಟ ಜನರು ನಿಜಕ್ಕೂ ಗೊಂದಲದಲ್ಲಿದ್ದಾರೆ. ಗಲಿಬಿಲಿಗೊಂಡಿದ್ದಾರೆ. ಇವರನ್ನು ವಾಸ್ತವದ, ಸತ್ಯದ ದಾರಿಗೆ ಮರಳಿ ಕರೆತರುವುದು ಇಂದಿನ ಅಗತ್ಯವಾಗಿದೆ. ಇದು ವ್ಯಕ್ತಿಗಳ, ಸಮಾಜದ, ದೇಶದ ಭವಿಶ್ಯ ಮತ್ತು ನಾಗರಿಕತೆಯ ಆರೋಗ್ಯದ ದ್ರುಶ್ಟಿಯಿಂದ ಅತ್ಯಂತ ಜರೂರಾಗಿ ಆಗಬೇಕಾದ ಕೆಲಸ. ಬುದ್ಧ ಹುಟ್ಟಿದ ನೆಲದಲ್ಲಿ, ಹರಿಶ್ಚಂದ್ರನ ಕಥೆ ಕಟ್ಟಿ ಹಾಡಿದ ನೆಲದಲ್ಲಿ, ಗಾಂಧೀಜಿ ಬಿತ್ತಿದ ನೈತಿಕತೆ ಮೌಲ್ಯಗಳ ನೆಲದಲ್ಲಿ ಸುಳ್ಳುಗಳದೇ ರಾಜ್ಯಭಾರವಾಗಿದೆ. ಸುಳ್ಳುಗಳ ಆಕ್ರಮಣದಲ್ಲಿ ಜನರ ಬೌದ್ಧಿಕ ಆರೋಗ್ಯ ನಾಶವಾಗುತ್ತಿದೆ. ಇದರಿಂದ ಜನರು ವಿವಿಧ ಬಗೆಯ ಸಮಸ್ಯೆಗಳು, ಸಂಕಟಗಳು, ಅಪರಾಧಗಳಿಂದ ನರಳುವಂತಾಗಿದೆ. ಮಾನಸಿಕವಾಗಿ ಹುಚ್ಚರಂತಾಗಿದ್ದಾರೆ. ದ್ವೇಶ ಮತ್ತು ದುಶ್ಟತನಗಳನ್ನು ಬೆಳೆಸಿಕೊಂಡು ವಿನಾಶದ ಹಾದಿಯಲ್ಲಿದ್ದಾರೆ. ಆದರೆ ಇಂತಹ ಜನರಿಗೆ ಸತ್ಯ ತಿಳಿಸುವವರಿಗೆ ಅಶ್ಟೊಂದು ಕಸುವೇ ಇಲ್ಲ. ಹಾಗಾಗಿ ಸುಳ್ಳು ಸಂದೇಶಗಳ ಪ್ರವಾಹದ ವಿರುದ್ಧ ಕೆಲಸ ಮಾಡುವುದು ಸದ್ಯಕ್ಕೆ ಕಶ್ಟವಾಗಿದೆ. ಆದರೆ ದೇಶದ ಜನರಿಗೆ ‘ಸತ್ಯದರ್ಶನ’ ಮಾಡಿಸುವುದು ಅನಿವಾರ್ಯವಾಗಿದೆ. ಯಾವುದೇ ಸಮಾಜದಲ್ಲಿ ಸತ್ಯದರ್ಶನದ ಹಂಬಲ ತನ್ನಿಂದ ತಾನೇ ಬರುವುದೂ ಅಲ್ಲ. ಅದು ಎಚ್ಚತ್ತವರ ಸಂಘಟಿತ ಕೆಲಸದ ಮೂಲಕ ಆಗಬೇಕಾಗಿದೆ. ಅದಾಗದ ಹೊರತು ನಮ್ಮ ಸಮಾಜ ಮತ್ತಶ್ಟು ಮೃಗೀಯವಾಗುತ್ತಲೇ ಹೋಗುತ್ತದೆ. ಹಾಗಾಗಿ ಸದ್ಯ ಸುಳ್ಳುಗಳ ಸಂತೆಯಲ್ಲಿ ಸತ್ಯ ನುಡಿಯುವ ಎಲ್ಲ ‘ಸಂತರು’ ಮೈಳೈಸಿ ಹಾಡಬೇಕಿದೆ ಸಹಬಾಳ್ವೆಯ ಸ್ವಾತಂತ್ರ್ಯದ ಸಮಾನತೆಯ ಜೀವಗಾನ.

ಈ ಅಂಕಣದ ಹಿಂದಿನ ಬರೆಹಗಳು

ಕೇಳ್ವಿಯೆಂಬ ಕೂರಲಗು ಮತ್ತು ಪ್ರಭುತ್ವ

ಹೊಸ ಶಿಕ್ಶಣ ನೀತಿ ಮತ್ತು ತಾಯ್ನುಡಿ ಕಲಿಕೆ

*

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...