ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕು: ಮಮತಾ ಜಿ. ಸಾಗರ್


‘ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕೆ ಹೊರತು, ವೈವಿಧ್ಯತೆಯನ್ನ ಅಳಿಸಿ ಏಕತೆಯನ್ನ ಕಟ್ಟಲಾಗಲ್ಲ’ ಎನ್ನುತ್ತಾರೆ ಕವಿ ಮಮತಾ ಜಿ. ಸಾಗರ್. ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಸಂದರ್ಭದಲ್ಲಿ ಬುಕ್ ಬ್ರಹ್ಮದೊಂದಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

ಬುಕ್ ಬ್ರಹ್ಮ: ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡುವ ಜಾಗತಿಕ ಪ್ರಶಸ್ತಿಯನ್ನು ಪಡೆದಿದ್ದೀರಿ ಅಭಿನಂದನೆಗಳು, ಈ ಪ್ರಶಸ್ತಿಯ ಬಗ್ಗೆ ನಿಮ್ಮ ಮೊದಲ ಪ್ರತಿಕ್ರಿಯೆ ಏನು?

ಮಮತಾ ಜಿ.ಸಾಗರ್: ಧನ್ಯವಾದಗಳು, ಈ ಪ್ರಶಸ್ತಿಯ ಬಗ್ಗೆ ಹೇಳೋದಾದರೆ ಒಂದು ಹತ್ತು ತಿಂಗಳ ಹಿಂದೆ ಅವರು ನನ್ನನ್ನು ಸಂಪರ್ಕಿಸಿದ್ದರು. ಈ ಪ್ರಶಸ್ತಿಗೆ ನನ್ನನ್ನು ಆಹ್ವಾನಿಸಿದ್ದರು. ಪ್ರಪಂಚದಾದ್ಯಂತ ಕೆಲವು ಲೇಖಕರನ್ನು ಮಾತ್ರ ಆಹ್ವಾನಿಸುತ್ತಿದ್ದೇವೆ. ನೀವು ಇದಕ್ಕೆ ದಾಖಲಾತಿಗಳನ್ನು ಕಳಿಸಿಕೊಡಿ ಎಂದರು. ನಾವು ಯಾರನ್ನ ಆಹ್ವಾನಿಸಿರುತ್ತೇವೋ ಅವರ ಸಾಹಿತ್ಯಿಕ ಕಾರ್ಯಗಳನ್ನ ಜ್ಯೂರಿಗಳಿಗೆ ಕಳಿಸುತ್ತೇವೆ. ಜ್ಯೂರಿಗಳು ವಿಜೇತರನ್ನು ನಿರ್ಧರಿಸುತ್ತಾರೆ ಎಂದಿದ್ದರು. ನಾನು ಸರಿ ಎಂದಿದ್ದೆ. ಅವರು ಆ ಪ್ರಶಸ್ತಿಯ ನಿಬಂಧನೆಗಳನ್ನು ಕಳುಹಿಸಿದ್ದರು. ಆ ನಿಬಂಧನೆಯಲ್ಲಿ ನಿಮ್ಮ ಬರವಣಿಗೆಯ ಕುರಿತ ಕೊನೆಪಕ್ಷ ಮೂರು ಅಂತರಾಷ್ಟ್ರೀಯ ಮಟ್ಟದ ವಿಮರ್ಶೆಯನ್ನು ಇಂಗ್ಲಿಷ್, ಸ್ಪ್ಯಾನಿಶ್, ರಷ್ಯನ್, ಅರೇಬಿಕ್ ನಲ್ಲಿ ಇದ್ದರೆ ಕಳಿಸಿ ಎಂದಿದ್ದರು..

ಅವರಿಗೆ ಹೇಳಿದೆ, ನಾನು ಮೊದಲಿಗೆ ಬೇರಾವ ಭಾಷೆಗಳಲ್ಲಿ ಬರೆಯುವುದಿಲ್ಲ, ನನ್ನ ಎಲ್ಲಾ ಸೃಜನಾತ್ಮಕ ಬರವಣಿಗೆ ಇರೋದು ಕನ್ನಡದಲ್ಲಿ. ಆದ್ದರಿಂದ ಅಂತರಾಷ್ಟ್ರೀಯ ಭಾಷೆಗಳಲ್ಲಿ ಬರೆದದ್ದು ನನ್ನಲ್ಲಿಲ್ಲ, ಕನ್ನಡದ್ದಿದೆ. ಈ ನಿಬಂಧನೆಯ ಮೂಲಕ ನೀವು ನನ್ನಂತಹ ಲೇಖಕರನ್ನು ಈ ಪ್ರಶಸ್ತಿಯಿಂದ ಹೊರಗಿಡುತ್ತಿದ್ದೀರ, ಇದರಿಂದ ಅಂತರಾಷ್ಟ್ರೀಯ ಭಾಷೆಗಳಲ್ಲಿ ಬರೆಯದಿರೋ ಲೇಖಕರನ್ನು ಹೊರಗಿಡಲಾಗುತ್ತೆ. ಹಾಗಾಗಿ ಪ್ರಶಸ್ತಿಯ ಆಹ್ವಾನವನ್ನು ನಾನೇ ನಿರಾಕರಿಸುತ್ತೇನೆ ಎಂದು ಹೇಳಿದ್ದೆ.

ಜೊತೆಗೆ ವಸಾಹತೋತ್ತರ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂಗ್ಲಿಷ್ ಒಂದೇ ಮುಖ್ಯ ಅಲ್ಲ. ಹಾಗಾಗಿ ನಾನು ಕನ್ನಡದಲ್ಲೇ ಬರೆಯುತ್ತೇನೆ ಅಂತಾ ನಿರ್ಧರಿಸಿದ್ದೇನೆ, ಇಂಗ್ಲಿಷ್ ನಲ್ಲಿ ವ್ಯವಹಾರ ನಡೆಸಬಹುದು, ಬರವಣಿಗೆ ಕನ್ನಡದಲ್ಲೇ ಆಗಬೇಕು ಎಂಬ ರಾಜಕೀಯ ನಿಲುವಿನಿಂದ ನಾನದ್ದನ್ನು ನಿರ್ಧರಿಸಿರುವುದು. ಆದ್ದರಿಂದ ನನಗೆ ಕನ್ನಡ ಬರವಣಿಗೆ ಬಹಳ ಮುಖ್ಯವಾಗುತ್ತೆ. ಹಾಗಾಗಿ ಈ ಪ್ರಶಸ್ತಿ ಆಹ್ವಾನವನ್ನು ನಿರಾಕರಿಸುತ್ತೇನೆ ಎಂದು ಬರೆದು ಕಳಿಸಿದೆ.

