‘ಅಂಬೇಡ್ಕರ್ ಜೀವನ’ ಚರಿತ್ರೆಗೆ ಭೂಷಣ: ಡಾ. ರೋಹಿಣಾಕ್ಷ ಶಿರ್ಲಾಲು


ಅಂಬೇಡ್ಕರ್ ಅವರ ಚಿಂತನೆಯನ್ನು, ಅವರ ಪ್ರಖರ ವೈಚಾರಿಕತೆಯನ್ನು ಆಧಾರ ಭೂತವಾಗಿ ನಿರೂಪಿಸುವ ಕೃತಿಯಿದು ಎನ್ನುತ್ತಾರೆ ಲೇಖಕ ಡಾ. ರೋಹಿಣಾಕ್ಷ ಶಿರ್ಲಾಲು. ಅವರು ಜೆ.ಪಿ. ದೊಡಮನಿ ಅವರು ಅನುವಾದಿಸಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ. 

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತಂತೆ ಭಾರತೀಯ ಭಾಷೆಗಳಷ್ಟೇ ಅಲ್ಲದೇ ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಸಾಕಷ್ಟು ಅಧ್ಯಯನ ಪೂರ್ಣ ಕೃತಿಗಳು ಪ್ರಕಟವಾಗುತ್ತಲೇ ಇರುವುದು ಬಾಬಾ ಸಾಹೇಬ್ ಅವರ ವ್ಯಕ್ತಿತ್ವದ ಪ್ರಭಾವಕ್ಕೆ ಹಿಡಿದ ಕನ್ನಡಿ ಎನ್ನಬೇಕು. ಭಾರತೀಯ ಸಂದರ್ಭದಲ್ಲಿ ಅಂಬೇಡ್ಕರ್ ಉಂಟುಮಾಡಿದ ಸಾಮಾಜಿಕ ಸಂಚಲನದ ಕಂಪನದ ಅಲೆಗಳು ಇಂದಿಗೂ ನಾನಾ ರೂಪಗಳಲ್ಲಿ ಕ್ರೀಯಾಶೀಲವಾಗಿರುವುದನ್ನು ನೋಡುತ್ತಿದ್ದೇವೆ. ಇಂತಹ ಕ್ರೀಯಾಶೀಲತೆಯ ಹಿಂದೆ ಅವರ ವಿಚಾರ ಧಾರೆಯನ್ನು ಅರಿತು ಅದನ್ನು ಜೀವನದ ಧ್ಯೇಯವಾಗಿ ಸ್ವೀಕರಿಸಿದ ಲಕ್ಷಾಂತರ ಜನರ ಪರಿಶ್ರಮವಿದೆ.  

ಇಂದಿಗೂ ಸಮಾಜವು ಸಾಮೂಹಿಕವಾಗಿ ಅಂಬೇಡ್ಕರ್ ವಿಚಾರಧಾರೆಯನ್ನು ಎದೆಯಲ್ಲಿಟ್ಟುಕೊಂಡು ಬದುಕುವುದಕ್ಕೆ ಅವರ ಕುರಿತು ಪ್ರಕಟವಾಗುತ್ತಿರುವ ಕೃತಿಗಳು ಕೂಡ ಮುಖ್ಯ ಕಾರಣ. ಅಂಬೇಡ್ಕರ್ ಜೀವನ ಚರಿತ್ರೆಗಳಲ್ಲೇ ಅತ್ಯಂತ ಹೆಚ್ಚು ಚರ್ಚೆ - ಸಂವಾದಕ್ಕೆ ಒಳಪಟ್ಟ ಕೃತಿಗಳಲ್ಲಿ ಶ್ರೀ ಧನಂಜಯ ಕೀರ್ ಅವರು ಬರೆದ ಕೃತಿಯೇ ಮುಖ್ಯವೆನ್ನಬಹುದು. ಶ್ರೀ ಧನಂಜಯ ಕೀರ್ ಅಂಬೇಡ್ಕರ್ ಅವರನ್ನು ಹತ್ತಿರದಲ್ಲಿ ಕಂಡವರು ಮಾತ್ರವಲ್ಲ, ಅವರ ಜತೆಗೆ ಆತ್ಮೀಯವಾಗಿ ಒಡನಾಡಿದವರು ಕೂಡ. ಈ ಎಲ್ಲಾ ಕಾರಣದಿಂದ ಕೀರ್ ಅವರು ಬರೆದ ಜೀವನ ಚರಿತ್ರೆ ಹೆಚ್ಚು ಅಧಿಕೃತವೂ ಹೌದು. ಧನಂಜಯ ಕೀರ್ ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿಯೂ ಸಮಗ್ರವಾದ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಅವರ ಇಂಗ್ಲಿಷ್ ಮೂಲದ ಕೃತಿಯನ್ನು ಕನ್ನಡದಲ್ಲಿ ಹಲವರು ಅನುವಾದಿಸಿ, ಸಂಗ್ರಹಿಸಿ ಪ್ರಕಟಿಸಿದ್ದರೂ, ಮರಾಠಿ ಭಾಷೆಯ ಕೃತಿ ಕನ್ನಡಿಗರಿಗೆ ಅಲಭ್ಯವೇ ಆಗಿತ್ತು. ಇಂತಹ ಒಂದು ಮಹತ್ವದ ಚಾರಿತ್ರಿಕ ಕೃತಿ ಇತ್ತೀಚೆಗೆ ಕನ್ನಡಕ್ಕೆ ಅನುವಾದವಾಗಿ ಪ್ರಕಟವಾಗಿರುವುದು ಕನ್ನಡದ ಅಂಬೇಡ್ಕರ್ ಓದುಗರಿಗೆ ಮಹದುಪಕಾರವಾಗಿ ಒದಗಿಬಂದಿದೆ. 

ಪ್ರೊ.ಜೆ.ಪಿ.ದೊಡಮನಿಯವರು ಅನುವಾದಿಸಿರುವ ಈ ಕೃತಿ 850 ಪುಟಗಳಷ್ಟು ಬೃಹತ್ ಗಾತ್ರದ್ದಾಗಿದೆ. ಧನಂಜಯ ಕೀರ್ ಅವರ ಕಥನ ಕಟ್ಟುವ ಆಪ್ತವಾದ ಶೈಲಿಯ ಜತೆಗೆ, ಕನ್ನಡದ ಸಹಜ ಭಾಷಿಕ ಸರಳತೆಯೂ ಮೇಳೈಸಿದ ಈ ಕೃತಿ ಓದಿನ ಹಿತಾನುಭವವನ್ನು ಕೊಡುವಂತಿದೆ. ಕನ್ನಡದ ಈ ಕೃತಿ ನಿಶ್ಚಿತವಾಗಿಯೂ ಅಂಬೇಡ್ಕರ್ ಕುರಿತ ನಮ್ಮ ಆಲೋಚನೆಗಳನ್ನು ವಿಸ್ತರಿಸುತ್ತದೆ. ಜೀವನ ಚರಿತ್ರೆ ಎನ್ನುವುದು ಇಲ್ಲಿ ಕೇವಲ ಕಾಲಾನುಕ್ರಮಣಿಕೆಯ ನಿರೂಪಣೆ ಮಾತ್ರವಾಗಿ ಬಂದಿಲ್ಲ. ಅಂಬೇಡ್ಕರ್ ವಿಚಾರ ಸಮಗ್ರವನ್ನೂ ಹೀರಿ ಬೆಳೆದ ಅಪೂರ್ವಕೃತಿ ಇದಾಗಿದೆ. ಇಲ್ಲಿ ಅಂಬೇಡ್ಕರ್ ಮಾತ್ರ ಮಾತನಾಡುತ್ತಿಲ್ಲ, ಅವರ ಸಮಕಾಲೀನ ಮಹಾತ್ಮರನೇಕರ ಧ್ವನಿಗಳೂ ಕೇಳುತ್ತದೆ. 

