ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ


'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು ನೀಡಿದ್ದಾರೆ. ಬನ್ನಿರಿ ಶರಣರೆ ಒಂದೆಡೆ ಸೇರಿ ಕರ್ತನ ಸ್ತುತಿಸೋಣ ಮಾನವ ಸಹಜತೆ ಮಾಡಿದ ಪಾಪಗಳಿಗೆ ಕ್ಷಮೆಯನ್ನು ಬೇಡೋಣ, ಈ ಮೂಲಕ ನಮ್ಮಿಂದಾದ ತಪ್ಪುಗಳನ್ನು ಒಪ್ಪಿಕೊಂಡು ಸೃಷ್ಟಿಕರ್ತನಲ್ಲಿ ಕ್ಷಮೆ ಕೇಳಿ ಹಸನಾದ ಬದುಕು ಬಾಳೋಣ ಎಂದು ಹಂಬಲಿಸಿದ್ದಾರೆ," ಎನ್ನುತ್ತಾರೆ ಡಿ.ಶಬ್ರಿನಾ ಮಹಮದ್ ಅಲಿ. ಅವರು ಟಿ. ತಿಪ್ಪೇರುದ್ರಪ್ಪ ಅವರ 'ಅಕ್ಷರ ತೀರ್ಥ' ಕೃತಿ ಕುರಿತು ಬರೆದ ವಿಮರ್ಶೆ.

ಕೆರೆ ಹಳ್ಳ ಬಾವಿಗಳು ಮೈ ತೆಗೆದರೆ
ಗುಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು
ವಾರಧಿ ಮೈ ತೆಗೆದರೆ ಮುತ್ತು ರತ್ನಗಳ ಕಾಣಬಹುದು
ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ
ಲಿಂಗವ ಕಾಣಬಹುದು

ಜಗಜ್ಯೋತಿ ಬಸವಣ್ಣನವರು ಈ ವಚನದಲ್ಲಿ ನಾವು ಕೆರೆ ಹಳ್ಳಬಾವಿಗಳಲ್ಲಿ ಏನನ್ನಾದರೂ ಹುಡುಕಲು ಹೋದರೆ(ಸ್ನೇಹ ಮಾಡಿದರೆ) ಗುಳ್ಳೆ ಗೊರಚಿ ಚಿಪ್ಪುಗಳು ಮಾತ್ರ ಸಿಗುತ್ತವೆ ಹಾಗೆ ಮುಂದುವರೆದು ಸಮುದ್ರಕ್ಕೆ ಹೋದರೆ ಮುತ್ತು ರತ್ನಗಳು ಸಿಗುತ್ತವೆ ಅದರಂತೆಯೇ ನಾವು ಕೂಡಲಸಂಗನ ಶರಣರ ಬಳಿ ಹೋಗಿ ಮಾತನಾಡಿದರೆ ನಮಗೆ ಲಿಂಗದ ದರ್ಶನವೇ ಆಗುತ್ತದೆ ಎಂದು ಹೇಳುವ ಮೂಲಕ ಶರಣರ ಒಡನಾಟ ಎಷ್ಟು ಶ್ರೇಷ್ಠತೆಯಿಂದ ಕೂಡಿದೆ ಎಂಬುದನ್ನು ಅತ್ಯಂತ ಸರಳವಾಗಿ ಕಟ್ಟಿಕೊಟ್ಟಿದ್ದಾರೆ.