ವಾರದ ನಂತರ ಅವರೇ ಕರೆ ಮಾಡಿ, ನೀವೇಳಿದ್ದು ಸರಿಯಾಗಿದೆ. ನಮಗೆ ಇಂಗ್ಲಿಷ್ ಬರವಣಿಗೆ ಬೇಡ, ನಿಮ್ಮ ಯಾವುದಾದರೂ ಮೂರು ಸಂದರ್ಶನಗಳ ಲಿಂಕ್ ಕಳಿಸಿ ಎಂದು ಕೇಳಿದರು. ನನ್ನ ಸಂದರ್ಶನಗಳನ್ನು ಆಗಾಗಲೇ ನೋಡಿದ್ದ ಅವರೇ ಎರಡು ಸಂದರ್ಶನಗಳನ್ನು ಬಗ್ಗೆ ಸಲಹೆ ನೀಡಿದ್ದರು. ನಾನು ಲಿಂಕ್ ಕಳಿಸಿ ಅದನ್ನು ಮರೆತುಬಿಟ್ಟೆ. ಜನವರಿಯಲ್ಲಿ ಅವರು ನನಗೆ ಮತ್ತೆ ಬರೆದರು. ಜ್ಯೂರಿ ನಿರ್ಧರಿಸಿದ್ದಾರೆ. ಅಂತಿಮ ಸುತ್ತಿಗೆ ನೀವು ಸೆಲೆಕ್ಟ್ ಆಗಿದ್ದೀರಿ, ನೀವು ಬನ್ನಿ ಎಂದು ತಿಳಿಸಿದರು. ನೀವು ಭಾರತದಿಂದ ಆಯ್ಕೆಯಾಗಿದ್ದೀರ ಎಂದು ತಿಳಿಸಿದರು. ನಾನು ಹೋ, ನಾನು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದೀನಾ ಅಂದುಕೊಂಡೇ ಆ ನಂತರ ಅವರು ಮತ್ತೆ ಬರೆದರು, ಮೊದಲ ಸಲ ಭಾರತ ಚಿನ್ನದ ಪದಕಕ್ಕೆ, ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. ನಮಗೆ ತುಂಬಾ ಹೆಮ್ಮೆಯಾಗಿದೆ, ನಿಮ್ಮ ಭಾಷೆಯಲ್ಲಿ ನೀವು ಬರೆಯುತ್ತೀರಿ ಎಂದರು. ಆ ಕ್ಷಣ ನನಗೆ ಬಹಳ ಸಂತೋಷವಾಯಿತು. ಪ್ರಶಸ್ತಿ ಬರುತ್ತೋ ಬಿಡುತ್ತೋ ಅದು ಬೇರೆ. ಅಂತಿಮ ಸುತ್ತಿಗೆ, ಕನ್ನಡ ಭಾಷೆಯಲ್ಲಿ ಬರೆದುಕೊಂಡು, ಪ್ರಪಂಚದಾದ್ಯಂತ ಇರುವಂತ ಭಾಷೆಗಳ ಜೊತೆ ಸ್ಪರ್ಧೆಯಲ್ಲಿ ನಿಂತು ನಾನಲ್ಲಿ ಹೋದೆ ಅಂದರೆ ನಾಳೆ ಪ್ರಪಂಚದಾದ್ಯಂತ ಇರುವ ಎಲ್ಲಾ ಭಾಷೆಗಳನ್ನು ಕರೆಯೋ ಜವಾಬ್ದಾರಿ ಅವರಿಗಾಯಿತು. ಆ ವಿಚಾರಕ್ಕೆ ನನಗೆ ಸಂತೋಷವಾಯಿತು. ಕಡೆಗೆ 6ನೇ ತಾರೀಖು ನಾವು ಇದನ್ನು ಡಿಕ್ಲೇರ್ ಮಾಡ್ತೀವಿ. ಈಗ ನೀವು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದೀರ ಅನ್ನೋದನ್ನ ಅನೌನ್ಸ್ ಮಾಡಿ ದಯವಿಟ್ಟು ಅಂದರು. ಅದಕ್ಕೆ ನಾನು ಹೋಗೋಕೆ ಮೊದಲೇ ಆ ವಿಚಾರವನ್ನು ಹಾಕಿದೆ. ನೀವೆಲ್ಲರೂ ಆ ಸುದ್ದಿಯನ್ನು ಮಾಡಿದಿರಿ. ಎಲ್ಲರಿಗೂ ಧನ್ಯವಾದ.

3ನೇ ತಾರೀಖು ನಾನಲ್ಲಿ ತಲುಪಿದೆ, 3ನೇ ತಾರೀಖಿನಿಂದ 5ನೇ ತಾರೀಖಿನವರೆಗೂ ಬೇರೆ ಬೇರೆ ಭಾಷಣಗಳನ್ನು ಆಯೋಜಿಸಿದ್ದರು. ಅಲ್ಲಿ ತಲುಪಿದ ದಿನ ನಮ್ಮನ್ನು ಉಳಿಸಿದ್ದು ‘ಎಎನ್ಎ’ಯಲ್ಲಿ - ಆಫ್ರಿಕನ್ ಆಥರ್ಸ್ ಅಸೋಷಿಯೇಷನ್ ಅಂತಾ ಚಿನುವಾ ಅಚಿಬೆಗೆ ಈ ಜಮೀನನ್ನು ಸರ್ಕಾರ ನೀಡಿದೆ. ಅಲ್ಲಿ ಬೃಹತ್ ರೆಸಾರ್ಟ್ ನಿರ್ಮಿಸಿದ್ದಾರೆ. ಅದು ಲೇಖಕರಿಗಾಗಿಯೇ ನಿರ್ಮಿಸಿರೋ ಆಫ್ರಿಕನ್ ನ ಅತಿದೊಡ್ಡ ರೆಸಾರ್ಟ್. ಅಲ್ಲಿ ನಮ್ಮನ್ನು ಇರಿಸಿದರು. ಸ್ವಯಂಸೇವಕರಾಗಿ ಸುಮಾರು ಜನ ಯುವ ವಿದ್ಯಾರ್ಥಿಗಳು, ಕವಿಗಳು ಇದ್ದರು. ಅಲ್ಲಿ ಕೆಲಸ ನಿರ್ವಹಿಸುವ, ಆಹಾರ ತಯಾರಿಸುವ ಜನರಿದ್ದರು. ಹೀಗೆ ಇಡೀ ತಂಡ ಇತ್ತು. ಆಫ್ರೀಕಾದ ಬೇರೆ ಬೇರೆ ಪ್ರದೇಶಗಳ ಲೇಖಕರು ಕೂಡ ಬಂದಿದ್ದರು, ನೈಜಿರಿಯಾದ ಲೇಖಕರು ಬಂದಿದ್ದರು, ಅಬುಜಾ ಅನ್ನೋ ಊರಿನಲ್ಲಿ ನಡೆದ ಕಾರ್ಯಕ್ರಮವದು. ಅಲ್ಲಿ ಹೋಗಿ ಸೇರಿದೆ. ಮೊದಲ ದಿನ ಭಾಷಣ ಕೊಡಿ ಅಂದರು. ನಾನು ಇಂಥ ಊರಿಂದ ಇಂಥ ಭಾಷೆಯಿಂದ ಬಂದಿದ್ದೇನೆ. ನಾನಿಲ್ಲಿ ಪ್ರತಿನಿಧಿಸುತ್ತಿರೋದು ಬರೀ ಸಾಹಿತ್ಯವನ್ನಲ್ಲ, ಮಹಿಳೆಯಾಗಿ ಮಹಿಳಾವಾದವನ್ನ ಪ್ರತಿನಿಧಿಸುತ್ತಿದ್ದೇನೆ. ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ, ಆಮೇಲೆ ನಾನು ನನ್ನ ದೇಶ, ನನ್ನ ಭಾಷೆಯ ಜೊತೆಗೆ ನನ್ನ ರಾಜಕೀಯವನ್ನು ಪ್ರತಿನಿಧಿಸುತ್ತಿದ್ದೇನೆ ಅಂತೆಲ್ಲಾ ತಿಳಿಸಿ ಮಾತಾಡಿದೆ. ಆ ವೇಳೆ ಅಲ್ಲಿ ರಂಜಾನ್ ನಡೀತಿತ್ತು, ತುಂಬಾ ಜನ ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಇದ್ದರು. ಸಾಯಂಕಾಲ ಯುವಜನರು ಬರುತ್ತಿದ್ದರು, ಅವರೊಂದಿಗೆ ಪದ್ಯಗಳನ್ನ ಓದುತ್ತಿದ್ದೆ, ದೇವನೂರು ಮಹಾದೇವ ಬಗ್ಗೆ ತಿಳಿಸಿದೆ.

