Article

ಗ್ರಾಮಾಯಣದ ನೋವಿನ ಕತೆ ‘ಕಂದೀಲು’

ನಾವು ಎಂದಾದರೂ ಯೋಚನೆ ಮಾಡಿದ್ದಿವಾ? ನಮ್ಮನ್ನು ನಗಿಸಿ ರಂಜಿಸುವ ವ್ಯಕ್ತಿಯ ಜೀವನದಲ್ಲಿ ಎಷ್ಟರ ಮಟ್ಟಿಗೆ ನೋವಿರುತ್ತದೆ ಎಂಬುದನ್ನು. ನಗಿಸುವುದು ಅವನ ಹೊಟ್ಟೆಪಾಡಾಗಿರಬಹುದು. ನಕ್ಕರೆ ಆರೋಗ್ಯ,, ನಕ್ಕರೆ ಅದೇ ಸ್ವರ್ಗ, Day without laughter is a day wasted ಎನ್ನುವ ನಾವು ನಗುವುದಕ್ಕೆ ಮಹತ್ವ ಕೊಡುತ್ತೇವೆಯೇ ಹೊರತು ಆ ನಗಿಸುವ ವ್ಯಕ್ತಿಯ ಹಿಂದಿನ ನೋವಿದ್ದರೆ ನಮಗೆ ಅದು ಅರ್ಥವಾಗುವುದಿಲ್ಲ. ಒಂದು ವೇಳೆ ಅರ್ಥವಾಗುವ ಪ್ರಸಂಗವಿದ್ದರೂ ಜಾಣ ಕುರುಡು ತೋರಿಸುತ್ತೇವೆ. ಚಾರ್ಲಿ ಚಾಪ್ಲಿನ್‌ ಎನ್ನುವ ವ್ಯಕ್ತಿ ಇಡೀ ಜಗತ್ತನ್ನು ನಗಿಸುತ್ತಿದ್ದವನ ನಗುವಿನ ಹಿಂದೆ ಅಪಾರವಾದ ನೋವಿತ್ತು ಎಂಬುದನ್ನು ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ, ಅದೆಲ್ಲ ನಮಗೆ ಬೇಡದ ವಿಷಯವಲ್ಲವಾ.

ನಮಗೆಲ್ಲ ಭದ್ರತೆ ನೀಡುವ ಪೊಲೀಸು ಸೈನಿಕರ ಮನೆಗಳು ಎಷ್ಟು ಭದ್ರವಾಗಿದೆ ಎಂದು ನಾವು ಯಾವತ್ತೂ ಯೋಚಿಸುವುದಿಲ್ಲ. ನಮ್ಮ ಊರನ್ನು ಸ್ವಚ್ಚಮಾಡುವ ಕಾರ್ಮಿಕರ ಬದುಕು ಎಷ್ಟರಮಟ್ಟಿಗೆ ಸ್ವಚ್ಚವಾಗಿದೆ ಎಂದು ನಾವ್ಯಾರು ಹೋಗಿ ಕೇಳುವುದಿಲ್ಲ. ನಮಗೆಲ್ಲ ದಿನನಿತ್ಯ ಹೊಟ್ಟೆತುಂಬ ಊಟ ಮಾಡಲು ಕಾರಣನಾದ ರೈತ ಎಷ್ಟು ಸಾರಿ ಹಸಿದ ಹಟ್ಟೆಯಲ್ಲಿ ಮಲಗುತ್ತಾನೆ ಎಂದು ನಾವ್ಯಾವತ್ತೂ ಚಿಂತೆ ಮಾಡಲ್ಲ. ನಮ್ಮ ಮಾನ ಮುಚ್ಚಲು ಬಟ್ಟೆಯನ್ನು ನೈಯುವ ನೇಕಾರನ ಕುಟುಂಬ ಮೈತುಂಬ ಬಟ್ಟೆಹಾಕಲು ಎಷ್ಟು ಕಷ್ಟಪಡುತ್ತಾರೆ ಎಂಬುದನ್ನು ನಾವು ಯೋಚಿಸುವುದಿಲ್ಲ. ನಮ್ಮದೇ ಪರಿಸರದಲ್ಲಿ ತನ್ನ ಮೈಮಾರಿ ಬದುಕು ನಡೆಸುವ ಹೆಣ್ಣಿನ ಜೀವನ ಯಾಕೆ ಆ ಪರಿಸ್ಥಿತಿಗೆ ಬಂತು ಎಂಬುದು ನಾವು ಗಮನಕೊಡದ ವಿಷಯ. ಇದೆಲ್ಲ ಯಾಕೆ ಹೀಗಾಗತ್ತೆ ಅಂದ್ರೆ ನಮ್ಮಲ್ಲಿ ಮಾನವಿತೆ ಎಂಬುದು ಪುಸ್ತಕಕ್ಕೆ ಮಾತ್ರ ಸೀಮಿತವಾಗಿ, ಭಾಷಣದಲ್ಲಿ ಬೆಚ್ಚಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಬಾಳುತ್ತಿರುವಾಗ ಈ ಮೇಲಿನ ನೋವುಗಳಿಗೆ  ಸ್ಫಂದಿಸುವಂತೆ ಪ್ರಚೋದಿಸುವ ಕಾದಂಬರಿಯಾಗಿ ಬರುತ್ತದೆ ಈ ಕಂದೀಲು.

