ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

Date: 04-09-2023

Location: ಬೆಂಗಳೂರು


“ಜೂನ್ 21 ವಿಶ್ವ ಯೋಗ ದಿನವೆಂದು ಸರ್ಕಾರ ಘೋಷಿಸಿದೆ, ಈ ಯೋಗವನ್ನು ಸ್ಮರಿಸಲು ಎಲ್ಲರಲ್ಲೂ ಒಂದು ಧನಾತ್ಮಕ ಚಿಂತನೆ ಕಡೆಗೆ ವಾಲಿಸಲು ಈ ಜೂನ್ 21 ಆಯ್ದುಕೊಳ್ಳುವ ಮೂಲಕ ಯೋಗ ದಿನ ಆಚರಿಸಲಾಗುತ್ತಿದೆ. ಯೋಗವೆಂದರೆ ಒಂದೇ ದಿನದ ಮಟ್ಟಿಗೆ ಅಲ್ಲ, ನಮ್ಮ ದೇಹದಲ್ಲಿ ಕೊನೆ ಉಸಿರು ಇರುವ ತನಕ ಮಾಡಬಹುದಾದ ಒಂದು ಮಹತ್ವದ ಸಾಧನೆವಾಗಿದೆ,'' ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು ತಮ್ಮ ''ಯೋಗ...ಯೋಗಾ'' ಮೊದಲ ಸಂಚಿಕೆಯ ಅಂಕಣದಲ್ಲಿ ''ಯೋಗದ ಅರ್ಥ ಹಾಗೂ ಪ್ರಯೋಜನವನ್ನು'' ತಿಳಿಸಿದ್ದಾರೆ.

`ಯೋಗ'ವೆಂಬುದು ಅನಾದಿಕಾಲದಿಂದ ಪ್ರಯೋಜನ ಪ್ರಮಾಣವಾದದರಿಂದ ಕೂಡಿ ಸೂತ್ರಬದ್ಧವಾಗಿ ನಮಗೆ ಇಳಿದು ಬಂದ ವಿಜ್ಞಾನಶಾಸ್ತ್ರ. ಸಾವಿರಾರು ವರ್ಷಗಳ ಹಿಂದೆ ಗ್ರಥಿತವಾದ ಈ ಶಾಸ್ತ್ರವು ಮಾನವನ ಪರಿಪೂರ್ಣತೆಗೆ ಸಾಧಕವಾದ ಶಾರೀರಿಕ, ನೈತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಅವನ ಏಳಿಗೆಯನ್ನು ಗಳಿಸಿಕೊಡುವಂಥದು.

“ಯೋಗ” ಎನ್ನುವ ಪದ ಸಂಸ್ಕೃತ ಮೂಲಧಾತುವಾದ “ಯುಜ್" ಎನ್ನುವುದರಿಂದ ಬಂದಿದ್ದು. ಬಂಧಿಸು, ಕೂಡಿಸು, ನೊಗಕ್ಕೆ ಕಟ್ಟು, ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು, ಉಪಯೋಗಿಸು ಮತ್ತು ಆಸಕ್ತಿವಹಿಸು ಎನ್ನುವ ಅರ್ಥಗಳನ್ನು ಕೊಡುತ್ತದೆ. ಸಂಯೋಜನೆ ಅಥವಾ ಸಂಸರ್ಗ ಎನ್ನುವ ಅರ್ಥವೂ ಇದಕ್ಕೆ ಇದೆ.

ಆತ್ಮದರ್ಶನ....

ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವುದು ಅಂತಲೆ ಅರ್ಥ. ಯೋಗವು ನಮ್ಮೊಳಗಿನ ಅಂತರಂಗವನ್ನು ಸಂಪರ್ಕಿಸುವ ವಾಹಕ. ನಿತ್ಯ ನಮ್ಮ ಜೀವನಕ್ಕೆ ಬೇಕಾಗುವ ಅತ್ಯುತ್ತಮ ಸಾಮರ್ಥ್ಯ ಸ್ಪುರಿಸುವಂತ ನಿಗೂಢ ಶಕ್ತಿ ಸೆಲೆ ಈ ಯೋಗ.