ಒಂದು ಭಾಷಣದಲ್ಲಿ ನಾನು ರೇಸಿಸಂ(ವರ್ಣಬೇಧನೀತಿ) ಮತ್ತು ಕಾಸ್ಟಿಸಂ(ಜಾತೀಯತೆ) ಎರಡನ್ನು ಒಟ್ಟಿಗಿಟ್ಟು ಮಾತನಾಡಿದೆ. ಆಫ್ರಿಕಾದ ಚಿನುವ ಅಚಿಬೆ, ಕೀನ್ಯಾದ ಗೂಗಿ ವಾ ಥಿಯೊಂಗೊ, ವೋಲೆ ಸೋಯಿಂಕಾ ಈ ಮೂರು ಜನರ ಕೃತಿಗಳನ್ನ ಇಟ್ಟುಕೊಂಡು ಆಫ್ರಿಕನ್ ಐಡೆಂಟಿಟಿ ಬಗ್ಗೆ ಹೇಳುತ್ತಾ, ದೇವನೂರು ಮಹಾದೇವ ಅವರ ಕತೆಗಳು ಮತ್ತು ಕುಸುಮಬಾಲೆ ಇಟ್ಕೊಂಡು ಭಾರತದ ದಲಿತ ಐಡೆಂಟಿಟಿ ಬಗ್ಗೆ ಹೇಳುತ್ತಾ, ಅಲ್ಲಿ ಹೆಣ್ಣು ಪಾತ್ರಗಳು ಏನನ್ನ ಮಾತಾಡುತ್ತಿವೆ. ಸೋ ಜಂಡರ್(ಲಿಂಗ), ಕಾಸ್ಟ್(ಜಾತಿಯತೆ) ಅಂಡ್ ರೇಸ್(ವರ್ಣಬೇಧ) ಕೃತಿಗಳನ್ನು ಇಟ್ಕೊಂಡು ಮಾತಾಡ್ತಾ ಹೋದೆ. ಅದು ಅಲ್ಲಿದ್ದವರಿಗೆ ತುಂಬಾ ಇಷ್ಟ ಆಯ್ತು. ಅವರ್ಯಾರಿಗೂ ಭಾರತದ ಜಾತೀಯತೆಯ ಕುರಿತು ಬರೆದ ಕೃತಿಗಳ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಅದಕ್ಕಾಗಿ ಸುಮಾರು ಉಲ್ಲೇಖಗಳನ್ನು ಕೊಟ್ಟು ಮಾತಾಡಿದೆ. ತುಂಬಾ ವಿದ್ಯಾರ್ಥಿಗಳು ನನ್ನ ಸುತ್ತಲು ಬಂದರು, ಅಲ್ಲಿ ಅಡುಗೆ ಮನೆಯಲ್ಲಿ ಒಬ್ಬರು ಯೇನಿತಾ ಅಂತಾ ಕೆಲ್ಸ ಮಾಡ್ತಿದ್ರು. ಅವರ ಕೈಕೆಳಗೆ ಒಂದಷ್ಟು ಹುಡುಗರು, ಹುಡುಗಿಯರು ಕೆಲಸ ಮಾಡುತ್ತಿದ್ದರು. ಅವರೆಲ್ಲ ಇಡೀ ದಿನ ಕಷ್ಟ ಪಟ್ಟು ಅಡುಗೆ ಮಾಡುತ್ತಿದ್ದರು. ನಾನು ಅಡುಗೆ ಮನೆಗೆ ಹೋಗಿ ಅವ್ರಿಂದ ಅನ್ನ ಮಾಡಿಸಿ, ನಾನು ಟಮೋಟೋ ಗೊಜ್ಜು ಮಾಡಿ ಅಲ್ಲಿ ಕೆಲಸ ಮಾಡುವ ಎಲ್ಲರೊಂದಿಗೆ ಊಟ ಮಾಡಿದೆ. ಪ್ರಶಸ್ತಿಗಿಂತಲೂ ಈ ಚಿಕ್ಕಪುಟ್ಟ ಕ್ಷಣಗಳು ಅತ್ಯಂತ ಖುಷಿ ನೀಡಿದವು.

ಆಫ್ರಿಕಾದಲ್ಲಿ ಅಲ್ಲಿ ತುಂಬಾ ಸಮಸ್ಯೆಗಳಿವೆ. ಅವರಿಗೆ ಹೋಲಿಸಿಕೊಂಡರೇ ನಾವು ತುಂಬಾ ಸುಖವಾಗಿದ್ದೀವಿ. ನಮ್ಮ ಪರಿಸ್ಥಿತಿ ಬಹಳ ಚೆನಾಗಿದೆ. ಅಲ್ಲಿ ತುಂಬಾ ಕಷ್ಟಗಳಿವೆ. ಶಿಕ್ಷಕರಿಗೆ ಸರಿಯಾದ ಸಂಬಳವಿಲ್ಲ, ಯುವಕರಿಗೆ ಸರಿಯಾದ ಶಿಕ್ಷಣ ಸಿಗೋದಿಲ್ಲ, ರಸ್ತೆಯಲ್ಲಿ ಓಡಾಡೋಕೆ ಸಾಧ್ಯವಾಗಲ್ಲ. ದುಡ್ಡಿರೋರು ಮಾತ್ರ ಫ್ಲೈಟಲ್ಲಿ ಓಡಾಡ್ತಾರೆ. ತುಂಬಾ ಸಂಕೀರ್ಣ ಸಮಸ್ಯೆಗಳಿವೆ ಅದೆಲ್ಲವನ್ನ ನಾನು ಅರ್ಥ ಮಾಡಿಕೊಳ್ಳುತ್ತಿದೆ. ನಮ್ಮ ನಡುವೆ ಒಂದು ಸಂಬಂಧ ಬೆಳೆಯೋಕೆ ಶುರುವಾಯಿತು. ಒಂದು ಹುಡುಗ ಅಬ್ದುಲ್ ಮಲ್ಲೀಕ್ ಅಂತಾ ಯುವಕ ತುಂಬಾ ಒಳ್ಳೆ ಕವಿ, ಆತನನ್ನು ನನ್ನ ಏರ್ಪೋರ್ಟಿನಿಂದ ಕರೆದುಕೊಂಡು ಹೋಗೋಕೆ ಕಳಿಸಿದ್ರು. ಆತ ಅವನ ಸ್ನೇಹಿತರನ್ನೆಲ್ಲ ಕರೆದ್ಕೊಂಡು ಬಂದ, ನನ್ನ ರೂಮಿನಲ್ಲಿ ತನ್ನ ಕವಿತೆಗಳನ್ನ ಓದುತ್ತಿದ್ದ, ನಾನು ಅವರೊಂದಿಗೆ ಕಾವ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆ.

ಬುಕ್ ಬ್ರಹ್ಮ: ಭಾರತದ ಪ್ರತಿನಿಧಿಯಾಗಿ ಜಾಗತಿಕ ಪ್ರಶಸ್ತಿಯನ್ನು ಸಾಹಿತ್ಯ ಸೇವೆಗಾಗಿ ಪಡೆದಿರುವ ಈ ಕ್ಷಣ ನಿಮ್ಮ ಸಾಹಿತ್ಯಯಾನವನ್ನು ನೆನೆಯೋದಾದರೆ..?

ಮಮತಾ ಜಿ.ಸಾಗರ್: ಸಾಹಿತ್ಯ ಸೇವೆಗೆ ಪ್ರಶಸ್ತಿ ಯಾಕೆ ಪಡೆದಿದ್ದೀನಿ ಗೊತ್ತಿಲ್ಲ, ಒಂದು ತರದಲ್ಲಿ ಯುವ ಜನರೊಂದಿಗೆ ನನಗಿರುವ ಆಪ್ತತೆ, ಸಾಮಾಜಿಕ ರಾಜಕೀಯ ಜಾಗೃತಿ, ಇದನ್ನು ಮೊದಲಿಂದ ಮಾಡ್ಕೊಂಡು ಬಂದಿದ್ದೀನಿ, ಅಲ್ಲೂ ಮಾಡಿದ್ದೀನಿ ಬಹುಶಃ ಇದೇ ನನ್ನನ್ನ ಸಾಹಿತ್ಯದ ಪ್ರಶಸ್ತಿ ಕಡೆಗೆ ಕರೆದ್ಕೊಂಡು ಹೋಗಿದ್ದು ಅಂತಾ ನನಗನ್ನಿಸುತ್ತೆ. ಆಮೇಲೆ ಇಡೀ ಸಾಹಿತ್ಯಯಾನದ ಒಳಗೆ ನನ್ನ ನಡಿಗೆ, ನನ್ನ ದಾರಿ ನಾನು ಹುಡುಕಿ ಹೋರಟಿರೋದು ಕೂಡಾ, ಮತ್ತು ನನ್ನನ್ನು ಬರಹಗಾರ್ತಿಯಾಗಿ ಮಾಡಿರೋದು ಕೂಡ ನನ್ನ ಸುತ್ತ ಇರುವ ಪ್ರಪಂಚ, ಅದರ ದುಃಖ, ಅದರ ಕಷ್ಟ, ಅದರ ಸಂತೋಷ ಅದಕ್ಕೆ ನಾನು ಪ್ರತಿಸ್ಪಂದಿಸಿಕೊಂಡು ಬಂದಿರೋದಕ್ಕೆ ಅಂತಾ ನಂಬುತ್ತೇನೆ.

