ಟೇಸ್ಟ್ ಆಫ್ ಚೆರಿ: ‘ಮನುಷ್ಯನ ಒಂಟಿತನ ಮತ್ತು ದ್ವಂದ್ವಗಳ ತಾಕಲಾಟ’

Date: 10-08-2020

Location: ಬೆಂಗಳೂರು


ತನ್ನ ವಿಭಿನ್ನ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದ ನಿರ್ದೇಶಕ ಅಬ್ಬಾಸ್‌ ಕಿಯೋರಸ್ತಾಮಿ. ಇರಾನ್‌ನ ಈ ನಿರ್ದೇಶಕ ಚಿತ್ರಿಸಿದ ಸಿನಿಮಾಗಳು ಬೆಳ್ಳಿತೆರೆಯಲ್ಲಿ ದೃಶ್ಯ ಕಾವ್ಯ ಸೃಷ್ಟಿಸಿವೆ. ಅಬ್ಬಾಸ್‌ ಕಿಯೋರಸ್ವಾಮಿ ಅವರ ಅತ್ಯಂತ ಮೆಚ್ಚುಗೆಗೆ ಪಾತ್ರವಾದ ’ಟೇಸ್ಟ್‌ ಆಫ್‌ ಚೆರಿ’ ಚಿತ್ರದ ಬಗ್ಗೆ ಲೇಖಕ- ಪ್ರಾಧ್ಯಾಪಕ ಡಾ. ಸುಭಾಷ ರಾಜಮಾನೆ ಅವರು ಈ ಬರೆಹದಲ್ಲಿ ಚರ್ಚಿಸಿದ್ದಾರೆ. ಅವರ ನವಿಲನೋಟ ಅಂಕಣವು 15ಕ್ಕೆ ಒಮ್ಮೆ ಪ್ರಕಟವಾಗಲಿದೆ.

“ಮಧ್ಯೆ ವಯಸ್ಸಿನ ವ್ಯಕ್ತಿಯೊಬ್ಬ ರೇಂಜ್ ರೋವರ್ ಕಾರನ್ನು ಟೆಹರಾನ್ ಪಟ್ಟಣದ ಸುತ್ತ ಮುತ್ತ ಓಡಿಸುತ್ತಿರುವ ದೃಶ್ಯ. ಆ ಕಾರ್ ಚಾಲಕನ ದುಃಖಭರಿತ ಕಣ್ಣುಗಳು ಏನನ್ನೋ ಹುಡುಕುತ್ತಿವೆ. ಆದರೆ ಆತನಿಗೆ ಏನು ಬೇಕಾಗಿದೆ ಎಂಬುದು ನಮಗೆ ತಿಳಿಯದು. ರಸ್ತೆ ಬದಿಯಲ್ಲಿ ಕಾರು ನಿಂತಾಗ ಯಾರೋ ಒಬ್ಬ ಕೆಲಸಕ್ಕೆ ಕಾರ್ಮಿಕನ ಅಗತ್ಯವಿದೆಯೇ ಎಂದು ಚಾಲಕನಿಗೆ ಕೇಳುತ್ತಾನೆ. ಆತ ಇಲ್ಲವೆಂದು ಹೇಳಿ ಅಲ್ಲಿಂದ ಕಾರ್ ಓಡಿಸಿಕೊಂಡು ಹೋಗುತ್ತಾನೆ. ಕಾರ್ ಚಲಿಸುತ್ತಲೇ ಇದೆ. ಅಲ್ಲೊಂದು ಟೆಲಿಫೋನ್ ಬೂತ್‌ನಲ್ಲಿ ಮಾತನಾಡುತ್ತಿರುವ ತರುಣನೊಬ್ಬ ಕಾಣಿಸುತ್ತಾನೆ. ಕಾರ್ ಅಲ್ಲಿ ನಿಲ್ಲುತ್ತದೆ. ಕಾರ್ ಚಾಲಕ ಆ ಯುವಕನನ್ನು ತನ್ನೊಂದಿಗೆ ಸುತ್ತಾಡಲು ಕರೆಯುತ್ತಾನೆ. ಆದರೆ ಆ ತರುಣ ನಿರಾಕರಿಸುತ್ತಾನೆ. ಕಾರ್ ಚಾಲಕ ಒತ್ತಾಯದಿಂದ ‘ನಿನಗೆ ಹಣಕಾಸಿನ ಸಮಸ್ಯೆ ಏನಾದರು ಇದ್ದರೆ ಹೇಳು; ನಾನು ಸಹಾಯ ಮಾಡಬಲ್ಲೆ’ ಎನ್ನುತ್ತಾನೆ. ಆದರೆ ಆ ತರುಣ ತನಗೆ ಹಣದ ಅಗತ್ಯ ಇಲ್ಲವೆಂದು, ವಿನಾಕಾರಣ ಪೀಡಿಸುತ್ತಿರುವುದಕ್ಕೆ ಬೈಯುತ್ತ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಆತ ಕಾರ್ ಸ್ಟಾರ್ಟ್ ಮಾಡುತ್ತಾನೆ. ಮತ್ತೆ ಹುಡುಕಾಟ....”