ಇಂದು ನಮಗೆ ಶರಣರ ಒಡನಾಟ ದೈಹಿಕವಾಗಿ ಸಿಗದೇ ಇರಬಹುದು! ಆದರೆ ಅವರ ವಚನಗಳನ್ನು ಓದುವುದರ ಮೂಲಕ, ಅರ್ಥೈಸಿಕೊಳ್ಳುವುದರ ಮೂಲಕ, ಅವುಗಳನ್ನು ನಮ್ಮ ಜೀವನಕ್ಕೆ ಅನ್ವಯಿಸಿಕೊಳ್ಳುವುದರ ಮೂಲಕ ಅವರ ಒಡನಾಟವನ್ನು ಮಾನಸಿಕವಾಗಿ ಅನುಭವಿಸಬಹುದು ಎಂಬುದು ನನ್ನ ಬಲವಾದ ನಂಬಿಕೆ! ಇದೇ ಭಾವದಲ್ಲಿ ಶರಣರ ಒಡನಾಟವನ್ನು ಮಾನಸಿಕವಾಗಿ ಅನುಭವಿಸುತ್ತಾ, ಆನಂದಿಸುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿರುವ ನಮ್ಮ ಚಳ್ಳಕೆರೆಯ ಹಿರಿಯರಾದ ಶರಣ ಶ್ರೀ ತಿಪ್ಪೇರುದ್ರಪ್ಪರವರು ವೃತ್ತಿಯಲ್ಲಿ ಕೃಷಿಕರಾಗಿ ಭೂಮಿತಾಯಿಯ ಸೇವೆ ಮಾಡಿ ನಿವೃತ್ತರಾಗಿದ್ದಾರೆ. ಈಗ ಪ್ರವೃತ್ತಿಯಾಗಿ ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತಮ್ಮ ಜೀವಮಾನದ ಅನುಭವಗಳಿಗೆ ಅಕ್ಷರರೂಪ ನೀಡಿ 'ಅಕ್ಷರ ತೀರ್ಥ' ಎಂಬ ಶೀರ್ಷಿಕೆಯ ಕವನ ಸಂಕಲನವನ್ನು ಹೊರತಂದಿದ್ದಾರೆ.

ಈ ಕವನ ಸಂಕಲನದ ವಿಶೇಷತೆ ಏನೆಂದರೆ ಕವಿ ಶರಣ ತಿಪ್ಪೇರುದ್ರಪ್ಪನವರು ಈ ಕವನ ಸಂಕಲನವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ! ಮೊದಲನೇ ಭಾಗ ತಾವು ದೇವರೆಂದು ಪೂಜಿಸುತ್ತಿರುವ ಅಣ್ಣ 'ಬಸವಣ್ಣನ'ವರ ಕುರಿತಾಗಿವೆ. ಎರಡನೇ ಭಾಗದಲ್ಲಿ ದಾರ್ಶನಿಕರ ಕುರಿತು,ತಮ್ಮ ವೃತ್ತಿ ಕೃಷಿ ಜೀವನ ಕುರಿತು, ದೇಶಾಭಿಮಾನ ಕುರಿತು, ರೈತರ ಸಂಕಷ್ಟಗಳು ಬೇಡಿಕೆಗಳ ಕುರಿತು ಹೀಗೆ ವಿವಿಧ ರೀತಿಯ ವಿಷಯಗಳನ್ನು ಒಳಗೊಂಡ ಕವನಗಳನ್ನು ರಚಿಸಿದ್ದಾರೆ.

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು ನೀಡಿದ್ದಾರೆ. ಬನ್ನಿರಿ ಶರಣರೆ ಒಂದೆಡೆ ಸೇರಿ ಕರ್ತನ ಸ್ತುತಿಸೋಣ ಮಾನವ ಸಹಜತೆ ಮಾಡಿದ ಪಾಪಗಳಿಗೆ ಕ್ಷಮೆಯನ್ನು ಬೇಡೋಣ, ಈ ಮೂಲಕ ನಮ್ಮಿಂದಾದ ತಪ್ಪುಗಳನ್ನು ಒಪ್ಪಿಕೊಂಡು ಸೃಷ್ಟಿಕರ್ತನಲ್ಲಿ ಕ್ಷಮೆ ಕೇಳಿ ಹಸನಾದ ಬದುಕು ಬಾಳೋಣ ಎಂದು ಹಂಬಲಿಸಿದ್ದಾರೆ.
ಈ ಕವಿತೆಯಲ್ಲಿ ಮುಂದುವರೆದು

ಸ್ವಾರ್ಥವ ಮರೆತು ಸಾತ್ವಿಕರಾಗಿ
ಪರಹಿತ ಚಿಂತನೆ ಮಾಡೋಣ;
ನೀತಿ ನೇಮದಲಿ ಪ್ರೀತಿ ಸ್ನೇಹದಲಿ
ದೇವರ ಇರುವನು ಕಾಣೋಣ!

