ವ್ಯವಸ್ಥೆಯ ವಾಸ್ತವತೆಯನ್ನು ಬಿಚ್ಚಿಡುವ ಕಾದಂಬರಿ 'ಉರಿವ ಕೆಂಡದ ಮೇಲೆ'

Date: 12-09-2021

Location: ಧಾರವಾಡ


ಒಂದು ಕಾದಂಬರಿ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಎತ್ತುತ್ತಾ ಹೋದಂತೆ ಆ ಕೃತಿಯು ಇಂದಿನ ವಸ್ತುಸ್ಥಿತಿಗೆ ಬಹುಮುಖ್ಯವಾಗಿರುತ್ತದೆ. ಬಸವರಾಜ ಡೋಣೂರ ಅವರ ಕಾದಂಬರಿ "ಉರಿವ ಕೆಂಡದ ಮೇಲೆ" ಈ ಸಾಲಿಗೆ ಸೇರುವಂತಹ ಕೃತಿಯಾಗಿದ್ದು. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಬೆಳಕು ಚೆಲ್ಲಿದೆ ಎಂದು ಖ್ಯಾತ ಸಾಹಿತಿ ರಾಘವೇಂದ್ರ ಪಾಟೀಲ ಅಭಿಪ್ರಾಯ ಪಟ್ಟರು.

ಧಾರವಾಡ ರಂಗಾಯಣ ಸಾಂಸ್ಕೃತಿಕ ಸಮುಚ್ಚಯದಲ್ಲಿ 12 ಸೆಪ್ಟೆಂಬರ್ 2021ರ ಭಾನುವಾರದಂದು ಮನೋಹರ ಗ್ರಂಥಮಾಲೆ ಪ್ರಕಟಿಸಿದ ಬಸವರಾಜ ಡೋಣೂರ ಅವರ ಕಾದಂಬರಿ " ಉರಿವ ಕೆಂಡದ ಮೇಲೆ" ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯಗಳು ಜನ ಸಾಮಾನ್ಯರಿಗೆ ಸಮರ್ಪಕವಾಗಿರಬೇಕು. ಕೃಷಿ ವಿಶ್ವವಿದ್ಯಾಲಯ ರೈತರಿಗೆ, ಆರೋಗ್ಯ ವಿಶ್ವವಿದ್ಯಾಲಯ ಸಮಾಜಕ್ಕೆ ಹತ್ತಿರವಾಗಿದ್ದು, ಶ್ರೀ ಸಾಮಾನ್ಯರ ಬೇಡಿಕೆಗಳಿಗೆ ಸ್ಪಂದಿಸುವಂತಿರಬೇಕು. ಆದರೆ ಇವೆಲ್ಲವುಗಳನ್ನೂ ಮೀರಿ ಸಮಾಜದ ಜತೆ ಸ್ಪಂದಿಸದೆ ವಿಶ್ವವಿದ್ಯಾಲಯಗಳು ಅಧಿಕಾರಿಶಾಹಿಯಾಗಿ ಮಾರ್ಪಾಡುಗೊಂಡು ರಾಜಕಾರಣದ ಹಾದಿ ಹಿಡಿದಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ ಎಂದರು. ಜೊತೆಗೆ ಈ ವಿಚಾರಗಳನ್ನು ಬಸವರಾಜ ಡೋಣೂರ ಅವರ ಬೃಹತ್ ಕಾದಂಬರಿ ಬಿಂಬಿಸುವಲ್ಲಿ, ಎತ್ತಿ ತೋರಿಸುವಲ್ಲಿ ಯಶಸ್ವಿಯಾಗಿದೆ" ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಡಾ.ವಿಕ್ರಮ ವಿಸಾಜಿಯವರು ಮಾತನಾಡಿ, 'ಈ ಕಾದಂಬರಿ ಒಬ್ಬ ವ್ಯಕ್ತಿಯ ಕತೆ, ಒಂದು ವ್ಯವಸ್ಥೆಯ ಕತೆ, ಒಂದು ಕಾಲದ ಕತೆಯಾಗಿದ್ದು, ವಾಸ್ತವದ ಎಳೆಯನ್ನು ಬಿಚ್ಚಿಡುತ್ತಾ, ಬದುಕಿನ ಕಾಲಘಟ್ಟವನ್ನು ಕುರಿತು ಬಿಂಬಿಸುತ್ತದೆ. ವ್ಯಕ್ತಿಯ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ವಿಶಾಲವಾದ ದೃಷ್ಟಿಕೋನ ಕಟ್ಟಿಕೊಡಲು ಬೃಹತ್ ಕಾದಂಬರಿಗಳು ಅವಶ್ಯಕವಾಗಿದ್ದು. ಡೋಣೂರ ಅವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿಯ ಪಾತ್ರಗಳಲ್ಲಿ ವ್ಯಕ್ತವಾಗಿರುವ ತಳಮಳ, ಸಂಕಟ ನಮ್ಮೆಲ್ಲರವು ಎನಿಸುವಷ್ಟು ಸಹಜವಾಗಿ ಕೃತಿ ರಚನೆಯಾಗಿದೆ. ಪೂರ್ತಿಯಾಗಿ ಕಾದಂಬರಿ ಓದಿ ಮುಗಿಸಿದ ಮೇಲೆ ನಮ್ಮಲ್ಲೂ ಒಂದು ತೆರನಾದ ಅನಾಥ ಪ್ರಜ್ಞೆ ಕಾಡುತ್ತದೆ. ಎಲ್ಲೆಲ್ಲಿ ಸಮಸ್ಯೆಗಳ ನಿವಾರಣೆಯಾಗಬೇಕೋ ಅಲ್ಲೆಲ್ಲ ಸಮಸ್ಯೆಗಳು ದುಪ್ಪಟ್ಟಾಗಿ ಪರಿವರ್ತನೆಗೊಳ್ಳುತ್ತವೆ. ಓದಲೇಬೇಕಾದ ಬೃಹತ್ ಕಾದಂಬರಿ ನೀಡಿದ್ದಕ್ಕೆ ಲೇಖಕ ಬಸವರಾಜ ಡೋಣೂರ ಅಭಿನಂದನಾರ್ಹರು' ಎಂದರು.

ಲೇಖಕ ಬಸವರಾಜ ಡೋಣೂರ ಮಾತನಾಡಿ 'ವಿಶ್ವವಿದ್ಯಾಲಯ ಜಗತ್ತು ಒಂದು ಆತಂಕದ ಜಗತ್ತಾಗಿದ್ದು, ಎಲ್ಲಿಯವರೆಗೆ ಕಾಲೇಜಿನಲ್ಲಿ ಇರುತ್ತೇವೆಯೋ ಅಲ್ಲಿಯವರೆಗೆ ಸಂತೋಷದಿಂದ ಇರುತ್ತೇವೆ. ಒಮ್ಮೆ ನೀವು ವಿಶ್ವವಿದ್ಯಾಲಯದಿಂದ ಹೊರಗೆ ಬಂದರೆ ರಾಜಕಾರಣವೂ ನಿಮ್ಮನ್ನು ಹಿಡಿಯುತ್ತದೆ. ಅಥವಾ ಯಾರೋ ಮಾಡುವ ರಾಜಕಾರಣಕ್ಕೆ ನೀವು ಬಲಿಯಾಗುತ್ತೀರಿ. ವೃತ್ತಿಪರ ರಾಜಕಾರಣಿಗಳು ಈ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿಗಿಂತ ಎಷ್ಟೋ ಒಳ್ಳೆಯವರುಗಳು. ಈಗಲೂ ನಮ್ಮ ವಿಶ್ವವಿದ್ಯಾಲಯದಲ್ಲಿ ವಂಚನೆ, ಸುಳ್ಳು, ಲಂಚ, ಮೋಸ ಇತ್ಯಾದಿ ಎಲ್ಲವೂ ಇದೆ. ವಿಶ್ವವಿದ್ಯಾಲಯದ ಮುಖೇನ ಹೇಗೆ ಸಮೃದ್ಧ ಸಮಾಜವನ್ನು ರೂಪಿಸಬಹುದು ಎಂದು ಯಾರು ಯೋಚನೆ ಮಾಡುವುದಿಲ್ಲ. ಕಾನೂನಿನ ಪಾಲನೆಯನ್ನು ಮಾಡದೇ ಹತ್ತಾರು ತೊಂದರೆಗಳಿಗೆ ಸಿಕ್ಕಿಕೊಳ್ಳುತ್ತಾ ಕ್ಯಾಂಪಸ್ ವಾತಾವರಣವೇ ಕೆಟ್ಟಿದೆ. ಇದನ್ನು ಪ್ರತ್ಯಕ್ಷ ಕಂಡು, ಅನುಭವಿಸಿ ಬರೆದ ಕತೆ ಇದಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಜೊತೆಗೆ ಕೃತಿಯನ್ನು ಪ್ರಕಟಿಸಿದ ಮನೋಹರ ಗ್ರಂಥಮಾಲೆಗೆ ಧನ್ಯವಾದಗಳನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹರ್ಷ ಡಂಬಳ ಅವರು ಮಾತನಾಡಿ, 'ಈ ಕಾದಂಬರಿ ಒಂದು ವಿಶ್ವವಿದ್ಯಾಲಯದ ಕತೆ ಹೇಳುವುದಿಲ್ಲ ಬದಲು ಇಂದಿನ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಮಾನಗಳ ಕೆಟ್ಟ ಪರಿಸ್ಥಿಯನ್ನು ಎತ್ತಿ ತೋರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ನಡೆಯುವ ಎಲ್ಲಾ ತುಮುಲಗಳು ಪಾತ್ರಗಳ ಮೂಲಕ ಹೊರಬರುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿ ಏನನ್ನು ಹೇಳಲು ಹೊರಟಿದೆ ಎಂಬುದನ್ನು ತಿಳಿಸಲು ಸ್ವಪ್ನಗಳು ಸಹಕಾರಿಯಾಗುತ್ತದೆ. ಕಾದಂಬರಿಯೊಳಗೆ ಚರ್ಚೆಯಾಗುವ ವಿಷಯಗಳು, ಪ್ರಶ್ನೆಗಳು, ತುಮುಲಗಳು ಎಲ್ಲಾ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಇವೆ. ಅಧಿಕಾರದಲ್ಲಿ ಇರುವ ರಾಜಕೀಯ ಪಕ್ಷಕ್ಕೆ ಉಪಯೋಗ ಬೀಳುವ ವ್ಯಕ್ತಿ ಕುಲಪತಿಗಳಾಗಿ ನೇಮಕವಾಗುತ್ತಾರೆ. ಇಂಥ ಅಸಹ್ಯ, ಅಸಹಜ, ಭ್ರಷ್ಟ ವ್ಯವಸ್ಥೆಯಲ್ಲಿ ನಿಷ್ಠಾವಂತರಿಗೆ ಆಗುವ ಅನ್ಯಾಯಗಳು ಇಲ್ಲಿ ಭಿನ್ನವಾಗಿ ಮೂಡಿಬಂದಿದೆ ಎಂದು ಹೇಳಿದರು.

