Article

ದುರ್ಬರ ಕ್ಷಣದಿಂದ ಆವಿರ್ಭವಿಸಿದ ಆರ್ದ್ರತೆಯ ಕತಾಗುಚ್ಛ ‘ವರ್ಜಿನ್ ಮೊಹಿತೊ’

ಸತೀಶ್ ಸುಮಾರು ಕಾಲು ಶತಮಾನದ ನಂತರ ಹೊರತಂದಿರುವ ಕತಾಸಂಕಲನ ಇದು. ಈ ನಡುವಿನ ಅವಧಿಯಲ್ಲಿ ಅವರ ಕತೆಗಳೂ ಎಲ್ಲೂ ಪ್ರಕಟವಾದಂತಿಲ್ಲ. ಪತ್ರಿಕೆಗಳು ತನ್ನ ಕತೆಗಳನ್ನು ಪ್ರಕಟಿಸಿಲ್ಲ ಅನ್ನುವುದನ್ನೂ ಅವರು ಮುನ್ನುಡಿಯಲ್ಲಿ ಸಖೇದಾರೋಪಗಳೊಂದಿಗೆ ಬರೆದುಕೊಂಡಿದ್ದಾರೆ. ಪತ್ರಿಕೆಗಳು ಹೇಗೆ ಕತೆಗಳನ್ನು ಕಡೆಗಣಿಸುತ್ತಿವೆ ಅನ್ನುವುದನ್ನೂ ಹೇಳಿಕೊಂಡಿದ್ದಾರೆ. ಹೇಳಿ ಕೇಳಿ ಸತೀಶ್ ಭಾವನೆಗಳಿಗೆ ತನ್ನನ್ನು ಕೊಟ್ಟುಕೊಳ್ಳುವ ವ್ಯಕ್ತಿ. ಸಿಟ್ಟು ಬಂದಾಗ ಅನ್ನಿಸಿದ್ದನ್ನು ಥಟ್ಟಂಥ ಹೇಳುವ, ಆಮೇಲೆ ಅದನ್ನು ಅಲ್ಲಿಗೇ ಮರೆತುಬಿಡುವ ಈಶಾನ್ಯ ಮಾರುತದಂಥ ಕತೆಗಾರ. ಹೀಗಾಗಿ ಅವರ ಸಿಟ್ಟನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಅನ್ನುವುದು ನನ್ನಂಥ ಗೆಳೆಯರ ಅಭಿಪ್ರಾಯ.