ದೀಪದ ಕೆಳಗೆ ಕತ್ತಲು ಎನ್ನುವಂತೆ, ಕಂದೀಲು ಕತ್ತಲಲ್ಲಿರುವವ ಊರಿಗೆ ಬೆಳಕು ನೀಡುತ್ತ, ಸಮಾರಂಭಗಳಿಗೆ ಸೊಬಗು ನೀಡುತ್ತಾ, ದಾರಿ ಕಾಣದವರ ದಾರಿ ಕಾಣಿಸುತ್ತದೆ. ಆದರೆ ಅದನ್ನು ಹಿಡಿಯುವುದನ್ನೇ ಕಾಯಕವಾಗಿರುವವರ ಬದುಕನ್ನು…………? ತಾನು ಹಚ್ಚಿದ ಬೆಳಕಿನಿಂದ ಊರು ಬೆಳಗುವಹಾಗೆ ಮಾಡುವವನ ಬದುಕು ಕತ್ತಲೆಯಲ್ಲಿ ಮುಳುಗಿದ್ದಾಗ ಅದು ಯಾರಿಗೂ ಗೋಚರಿಸುವುದೇ ಇಲ್ಲ. ಗೋಚರಿಸಿದವರು ಜಾನ ಕುರುಡು ತೋರಿಸುತ್ತಾರೆ. ಇಲ್ಲದ ತರ್ಕಗಳನ್ನು ಸೃಷ್ಟಿಸಿಕೊಂಡು ಕತ್ತಲಲ್ಲಿ ಇರುವವರು ಕತ್ತಲಲ್ಲೇ ಇರಬೇಕೆಂಬ ಅಹಂಕಾರದ ಮಾತನಾಡುತ್ತಾರೆ.

ಈ ಕಾದಂಬರಿ ಒಂದು ಊರ ಕಥೆ, ಗ್ರಾಮಾಯಣ ಅಂತ ಕರಿಬಹುದು. ಇದು ಕೇವಲ ಕಂದೀಲು ರಾಮಪ್ಪ, ಅವನ ಹೆಂಡತಿ ಕುಸುಮಿಯ ಕಥೆಯಲ್ಲ, ಅನಂತ ದೇಸಾಯಿ ಮನೆತನದ ಪರುಕಾಳಿ ಹೇಳುವದಲ್ಲ. ಹೊರತಾಗಿ ಒಂದು ಊರಿನ ಒಂದು ತಲೆಮಾರಿನ ಕಥೆ. ಇದು ಕೇಲವ ಬಾಗಲಕೋಟೆ, ವಿಜಾಪೂರ ಅಂತ ಉತ್ತರ ಕರ್ನಾಟಕದಲ್ಲಿ ನಡೆದಿರಬಹುದಾದ ಕಥೆಯಲ್ಲ. ಹೆಚ್ಚಕಡಿಮೆ ಯಾವ ಊರಿನಲ್ಲಿ ಬೇಕಾದರು ಹೆಸರು ಬದಲಾವನೆ ಮಾಡಿ ಓದಬಹುದಾದ, ಕಾಲ-ದೇಶವನ್ನು ಮೀರುವಂತಹ ಕೃತಿ. ಸಮಾಜದ ಈ ನಿಷ್ಠೂರವಾದ, ಕರುಳು ಕಕ್ಕುಲಾತಿ ಇಲ್ಲದ, ಮನುಷ್ಯತ್ವ ಹಾಗೂ ಮಾನವಿಯತೆಯನ್ನು ಪುಸ್ತಕ ಪುರಾಣಗಳಿ ಸೀಮಿತ ಮಾಡಿರುವ, ಉಪಕಾರವರಿಯದ ಊರಿನ ಬಗ್ಗೆ ನಿನ್ನ ಹಣೆಬರಹವೇ ಇಷ್ಟೇ ಎಂದು ಹಗಲು ಹೊತ್ತುನಲ್ಲಿ ಟಾರ್ಚ್‌ ಹಾಕಿ ತೋರಿಸುವ ಜವಾಬ್ದಾರಿಯುತ ಕೆಲಸವನ್ನು ಈ ಕಾದಂಬರಿ ಮಾಡುತ್ತದೆ.

