About the Author

ಶತಾವಧಾನಿ ಗಣೇಶ ಅವರು ಉತ್ತಮ ವಾಗ್ಮಿಗಳು. ವಿದ್ವಾಂಸರು. ಅವಧಾನ ಕಲೆಯನ್ನು ರೂಢಿಸಿಕೊಂಡವರು. “ಕನ್ನಡದಲ್ಲಿ ಅವಧಾನ ಕಲೆ” ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿದ್ದಾರೆ.

ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಯ ಪುತ್ರರು.04-12-1962ರಂದು ಕೋಲಾರದಲ್ಲಿ ಜನನ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವೀಧರರು. ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ಸಂಸ್ಕೃತದಲ್ಲಿ ಎಂ.ಎ ಸ್ನಾತಕೋತ್ತರ ಪದವೀಧರರು.

ಗಣೇಶರ ಪೂರ್ವಜರು 'ದೇವರಾಯ ಸಮುದ್ರಂ' ದಿಂದ ಬಂದು ಕೋಲಾರದಲ್ಲಿ ನೆಲಸಿದವರು. ಮನೆಯಲ್ಲಿ ತಮಿಳು ಭಾಷೆ, ಕೋಲಾರದ ಪರಿಸರದಲ್ಲಿ ತೆಲುಗು ಭಾಷೆ,ಹಾಗೂ ಕನ್ನಡವನ್ನೂ ಕಲಿತರು.  ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಹಾಗೂ  ಗೌರಿಬಿದನೂರಿನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಂಡಿತು.

ಸಂಸ್ಕೃತ, ಕನ್ನಡ, ತೆಲುಗು ಹೀಗೆ 8 ಭಾಷೆಗಳಲ್ಲಿ ಅವಧಾನವನ್ನು ಪ್ರಸ್ತುತಪಡಿಸಿದ್ದರು. 'ಚಿತ್ರಕಾವ್ಯ' ಗಣೇಶ್ ಅವರ ವಿಶೇಷತೆ., ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ ಭೇಟಿ ನೀಡಿ ಈ ಕುರಿತು ಪ್ರದರ್ಶನ ನೀಡಿದ್ದಾರೆ. ಈ ಕಲೆಯ ಕುರಿತು ಶತಾವಧಾನ ಶಾರದೆ ಹಾಗೂ ಶತಾವಧಾನ ಶ್ರೀವಿದ್ಯೆ,-ಎರಡು ಕೃತಿಗಳನ್ನು ರಚಿಸಿದ್ದಾರೆ. 

ಕಾವ್ಯಮೀಮಾಂಸೆ, ಛಂದಶ್ಯಾಸ್ತ್ರ,ವೇದಾಂತ, ಉಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ, ಅಲಂಕಾರ ಶಾಸ್ತ್ರ ವಿಷಯಗಳಲ್ಲಿ ಪರಿಣಿತರು. ಸಂಸ್ಕೃತದಲ್ಲಿ 12ಕ್ಕೂ ಹೆಚ್ಚಿನ ನಾಟಕಗಳನ್ನೂ, ಸುಮಾರು 16 ಕಾವ್ಯಗಳನ್ನೂ, ಕನ್ನಡದಲ್ಲಿ 8 ಕಾವ್ಯಗಳನ್ನು, 3 ಕಾದಂಬರಿಗಳನ್ನು ಹಾಗೂ 6 ಅನುವಾದಗಳನ್ನು ಪೂರೈಸಿದ್ದಾರೆ. 

1992 ಸಾಲಿನ, ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೊತ್ಸವ ಪ್ರಶಸ್ತಿ-29 ವರ್ಷದ ಯುವ ಪ್ರತಿಭೆಯೊಬ್ಬ ಮೊಟ್ಟ ಮೊದಲು ಗಳಿಸಿದ ಹೆಗ್ಗಳಿಕೆ. ರಾಷ್ಟ್ರೀಯ ಯುವ ಪ್ರತಿಭಾ ಪುರಸ್ಕಾರ. ಕಾವ್ಯಕಾಂತ ಪ್ರಶಸ್ತಿ-ಬಾದರಾಯಣ-ವ್ಯಾಸ ಪುರಸ್ಕಾರ (ಭಾರತದ ರಾಷ್ಟ್ರಪತಿಗಳು ಸಂಸ್ಕೃತದಲ್ಲಿ ಮಾಡಿದ ಕಾರ್ಯಸಾಧನೆಗಳಿಗಾಗಿ ವ್ವ್ಯಕ್ತಿಯೊಬ್ಬನಿಗೆ ಪ್ರದಾನಮಾಡುವ 2003 ರ ಸಾಲಿನ ಪ್ರಶಸ್ತಿ) ಲಭಿಸಿವೆ. ಸೇಡಿಯಾಪು ಅವಾರ್ಡ್, ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಚಿತ್-ಪ್ರಭಾನಂದ ಪ್ರಶಸ್ತಿಲಭಿಸಿವೆ.

ಶತಾವಧಾನಿ ಆರ್. ಗಣೇಶ

(04 Dec 1962)