ವರ್ಜಿನ್ ಮೊಹಿತೋ ಸಂಕಲನದಲ್ಲಿ ಏಳೇ ಏಳು ಕತೆಗಳಿವೆ. ಪ್ರತಿಯೊಂದು ಕತೆಯನ್ನು ಅನುಭವಿಸಿ ಬರೆದೆ ಅನ್ನುವ ಲೇಖಕರ ಮಾತಿಗೆ ಕತೆಗಳಲ್ಲೇ ಸಾಕ್ಷಿ ಸಿಗುತ್ತಾ ಹೋಗುತ್ತದೆ. ಬೊಂಬಾಯಿ ಪೆಟ್ಟಿಗೆ ಕತೆಯಲ್ಲಿ ಬರುವ ಪತ್ರಕರ್ತ ಸದಾನಂದನ ತಳಮಳಗಳನ್ನು ಚಪ್ಪರಿಕೆ ಕೂಡ ಅನುಭವಿಸಿರಲೇಬೇಕು. ಪತ್ರಿಕೋದ್ಯಮದ ಒತ್ತಡಗಳು ಮನುಷ್ಯನನ್ನು ಅಸಹಾಯಕನ್ನಾಗಿಸುವ ಹೊತ್ತಿಗೇ, ತನ್ನ ಬಾಲ್ಯದ ನೆನಪೊಂದು ಆತನನ್ನು ಪರಿವರ್ತಿಸುವ ರೀತಿ ಕತೆಯ ಶಕ್ತಿ. ಮನುಷ್ಯ ವರ್ತಮಾನದ ಘಟನೆಗಳಿಗೆ ಸ್ಪಂದಿಸುವುದಕ್ಕೆ ಕಾರಣ ಅವನೊಳಗೂ ಇರುವ ಅಂಥದ್ದೇ ಒಂದು ಕ್ಷಣ ಅನ್ನುವುದನ್ನು ಸತೀಶ್ ಚಪ್ಪರಿಕೆ ಬಹುತೇಕ ಕತೆಗಳಲ್ಲಿ ತೋರಿಸುತ್ತಾರೆ. ಸದಾನಂದನ ಎದುರಿರುವ ಹೆತ್ತವರನ್ನು ಕಳಕೊಂಡ ಮಗುವಿನ ಅನಾಥಪ್ರಜ್ಞೆ, ಸದಾನಂದನ ಒಳಗೂ ಇದೆ. ಸದಾನಂದ ತನ್ನ ಬದುಕಿನಲ್ಲೇ ಅತ್ಯಂತ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಆ ಯಾತನೆಯ ನೆನಪೇ ಕಾರಣವೂ ಆಗುತ್ತದೆ.
ಹೈಡ್ ಪಾರ್ಕ್ ಕತೆಯಲ್ಲಿ ಬರುವ ವಂದನಾಳ ಪಾತ್ರವೂ ಸಹ, ಮಗನ ಬದುಕಿನ ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳುತ್ತದೆ. ಪೂರ್ತಿ ಇಂಗ್ಲೆಂಡಿನಲ್ಲೇ ನಡೆಯುವ ಕತೆಯನ್ನು ಸತೀಶ್ ನಿಭಾಯಿಸುವ ರೀತಿಯೂ ಸೊಗಸಾಗಿದೆ. ಅಮ್ಮನನ್ನು ಲಂಡನ್ನಿಗೆ ಕರೆಸಿಕೊಳ್ಳುವ ಮಗ, ತಾನು ಹೇಳಬೇಕಾದ್ದನ್ನು ಹಿಂಜರಿಯುತ್ತಲೇ ಹೇಳುವುದು, ಅಮ್ಮನ ಉತ್ತರಕ್ಕಾಗಿ ಕಾಯುವುದು, ಉತ್ತರಿಸುವ ಮೊದಲು ಅಮ್ಮ ತನ್ನ ಬದುಕನ್ನಿಡೀ ಕಣ್ಮುಂದೆ ತಂದುಕೊಳ್ಳುವುದು-ಚಿತ್ರಕತೆಯಂತೆ ಕಟ್ಟಿಕೊಟ್ಟಿದ್ದಾರೆ ಸತೀಶ್.

ಸತೀಶ್ ಅದು ಹೇಗೋ ಪ್ರತಿಯೊಂದು ಕತೆಯೂ ನವ್ಯದ ನೆರಳಿನಿಂದ ಪಾರಾಗುವಂತೆ ಮಾಡಿದ್ದಾರೆ. ನವ್ಯದ ಕತೆಗಳ ಬಹುಮುಖ್ಯ ಗುಣವೆಂದರೆ ಓಪನ್ ಎಂಡಿಂಗ್. ಮುಕ್ತ ಅಂತ್ಯವಿರುವ ಕತೆಗಳು ಓದುಗನ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತವೆ ಎನ್ನುತ್ತಾರೆ. ಹಾಗಿಲ್ಲದ ಕತೆಗಳೂ ಬೆಳೆಯುವ ಸಾಧ್ಯತೆಯನ್ನು ಸತೀಶ್ ತೋರಿಸಿಕೊಡುತ್ತಾರೆ. ಹೀಗಾಗಿ ನವೋದಯದ ರಮ್ಯತೆ ಮತ್ತು ನವ್ಯದ ಆಧುನಿಕತೆಯನ್ನು ಉಳಿಸಿಕೊಂಡೇ ಬೇರೊಂದು ಸ್ತರದ ಕತೆಗಳನ್ನು ಕೊಟ್ಟಿದ್ದಾರೆ ಸತೀಶ್. ಪ್ರತಿಯೊಂದು ಕತೆಯೂ ಆಪ್ಯಾಯಮಾನವಾಗಿ ಕೊನೆಯಾಗುತ್ತದೆ. ಹೈಡ್ ಪಾರ್ಕ್ ಕೇವಲ ಒಂದು ಉದ್ಯಾನವಲ್ಲ. ಮನಸ್ಸಿನಲ್ಲಿದ್ದುದನ್ನೆಲ್ಲ ಹೇಳಿಕೊಳ್ಳಬಹುದಾದ ಸ್ಪೀಕರ್ಸ್ ಕಾರ್ನರ್ ಅಲ್ಲೇ ಇರುವುದು. ಈ ಕತೆಗೆ ಆ ಹೆಸರಿಟ್ಟಿರುವುದಕ್ಕೂ ಅದೇ ಕಾರಣ. ಇಬ್ಬರೂ ಮನಸ್ಸಿನಲ್ಲಿ ಇರುವುದನ್ನು ಹೇಳದೆಯೂ ಹೇಳುತ್ತಾ ಹೋಗುತ್ತಾರೆ. ಆ ಮಾತು ಮೌನಗಳಲ್ಲೇ ಸಂವಾದವಿದೆ.