ಮಾನವನ ವ್ಯಕ್ತಿತ್ವ - ವಿಕಸನ - ಸಂಯಮ ಮತ್ತು ಸಮತೋಲನ ಭರವಸೆಯನ್ನು ಮೂಡಿಸುತ್ತದೆ. ಇಂದ್ರಿಯಗಳ ಜೊತೆಗೆ ಚಿತ್ತ ಮನಸ್ಸನ್ನೂ ಸಹ ಹತೋಟಿಗೆ ತರುವಂತದ್ದು ಈ ಯೋಗ. ಇದನ್ನು ನಾವು ಆಳವಾಗಿ ಅರಿಯುವುದರಿಂದ ನಮ್ಮನ್ನು ನಾವು ನಿಯಂತ್ರಣಿಸುವುದನ್ನು ಕಲಿಯಬಹುದು. ಮಾನಸಿಕ ಒತ್ತಡದ ಜೀವನದಲ್ಲಿ ಯೋಗ ಶಾಂತತೆಯನ್ನು ಒದಗಿಸುತ್ತದೆ. ಈ ಚಂಚಲತೆಯ ಜಗತ್ತಿನಲ್ಲಿ ಗಮನ ಸ್ಥಿರವಾಗಿಸಿ ಏಕಾಗ್ರತೆಯನ್ನು ಕಲಿಸುತ್ತದೆ. ಆತ್ಮ ಸ್ಥೈರ್ಯ ಮತ್ತು ದೇಹದ ಭರವಸೆಯನ್ನು ಹಾಗೂ ಆರೋಗ್ಯದಿಂದ ಇರಲು ಶಿಸ್ತುಬದ್ಧವಾದ ಭಯರಹಿತ ಮನಸ್ಸನ್ನು ಈ ಯೋಗ ಸೃಷ್ಟಿಸುತ್ತದೆ.

ಯೋಗವು ಜ್ಞಾನದ ತಳಹದಿಯೆ ಎನ್ನಬಹುದು. ಇಂದ್ರಿಯಗಳ ನಿಯಂತ್ರಿಸುವ ಉತ್ತಮ ತಂತ್ರವೇ ಯೋಗ. ಸಮಗ್ರ ಪರಿಹಾರ ಮಾರ್ಗಗಳಾದ ಭೌತಿಕ, ಮಾನಸಿಕ ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆ ಹಾಗೂ ಅವರ ವ್ಯಕ್ತಿತ್ವದ ಸಮತೋಲನಗಳನ್ನು ಯೋಗದಿಂದ ಸಾಧಿಸಬಹುದಾಗಿದೆ. ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಮನಸ್ಸಿನ ಆಳದಲ್ಲಿ ಇಳಿಸಿಕೊಂಡು ಪರಿಹಾರವನ್ನು ಒದಗಿಸುವಲ್ಲಿ ಯೋಗ ಸಹಕಾರಿಯಾಗುತ್ತದೆ.

ಆರೋಗ್ಯದ ಸಮಸ್ಯೆಗಳನ್ನು, ಉಸಿರಾಟದ ತೊಂದರೆ, ಮನಸಿನ ಚಿಂತನೆಗಳನ್ನು ದೂರ ಮಾಡಿ ಒಳ್ಳೆಯ ಭಾವನೆಗಳನ್ನು ಮತ್ತು ಸ್ಪಷ್ಟ ಏಕಾಗ್ರತೆಯನ್ನು - ಸಕಾಲ ನೆನಪಿನ ಶಕ್ತಿಯನ್ನು ಒದಗಿಸುವ ಕೆಲಸ ಈ ಯೋಗದಿಂದ ಸಾಧಿಸಬಹುದಾಗಿದೆ.

