Article

ಕಣ್ಮುಂದೆ ಚಲಿಸುವ ಸಿನಿಮೀಯ ಅನುಭವ `ವರ್ಜಿನ್ ಮೊಹಿತೊ'

'ವರ್ಜಿನ್ ಮೊಹಿತೊ' ಓದಿ ಮುಗಿಸಿದೆ. ನಾನು ಓದಿದೆ ಅನ್ನುವುದಕ್ಕಿಂತಲೂ ಓದಿಸಿಕೊಂಡು ಹೋಯಿತು. ಏಳಕ್ಕೆ ಏಳೂ ಕಥೆಗಳೂ ಚೆನ್ನಾಗಿವೆ. ಕಥೆಗಳೆಲ್ಲವೂ ವಾಸ್ತವಕ್ಕೆ ಬಹಳ ಹತ್ತಿರವಿದ್ದು, ಕಣ್ಮುಂದೆ ಚಲಿಸುತ್ತಿರುವಂತಹ ಸಿನಿಮೀಯ ಅನುಭವವನ್ನು ಕೊಡುತ್ತವೆ. ಕಥೆಗಳನ್ನು ಓದುವಾಗ ಭಾಷೆಯೂ ಎಲ್ಲಿಯೂ ತೊಡಕಾಗದಷ್ಟು ಸರಳ ಮತ್ತು ಸುಲಲಿತವಾಗಿದೆ. ಅನಾವಶ್ಯಕವಾಗಿ ಯಾವುದೋ ಅರ್ಥವಾಗದ ಪದ ಪ್ರಯೋಗವಿಲ್ಲದೇ ಇದ್ದದ್ದು ನನ(ಓದುಗ)ಗೆ ಖುಷಿಕೊಟ್ಟಿದೆ.

ಬೊಂಬಾಯಿ ಪೆಟ್ಟಿಗೆ : ಪತ್ರಿಕೋದ್ಯಮದಲ್ಲಿ ಇರಬಹುದಾದ ವಿಷಮ ಪರಿಸ್ಥಿತಿ, ತಳಮಳ, ಗೊಂದಲಗಳನ್ನು ಅತ್ಯಂತ ಸರಳ ರೀತಿಯಲ್ಲಿ ವಿವರಿಸುತ್ತಾ ಕಥಾನಾಯಕ ತನ್ನ ಭಯವನ್ನು ಮೀರಿ ಉತ್ತಮವಾದ ನಿರ್ಧಾರವನ್ನು ಕೈಗೊಳ್ಳುವ ಒಂದು ಉತ್ತಮವಾದ ಕಥೆ.

ಹೈಡ್ ಪಾರ್ಕ್ : ಈ ಕಥೆಯೂ, ಪ್ರೀತಿ ಪ್ರೇಮ- ಆದರ್ಶಗಳ ನಡುವಿನ ತಾಕಲಾಟದ ಜೊತೆಗೆ ತಾಯಿ-ಮಗನ ಸುಂದರ ಭಾಂದವ್ಯದ ಅಭಿವ್ಯಕ್ತಿ. ಅವರಿಬ್ಬರ ನಡುವಿನ ಸಂವಹನ ಈ ಕಥೆಯ ಮುಖ್ಯ ಆಕರ್ಷಣೆ. ಒಂದೊಳ್ಳೆ ನೀತಿ ಕಥೆ ಎಂದರೆ ತಪ್ಪಾಗಲಾರದು.