ದೇಶ ಕಟ್ಟುವ, ನಾಡುವ ಕಟ್ಟು, ಊರು ಕಟ್ಟುವ ಮಾತನಾಡುವ ನಾವು ಈ ಹಿಂದೆ ಎಲ್ಲಿ ಎಡವಿದ್ದೇವೆ. ಎಡವಲು ಕಾರಣವಾದ ಎಡರುಗಳನ್ನು ತೋರಿಸುವ ಜವಾಬ್ದಾರಿಯು ಕೆಲಸವನ್ನು ಸೋಮು ರೆಡ್ಡಿಯವರು ಈ ಕಾದಂಬರಿಯಲ್ಲಿ ಮಾಡುತ್ತಾರೆ.

ಒಬ್ಬಳು ಸೂಳೆ ತನ್ನ ಆತ್ಮಕಥೆ ಬರೆಯಲು ನಿರ್ಧಾರ ಮಾಡಿದಾಗ ಊರಿನ ಮಾನವಂತರೆಲ್ಲ ವಿರೋಧ ಮಾಡಿದರಂತೆ. ಯಾಕೆಂದರೆ ಅವಳು ವ್ಯಭಿಚಾರಿಯಾಗಲು ಕಾರಣವಾದವರು ಇವರೇ. ಈ ಮಾನವಂತರ ಸೋಗಿನ ಹಿಂದೆ ಯಾವುದೆಲ್ಲ ಕರಾಳಮುಖ ಅಡಗಿದೆ ಎಂಬುದನ್ನು ಅವರೇ ಬಲ್ಲವರಾಗಿರುತ್ತಾರೆ. ಒಮ್ಮೆ ಆಕೆ ಆತ್ಮಚರಿತ್ರೆ ಬರೆದು ಬಿಟ್ಟಳೋ ಎಷ್ಟೋ ಜನ ಬಯಲಲ್ಲಿ ಬತ್ತಲಾಗುತ್ತಾರೆ. ಅಂತಹ ಬತ್ತಲುಗೊಳಿಸುವಿಕೆಯ ಕೆಲಸವನ್ನು ಈ ಕಾದಂಬರಿ ಮಾಡುತ್ತದೆ.

