Article

ಮಾನವೀಯ ಪ್ರೀತಿಯ ಅನುಸರಣ `ಜೊಲಾಂಟಾ’

ಈ ಜೀವ ಜಗತ್ತಿನಲ್ಲಿ ಒಂದೇ ಪ್ರಬೇಧದ ಜೀವಿಗಳ ನಡುವೆ ಪೈಪೋಟಿ ಆಹಾರ ಮತ್ತಿತರ ಜೈವಿಕ ಕಾರಣಕ್ಕಾಗಿ ಅತ್ಯಂತ ಸಹಜವಾದದ್ದು, ಅನೂಚಾನವಾಗಿ ನಡೆದು ಬಂದಿರುವಂತಹದು. ಇಂತಹ ಪೈಪೋಟಿಯ ಹೋರಾಟಗಳಲ್ಲಿ ಸಾವು ನೋವೂ ಸಹಜ. ಇದು ಪ್ರಾಕೃತಿಕ. ಆದರೆ ಆಹಾರ ಮೊದಲಾದ ಅನಿವಾರ್ಯ ಅಗತ್ಯಗಳಿಗಲ್ಲದೇ, ಗುಂಪಿನ ಮೇಲಿನ ಹಿಡಿತದಂತಹ ವಂಶ ಪ್ರಭೇದಗಳ ಅನುಷಂಗಿಕ ಕಾರಣ ಇಲ್ಲದೆಯೂ ಹೋರಾಟ, ಹಾರಾಟ ಮತ್ತು ದ್ವೇಷ ಮನುಷ್ಯರಲ್ಲಿ ಮಾತ್ರ ಸಾಧ್ಯ! ಇದು ಅಪ್ರಾಕೃತಿಕ. ಇಂತಹ ಅಪ್ರಾಕೃತಿಕ ಹೋರಾಟಗಳಿಗೆ ರಾಜ್ಯಾಧಿಕಾರ, ಯಾವುದೋ ಕಾಲದ ದ್ವೇಷಕ್ಕೆ ಸೇಡಿನ ಸಾಧನೆ, ಗಡಿ ವಿವಾದ, ಧರ್ಮ, ಭಾಷೆ...ಮೊದಲಾದ ಮಾನಸಿಕ ಕಾರಣಗಳು ಇರುವುದು ಅಪ್ರಾಕೃತಿಕವೇ. ಆದರೆ ಇಂತಹ ಕಾರಣಗಳಿಂದಾಗಿ ನಡೆದ ಸಾವಿರಾರು ಹೋರಾಟಗಳಲ್ಲಿ ಸತ್ತವರು ಮಾತ್ರ ಕೋಟ್ಯಾಂತರ ಜನ! ಸತ್ತವರೆಲ್ಲಾ ಯೋಧರಲ್ಲ. ಅದರಲ್ಲಿ ಅರ್ಧದಷ್ಟು ಜನ ಅಮಾಯಕರು, ಹೋರಾಟ ಯಾವುದು ಮತ್ತೆ ಏಕೆ ಎಂದೇ ಗೊತ್ತಿಲ್ಲದವರು. ಉಳಿದ ಕಾಲು ಭಾಗದಷ್ಟು ಜನ ಆ ಅರ್ಧ ಜನರ ಅವಲಂಬಿತರು - ಅಬಾಲವೃದ್ಧರು. ಇದು ಮನುಷ್ಯ ಕುಲಕ್ಕೆ, ನಾಗರಿಕತೆಯೊಂದಿಗೇ ಅಂಟಿರುವ ವಿನಾಶದ ಶಾಪ.