ದಾಸ : ವಿಭಿನ್ನವಾದ ಕಥೆ ಇದಾಗಿದ್ದು ಇತ್ತೀಚಿನ ದಿನಗಳಲ್ಲಿ ಕಾಣಲು ಸಿಗದ ಅಪರೂಪದ ಸಂಗತಿಯ ಕಥಾವಸ್ತು. ಜೀವನದ ಎಲ್ಲಾ ಬದಲಾವಣೆಗಳು 'ದಾಸ'ನ ಮೇಲೂ ಆದರು ಪರಿಸ್ಥಿತಿಗಳು ತನ್ನನ್ನು ತಾನು ಹೊಂದಿಸಿಕೊಳ್ಳುತ್ತಾ ಕಥಾನಾಯಕನಿಗಿಂತಲೂ ಒಂದು ಪಾತ್ರ ಮೇಲಾಗಿ ಜೀವಿಸಿ, ಬಾಳಿ ಕೊನೆಯಲ್ಲಿ ವೀರಗತಿಯನ್ನು ಹೊಂದುತ್ತದೆ. ಹೀಗೆ ದಾಸನ ಬಾಳು ಒಬ್ಬ ವೀರ ಯೋಧನನ್ನು ನೆನಪಿಗೆ ತರುತ್ತದೆ. ಮನುಷ್ಯನಷ್ಟೆ ಪ್ರಾಣಿಗಳ ಭಾವನೆಗಳಿಗೂ ನ್ಯಾಯವೊದಗಿಸಿದ ಲೇಖಕರ ಸಹೃದಯ ಶ್ಲಾಘನೀಯ.

ಗರ್ಭ  : ಓದುಗನಿಗೆ ಕಥೆಯ ಮುಕ್ಕಾಲು ಭಾಗದವರೆಗೂ ಕಥೆಗಾರನ ತೊಳಲಾಟದೊಂದಿಗೆ ಸ್ಪಂದಿಸುವ ಕತೆ ಗರ್ಭ. ಒಂದು ವೇಳೆ ನಿಜಕ್ಕೂ ಸಾವು ಸಂಭವಿಸಿದರೆ ಇವನ ಮುಂದಿನ ಕಥೆಯೇನು? ಎಂಬುವ ತವಕ ಕಾಡುವುದು ಸುಳ್ಳಲ್ಲ. ಅದಕ್ಕೆ ಸರಿಯಾಗಿ ಅಂತ್ಯವನ್ನು ನೀಡಿರುವ ಕತೆಗಾರರು ಓದುಗನ ಮನಸ್ಸನ್ನು ಸಮಾಧಾನದ ದಡಕ್ಕೆ ಸೇರಿಸುವಲ್ಲಿ ಸಫಲರಾಗಿದ್ದಾರೆ.

ಮೂರು ಮುಖಗಳು : ಲೈಂಗಿಕ ಶೋಷಣೆ ಎಂದರೆ ಸಾಕು ಧಡಕ್ಕನೇ ಎದ್ದು ನಿಲ್ಲುವ ಸ್ತ್ರೀಪರ ಸಂಘಗಳು, ಸ್ತ್ರೀವಾದಿಗಳು ಯೋಚಿಸುವಂತಹ ಕಥೆ ಇದು. ಪುರುಷರ ಮೇಲೂ ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತದೆ ಎಂದು ತೋರಿಸುವ ಎದೆಗಾರಿಕೆ ಮತ್ತು ವಾಸ್ತವದ ಅರಿವನ್ನು ಈ ಕಥೆಯಲ್ಲಿ ತೋರಿಸಿಕೊಡುವುದಷ್ಟೇ ಅಲ್ಲದೆ, ಒಂದು ಹುಡುಗಿ ಮತ್ತು ಇಬ್ಬರು ಹುಡುಗರ ನಡುವಿನ ಸ್ನೇಹವನ್ನು ಒಂದು ಅಪ್ಪಟ ಸ್ನೇಹವಾಗಿ ತೋರಿಸಿರುವುದು, ಅಷ್ಟೇ ಆತ್ಮೀಯ ಸ್ನೇಹಪರತೆಯನ್ನು ಕಾಪಿಟ್ಟುಕೊಳ್ಳುವ ಸ್ನೇಹಪರತೆಯ ಪಾತ್ರಗಳು ಮೆಚ್ಚುಗೆಯಾಗುತ್ತವೆ.