ಅಂಬೇಡ್ಕರ್ ಅನುಭವಿಸಿದ ನೋವಿನ ಆರ್ತಧ್ವನಿಯೂ, ಅದನ್ನು ಮೆಟ್ಟಿ ಬೆಳೆದ ಅವರ ಧೀಮಂತಿಕೆಯೂ ಸ್ಪಷ್ಟವಾಗಿ ಅನುರಣಿಸುತ್ತದೆ. ಆ ಕಾಲದ ಪತ್ರಿಕೆಗಳು, ಅಂಬೇಡ್ಕರ್ ಸಮಕಾಲೀನ ಸಹವರ್ತಿಗಳು ಕಂಡ, ಕಠಿಣ ಕಾಲದ ನಡುವೆ ಪರಿಪಕ್ವವಾಗಿ ಬೆಳೆದ ಅಂಬೇಡ್ಕರ್ ಚಿತ್ರಣವೇ ಪೂರ್ತಿಯಾಗಿ ತುಂಬಿಕೊಂಡಿದೆ. ಆಧುನಿಕ ಭಾರತದ ಮಹಾಪರ್ವಕಾಲವೆಂದೇ ಪರಿಗಣಿಸಬಹುದಾದ ಅಂಬೇಡ್ಕರ್ ಜೀವಿತ ಕಾಲವನ್ನು, ಅವರ ಪ್ರಬಲ ಇಚ್ಛಾಶಕ್ತಿಯನ್ನು ಕಥನವಾಗಿಸಿದ ಈ ಜೀವನ ಚರಿತ್ರೆಯು ಲಭ್ಯ ಚರಿತ್ರೆಗಳಲ್ಲೇ ಮುಕುಟಪ್ರಾಯವಾಗಿ ನಿಲ್ಲಬಲ್ಲದು. 

ಅಂಬೇಡ್ಕರ್ ಅವರ ಚಿಂತನೆಯನ್ನು, ಅವರ ಪ್ರಖರ ವೈಚಾರಿಕತೆಯನ್ನು ಆಧಾರ ಭೂತವಾಗಿ ನಿರೂಪಿಸುವ ಕೃತಿಯಿದು. ಕಳೆದ ಶತಮಾನದ ಒಂದು ಸಾಂಸ್ಕೃತಿಕ ದಾಖಲೆಯೂ, ಸಾಮಾಜಿಕ ವಿಮರ್ಶೆಯ ಕನ್ನಡಿಯೂ ಆಗಿ ನಿಲ್ಲಬಲ್ಲ ಕೃತಿಯಲ್ಲಿ ಆ ಕಾಲಘಟ್ಟದ ಸವರ್ಣಿಯ ಮನಸ್ಸುಗಳು, ಕಾಂಗ್ರೆಸ್, ಗಾಂಧಿ, ಸ್ವಾತಂತ್ರ್ಯ ಹೋರಾಟಗಾರರನ್ನೂ ಸೇರಿದಂತೆ ಎಲ್ಲರನ್ನೂ ತೀಕ್ಷ್ಣವಾದ ಸವಾಲಿಗೆ ಒಳಪಡಿಸಿದ್ದನ್ನು ಕಾಣಬಹುದು.

