ಅರಿವಿನ ಬಾಗಿಲು ಎನ್ನುವ ಕಾವ್ಯ ಪುಂಜ ಹಲವು ಬಹುಮುಖಿಯ ಆಶಯ


"ಪ್ರಭುದ್ಧತೆಯ ನಾಡಿಗೆ ಒತ್ತಾಯಿಸುವ ಈ ಸುಧಾರಣೆಗಾರರ ವೈಚಾರಿಕ ಮುನ್ನೊಟವು ಕವನ ಗುಚ್ಚಕ್ಕೆ ಜೀವಪರತೆಯ ಮೆರಗನ್ನು ನೀಡಿದೆ. ಬುದ್ಧನ ಶಾಂತಿಯ ಹಂಬಲದ ಮೂಲಕ ತೆರೆದುಕೊಳ್ಳುವ ಈ ಕಾವ್ಯ ಪ್ರಕಾರವು ನಾಳಿನ ನಾಡಿನ ದೊರೆಗಳು ನಾವಾಗೋಣ ಎನ್ನುವ ಆಶಾವಾದದೊಂದಿಗೆ ಕೊನೆಗೊಳ್ಳುತ್ತದೆ," ಎನ್ನುತ್ತಾರೆ ಸಾಯಿಬಣ್ಣ ಮೂಡಬುಳ. ಅವರು ಚನ್ನಪ್ಪ ಎಸ್. ಬಾಗ್ಲಿ ಅವರ ‘ಅರಿವಿನ ಬಾಗಿಲು’ ಕೃತಿ ಕುರಿತು ಬರೆದ ವಿಮರ್ಶೆ.

ಯಾದಗಿರಿ ಜಿಲ್ಲೆಯ ವಡಗೇರಿ ತಾಲ್ಲೂಕಿನ ಐಕೂರು ಗ್ರಾಮದ ಯುವ ಪ್ರತಿಭಾವಂತ ಬಿಸಿಲ ನಾಡಿನ ದೇಸಿ ಸಾಹಿತ್ಯ ಕೃಷಿಕನಾದ ಶ್ರೀ ಚೆನ್ನಪ್ಪ ಬಾಗ್ಲಿಯವರಿಂದ ರಚಿತವಾದ ಅರಿವಿನ ಬಾಗಿಲು ಎನ್ನುವ ಕಾವ್ಯ ