Article

ಧ್ಯಾನಸ್ಥ ಕ್ರಿಯೆಯಲ್ಲಿ ಬೆಂದ ‘ಹೇಳಲೇಬೇಕಾದ್ದು ಇನ್ನೂ ಇದೆ’

‘...ಮಾತೆಲ್ಲ ಮುಗಿಯುವ ಮುಂಚೆಯೇ ಥಟ್ಟನೆ ಎದ್ದು ನಡೆದ ನಿನಗೆ ಎಷ್ಟೊಂದು ಹೇಳಬೇಕಿತ್ತು! ಹೇಳಲೇಬೇಕಾದ ಮಾತುಗಳು ದನಿಯಾಗುವ ಮುನ್ನವೇ ಹೊರಟು ಹೋದ ನಿನ್ನನ್ನು ಹುಡುಕುತ್ತಲೇ ಇರುವ ಭಾವ ಈಗಲೂ ನನ್ನೊಳಗೂ ಹೊರಗೂ; ನೀನು ಮಾತ್ರ ನನಗೆ ಈಟೀಟು ಕವಿತೆಯಾಗಿ ದಕ್ಕುತ್ತಿರುವೆ!’ ಈ ಸಂಕಲನದ ಕವಿತೆಗಳನ್ನು ಓದುವಾಗ ಕವಿಯು ಹುಡುಕುತ್ತಿರುವ ಆ ಬೆಳದಿಂಗಳ ಬಾಲೆ ನಮಗೂ ಸಹ ಕಾಣಿಸುತ್ತ ಹೋಗುತ್ತಾಳೆ. ಅವಳ ಚೆಲುವು ಒಲವುಗಳಲ್ಲಿ ನಮ್ಮ ನಾವೇ ಮೈಮರೆಯುವಂತೆ ಮಾಡುತ್ತಾಳೆ! ಆ ಮರೆವಿನಲ್ಲಿ ಇನ್ನೇನೋ ಹೇಳಬೇಕೆಂದು ಕೊಂಡಿರುವುದೆಲ್ಲ ನಾಲಗೆಯ ತುದಿಯ ಮೇಲೆಯೇ ಉಳಿದುಕೊಂಡು ಬಿಡಬಹುದಾದ ಆತಂಕ!...’

ಗೆಳೆಯ ಮಲ್ಲಿಕಾರ್ಜುನಗೌಡ ತೂಲಹಳ್ಳಿಅವರ ‘ಹೇಳಲೇಬೇಕಾದದ್ದು ಇನ್ನೂ ಇದೆ’ ಕವನ ಸಂಕಲನದಲ್ಲಿನ ಕವಿತೆಗಳನ್ನು ಇಡಿಯಾಗಿ ಓದಿದಾಗ ಆಕ್ಷಣದಲ್ಲಿ ನನ್ನ ಮನವನ್ನು ಆವರಿಸಿದ ಭಾವನೆ ಇದು! ಇಲ್ಲಿನ ಅರವತ್ತಕ್ಕೂ ಹೆಚ್ಚು ಕವಿತೆಗಳು ಮೇಲ್ನೋಟಕ್ಕೆ ಪ್ರೇಮ ಕವಿತೆಗಳಂತೆನಿಸಿದರೂ ಅವುಗಳ ಆಳದಲ್ಲಿ ಅನೂಹ್ಯವಾದ, ತರ್ಕಕ್ಕೆ ನಿಲುಕದ ಅರ್ಥವನ್ನು ಹಿಡಿದಿಟ್ಟುಕೊಂಡಿವೆ. ಈ ಕಾರಣವಾಗಿಯೇ ಇಲ್ಲಿನ ಕವಿತೆಗಳು ಥಟ್.. ಅಂತ ಓದುಗನನ್ನು ಆವರಿಸಿಕೊಂಡು ಇನ್ನಿಲ್ಲದಂಗೆ ಚಿಂತನೆಗೆ ಹಚ್ಚುತ್ತವೆ. ಈ ಲೋಕದ ಸಕಲ ಜೀವಾತ್ಮಗಳ ಸುಖ, ಸಂಭ್ರಮ, ನೋವು, ಸಂಕಟ, ಹತಾಶೆ - ಇವೆಲ್ಲವುಗಳೂ ಕವಿತೆಯಾಗಿ ಎದೆಯೊಳಗೆ ಇಳಿಯುತ್ತ, ಈಟಿಯಂತೆ ತಿವಿ ತಿವಿದು ನಮ್ಮನ್ನು ಎಚ್ಚರಿಸುತ್ತ ಹೋಗುತ್ತವೆ. ಇದು ಇಲ್ಲಿನ ಕವಿತೆಗಳ ಶಕ್ತಿಯೂ ಹೌದು. ಕವಿ ಮಲ್ಲಿಗೆ ಇದೆಲ್ಲ ಸಾಧ್ಯವಾದುದ್ದು ತಾನಿರುವ ಪರಿಸರದ ವ್ಯಾಪ್ತಿಯಲ್ಲಿ ಒಡನಾಟಕ್ಕೆ ಬಂದ ಅನೇಕ ವಿಚಾರಗಳ ಕಾರಣವಾಗಿ ಅವರೊಳಗೆ ರೂಪುಗೊಂಡ ನಿರ್ಧಿಷ್ಟವಾದ ’ತಾತ್ವಿಕತೆ’ಯಿಂದಾಗಿಯೇ ಎನ್ನಬಹುದು.