ಎನ್ನುವ ಸಾಲುಗಳು ಕವಿಯ ಆಂತರ್ಯದ ತುಡಿತವನ್ನು ಪ್ರತಿಬಿಂಬಿಸುತ್ತಿವೆ. ಅಷ್ಟೇಯಲ್ಲದೆ ಈ ಕವಿತೆ ಜಿ.ಎಸ್ ಶಿವರುದ್ರಪ್ಪನವರ 'ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆ ನಮ್ಮೊಳಗೆ' ಎನ್ನುವ ಈ ಕವನವನ್ನು ನೆನಪಿಸುತ್ತದೆ. ಜಿ.ಎಸ್ ಎಸ್ ಅವರ ಆಶಯದಂತೆ ಕವಿ ತಿಪ್ಪೇರುದ್ರಪ್ಪನವರು ತಮ್ಮ ಕವಿತೆಯಲ್ಲಿ ಪ್ರೀತಿ ಸ್ನೇಹದಲ್ಲಿ ದೇವರನ್ನು ಕಾಣೋಣಾ ಎಂದಿರುವುದು ಅವರ ಅನುಭವದ ಪ್ರತೀಕವಾಗಿ ನಮ್ಮೆದಿರು ನಿಲ್ಲುತ್ತದೆ.

ಈ ಸಂಕಲನದ ಮತ್ತೊಂದು ವಿಭಿನ್ನ ಕವಿತೆ 'ಬಾ ಬಸವ ಮತ್ತೊಮ್ಮೆ ಹುಟ್ಟಿ ಬಾ'. ಕವಿತೆಯ ಶೀರ್ಷಿಕೆಯೇ ಕವಿಯ ಆಶಯ ಏನಿರಬಹುದೆಂದು ತಿಳಿಸುತ್ತದೆ. ವಿಶ್ವಗುರು ಬಸವಣ್ಣನವರು ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂಬುದನ್ನ ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಬಸವಣ್ಣನವರ ಇರುವಿಕೆ ಇಂದಿನ ಸಮಾಜಕ್ಕೆ ಅತೀ ಅವಶ್ಯಕವಾಗಿ ಬೇಕಾಗಿದೆ. ಕಾರಣ ೧೨ ನೇ ಶತಮಾನದಲ್ಲಿ ಬಸವಣ್ಣನವರು ಬಯಸಿದ್ದು,ಪ್ರೆರೇಪಿಸಿದ್ದು, ಎಚ್ಚರಿಸಿದ್ದು, ಒಗ್ಗೂಡಿಸಿದ್ದು ಲಿಂಗಸಮಾನತೆಗಾಗಿ,ಧರ್ಮ,ಜಾತಿ ಸಮಾನತೆಗಾಗಿ! ಅದಕಾಗಿ ಅವರು ಸರ್ವ ಧರ್ಮದ ಸಮನ್ವಯದ ಸಾಕಾರ ಮೂರ್ತಿಯಾಗಿ ನಿಂತು ಅನುಭವ ಮಂಟಪವನ್ನೆ ಸ್ಥಾಪಿಸಿ 'ಸಮಸಮಾಜ'ದ ಪರಿಕಲ್ಪನೆ ಮೂಡಿಸಿದರು! ಶರಣಶ್ರೇಷ್ಠ ಬಸವಣ್ಣನವರು ಬಯಸಿದಂತೆ 'ಸಮ ಸಮಾಜ' ಇಂದು ಇದಿಯಾ ಎಂದು ಯೋಚಿಸದಾಗ,ಕೆಲ ಸ್ವಾರ್ಥ ಮನುಜರು ಜಾತಿ ಧರ್ಮಗಳ ನಡುವೆ ಸಂಘರ್ಷ ಉಂಟುಮಾಡಿ ಸಮ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ವಾಸ್ತವದ 'ಅಸಮಾನತೆಯ ಸಮಾಜ' ಕಣ್ಣೆದಿರು ನಿಂತು ಗಹಗಹಿಸಿ ನಗುತ್ತದೆ! ಇದರ ಸರಿಪಡಿಸುವಿಕಾಗಿ ಬಸವಣ್ಣನವರು ಮತ್ತೆ ಹುಟ್ಟಿಬರಬೇಕೆಂದು ಕವಿ ತಿಪ್ಪೇರುದ್ರಪ್ಪನವರು ತಮ್ಮ 'ಬಾ ಬಸವ ಮತ್ತೊಮ್ಮೆ ಹುಟ್ಟಿ ಬಾ' ಎಂದು ಹೇಳುವ ಮೂಲಕ ಪ್ರೀತಿಯ ಆಮಂತ್ರಣವನ್ನ ನೀಡಿ ಈ ಸಮಾಜದ ಕುರಿತು ಅವರಿಗಿರುವ ನೋವು ಹತಾಶೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಕವನಸಂಕಲನದ ಭಾಗ ಎರಡರಲ್ಲಿ ದಾರ್ಶನಿಕರಾದ ಸರ್ವಜ್ಞ, ಬುದ್ಧ, ಸಿದ್ಧಗಂಗಾದ ಶ್ರೀ ಶಿವಕುಮಾರ ಸ್ವಾಮೀಜಿಯವರ ಕುರಿತು ಬರೆದ ಕವನಗಳು ತುಂಬಾ ಸೊಗಸಾಗಿದ್ದು ಕವಿಯ ಮೇಲೆ ಅವರಿಂದಾದ ಪ್ರಭಾವವನ್ನ ಸಾರುತ್ತಿವೆ.