ಜೀವನ ಚರಿತ್ರೆ ಎಂದಾಗ ಅದು ನೀರಸವಲ್ಲ. ಅಂಬೇಡ್ಕರ್ ಈ ಕೃತಿಯ ಮೂಲಕ ಜೀವಂತವಾಗಿ ನಡೆದಾಡಿದಂತೆ ಕಾಣಿಸಿಕೊಳ್ಳುತ್ತಾರೆ. ಅವರ ಬದುಕಿನ ಕ್ಷಣ ಕ್ಷಣಕ್ಕೂ ಸಾಕ್ಷಿಯಂತಿರುವ ಘಟನೆಗಳು ಇಲ್ಲಿ ದಾಖಲಾಗಿವೆ. ಅಂಬೇಡ್ಕರ್ ಹುಟ್ಟಿನ ಪೂರ್ವದ ಶತಮಾನದ ಬದುಕಿನ ಚಿತ್ರಣಗಳನ್ನು ನೀಡುವಲ್ಲಿಂದ ಆರಂಭವಾಗಿ, ಅಸ್ಪೃಶ್ಯತೆಯ ಪರಂಪರೆ ಮತ್ತು ಸಮಕಾಲೀನ ನಾಯಕರು ಅದನ್ನು ದಾಟಲು ಮಾಡಿದ ಯತ್ನಗಳೊಂದಿಗೆ, ರಾಜಕೀಯ ಸ್ವಾತಂತ್ರ್ಯ ಸಂಪಾದನೆಯ ಹೊರಾಟದ ಜೊತೆಗೆ ಮುಖಾಮುಖಿಯಾದ ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮ, ಸ್ವಾತಂತ್ರ್ಯ ಚಳವಳಿಯ ನೇತಾರರಲ್ಲಿದ್ದ ಆತಂಕ, ಅಸ್ಪೃಶ್ಯರ ಹಕ್ಕುಗಳನ್ನು ಉಲ್ಲೇಖಿಸದ ಸ್ವರಾಜ್ಯವು ಅಸ್ಪೃಶ್ಯರ ಪಾಲಿನ ಸ್ವರಾಜ್ಯವಾಗುವುದು ಹೇಗೆ ತಾನೆ ಸಾಧ್ಯವೆಂದು ಪ್ರಶ್ನಿಸುತ್ತಲೇ, ಕಾಂಗ್ರೆಸ್ ಹಾಗೂ ಗಾಂಧಿ ಮಾರ್ಗದ ಹೋರಾಟವನ್ನೂ ಸವಾಲಿಗೆ ಒಳಪಡಿಸುತ್ತದೆ. 

ಈ ಕೃತಿಯ ವಿಶಿಷ್ಟತೆ ಇರುವುದು ಅಂಬೇಡ್ಕರ್ ಬದುಕು ಮತ್ತು ಸಾಧನೆಯ ಎದುರು ಗಾಂಧಿ ಮತ್ತು ಕಾಂಗ್ರೆಸ್‌ನ ಮಿತಿಗಳನ್ನು ಅಂಬೇಡ್ಕರ್ ಎದುರಿಸಿದ ಬಗೆಯನ್ನು, ವಿಮರ್ಶಾತ್ಮಕವಾಗಿ ದಾಖಲಿಸಿದ್ದರಲ್ಲಿ. ಅಸ್ಪೃಶ್ಯತಾ ನಿವಾರಣ ವಿಷಯದಲ್ಲಿ ಕಾಂಗ್ರೆಸ್ ತಾಳಿದ್ದ ನಿರ್ಲಕ್ಷ್ಯ ಮತ್ತು ಗಾಂಧಿಯ ನಿಲುವನ್ನು ಕೃತಿ ವಿಮರ್ಶಿಸುತ್ತದೆ. ಕಾಂಗ್ರೆಸ್ ಮುಸ್ಲಿಮರ ಹಕ್ಕನ್ನು ಮಾನ್ಯಮಾಡುವ ಅತ್ಯುತ್ಸಾಹದಲ್ಲಿ ನಿಮ್ನ ವರ್ಗಗಳಿಗೆ ಹಿಂದೂ ಸಮಾಜದಲ್ಲಿರುವ ಅನಾನುಕೂಲತೆಗಳನ್ನು ಪರಿಗಣಿಸದೇ ಹೋದ ಸಂಗತಿಯೂ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತದೆ.