ಈ ಸಂಕಲನದಲ್ಲಿನ 'ಬಂದು ಬಿಡು ಬೇಗ' ಕವಿತೆಯನ್ನು ಗಮನಿಸಿ. ಮೇಲ್ನೋಟಕ್ಕೆ ಪ್ರೇಯಸಿಯ ಕುರಿತಾಗಿ ಬರೆದಂತಿರುವ ಈ ಪದ್ಯ, ಅದರ ಆಳದಲ್ಲಿ ಅನೂಹ್ಯವಾದ ಅರ್ಥವನ್ನು ಹಿಡಿದಿಟ್ಟುಕೊಂಡಿದೆ. ಮನುಷ್ಯ, ಯಾವತ್ತಿಗೂ ಕೂಡ ಬದುಕು ಅದಾಗಿಯೇ ಬಂದಂತೆಯೇ ಅನುಭವಿಸುತ್ತ, ಸುಖಿಸುತ್ತ ಇರುವುದು ಲೋಕದ ನಿಯಮ! ಈ ಕ್ರಿಯೆಯನ್ನು ಮೀರಿ ನಮ್ಮೆಲ್ಲ ಇಷ್ಟಗಳನ್ನು ತಕ್ಕಡಿಗಿಟ್ಟು ತೂಗಿ ನೋಡುವುದರಲ್ಲೇ ಕಾಲ ಕಳೆಯುತ್ತ, ಅಮೂಲ್ಯವಾದ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸದೇ ವಂಚಿತರಾಗುವುದರಲ್ಲಿ ಅರ್ಥವಿಲ್ಲ!ಕ್ಷಣಿಕ ಸುಖದ ಲೋಲುಪ್ತತೆಗೆ ಸಿಲುಕಿ, ಮುಂದೆ ಒದಗಿ ಬರಬಹುದಾದ ಮಹತ್ವವಾದುದನ್ನು ಕಳೆದುಕೊಳ್ಳುವುದು ಅದೆಷ್ಟು ಸರಿ?- ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಅಂತೆಯೇ, ಮನುಷ್ಯ ಶಾಶ್ವತ ಸುಖದ ನೆಲೆಯನ್ನು ಶೋಧಿಸುವುದರಲ್ಲಿ ನೆಮ್ಮದಿಯನ್ನು ಕಾಣಬೇಕು. ಹಾಗೆ ಸಿಕ್ಕುವ ನೆಮ್ಮದಿ ಹೇಗಿರುತ್ತದೆ ಎಂದರೆ ಪ್ರೇಯಸಿಯ ಮೆದು ಕೂದಲ ಮಧುರ ವಾಸನೆಯಲ್ಲಿ ಮನಸ್ಸನ್ನು ಅದ್ದಿ ತೆಗೆದಂತಿರುತ್ತದೆ ಎಂಬುದು ಕವಿಯ ಆಶಯವಾಗಿದೆ. ಇಲ್ಲಿ, ಓದುಗನು ಕವಿತೆಯೊಂದಿಗೆ ಮುಖಾಮುಖಿಯಾಗುತ್ತ ಹೋದಂತೆ ಖಾಲಿ ರಸ್ತೆಯನ್ನು ತಬ್ಬಿಕೊಂಡಿರಬಹುದಾದ ಮೌನದ ಚಿಪ್ಪು ಒಡೆದಂತೆ ಬದುಕಿನ ಅರ್ಥ ಗೋಚರಿಸುತ್ತ ಹೋಗುತ್ತದೆ! ಇದು ಕವಿಯಾಗಿ ಮಲ್ಲಿಯು ದಕ್ಕಿಸಿಕೊಂಡಿರುವ ಆಲೋಚನಾಕ್ರಮಕ್ಕೆ ಕನ್ನಡಿ ಹಿಡಿಯುತ್ತದೆ.