ಸರ್ವಜ್ಞ

ಮೌಢ್ಯವನೇ ಬಿತ್ತಿ
ಮೌಡ್ಡವನೇ ಬೆಳೆದು
ಮೌಢ್ಯವೇ ಬದುಕಾದ
ಶತಮಾನಗಳ ಹಿಂದೆಯೇ
ಮುಂಬೆಳಕು ಕಂಡವನೇ!

ಕವಿ ಈ ಕವಿತೆಯಲ್ಲಿ ಸರ್ವಜ್ಞನ ಕಾಲದ ಆಗುಹೋಗುಗಳನ್ನು ನೆನಪಿಸುತ್ತಾ ಸರ್ವಜ್ಞನ ಆಲೋಚನೆಗಳಿಂದ ಸೃಷ್ಠಿಯಾದ ಜ್ಞಾನದನಿಧಿಯಂತಿರುವ ತ್ರಿಪದಿಗಳನ್ನು ಆಡಿಹೊಗಳಿದ್ದಾರೆ. ಮುಂದುವರೆದು ಸರ್ವಜ್ಞ ಲೋಕ ಸಂಚಾರಿಯಾಗಿ ವಿಶ್ವಕ್ಕೆ ಮಹೋಪಕಾರಿಯಾಗಿರುವೆ ಎಂದು ಹೇಳಿ ನುಡಿನಮನ ಸಲ್ಲಿಸಿದ್ದಾರೆ.

ಬುದ್ಧ ಪೂರ್ಣಿಮಾ

ಸಂಧ್ಯಾರಾಣಿ ಓಕುಳಿ ಚೆಲ್ಲಲು
ಮುಗೀತು ಮೆರವಣಿಗೆ
ಲೋಕವ ಬೆಳಗಿದ ಸೂರ್ಯನು ರೋಸಿ
ತೆರಳಿದ ತೆರೆಮರೆಗೆ
ಪ್ರಾಣಿ ಪಕ್ಷಿಗಳು ಗೂಡಿಗೆ ಮರಳಿ
ಬೆಚ್ಚಗೆ ಮೌನವ ತಾಳಿರಲು
ಬುದ್ದನು ಸಾರಿದ ಜ್ಞಾನದ ಬೆಳಕು
ಮೂಡಿತು ಚಂದ್ರನ ರೂಪದಲ್ಲಿ!

ಬುದ್ಧನ ಜನನ ಜ್ಞಾನೋದಯ ಮತ್ತು ಪರಿನಿರ್ವಾಣ ಇವು ಮೂರು ಘಟಿಸಿರುವುದು ವೈಶಾಖ ಹುಣ್ಣಿಮೆಯಂದು! ಎಂದು ತಿಳಿಸುತ್ತಾ ಬುದ್ಧ ಪೂರ್ಣಿಮೆಯನ್ನು ಬಣ್ಣಿಸಿದ್ದಾರೆ. ಮುಂದುವರೆದು ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು 'ಸಿದ್ಧಗಂಗೆಯ ಶ್ರೀಗುರು ಕವಿತೆಯಲ್ಲಿ 'ಮಹಾಗುರುವು ನೀವು ಬಾನೆತ್ತರ ನಿಮ್ಮ ನಿಲುವು' ಎಂದು ಹೇಳುತ್ತಾ ಗುರುಗಳ ತ್ರಿವಿಧದಾಸೋಹವನ್ನು ಸ್ಮರಿಸಿದ್ದಾರೆ.