ಒಂದು ಭೂ ಪ್ರದೇಶದ ಗಡಿಯ ಈಚಿನವರಿಗೆ ಆಚೆಯ ಕಡೆಯವರು ಶತೃಗಳು! ಒಂದು ಸಮುದಾಯದವರಿಗೆ ಮತ್ತೊಂದು ಸಮುದಾಯದವರು ಪರಕೀಯರು! ಒಂದು ಧರ್ಮದವರಿಗೆ ಮತ್ತೊಂದು ಧರ್ಮದವರು ಅಧರ್ಮೀಯರು!! ಇದು ಚಿದಂಬರ ರಹಸ್ಯವೇನೂ ಅಲ್ಲ, ಆದರೆ ಯಾರಿಂದಲೂ ಬಿಡಿಸಲಾಗದ ಗೋಜಲು, ಕಗ್ಗಂಟು. ಈ ಸಾರ್ವಕಾಲಿಕ ಬಿಕ್ಕಟ್ಟನ್ನು ಎಡದಿಂದ ನೋಡಿದರೂ, ಬಲದಿಂದ ನೋಡಿದರೂ ಗಂಟು ಬಿಚ್ಚಲಾಗುವುದೇ ಇಲ್ಲ! ಅಥವಾ ಅದು ಬಿಚ್ಚಬಹುದಾದ ಗಂಟು ಅಲ್ಲ - ಕಗ್ಗಂಟು!

ಇಂತಹ ಪರಿಹಾರವೇ ಇಲ್ಲದ ಸಮಸ್ಯೆಗೆ, ಬೃಹತ್ ಗೊಂದಲಕ್ಕೆ ಇರುವುದು ಒಂದೇ ಮದ್ದು. ಅದು ಪರಸ್ಪರ ಸ್ವೀಕರಣ, ಮಾನವೀಯ ಪ್ರೀತಿಯ ಅನುಸರಣ. ಸದಾ ಯುದ್ಧ ಮಾಡುವ, ಮನುಷ್ಯ ನಾಗರಿಕತೆಯ ಮೇಲೆ ಮಾಯದ ಗಾಯ ಮಾಡುತ್ತಲೇ ಇರುವವರ ನಡುವೆಯೂ ಆ ಗಾಯಕ್ಕೆ ಮುಲಾಮು ಹಚ್ಚುವವರೂ ಇದ್ದಾರೆಂಬುದೇ ಒಂದು ಆಶಾಕಿರಣ. ಅಂತಹ ಕಿರಣ ಒಂದರ ಹೆಸರೇ 'ಜೊಲಾಂಟಾ' ಯಾನೆ 'ಇರೆನಾ ಸೆಂಡ್ಲರೋವಾ'.

ತಮ್ಮ ಜನಾಂಗೀಯ ಕಾರಣಕ್ಕಾಗಿಯೇ ದ್ವೇಷಕ್ಕೆ ಗುರಿಯಾದ, ಅಪಾರ ಪ್ರಮಾಣದ ಸಾವುನೋವಿಗೆ ಈಡಾದ ಸಹಸ್ರಾರು ಸಮುದಾಯಗಳಲ್ಲಿ ಯಹೂದಿ ಸಮುದಾಯವೂ ಒಂದು. ಆದರೆ ವಿಶ್ವದ ಎರಡನೆಯ ಮಹಾಯುದ್ಧದಲ್ಲಿ ಸರ್ವಾಧಿಕಾರಿ ಹಿಟ್ಲರ್ ನ ಫ್ಯಾಸಿಸ್ಟ್ ಚಿಂತನೆಯ ದ್ವೇಷಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬಲಿಯಾದುದು ಇದೇ ಯಹೂದಿ ಸಮುದಾಯ.

