ಆಲೂರು ದೊಡ್ಡನಿಂಗಪ್ಪ ಅವರ ಚಂದ್ರನ ಚೂರು: ಜಾತಿಯ ಕ್ರೌರ್ಯದ ಚಿತ್ರಣ


'ಹೊರನೋಟಕ್ಕೆ ಮತ್ತು ಭೌಗೋಳಿಕವಾಗಿ ಸುಂದರವಾಗಿ, ರಮ್ಯವಾಗಿ ಕಾಣುವ ಹಳ್ಳಿಗಳು ತಮ್ಮ ಸಾಮಾಜಿಕ ವಾತಾವರಣದಲ್ಲಿ ಮಾಲಿನ್ಯವನ್ನು ತುಂಬಿಕೊಂಡಿರುವುದನ್ನು ಈ ಕಾದಂಬರಿಯು ಚಿತ್ರಿಸುವಲ್ಲಿ ತನ್ನ ಆಸ್ಥೆಯನ್ನು ತೋರಿಸುತ್ತದೆ' ಎನ್ನುತ್ತಾರೆ ಲೇಖಕ ಎಚ್.ಆರ್. ರಮೇಶ್ ಅವರು ಆಲೂರು ದೊಡ್ಡನಿಂಗಪ್ಪ ಅವರ ಚಂದ್ರನ ಚೂರು ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಜಾತಿಯ ಕ್ರೌರ್ಯ ಎಂದಿಗೂ ಭಾರತದಲ್ಲಿ ಪ್ರಸ್ತುತವಾಗಿಯೇ ಇರುತ್ತದೆಯೇನೋ. ಈ ವಾಸ್ತವ ಸತ್ಯವನ್ನು ಮತ್ತು ಸಂಗತಿಯನ್ನು ಸಾಹಿತ್ಯವು ಅನೇಕ ಬಗೆಯಲ್ಲಿ ತನ್ನ ವಸ್ತುವಾಗಿ ಮಾಡಿಕೊಂಡು – ಚರ್ವಿತ ಚರ್ವಣವಾದರೂ - ಹೊಸ ಬಗೆಯ ನಿರೂಪಣೆಗಳನ್ನು ಸೃಷ್ಟಸುತ್ತಲೇ ಇರುವುದು. ದಣಿವಾದರೂ, ಸುಸ್ತನ್ನು ಸುಧಾರಿಸಿಕೊಂಡು ಮತ್ತೆ ತನ್ನ ಜವಾಬ್ದಾರಿಯನ್ನು ಅನಿವಾರ್ಯವೆಂಬಂತೆ ತೋರಿಸುತ್ತಲೇ ಇದೆ. ಈ ಆಲೋಚನೆಗಳು ನೆನಪಾದದ್ದು ಇತ್ತೀಚೆಗೆ ಕನ್ನಡದಲ್ಲಿ ಆಲೂರು ದೊಡ್ಡನಿಂಗಪ್ಪ ಅವರ ಎರಡನೇ ಕಾದಂಬರಿ ‘ಚಂದ್ರನ ಚೂರು’ ಅನ್ನು ಓದಿದಾಗ. ಜಾತಿ ವ್ಯವಸ್ಥೆಯ ಕ್ರೌರ್ಯದ ಅನೇಕ ಬಗೆಯ ಕೃತಿಗಳ ಸಾಲಿಗೆ ಇದು ಮತ್ತೊಂದು ‘ಸೇರ್ಪಡೆ’ಯಾಗಿ, ಕಂಡರೂ, ಈ ಕಾದಂಬರಿಯು, ಇಂದಿನ ಸಮಾಜದಲ್ಲಿ ಕ್ರಾಂತಿಕಾರಕ ಬಗೆಯಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಅಭಿವೃದ್ಧಿ/ಬದಲಾವಣೆಗಳೂ ಆಗಿದ್ದರೂ ಭಾರತೀಯ ಮನಸ್ಸಿನ ಆಂತರ್ಯದಲ್ಲಿ ಇನ್ನೂ ಗಟ್ಟಿಯಾಗಿ ಮತ್ತು ದಟ್ಟವಾಗಿ ವ್ಯಾಪಿಸಿಕೊಂಡಿರುವ ಜಾತಿಯ ಕರ್ಮಠ ಮನಸ್ಸನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸುವಲ್ಲಿ ಗಮನಸೆಳೆಯುತ್ತದೆ. ಇಡೀ ಕಾದಂಬರಿಯ ಉದ್ದೇಶ ಇದೇ ಆಗಿದೆ. ಹೊರನೋಟಕ್ಕೆ ಮತ್ತು ಭೌಗೋಳಿಕವಾಗಿ ಸುಂದರವಾಗಿ, ರಮ್ಯವಾಗಿ ಕಾಣುವ ಹಳ್ಳಿಗಳು ತಮ್ಮ ಸಾಮಾಜಿಕ ವಾತಾವರಣದಲ್ಲಿ ಮಾಲಿನ್ಯವನ್ನು ತುಂಬಿಕೊಂಡಿರುವುದನ್ನು ಈ ಕಾದಂಬರಿಯು ಚಿತ್ರಿಸುವಲ್ಲಿ ತನ್ನ ಆಸ್ಥೆಯನ್ನು ತೋರಿಸುತ್ತದೆ. ಇದೇ ಕಾದಂಬರಿಕಾರರ ಸೋಷಿಯಲ್ ಕಮಿಟ್ ಮೆಂಟಾಗಿ ಇಡೀ ಕಾದಂಬರಿಯಲ್ಲಿನ ನಿರೂಪಣೆಯ ಉದ್ದಕ್ಕೂ ಕಾಣಬಹುದಾಗಿದೆ.