ಕಾಣದ ಕೈಗಳ ಆಟ : ಆಸ್ಪತ್ರೆಗಳ ಇಂದಿನ ವ್ಯಾಪಾರೀಕರಣದ ಶುಷ್ಕತೆಯೊಂದಿಗೆ ಆರಂಭವಾಗುವ ಕಥೆ ಬರುಬರುತ್ತಾ ಜೀವ ಭಾವಗಳ ಒರತೆಯಾಗಿ ಹರಿದು, ಮಾನವೀಯತೆ ಮೆರೆಯುವ ಒಂದು ಅದ್ಭುತವಾದ ಕಥೆ. ಇಲ್ಲಿ 'ಕಿಣಿ' ಗೆ 'ಸಾದಿಯಾ' ಯಾರೆಂದು ತಿಳಿದ ಮೇಲೆ ತಾನು ಮಾಡಿದ ತಪ್ಪಿಗೆ ಭಯ, ಪಶ್ಚತ್ತಾಪವಾಗಿ ಒದ್ದಾಡುತ್ತಾ ಎಲ್ಲಿ ಸಾದಿಯಾ ಗೆ ಆದ ಅನ್ಯಾಯಕ್ಕೆ ಆಕೆ, ತನ್ನ ಜೀವ ತೆಗೆಯುವಳೋ ಎಂದು ಭಯಪಡುವಾಗ, ಸಾದಿಯಾ ನಿಷ್ಪಕ್ಷವಾಗಿ ತನ್ನ ವೈದ್ಯಕೀಯ ಕರ್ತವ್ಯವನ್ನು ಪೂರ್ಣಗೊಳಿಸಿ ಮಾನವೀಯತೆ ಮೆರೆಯುತ್ತಾಳೆ. ಆದರೆ ಅವಳಿಗೆ ಅವನ್ಯಾರು ಎಂದು ಗೊತ್ತಾಯಿತೇ....ಇಲ್ಲವೇ...ಎಂಬುದು ಸ್ಪಷ್ಟವಾಗಿಲ್ಲ. ಅವಳಿಗೆ ಗೊತ್ತಾದ ಮೇಲೆ ಆಕೆಯಲ್ಲಾಗಬಹುದಾದ ಧ್ವಂದ್ವ...ಅವಳ ತುಮುಲಗಳನ್ನೂ ಕತೆಗಾರರು ವಿವರಿಸಿದ್ದರೆ, ಕಥೆ ಇನ್ನೊಂದಿಷ್ಟು ರೋಚಕವಾಗುತ್ತಿತ್ತೇನೋ ಎನ್ನಿಸಿತು. ಆದರೂ ಕಥೆಯು ಸುಖಾಂತ್ಯಗೊಳ್ಳುವುದರಿಂದ ಆ ಅನುಮಾನವು ಹಾರಿಹೋಗಿ ನೆಮ್ಮದಿಯಾಗುತ್ತದೆ.

ವರ್ಜಿನ್ ಮೊಹಿತೊ : ಕಥಾ ಸಂಕಲನದ ಹೆಸರೇ ಆಗಿರುವ ಈ ಕಥೆಯೇ ಮೊದಲು ನನ್ನಿಂದ ಓದಲ್ಪಟ್ಟಿದ್ದಂತೂ ನಿಜ. ಹೆಸರೇ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತದೆ. ಕಥೆಯ ಹಂದರ ಬಹಳವೇ ಸಾಮಾನ್ಯವಾದದ್ದೇ ಆದರೂ, ಕಥೆ ಹೆಣೆದ ರೀತಿ ಮತ್ತು ಅಂತ್ಯ ಸೊಗಸಾಗಿದೆ. ಒಟ್ಟಿನಲ್ಲಿ.... ನಿಜವಾಗಿಯೂ ವರ್ಜಿನ್ ಮೊಹಿತೊ ಸವಿಯದ ನನ್ನನ್ನು ಒಮ್ಮೆ ರುಚಿ ನೋಡೇ ಬಿಡೋಣ ಎನ್ನುವಂತೆ ಮಾಡಿದ್ದು ಈ ಕೃತಿ. 

ಪುಸ್ತಕ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಾಯತ್ರಿ ರಾಜ್