Article

ಮಕ್ಕಳ ಮನೋಲೋಕದ ‘ಅಮರೊ’

ಬಾಲ್ಯ, ಜೀವನದ ಉದ್ದಕ್ಕೂ ನಮ್ಮೊಂದಿಗೆ ಇರುತ್ತದೆ. ಅದು ವ್ಯಕ್ತಿಯ ಬದುಕಿನಲ್ಲಿ ಏನೆಲ್ಲಾ ಜಾದು ಮಾಡುತ್ತದೆ!. ಏನೆಲ್ಲಾ ಖುಷಿಯ ಬೊಗಸೆಯೊಂದಿಗೆ ಬರುತ್ತಿರುತ್ತದೆ! ಅಥವಾ ಏನೇನೋ ಕಷ್ಟದ ದಿನಗಳ ಮುಖಾಮುಖಿಯಾಗಿರುತ್ತದೆ ಎಂದು ಹೇಳಲಿಕ್ಕಾಗದು. ಎಷ್ಟೋ ಜನರ ಬಾಲ್ಯದಲ್ಲಿನ ಕಷ್ಟಗಳು ಅವರ ಬದುಕಿನುದ್ದಕ್ಕೂ ನಿರಂತರವಾಗಿರಬಹುದು ಅಥವಾ ಅಲ್ಲಿನ ಕಷ್ಟಗಳನ್ನೇ ಮುಂದಿನ ಬದುಕಿನ ಶಕ್ತಿಯಾಗಿ ಪರಿವರ್ತಿಸಿಕೊಂಡವರಿರಬಹುದು. ಇಲ್ಲೆಲ್ಲ ತಂದೆ ತಾಯಿ, ಶಾಲೆಯ ಶಿಕ್ಷಕರು, ಯಾರೋ ಒಬ್ಬ ಆಂಟಿ, ಅಂಕಲ, ಮಠದ ಗುರುಗಳು, ಓದುವ ಪುಸ್ತಕ ಅಥವಾ ನೋಡಿದ ಘಟನೆಗಳು ಕೂಡಾ ಪರಿವರ್ತನೆಗೆ ಕಾರಣವಾಗಬಹುದು. ಬೆಳಕಿನ ತಿರುವಾಗಬಹುದು ಎಂದೆಲ್ಲಾ ಅನಿಸುವುದಿಲ್ಲವೆ. ಹಾಗಾಗಿಯೇ ಬಾಲ್ಯದ ಸಂಗತಿಗಳೊಂದಿಗೆ ಒಂದಾಗಿ ಕೂಡಿರುವ ಮಕ್ಕಳ ಸಾಹಿತ್ಯದ ಸಾಂಗತ್ಯ ಎಲ್ಲರಿಗೂ ಪ್ರಿಯವೆ. ಒಂದು ಕಡೆ ತಮ್ಮದೇ ಬಾಲ್ಯದೊಂದಿಗೆ ಮುಖಾಮುಖಿಯಾಗುತ್ತ ಬೇರೆ ಬೇರೆ ಪ್ರದೇಶ, ವಿವಿಧ ಸ್ತರದ ಸಮಾಜದ ಮಕ್ಕಳೊಂದಿಗೆ ಮಾತಿಗಿಳಿಯುವ, ಅವರ ಖುಷಿಯೊಂದಿಗೆ ಒಂದಾಗುವ, ಅವರ ಕಷ್ಟಗಳ ಕುರಿತು ಆದೃತೆ ಹೊಂದುವ ಆ ಮೂಲಕ ಸಮಾಜದ ಒಳಿತಿನ ಎಳೆಯೊಂದಿಗೆ ವಿಸ್ತರಿಸಿಕೊಳ್ಳುವುದು, ಮನರಂಜನೆಯ ಖುಷಿಯೊಂದಿಗೆ ಸಂಭ್ರಮಿಸುವ ಹಿತ ಮಕ್ಕಳಿಗಾದರೆ, ಹಿರಿಯರಿಗೆ ತಮ್ಮ ಬಾಲ್ಯದ ನೆನಪಿನೊಂದಿಗೆ ತೇಲುವ, ಬಾಲ್ಯಕ್ಕೆ ಮರಳುತ್ತ ಖುಷಿಯೊಂದಿಗೆ ಮಕ್ಕಳ ಮನೋವಿಜ್ಞಾನ ಹಾಗೂ ಅವರ ಅಂತರಂಗದೊಂದಿಗೆ ಒಟ್ಟಾಗುವ, ಮಕ್ಕಳ ಪ್ರೀತಿಯಲ್ಲಿ ಮುಳುಗುತ್ತ ಅವರನ್ನು ಹೇಗೆಲ್ಲಾ ಪ್ರೀತಿಸಬೇಕು ಎನ್ನುವ ಅರಿವಿನೊಂದಿಗೆ ಸಾಗುವ ಒಂದು ಹಿತಾನುಭವ ನೀಡುತ್ತದೆ ಎಂದು ನನಗೆ ಅನಿಸುತ್ತದೆ.