ಈ ಕತೆಯ ಕೊನೆಯ ಭಾಗದ ಸಂಭಾಷಣೆಯನ್ನು ಸತೀಶ್ ಇಂಗ್ಲಿಷಿನಲ್ಲಿ ಬರೆದಿದ್ದಾರೆ. ಅದು ಕನ್ನಡದಲ್ಲೇ ಇದ್ದಿದ್ದರೆ ಚೆನ್ನಾಗಿತ್ತು. ಯಾಕೆಂದರೆ ಕತೆಯ ಬಹುಮುಖ್ಯ ಮಾತು ಅದು. ಇಂಗ್ಲಿಷ್ ಬರದೇ ಇರುವವರಿಗೆ ಅದು ಅರ್ಥವಾಗುವುದಿಲ್ಲ. ಮುಂದಿನ ಮುದ್ರಣದ ಹೊತ್ತಿಗೆ ಅದನ್ನು ಅವರು ಅನುವಾದಿಸಿ ಹಾಕಬಹುದು.
ಒಂದು ಚಹಾವನ್ನಿಟ್ಟುಕೊಂಡು ಒಂದು ನಾಯಿ ಮರಿಯ ಕುರಿತು ಬರೆದ ಕತೆಯೇ ದಾಸ. ಈ ಕತೆಯ ಜಿಗಿತವೇ ಅತ್ಯಾಕರ್ಷಕ. ಆರಂಭವಾಗುವ ಹೊತ್ತಿಗೆ ದಿಕ್ಕುದೆಸೆ ಬಿಟ್ಟುಕೊಡದ ಕತೆ, ಕ್ರಮೇಣ ಬಾಲ್ಯದ ವೃತ್ತಾಂತವನ್ನೂ ಅದಕ್ಕಂಟಿದ ದುರಂತದ ಲೇಪದೊಂದಿಗೆ ಬಿಚ್ಚಿಡುತ್ತಾ ಹೋಗುತ್ತದೆ. ಕತೆಯೇ ಪ್ರಬಂಧವಾಗುವ, ಪ್ರಬಂಧವೇ ಆತ್ಮವೃತ್ತಾಂತವೂ ಆಗುವ ಪವಾಡವೂ ಈ ಕತೆಯೊಳಗೆ ಸಂಭವಿಸಿದೆ. ಸಂಕಲನದಲ್ಲಿ ನನಗೆ ಇಷ್ಟವಾದ ಕತೆಗಳಲ್ಲಿ ಇದೂ ಒಂದು.

ಗರ್ಭ ಕತೆಯ ಶಕ್ತಿಯಿರುವುದೇ ಅದರ ವಾಸ್ತವತೆಯಲ್ಲಿ. ಅದು ತನ್ನ ಜೀವನದಲ್ಲಿ ನಡೆದ ಒಂದು ಪ್ರಸಂಗ ಅನ್ನುತ್ತಾರೆ ಸತೀಶ್. ಅಂಥ ಆರ್ದ್ರ ಕ್ಷಣಗಳನ್ನು ದಾಖಲಿಸುವುದು ಕೂಡ ಕತೆಗಾರನಿಗೆ ನೋವಿನ ಕೆಲಸ. ಹಾಗೆ ನೋಡಿದರೆ ಇದು ಯಾತನೆಯ ಏತದಿಂದ ಎತ್ತಿದ ನೀರು. ಒಂದು ದುರ್ಬರ ಕ್ಷಣವನ್ನು ಅನುಭವಿಸುತ್ತಲೇ ಅದನ್ನು ಕಲೆಯಾಗಿಸುವ ಸತೀಶ್ ಚಪ್ಪರಿಕೆ, ಕತೆಯನ್ನು ಒಂದು ವಿಚಿತ್ರ ಪ್ರಶ್ನೆಯೊಂದಿಗೆ ಕೊನೆಗೊಳಿಸುತ್ತಾರೆ. ಈ ಕತೆಯನ್ನು ಹೇಳಬೇಕೆಂದು ಮನಸ್ಸು ತುಡಿಯುತ್ತಿದೆ. ಆದರೆ ನೀವೇ ಅದನ್ನು ಓದುವುದು ಒಳ್ಳೆಯದು. ಸ್ಪಾಯ್ಲರ್ ಅಲರ್ಟ್ ಹಾಕುವುದು ನಾನೊಲ್ಲೆ.