ಯಾವುದೇ ಒಂದು ಸಮುದಾಯದಲ್ಲಿ ಕೆಲವರಾದರೂ ಕ್ರೂರಿಗಳಿರಬಹುದು, ಜಿಪುಣ ವ್ಯಾಪಾರಿಗಳು, ಅಮಾನವೀಯ ಪಂಡಿತರು ಮತ್ತು ಪರ ಧರ್ಮ ಅಸಹಿಷ್ಣುಗಳಿರಬಹುದು. ಅಂತಹವರ ನಡವಳಿಕೆ ಬೇರೆ ಸಮುದಾಯಗಳಿಗೆ ಕಿರಿಕಿರಿ ಉಂಟು ಮಾಡಿರಲೂ ಬಹುದು. ಆದರೆ ಅಂತಹ ಕಿರಿಕಿರಿಯ ಹೊಣೆಗಾರಿಕೆ ಆಯಾ ಸಮುದಾಯದ ಎಲ್ಲರ ಮೇಲೂ ಹೊರಿಸಲು ಸಾಧ್ಯವೇ? ಇಂತಹ ಪ್ರಾಥಮಿಕ ಮಾನವೀಯ ತಿಳಿವೂ ಇಲ್ಲದ ಅಜ್ಞಾನದ ಕತ್ತಲೆಯಲ್ಲಿ ಹತ್ತಾರು ಸೇಡಿನ ಗಲಭೆಗಳು, ನೂರಾರು ಕುತಂತ್ರದ ಯುದ್ಧಗಳು ಲಕ್ಷಾಂತರ ಅಮಾಯಕರನ್ನು ಬಲಿ ಪಡೆಯುತ್ತಲೇ ಇವೆ!!

ಹೀಗೆ ಬಲಿಯಾದ ಯಹೂದಿ ಸಮುದಾಯದ ಬಗ್ಗೆ ಇರುವ ಜಾಗತಿಕ ವ್ಯಾಕುಲತೆ ಒಂದು ಅಪ್ಪಟ ಮಾನವೀಯ ಕಾಳಜಿಯದ್ದು. ಹಾಗಾಗಿಯೇ ಹಾಲಿವುಡ್ ಚಿತ್ರ ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್‌ ನ 'ಶಿಂಡ್ಲರ್ಸ್ ಲಿಸ್ಟ್', ಜನರ ಅಂತಃಕರಣದ ಮೆಚ್ಚುಗೆ ಪಡೆದ 'ಲೈಫ್ ಈಸ್ ಬ್ಯೂಟಿಫುಲ್' ಮೊದಲಾದ ಚಿತ್ರಗಳು ಈ ಯಹೂದಿ ಸಮುದಾಯ ಎದುರಿಸಿದ ಮಾರಣ ಹೋಮವನ್ನು ನೆನಪಿಸಿ ಕಂಬನಿಯ ತರ್ಪಣ ನೀಡಿವೆ. ಅಂತಹುದೇ ತಲ್ಲಣ, ಅಸಹಾಯಕತೆಯ ಕಂಪನ, ಮಾರಣ ಹೋಮದ ಮುನ್ನ ನಡೆದ ವ್ಯವಸ್ಥಿತವಾದ ಆಡಳಿತಾತ್ಮಕ ಕಾರ್ಯಾಚರಣೆಯ ವಿವರಗಳೇ ದಾಖಲಾಗಿರುವ ಪಲ್ಲವಿ ಇಡೂರರ ಜೊಲಾಂಟಾ ಕೃತಿ ಅಂತರಂಗವನ್ನೇ ಅಲುಗಾಡಿಸಿಬಿಡುವಂತಹದು.