ನಾನು ಸಾಗರದಂತ ಚಿಕ್ಕ ಊರಲ್ಲಿ ಹುಟ್ಟಿ-ಬೆಳೆಯದಿದ್ದರೆ ಯಾವತರ ಬರೆಯುತ್ತಿದ್ದೆ ಎಂದು ನನಗೆ ಗೊತ್ತಿಲ್ಲ, ಯಾಕೆಂದರೆ ನಾನೊಂದು ಮೇಲ್ಜಾತಿ ಮನೆಯಲ್ಲಿ ಹುಟ್ಟಿ, ಬಹಳ ಪ್ರೊಟೆಕ್ಟಿವ್ ಆಗಿದ್ದು, ಯಾವಾಗಲೂ ಯಾವುದೇ ತೊಂದರೆ ಇಲ್ಲದೆ ಬೆಳೆದು, ಯಾರೂ ಏನು ಪ್ರಶ್ನಿಸದೇ ಇದ್ದಾಗ, ನಿಮ್ಮ ಕಣ್ಣಿಗೇನು ಕಾಣೋದೆ ಇಲ್ಲ, ನಾವು ಒಳಗಣ್ಣು ತೆರೆದು ನೋಡುವವರೆಗೆ, ಕಿವಿ ಓಪನ್ ಮಾಡಿ ಕೇಳಿಸಿಕೊಳ್ಳುವವರೆಗೂ. ಅದನ್ನ ಮಾಡೋಕೆ ಸಾಧ್ಯ ಆದದ್ದು, ನಮ್ಮ ಮನೆಯಲ್ಲಿದ್ದ ವಾತಾವರಣ. ಸಾಗರದಲ್ಲಿ ನಮ್ಮ ತಾಯಿ ಡಾಕ್ಟರ್, ಶಿವಮೊಗ್ಗ ಜಿಲ್ಲೆಗೆ ಮೊದಲ ಲೇಡಿ ಡಾಕ್ಟರ್ ನಮ್ಮಮ್ಮ. ನಮ್ಮ ಮನೆಯಲ್ಲಿ ಒಂದು ನಿಯಮವಿತ್ತು. ನಮ್ಮ ಮನೆಯಲ್ಲಿದ್ದದ್ದು, ಅಪ್ಪ, ಅಮ್ಮ ನಾನು ಮೂರೇ ಜನ. ಜೊತೆಗೆ ಒಬ್ಬರು ಅಡುಗೆಯವರಿದ್ರು. ಅವರು ಐದಿನೈದು ಇಪ್ಪತ್ತು ಜನಕ್ಕೆ ಅಡುಗೆ ಮಾಡ್ತಿದ್ರು. ದೂರದೂರುಗಳಿಂದ ಗಾಡಿ ಕಟ್ಟಿಕೊಂಡು ನಮ್ಮ ಮನೆಗೆ ಜನ ಬರೋರು. ಜನರಿಗೆ ಊಟ, ಎಳೆಮಕ್ಕಳಿಗೆ ಹಾಲು ಎಲ್ಲ ನಮ್ಮ ಮನೆಯಿಂದ ಕೊಡ್ತಿದ್ರು, ನನ್ನ ಅಪ್ಪ ಅಮ್ಮ ನನಗೆ ಹೇಳಿಕೊಟ್ಟಿದ್ದು, ಯಾರನ್ನು ಒಳಗೆ ಬರಬೇಡಿ ಅಂತಾ ಹೇಳಬಾರದು ಅಂತಾ. ಎಲ್ಲಿ ಹೋದರು ತಿನ್ನಬೇಕು ಅಂತಾ. ಇಂಥವೆಲ್ಲ ಅವರು ಯಾಕೆ ಹೇಳಿಕೊಟ್ಟರು ಗೊತ್ತಿಲ್ಲ, ಅವರು ಇಂಥದ್ದನ್ನೆಲ್ಲ ಹೇಳಿಕೊಡಬೇಕಿರಲಿಲ್ಲ ಯಾಕೆಂದರೆ ಅವರು ಮಾಧ್ವ ಮನೆಯಲ್ಲಿ ಹುಟ್ಟಿ ಬೆಳೆದವರು. ಆದ್ರೆ ಅವರು ಬೆಂಗಳೂರು ಬಿಟ್ಟು ಸಾಧಿಸೋಕೆ ಹೋಗಿ ಅಲ್ಲಿ ಈ ಸೂಕ್ಷ್ಮಗಳನ್ನು ಕಲಿತಿರಬಹುದು. ಅದ್ದರಿಂದ ಅವರು ನನಗೆ ಹೇಳಿಕೊಟ್ಟಿರಬಹುದು. ಇದು ಇವತ್ತಿನವರೆಗೆ ಬದುಕನ್ನು ಅರ್ಥಮಾಡಿಕೊಳ್ಳೋಕೆ ಸಹಾಯ ಮಾಡಿದೆ. ಇದೂ ಕೂಡ ಸಾಹಿತ್ಯ ಯಾನಕ್ಕೆ ಸಹಾಯ ಮಾಡಿದೆ.

ಬುಕ್ ಬ್ರಹ್ಮ: ಸಾಹಿತಿಗಳ ಜಾಗತಿಕ ಸಂಘಟನೆ- ವರ್ಲ್ಡ್ ಆರ್ಗನೈಜೇಷನ್ ಆಫ್ ರೈಟರ್ಸ್ (WOW) ಸ್ಥಾಪಿಸಿರುವ ಈ ಪ್ರಶಸ್ತಿಯ ಬಗ್ಗೆ ನಿಮ್ಮ ಅಭಿಪ್ರಾಯ.

ಮಮತಾ ಜಿ.ಸಾಗರ್: ಅಲ್ಲಿ ನಾವು ಪ್ರತೀ ದಿನ ಭಾಷಣ ಮಾಡುತ್ತಿದ್ದೆವು. ಎಎನ್ಎ ಒಳಗೆ ಎಲ್ಲರನ್ನು ಬಿಡುತ್ತಿರಲಿಲ್ಲ, ಪಾಸಿದ್ದವರಿಗೆ ಮಾತ್ರ ಪ್ರವೇಶ ಇತ್ತು. ಸ್ವಯಂ ಸೇವಕರು ಮತ್ತು ಅಲ್ಲಿನ ಕೆಲಸದವರು ಮಾತ್ರ ನಮ್ಮೊಂದಿಗೆ ಬೆರೆಯುತ್ತಿದ್ದರು. ಜನಸಾಮಾನ್ಯರನ್ನು ನೋಡೋದಕ್ಕೆ ಸಾಧ್ಯವಾಗಲಿಲ್ಲ, ರಾಜ ಒಬ್ಬರು ಬಂದಿದ್ದರು, ಎಲ್ಲಾ ಹೆಣ್ಣುಮಕ್ಕಳು ತುಂಬಾ ಸುಂದರವಾಗಿದ್ದರು. ಒಂದು ಆಪ್ತ ವಾತಾವರಣ ಅಲ್ಲಿತ್ತು. ಆದರೆ ಅಲ್ಲಿನ ಜನರಿಗೆ ತುಂಬಾ ಕಷ್ಟಗಳು, ಸಮಸ್ಯೆಗಳಿದ್ದವು ಎಂಬುದು ಅರ್ಥವಾಯಿತು.