ಭವ್ಯವಾದ ನಮ್ಮ ಈ ಭಾರತದಲ್ಲಿ ೨೦ಸಾವಿರ ವರ್ಷಗಳಿಂದಲೂ ಈ ಯೋಗ ಚಾಲ್ತಿಯಲ್ಲಿದೆ. ಪತಂಜಲಿ ಮಹರ್ಷಿಗಳಿಂದ ಹಿಡಿದು ಕಾಲಾನುಕ್ರಮವಾಗಿ ನಮ್ಮ ಪೀಳಿಗೆಗೆ ಬಂದು ತಲುಪಿದೆ. ಯೋಗದಲ್ಲಿ ಕೆಲವೊಂದಿಷ್ಟು ರೀತಿ ರಿವಾಜು - ನೀತಿಗಳಿವೆ. ಅದರಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಹಾರ, ಧಾರಣ, ಧ್ಯಾನ, ಸಮಾಧಿ ಎಂದು ಎಂಟು ರೀತಿಯಲ್ಲಿ ವಿಂಗಡಿಸಲಾಗಿದೆ, ಈ ಎಂಟು ಅಂಶಗಳನ್ನು ಪಾಲಿಸಿ ಗೆದ್ದವನು ಸಮಾಧಿ ಸ್ಥಿತಿಯನ್ನು ತಲುಪಬಹುದಾಗಿದೆ.

ಜೂನ್ 21 ವಿಶ್ವ ಯೋಗ ದಿನವೆಂದು ಸರ್ಕಾರ ಘೋಷಿಸಿದೆ, ಈ ಯೋಗವನ್ನು ಸ್ಮರಿಸಲು ಎಲ್ಲರಲ್ಲೂ ಒಂದು ಧನಾತ್ಮಕ ಚಿಂತನೆ ಕಡೆಗೆ ವಾಲಿಸಲು ಈ ಜೂನ್ 21 ಆಯ್ದುಕೊಳ್ಳುವ ಮೂಲಕ ಯೋಗ ದಿನ ಆಚರಿಸಲಾಗುತ್ತಿದೆ. ಯೋಗವೆಂದರೆ ಒಂದೇ ದಿನದ ಮಟ್ಟಿಗೆ ಅಲ್ಲ, ನಮ್ಮ ದೇಹದಲ್ಲಿ ಕೊನೆ ಉಸಿರು ಇರುವ ತನಕ ಮಾಡಬಹುದಾದ ಒಂದು ಮಹತ್ವದ ಸಾಧನೆವಾಗಿದೆ.

ಯೋಗಾಸನ ಮಾಡುವವರು ಅನುಸರಿಸಬೇಕಾದ ಕೆಲವು ಟಿಪ್ಸ್ ಗಳು:

