About the Author

ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ಮಂಡಲಿಯಲ್ಲಿ ಕೆಲಸ ಮಾಡಿದರು. ಪದವಿ ಜೊತೆಗೆ ಫ್ರೆಂಚ್ ಹಾಗೂ ಜರ್ಮನ್ ಭಾಷೆಗಳನ್ನು ಕಲಿತಿದ್ದರು.

ಪ್ಯಾರಿಸ್ಸಿಗೆ ತೆರಳಲು ಉಷಾರ ಬಳಿ ಫ್ರೆಂಚ್ ಭಾಷೆ ಕಲಿಯಲು ಬಂದ ನವರತ್ನರಾಂ ಅವರು ಉಷಾರನ್ನು ಮೆಚ್ಚಿ ವಿವಾಹವಾದರು. ಅವರ ಮೊದಲ ಕಾದಂಬರಿ ‘ಹೊಂಬಿಸಿಲು’. ಈ ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆನಂತರ ಬಲಿದಾನ, ಪ್ರೀತಿಸಿ ನೋಡು, ಸಮರ್ಪಣೆ, ಬಂಗಾರದ ಜಿಂಕೆ, ನಾಳೆಯು ಬರಲಿ ಕಾದಂಬರಿಗಳನ್ನು ರಚಿಸಿದರು. ಈ ಪೈಕಿ ಹೆಚ್ಚಿನವು ಚಲನಚಿತ್ರಗಳಾಗಿವೆ. ಇವರ ‘ಕೃಷ್ಣಾ ನೀ ಬೇಗನೆ ಬಾರೋ’, ‘ಮನೆಯೇ ಬೃಂದಾವನ’, ‘ಇಲ್ಲೇ ಸ್ವರ್ಗ’, ‘ಹೊಸರಾಗ’ ದೂರದರ್ಶನದಲ್ಲಿ ಧಾರಾವಾಹಿಗಳಲ್ಲಿ ಪ್ರಸಾರವಾದವು. ಈ-ಟಿವಿಯಲ್ಲಿ ಪ್ರಸಾರವಾದ ‘ನಿರಂತರ’ ಧಾರಾವಾಹಿ ಸಹ ಉಷಾರ ಕಥೆಯಾಧಾರಿತವಾಗಿತ್ತು. ಹಲವಾರು ಕತೆ ಕಾದಂಬರಿಗಳು ತಮಿಳು, ಮಲೆಯಾಳಂ, ತೆಲುಗು, ಪಂಜಾಬಿ ಭಾಷೆಗೂ ಭಾಷಾಂತರವಾಗಿವೆ. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಫೋಟೋ ಕಾಮಿಕ್ಸ್ ‘ಬೇಟೆ’ ಮಾದರಿಯ ಸರಣಿಯ ಪ್ರಥಮರೆಂಬ ಹೆಗ್ಗಳಿಕೆ ಇವರದು.

ಸಾಹಿತ್ಯದ ಜೊತೆಗೆ ಸಂಗೀತ, ನೃತ್ಯ ಉಷಾರವರ ಆಸಕ್ತಿಯ ವಿಷಯಗಳು. ಬೆಂಗಳೂರು ಆಕಾಶವಾಣಿಯಲ್ಲಿ ಅನೇಕ ಮಕ್ಕಳ ಕಾರ್ಯಕ್ರಮಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಡೆಸಿಕೊಟ್ಟ ಹಿರಿಮೆ ಇವರಿಗಿದೆ. ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಮನುಶ್ರೀ ಪ್ರಶಸ್ತಿ’ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ. ಉಷಾ ಅವರು ಅಕ್ಟೋಬರ್ 1ರ 2000ದಲ್ಲಿ ನಿಧನರಾದರು. 

ಉಷಾ ನವರತ್ನರಾಂ

(23 Nov 1939-10 Oct 2000)