ಇರಾನ ದೇಶದ ಅಂತರರಾಷ್ಟ್ರೀಯ ಪ್ರಖ್ಯಾತ ಸಿನಿಮಾ ನಿರ್ದೇಶಕ ಅಬ್ಬಾಸ್ ಕಿಯೋರಸ್ತಾಮಿಯ (1940-2016) ‘ಟೇಸ್ಟ್ ಆಫ್ ಚೆರಿ’(1997) ಚಲನಚಿತ್ರದ ಪ್ರಾರಂಭದಲ್ಲಿಯೇ ಬರುವ ದೃಶ್ಯ. ಅದೇ ವರ್ಷದ ಅಂತಾರಾಷ್ಟ್ರೀಯಯ ಕಾನ್ ಚಿತ್ರೋತ್ಸವದಲ್ಲಿ ಇದಕ್ಕೆ ‘ಪಾಮ್ ಡಿ.ಓರ್’ ಪ್ರಶಸ್ತಿಯನ್ನು ನೀಡಲಾಯಿತು. ಈ ಪುರಸ್ಕಾರ ಪಡೆದ ಮೊದಲ ಇರಾನಿ ಸಿನಿಮಾ ಇದಾಗಿದೆ. ‘ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್’ 2012ರಲ್ಲಿ ನಡೆಸಿದ ಸಿನಿಮಾ ವಿಮರ್ಶಕರು ಮತ್ತು ನಿರ್ದೇಶಕರ ಮತದಾನದಲ್ಲಿ ಜಗತ್ತಿನ ಹತ್ತು ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಸೇರಿದೆ ಎಂದು ನಿರ್ಣಯಿಸಲಾಯಿತು. ಈಗ ‘ಟೇಸ್ಟ್ ಆಫ್ ಚೆರಿ’ ಮಾಸ್ಟರ್‌ಪೀಸ್ ಸಿನಿಮಾ ಎಂದೇ ಪರಿಗಣಿತವಾಗಿದೆ. ಕಿಯೋರಸ್ತಾಮಿ ನಿರ್ದೇಶನದ ‘ವ್ಹೇರ್ ಈಸ್ ಮಾಯ್ ಫ್ರೆಂಡ್ಸ್ ಹೋಮ್?’(1987), ‘ಕ್ಲೋಸ್-ಅಫ್’(1990), ‘ಅಂಡ್ ಲೈಫ್ ಗೋಸ್ ಆನ್’(1992), ‘ಅಂಡರ್ ದ ಆಲಿವ್ ಟ್ರೀಸ್’(1994), ‘ದ ವಿಂಡ್ ವಿಲ್ ಕ್ಯಾರಿ ಅಸ್’(1999), ‘ಸರ್ಟಿಫೈಡ್ ಕಾಫಿ’(2010) ಮತ್ತು ‘ಲೈಕ್ ಸಮ್‌ಒನ್ ಇನ್ ಲವ್’(2012) ಬಹು ಚರ್ಚಿತ ಸಿನಿಮಾಗಳು.