ಕಾದಂಬರಿಯಲ್ಲಿ ಪಾತ್ರಗಳಿಗಿಂತಲೂ ಮಿಗಿಲಾಗಿ ಸಂದರ್ಭ ಮತ್ತು ಸನ್ನಿವೇಶಗಳೇ ಮುಖ್ಯಪಾತ್ರವನ್ನು ವಹಿಸುತ್ತವೆ. ಅವುಗಳ ಮೂಲಕ ಮನುಷ್ಯರ ಆಂತರ್ಯವನ್ನು ಅಭಿವ್ಯಕ್ತಿಸುವ ಕಡೆ ಕಾದಂಬರಿಕಾರರು ಆಸಕ್ತಿಯನ್ನು ತೋರಿಸಿ, ಅವುಗಳನ್ನು ‘ಕಥಾನಿರೂಪಣೆ’ಯಲ್ಲಿ ತೋರಿಸುವುದಕ್ಕಿಂತಲೂ ‘ದೃಶ್ಯ ನಿರೂಪಣೆ’ಗಳ ಮೂಲಕ ತೋರಿಸುವಲ್ಲಿ ಕಾದಂಬರಿಕಾರ ಆಲೂರರು ತಮ್ಮ ಚಿತ್ತವನ್ನು ಹರಿಸಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಿದಂತಿದೆ. ಇದು ಒಮ್ಮೊಮ್ಮೆ ಮಿತಿಯಾಗಿ ಮತ್ತು ವೈಶಿಷ್ಟ್ಯವಾಗಿಯೂ ಕಂಡು ಬರುತ್ತದೆ. ಹಂದಿ ಹಿಡಿಯುವ ದೃಶ್ಯವು ನಾಗರಾಜ ಮಂಜುಳೆ ಅವರ ಮರಾಠಿ ಸಿನೆಮಾ “ಫಂಡ್ರಿ” ಯನ್ನು ನೆನಪು ಮಾಡಿಸುತ್ತದೆ.

ಸಂವೇದನೆ ಬದಲಾಗದ ಹೊರತು ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಾಣಲಾಗದು. ಇಷ್ಟು ವರ್ಷಗಳ ತನಕ ಜಾತಿಯು ಪ್ರಸ್ತುತವಾಗುತ್ತ ಬಂದಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಇದೂ ಒಂದು ಎಂದು ಹೇಳಬಹುದು. ಈ ಕಾದಂಬರಿಯ ಒಂದು ಪಾತ್ರ ಅಥವಾ ಪ್ರತಿನಾಯಕ ಅಥವಾ ಜಾತಿವ್ಯವಸ್ಥೆಯ ಪ್ರತೀಕದಂತಿರುವ ಮಲ್ಲನ ಸಂವೇದನಾರಹಿತವಾದ ಮನೋಭಾವವೇ ಎರಡು ಜೀವಗಳನ್ನು ಆಹುತಿ ತೆಗೆದುಕೊಳ್ಳುತ್ತದೆ ಮತ್ತು ತನ್ನ ದುರಂತ ಅಂತ್ಯಕ್ಕೆ ಇದೂ ಕಾರಣವೂ ಹೌದು. ಅಹಂಕಾರ ಮತ್ತು ಸಂವೇದನಾ ಶೂನ್ಯತೆ ಅವನ ಊರನ್ನು ಮತ್ತು ಅನೇಕರ ಬದುಕುಗಳನ್ನೇ ವಿಚಲಿತಗೊಳಿಸುತ್ತವೆ. ಜಾತಿಯ ಕ್ರೌರ್ಯವನ್ನು ಕಾದಂಬರಿಯಲ್ಲಿ ಹಿಡಿದಿಡುವುದೇ ಕಾದಂಬರಿಕಾರನ ಉದ್ದೇಶವಾಗಿದ್ದು ಅದಕ್ಕೆ ಊರಿನ ಚಿತ್ರಗಳು ಪೂರಕವಾಗಿ ಬಂದಿವೆ. ಊರಿನ ಚಿತ್ರವನ್ನು ಕಟ್ಟಿಕೊಡುವಲ್ಲಿ ಲೇಖಕನ ಸೂಕ್ಷ್ಮ ತೆ ಮತ್ತು ಕಲ್ಪನಾಶಕ್ತಿಯನ್ನು ಕಾಣಬಹುದು. ಸುಡುವಾಸ್ತವದ ಸಂಗತಿಯನ್ನು ಕುರಿತು ಕಾದಂಬರಿಕಾರ ತನ್ನ ವಸ್ತುವಿಷಯವನ್ನಾಗಿ ಹಾಯ್ದುಕೊಂಡಿದ್ದರೂ ಅದಕ್ಕೆ ಕೆಲವು ಫ್ಯಾಂಟಸಿಯ ನಿರೂಪಣಾ ತಂತ್ರ ತುಂಬ ಗಮನವನ್ನು ಸೆಳೆಯುತ್ತದಾದರೂ. ಜನಪದ ಕತೆ ಅಥವಾ ದೇವನೂರರ ಕುಸುಮಬಾಲೆಯಲ್ಲಿ ಕಾಣುವಂತೆ ಸಮುದಾಯದ ಇಂಟಿಗ್ರಲ್ ಪಾರ್ಟಾಗಿ ಕಂಡುಬರದು. ಆದರೂ ಕಾದಂಬರಿಯ ಕತೆಯ ಒಳಗೆ ಸಂಭವಿಸುವ ಅನೇಕ ವಾಸ್ತವ ಘಟನೆಗಳು ನಿರೂಪಿತವಾಗುವುದು ಈ ಫ್ಯಾಂಟಸಿ ತಂತ್ರದ ಮೂಲಕವೇ. ಅಂದರೆ ಆಲೂರರು ಇದನ್ನು ಪ್ರಜ್ಞಾಪೂರ್ವಕವಾಗಿಯೇ ಮಾಡಿದಂತಿದ್ದು, ಸಿದ್ದನ ಕೊಲೆ, ಅವನ ಮಗ ಸಿದ್ದನನ್ನು ಸುಡುವ ಈ ಅಮಾನುಷ ಕೃತ್ಯಗಳನ್ನು ನಿರ್ಜೀವ ವಸ್ತುಗಳ ಮೂಲಕ, ಪ್ರಾಣಿ ಪಕ್ಷಿಗಳ ಮೂಲಕ ತೋರಿಸಿರುವುದು ಮನುಷ್ಯ ಲೋಕ ಎಸಗುವ ಅಮಾನುಷತೆಗೆ ಒಂದು ಪರಿಣಾಮಕಾರಿಯಾದಂತಹ ವ್ಯಂಗ್ಯವಾಗಿ ಕಂಡು ಬರುವುದು. ಈ ತಂತ್ರ ತುಸು ಮೆಚ್ಚುಗೆಯನ್ನು ಪಡೆಯುತ್ತದೆ.