ದಾರ್ಶನಿಕರನ್ನು ಕುರಿತ ಕವಿತೆಗಳು ಈ ಮೇಲಿನಂತಾದರೆ, ಕವಿ ತಾನೊಬ್ಬ ತಂದೆಯಾಗಿ ತಾನು ಅನುಭವಿಸಿದ ಸಂಭ್ರಮವನ್ನು 'ನನ್ನ ಕಂದ' ಕವಿತೆಯಲ್ಲಿ ಹೀಗೆ ಕಟ್ಟಿಕೊಟ್ಟಿದ್ದಾರೆ.

ನಿನ್ನ ತುಟಿ ಅಂಚಿನಲ್ಲಿ
ನಗೆಯು ಮಿಂಚಿತ್ತು
ಹೆತ್ತ ಹೃದಯ ಹರುಷದಿಂದ
ಬೀಗಿ ಹೋಯಿತು
ಮಮತೆಯಿಂದ ನಿನ್ನನಪ್ಪಿ ಮುತ್ತನಿಟ್ಟಿತು
ನೀನು ಅಳಲು ಲಾಲಿ ಹಾಡಿ
ನಾನು ದಣಿಯುವೆ
ಆ ದಣಿವಿನಲ್ಲಿ ಒಂದು ಬಗೆಯ
ಸುಖವ ಕಾಣುವೆ.

ಈ ಕವಿತೆ ಕುವೆಂಪು ಅವರ 'ನಮ್ಮ ಮನೆಯಲೊಂದು ಸಣ್ಣ ಪಾಪು ಇರುವುದು ಎತ್ತಿಕೊಳಲು ಹೋದರದಕೆ ಕೋಪ ಬರುವುದು' ಕವಿತೆಯನ್ನ ನೆನಪಿಸುತ್ತದೆ. ಇದುವರೆಗೂ ಕವಿ ತಿಪ್ಪೇರುದ್ರಪ್ಪನವರು ಭಕ್ತರಾಗಿ, ರೈತರಾಗಿ, ದೇಶಾಭಿಮಾನಿಯಾಗಿ, ತಂದೆಯಾಗಿ ಕಾಣಿಸಿಕೊಂಡವರು ಕೊಂಚ ಮುಂದೆ ಹೋಗಿ
ಅವರಲೊಬ್ಬ ನೇರ ನುಡಿಯ ಮಗುವಿದ್ದಾನೆ ಎನ್ನುವುದನ್ನ 'ಯುಗಾದಿಗೆ ತಗಾದೆ' ಕವಿತೆಯಲ್ಲಿ ಸಾಬೀತುಪಡಿಸಿದ್ದಾರೆ. ಇದುವರೆಗೂ ನಾವು 'ಯುಗಾದಿ' ಕುರಿತು ಬಂದ ಕವಿತೆಗಳಲ್ಲಿ ಯುಗಾದಿಯ ವರ್ಣನೆ,ಬಣ್ಣನೆ,ಹಬ್ಬ ಆಚರಿಸುವ ವಿಧಾನ,ಹಿರಿಯರ ತಯಾರಿ,ಮಕ್ಕಳ ಸಂಭ್ರಮ ಈ ಕುರಿತಾಗಿಯೇ ಓದಿದ್ದೇವೆ ಅಲ್ಲವೇ? ಆದರೆ ಕವಿ ತಿಪ್ಪೇರುದ್ರಪ್ಪನವರು ಯುಗಾದಿಗೆ ತಗಾದೆಯನ್ನ ತೆಗೆದಿದ್ದಾರೆ. ಈ ಕವಿತೆ ನಿಜಕ್ಕೂ ಓದುಗನಿಗೆ ನಿರೀಕ್ಷಿಸದ ಬೇರೊಂದು ಭಾವವನ್ನು ಪರಿಚಯಿಸುತ್ತದೆ.