ಕಂದಿಲು ರಾಮಪ್ಪನ ಕೆಲಸ ಕಂದೀಲು ಹಿಡಿದು ದೇಸಾಯರ ವಾಡೆಯನ್ನು ಕಾಯುವುದು, ಊರ ಜನರ ಸಮಾರಂಭಗಳಿದ್ದರೆ, ಜಾತ್ರೆಗಳಿದ್ದರೆ ಅಲ್ಲಿ ಕೂಡ ಕಂದೀಲು ಹಿಡಿದು ಬೆಳಕು ನೀಡುವಂತ ತಲತಲಾಂತರದಿಂದ ಬಂದ ಕುಲ ಕಸುಬು. ಇದಕ್ಕೆ ಉತ್ತರ ಕರ್ನಾಟಕದ ಕಡೆಗೆ ಆಯಗಾರಿಕೆ ಅಂತಾರೆ. ಕಟ್ಟಿಗೆ ಕಡಿಯುವುದು, ಕೂದಲು ಕತ್ತರಿಸುವುದು, ಪಾತ್ರೆ ತೊಳೆಯುವುದು, ಬಡಿಗೆತನ ಇವು ಆಯಿಗಾರಿಕೆಗಳು. ಒಂದು ಕೆಲಸ ಮಾಡುವವ ಅದನ್ನೇ ಮಾಡಬೇಕು. ಬೇರೆ ಕೆಲಸವನ್ನು ಮಾಡಬಾರದು. ಉದಾಹರಣೆಗೆ ಕಟ್ಟಿಗೆ ಕಡೆಯುವವ ಕುದಲು ಬೋಳಿಸುವ ಕೆಲಸ ಮಾಡುವಹಾಗಿರಲಿಲ್ಲ. ಆದರೆ ಇಲ್ಲಿ ರಾಮಪ್ಪನಿಗೆ ವಾಡೆಗೆ ಕಂದಿಲು ಹಿಡಿದು ಕಾವಲು ಕಾಯುವ ಕೆಲಸ. ಆದರೆ ದೇಸಾಯಿ ಅವನಿಗೆ ಯಾರದ್ದೋ ಮಾತು ಕೇಳಿ ರಾತ್ರಿಸಮಯದಲ್ಲಿ ವಾಮಾಚಾರದ ಗೂಟವನ್ನು ಸ್ಮಶಾನಕ್ಕೆ ಹೋಗಿ ಹುಗಿದು ಬರಬೇಕು ಎಂದು ಹೇಳುತ್ತಾನೆ. ಆದರೆ ಇದು ಆತನ ಕೆಲಸ ಅಲ್ಲ, ಆದರೂ ದೇಸಾಯರ ಮಾತು ಮೀರಲಾರದೆ ಸ್ಮಶಾನಕ್ಕೆ ಹೋಗಿ, ಅಲ್ಲಿ ಹೆದರಿ ಎದೆಒಡೆದು ಸಾಯುತ್ತಾನೆ. ದೇಸಾಯಿ ಆತನ ಸಾವಿಗೆ ಪರೋಕ್ಷವಾಗಿ ಕಾರಣವಾಗಿ, ಆತನ ಕುಟುಂಬ ಅನಾತವಾಗುವಂತೆ ಮಾಡುತ್ತಾನೆ. ದೇಸಾಯಿ ಆತನ ಸಾವಿಗೆ ಕಾರಣರಾದರೂ ಪಶ್ಚಾತಾಪದ ಎರಡು ಮಾತು ಬಿಟ್ಟರೆ ಅವನು ಆತನ ಸಂಸಾರಕ್ಕೆ ಏನು ಬೇಕು, ಹೇಗೆ ಜೀವನ ಸಾಗಿಸುತ್ತದೆ ಎಂಬ ಯೋಚನೆ ಸಹ ಮಾಡುವುದಿಲ್ಲ. ಜವಾಬ್ದಾರಿಯಿಂದ ತಪ್ಪಿಸಿಕೊಂಡ ದೇಸಾಯಿ ಮಾತಿಗೆ ಮಾತ್ರ “ರಂಗ್ಯಾ ನನಗ ಮಗ ಇದ್ದಾಂಗ” ಅಂತಾನೆ. ಅಧಿಕಾರದಲ್ಲಿರುವವ ಅಹಂಕಾರವೇ ಇಂಥದ್ದು.