ಕವಿಯು ಧ್ಯಾನಸ್ಥ ಸ್ಥಿತಿಯಲ್ಲಿ ತನ್ನ ಸುತ್ತಣ ಲೋಕದ ಕುರಿತಾಗಿ ಸೃಜನಶೀಲ ನೆಲೆಯಲ್ಲಿ ಹೇಗೆಲ್ಲ ಕಲ್ಪಿಸಬಹುದು ಎಂಬುದಕ್ಕೆ ಉದಾಹರಣೆಯಂತಿರುವ 'ಕಣ್ಣ ಅರೆಮುಚ್ಚಿ' ಪದ್ಯ, ಹೆಣ್ಣಿನ ಸೌಂದರ್ಯವನ್ನು ಪ್ರಕೃತಿಯಲ್ಲಿನ ಗಿಡ,ಮರ,ಕೊಳ,ಹೂವು, ಹಸಿರು- ಇತ್ಯಾದಿಗಳೊಂದಿಗೆ ಸಮೀಕರಿಸಿ ಹೇಳುವುದರ ಮೂಲಕ ಹೆಣ್ಣೆಂದರೆ ಪ್ರಕೃತಿಯಂತೆ ಎಲ್ಲವನ್ನೂ ಒಳಗೊಂಡ ಚಿರಂತನವೂ ಹೌದು ಎಂದು ವಿವರಿಸುತ್ತದೆ. ಇಲ್ಲಿ, ತಿಳಿ ನೀರ ಮೇಲಿನ ಎಲೆ ನಿಶ್ಚಲವಾಗಿದೆ ಎಂಬುದು ಗಂಡಿನ ನಿಷ್ಕಲ್ಮಶ ಮನಸ್ಸು ಹೆಣ್ಣಿನ ಸಹಜ ಸೌಂದರ್ಯದ ಕುರಿತು ಧೇನಿಸುವುದೇ ಆಗಿದೆ.

ಕವಿ, ಹೆಣ್ಣಿನ ಸೌಂದರ್ಯವನ್ನು ವರ್ಣಿಸುವುದರ ಜೊತೆಯಲ್ಲಿಯೇ ವಾಸ್ತವದಲ್ಲಿ ಇರಬಹುದಾದ ಆಕೆಯ ಆಂತರ್ಯದಲ್ಲಿನ ತುಮುಲವನ್ನೂ ಸಹ ಕವಿತೆಯುದ್ದಕ್ಕೂ ಕಾಣಿಸುತ್ತ ಹೋಗುತ್ತಾರೆ. ಅದು, ಒಂದು ರೀತಿಯಲ್ಲಿ ಆಕೆಯ ಸಂತಸ,ಸಂಭ್ರಮ,ದುಃಖ, ದುಗುಡ, ಏದುಸಿರು, ವಿರಹ- ಇವೆಲ್ಲವುಗಳ ಮೂಲಕ ಕವಿಯು ಪರೋಕ್ಷವಾಗಿ ಪ್ರಕೃತಿಯ ಸಹಜ ಸ್ವಭಾವದ ಸತ್ಯ ದರ್ಶನವನ್ನು ಮಾಡಿಸುತ್ತಾರೆ.