‘ಟೇಸ್ಟ್ ಆಫ್ ಚೆರಿ’ ಸಿನಿಮಾದ ಕಥಾ ನಾಯಕ ಬಾದಿ (ಹೊಮಾಯೋನ್ ಇರ್‌ಶಾದಿ) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಸಾಯಲು ತನ್ನ ಗುಂಡಿಯನ್ನು ತೋಡಿಟ್ಟು ಬಂದಿರುವ ಬಾದಿಯು ಟೆಹರಾನ್ ಪಟ್ಟಣದ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳಲ್ಲಿ ಒಬ್ಬ ಸಹಾಯಕನನ್ನು ಹುಡುಕುತ್ತಿದ್ದಾನೆ. ತಾನು ಸತ್ತರೆ ಮಣ್ಣು ಮುಚ್ಚಬೇಕೆಂದು, ಅದಕ್ಕಾಗಿ ಹಣ ನೀಡುವುದಾಗಿ ಹೇಳುತ್ತಾನೆ. ಬಾದಿ ಒಬ್ಬ ಇರಾನಿ ಸೈನಿಕನಿಗೆ ಈ ಸಂಗತಿಯನ್ನು ಹೇಳಿದಾಗ ಆತ ಭಯದಿಂದ ಓಡಿ ಹೋಗುತ್ತಾನೆ. ಮತ್ತೊಬ್ಬ ಆಫ್ಘನ್ ಧರ್ಮ ಗುರುವಿನ ಸಹಾಯವನ್ನು ಯಾಚಿಸಿದಾಗ ಆತ ಆತ್ಮಹತ್ಯೆ ಮಹಾಪಾಪವೆಂದು, ಖುರಾನಿನಲ್ಲಿ ಅದಕ್ಕೆ ಸಮ್ಮತಿಯಿಲ್ಲವೆಂದು ಸಮಜಾಯಿಸಿ ನೀಡುತ್ತಾನೆ; ತಾನು ಅಂತಹದ್ದಕ್ಕೆ ಸಹಾಯ ಮಾಡಲಾರೆ ಎಂದು ನೇರವಾಗಿ ಹೇಳುತ್ತಾನೆ. ಬಾದಿಯು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ ಎಂಬುದು ಕೊನೆಗೂ ಗೊತ್ತಾಗುವುದಿಲ್ಲ. ಅಂತಿಮವಾಗಿ ಆತ ಅದರಲ್ಲಿ ಸಫಲನಾಗುತ್ತಾನೋ ಅಥವಾ ಇಲ್ಲವೋ ಎಂಬುದು ಕೂಡ ಸಿನಿಮಾದ ಕೊನೆಯಲ್ಲಿ ಅಸ್ಪಷ್ಟವಾಗಿಯೇ ಉಳಿಯುತ್ತದೆ. ಇದೇ ಕಾರಣಕ್ಕೆ ಕಿಯೋರಸ್ತಾಮಿಯ ಸಿನಿಮಾಗಳಲ್ಲೇ ಇದನ್ನು ಅತ್ಯಂತ ‘ವಿವಾದಾತ್ಮಕ ಚಿತ್ರ’ ಎಂದೇ ಹೇಳಲಾಗಿದೆ.
ಬಾದಿ ತನ್ನ ಆತ್ಮಹತ್ಯೆಗೆ ಸಹಾಯಕನನ್ನು ಹುಡುಕುತ್ತಾನೆ. ತನ್ನ ಮಗನಿಗೆ ಹುಷಾರಿಲ್ಲದ ಟರ್ಕಿಷ್ ಟ್ಯಾಕ್ಸಿ ಡೆರ್ಮಿಸ್ಟ್ನೊಬ್ಬ (ಸತ್ತ ಪ್ರಾಣಿಗಳ ದೇಹದಲ್ಲಿ ಮೆತ್ತೆಯನ್ನು ತುಂಬಿಡುವಾತ) ಹಣಕ್ಕಾಗಿ ಸಹಾಯ ಮಾಡುವುದಾಗಿ ಒಪ್ಪಿಕೊಳ್ಳುತ್ತಾನೆ. ಸಾಯುವ ಜಾಗಕ್ಕೆ ಹೋಗುವಾಗ ಇವರಿಬ್ಬರ ನಡುವೆ ಮಾಮೂಲಿ ಮಾತುಕತೆ ಶುರುವಾಗುತ್ತದೆ. ಆಗ ಟ್ಯಾಕ್ಸಿ ಡೆರ್ಮಿಸ್ಟ್ ತನ್ನ ಹಳೆಯ ಅನುಭವ ಒಂದನ್ನು ಬಾದಿಯೊಂದಿಗೆ ಹಂಚಿಕೊಳ್ಳುತ್ತಾನೆ. ಅದು ಹೀಗಿದೆ- “ಒಂದು ದಿನ ಬೆಳಿಗ್ಗೆ ಸೂರ್ಯೋದಯದ ಮೊದಲೇ ಒಂದು ಹಗ್ಗವನ್ನು ನನ್ನ ಕಾರ್‌ನಲ್ಲಿ ಇಟ್ಟೆ. ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನನ್ನ ಮನಸ್ಸಿನಲ್ಲೆ ನಿರ್ಧರಿಸಿದ್ದೆ. ಮಲ್‌ಬೆರಿ ಮರಗಳ ತೋಟವನ್ನು ತಲುಪಿದೆ. ಅಲ್ಲಿ ನನ್ನ ಕಾರನ್ನು ನಿಲ್ಲಿಸಿದೆ. ಆಗಿನ್ನೂ ಕತ್ತಲಿತ್ತು. ಹಗ್ಗವನ್ನು ಮರದ ಮೇಲೆ ಬೀಸಿದೆ. ಅದು ಅಟಕಾಸಿಕೊಳ್ಳಲಿಲ್ಲ. ಒಂದೆರಡು ಬಾರಿ ಬೀಸಿದರೂ ಹಗ್ಗ ಮರಕ್ಕೆ ಸಿಕ್ಕಿಕೊಳ್ಳಲಿಲ್ಲ. ಆದ್ಧರಿಂದ ನಾನೇ ಮರವನ್ನು ಹತ್ತಿ ಹಗ್ಗವನ್ನು ಬಿಗಿಯಾಗಿ ಕಟ್ಟಿದೆ. ಆಗ ನನ್ನ ಕೈಗೆ ಮೃದುವಾದದ್ದೆನೋ ತಾಗಿತು. ಮಲ್‌ಬೆರಿ ಹಣ್ಣುಗಳು. ನಾನು ಒಂದನ್ನು ತಿಂದೆ. ತುಂಬ ರುಚಿಕರ ಹಣ್ಣುಗಳು. ಮತ್ತೊಂದನ್ನು ಬಾಯಿಗೆ ಹಾಕಿದೆ. ಆಗಷ್ಟೆ ಸೂರ್ಯ ಪರ್ವತದ ನೆತ್ತಿಯ ಮೇಲೆ ಉದಯಿಸುತ್ತಿರುವುದು ಕಂಡಿತು. ಎಂತಹ ಸೂರ್ಯ, ಎಂತಹ ದೃಶ್ಯ, ಎಂತಹ ಹಚ್ಚ ಹಸಿರು! ಇದ್ದಕ್ಕಿದ್ದಂತೆಯೇ ಶಾಲೆಗೆ ಹೋಗುತ್ತಿರುವ ಮಕ್ಕಳ ದನಿ ಕೇಳಿಸಿತು. ನನ್ನತ್ತ ನೋಡಿ ನಿಂತರು. ಅವರು ಮರವನ್ನು ಅಲುಗಾಡಿಸುವಂತೆ ನನ್ನ ಕೇಳಿದರು. ಕೆಳಗೆ ಬಿದ್ದ ಮಲ್‌ಬೆರಿ ಹಣ್ಣುಗಳನ್ನು ಅವರು ತಿಂದರು. ನನಗೂ ಸಂತೋಷವಾಯಿತು. ಮನೆಗೊಯ್ಯಲು ಒಂದಷ್ಟು ಹಣ್ಣುಗಳನ್ನು ನಾನೂ ಕಿತ್ತುಕೊಂಡೆ. ನನ್ನ ಹೆಂಡತಿ ಇನ್ನೂ ನಿದ್ದೆಯಲ್ಲಿದ್ದಳು. ಅವಳು ಎದ್ದಾಗ ಮಲ್‌ಬೆರಿ ಹಣ್ಣುಗಳನ್ನು ತಿಂದಳು. ಆಕೆಗೆ ತುಂಬ ಸಂತೋಷವೂ ಆಯ್ತು. ಮಲ್‌ಬೆರಿ ಹಣ್ಣುಗಳಿಂದ ವಾಪಸ್ಸಾದ ನಾನು ಆತ್ಮಹತ್ಯೆಯಿಂದ ದೂರವಾದೆ.”
ಈ ಅನುಭವ ಕಥನವನ್ನು ಆಲಿಸಿದ ಬಾದಿಯಲ್ಲಿ ಯಾವ ಬಗೆಯ ಪರಿವರ್ತನೆಯನ್ನು ತಂದಿತು ಎಂಬ ಪ್ರಶ್ನೆ ಸಿನಿಮಾ ನೋಡುಗರ ತಲೆಯನ್ನು ಕೊರೆಯುತ್ತದೆ. ಬಾದಿ ಆ ರಾತ್ರಿ ಹೊತ್ತಿನಲ್ಲಿ ತಾನು ತೋಡಿದ ಗುಂಡಿಯಲ್ಲಿ ಮಲಗಿದಾಗ ಆಕಾಶದಲ್ಲಿ ಹೊಳೆಯುವ ತಾರೆಗಳನ್ನು ಕಾಣುತ್ತಾನೆ; ಬೆಳದಿಂಗಳನ್ನು ಸೂಸುವ ಚಂದಿರನನ್ನು ನೋಡುತ್ತಾನೆ. ಬೆಳಿಗ್ಗೆ ಉದಯಿಸುತ್ತಿರುವ ಸೂರ್ಯನ ಕಡೆಗೂ ದೃಷ್ಟಿ ನೆಡುತ್ತಾನೆ. ಇದನ್ನೆಲ್ಲ ಕಂಡಾಗ ಆತ ಆತ್ಮಹತ್ಯೆಯ ವಿಚಾರದಿಂದ ಹೊರಬಂದನೆ? ಎಂಬ ಪ್ರಶ್ನೆ ಮಾತ್ರ ಹಾಗೆ ಉಳಿಯುತ್ತದೆ. ಮಲ್‌ಬೆರಿ ಹಣ್ಣುಗಳ ರುಚಿಯನ್ನು ಕಂಡ ಟ್ಯಾಕ್ಸಿ ಡೆರ್ಮಿಸ್ಟ್ ಆತ್ಮಹತ್ಯೆಯ ವಿಚಾರದಿಂದ ಮುಕ್ತನಾಗಿದ್ದು, ಆತನ ಬದುಕುವ ಆಶಾಭಾವನೆಯನ್ನು ಸಾರುತ್ತದೆ. ದುಃಖ ನೋವು ಸಂಕಟಗಳಿಂದ ಕೂಡಿದ ಜೀವನದಲ್ಲೂ ಒಂದು ಸ್ವಾದವಿದೆ ಎಂಬುದನ್ನು ಟ್ಯಾಕ್ಸಿ ಡೆರ್ಮಿಸ್ಟ್ ತನ್ನ ಸ್ವ ಅರಿವಿನಿಂದ ಮನಗಂಡವನು. ಒಬ್ಬರಿಗಾದ ಅನುಭವ ಮತ್ತೊಬ್ಬರಿಗೆ ಯಾವ ರೀತಿಯಲ್ಲಿ ದಾರಿ ದೀಪವಾಗುತ್ತದೆ ಎಂದು ಖಚಿತವಾಗಿ ಹೇಳಲಾಗದು. ಎಲ್ಲ ಅನುಭವಗಳು ವ್ಯಕ್ತಿನಿಷ್ಠವಾಗಿರುತ್ತವೆ; ಅವುಗಳಿಗೆ ಅವರದೇ ಆದ ವೈಯಕ್ತಿಕ ಮಿತಿಗಳು ಸಹ ಇರುತ್ತವೆ. ಕಿಯೋರಸ್ತಾಮಿಯ ‘ಟೇಸ್ಟ್ ಆಫ್ ಚೆರಿ’ ಸಿನಿಮಾದ ಮುಖಾಂತರ ಮನುಷ್ಯನ ಒಂಟಿತನ, ಹತಾಶೆ, ದ್ವಂದ್ವ ಮನಸ್ಥಿತಿಗಳನ್ನು ಹೇಳುತ್ತಿರುವಂತೆ ತೋರುತ್ತದೆ. ಮನುಷ್ಯ ನಿಸರ್ಗದೊಂದಿಗೆ ಒಂದಾಗಿ ಬದುಕಿದ್ದಾಗ ಆತ್ಮಹತ್ಯೆಯಂತಹ ಪ್ರಶ್ನೆಯು ಯಾವತ್ತೂ ಕಾಡಿರಲಿಲ್ಲ ಅನಿಸುತ್ತದೆ. ಬಾದಿಯ ಕಾರು ಸುತ್ತಾಡಿದಲ್ಲೆಲ್ಲ ಧೂಳು, ಗಣಿಗಾರಿಕೆ, ಯಂತ್ರಗಳಿಂದ ಭೂಮಿಯ ಅಗೆತಗಳು ಕಣ್ಣಿಗೆ ರಾಚುತ್ತವೆ. ಮನುಷ್ಯ ನಿಸರ್ಗವನ್ನು ತನ್ನ ಸ್ವಾರ್ಥಕ್ಕಾಗಿ ಬಳಸುತ್ತ ತನ್ನ ವಿನಾಶದ ಗುಂಡಿಯನ್ನು ತಾನೇ ತೋಡಿಕೊಂಡಿರುವುದನ್ನು ಸಿನಿಮಾ ಸೂಕ್ಷ್ಮವಾಗಿ ತೆರೆದಿಡುತ್ತದೆ.
ಸತ್ಯಜೀತ ರೇ ಅವರು ತೀರಿಕೊಂಡಾಗ ಅಕಿರ ಕುರೊಸಾವಾ ಹೀಗೆ ಹೇಳಿದ್ದನಂತೆ- “ಅವರ ಬಗೆಗಿನ ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲಾಗದು... ಅವರು ತೀರಿಕೊಂಡಾಗ ನಾನು ಮಾನಸಿಕವಾಗಿ ತುಂಬ ಖಿನ್ನನಾಗಿದ್ದೆ. ಆದರೆ ಕಿಯೋರಸ್ತಾಮಿಯ ಚಿತ್ರಗಳನ್ನು ನೋಡಿದ ಮೇಲೆ ಸತ್ಯಜೀತ ರೇ ಅವರ ಸ್ಥಾನವನ್ನು ಸರಿಯಾದ ವ್ಯಕ್ತಿಯೊಬ್ಬ ತುಂಬಿದನೆಂದು ತಿಳಿದು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.” ಸತ್ಯಜೀತ ರೇ ಅವರ ಸಿನಿಮಾಗಳಂತೆ ಕಿಯೋರಸ್ತಾಮಿ ಅವರ ಸಿನಿಮಾಗಳು ಬಹುತೇಕವಾಗಿ ಹಳ್ಳಿಗಳನ್ನು ಮತ್ತು ಅಲ್ಲಿಯ ಜನಸಾಮಾನ್ಯರ ಬದುಕಿನ ಕಷ್ಟ ಕೋಟಲೆಗಳಿಗೆ ಕಲಾತ್ಮಕ ರೂಪವನ್ನು ನೀಡಿವೆ. ಕಿಯೋರಸ್ತಾಮಿ ಅವರ ಸಿನಿಮಾಗಳನ್ನು ನೋಡುವಾಗ ಸತ್ಯಜೀತ ರೇ ಮಾತ್ರವಲ್ಲ ಇಟಲಿಯ ‘ನಿಯೋ-ರಿಯಲಿಸ್ಟಿಕ್’ ನಿರ್ದೇಶಕನೆಂದೇ ಹೆಸರಾಗಿರುವ ವಿಟ್ಟೋರಿಯೊ ಡೇ ಸಿಕಾ ಅವರ ಚಿತ್ರಗಳನ್ನು ಸಹ ನೆನಪಿಗೆ ತರುತ್ತವೆ.