ಯಾರು ಕರೆದರು ನಿನ್ನ ನೀನೇಕೆ ಬಂದೆ
ಹುಸಿಯ ಹಂಬಲಗಳನ್ನು ನೀನೇಕೆ ತಂದೆ

ಎಂದು 'ಯುಗಾದಿ ಹಬ್ಬ'ಕ್ಕೆ ಪ್ರಶ್ನಿಸುತ್ತಾ ತಳಿರು ತೋರಣಕೂ ಹಸಿರಿಲ್ಲ ಪರಿಸರ ಕೆಟ್ಟಿದೆ,ಉಸಿರು ಕಟ್ಟುತಿದೆ ಎಂದು ಹೇಳುವ ಮೂಲಕ ನಮ್ಮಿಂದಾದ ಪರಿಸರ ನಾಶವನ್ನ ಮಾರ್ಮಿಕವಾಗಿ ತಿಳಿಸುತ್ತಾ, ಮುಂದುವರೆದು ಯುಗಾದಿಗೆ, ನಿನಗೆ ನಮ್ಮಿಂದ ಸ್ವಾಗತವೂ ಇಲ್ಲ, ಸತ್ಕಾರವೂ ಇಲ್ಲ ಬಂದಂತೆ ಹೋಗಿ ಬಾ ನಿನಗಿದೋ ನಮಸ್ಕಾರ ಎಂದು ಮನನೊಂದು ಹೇಳಿದ್ದಾರೆ.

ಇವಷ್ಟೇಯಲ್ಲದೇ ಮುಂದುವರೆದು 'ರೈತನ ಪ್ರಾರ್ಥನೆ' ಮತ್ತು 'ಮೊಡಕ್ಕೆ ಮೊರೆ' ಕವಿತೆಗಳಲ್ಲಿ ಒಬ್ಬ ರೈತ ಕಷ್ಟಪಟ್ಟು ಬೆಳೆ ಬೆಳೆದು ಇನ್ನೇನು ಖುಷಿಪಡುವ ಸಂಭ್ರಮ ಬಂತೆನ್ನುವಷ್ಟರಲ್ಲಿ ನಾನಾಕಾರಣಗಳಿಂದ ನಷ್ಟ ಅನುಭವಿಸುವ ಸಂದರ್ಭವನ್ನ ಮರುಕದಿಂದ ಚಿತ್ರಿಸಿದ್ದಾರೆ! 'ಭಾರತ ದರ್ಶನ' ಕವಿತೆಯ ಮೂಲಕ ದೇಶದ ಸ್ವಾತಂತ್ರ್ಯವನ್ನು ಮಗುವಿನಂತೆ ಸಂಭ್ರಮಿಸಿದ್ದಾರೆ, ದೀಕ್ಷೆಯ ತೊಡು ಇಂದೇ ಕವಿತೆಯಲ್ಲಿ ಮಾತೃಭೂಮಿಯನ್ನು ಸ್ವರ್ಗವನ್ನಾಗಿಸುವ ದೀಕ್ಷೇಯನ್ನು ಇಂದೇ ತೊಡೋಣಾ ಎಂದು ವಿನಂತಿಸಿದ್ದಾರೆ,ಆಸೆ ನೂರೆಂಟು ಕವಿತೆಯಲ್ಲಿ 'ದಿನಕರನಂತೆ ತಾನೆ ದಹಿಸುತ ಲೋಕವ ಬೆಳಗುವ ಹಿರಿಯಾಸೆ' ಎಂದು ಹೇಳುವ ಮೂಲಕ ಲೋಕಕಲ್ಯಾಣಕ್ಕಾಗಿ ತಾನು ಏನುಬೇಕಾದರೂ ಆಗುವ ಉತ್ಸಹ ಹುಮ್ಮಸ್ಸನ್ನು ವ್ಯಕ್ತಪಡಿಸಿರುವುದನ್ನ ನಾವಿಲ್ಲಿ ಗಮನಿಸಬಹುದು. ಮುಂಗಾರು ಹಗಲು,ನನ್ನ ಕವಿತೆ,ನನ್ನ ಹಾಡು,ಗುರುವಂದನೆ,ಹೀಗೆ ಹತ್ತು ಹಲವಾರು ಕವಿತೆಗಳು ಓದುಗನಿಗೆ ಖುಷಿ ನೀಡುತ್ತವೆ.

