Article

ಚರ್ಚೆಗೊಳಪಡಬಲ್ಲ ಸಂಶೋಧನಾ ಕೃತಿ ‘ಹಾಡು ಕಲಿಸಿದ ಹರ’

ಸುರೇಶ್ ನಾಗಲಮಡಿಕೆಯವರು ನಮ್ಮ ನಡುವಿನ ಸೂಕ್ಷ್ಮ ಸಂವೇದನೆಗಳ ಯುವ ವಿಮರ್ಶಕರು. ಅವರು ಇತ್ತೀಚಿಗೆ ಹೊರ ತಂದಿರುವ ಜನಪದ ಮಹಾಕಾವ್ಯಗಳ ಅಧ್ಯಯನದ ಕುರಿತಾದ ‘ಹಾಡು ಕಲಿಸಿದ ಹರ’ ಕೃತಿಯು ಚರ್ಚೆಗೊಳಪಡಬಲ್ಲ ವಿಶಿಷ್ಟವಾದ ಸಂಶೋಧನಾ ಗ್ರಂಥವಾಗಿದೆ. ಈ ಕೃತಿಯಲ್ಲಿ ಅವರು ಜನಪದ ದೀರ್ಘಕಾವ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಅಧ್ಯಯನ ನಡೆಸಿದರೂ ಸಹ ಈ ಅಧ್ಯಯನವು ಸಾಹಿತ್ಯಿಕ ನೆಲೆಗಳನ್ನು ಹೆಚ್ಚು ಆಧರಿಸಿದ್ದು, ಇನ್ನಿತರ ಶಿಸ್ತುಗಳನ್ನು ಅದಕ್ಕೆ ಪೂರಕವಾಗಿ ಬಳಸಿಕೊಂಡು ಅನೇಕ ಒಳನೋಟಗಳನ್ನು ಶೋಧಿಸುವಲ್ಲಿ ಸಫಲರಾಗಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್ ನಾಗಲಮಡಿಕೆಯವರು ಜನಪದ ಮಹಾಕಾವ್ಯಗಳನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಹಲವಾರು ಕಡೆ ಕ್ಷೇತ್ರಕಾರ್ಯವನ್ನು ಮಾಡಿ, ವಿವರಗಳನ್ನು ಮತ್ತು ಕಥೆಗಳನ್ನು ಸಂಗ್ರಹಿಸಿ, ಅಧ್ಯಯನಕ್ಕೆ ಖಚಿತತೆಯನ್ನು ತರುವ ನಿಟ್ಟಿನಲ್ಲಿ ಅವುಗಳನ್ನು ಸಂದರ್ಭೋಚಿತವಾಗಿ ಆಧಾರ ಸಹಿತ ಬಳಸಿಕೊಂಡಿದ್ದಾರೆ. ಈ ಕೃತಿಯು ವಿಸ್ತಾರವಾದ ಐದು ಅಧ್ಯಾಯಗಳನ್ನು ಹೊಂದಿದ್ದು, ಪಂಪ ಪೂರ್ವದಿಂದ ಪ್ರಾರಂಭಿಸಿ ಆಧುನಿಕ ಕನ್ನಡ ಕಾವ್ಯದವರೆಗೂ ಯಾವುದನ್ನು ಶಾಸ್ತ್ರೀಯ ಪಠ್ಯಗಳು ಎಂದು ಕರೆಯುತ್ತಾರೊ, ಅಂದರೆ ಶಿಷ್ಟ ಸಾಹಿತ್ಯದ ಹಿನ್ನಲೆಯಲ್ಲಿ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ನೆಲೆಗಳು, ಆಕೃತಿಗಳು ಮತ್ತು ಆಶಯಗಳ ಕುರಿತಾಗಿ ಅಧ್ಯಯನದ ಸಿದ್ಧ ಮಾದರಿಗಳನ್ನು ಮೀರಿ ಹಲವಾರು ನೆಲೆಗಳಲ್ಲಿ ಶೋಧಿಸಲಾಗಿದೆ.