ಇಲ್ಲಿನ ಅನುವಾದ ಕತೆಗಳು ನಮ್ಮ ಕನ್ನಡದ ಮಕ್ಕಳಿಗೆ ಒಂದು ವಿಸೃತ ಓದಾಗುತ್ತದೆ. ವಿಸ್ತಾರದ ಓದಿಗೆ ಇಳಿಯುವ ಕಲೆ ತಮ್ಮದಾಗಿಸಿಕೊಳ್ಳುತ್ತ ಅರಿವಿನ ಹಾಗೂ ಸಂತಸದ ಪರಿಧಿಯನ್ನು ಹರವುಗೊಳಿಸುವ ಹಂಬಲವು ಕೃತಿಕಾರ ಮೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ಸಂಧ್ಯಾ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ‘ಅಭಿನವ’ ಪ್ರಕಟಿಸಿರುವ ಈ ಕಾದಂಬರಿಯನ್ನು ಹಿಂದಿಯಲ್ಲಿ ಹೆಸರಾಂತ ಲೇಖಕಿ ಸುಕೀರ್ತಿ ಭಟ್ನಾಗರ ಬರೆದಿದ್ದಾರೆ. ಈಗ ಇದನ್ನು ಕನ್ನಡಕ್ಕೆ ತಂದವರು ಯುವ ಉತ್ಸಾಹಿ ಬರಹಗಾರ ಯಲ್ಲಪ್ಪ ಹಂದ್ರಾಳ. 
 ತನ್ನ ಮನೆಯ ಬಡತನದಿಂದಾಗಿ ಬೇರೆಯವರ ಮನೆಗೆಲಸ ಮಾಡುವ ಹುಡುಗಿ ಅಮರೊ ಹಾಗೂ ಮನೆಯ ಯಜಮಾನಿ ಪಾರುಲ್ ಇವರ ಸುತ್ತ ಹಬ್ಬಿಕೊಂಡಿರುವ ಈ ಕಾದಂಬರಿ ಮಕ್ಕಳ ಮನೋ ಲೋಕದ ಸೂಕ್ಷ್ಮ ಎಳೆಗಳನ್ನು ಪರಿಚಯಿಸುತ್ತದೆ ಹಾಗೂ ಅವರ ಮನದ ಭಾಷೆ ಅರಿತಿರುವ ಹಾಗೂ ಒಳ್ಳೆಯದಕ್ಕಾಗಿ ತುಡಿಯುವ ಮನಸ್ಸಿನವರು ಮಕ್ಕಳಿಗಾಗಿ ಹೇಗೆಲ್ಲಾ ಸಹಾಯಕ್ಕೆ ಇಳಿಯುತ್ತಾರೆ ಎನ್ನುವುದನ್ನು ಈ ಕಾದಂಬರಿ ಹೇಳುತ್ತದೆ.