  1. ನೈರ್ಮಲ್ಯ - ಆಸನಗಳನ್ನು ಅಭ್ಯಾಸ ಮಾಡುವ ಮುನ್ನ ಮಲಮೂತ್ರಕೋಶಗಳನ್ನು ಬರಿದು ಮಾಡಿರಬೇಕು.
  2. ಸ್ನಾನ - ಮೈತೊಳೆದುಕೊಂಡು ಆಸನಭ್ಯಾಸ ಮಾಡಿದ್ರೆ ಅಡ್ಡಿ ಇಲ್ಲ. ಯೋಗ ಮಾಡುವುದು ಮುಗಿದ ಮೇಲೆಯೂ ಮೈ ಬೆವರಿಟ್ಟು ಅಂಟಾಗಿರುವುದರಿಂದ ಸುಮಾರು ಹತ್ತು - ಹದಿನೈದು ನಿಮಿಷಗಳ ನಂತರ ಮೈಯುಜ್ಜಿ ಸ್ನಾನ ಮಾಡುವುದು ಒಳ್ಳೆಯದು.
  3. ಆಹಾರ - ಖಾಲಿ ಹೊಟ್ಟೆಯಲ್ಲಿಯೇ ಆಸನಭ್ಯಾಸಗಳನ್ನು ಮಾಡುವುದು ಉತ್ತಮ. ಹಾಗೇ ಖಾಲಿ ಹೊಟ್ಟೆಯಲ್ಲಿ ಕಷ್ಟವಾದಲ್ಲಿ ಕಾಫಿ - ಟೀ ಅಥವಾ ಹಾಲು ಕುಡಿದು ನಂತರ ಒಂದೈದು ನಿಮಿಷ ಬಿಟ್ಟು ಅಭ್ಯಾಸ ಮಾಡಬೇಕು. ಹೊಟ್ಟೆ ತುಂಬಾ ಊಟವಾಗಿದ್ದರೆ ನಾಲ್ಕು ತಾಸುಗಳ ಕಾಲ ಮಾಡಕೂಡದು. ಆಸನಭ್ಯಾಸ ಮುಗಿದಮೇಲೆ ಹಸಿವಾದಂತೆ ಫೀಲ್ ಆದರೆ ಅರ್ಧ ತಾಸನ್ನಾದರೂ ಬಿಟ್ಟು ತಿನ್ನಬೇಕು.
  4. ಯೋಗಾಸನ ಮಾಡಲು ಒಳ್ಳೆಯ ಸಮಯ - ಬೆಳಗಿನ ಮುಂಜಾನೆ ಮತ್ತು ಸಾಯಂಕಾಲದ ಸಮಯ ಅತ್ಯುತ್ತಮವಾದದ್ದು. ಬಿಸಿಲಿನಲ್ಲಿ ತಿರುಗಾಡಿದ ಮೇಲೆ ಆಸನಭ್ಯಾಸಕ್ಕೆ ತೊಡಗಬಾರದು.
  5. ಸ್ಥಳ - ಸ್ವಚ್ಛವಾದ, ಚೆನ್ನಾಗಿ ಗಾಳಿಯಾಡುವ ಮತ್ತು ನಿಶ್ಯಬ್ದವಾದ ಸ್ಥಳ ಆಸನಗಳು ಅಭ್ಯಾಸಕ್ಕೆ ಒಳ್ಳೆಯದು.
  6. ಉಸಿರಾಟ - ಆಸನಭ್ಯಾಸದ ಸಮಯದಲ್ಲಿ ಉಸಿರಾಟವು ಮೂಗಿನ ಹೊಳ್ಳೆಗಳಲ್ಲಿ ನಡೆಯಬೇಕೇ ವಿನಃ ಬಾಯಿ ಮೂಲಕ ಉಸಿರಾಡಬಾರದು.
  7. ಶವಾಸನ - ಆಸನಭ್ಯಾಸ ಮುಗಿದ ಮೇಲೆ ಹತ್ತು - ಹದಿನೈದು ನಿಮಿಷಗಳ ಕಾಲವಾದರೂ ಶವಾಸನದಲ್ಲಿ ಮಲಗಬೇಕು. ಇದರಿಂದ ಆಯಾಸ - ಬಳಲಿಕೆ ದೂರವಾಗಿ ರಿಲ್ಯಾಕ್ಸ್ ಫೀಲ್ ಬರುತ್ತದೆ. ಜೊತೆಗೆ ಮನಸ್ಸು ಪ್ರಫುಲ್ಲವಾಗಿ ಲವಲವಿಕೆಯಿಂದ ಕೂಡುತ್ತದೆ‌.
  8. ಆಸನ ಮತ್ತು ಪ್ರಾಣಯಾಮ - ಬೆಳಿಗ್ಗೆ ಮಾಡುವುದಾದರೆ ಯಾವುದೇ ಆಸನ ಮಾಡುವ ಮೊದಲೇ ಪ್ರಾಣಯಾಮ ಮಾಡಿ ನಂತರ ಒಂದೈದು ನಿಮಿಷ ಶವಾಸನ ಮಾಡಿ ನಂತರ ಆಸನಗಳನ್ನು ಮಾಡಬೇಕು. ಸಂಜೆಗೆ ಮಾಡುವುದಾದರೆ ಆಸನಭ್ಯಾಸ ಮುಗಿದ ಅರ್ಧ ತಾಸಿನ ನಂತರ ಪ್ರಾಣಾಯಾಮ ಮಾಡುವುದು ಉತ್ತಮ.