ಅಬ್ಬಾಸ್ ಕಿಯೋರಸ್ತಾಮಿಯು ಪೇಂಟಿಂಗ್ ಮತ್ತು ಗ್ರಾಫಿಕ್ ಡಿಸೈನ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದ. ಮೂಲತಃ ಕವಿ ಮನಸ್ಸುಳ್ಳ ಆತ ಫೋಟೋಗ್ರಾಫಿಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದ. ಕಿಯೋರಸ್ತಾಮಿ ‘ದ ಗಾರ್ಡಿಯನ್’ ಪತ್ರಿಕೆಯ ಸಂದರ್ಶನ ಒಂದರಲ್ಲಿ ಹೀಗೆ ಹೇಳಿದ್ದ-“ಮೊದ ಮೊದಲು ಶಬ್ದ ಬಂತೆಂದು ಹೇಳಲಾಗುತ್ತದೆ; ಆದರೆ ನನಗೆ ಮೊದಲಿನಿಂದ ಮಾತ್ರವಲ್ಲ ಯಾವಾಗಲೂ ಇಮೇಜ್‌ಗಳೇ ಕಾಣಿಸುತ್ತವೆ. ನಾನೊಂದು ಸಂವಾದದ ಬಗ್ಗೆ ಆಲೋಚಿಸಿದರೆ ಅದು ಯಾವಾಗಲೂ ಇಮೇಜ್‌ಗಳಿಂದಲೇ ಆರಂಭವಾಗುತ್ತದೆ. ನಾನು ಯಾವ ಫೋಟೋಗ್ರಾಫಿಯನ್ನು ಇಷ್ಟಪಡುತ್ತೇನೋ ಅದೊಂದು ಕ್ಷಣದ ಶಾಸನವಾಗಿರುತ್ತದೆ; ಅದು ಸಂಪೂರ್ಣವಾಗಿ ಕ್ಷಣ ಭಂಗುರವಾಗಿರುತ್ತದೆ. ನೀವು ಚಿತ್ರವನ್ನು ಸೆರೆ ಹಿಡಿಯುತ್ತೀರಿ ಮತ್ತು ಒಂದು ಸೆಕೆಂಡ್ ನಂತರದಲ್ಲಿ ಎಲ್ಲವೂ ಬದಲಾಗಿರುತ್ತದೆ.” ಈ ಮಾತುಗಳು ಸಿನಿಮಾಗೂ ಅನ್ವಯಿಸುತ್ತವೆ.
ಕಿಯೋರಸ್ತಾಮಿಯ ಸಿನಿಮಾಗಳಲ್ಲಿ ಸೂಫಿ ಕಾವ್ಯದ ಸಾಲುಗಳು ಪಾತ್ರಗಳ ಸಂಭಾಷಣೆಯಲ್ಲಿ ಬರುತ್ತವೆ. ಆತನ ಯಾವ ಸಿನಿಮಾ ನೋಡಿದರು ಅದು ಕಿಯೋರಸ್ತಾಮಿಯ ಚಿತ್ರವೆಂದು ಗುರುತಿಸುವ ಮಟ್ಟಿಗೆ ತನ್ನ ಛಾಪನ್ನು ಮೂಡಿಸಿದ್ದಾನೆ. ಕಿಯೋರಸ್ತಾಮಿ ಲಾಂಗ್ ಶಾಟ್‌ಗಳಿಗೆ ಪ್ರಸಿದ್ಧನಾಗಿದ್ದಾನೆ. ‘ಟೇಸ್ಟ್ ಆಫ್ ಚೆರಿ’ಯಲ್ಲಿ ಬೆಟ್ಟ ಗುಡ್ಡಗಳ ಭೌಗೋಳಿಕ ಪ್ರದೇಶವನ್ನು ಸೆರೆ ಹಿಡಿದಿರುವ ರೀತಿಯಂತೂ ವಿಶಿಷ್ಟವಾಗಿದೆ. ಟ್ಯಾಕ್ಸಿ ಚಾಲಕನ ವೈಯಕ್ತಿಕತೆಯ ಮೂಲಕ ಆರಂಭವಾಗುವ ಚಿತ್ರವು ಆ ಪ್ರದೇಶದ ಸಾಮೂಹಿಕ ಕಥನವನ್ನು ಬಿಚ್ಚಿಡುತ್ತದೆ. ಕೈರೋಸ್ತಮಿಯು ಚಿತ್ರ ಕತೆಯನ್ನು ಪ್ರೇಕ್ಷಕರ ಕಣ್ಣ ಮುಂದೆಯೇ ಕಟ್ಟುತ್ತಿರುವಂತೆ ಭಾಸವಾಗುತ್ತದೆ. ಕಿಯೋರಸ್ತಾಮಿ ಮೊದಲು ಪಾತ್ರದ ಧ್ವನಿಯನ್ನು ಕೇಳಿಸುತ್ತಾನೆ. ಸಾಮಾನ್ಯವಾಗಿ ಸಿನಿಮಾವನ್ನು ‘ನೋಡು’ವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಕಿಯೋರಸ್ತಾಮಿ ಈ ಸಂಪ್ರದಾಯವನ್ನು ಮುರಿದು ಕೇಳಿಸಿಕೊಳ್ಳುವುದು ಕೂಡ ತುಂಬ ಪ್ರಧಾನವಾದದ್ದು ಎಂಬುದನ್ನು ತನ್ನ ಚಿತ್ರಗಳಲ್ಲಿ ಕಟ್ಟಿಕೊಟ್ಟಿದ್ದಾನೆ.