ಪಾರುಲ್ ಮನಶಾಸ್ತ್ರ ಪ್ರಾಧ್ಯಾಪಕಿ, ಅವಳ ಗಂಡ ಬ್ಯಾಂಕ ಅಧಿಕಾರಿ. ಅಯನ್ ಹಾಗೂ ಶೈನಾ ಹತ್ತು ಮತ್ತು ಏಳು ವರ್ಷದ ಮಕ್ಕಳು. ಊರಿಂದ ಬಂದ ಅಜ್ಜಿ (ಪಾರುಲ್ಲಳ ಗಂಡನ ತಾಯಿ) ಅವರ ಜೊತೆ ಇದ್ದಾಳೆ. ಈ ದಂಪತಿಯು ಕೆಲಸದಲ್ಲಿರುವ ಕುಟುಂಬಕ್ಕೆ ಅಮರೊ ಕೆಲಸದ ಆಳಾಗಿ ಬರುತ್ತಾಳೆ. ಅಜ್ಜಿ ಸಂಪ್ರದಾಯಸ್ತರು. ಆಳುಗಳನ್ನೆಲ್ಲ ಪ್ರೀತಿಸಬಾರದು ಅವರು ಕೆಳ ವರ್ಗದವರು ಎನ್ನುವ ಮನೋಭಾವ ತುಂಬಿಕೊಂಡವಳು. ತನ್ನ ಮೊಮ್ಮಕ್ಕಳನ್ನು ಚೆನ್ನಾಗಿ ನೊಡಿಕೊಳ್ಳುತ್ತಾಳಾದರೂ... ಅದೇ ರೀತಿ ಪುಟ್ಟ ಹುಡುಗಿಯೇ ಆದ ಅಮರೋಳನ್ನು ಬಿಡುವಿಲ್ಲದಂತೆ ಕೆಲಸದಲ್ಲಿ ತೊಡಗಿಸುವ, ಅವಳ ಬಯಕೆಗಳನ್ನು ಕಡಿದು ಹಾಕುವ ಏನೆಲ್ಲಾ ಸಂಗತಿಗಳನ್ನು ತರುತ್ತಲೇ ಇರುತ್ತಾಳೆ. ಅಜ್ಜಿ ಅಯನ್ ಸೈನಾರಿಗೂ ಕೆಲಸದ ಹುಡುಗಿಯ ಕುರಿತಾಗಿ ತಾತ್ಸಾರ ಭಾವ ಬೆಳೆಯುವಂತೆ ಮಾಡುತ್ತ ಹೋಗುತ್ತಾಳೆ.
    ಇದರ ನಡುವೆ ಪಾರುಲ್ ಅತ್ತೆಯ ಮನಸ್ಸು ನೋಯದಂತೆ ಅಮರೋಳ ಒಳಿತಿಗಾಗಿ ಅವಳ ಸಂತಸ ಹಾಗೂ ಭವಿಷ್ಯಕ್ಕಾಗಿ ಒಂದು ರೀತಿಯ ಹಗ್ಗದ ಮೇಲಿನ ನಡೆ ಅನುಭವಿಸುವುದು ಕಾದಂಬರಿಯ ಉದ್ದಕ್ಕೂ ಇದೆ. ಹಳ್ಳಿಯಿಂದ ಬರುವ ಅಜ್ಜ ಮಾತ್ರ ಎಲ್ಲ ಮಕ್ಕಳನ್ನೂ ಸಮಾನವಾಗಿ ಕಾಣುತ್ತಾ ಅವರ ಖುಷಿಗಾಗಿ ತೊಡಗುವುದು, ಕೆಲಸದ ಹುಡುಗಿಯ ಕಡೆಗೆ ಒಂದಿಷ್ಟು ಹೆಚ್ಚಿಗೆ ವಾಲುವುದು, ಅವಳಿಗೆ ಪ್ರೀತಿಯ ಧೈರ್ಯ ತುಂಬುವುದೆಲ್ಲ ಭಿನ್ನ ಭಿನ್ನ ವ್ಯಕ್ತಿತ್ವದ ಪಾತ್ರಗಳನ್ನು ಮಕ್ಕಳಿಗೆ ಸಹಜವಾಗಿ ಪರಿಚಯಿಸುತ್ತದೆ.