ಇಲ್ಲಿಯ ಅನೇಕರ ಬದುಕು ಛಿದ್ರಗೊಂಡಿದೆ, ಜೊತೆಗೆ ಅವರ ಬದುಕು ಅಸಂತೋಷ, ನಿರಾಸೆಗಳಿಂದ ಕೂಡಿದೆ. ಬಹುಷಃ ಯಾವುದೇ ಕಲೆಯ ಮುಖ್ಯ ಸ್ಥಾಯಿಭಾವ ಇದೇ ಅನ್ನಿಸುತ್ತದೆ. ಹಂದಿ ಸಿಗದೇ ಇರುವುದು, ದ್ಯಾವಕ್ಕನಿಗೆ ಮಗ ಸಿಗದೇ ಇರುವುದು ಅಥವಾ ತನ್ನ ಮಗ ಕೊಲೆಯಾದ ಎನ್ನುವ ಸಂಗತಿ ಇತ್ಯಾದಿ. ಈ ಕಾದಂಬರಿಯಲ್ಲಿ ಒಂದು ಗಮನಿಸಬೇಕಾದ ಅಂಶ ಇಲ್ಲಿನ ಧಾರುಣತೆ ಮತ್ತು ದುರಂತಗಳಿಗೆ ಕಾರಣ ಜಾತಿಯ ಕ್ರೌರ್ಯವೇ ಆಗಿದ್ದರೂ, ನಿಷ್ಟೆಯ ಪ್ರಶ್ನೆಯೂ ಬರುತ್ತದೆ. ಸಿದ್ದನ ಹತ್ಯೆಗೆ ಮಲ್ಲನ ಹೆಂಡತಿ ಚಂದ್ರಳು, ಸಿದ್ದ (ಮಲ್ಲನ ತೋಟದಲ್ಲಿ ಕೆಲಸ ಮೂಡುವ ಆಳು) ನ ಜೊತೆ ಅನರಕ್ತಳಾಗಿರುವುದೂ ಕಾರಣವಾಗಿರುವುದನ್ನು ತಳ್ಳಿಹಾಕಲಾಗದು.

ಕಾದಂಬರಿಯ ಕೇಂದ್ರವಾಗಬೇಕಿದ್ದ ಚಂದ್ರ ಮತ್ತು ಸಿದ್ದ ಅವರ ಕತೆ ಒಂದು ಘಟನೆಯಾಗಿ ನಿಂತು ಕಾದಂಬರಿಯು ಪಡೆಯಬೇಕಿದ್ದ ಓಘ ಅರ್ಧಕ್ಕೆ ನಿಂತು ಬಿಡುತ್ತದೆ. ಅಥವಾ ಕಾದಂಬರಿಕಾರರು ಅದನ್ನು ಇನ್ನಷ್ಟು ಸಾಂದ್ರವಾಗಿ ಮತ್ತು ವಿಸ್ತೃತವಾಗಿ ಹೇಳಬೇಕಾಗಿದ್ದ ಅವಕಾಶವನ್ನು ತಾವೇ ಕಳೆದುಕೊಳ್ಳುತ್ತಾರೆ. ಇದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ. ಇವರಿಬ್ಬರ ನಡುವಿನ ಕತೆಗೆ ಇನ್ನಷ್ಟು ಸ್ಪಷ್ಟತೆ ಬೇಕಾಗಿತ್ತೇನೋ ಅನ್ನಿಸುತ್ತದೆ. ಇದು ಅಸ್ಪಷ್ಟತೆಯೇ ವಿನಃ ಸಂಕೀರ್ಣತೆಯಲ್ಲ (ಬಹುಷಃ ನನ್ನ ಗ್ರಹಿಕೆ ತಪ್ಪಿರಬಹುದು). ಆಶಾದೇವಿ ಅವರು ಪುಸ್ತಕವನ್ನು ಕುರಿತು ಮಾತಾಡುವ ಸಂದರ್ಭದಲ್ಲಿ ಚಂದ್ರ ಮತ್ತು ಸಿದ್ದರ ಎಪಿಸೋಡು ಸ್ವಲ್ಪ ‘ರಮ್ಯ’ವಾಯಿತು ಎಂದು ಹೇಳಿದುದನ್ನು ಒಪ್ಪಬಹುದೇನೋ. ಯಾಕೆಂದರೆ ಒಮ್ಮೊಮ್ಮೆ ಹಾಗೆ ಅನ್ನಿಸುತ್ತೆ ಕೂಡ. ಏನೇ ಹೇಳಿದ್ರೂ, ಇದು ಕಾದಂಬರಿಯೂ ಇಡೀಯಾಗಿ ಕೊಡುವ ಪರಿಣಾಮಕ್ಕೆ ದಕ್ಕೆಯನ್ನು ತರುವುದಿಲ್ಲ.