 ಅಸ್ಪೃಶ್ಯತೆಯಿಂದ ಕೇವಲ ಅಸ್ಪೃಶ್ಯರಿಗೆ ಮಾತ್ರ ಹಾನಿಯಾಗುತ್ತದೆ ಎಂದು ತಿಳಿದಿದ್ದ ಕಾಲಕ್ಕೆ ಅಸ್ಪೃಶ್ಯರಿಗಷ್ಟೇ ಹಾನಿಯಲ್ಲ, ಸ್ಪೃಶ್ಯರಿಗೂ, ದೇಶಕ್ಕೂ ಅಪಾರವಾದ ಹಾನಿಯಾಗಿದೆ ಎನ್ನುವುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದರು.

ಅಂಬೇಡ್ಕರ್ ನೇತೃತ್ವದ ಕಾರಣದಿಂದ ಅಸ್ಪೃಶ್ಯ ಸಮುದಾಯಗಳಲ್ಲಿ ಮೂಡುತ್ತಿರುವ ಎಚ್ಚರ, ಸಾಭೀಮಾನ, ಜಾಗೃತಿಯು ಹೇಗೆ ಸಮಾಜವನ್ನು ವ್ಯಾಪಿಸಿತು ಎನ್ನುವುದನ್ನು ಈ ಕೃತಿ ನಿರೂಪಿಸುವ ರೀತಿ ವಿಶಿಷ್ಟವಾದುದು. ಚೌದಾರ ಕೆರೆಯ ನೀರಿಗಾಗಿ ಮಾಡಿದ ಸತ್ಯಾಗ್ರಹ, ಮನುಸ್ಮೃತಿ ದಹನ ಮೊದಲಾದ ನಿರ್ಧಾರಗಳು ಅಂದಿನ ಸಾಮಾಜಿಕ ಸನ್ನಿವೇಷದಲ್ಲಿ ಸಾಧಾರಣ ಸಂಗತಿಯಾಗಿರಲಿಲ್ಲ. ಅದು ಸಮಾಜದಲ್ಲಿ ಉಂಟುಮಾಡಿದ ಕಂಪನವನ್ನು ಈ ಕೃತಿ ಹಿಡಿದಿಟ್ಟ ರೀತಿ ಆಕರ್ಷಕವಾದುದು. 

ಇಲ್ಲಿರುವುದು ಏಕಮುಖಿ ನಿರೂಪಣೆಯಲ್ಲ. ಒಳಗೊಂದು ಸಂವಾದ ಇದೆ. ಸಮಕಾಲೀನ ರಾಜಕೀಯ, ಸಾಮಾಜಿಕ ನೇತಾರರ ಜತೆಗೆ ತುಲನಾತ್ಮಕತೆ ಇದೆ. ಈ ಮಾದರಿಯೇ ಕೃತಿಗೊಂದು ಹೊಸ ಬಗೆಯ ಓಘವನ್ನು ಕೊಟ್ಟಿರುವುದು. ಉದಾಹರಣೆಗೆ ಸಾವರ್ಕರ್ ಮತ್ತು ಅಂಬೇಡ್ಕರ್ ಅವರ ಕ್ರಾಂತಿಕಾರಕ ದೃಷ್ಟಿಕೋನದಲ್ಲಿರುವ ವ್ಯತ್ಯಾಸದ ಕಾರಣ ಮತ್ತು ಒಂದು ವೇಳೆ ಅವರಿಬ್ಬರ ಸಾಮಾಜಿಕ ಹಿನ್ನೆಲೆಗಳು ಅದಲು-ಬದಲಾಗಿದ್ದರೆ ಅದರಿಂದ ಹೊರಹೊಮ್ಮಬಹುದಾಗಿದ್ದ ಅವರ ಚಿಂತನೆಯ ಬದಲಾವಣೆಯ ತೌಲನಿಕತೆಯನ್ನು ಗಮನಿಸಬಹುದು.