'ಕಾವ್ಯ' ಎಂದರೇನು ಎನ್ನುವುದಕೆ ಹಿರಿಯ ಕವಿಯತ್ರಿ ಸವಿತಾ ನಾಗಭೂಷಣ ಅವರು ಹೀಗೆ ಹೇಳಿದ್ದಾರೆ.
ಪದಗಳನೊಟ್ಟಿದರೆ
ಕಲ್ಲುಮರಳು ಮಣ್ಣಿನ ಕಟ್ಟಡ
ಉಪಮೆ ಅಲಂಕಾರವು ಚಪ್ಪರ
ಚಮತ್ಕಾರವಲ್ಲವದು
ನಿಶ್ಯಬ್ದದೊಳಗಣ ಶಬ್ದವದು
ರೂಪ ಸ್ಪರ್ಶ ರಸ ಗಂಧ ಮೇಳೈಸಿ
ಪರಿಮಳಿಸಿ ಹೂವರಳಿದಂತೆ.

ಇವರ ನುಡಿಯಂತೆ ಶರಣ ತಿಪ್ಪೇರುದ್ರಪ್ಪನವರು ಪದಗಳಿಂದ ಕಟ್ಟಡ (ಕಾವ್ಯ) ಕಟ್ಟಿ ಆ ಕಟ್ಟಡಕ್ಕೆ 'ಅಕ್ಷರತೀರ್ಥ' ಎಂದು ನಾಮಕರಣ ಮಾಡಿ ಅಲ್ಲಲ್ಲಿ ಉಪಮೆ ಅಲಂಕಾರ ಬಳಸಿ ಆ ಕಟ್ಟಡಕ್ಕೆ (ಕಾವ್ಯ) ಚಪ್ಪರ ಹಾಕಿ ಶೃಂಗಾರಗೊಳಿಸಿದ್ದಾರೆ ಎಂಬುದು‌ ನನ್ನ ಅಂಬೋಣವಾಗಿದೆ. ಇವರ ಈ ಚೊಚ್ಚಲ ಕವನಸಂಕಲನ ತಮ್ಮೆಲ್ಲರ ಸಂಪ್ರೀತಿಗೆ ಪಾತ್ರವಾಗಲಿ ಎಂದು ಮನಸಾರೆ ಆಶಿಸುತ್ತೇನೆ.

- ಡಿ.ಶಬ್ರಿನಾ ಮಹಮದ್ ಅಲಿ
ಲೇಖಕಿ, ಚಳ್ಳಕೆರೆ

MORE FEATURES

ಓದು-ಬರಹ ನನಗೆಂದಿಗೂ ವ್ಯಸನವೇ: ಮೇಘನಾ ಕಾನೇಟ್ಕರ್ 

27-04-2024 ಬೆಂಗಳೂರು

‘ಮಲೆನಾಡು, ಬಯಲುಸೀಮೆ ಹಾಗು ಮೆಟ್ರೋ ನಗರಗಳ ಭಾಷಾ ಸೊಗಡು ಮತ್ತು ಜೀವನ ಶೈಲಿಯನ್ನೊಳಗೊಂಡ ಕೌಟುಂಬಿಕ ಹಾಗು ಸಾಮಾಜಿ...

ಸಮಕಾಲೀನ ಸಮಾಜದ ಸ್ಥಿತಿಗತಿಯ ಅನಾವರಣ ‘ಆವರ್ತನ’

27-04-2024 ಬೆಂಗಳೂರು

'ಆವರ್ತನದಲ್ಲಿ ಸ್ವಸ್ಥ ಸಮಾಜ ನಿರ್ಮಾಣದ ತುಡಿತ ವ್ಯಕ್ತವಾಗುತ್ತದೆ. ಮನುಷ್ಯರೊಳಗಿನ ಅಮಾನವೀಯತೆಯ ಬಗೆಗೆ ಅಸಹನೆಯಿದೆ...

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...