ಇನ್ನು ಕಾದಂಬರಿಯ ನಾಯಕಿ ಕುಸುಮಾಳದ್ದು ತುಂಬಾ ದುರಂತವಾದ ಜೀವನ ಶತ್ರುವಿಗೂ ಕೂಡ ಬರಬಾರದು. ಕೇಳಿದ ಕೂಡಲೇ ಒಂದು ಕ್ಷಣ ಮೈ ಜುಮ್ಮೆನಿಸುವ ಬಾಳ್ವೆ ಆಕೆಯದು. ಆಗಿನ ಕಾಲವೊಂದಿತ್ತು ಹೆಣ್ಣಿಗೆ ಸ್ವಾತಂತ್ರ್ಯ ಎಂಬುದು ಮಾತಿಗೆ ಕೂಡ ಇರಲಿಲ್ಲ. ಆದರೆ ಆಕೆ ತನಗೆ ಬರುವ ಕರ್ತವ್ಯವನ್ನು ಮಾಡಲೇ ಬೇಕು. ಕನಿಷ್ಠ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಯಾವ ಸ್ವಾತಂತ್ರ್ಯವೂ ಅವಳಿಗೆ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸಲ್ಲದ ಮನಸ್ಸಿನಿಂದ ಕಂದಿಲು ರಂಗಪ್ಪನನ್ನು ಮದುವೆಯಾಗಿ ಸರಿಯಾಗಿ ಸಂಸಾರ-ಮಕ್ಕಳು ಮಾಡುವ ಮೊದಲೇ ದೇಸಾಯಿಯ ಸ್ವಾರ್ಥಕ್ಕೆ ಗುರಿಯಾಗಿ ಗಂಡ ಸಾಯುತ್ತಾನೆ. ಆಸರೆಯಾಗಲು ಮಾತುಕೊಟ್ಟ ದೇಸಾಯಿ ಹಾಗೂ ಊರಹಿರಿಯರು ಕೈಬಿಟ್ಟಾಗ ಹಸಿದ ಹೊಟ್ಟೆ ಕೇಳಬೇಕಲ್ಲ. ಅನಿವಾರ್ಯವಾಗಿ ವ್ಯಭಿಚಾರಕ್ಕೆ ಇಳಿಯುತ್ತಾಳೆ. ನಂತರ ಆಕೆಯ ಬದುಕು ಘೋರ. ಊರಲ್ಲಿ ತುಸು ಮಟ್ಟಿಗೆ ಆರಾಮಾಗಿದ್ದ ಗೆಳತಿಯ ಸಲಹೆ ಕೇಳಿ ಮುಂಬೈ, ನಂತರ ಹುಬ್ಬಳ್ಳಿಗೆ ಹೋಗಿ ತನ್ನ ಬಾಳನ್ನು ಇನ್ನಷ್ಟು ನರಕ ಮಾಡಿಕೊಳ್ಳುತ್ತಾಳೆ.
ಊರಿಗೆ ಹಿಂದಿರುಗಿ ತನ್ನ ಗಂಡ ಹಿಡಿಯುವ ಕಂದಿಲಿನ ಕೆಲಸ ಹಾಗೂ ತನಗೆ ಬರಬೇಕಾಗಿದ ಒಂದು ಎಕರೆ ಭೂಮಿ ಸಿಗಬೇಕು. ಯಾರ ಹಂಗೂ ಇಲ್ಲದೇ ಜೀವನ ಸಾಗಿಸಬೇಕು ಎಂದಾಗ ಗಂಡ ಸತ್ತ ರಂಡೆಮುಂಡೆ ಎಂದು ಮೊದಲೇ ತಿರಸ್ಕರಿಸಿದ್ದ ಊರಿನ ಜನರು ಆಕೆಯ ಮಗನಿಗೆ ಹಾದರಕ್ಕೆ ಹುಟ್ಟಿದವ ಎಂದು ತಿರಸ್ಕರಿಸುತ್ತಾರೆ. ಊರ ಜಾತ್ರೆಯಲ್ಲಿ ಸಂಭ್ರಮಿಸಬೇಕಾದರೆ ಕುಸುಮಾ ತನ್ನ ಭ್ರಮನಿರಸಗೊಂಡ ಬಾಳ್ವೆಯಿಂದ ಇನ್ನಿಲ್ಲದಂತಾಗುತ್ತಾಳೆ, ಆಕೆಯ ಹೆಣದ ಮೇಲೆ ಜಾತ್ರೆಯ ಸಂಭ್ರಮ ನಡೆಯುತ್ತಾ ಇರುತ್ತದೆ. ಆಕೆ ಸತ್ತನಂತರ ಮಗ ಪ್ರಕಾಶನ ಗತಿ ಏನು? ಸಮಾಜ ಆತನನ್ನು ಖಂಡಿತ ಸ್ವೀಕರಿಸಲಾರದು, ಒಂದು ವೇಳೆ ಆತನ ಬದುಕು ಕುಸುಮಿಯಂತಾದರೆ ಮತ್ತೆ ಸಮಾಜ ತನ್ನ ಜವಾಬ್ದಾರಿ ಕಳಚಿ ಮುಂದಿನ ಜಾತ್ರೆಯ ಬಗ್ಗೆ ಸಂಭ್ರಮಿಸುತ್ತಿರುತ್ತದೆನೋ? ಅಷ್ಟು ಕ್ರೂರ.