 ಸುರೇಶ್ ನಾಗಲಮಡಿಕೆಯವರು ಶ್ರೀವಿಜಯನ ‘ಕವಿರಾಜಮಾರ್ಗ’ ಗ್ರಂಥದಲ್ಲಿ ಜನಪದ ಚರಿತ್ರೆಯನ್ನು ಲಿಪಿಬದ್ಧ ಪಠ್ಯಕ್ರಮದಲ್ಲಿ ದಾಖಲಾಗುವಂತೆ ಕಟ್ಟಿಕೊಟ್ಟಿರುವ ಬಗೆಯನ್ನು ಖಚಿತತೆಯ ನೆಲೆಯಲ್ಲಿ ನಿರೂಪಿಸಿದ್ದಾರೆ. ಮತ್ತು, ಅದಕ್ಕೆ ಸಂಬಂಧಿಸಿದ ಸೂಕ್ತ ಆಧಾರಗಳನ್ನೂ ಸಹ ದಾಖಲಿಸಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡ ಭಾಷೆಯನ್ನಾಡುವ ಜನರ ಚರಿತ್ರೆಯನ್ನು ಅವರು ನಿರ್ವಹಿಸಿದ ಜೀವನಕ್ರಮದ ಹಿನ್ನೆಲೆಯಲ್ಲಿ ಗ್ರಹಿಸುವುದರ ಮೂಲಕ ಜನಪದದ ರೂಪ ಲಕ್ಷಣಗಳನ್ನು ಶ್ರೀವಿಜಯನು ದಾಖಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸುರೇಶ್ ನಾಗಲಮಡಿಕೆಯವರು ಯಾವುದೇ ಚರಿತ್ರೆಯ ನಿರ್ಮಾಣವು ಜನರ ಜೀವನಕ್ರಮವನ್ನು ಆಧರಿಸುವುದರಿಂದ ಆ ಚರಿತ್ರೆಯು ಜನಪದ ಚರಿತ್ರೆಯೂ ಕೂಡ ಆಗಿರುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಸೂಕ್ತವಾಗಿದೆ. ಇತಿಹಾಸಕ್ಕೆ ಕಾಲವೇ ಹೇಗೆ ಪ್ರಧಾನವೋ ಹಾಗೆಯೇ ಸಾಹಿತ್ಯಕ್ಕೂ ಕಾಲವೇ ಪ್ರಧಾನವಾಗುತ್ತದೆ! ಈ ಕಾಲ ಎಂಬುದು ಜನರ ವರ್ತನೆ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸ್ವಭಾವಗಳಿಂದ ರೂಪಗೊಂಡಿರುವುದರಿಂದ ಆ ಕಾಲಘಟ್ಟ ಎಂಬುದು ಮನುಷ್ಯನಿಗೆ ಮಹತ್ತಾದ ಭವಿಷ್ಯವನ್ನು ನಿರ್ಮಾಣ ಮಾಡುವ ವೇದಿಕೆಯಾಗಿರುತ್ತದೆ. ಹೀಗಾಗಿ, ಕವಿಯು ಬದುಕಿದ ಸಮಾಜ ಅವನ ಮೇಲೆ ಖಚಿತವಾದ ಪರಿಣಾಮ ಬೀರಿರುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಶ್ರೀವಿಜಯನು ಭಾಷಿಕತೆಯ ಹಲವು ಬಗೆಯನ್ನು ‘ಕವಿರಾಜಮಾರ್ಗ’ ಗ್ರಂಥದಲ್ಲಿ ದಾಖಲಿಸಿರುವುದನ್ನು ಸರಿಯಾಗಿ ಗುರುತಿಸಿದ್ದಾರೆ. ಇದೆಲ್ಲ, ಚರಿತ್ರೆಯೊಂದರ ನಿರ್ಮಾಣಕ್ಕೆ ಜನಚರಿತ್ರೆಯ ಅವಶ್ಯಕತೆಯ ಅನಿವಾರ್ಯತೆಯ ಬಗ್ಗೆ ಹೇಳುತ್ತದೆ. ಮತ್ತು ಜನಚರಿತ್ರೆ ಎಂಬುದು ಜನಪದವೇ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ.