ನಾವು ನಾನ್ಯಾಕೆ ಬರೆಯುತ್ತೇನೆ ಅಂತಾ ಮಾತಾಡಬೇಕಿತ್ತು. ರೇಸಿಸಂ ಅನ್ನೋದು ಆಫ್ರಿಕಾದ ಬಹಳದೊಡ್ಡ ಸಮಸ್ಯೆ, ಅದನ್ನ ತುಂಬಾ ಅನುಭವಿಸಿದ್ದಾರೆ, ಆಫ್ರಿಕನ್ಸ್ ಬೇರೆ ಬೇರೆ ಕಡೆ ಇದ್ದಾರೆ. ಅವರೆಲ್ಲಾ ರೇಸಿಸಂ ವಿರುದ್ಧ ಹೋರಾಟ ಮಾಡಿದ್ದಾರೆ. ಆ ಕಾರಣಕ್ಕೆ ರೇಸಿಸಂ ಬಗ್ಗೆ ಜಗತ್ತಿಗೆ ತಿಳಿದಿದೆ. ಆದರೆ ಜಾತೀಯತೆ ಅನ್ನೋದು ಭಾರತದ ಬಹಳ ದೊಡ್ಡ ಸಮಸ್ಯೆ. ಅದರಲ್ಲೂ ಅಸ್ಪೃಶ್ಯತೆ ಅನ್ನುವಂತದ್ದು ಭಾರತದಲ್ಲಿ ಇನ್ನೂ ಜೀವಂತವಾಗಿದೆ. ಜೊತೆಗೆ ಭಾರತ ಜಾತೀಪದ್ಧತಿಯ ಬಗ್ಗೆ ಜನರಿಗೆ ತಿಳಿದಿಲ್ಲ, ಭಾರತದಿಂದಾಚೆಗೆ ರೇಸಿಸಂ ಎಷ್ಟು ಪರಿಚಯ ಇದೆಯೋ ಅಷ್ಟು ಪರಿಚಯ ಇಲ್ಲ. ಮತ್ತು ಜಾತೀಯತೆ ಮತ್ತು ಅಸ್ಪೃಶ್ಯತೆಗೆ ತುತ್ತಾದ ಹೆಣ್ಣುಮಕ್ಕಳು ಎರಡು ಪಟ್ಟು ಹೆಚ್ಚು ತುಳಿತಕ್ಕೊಳಪಟ್ಟವರು. ಒಂದು ಜಾತೀಯತೆಗೆ ಈಡಾದರೆ ಹೆಣ್ಣು ಅನ್ನೋ ಲಿಂಗ ಅಸಮಾನತೆಗೆ ಒಳಗಾಗುತ್ತಿದ್ದಾರೆ. ಭಾರತದಲ್ಲಿ ರಾಜಕೀಯ ಇದನ್ನು ಬಳಸಿಕೊಳ್ಳುತ್ತಿದೆ. ಜೊತೆಗೆ ಕಾಸ್ಟು, ರೇಸು, ಜೆಂಡರ್(ಹೆಣ್ಣು, ಗಂಡು, ಲಿಂಗತ್ವ ಅಲ್ಪಸಂಖ್ಯಾತರು) ಮತ್ತು ಧಾರ್ಮಿಕವಾದ ನಿಲುವುಗಳು ಈ ಇಷ್ಟರಲ್ಲಿ ತುಳಿತಕ್ಕೊಳಗಾದವರು ಮಾತಾಡುತ್ತಾರೆ. ಆದರೆ ಯಾರು ತುಳಿತಕ್ಕೀಡು ಮಾಡುತ್ತಾರಲ್ಲ ಆ ಸಮುದಾಯಗಳಿಗೆ ಸೇರಿದ ಜನಗಳು ಇದನ್ನ ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಪ್ರತಿಸ್ಪಂದಿಸಬೇಕು. ಅವರು ನೀವು ಫೆಮಿನಿಸ್ಟ್ ಗಳು ನೀವು ಹೆಂಗಸರ ಸಮಸ್ಯೆಗಳ ಬಗ್ಗೆ ಮಾತಾಡಿ, ನೀವು ಕೆಳಜಾತಿಯವರು ನೀವು ನಿಮ್ಮ ಸಮಸ್ಯೆಗಳನ್ನ ಮಾತಾಡಿ ಅಂತಾ ಹೇಳೋದಲ್ಲ. ಮೇಲ್ಜಾತಿಯರಿಗೆ (ಬ್ರಾಹ್ಮಣರಿಗೆ) ಪರಿಜ್ಞಾನ ಬರಬೇಕು ಜಾತೀಯತೆ ಮಾಡಬಾರದು ಅನ್ನೋದು, ಗಂಡಸರಿಗೆ, ಪುರುಷಪ್ರಾಧಾನ್ಯತೆಯ ಪಲಾನುಭವಿಗಳಿಗೆ ಹೆಂಗಸರಿಗೆ ಮರ್ಯಾದೆ ಕೊಡಬೇಕು ಅನ್ನೋದು ಬರಬೇಕು. ಆಮೇಲೆ ಅಲ್ಪಸಂಖ್ಯಾತ ಜನಾಂಗದ ಗುಂಪುಗಳಿಗೆ ಸೇರದಿರೋರು ಉದಾಹರಣೆಗೆ ಭಾರತದ ಹಿಂದುಗಳಿಗೆ ಜ್ಞಾನ ಬರಬೇಕು, ಇಸ್ಲಾಂ ಅಥವಾ ಕ್ರಿಶ್ಚಿಯನ್ ಗೆ ಸೇರಿರೋರನ್ನ ಹಿಂಸಿಸಬಾರದು ಅನ್ನಿಸಬೇಕು.

ಕಾಸ್ಟು, ರೇಸು, ಜೆಂಡರ್, ಧರ್ಮದ ಅಸ್ಮಿತೆ ರಾಜಕೀಯದ ದಾಳವಾದರೆ ಅದಕ್ಕಿಂತ ಕ್ರೌರ್ಯ ಇನ್ನೊಂದಿಲ್ಲ. ಆಮೇಲೆ ಅವರಿಗೆ ನಾನು ಹೇಳಿದೆ. ಸ್ವತಂತ್ರವನ್ನು ನೀವು ಪಡೆದುಕೊಂಡಿದ್ದೀರ ಅದನ್ನು ಅನುಭವಿಸಲಾಗುತ್ತಿಲ್ಲ. ನಾವು ಇರೋ ಸ್ವತಂತ್ರ್ಯವನ್ನು ಉಳಿಸಿಕೊಳ್ಳೋಕೆ ಹೋರಾಡುತ್ತಿದ್ದೇವೆ ಅಂತಾ ಹೇಳಿದೆ.