ಕಿಯೋರಸ್ತಾಮಿ ಸಿನಿಮಾಗಳನ್ನು ಮಾಡಲು ತನ್ನದೇ ವಿಶಿಷ್ಟ ಶೈಲಿಯನ್ನು ಹಾಗೂ ಹೊಸ ತಂತ್ರಗಳನ್ನು ರೂಪಿಸಿಕೊಂಡವನು. ಆತ ಯಾವತ್ತು ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡಿದವನಲ್ಲ. ಆತ ಪ್ರೇಕ್ಷಕರನ್ನು ಕಳೆದುಕೊಳ್ಳುತ್ತೇನೆಂದು ಯಾವತ್ತು ಚಿಂತೆಯನ್ನೂ ಮಾಡಿದವನಲ್ಲ. ಆದ್ಧರಿಂದ ಯಾವ ಬಗೆಯಲ್ಲಿ ಹಾಗೂ ಏನನ್ನು ಹೇಳಬೇಕೆಂಬುದನ್ನು ಸಿನಿಮಾ ಪರಿಭಾಷೆಯಲ್ಲಿ ಆತನಿಗೆ ಹೇಳಲು ಸಾಧ್ಯವಾಗಿದೆ. ಚಲಿಸುತ್ತಿರುವ ಕಾರು ಹಾಗೂ ಅದರೊಳಗೆ ನಡೆಯುವ ಸಂವಾದ ಬಹುತೇಕ ಚಿತ್ರಗಳಲ್ಲಿ ಬರುವ ದೃಶ್ಯವಾಗಿದೆ. ‘ಟೇಸ್ಟ್ ಆಫ್ ಚೆರಿ’ಯಲ್ಲಂತು ಬಿಡಿ ಬಿಡಿಯಾಗಿ ಕಾಣುವ ಘಟನೆಗಳಿಗೆ ಕಾರ್ ಚಲನೆಯೇ ಇಡೀ ಕತೆಗೊಂದು ಐಕ್ಯತೆಯನ್ನು ಕೊಟ್ಟಿದೆ. ಮೊದಲ ಸಲ ನೋಡುವವರಿಗೆ ಸಿನಿಮಾದ ಗತಿ ಕೊಂಚ ನಿಧಾನ ಅನ್ನಿಸಿ ಬೋರ್ ಹೊಡೆಸಬಹುದು. ಆದರೆ ಅದರ ಆಳಕ್ಕೆ ಇಳಿದಂತೆ ಈ ಸಿನಿಮಾದ ಹೊಸತನ, ಕಥನ ಕ್ರಮ, ನಿರೂಪಣೆಯ ರೀತಿ ಎಲ್ಲವೂ ಅನುಭವಕ್ಕೆ ಬರುತ್ತದೆ. ಮತ್ತೊಮ್ಮೆ ಅದನ್ನು ನೋಡಬೇಕು ಅನ್ನಿಸಿದರೆ ಖಂಡಿತವಾಗಿಯೂ ಅದು ಒಳ್ಳೆಯ ಸಿನಿಮಾ ಎಂದೇ ತಿಳಿಯಬೇಕು. ‘ಟೇಸ್ಟ್ ಆಫ್ ಚೆರಿ’ಯಂತು ಮತ್ತೆ ಮತ್ತೆ ನೋಡುವ, ಕೇಳಿಸಿಕೊಳ್ಳುವ, ಓದುವ ಸಿನಿಮಾ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
*

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...