  ಸಾಂಸ್ಕೃತಿಕ ಓದು ಎನ್ನುವುದು ಕೇವಲ ಸಾಹಿತ್ಯ ಸಿದ್ಧಾಂತಗಳ ಆಚೆಗಿನ ಓದಿನ ಕ್ರಮವೆಂಬ ನಿರ್ಧಾರಕ್ಕೆ ಬರದೇ ವಸ್ತುನಿಷ್ಟವಾದ ಸಿದ್ಧಾಂತಗಳನ್ನು ಬಳಸಿಕೊಂಡು ಹಲವು ನೆಲೆಯಲ್ಲಿ ಅರ್ಥೈಸುವುದು ಸರಿಯಾದ ಕ್ರಮವೆಂದು ಭಾವಿಸಿ ಮಹಾಕಾವ್ಯಗಳ ರಚನಾಕ್ರಮವನ್ನು ಅವಲೋಕಿಸಿದಾಗ ಅಲ್ಲಿ ಜನಪದರ ಕಥಾವಿಧಾನಗಳು ಗೋಚರಿಸುತ್ತವೆ. ಈ ಮೂಲಕ ಸುರೇಶ್ ನಾಗಲಮಡಿಕೆಯವರು ಜಾನಪದವು ಶಿಷ್ಟ ಸಾಹಿತ್ಯದ ಒಂದು ಭಾಗವೇ ಆಗಿರಬಹುದಾದ ಸಾಧ್ಯತೆಯನ್ನು ಹಲವು ಆಧಾರಗಳ ಮೂಲಕ ಆ ವಿಚಾರವನ್ನು ತೂಗಿ ನೋಡಿ ಸತ್ಯಕ್ಕೆ ಹತ್ತಿರವಾಗಿಸುವಲ್ಲಿ ಸಫಲರಾಗಿದ್ದಾರೆ. ಮತ್ತು, ಈ ವಿಚಾರವನ್ನು ಸತ್ಯವೆಂದು ಇನ್ನಷ್ಟು ಪುಷ್ಟೀಕರಿಸಲು ಶೆಟ್ಟರ್ ಅವರ ಶಂಗಂ ಸಾಹಿತ್ಯದಲ್ಲಿ ಬರುವ ವಡುಗ ಕವಿಗಳ ಕುರಿತು ಪ್ರಸ್ತಾಪಿಸಿ, ಅವರು ಆಸ್ಥಾನ ಕವಿಗಳಾಗಿರದೇ ಅಲೆಮಾರಿ ಹಾಡುಗಾರರಾಗಿದ್ದರು ಎಂದು ಹೇಳಿ ಈ ವಡುಗ ಕವಿಗಳಂತೆ ಬೇರೆ ಬೇರೆ ಪ್ರದೇಶದ ಕವಿಗಳು ತಮ್ಮ ತಮ್ಮ ನೆಲದ ಭಾಷೆಯಲ್ಲಿ ಮೌಖಿಕವಾಗಿ ಹಾಡುಗಳನ್ನು ರಚಿಸಿರಬಹುದಾದ ಸಾಧ್ಯತೆಯನ್ನು ಊಹಿಸಿ, ತಮಿಳಿನಲ್ಲಿ ಶಂಗಂ ಕಾಲದ ಸಾಹಿತ್ಯ ಉಳಿದು ಬಂದಿರುವುದಕ್ಕೂ ಮತ್ತು ಆ ಸಂದರ್ಭದಲ್ಲಿನ ಕನ್ನಡದ ಕವಿಗಳ ಮೌಖಿಕ ಸಾಹಿತ್ಯ ಉಳಿದು ಬಾರದೇ ಇರುವುದರ ಹಿಂದಿನ ಕಾರಣಗಳನ್ನು ಶೋಧಿಸಲು ಪ್ರಯತ್ನಿಸಿದ್ದಾರೆ.

  ಈ ಮೌಖಿಕ ಸಂಪ್ರದಾಯಕ್ಕೆ ಕನ್ನಡದಲ್ಲಿ ನಮ್ಮ ವಚನಕಾರರು ಮತ್ತು ದಾಸರು ನೀಡಿದ ಕೊಡುಗೆಯ ಬಗ್ಗೆ ಪ್ರಸ್ತಾಪಿಸುತ್ತ, ಅವರ ಹಾಡು ಮತ್ತು ಮಾತಿನ ಮೂಲಕವೇ ಜನರ ಬದುಕಿನ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದರು ಎಂಬ ಸಂಗತಿಯೇ ಓದುಗನಿಗೆ ಮತ್ತೇ ಪರೋಕ್ಷವಾಗಿ ಶರಣರ ವಚನಗಳು, ದಾಸರ ಪದಗಳು ಕೂಡ ಜನಪದ ಕಾವ್ಯವೇ ಹೌದು ಎಂದೆನಿಸುತ್ತದೆ. ಆ ನಿಟ್ಟಿನಲ್ಲಿ ಸುರೇಶ್ ನಾಗಲಮಡಿಕೆಯವರು ತಮ್ಮ ಆಳವಾದ ಅಧ್ಯಯನದ ಫಲವಾದ ತರ್ಕ ಮತ್ತು ಆಲೋಚನೆಗಳನ್ನು ಆಧಾರಗಳ ಸಹಿತ ದಾಖಲಿಸಿದ್ದಾರೆ. ಇವೆಲ್ಲದರ ಹಿನ್ನೆಲೆಯಲ್ಲಿ ಶಿಷ್ಟ ಸಾಹಿತ್ಯದ ತಾಯಿ ಬೇರು ಜನಪದ ಸಾಹಿತ್ಯವೇ ಆಗಿದೆ ಎಂಬುದು ಖಚಿತವೆನಿಸುತ್ತದೆ. ಇದುವರೆಗೂ ‘ಕವಿರಾಜಮಾರ್ಗ’ವನ್ನು ನಮ್ಮ ವಿಮರ್ಶಕರು ಅಲಂಕಾರಶಾಸ್ತ್ರದ ಮೂಲಕ ನೋಡಿರುವುದನ್ನು ಮೀರಿ, ಸಂಶೋಧನೆಯನ್ನು ಕೈಗೊಂಡಿರುವ ಸುರೇಶ್ ನಾಗಲಮಡಿಕೆಯವರು ಜನಪದ ಪರಂಪರೆಯ ಹಿನ್ನೆಲೆಯಲ್ಲಿ ಶೋಧಿಸಲು ಪ್ರಯತ್ನಿಸುವುದರ ಮೂಲಕ ಜನಪದ ಸಾಹಿತ್ಯಕ್ಕೆ ಚರಿತ್ರೆಯ ಆಯಾಮ ತಂದುಕೊಡಲು ಪ್ರಯತ್ನಿಸಿರುವುದು ಕಂಡುಬರುತ್ತದೆ.