ಆನಂತರದಲ್ಲಿ ಸ್ಪೇನ್ ದೇಶದವರೊಬ್ಬರು ಕೇಳಿದರು, ನೀವು ಎಲ್ಲಾ ಭಾಷೆಯನ್ನು ಸೇರಿಸಿಕೊಂಡಿದ್ದೀರಾ, ಆದರೆ ಫ್ರೆಂಚ್ ಭಾಷೆಯನ್ನು ಸೇರಿಸಿಕೊಂಡಿಲ್ಲ, ನೀವು ಫ್ರೆಂಚ್ ಸೇರಿಸಿಕೊಳ್ಳದಿದ್ದರೇ, ಎಷ್ಟೋ ಆಫ್ರಿಕನ್ ದೇಶಗಳನ್ನ ಬಿಟ್ಟು ಬಿಡುತ್ತೀರಾ ಅಂತಾ ಕೇಳಿದರು. ನಾನು ಉತ್ತರಿಸಿದೆ ನೋಡು ನಾನು ಹೇಳಿದರೆ ತಪ್ಪಾಗುತ್ತದೆ. ಅವರು ಫ್ರೆಂಚನ್ನ ಸೇರಿಸಿಕೊಂಡರೆ ಅವಾಗ ಆಫ್ರಿಕನ್ ನೇಷನ್ಸ್ ನ್ನ ಸೇರಿಸಿಕೊಳ್ಳುತ್ತಾರೆ ಅನ್ನೋದಿಲ್ಲ. ಸಂಪೂರ್ಣವಾಗಿ ಯೂರೋಪ್ ಎಂಟ್ರಿಕ್ ಆಟ್ಯಿಟ್ಯೂಡ್ ಬೆಳಸಿಕೊಂಡಿರೋರು ಯಾವತ್ತು ಆಫ್ರಿಕಾವನ್ನು ಎಂಟರ್ಟ್ರೈನ್ ಮಾಡಲ್ಲ, ಪ್ರಾನ್ಸ್ ಅನ್ನ ಎಂಟರ್ಟ್ರೈನ್ ಮಾಡೋಕೆ ಪ್ರಯತ್ನಿಸುತ್ತಾರೆ. ಆದ್ದರಿಂದ ನಮಗೆ ಭಾಷೆಯಲ್ಲ ಮುಖ್ಯವಾಗೋದು, ಅಸ್ಮಿತೆ ಮುಖ್ಯವಾಗಬೇಕು. ನಿಮ್ಮ ನೆಲದ, ಭಾಷೆಯ, ಜೆಂಡರ್ ನ ಐಡೆಂಟಿಟಿ ಮುಖ್ಯವಾಗಬೇಕು ಅಂತಾ ಹೇಳಿದೆ. ಆಮೇಲೆ ನೈಜೀರಿಯಾದವರು ಕೇಳಿದರು, ಅವರಿಗೆ ಸ್ವತಂತ್ರ್ಯ ಬಂದನಂತರ ಎದ್ದಿರೋ ದೊಡ್ಡ ಚರ್ಚೆ, ಯಾವ ಇಂಗ್ಲೀಷ್ ಬಳಸೋದು ಅಂತಾ. ಅವರ ಬಳಕೆಯ ಎಲ್ಲಾ ವಸ್ತುಗಳು ಅಮೇರಿಕಾದಿಂದ ಬರುತ್ತಿವೆ. ಸ್ಲಾಂಗ್ ಗಳು ಎಲ್ಲಾ ಅಮೇರಿಕಾದ್ದು, ಅವರ ಚಿಂತನೆಗಳು ಇಂಗ್ಲೆಂಡ್ ನಿಂದ ಬರುತ್ತಿವೆ ಹಾಗಾಗಿ ಅವರಿಗೆ ಯಾವ ಇಂಗ್ಲೀಷ್ ಬಳಸಬೇಕೆಂಬ ಚರ್ಚೆ ನಡೆಯುತ್ತಿದೆ. ಇಂಗ್ಲೆಂಡಿನ ಇಂಗ್ಲೀಶ್ ಬಳಸಬೇಕೋ, ಅಮೇರಿಕಾದ ಇಂಗ್ಲಿಷ್ ಮಾತಾಡಬೇಕೋ ಎಂಬ ಚರ್ಚೆ ಇದೆ. ಅದಕ್ಕೆ ನಾನೇಳಿದೆ, ನೋಡಿ ನಮ್ಮ ತರಾನೇ ನೀವು ಬಹುಭಾಷಿಕ, ಬಹುಸಂಸ್ಕೃತಿಗಳ ದೇಶ, ನಮ್ಮಲ್ಲಿ ನೂರೆಂಟು ಭಾಷೆಗಳಿವೆ ನಾವು ನಮ್ಮದೇ ಇಂಗ್ಲಿಷ್ ಒಂದನ್ನ ಮಾಡಿಕೊಂಡಿದ್ದೇವೆ. ಇಂಡಿಯನ್ ಇಂಗ್ಲಿಷ್ ಅಂತಾ. ನಮ್ಮ ಚಟ್ನಿ ಈಗ ಇಂಗ್ಲಿಷ್ ಶಬ್ದಕೋಶವನ್ನು ಸೇರಿದೆ. ಆ ರೀತಿ ನೀವು ನಿಮ್ಮ ಇಂಗ್ಲಿಷ್ ಗಳನ್ನ ಸೃಷ್ಟಿಸಿಕೊಳ್ಳಬೇಕು. ನೈಜೀರಿಯನ್ ಇಂಗ್ಲಿಷ್ ಕಟ್ಟಬೇಕು. ಆ ಭಾಷೆ ಡಾಮಿನೇಟ್ ಭಾಷೆ ಆಗಬಾರದು. ಆ ಇಂಗ್ಲಿಷ್ ದೊಡ್ಡದು, ನೈಜೀರಿಯನ್ ಭಾಷೆಯಲ್ಲಿ ಬರೆಯೋರು ಚಿಕ್ಕೋರು ಎಂಬ ಮನೋಭಾವ ಬೆಳೀಬಾರದು. ಇಂಡಿಯಾದಲ್ಲು ಎಲ್ಲಾ ಭಾಷೆಗಳಲ್ಲಿ ಬರೆಯೋ ಜನರಿದ್ದಾರೆ. ಆದ್ದರಿಂದ ಇಂಗ್ಲಿಷ್ ಅನ್ನೋದು ಮತ್ತೊಂದು ಭಾಷೆಯಾಗಬೇಕೇ ಹೊರತು ಅದು ದೊಡ್ಡ ಭಾಷೆ ಅಲ್ಲ. ಇದರ ನಂತರ ನಾನ್ಯಾವಾಗ ರೇಸ್ ಮತ್ತು ಕಾಸ್ಟ್ ಬಗ್ಗೆ ಮಾತಾಡೋಕೆ ಶುರುಮಾಡಿದೆ. ಶೋಷಣೆಗೆ ಒಳಗಾಗುವವರಿಗಿಂತ ಶೋಷಣೆ ಮಾಡುವ ಸಮುದಾಯ ಈ ಅಸಮಾನತೆಗಳ ಬಗ್ಗೆ ಮಾತಾಡಬೇಕು ಅಂತಾ ಹೇಳಿದಾಗ ಇಡೀ ಕಪ್ಪುಜನ ಎದ್ದು ನನ್ನ ಭುಜ ಹಿಡಿದು ಗೌರವಿಸಿದರು. ನೀವು ಬರೀ ಭಾರತದ ಬಗ್ಗೆ ಮಾತಾಡಲಿಲ್ಲ, ಇಡೀ ಜಗತ್ತಿನ ಅಸಮಾನತೆಗೆ ತುತ್ತಾದವರ ಪರವಾಗಿ ಮಾತಾಡಿದ್ದೀರಿ ಎಂದರು. ಅದು ನನಗೆ ಪ್ರಶಸ್ತಿಗಿಂತ ದೊಡ್ಡ ಕ್ಷಣ ಎನ್ನಿಸಿತು, ಹೃದಯ ತುಂಬಿ ಬಂದಿತು. ಆಮೇಲೆ ಪ್ರಶಸ್ತಿಯ ದಿನ ಕೊನೆಯ ದಿನ, ಪಾಸ್ ಇದ್ದವರು ಮಾತ್ರ ಕಾರ್ಯಕ್ರಮಕ್ಕೆ ಬರುವಂತೆ ಇತ್ತು. ನಾನೇಳಿದೆ ಅಲ್ಲಿ ಅಡುಗೆ ಮನೆಯಲ್ಲಿ ಇರುವವರು, ಮತ್ತು ಇಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಒಳಗೆ ಬರಬೇಕು ಅಂತಾ ಅವರನ್ನು ಕರೆಸಿಕೊಂಡೇ ಅವರೆಲ್ಲ ಬಂದರು, ಅವರಿಗೆ ಆ ಕ್ಷಣ ಬಹಳ ಖುಷಿಯಾಯಿತು.

ನನ್ನ ಭಾಷಣದ ಬಹಳಾ ಮುಖ್ಯ ವಿಷಯ ಅಂದ್ರೆ, ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕೆ ಹೊರತು, ವೈವಿಧ್ಯತೆಯನ್ನ ಅಳಿಸಿ ಏಕತೆಯನ್ನ ಕಟ್ಟಲಾಗಲ್ಲ. ವೈವಿದ್ಯತೆಯನ್ನೊಳಗೊಂಡ ಏಕತೆಯನ್ನು ರೂಪಿಸಿದಾಗ ಬದುಕು ಚೆನ್ನಾಗಿರುತ್ತೆ. ಡೆಮಾಕ್ರಸಿ ಉಳಿಲಿ ವೈವಿಧ್ಯತೆಯಲ್ಲಿ ಸಂಭ್ರಮಿಸೋಣ ಅಂತ ನನ್ನ ಮಾತನ್ನ ನಿಲ್ಲಿಸಿದೆ.

ತಮಾಷೆಯ ವಿಷಯ ಏನು ಅಂದರೆ. ಹಿಂದಿನ ದಿನ ನಾನು ನ್ಯೂರೋಸೆಂಟ್ರಿಕ್‌ ಬಗ್ಗೆ ಮಾತಾಡಿದ್ದೆ. ನಾನು ಆಗ ನಿರ್ಧಾರ ಮಾಡಿದ್ದೆ. (ಪ್ರಶಸ್ತಿ ಕೊಡ್ಲಿ, ಕೊಡದೇ ಇರ್ಲಿ, ಹಾಳಾಗೊ ಹೋಗ್ಲಿ.) ಪ್ರಶಸ್ತಿ ಕೊಡ್ಲಿ, ಕೊಡದೇ ಇರ್ಲಿ, ನಮ್ಮ ಭಾಷೆ, ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ ಮನಸ್ಸು, ಹೃದಯ ಬಿಚ್ಚಿ ಮಾತನಾಡಿದ್ದೆ. ಆ ಮೇಲೆ ಇರ್ವೇನು ಪ್ರಶಸ್ತಿ ಕೊಡಲ್ಲಾ ಅಂತ ನಾನೇ ನಿರ್ಧಾರ ಮಾಡ್ಕೊಂಡಿದ್ದೆ. ಆದ್ರೆ ಅವ್ರು ನನ್ನ ಹೆಸರು ಕರೆದ್ರು. ನನಗೆ ಆಗ ಗೊತ್ತೇ ಆಗ್ಲಿಲ್ಲ.

ಬುಕ್ ಬ್ರಹ್ಮ: ಭಾರತದಿಂದ ಎಷ್ಟು ಜನ ಅಲ್ಲಿಗೆ ಬಂದಿದ್ರು?

ಮಮತಾ ಜಿ.ಸಾಗರ್: ಇಲ್ಲ, ಇಡೀ ಭಾರತದಿಂದ ನಾನು ಒಬ್ಬಳೇ. ಭಾರತಕ್ಕೆ ಮೊದಲ ಸಲ ಇದು ಸಿಕ್ತಾ ಇರೋದು.

ಬುಕ್ ಬ್ರಹ್ಮ: ಈ ಪ್ರಶಸ್ತಿಯಿಂದ ಮಮತಾ ಜಿ. ಸಾಗರ್ ಅವರಿಂದ ಕನ್ನಡ ಸಾಹಿತ್ಯಲೋಕ ಏನನ್ನ ನಿರೀಕ್ಷಿಸಬಹುದು.