ಡಾ.ರಮಾಕಾಂತ ಜೋಶಿ ಅವರು ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ಜಿ.ಸಿ ತಲ್ಲೂರ, ಡಿ.ಜಿ. ಎಮ್. ನಾಡಗೌಡ, ರಾಜಶೇಖರ ಜಾಡರ, ಅರವಿಂದ ಕುಲಕರ್ಣಿ, ಸಮೀರ ಜೋಶಿ, ರಮೇಶ ಪರ್ವತೀಕರ, ವಿಷಯಾ ಜೇವೂರ, ವಿಶ್ವನಾಥ ಕೋಳಿವಾಡ, ಡಿ.ಎಮ್. ಹಿರೇಮಠ, ಶಂಕರ ಹಲಗತ್ತಿ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಡಾ. ಹ ವೆಂ ಕಾಖಂಡಿಕಿ ಕಾರ್ಯಕ್ರಮ ನಿರ್ವಹಣೆ ಮಾಡಿ, ವಂದನಾರ್ಪಣೆ ಮಾಡಿದರು.

 

MORE NEWS

ಡಾ.ಸಿದ್ದಣ್ಣ ಉತ್ನಾಳ ಪುಸ್ತಕ ಪ್ರಶ...

23-09-2021 ಬೆಂಗಳೂರು

ವಿಜಯಪುರದ ಕನ್ನಡ ಪುಸ್ತಕ ಪರಿಷತ್ತಿನ ಅಡಿಯಲ್ಲಿ ಕರ್ನಾಟಕ ಸರ್ಕಾರದ ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪುರಸ...

ರಾಧಾದೇವಿ ಅವರ ಕಾದಂಬರಿ ಕುರಿತ ’ಸೆ...

23-09-2021 ಧಾರವಾಡ

ಲೇಖಕಿ ಹೆಚ್. ಜಿ. ರಾಧಾದೇವಿ ವ್ಯಕ್ತಿತ್ವ ಬರಹ ಅಭಿಮಾನಿ ಬಳಗವು ರಾಧಾದೇವಿ ಅವರ ಕಾದಂಬರಿಯ ಕುರಿತು ಇತ್ತೀಚೆಗೆ ಹಮ್ಮಿಕೊ...

ಕನಕದಾಸ ಅಧ್ಯಯನ ಕೇಂದ್ರಕ್ಕೆ ಅಧಿಕಾ...

22-09-2021 ಬೆಂಗಳೂರು

ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ಅಧಿಕಾರೇತರ ನಾಮ...