ಅಂಬೇಡ್ಕರ್ ಕಾಲಕಾಲಕ್ಕೆ ಮಾಡಿದ್ದ ಭಾಷಣಗಳ, ಬರವಣಿಗೆಗಳ ಉಲ್ಲೇಖಗಳು, ಅವರದ್ದೇ ಪತ್ರಿಕೆಗಳಲ್ಲಿ ಅಥವಾ ಗಾಂಧೀಜಿಯವರ ಪತ್ರಿಕೆಯಲ್ಲಿ ಬಂದ ಪರಸ್ಪರ ಪ್ರಶ್ನೆ ಉತ್ತರಗಳಿಂದ ಈ ಕೃತಿಯು ತುಂಬಿಕೊಂಡಿರುವುದು ಅಂಬೇಡ್ಕರ್ ಚಿಂತನೆಯ ಸಮಗ್ರತೆಯನ್ನು ಓದುಗರ ಮುಂದೆ ಹಿಡಿದಿಡಲು ಶಕ್ಯವಾಗಿದೆ. ಅಂದಿನ ದಿನಗಳಲ್ಲಿ ರಾಜಕೀಯ ಉದ್ದೇಶದ ಮೆರವಣಿಗೆ ಸಂಘಟಿಸುವುದಕ್ಕಿಂತ ಸಾಮಾಜಿಕ ಆಂದೋಲನಗಳನ್ನು ರೂಪಿಸುವುದು ಹೆಚ್ಚು ಸವಾಲಿನದ್ದಾಗಿತ್ತು. ಚೌದಾರ ಕೆರೆಯ ಆಂದೋಲನವನ್ನು ಉಲ್ಲೇಖಿಸುತ್ತಾ ಅಧಿಕಾರ , ಜ್ಞಾನ , ಶಕ್ತಿ ಎಲ್ಲವೂ ಅಮಾನವೀಯ  ನಡವಳಿಕೆಯವರಲ್ಲೇ ಇತ್ತು ಎನ್ನುವುದನ್ನು ಕೃತಿ ಬೊಟ್ಟು ಮಾಡಿ ತೋರಿಸುತ್ತಾ, ಅಂಬೇಡ್ಕರ್ ಕಟ್ಟಿದ ಆಂದೋಲನದ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತದೆ.

ದುಂಡು ಮೇಜಿನ ಪರಿಷತ್ತಿನಲ್ಲಿ ಅಂಬೇಡ್ಕರ್ ಆಡಿದ್ದ ಮಾತುಗಳು ಎಂಥವರ ಕಣ್ಣನ್ನೂ ತೆರೆಸಬೇಕಾಗಿತ್ತು. ಅವರ ದೇಶ ಭಕ್ತಿಗೆ ಯಾರ ಪ್ರಮಾಣಪತ್ರವೂ ಬೇಕಿರಲಿಲ್ಲ. ಆದರೆ ಅಂಬೇಡ್ಕರ್ ಅವರನ್ನು ಹಾಗೆ ಅನುಮಾನಿಸಿದ್ದರೆನ್ನುವುದೇ ಕಾಲದ ವ್ಯಂಗ್ಯ. ಅಂಬೇಡ್ಕರ್ ಭಾರತೀಯ ರಾಜಕೀಯ ಬದುಕಿನಲ್ಲಿ ಪಡೆಯಬೇಕಾಗಿದ್ದ ನ್ಯಾಯದ ಸ್ಥಾನವನ್ನು ಪಡೆಯದಿರಲು ಕಾರಣವಾದ ಸಂಗತಿಗಳನ್ನು ಕೃತಿ ಓದುಗರ ಮುಂದೆ ತೆರೆದಿಡುತ್ತದೆ. ಅಂಬೇಡ್ಕರ್ ಅವರ ವಿಮರ್ಶೆಯಿಂದ ಆ ಕಾಲದ ಯಾರೂ ತಪ್ಪಿಸಿಕೊಂಡಿರಲಿಕ್ಕಿಲ್ಲ. ಅದು ಕಾಂಗ್ರೆಸ್ಸೇ ಇರಬಹುದು, ಕಮ್ಯುನಿಷ್ಠರೇ ಇರಬಹುದು. ಅಂಬೇಡ್ಕರ್ ನೀಡಿದ ಪ್ರತಿಕ್ರಿಯೆಗಳು ಸಾರ್ವಕಾಲಿಕ ಮೌಲ್ಯಮಾಪನದ ನುಡಿಗಳಂತಿದೆ. ಜೀವನ ಚರಿತ್ರೆಕಾರ ಸಮಗ್ರ ಸಂಗತಿಗಳನ್ನು ವಿವೇಚಿಸದೇ ಹೋಗಿದ್ದರೆ ಕಾಲಾನುಕ್ರಮಣಿಕೆ ಮಾತ್ರ ಆಗುತ್ತಿತ್ತು. ಆದರೆ ಧನಂಜಯ ಕಿರ್ ಅವರ ಸೃಷ್ಠಿಶೀಲತೆಯ ಸಾಮರ್ಥ್ಯವೆಲ್ಲವೂ ಇಲ್ಲಿ ಅಡಕಗೊಂಡಿದೆ. 