  ಇನ್ನು, ಇದರಿಂದ ಹೊರತಾದ, ಅಂದರೆ ಸಾಹಿತ್ಯದ ಮೂಲಕ ಚರಿತ್ರೆಯನ್ನು ಗ್ರಹಿಸಬಹುದಾದ ಹಿನ್ನೆಲೆಯಲ್ಲಿ ಅವಲೋಕಿಸುವಾಗ ಜಾನಪದವು ಚರಿತ್ರೆಯಿಂದ ಹೊರಗುಳಿಯಬೇಕಾಗಿ ಬಂದ ಹಿಂದಿರುವ ಕಾರಣಗಳನ್ನು ಸಂಶೋಧಕರು ನಿಖರವಾಗಿ ಗುರುತಿಸಿದ್ದಾರೆ. ಇಲ್ಲಿ, ಕಾಲ ಮತ್ತು ಪ್ರದೇಶದ ಹಂಗಿಲ್ಲದ ಜನಪದ ಕವಿಗಳು ಸಾಹಿತ್ಯ ಚರಿತ್ರೆಯಿಂದ ಹೊರಗುಳಿಯುವುದಕ್ಕೆ ಕನ್ನಡ ಸಾಹಿತ್ಯವನ್ನು ಮತ, ಧರ್ಮ ಮತ್ತು ಮುಖ್ಯ ಕವಿಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚೆಗಿಳಿದಿರುವುದೇ ಕಾರಣವಾಗಿರಬೇಕು ಎಂಬ ತರ್ಕಬದ್ಧವಾದ ಮಾತು ಸರಿ ಎನಿಸುತ್ತದೆ. ವಿಶ್ವವಿದ್ಯಾಲಯದ ವಿದ್ವಾಂಸರಿಂದ ಇಂದು ಇಂದಿನವರೆಗೂ ಆದರಿಸಲ್ಪಡುತ್ತಿರುವ ರಂ ಶ್ರೀ ಮುಗಳಿಯವರ ’ಕನ್ನಡ ಸಾಹಿತ್ಯ ಚರಿತ್ರೆಯು’ ಜಾನಪದವನ್ನು ಗಂಭೀರವಾಗಿ ಪರಿಗಣಿಸದೇ ಹೊರಗಿಡುವುದಕ್ಕೆ ಆ ಸಂದರ್ಭದ ವಿದ್ವಾಂಸರು ಜಾನಪದವನ್ನು ಸಾಹಿತ್ಯವೆಂದು ಒಪ್ಪದೇ ಇರುವುದು ಕಾರಣವಾಗಿರಬಹುದು. ಈ ಹಿನ್ನೆಲೆಯಲ್ಲಿ ನೋಡಿದಾಗ ಲಿಪಿ ಇಲ್ಲದೆಯೇ ಕೇವಲ ಮೌಖಿಕವಾಗಿಯೇ ಹಾಡುಗಳನ್ನು ತಲೆಮಾರುಗಳಿಗೆ ದಾಟಿಸುತ್ತ ಬಂದ ಜಾನಪದ ಕವಿಗಳು ಸಾಹಿತ್ಯ ಚರಿತ್ರೆಯಿಂದ ಹೊರಗುಳಿಯುವುದಕ್ಕೆ ಜಾನಪದಕ್ಕೆ ಲಿಪಿ ಇಲ್ಲದೇ ಇರುವುದು ಒಂದು ಕಾರಣವಾದರೆ, ಕಾಲದ ಹಂಗು ಇಲ್ಲದಿರುವುದೂ ಸಹ ಇನ್ನೊಂದು ಕಾರಣವಾಗಿದೆ ಎನ್ನಬಹುದು!