ಎಲ್ಲರೂ ಸಹ ಯೋಗಭ್ಯಾಸದ ಮುಖಾಂತರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದಿನ ನಿತ್ಯ ಎಲ್ಲಾ ಒತ್ತಡಗಳೂ ಇದ್ದಿದ್ದೆ. ಆದರೆ ಎಲ್ಲದರ ಜೊತೆ ಜೊತೆಗೆ ನಾವು ನಮ್ಮೊಳಗಿನ ನಮಗೆ ನಮ್ಮ ಸಮಯ ಮತ್ತು ಸಮಧಾನವನ್ನು ನೀಡಬೇಕೆಂದರೆ ಇಂತಹದೊಂದು ಹವ್ಯಾಸ ತುಂಬಾ ತುರ್ತು. ಇತ್ತೀಚೆಗೆ ಯುವ ಪೀಳಿಗೆ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಒಳ್ಳೆಯ ಕ್ರಮಬದ್ಧವಾದ ಆಹಾರ ಪದ್ದತಿ ಇಲ್ಲ. ಹೊಸ ಜಗತ್ತಿನ ಅವಸರಕ್ಕೆ ಹೊಂದಿಕೊಳ್ಳುವುದು ತಪ್ಪಲ್ಲ ಅದರಲ್ಲಿ ನಮ್ಮ ಆರೋಗ್ಯದ ಕಡೆ ಗಮನಹರಿಸುವುದು ಸಹ ತುಂಬಾ ಅಗತ್ಯ. ಬೊಜ್ಜು, ಕೂದಲು ಉದುರುವಿಕೆ, ತೂಕದ ಹೆಚ್ಚಳ, ಥೈರಾಯ್ಡ್, ಹೆಣ್ಣು ಮಕ್ಕಳ ಪಿರಿಯಡ್ಸ್ ಸಮಸ್ಯೆ, ಉಸಿರಾಟದ ತೊಂದರೆ, ಸಣ್ಣ ವಯಸ್ಸಿಗೆ ಹೃದಯ ಸಂಬಂಧಿತ ಕಾಯಿಲೆ ಹೀಗೆ ಹಲವಾರು ಸಮಸ್ಯೆಗಳ ಜೊತೆ ಜೊತೆಗೆ ಈಗಿನ ಜನರೇಷನ್ ಅಡಿಕ್ಟಾದ ಧೂಮಪಾನ, ಮದ್ಯಪಾನ ಎಲ್ಲವೂ ಆರೋಗ್ಯವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಆಳುತ್ತಿದೆ. ನಾವು ನಮ್ಮ ಮನಸ್ಸು ಹೇಳಿದಂತೆ ಕುಣಿಯುತ್ತಿದ್ದೇವೆ ವಿನಃ ನಾವು ಮನಸ್ಸನ್ನು ಕುಣಿಸಲು ಸಮರ್ಥರಾಗಿಲ್ಲ. ನಾವು ನಮ್ಮೊಳಗಿನ ಆತ್ಮಸಂಧಾನಕ್ಕೆ ಸಜ್ಜಾಗೋಣ. ಒಂದೇ ದಿನಕ್ಕೆ ಎಲ್ಲವೂ ಆಗೋದಿಲ್ಲ. ದಿನನಿತ್ಯವೂ ಸಣ್ಣ ಬದಲಾವಣೆ ನಮ್ಮೊಳಗೆ ರೂಢಿಸಿಕೊಂಡು ಬದುಕನ್ನು ಇನ್ನೂ ಸದೃಢ ಮತ್ತು ಸಮೃದ್ಧಿಯಾಗಿಸೋಣ. ಚೆಂದ ಬದುಕೋಣ.

ಮುಂದಿನ ದಿನಗಳಲ್ಲಿ ಬರೆಯುವ ಅಂಕಣಗಳಲ್ಲಿ ಯೋಗದ ಬಗ್ಗೆ ಮತ್ತು ಆಸನ ಹಾಗೂ ಅದನ್ನು ಮಾಡುವ ವಿಧಾನ ಜೊತೆ ಜೊತೆಗೆ ಅದರಿಂದಾಗುವ ಪ್ರಯೋಜನಗಳು ಮತ್ತು ಯಾವ ಕಾಯಿಲೆಗೆ ಯಾವ ಆಸನ ಸೂಕ್ತವಾದದ್ದು ಎಲ್ಲವನ್ನೂ ಇನ್ನೂ ತುಂಬಾ ಅಚ್ಚುಕಟ್ಟಾಗಿ, ಸರಳವಾಗಿ ನಿಮಗೆ ಕನ್ನಡದಲ್ಲಿ ಒದಗಿಸುತ್ತೇನೆ. ಧನ್ಯವಾದಗಳು.

ಚೈತ್ರಾ ಹಂಪಿನಕಟ್ಟಿ
chaitrah8989@gmail.com

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...