ಆಲೂರು ಅವರು ಭಾಷೆಯ ವಿಚಾರದಲ್ಲಿ ತೋರಿಸುವ ನಿಷ್ಠೆಯನ್ನು ಕಥಾವಸ್ತುವನ್ನು ಕೇಂದ್ರಿಕರಿಸಿಕೊಳ್ಳುವುದರಲ್ಲಿ ತೋರಿಸುವುದಿಲ್ಲ. ಇಲ್ಲಿ ಜಾತಿಯ ಕ್ರೌರ್ಯವೇ ಕಾದಂಬರಿಯ ಕೇಂದ್ರಬಿಂದುವಾಗಿ, ಯಾವುದೇ ಒಂದು ಪಾತ್ರ ಅಥವಾ ಕುಟುಂಬದ ಸಮಷ್ಟಿ ಚಿತ್ರಣವನ್ನು ಕಾಣಲು ಆಗುವುದಿಲ್ಲ. ಊರಿನ ಘಟನೆಗಳ ಮೂಲಕ ಜಾತಿಯತೆಯ ಮನೋಭಾವವನ್ನು ತೋರಿಸುವಲ್ಲಿ ಕಾದಂಬರಿಕಾರ ತನ್ನ ಗಮನವನ್ನು ಕೊಡುತ್ತಾರೆ. ಹಾಗಾಗಿ ಇದು ಚಂದ್ರ ಮತ್ತು ಅವಳ ಪ್ರಿಯಕರ ಸಿದ್ದ ಇವರ ದುರಂತದ ಕತೆಯು ಊರಿನ ಮತ್ತಿತರರ ಕತೆಗಳು ನಿರೂಪಣೆಯಲ್ಲಿ ಸೇರಿಕೊಳ್ಳುತ್ತದೆ. ಒಂದು ಸಮುದಾಯದ ಕತೆಯೂ ಆಗಬಹುದಿತ್ತು. ಆ ಥರವೂ ಆಗುವುದಿಲ್ಲ. ಕುಸುಮಬಾಲೆ, ಸಂಸ್ಕಾರಗಳಂತಹ ಕಾದಂಬರಿಗಳು ಸಮುದಾಯದ ಕಥನಗಳಾಗಿ ಒಡಮೂಡಿ, ಏಕಕಾಲದಲ್ಲಿ ವೈಯಕ್ತಿಕ ಮತ್ತು ಸಾರ್ವತ್ರಿಕ ಆಯಾಮಗಳನ್ನು ಪಡೆಯುತ್ತವೆ. ಈ ಕಾದಂಬರಿಗಳಲ್ಲಿ ಸಮುದಾಯಗಳೇ ಕತೆಯನ್ನು ನಿರೂಪಿಸುತ್ತವೆ, ಆದರೆ ‘ಚಂದ್ರನ ಚೂರು’ ವಿನಲ್ಲಿ ಪಾತ್ರಗಳ ಮಾತುಗಳ ಮೂಲಕ ನಿರೂಪಣೆಯಾಗಿದ್ದು, ಕಾದಂಬರಿ ಪ್ರಕಾರದಲ್ಲಿ ಕಂಡು ಬರುವ ಸಹಜ ನಿರೂಪಣೆ ಕಳೆದು ಹೋಗುತ್ತದೆ. ಆದಾಗ್ಯೂ ಕಾದಂಬರಿಕಾರರ ಕಾಳಜಿ ನಮ್ಮ ಹೃದಯವನ್ನು ಟಚ್ ಮಾಡುತ್ತದೆ, ಮತ್ತು, ‘ಒಂದು ಕಾದಂಬರಿ’ ಕೊಡಬಹುದಾದ ದರ್ಶನ ಈ ಕಾದಂಬರಿಯಲ್ಲಿ ಆಗುತ್ತದೆಯಾ ಎನ್ನುವುದು ಪ್ರಶ್ನೆಯಾಗಿ ಉಳಿದರೂ, ಇಂದು ಬರುತ್ತಿರುವ ಅನೇಕ ಕಾದಂಬರಿಗಳ ನಡುವೆ ಇದು ತನ್ನ ವಿಶಿಷ್ಟ ಭಾಷಾ ಬಳಕೆಯಿಂದಾಗಿ, ಜಾತಿಯ ಕ್ರೌರ್ಯದ ಪರಿಣಾಮಕಾರಿಯಾದ ಅಭಿವ್ಯಕ್ತಿಯಿಂದಾಗಿ ಗಮನ ಸೆಳೆಯುತ್ತದೆ.

●●●

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...