ಸುರೇಶ್ ನಾಗಲಮಡಿಕೆಯವರು ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ಚಹರೆಗಳನ್ನು ಮತ್ತು ಆ ಮೂಲಕ ಪ್ರಾದೇಶಿಕ ನೆಲೆಗಳಲ್ಲಿ ಕಾಲಾಂತರದಲ್ಲಿ ಒಂದು ಸೀಮಿತ ಜನಾಂಗದ ಸಂಸ್ಕ್ರತಿಯಲ್ಲಿ ಉಂಟಾಗಿರುವ ಪಲ್ಲಟಗಳನ್ನು ವಾಸ್ತವಕ್ಕೆ ಹತ್ತಿರವಿರಬಹುದಾದ ತರ್ಕಗಳ ನೆಲೆಯಲ್ಲಿ ಗುರುತಿಸುವ ಪ್ರಯತ್ನವನ್ನು ‘ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ನೆಲೆಗಳು’ ಅಧ್ಯಾದಲ್ಲಿ ಮಾಡಿದ್ದಾರೆ. ಒಂದು ಸಮುದಾಯವು ಆಚರಣೆಯನ್ನು ಅನುಸರಿಸುವ ಪದ್ಧತಿಯ ಹಿನ್ನೆಲೆಯಲ್ಲಿ ಭೂತ-ವರ್ತಮಾನಗಳ ನಡುವಿನ ಅಂತರದಲ್ಲಿ ಆ ಸಮುದಾಯದ ಸಂಸ್ಕ್ರತಿಯಲ್ಲಾದ ಪಲ್ಲಟವನ್ನು ಶೋಧಿಸುವಲ್ಲಿ ಜನಪದ ಕಾವ್ಯಗಳು ಸಹಾಯಕವಾಗಿವೆ. ಹಾಗೂ ಜನಪದ ಕಾವ್ಯಗಳು, ಒಂದು ಜನಾಂಗದ ಬದುಕಿನ ರೀತಿ ನೀತಿಗಳನ್ನು ಅನಾವರಣಗೊಳಿಸುತ್ತಲೇ ಈ ನೆಲದ (ಕನ್ನಡ) ಪ್ರಾದೇಶಿಕ ನೆಲೆಗಳಲ್ಲಿನ ಭಿನ್ನ ಭಿನ್ನವೆನಿಸುವ ಸಂಸ್ಕೃತಿಯನ್ನು ಪರಿಚಯಿಸುತ್ತವೆ! ‘ಮಂಟೇಸ್ವಾಮಿ’, ‘ಮಲೆ ಮಾದೇಶ್ವರ’, ‘ಹಾಲುಮತ ಕಾವ್ಯ’, ಮತ್ತು ‘ಜುಂಜಪ್ಪ’ – ಈ ಕಾವ್ಯಗಳಲ್ಲಿ ಜನಾಂಗದ ರೀತಿ ನೀತಿಗಳು ವ್ಯಕ್ತಗೊಂಡಂತೆಯೇ, ಆ ಮೂಲಕವೇ ಸಂಸ್ಕೃತಿಯ ಹಲವು ಆಯಾಮಗಳನ್ನು ಅಭಿವ್ಯಕ್ತಿಸಲು ಇರಬಹುದಾದ ಸಾಧ್ಯತೆಗಳನ್ನು ಮತ್ತು ಒಂದು ನಿರ್ದಿಷ್ಟ ಸಮುದಾಯ ಕಟ್ಟಿದ ಕಥನವನ್ನು ಆ ವಿಚಾರದಲ್ಲಿ ಬೇರೆ ಸಮುದಾಯಗಳು ಅಭಿವ್ಯಕ್ತಿಯನ್ನು ಮರುರೂಪಿಸಿಕೊಂಡಿರಬಹುದಾದ ಸಾಧ್ಯತೆಯನ್ನು ಗುರುತಿಸಿದ್ದಾರೆ. ಇದರಿಂದ, ಜನಾಂಗಗಳು ಪ್ರಾದೇಶಿಕ ನೆಲೆಯಲ್ಲಿ ರೂಢಿಸಿಕೊಂಡ ಭಿನ್ನ ಭಿನ್ನ ಬದುಕಿಗೂ, ಲೋಕದ ಚಲನಶೀಲತೆಗೂ ಒಪ್ಪುವ ರೀತಿಯಲ್ಲಿಯೇ ರೂಪುಗೊಂಡಿವೆ ಎಂಬುದು ತಿಳಿಯುತ್ತದೆ.