ಮಮತಾ ಜಿ.ಸಾಗರ್: ಇನ್ನೂ ಜಾಸ್ತಿ ಬರಿತೀನಿ. ಬರವಣಿಗೆಯನ್ನ ಮುಂದುವರೆಸುತ್ತೇನೆ. ಕವಿತೆ ಅನ್ನುವ ಪ್ರಕಾರ ನನ್ನ ಸಲಕರಣೆ. ಅದನ್ನು ಬಳಸಿ ಹೆಚ್ಚೆಚ್ಚು ಬರೆಯಲು ಪ್ರಯತ್ನಿಸುತ್ತೇನೆ. ಕವಿತೆಗಳ ಕುರಿತಾಗಿ ಕಾರ್ಯಾಗಾರಗಳನ್ನ ಮಾಡ್ತೇನೆ. personal is political ಅಂತ feminism ಹೇಳುತ್ತಲ್ಲಾ ಅದನ್ನ ನಾನು ಕವಿತೆಯಲ್ಲೂ ಹೇಳ್ತೇನೆ. ನಾವು ಬರಹಗಾರಾಗಿ ಎಲ್ಲೋ ಆಕಾಶದಲ್ಲಿ ನಿಂತ್ಕೋಂಡಿದ್ದೇವೆ ಅಂದುಕೊಳ್ಳುವುದಕ್ಕಿಂತ, ನಾವು ಕಾರ್ಪೆಂಟರ್‌ ಅಲ್ಲ, ನಮಗೆ ಟೇಬಲ್‌, ಕುರ್ಚಿ ಮಾಡಕ್ಕೆ ಬರಲ್ಲ. ನಮಗೆ ಬರೋದು ಒಂದೇ ಅಕ್ಷರ ಅದು ನಮ್ಮ ಮಿತಿ ಅಂತ ಅರ್ಥ ಮಾಡ್ಕೊಂಡ್ರೆ ಬದುಕು ಇನ್ನೂ ಸುಲಭ. ಕಲಿಯೋದಕ್ಕೆ ಹೆಚ್ಚು ಅವಕಾಶ ಸಿಗುತ್ತೆ. ಹೆಚ್ಚೆಚ್ಚು ಸೂಕ್ಷ್ಮವಾಗಿರೋದಕ್ಕೆ ಇಷ್ಟಪಡ್ತೇನೆ. ಭಾರತದಲ್ಲಿ ನಮಗೆ ನಮ್ಮ ಹಕ್ಕುಗಳಿವೆ (ರೈಟ್ಸ್‌). ಉಳಿದವರ ರೈಟ್ಸ್‌ಗೆ ಬೆಲೆಕೊಡುವಂತಹ ಮನಸ್ಥಿತಿ ನಮ್ಮಲ್ಲಿ ಬರಬೇಕು.

ಬುಕ್ ಬ್ರಹ್ಮ: ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದೀರಿ, ಕನ್ನಡ ಸಾಹಿತ್ಯವನ್ನು ಆ ನೆಲೆಗೆ ಕೊಂಡೋಯ್ದಿದ್ದೀರಿ ಜನರ ಸ್ಪಂದನೆ ಹೇಗಿದೆ.

ಮಮತಾ ಜಿ.ಸಾಗರ್: ನನ್ನ ಹೆಸರು ಘೋಷಿಸಿದಾಗ ಮೊದಲ ಎರಡು ಸೆಕೆಂಡ್‌ ನನಗೆ ನಂಬಲು ಆಗಲಿಲ್ಲ. ಯಾಕೆಂದರೆ ನಾನು ನನಗೆ ಸಿಗಲ್ಲ ಅಂತ ಮೊದಲೇ ನಿರ್ಧಾರ ಮಾಡಿಕೊಂಡಿದ್ದೆ. ಆದರೆ ಅಲ್ಲಿ ಎಲ್ಲರೂ ಖುಷಿ ಪಟ್ಟರು. ನೈಝೀರಿಯಾದ ಹುಡುಗ - ಹುಡುಗಿಯರು ಓಡಿ ಬಂದು ನನ್ನನ್ನ ತಬ್ಬಿಕೊಂಡರು. ಅಲ್ಲಿ ಕೆಲಸ ಮಾಡುವವರು ತಬ್ಬಿಕೊಂಡು ಸಂಭ್ರಮಿಸಿದರು. ನಂತರ ನಾನು ವೇದಿಕೆ ಹತ್ತಿ ಪ್ರಶಸ್ತಿ ಸ್ವೀಕರಿಸಿದೆ. ಅಲ್ಲಿಂದ ನೋಡುವಾಗ ಕೆಳಗೆ ಸಂತೋಷದಿಂದ ಕುಣಿಯುತ್ತಿದ್ದರು. ಅದನ್ನು ಕಂಡು ಕಣ್ಣಲ್ಲಿ ನೀರು ಬಂತು. ನೈಝೀರಿಯಾದವರು ನನಗಿಂತ ಹೆಚ್ಚು ಖುಷಿ ಪಡ್ತಿದ್ರು. ಆ ಗಳಿಗೆ ಅವರ ಖುಷಿ ನೋಡಿ ಸಾರ್ಥಕ ಆಯ್ತು ಅಂತ ಫೀಲ್‌ ಆಯ್ತು.

ಬುಕ್ ಬ್ರಹ್ಮ: ಇಷ್ಟು ವರ್ಷದ ಸಾಹಿತ್ಯಯಾನದಲ್ಲಿ ನೀವು ನೆನೆಯಬಹುದಾದ ವಿಚಾರಗಳು ಯಾವುವು?

ಮಮತಾ ಜಿ.ಸಾಗರ್: ಹಿಂದಿನ ವಿಚಾರ ನೆನೆಯ ಬೇಕಾದದ್ದು, ಬಾಲ್ಯದಲ್ಲಿ ಅಮ್ಮ ಹೇಳಿದ ವಯಸ್ಸಾದವರು, ಕಷ್ಟದಲ್ಲಿರುವವರು, ತೊಂದರೆಯಲ್ಲಿರುವವರನ್ನು ಕೇಳಿಸಿಕೊಳ್ಳಬೇಕು ಅಂತ. ಇನ್ನು ನಾನು ಬೆಳೆದ ಸಾಗರದ ಪರಿಸರ ಅಲ್ಲಿನ ಜನ. ನಾನು ಬರೆದು ಕಳಿಸಿದ್ದ ಕಥೆ ಇಂಚರ ಎನ್ನುವ ಪುಸ್ತಕದಲ್ಲಿ ಎರಡು ಭಾಗವಾಗಿ ಪ್ರಕಟವಾಗಿತ್ತು. ಆಗ ಖುಷಿಯಾಗಿದ್ದಕ್ಕಿಂತ ಹೆಚ್ಚು ಭಯ ಆಗಿತ್ತು. ಅಮ್ಮ ನನ್ನನ್ನ ಆಗ ಅಟ್ಟದಲ್ಲಿ ಕೂಡಿ ಹಾಕಿದ್ರು, ನಾನು ಗೋಡೆ ಮೇಲೆಲ್ಲಾ ಚಿತ್ರಗಳನ್ನ ಬರೆದಿದ್ದೆ. ನನಗೆ ಚಿತ್ರ ಕಲಾವಿದೆ ಆಗಬೇಕು ಎಂಬ ಆಸೆ ಇತ್ತು. ಆದರೆ ಬರವಣಿಗೆ ಮಾಡ್ತಿದೇನೆ. ಇದು ಒಂದು ರೀತಿಯ ಕಲೆಯೇ ಅಲ್ವೇ. ಮನೆ ಹತ್ತಿರದ ಗಣಪತಿ ದೇವಸ್ಥಾನದಲ್ಲಿ ದಿನಾ ಭಕ್ತಿ ಗೀತೆ ಹಾಕುತ್ತಿದ್ದರು. ಆ ಹಾಡುಗಳು ನನಗೆ ಆಗಲೇ ಬರುತ್ತಿತ್ತು. ಆ ಓರಲ್‌ ಪ್ರಾಕ್ಟೀಸ್‌ ನನ್ನಲ್ಲಿ ಕವಿತೆ ಬರವಣಿಗೆಯನ್ನ ರೂಪಿಸಿತು. ಪ್ರೌಥಮಿಕ ಶಾಲೆಯ ಶಿಕ್ಷಕರಿಂದ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡೆ.