ಇದು ಅನುವಾದಿತ ಕೃತಿಯಲ್ಲ. ಎರಡನೆಯ ವಿಶ್ವ ಮಹಾ ಯುದ್ಧದಲ್ಲಿ ಪೋಲೆಂಡ್ ದೇಶದ ವಾರ್ಸಾ ಪಟ್ಟಣವು ಜರ್ಮನಿಯ ನಾಜಿ ಸೈನ್ಯದೆದುರು ಸೋತು ಶರಣಾದ, ತದ ನಂತರದಲ್ಲಿ ವಾರ್ಸಾದ ಯಹೂದಿ ಸಮುದಾಯದ ಮೇಲೆ ನಡೆದ ಅಮಾನವೀಯ ಕಾರ್ಯಾಚರಣೆಯ ಸವಿವರಗಳ ಕ್ರೋಢೀಕರಣ. ಹಲವು ಆಕರಗಳನ್ನು ಆಧರಿಸಿದ ಈ ಕೃತಿಯ ಕೇಂದ್ರದಲ್ಲಿರುವುದು 'ಇರೆನಾ ಸೆಂಡ್ಲರೋವಾ' ಎಂಬ ಮಹಾ ಮಾನವತಾವಾದಿಯ ಬದುಕು. 
ಸಾಮಾಜಿಕ ಕಾರ್ಯಕರ್ತೆ ಎಂಬ ಹುದ್ದೆಯ ಆಕೆ ಯಹೂದಿ ಸಮುದಾಯದ ಬಗ್ಗೆ ಕನಿಕರಿಸಿ, ಆ ಸಮುದಾಯದ ಹಿರಿಯರ ಹತ್ಯೆಯಿಂದ ಅನಾಥರಾಗುತ್ತಿದ್ದ, ಯಹೂದಿ ಎಂಬ ಒಂದೇ ಕಾರಣಕ್ಕಾಗಿ ಬಲಿಯಾಗಬಹುದಾಗಿದ್ದ ಸುಮಾರು ಎರಡೂವರೆ ಸಾವಿರ ಕಂದಮ್ಮಗಳನ್ನು ಕಾಪಾಡಿದ ವಿವರಗಳೇ ಮೈ ಜುಮ್ಮೆನ್ನಿಸುತ್ತವೆ. ತನ್ನ ಹಾಗೂ ತನ್ನವರ ಜೀವವನ್ನು ಒತ್ತೆಯಿಟ್ಟೇ ಈ ಕಾರ್ಯಕ್ಕೆ ಕೈ ಹಾಕಿದ ಇರೆನಾ ಎಂಬ ಹೆಣ್ಣು ಮಗಳ ಭಾವ ಸ್ವಭಾವ ಮತ್ತು ತೊಳಲಾಟ ಈ ವ್ಯಕ್ತಿ ಚರಿತೆಯಲ್ಲದ ಕೃತಿಯಲ್ಲೂ ಗೋಚರಿಸುವುದು ಪಲ್ಲವಿಯವರ ಸೃಜನಶೀಲ ಬರವಣಿಗೆಯ ಕಾರಣಕ್ಕಾಗಿ.

ಕೃತಿಯನ್ನು ಓದುತ್ತಾ ಮೂಡುವ ಅಸಹಾಯಕತೆ, ಇತಿಹಾಸದ ಮೇಲಿನ ಆಕ್ರೋಶ, ನಡೆದು ಹೋಗಿರುವ ಮಾರಣ ಹೋಮದ ತಲ್ಲಣ, ಅದರಲ್ಲೂ ಇರೆನಾಳ ಮಾನವೀಯ ಮಾತೃತ್ವದ ಪರಿಶ್ರಮದಿಂದ ಉಳಿದುಕೊಂಡ ಸಾವಿರಾರು ಮಕ್ಕಳು, ದಶಕಗಳ ಕಾಲ ಬೆಳಕಿಗೆ ಬಾರದೇ ಉಳಿದ ಈ ತ್ಯಾಗ… ನನ್ನನ್ನು ಇನ್ನಿಲ್ಲದಂತೆ ಕಾಡಿವೆ, ಅಳಿಸಿವೆ. ಆ ಅಳಲು ಮತ್ತು ನನ್ನ ಅಳು ನನ್ನೊಳಗಿನ ಮಾನವೀಯ ಮನಸ್ಸನ್ನು ಮತ್ತಷ್ಟು ಮೆದುಗೊಳಿಸಿವೆ.

ಪಲ್ಲವಿ ಇಡೂರರ ಈ ಕೃತಿ 'ಜೊಲಾಂಟಾ'ದ ಓದು ಮನುಕುಲದ ಮನಸ್ಸನ್ನೂ ಖಂಡಿತಾ ಮೆದುಗೊಳಿಸುತ್ತದೆ. ಇದೇ ನನ್ನ ಈ ಹೊತ್ತಿನ ಭರವಸೆ, ನಿಜ ಸಾಹಿತ್ಯ ಕೃತಿಯೊಂದರಿಂದ ಹೊಮ್ಮಿದ ಆಶಾ ಕಿರಣ.

ಡಾ. ಆನಂದ್ ಋಗ್ವೇದಿ

ಆನಂದ್ ಋಗ್ವೇದಿ