ಹಾಗೆಯೇ, ಕೇವಲ ಮನುಷ್ಯ ಲೋಕವನ್ನು ಮಾತ್ರ ಸೃಷ್ಟಿಸುವುದಷ್ಟೇ ಅಲ್ಲದೇ ಪ್ರಕೃತಿಯ ಎಲ್ಲ ಜೀವಕೋಟಿಯನ್ನು ಸಲಹುವ ಗುಣಗಳನ್ನು ಅಳವಡಿಸಿಕೊಂಡಿರುವ ಜನಪದ ಕಥನಗಳು ಜಗತ್ತಿನ ರಚನಾಕ್ರಿಯೆಯಲ್ಲಿ ವೈಜ್ಞಾನಿಕತೆಯ ಮತ್ತು ಶಿಲಾಯುಗದ ಸಂದರ್ಭದ ಸತ್ಯತೆಗಳನ್ನು ಒಳಗೊಂಡಿರುವುದಕ್ಕೆ ‘ಹಾಲುಮತ’ ಮತ್ತು’ಜುಂಜಪ್ಪ’ ಕಥನ ಸಾಕ್ಷಿಯಾಗಿರುವುದು ಈ ಲೇಖನದಿಂದ ತಿಳಿದು ಬರುತ್ತದೆ. ಸಕಲ ಜೀವರಾಶಿಗಳನ್ನು ಪೊರೆಯುವ ಲಕ್ಷಣಗಳು ಜವಾಬ್ದಾರಿಯು ಸೃಷ್ಟಿಕರ್ತನ ಮೇಲೆ ಇರುವುದಾಗಿಯೂ, ಸೃಷ್ಟಿಯೆಂದರೆ ಕೇವಲ ಮನುಷ್ಯ ಕೇಂದ್ರಿತವಾಗಿರದೇ ಮನುಷ್ಯೇತರ ಜೀವರಾಶಿಯನ್ನೂ ಒಳಗೊಂಡಿದ್ದು, ಇವೆರಡನ್ನೂ ಏಕೀಕರಿಸಿದ ಸೃಷ್ಟಿಯ ಕುರಿತಾದ ಚರಿತ್ರೆಯಲ್ಲಿ ಉಂಟಾಗಿರಬಹುದಾದ ಸ್ಥಿತ್ಯಂತರಗಳನ್ನು ಜನಪದ ಮನಸ್ಸುಗಳು ಕಟ್ಟಿಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಚಿಂತನೆಗಿಳಿದಾಗ ‘ಹಾಲುಮತ’ ಕಥನ ಕಾವ್ಯವು ವೈಜ್ಞಾನಿಕ ತಳಹದಿಯ ಮೇಲೆ ರಚನೆಯಾಗಿದೆ ಎಂಬುದು ಅರಿವಿಗೆ ಬರುತ್ತದೆ. ಪ್ರಕೃತಿದತ್ತವಾಗಿ ಸಂಭವಿಸುವ ಎಲ್ಲ ನೈಸರ್ಗಿಕ ಕ್ರಿಯೆಗಳು ಈ ಕಾವ್ಯದಲ್ಲಿ ಒಡಮೂಡಿದ್ದು, ಮಾನವನ ಸೃಷ್ಟಿಗಿಂತ ನಿಸರ್ಗವೇ ಮೊದಲು ಎಂಬ ವಾದ ಸತ್ಯ ಎನಿಸುತ್ತದೆ. ಹೀಗೆ, ಪಂಚಭೂತಗಳ ಕುರಿತಾದ ನೈಸರ್ಗಿಕ ಅರಿವಿನ ಪಾತಳಿಯ ಮೇಲಿನ ಚಿಂತನಾಕ್ರಮವು ಈ ’ಹಾಲುಮತ’ ಕಾವ್ಯವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಎದುರುಗೊಳ್ಳುವಂತೆ ಮಾಡುತ್ತದೆ.

ಸಂಶೋಧಕರು, ಇದರೊಂದಿಗೆ ‘ಹಾಲುಮತ’ ಕಾವ್ಯವನ್ನು ಇನ್ನೊಂದು ಆಯಾಮದಲ್ಲೂ ಅವಲೋಕಿಸಿದ್ದಾರೆ. ಅದು, ಈ ಕಾವ್ಯಕ್ಕೆ ಏಕಕಾಲಕ್ಕೆ ಆಧ್ಯಾತ್ಮಿಕ ಒಳನೋಟ ಮತ್ತು ಭೌತಿಕ ಆಯಾಮಗಳನ್ನು ತಂದುಕೊಟ್ಟಿದ್ದಾರೆ. ಇಡೀ ಕಾವ್ಯ ಕುರಿ, ಆಕಳು, ಹಾಲಿನ ವ್ಯಾಪಾರ, ಪೂಜೆ ಮತ್ತು ಅನ್ಯ ಸಮುದಾಯಗಳೊಂದಿಗಿನ ಸಂಘರ್ಷಗಳಿಗೆ ಸಾಕ್ಷಿಯಾಗಿದೆ. ಆದರೆ, ಈ ಕಾವ್ಯದಲ್ಲಿ ಹೇಳಲಾದ ಜನಪದದ ಆಧ್ಯಾತ್ಮಿಕ ವಿಚಾರಗಳು, ಆದಿಮ ಸಂಸ್ಕೃತಿಯ ಉದ್ದೇಶಗಳು ನಿರಾಕರಣೆಗೊಳಗಾಗುತ್ತ ಬಂದಿರುವುದಕ್ಕೆ ವೇದಗಳು ಆತ್ಮದ ಆತ್ಯಂತಿಕ ಸತ್ಯಗಳ ಶೋಧನೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಿರುವುದೇ ಕಾರಣವಾಗಿದೆ! ಆದಾಗ್ಯೂ,’ಹಾಲುಮತ’ ಕಾವ್ಯದ ಹೆಚ್ಚುಗಾರಿಕೆ ಇರುವುದೇ ಆ ಜನಾಂಗದ ಕುಲಕಸುಬುಗಳನ್ನು ಮುಖ್ಯವಾಗಿರಿಸಿಕೊಂಡಿರುವುದಲ್ಲಿ ಎನ್ನಬೇಕು. ಆ ಜನಾಂಗದ ವೃತ್ತಿಗೆ ಸಹಕರಿಸುವ ಕುರಿಗಳನ್ನು ರಕ್ಕಸರು ಸೃಷ್ಟಿಸಿದರು ಎನ್ನುವಲ್ಲಿಗೆ ಕಾವ್ಯವು ಆಧ್ಯಾತ್ಮಿಕ ಒಳನೋಟವನ್ನು ಅನಾವರಣ ಮಾಡುತ್ತದೆ. ಜೊತೆಗೆ, ಡುಳ್ಳಾಸುರನ ದೇಹದಿಂದ ಕಂಬಳಿ ತಯಾರಿಸುವ ಪರಿಕರಗಳನ್ನು ರಚಿಸಿದ ಬಗ್ಗೆ ಉಲ್ಲೇಖವಿದೆ. ಇದರೊಂದಿಗೆ, ಮಾನವನ ಸಾಮಾಜಿಕ ಪ್ರಕ್ರಿಯೆಗಳೊಂದಿಗೆ ಆತನ ವೃತ್ತಿಗಳು ಬೆಳೆದು ಬಂದ ಬಗೆಯನ್ನು ಈ ಕಾವ್ಯ ಕಟ್ಟಿಕೊಡುತ್ತದೆ. ಜನಪದದ ಆಧ್ಯಾತ್ಮದ ಕುರಿತಾದ ಗ್ರಹಿಕೆಯ ಕ್ರಮಗಳು ಎತ್ತರದಲ್ಲಿರುವುದು ಕಾವ್ಯದ ಮಹತ್ತನ್ನು ಅರಿವಿಗೆ ತರುತ್ತದೆ. ಇಡಿಯಾಗಿ ಕಾವ್ಯ ಕೈಲಾಸದಿಂದ ಭೂಲೋಕಕ್ಕೆ ವರ್ಗಾವಣೆಗೊಳ್ಳುವ ಸಂದರ್ಭದಲ್ಲಿ ‘ಹಾಲುಮತ’ ಕುಲವೃತ್ತಿಯನ್ನು ದೇವಾದಿ ದೇವತೆಗಳು ನಿರ್ವಹಿಸಿದ ಬಗ್ಗೆ ಉಲ್ಲೇಖವಿದೆ. ಈ ಮೂಲಕ ಆಧ್ಯಾತ್ಮದ ಕುರಿತಾದ ಶಾಂತಮುತ್ಯನ ತಿಳುವಳಿಕೆ ಕ್ರಮಗಳು ದುಡಿಮೆಯನ್ನು ಮೂಲವಾಗಿಸಿಕೊಂಡು ಅದರ ಒಳನೋಟಗಳನ್ನು ಶೋಧಿಸುವುದಾಗಿದೆ!

ಜೊತೆಗೆ, ಜನಪದ ಮಹಾಕಾವ್ಯಗಳ ಆಶಯಗಳನ್ನು ನೋಡುವ ಕ್ರಮದಲ್ಲಿ ಇರಬಹುದಾದ ಬಿಕ್ಕಟ್ಟುಗಳ ಕುರಿತಾಗಿ ಸಂಶೋದಕರು ಸಾಧ್ಯಂತವಾಗಿ ಚರ್ಚಿಸಿದ್ದಾರೆ. ಜನಪದದಲ್ಲಿ ಲೋಕದೃಷ್ಟಿಗಳು ಆಶಯವನ್ನು ರೂಪಿಸಿದರೆ, ಆಶಯಗಳು ಜೀವನಕ್ರಮವನ್ನು ರೂಪಿಸುತ್ತವೆ. ಮೇಲ್ನೋಟಕ್ಕೆ ಆಶಯಗಳು ಮತ್ತು ಜೀವನಕ್ರಮಗಳು ಜನಪದದಲ್ಲಿ ಒಂದೇ ಎನಿಸಿದರೂ ಕಾಲಾಂತರದಲ್ಲಿ ಮನುಷ್ಯನ ಜೀವನಕ್ರಮದ ವಿಸ್ತಾರತೆಯು ಸ್ಥಿತ್ಯಂತರಗೊಳ್ಳುತ್ತ ಹೋಗುತ್ತದೆ. ಅಂತೆಯೇ ಮನುಷ್ಯನ ಹುಟ್ಟು, ಬೆಳವಣಿಗೆ, ಸಂಬಂಧಗಳೊಂದಿಗೆ ಮನುಷ್ಯ ಬದುಕಿಗೆ ಪೂರಕವಾದ ಅವರ ವೃತ್ತಿಗಳು, ವೃತ್ತಿಗಳ ಸಂಕರಶೀಲತೆ, ಸಮಕಾಲೀನ ಧರ್ಮಗಳ ಜೊತೆಗೆ ಮತ್ತು ಒಳಪಂಥಗಳ ನಡುವಿನ ನಂಟುಗಳು- ಇವೆಲ್ಲವೂ ಜನಪದ ಕಾವ್ಯದ ವಸ್ತುವೇ ಆಗಿದ್ದು ಇವುಗಳನ್ನು