ಸೋಮು ರೆಡ್ಡಿಯವರ ನಿರೂಪಣಾ ಶೈಲಿ ತುಂಬಾ ಚನ್ನಾಗಿದೆ. ಎಲ್ಲೂ ಬೋರು ಹೊಡೆಸದೇ ಸಾಂಗವಾಗಿ ಓದಿಸಿಕೊಂಡು ಹೋಗುತ್ತದೆ. ಬಿಟ್ಟು ಬಿಟ್ಟು ಹೇಳುವ ನಿರೂಪಣಾ ಶೈಲಿ ಕಾದಂಬರಿಯ ಗಂಭಿರತೆಯನ್ನು ಹೆಚ್ಚಿಸಿದರೆ ಎಲ್ಲಿಯೂ ಕೂಡ ಫೇಲವವಾದ ವಾಕ್ಯ, ಖಂಡಿಕೆಗಳಿಲ್ಲ. ಹೇಗೋ ಬರೆದು ಬಿಡಬೇಕು ಎಂದು ಅವಸರದಲ್ಲಿ ಬರೆದ ಕಾದಂಬರಿ ಇದಲ್ಲ. ದಿನತುಂಬಿ ಹುಟ್ಟಿದ ಸದೃಡ ಮಗು. ನನ್ನ ಓದಿನ ಅನುಭವದ ಮಟ್ಟಿಗೆ ಹೇಳುವುದಾದರೆ ಇತ್ತಿಚೆಗೆ ಬಿಡುಗಡೆಯಾದ ಕಾದಂಬರಿಗಳಲ್ಲಿ ಅತ್ಯುತ್ತಮವಾದ ಸಾಲಿಗೆ ಸೇರುವಂತದ್ದು. ಕನ್ನಡಕ್ಕೆ ಒಬ್ಬ ಒಳ್ಳೆಯ ಕಾದಂಬರಿಕಾರ ಸಿಗಬಲ್ಲ ಬರವಸೆ ಮೂಡಿಸುವಂತ ಕಾದಂಬರಿ ಬರೆದಿದ್ದಾರೆ. ಸೋಮುರೆಡ್ಡಿಯವರಿಂದ ಕನ್ನಡಕ್ಕೆ ಅಭಿಜಾತ ಕೃತಿಗಳು ಹುಟ್ಟಬಲ್ಲವು ಎಂಬ ಬರವಸೆ ನನ್ನದು.

ಇನ್ನೊಂದು ಮುಖ್ಯವಾದ ವಿಚಾರವೆಂದರೆ ಗ್ರಾಮಿಣ ಸೊಗಡು. ಅದನ್ನು ಅನುಭಸಿದವರ ಹತ್ತಿರ ಹೇಳುವಂತಹ ಶ್ರೀಮಂತವಾದ ಗ್ರಾಮಿಣ ಭಾಷೆ ನನಗೆ ಇದರಲ್ಲಿ ದಕ್ಕಿತು. ಇದೇ ತರನಾದ ಅನುಭವಯುಕ್ತ ಭಾಷೆಯನ್ನು ಗ್ರಾಮಾಯಣ, ತೇರು, ನಿಸರ್ಗ, ಕೃಷ್ಣೆಹರಿದಳು, ಹಳ್ಳಬಂತು ಹಳ್ಳ ಕಾದಂಬರಿಯಲ್ಲಿ ಓದಿದ್ದೆ. ಆದರೆ ಇದರಲ್ಲಿ ಯಾರ ಪ್ರಭಾವಕ್ಕೂ ಒಳಗಾಗದೇ ಸ್ವಂತಶೈಲಿ ಎನ್ನುವಂತೆ ಮೂಡಿಬಂದ ಕೃತಿ ಇದು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀಶೈಲ ಮಗದುಮ್ಮ