ಇಲ್ಲಿರುವ ಏಳೂ ಕತೆಗಳೂ ಬೇರೆ ಬೇರೆ ಜಾನರ್‌ಗೆ ಸೇರಿದವು. ಆದರೆ ಆಳದಲ್ಲಿ ಅವುಗಳನ್ನು ಬೆಸೆದಿರುವ ತಂತು ಒಂದೇ-ಸಾರ್ಥಕತೆ ಮತ್ತು ನಿರರ್ಥಕತೆಯ ಪ್ರಶ್ನೆ. ಪ್ರತಿಯೊಂದು ಕತೆಯಲ್ಲೂ ಪತ್ರಕರ್ತ ಚಪ್ಪರಿಕೆ ಹಾಜರಾಗುತ್ತಾರೆ. ಕೊಡಬೇಕಾದ ವಿವರಗಳನ್ನು ಅಚ್ಚುಕಟ್ಟಾಗಿ ಕೊಟ್ಟು, ಕತೆಯನ್ನು ಒಬ್ಬ ನುರಿತ ಕತೆಗಾರನ ಕೈಗಿಟ್ಟು ಅವರು ಹಿನ್ನೆಲೆಗೆ ಸರಿಯುತ್ತಾರೆ. ಅಲ್ಲಿಂದಾಚೆಗೆ ಭಾವುಕ ಕತೆಗಾರ ತನ್ನ ಭಾವಭಾಷೆಯಲ್ಲಿ ಕತೆಯನ್ನು ನಿರೂಪಿಸುತ್ತಾ ಹೋಗುತ್ತಾನೆ.
ಸಂಕಲನದ ಕೊನೆಯ ಕತೆ, ಶೀರ್ಷಿಕೆ ಕತೆ, ವರ್ಜಿನ್ ಮೊಹಿತೋ. ಈ ಕತೆಯನ್ನು ನಾನು ಹಿಂದೆಯೇ ಓದಿದ್ದೆ. ಓದಿ ದಿಗ್ಮೂಢನಾಗಿದ್ದೆ. ವರ್ಜಿನಿಟಿಯ ಕುರಿತು ಈ ಕತೆ ಎತ್ತುವ ಪ್ರಶ್ನೆಗಳೆಲ್ಲವೂ ಈ ಕಾಲದ ಗಂಡಿನ ಸೋಲಿನಲ್ಲಿ ಹುಟ್ಟಿದ ಪ್ರಶ್ನೆಗಳೂ ಹೌದು. ಒಂದು ಪುಟ್ಟ ಮಾತುಕತೆ. ನಂತರದ ಲಂಚ್. ಆಕೆ ಆರ್ಡರ್ ಮಾಡುವ ವರ್ಜಿನ್ ಮೊಹಿತೋ- ಕತೆಯನ್ನು ಎಷ್ಟು ಕಲಾತ್ಮಕವಾಗಿಸುತ್ತದೆ ಎಂದರೆ, ಆ ಒಂದು ಮಾತಲ್ಲಿ ಗಂಡು ಹೆಣ್ಣಿನ ರಹಸ್ಯ ವಿಶ್ವವೇ ಅಡಗಿರುವಂತಿದೆ.
ಈ ಮಾತುಗಳನ್ನು ನಾನು ಪುಸ್ತಕ ಬಿಡುಗಡೆಯ ದಿನ ಹೇಳಬೇಕಾಗಿತ್ತು. ಆ ಸಂದರ್ಭ ಬರಲೇ ಇಲ್ಲವಾಗಿ ಅದನ್ನಿಲ್ಲಿ ಹೇಳುತ್ತಿದ್ದೇನೆ. ಬಹಳ ದಿನಗಳ ನಂತರ ಅಚ್ಚುಕಟ್ಟಾದ ಕತೆಗಳನ್ನು ಓದಿದ ಸಂತೋಷ ನನ್ನದು.

ಪುಸ್ತಕದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜೋಗಿ (ಗಿರೀಶ್ ರಾವ್ ಹತ್ವಾರ್)