ಆಶಯದ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಜನಪದ ಕಾವ್ಯ ಹೇಗೆಲ್ಲ ತನ್ನ ವಿಸ್ತಾರತೆಯನ್ನು ಪಡೆದುಕೊಂಡಿದೆ ಎಂಬುದು ತಿಳಿಯುತ್ತದೆ. ಇಲ್ಲಿ, ಮಾನವಶಾಸ್ತ್ರೀಯ ನೆಲೆಗಳೊಂದಿಗೆ ಮನುಷ್ಯನ ಜೀವನಕ್ರಮದಲ್ಲಾದ ಪಲ್ಲಟಗಳನ್ನು ಜನಪದ ಕಾವ್ಯದ ಆಶಯಗಳಾಗಿ ಗ್ರಹಿಸಿದಾಗ ಅದಕ್ಕೊಂದು ತಾತ್ವಿಕತೆಯ ಚೌಕಟ್ಟನ್ನು ರೂಪಿಸಬಹುದು. ಹೀಗೆ, ಜನಪದ ಕಾವ್ಯವನ್ನು ಬೇರೆ ಜ್ಞಾನ ಶಿಸ್ತುಗಳ ನೆಲೆಯಲ್ಲಿ ನೋಡುವುದರ ಮೂಲಕ ಶಿಸ್ತುಬದ್ಧಗೊಳಿಸುವುದು! ಅಂದರೆ, ಜನಪದ ಕಾವ್ಯವನ್ನು ಶಿಷ್ಟ ಸಾಹಿತ್ಯದೊಂದಿಗೆ ಸಂಯೋಜಿಸಿ ನೋಡುವ ಕ್ರಮದ ಹೊರತಾದ ಬೇರೆಯದೇ ಆದ ಜ್ಞಾನ ಶಿಸ್ತುಗಳ ಹಿನ್ನೆಲೆಯಲ್ಲಿ ನೋಡಿದಾಗ ಮಾತ್ರ ಜನಪದ ಕಾವ್ಯಗಳ ಬಗ್ಗೆ ಆಳವಾದ ಚರ್ಚೆ ಸಾಧ್ಯ ಎಂಬುದು ಸ್ಪಷ್ಟವಾಗುತ್ತದೆ!

  ಹೀಗೆ, ಈ ಸಂಶೋಧನಾ ಕೃತಿಯಲ್ಲಿ ಜನಪದ ಸಂಕಥನಗಳ ಕುರಿತು ಆಳವಾದ ಅಧ್ಯಯನವನ್ನು ಕೈಗೊಂಡಿದ್ದಾರೆ. ಆದರೆ, ವಿಶ್ವವಿದ್ಯಾಲಯದ ವಿದ್ವಾಂಸರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬುದ್ಧಿಜೀವಿಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಿರುವ ಈ ಕೃತಿಯು ಸಾಮಾನ್ಯ ಓದುಗನ ಸರಳ ಓದಿಗೆ ದಕ್ಕುವುದಿಲ್ಲ! ಈ ಕೃತಿಯನ್ನು ತುಂಬಾ ತಾಳ್ಮೆಯಿಂದ ಓದಿದಾಗ ಮಾತ್ರ ಅದರ ಆಳವನ್ನು ಹೊಕ್ಕು ಅರ್ಥೈಸಿಕೊಳ್ಳಲು ಸಾಧ್ಯ. ಆಗ ಮಾತ್ರ ಈ ಕೃತಿಯು ಹೊಂದಿರುವ ವಿಷಯಕ್ಕೆ ಸಂಬಂಧಿಸಿದಂತೆ ಗಹನವಾದ ಆಲೋಚನೆಗಳು ಓದುಗನ ಮನದೊಳಗೆ ಹೊಮ್ಮುತ್ತವೆ. ಇದೇ ಕೃತಿಯ ಮಿತಿಯಾಗಿದ್ದರೂ ಸಹ ಪರೋಕ್ಷವಾಗಿ ಜನಪದ ಸಂಕಥನಗಳ ಕುರಿತಾಗಿ ಆಳವಾದ ಸಂಶೋಧನೆಯನ್ನು ಕೈಗೊಂಡಿರುವ ಸುರೇಶ್ ನಾಗಲಮಡಿಕೆಯವರು ಪಟ್ಟ ಶ್ರಮಕ್ಕೆ ಈ ಕೃತಿಯಲ್ಲಿ ದಾಖಲಾಗಿರುವ ಅಧ್ಯನಕ್ಕೊಳಪಟ್ಟಿರುವ ಅಂಶಗಳು ಸಾಕ್ಷಿಯಾಗಿವೆ. ಈ ನಿಟ್ಟಿನಲ್ಲಿ ಸುರೇಶ್ ನಾಗಲಮಡಿಕೆಯವರು ಅಭಿನಂದನಾರ್ಹರು ಎನ್ನಬೇಕು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಲ್ಲೇಶ್ ಕುಂಬಾರ್