ಇಲ್ಲಿ ಇನ್ನೊಂದು ಅತ್ಯಂತ ಆಪ್ತವಾಗಿ ತಟ್ಟುವ ಪದ್ಯವಿದೆ. ಅದು 'ಮಗು ಹೆಜ್ಜೆಯ ಸಂಭ್ರಮ' ಅನೂಹ್ಯವಾದ ಅರ್ಥವನ್ನು ಧ್ವನಿಸುತ್ತದೆ. ಪ್ರಕೃತಿಯಲ್ಲಿ ಮಳೆಗೆ ವಿಶಿಷ್ಟವಾದ ಸ್ಥಾನವಿದ್ದು ಮನುಷ್ಯ ಬದುಕಿನೊಂದಿಗೆ ಅದರ ಸಂಬಂಧ ಗಾಢವಾಗಿ ಬೆಸೆದುಕೊಂಡಿದೆ. ಆ ಸಂಬಂಧ ಅದೆಷ್ಟು ಸೂಕ್ಷ್ಮವಾಗಿ ಬೆಸೆದುಕೊಂಡಿದೆ ಎಂದರೆ ಮಳೆಯಂತೆಯೇ ಗಂಡು ಹೆಣ್ಣಿನ ಮಿಲನ ಕ್ರಿಯೆಯೂ ಸಂಭವಿಸುತ್ತದೆ! ಮಳೆ ಮತ್ತು ಮಿಲನ ಕ್ರಿಯೆ ಎರಡೂ ಫಲವತ್ತತೆಯ ಸಂಕೇತವೇ ಆಗಿದ್ದು, ಭೂಮ್ತಾಯಿಯ ಒಡಲು ಚಿಗುರಲು ಹೇಗೆ ಮಳೆ ಸುರಿಯಬೇಕೋ ಹಾಗೆಯೇ ಹೆಣ್ಣಿನ ಒಡಲು ತುಂಬಿ ಹೊಸ ಜೀವ ಹುಟ್ಟಲು ಮಿಲನ ಕ್ರಿಯೆ ನಡೆಯಲೇಬೇಕು.

ಹೀಗಾಗಿಯೇ ಕವಿ ಮಲ್ಲಿಕಾರ್ಜುನಗೌಡ, ಗಂಡು ಹೆಣ್ಣಿನ ನಡುವಿನ ಮಿಲನ ಕ್ರಿಯೆಯನ್ನು ಮಳೆಯೊಂದಿಗೆ ಸಮೀಕರಿಸಿ ಹೇಳುತ್ತಾರೆ. ಹಾಗೆ ನೋಡಿದರೆ ಕವಿಯು ಲೋಕದ ಕಣ್ಣು. ಅಂತೆಯೇ, ಒತ್ತಡವನ್ನು ತಾಳದ ಕಾರ್ಮೋಡಗಳು ಕೊನೆಗೂ ಧೋ.. ಎಂದು ಮಳೆಯಾಗಿ ಸುರಿಯುವ ಕ್ರಿಯೆಗೂ ಗಂಡು ಹೆಣ್ಣಿನ ಮಿಲನ ಕ್ರಿಯೆಗೂ ಸಂಬಂಧ ಕಲ್ಪಿಸುವುದು ಕವಿಯ ಹರಿತವಾದ ಕಲ್ಪನೆಗೆ ಸಾಕ್ಷಿಯಾಗಿದೆ. ಇವೆರಡೂ ಕ್ರಿಯೆಗಳು ಸೃಷ್ಟಿಯಲ್ಲಿ ಹೊಸತಕ್ಕೆ ನಾಂದಿ ಹಾಡುವ ಕ್ರಿಯೆಗಳೇ ಆಗಿವೆ. ಮತ್ತು ಈ ಕ್ರಿಯೆಗಳು ಮನುಷ್ಯ ಬದುಕಿಗೆ ಅನಿವಾರ್ಯವೂ ಹೌದು. ನಿಯಮಿತವಾಗಿ ಪಲ್ಲವಿಸುವ ಇಂಥ ಸಂಭ್ರಮಗಳು ನಮ್ಮ ಬದುಕನ್ನು ಮುನ್ನಡೆಸುತ್ತವೆ ಎನ್ನಬೇಕು. ಇಲ್ಲಿ, ಕವಿಯು ಪದ್ಯದಲ್ಲಿ ಎಲ್ಲೂ ನೇರವಾಗಿ ಹೇಳದೆ, ತುಸು ತುಸುವೇ ಪ್ರತಿಮೆಗಳ ಮೂಲಕ ಹೇಳುತ್ತ ಉಳಿದ ಎಲ್ಲವನ್ನೂ ಓದುಗರ ಗ್ರಹಿಕೆಗೆ ಬಿಟ್ಟುಕೊಡುತ್ತಾರೆ. ಹೀಗೆ ಕವಿಯು ಶಬ್ದಗಳ ಬಳಕೆಯ ವಿಚಾರದಲ್ಲಿ ಜಿಪುಣನಾಗಬೇಕು. ಆಗಲೇ ಕವಿತೆ ಕಲೆಯಂತೆ ಅರಳುತ್ತದೆ.