ಅಂಬೇಡ್ಕರ್ ಒಳಗಿನ ಹೋರಾಟಗಾರ, ವಿದ್ವಾಂಸ, ಸಂವಿದಾನ ಶಿಲ್ಪಿ, ಕಾರ್ಮಿಕ ನೇತಾರ, ಅರ್ಥಶಾಸ್ತ್ರಜ್ಞ ಹೀಗೆ ಹಲವು ಮುಖಗಳ ನೇತಾರನೊಬ್ಬ ಈ ಜೀವನ ಚರಿತ್ರೆಯೊಳಗೆ ಸಚೇತನರಾಗಿ ಪ್ರಕಟವಾಗಿದ್ದಾರೆ. ಜತೆಗೆ ಅಂಬೇಡ್ಕರೋತ್ತರ ಕಾಲದಲ್ಲಿ ಅಂಬೇಡ್ಕರ್ ಕುರಿತಾಗಿ ಕಟ್ಟಲ್ಪಟ್ಟ ತಪ್ಪು ಕಲ್ಪನೆಗಳನ್ನೂ ಕೂಡ ನಿವಾರಿಸುತ್ತದೆ. ಮುಖ್ಯವಾಗಿ ಅವರ ಧರ್ಮಾಂತರದ ವಿಷಯ, ಬೌದ್ಧ ಧರ್ಮದ ಕುರಿತ ಅವರ ಕಲ್ಪನೆ, ಕಾಂಗ್ರೆಸ್ ಮತ್ತು ಕಮ್ಯುನಿಸಂ ಕುರಿತ ಅವರ ನಿಲುವುಗಳನ್ನು ಈ ಕೃತಿಯ ಮೂಲಕ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಧನಂಜಯ ಕೀರ್ ಅವರು ಗುರುತಿಸುವಂತೆ ಅಂಬೇಡ್ಕರ್ ಒಳಗೆ ಮುತ್ಸದ್ದಿಯ ಬುದ್ಧಿವಂತಿಕೆ, ನೇತಾರನ ಗುಣ, ವೀರನ ಧೈರ್ಯ, ಹುತಾತ್ಮನ ಸಹನಶಕ್ತಿ ಮತ್ತು ವಿದ್ವಾಂಸನ ವ್ಯಾಸಂಗಪ್ರೀತಿಯ ಗುಣಸಂಪತ್ತು ಒಳಗೊಂಡಿತ್ತು. ಅಂತಹ ಮಹಾನ್ ಸಾಧಕನ ಬದುಕು, ಅವರ ವಿಚಾರ, ಹೋರಾಟ , ಅವರು ಕಟ್ಟಬಯಸಿದ್ದ ಸಮಾಜದ ಸ್ವರೂಪ ಇವುಗಳ ಕುರಿತು ಆಳವಾದ ವಿವೇಚನೆ ಮತ್ತು ಸಂಯಮವನ್ನು ಇಟ್ಟುಕೊಂಡು ಬರೆಯಲಾದ ಬರಹವೇ ಈ ಜೀವನ ಚರಿತ್ರೆಯಾಗಿದೆ. 

ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ


 

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...