ಬಡತನ, ಕುಡುಕ ಗಂಡ, ಪುಟ್ಟ ಪುಟ್ಟ ಮಕ್ಕಳ ನಡುವೆ ಬದುಕನ್ನು ಮುನ್ನಡೆಸಲು ಅಮರೋಳ ತಾಯಿ ಬಂತಿ ಕಷ್ಟಪಡುತ್ತಾಳೆ. ಅವಳ ಚಿತ್ರ ಬಡತನದ ಕಷ್ಟಗಳ ನಡುವೆ ಸಂಸಾರದ ನೊಗ ಎಳೆಯುವ ತಾಯಂದಿರ ಪಾತ್ರಗಳನ್ನು ಕಣ್ಣ ಮುಂದೆ ತರುತ್ತದೆ. ಬಡತನ ಮತ್ತು ಅಜ್ಞಾನದ ಕಾರಣಗಳಿಂದ ಬಾಲ್ಯವಿವಾಹಕ್ಕೆ ಅಮರೊಳನ್ನು ದೂಡಲು ಪ್ರಯತ್ನಿಸುವ ಪ್ರಸಂಗವೂ ಇದೆ. ಆಗೆಲ್ಲ ಪಾರುಲ್ ಅದನ್ನು ನಿಭಾಯಿಸುವ ರೀತಿ ಒಂದು ವಾಸ್ತವ ನಡೆಯಾಗಿ ನಮಗೆ ಆಪ್ತವಾಗುತ್ತದೆ.
  ಅಮರೊ ರಾತ್ರಿಯಲ್ಲಿ ತನ್ನ ಕೋಣೆಯಲ್ಲಿ ಓದುತ್ತಿರುವುದು ಅಜ್ಜಿಗೆ ತಿಳಿದಾಗ ಆ ತೊಂದರೆಯಿಂದ ಪಾರು ಮಾಡುವುದು, ಹಾಗೇ ಪಾರುಲ್‍ಳ ಗಂಡನಿಗೆ ದೆಹಲಿಗೆ ವರ್ಗವಾಗಿ ದೆಹಲಿಗೆ ಹೋಗುವ ಸಮಯದಲ್ಲಿ ಅಮರೋಳ ಶಿಕ್ಷಣ ನಿಲ್ಲದಂತೆ ಪಾರುಲ್ ಮಾಡುವುದು ಎಲ್ಲವನ್ನೂ ಲೇಖಕರು ಸೂಕ್ಷ್ಮವಾಗಿ ಓದುಗರಿಗೆ ಆಪ್ತವಾಗಿಸಿದ್ದಾರೆ. ಪಾರುಲ್ ಹಾಗೂ ಅಮರೊ ಬಹಳ ದಿನಗಳ ನಂತರ ಭೇಟಿ ಆಗುವುದರೊಂದಿಗೆ ಮುಗಿಯುವ ಕಾದಂಬರಿ ಓದುಗರಲ್ಲಿ ಆರ್ದ್ರ ಭಾವ ಮೂಡಿಸುತ್ತದೆ ಹಾಗೂ ಮಗುವಿನ ಯಶಸ್ಸು ಖುಷಿಯನ್ನುಂಟು ಮಾಡುತ್ತದೆ.
ಹಿಂದಿ ಮೂಲದ ಈ ಕಾದಂಬರಿಯನ್ನು ಕನ್ನಡದ್ದೇ ಎನಿಸುವಷ್ಟರ ಮಟ್ಟಿಗೆ ಸೊಗಸಾಗಿ ಅನುವಾದಿಸಿದ್ದಾರೆ ಯಲ್ಲಪ್ಪ ಹಂದ್ರಾಳ ಮಕ್ಕಳ ಮನೋಲೋಕವನ್ನು ಲೀಲಾಜಾಲವಾಗಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮ್ಮಣ್ಣ ಬೀಗಾರ