‘ಒಲೆ ಕೆಂಡವಾದಾಗಲೇ' ಪದ್ಯ, 'ಒಲವು ಎಂಬುದು ಯಾರಲ್ಲೂ ಸಹ ಥಟ್ ಎಂದು ಹುಟ್ಟಿಕೊಳ್ಳುವ ಕ್ರಿಯೆ ಅಲ್ಲ' ಎಂಬ ವಿಚಾರವನ್ನು ಮತ್ತು ಅದು ನಮ್ಮೊಳಗೆ ರೂಪುಗೊಳ್ಳುವ ಸಮಯದಲ್ಲಿ ನಮ್ಮ ಮನಸ್ಸಿಗೆ ಆಗುವ ಅನುಭವವನ್ನು ಮೀರಿ ಅನುಭಾವದ ನೆಲೆಯಲ್ಲಿ ಶೋಧಿಸುತ್ತ ಹೋಗುತ್ತದೆ. ನಮ್ಮೊಳಗೆ ಒಲವು ಹುಟ್ಟಿಕೊಳ್ಳುವ ಕ್ರಿಯೆಯೇ ರೋಚಕವಾದದ್ದು. ಅದೆಂದೂ ದಿಢೀರ್ ಎಂದು ಹುಟ್ಟುವುದಿಲ್ಲ. ಅದಕ್ಕಾಗಿ ನಾವು ಅನುದಿನವೂ ಕಾಯಬೇಕಾಗುತ್ತದೆ. ಒಲೆಯೊಳಗೆ ಕೆಂಡ ಹದವಾಗಿ ರೂಪುಗೊಂಡು ಸುಡುವ ಗೆಣಸಿನ ಘಮಲು ಗಾಳಿಯಲ್ಲಿ ಪಸರಿಸುವಂತೆ ಒಲವು ನಮ್ಮ ಮನಸ್ಸಿನೊಳಗೆ ನಿದನಿದಾನವಾಗಿ ಆವರಿಸಿಕೊಳ್ಳುತ್ತದೆ! ಅದೊಂದು ಏನಕೇನ ಕಾರಣವಾಗಿ ಸೃಷ್ಟಿಯೇ ನಮ್ಮೊಳಗೆ ರೂಪಿಸುವ ಪವಿತ್ರವಾದ ಕಾರ್ಯ- ಎನ್ನುತ್ತಾರೆ ಕವಿ ಮಲ್ಲಿಕಾರ್ಜುನಗೌಡ. ಆದರೆ, ಯಾವತ್ತಿಗೂ ಕೂಡ ಹಿಮದಂತೆ ಘನೀರ್ಭವಗೊಂಡ ಮನಸ್ಸುಗಳಲ್ಲಿ ಒಲವು ಹುಟ್ಟಲಾರದು ಎನ್ನುವ ಕವಿಯು, ಅಲ್ಲಿ ಜೇಡ ಬಲೆಯನ್ನೂ ಸಹ ನೇಯಲು ಹಿಂದೇಟು ಹಾಕುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಕಡೆಗೂ ಒಲವೆಂದರೆ ಸುಡುವ ಕೆಂಡವೇ ಕಾಲಾನುಕ್ರಮದಲ್ಲಿ ಹೂವಾಗಿ ಅರಳುವ ಕ್ರಿಯೆ! ಅದು ಅತ್ಯಂತ ಪವಿತ್ರವಾದ ಕ್ರಿಯೆ! ಅದನ್ನು ಮನಸ್ಸುಗಳ ಹೊರತಾಗಿ ಯಾರೂ ಸೃಜಿಸಲು ಸಾಧ್ಯವಿಲ್ಲ. ಅಂತೆಯೇ, ಅದು ಮೇಲನ ಇಬ್ಬನಿಯ ಹನಿಯಂತೆ ಇದ್ದು, ಯಾರೂ ರೂಪಿಸಲಾಗದು. ಒಲವನ್ನು ಮನಸ್ಸಿನ ಮೂಲಕ ಅನುಭವಿಸಲಷ್ಟೇ ಸಾಧ್ಯ- ಎಂಬ ಆಶಯವನ್ನು ಇಡಿಯಾಗಿ ಪದ್ಯ ಕಟ್ಟಿಕೊಡುತ್ತದೆ. ಅಸಲಿಗೆ ಗೀತೆ ಮುಗಿದಾಗಲೇ ಅಂದರೆ ನಮ್ಮೊಳಗಿನ ಅಹಂನ್ನು ಹೋಗಲಾಡಿಸಿದಾಗಲೇ ಒಲವಿನ ರಾಗ ಶುರುವಾಗುತ್ತದೆ ಎಂಬಲ್ಲಿಗೆ ಕವಿತೆಯ ಸಾರ್ಥಕತೆ ಮೆರೆಯುತ್ತದೆ.