ಇನ್ನು ನೆನೆಯ ಬೇಕಾದ ವಿಚಾರ ಎಂದರೆ. ದಕ್ಷಿಣ ಆಫ್ರಿಕಾದಲ್ಲಿ ಇಳಾಗಾಂಧಿಯನ್ನು ಭೇಟಿಯಾಗಿದ್ದು ಸ್ಮರಣೀಯ ಕ್ಷಣ. ದಕ್ಷಿಣ ಆಫ್ರಿಕಾದಲ್ಲಿ ಚೆಗೆವಾರ ಅವರ ವಿದ್ಯಾರ್ಥಿಗಳು ಸಿಕಿದ್ರು, ಅವರ ಜೊತೆ ಮೋಟಾರ್‌ ಸೈಕಲ್‌ ಡೈರಿ, ಕ್ಯೂಬಾಗೆ ಹೋಗಿದ್ದಾಗ ರೌಲ್ ಕ್ಯಾಸ್ಟ್ರೋ ಆಡಳಿತ ಮಾಡ್ತಿದ್ರು ಅವರ ಮಗಳ ಜೊತೆಗೆ ಕಳೆದದ್ದು, ಎಲಿಫ್ ಶಫಕ್ ಅವರ ಕೃತಿಯನ್ನ ಪ್ರೀತಿಯ ನಲವತ್ತು ನಿಯಮಗಳು ಅಂತ ಅನುವಾದ ಮಾಡಿದ್ದೆ. ಅದರ ಅನುವಾದದ ಎರಡುವರೆ ವರ್ಷ. ಅದೊಂದು ಬಹಳಾ ಒಳ್ಳೆಯ ಗಳಿಗೆ. ಆ ಸಮಯದಲ್ಲಿ ಕುರಾನಿನ ಬೇರೆ ಬೇರೆ ಮಾದರಿಗಳನ್ನ ಓದಿಕೊಂಡೆ. ಅದೊಂದು ಉತ್ತಮ ಕೃತಿ.

ನನ್ನ ಬರವಣಿಗೆಯ ಜೊತೆ ಜೊತೆಗೆ ಬೆಳೆದ ಸ್ನೇಹಿತರು ಜಯಶ್ರೀ ಕಂಬಾರ್‌, ಆರತಿ ಹೆಚ್‌ ಎನ್., ಜಿ. ಎನ್‌. ಮೋಹನ್‌, ಮುಕುಂದ ರಾಜ್‌, ಸಿ ಜಿ ಕೆ. ನಾವೆಲ್ಲಾ ಸೇರಿ ದೇವನೂರು ಮಹಾದೇವ ಅವರ ಕುಸುಮ ಬಾಲೆ ಓದಿದ್ವಿ. ಇದು ಬರೀ ಸಾಹಿತ್ಯದ ಓದಲ್ಲ, ಸಾಮಾಜಿಕ, ರಾಜಕೀಯ ನಿಲುವನ್ನ ಕಂಡುಕೊಂಡಿದ್ದು. ದಲಿತ ಸಾಹಿತ್ಯ ಚಳವಳಿಯ ಹಿನ್ನಲೆ ಒಳಗೆ ಸಾಹಿತ್ಯ ಚಳವಳಿಯ ಬಗ್ಗೆ ಮಾತನಾಡುದಕ್ಕಿಂತ ಅದನ್ನು ಸಾಹಿತ್ಯದ ಮೂಲಕ ಅನುಭವಿಸೋದು ಮಹಾದೇವ ಅವರ ಸಾಹಿತ್ಯ ಮಾಡ್ತು. ನಾನು ಯಾವತ್ತು ದೇವನೂರು ಮಹಾದೇವ ಅವರನ್ನ ದಲಿತ ಲೇಖಕ ಅಂತ ಕರೆಯಲ್ಲ. ಲೇಖಕ ಅವರು, ಅವರ ರಾಜಕೀಯ ದಲಿತ ರಾಜಕೀಯ. ಯಾಂಕಂದ್ರೆ ನಾವು ಮೊದಲು ಅವರನ್ನ ಲೇಖಕ ಅಂತ ಓದಿದಾಗ ಮಾತ್ರ ಅದರಲ್ಲಿರುವ ದಲಿತ ರಾಜಕೀಯ ಅರ್ಥ ಆಗೋದು. ಮಹಾದೇವ ಅವರ ಕೃತಿಗಳು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿತು. ದೇವನೂರು ಬಹಳ ಇಷ್ಟದ ಲೇಖಕ ನನ್ನ ಬೆಳೆಸಿದವರಲ್ಲಿ ಅವರೂ ಒಬ್ಬರು. ಕವಿತೆಯಲ್ಲಿ ಅಡಿಗರು ನನ್ನನ್ನು ಪ್ರಭಾವಿಸಿದರು. ಅಡಿಗರಿಂದ ಕವಿತೆ ಬರೆಯುವ ಕೌಶಲ್ಯ ಕಲಿತೆ. ಇನ್ನು ನಾನು ಓದಿದ ವಿಭಾಗ, ಕನ್ನಡ ಅಧ್ಯಯನ ಕೇಂದ್ರದಲ್ಲಿ ನಾನು ಓದುವಾಗ ಡಿ.ಆರ್. ನಾಗರಾಜ್ ಇದ್ರು, ಕೆವಿಎನ್ ಇದ್ರು,ಕಲ್ಗುಡಿ ಇದ್ರು, ಜಿಎಸ್ ಎಸ್. ಕೆಎನ್ಎಸ್, ಮರುಳಸಿದ್ದಪ್ಪ ಇದ್ರು. ಇವರೆಲ್ಲ ಕೇವಲ ಪಾಠ ಹೇಳಿಕೊಡಲಿಲ್ಲ, ಬದುಕಿನ ಪಾಠವನ್ನು ಕಲಿಸಿದರು. ಅಲ್ಲಿನ ಉಪನ್ಯಾಸಕರ ಪ್ರಭಾವ ನನ್ನನ್ನು ಲೇಖಕಿಯನ್ನಾಗಿಸಿದೆ.

feminism ನನ್ನನ್ನು ಬೆಳೆಸಿತು. feminism ಬಹಳಾ ದೊಡ್ಡ ಕೊಡುಗೆಯನ್ನ ಕೊಟ್ಟಿದೆ. ಮಹಿಳಾ ಸಾಹಿತ್ಯ ಅಂತ ಕರಿತಿದ್ರು ನಂತರ feminism ನಲ್ಲಿ ಬಹಳಾ ವಿಭಾಗ ಇದೆ ಎನ್ನುವುದು ಪರಿಚರಿಸಿತು. ಮಹಿಳೆಯಾಗಿ ರೂಪುಗೊಳ್ಳೋದು ಸಹ ರಾಜಕೀಯ ಅನ್ನೋದನ್ನು ಮಹಿಳಾವಾದ ಅರ್ಥ ಮಾಡಿಸಿತು. ನನ್ನ ಸಾಹಿತ್ಯ ಮಾಡೋದು feminism ಕೆಲಸವನ್ನ.

MORE FEATURES

ಬದುಕನ್ನು ನೋಡುವ ಲೇಖಕಿಯ ಪಕ್ವತೆಯಿಂದಾಗಿ

29-04-2024 ಬೆಂಗಳೂರು

'ಮುಗ್ಧತೆ, ಸರಳತೆ ಮತ್ತು ಬದುಕನ್ನು ನೋಡುವಾಗ ಮೈಗೂಡಿಸಿಕೊಂಡ ಹೆಣ್ತತನ ಭಾವಗಳು ಕೂಡ ಪೂರ್ಣಿಮಾ ಅವರ ಬರಹಗಳನ್ನು ಗಟ...

ಇಂದಿನ ಮಾನವನಿಗಾಗಿ ಹಾಗೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಇರುವ ಕಾಡನ್ನಾದರೂ ಉಳಿಸಿ

29-04-2024 ಬೆಂಗಳೂರು

‘ವನಸಂಪತ್ತು ಮಾನವನಿಗೆ ಪ್ರಕೃತಿದತ್ತ ವರ. ಮರಗಳೇ ಮಾನವನ ಮೊದಲ ಮನೆ. ಆದಿಮಾನವನು ವನ್ಯ ಮೃಗಗಳೊಂದಿಗೆ ಹಾಸುಹೊಕ್ಕ...

ಮೌರ್ಯ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ

29-04-2024 ಬೆಂಗಳೂರು

'ರಾಣಿಯಾಗಿ ಹುಟ್ಟಿದರೂ ಅದೃಷ್ಟಹೀನೆಯಾಗಿ ಬದುಕಿದ ಮುರಾ ಎಂಬಾಕೆಯ ಪುತ್ರ ಚಂದ್ರಗುಪ್ತ ತಂತ್ರ ನಿಪುಣ ಚಾಣಕ್ಯ ಅಥವಾ ...