ಈ ಕವನಸಂಕಲನದಲ್ಲಿ ಸಂಖ್ಯೆಯ ದೃಷ್ಟಿಯಿಂದ ನೋಡಿದಾಗ ಬಹಳಷ್ಟು ಕವಿತೆಗಳಿವೆ ಎಂದೆನಿಸಿದರೂ, ಅವೆಲ್ಲ ಕವಿಯ ಒತ್ತಾಯಕ್ಕೆ ಬರೆಸಿಕೊಂಡ ಕವಿತೆಗಳಿವು ಎಂದೆನಿಸಲಾರವಾದರೂ ಕವಿತೆಯೆಂದರೆ ಧ್ಯಾನಸ್ಥ ಕ್ರಿಯೆಯಾಗಿರುವಾಗ ಇವೆಲ್ಲ ಕಾಲಾನುಕ್ರಮದಲ್ಲಿ ಬರೆದುಕೊಂಡು ಬಂದ ಕವಿತೆಗಳು ಇರಲಾರವು ಎಂಬ ಸಂದೇಹವನ್ನೂ ಸಹ ಇಲ್ಲಿನ ಕವಿತೆಗಳು ಮೂಡಿಸದೆ ಇರಲಾರವು. ಒಬ್ಬ ವ್ಯಕ್ತಿಯನ್ನು ತಾಳ್ಮೆ ಮತ್ತು ಆಲೋಚನಾಕ್ರಮಗಳೇ ಸೃಜನಶೀಲ ಬರಹಗಾರನನ್ನಾಗಿಸುತ್ತವೆ. ಬರಹಗಾರನಿಗೆ ಸಾವಧಾನವಾಗಿ ಲೋಕವನ್ನು ನೋಡುವ ಗುಣವಿರಬೇಕು. ವಿಭಿನ್ನ ಸಂಗತಿಗಳನ್ನು ಬೇರೆ ಬೇರೆ ನೆಲೆಯಲ್ಲಿ ಆಲೋಚಿಸುವ ಕಲೆಯನ್ನು ಅಳವಡಿಸಿಕೊಳ್ಳಬೇಕು. ಬರೀ ಪ್ರೀತಿ ಪ್ರೇಮದಂಥ ಸಂಗತಿಗಳನ್ನೇ ಮುಂಚೂಣಿಗೆ ತಂದು ನಿಲ್ಲಿಸುವ ಕ್ರಮದ ಹೊರತಾಗಿಯೂ ಕಾವ್ಯವನ್ನು ಕಟ್ಟುವ ಬೇರೆ ಮಾರ್ಗವೂ ಇದೆ. ಕವಿಯಾದವನು ಒಳಗಣ್ಣಿನಿಂದ ಹೊರ ಪ್ರಪಂಚವನ ನೋಡಿದಾಗ ಆ ಮಾರ್ಗ ಕಾಣಿಸುತ್ತ ಹೋಗುತ್ತವೆ. ಅವುಗಳಿಗೆ ನಾವು ಸ್ಪಂದಿಸುವ ಕ್ರಿಯೆಗೆ ಒಳಗಾಗಬೇಕಷ್ಟೆ! ಕವಿಯಾಗಿ ಮಲ್ಲಿಕಾರ್ಜುನಗೌಡ ತೂಲಹಳ್ಳಿಯವರು ಭವಿಷ್ಯದಲ್ಲಿ ಇಂಥ ಕ್ರಿಯೆಗಳಿಗೂ ಸಹ ಒಳಗಾಗಲಿ ಎಂದು ಆಶಿಸುವೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಲ್ಲೇಶ್ ಕುಂಬಾರ್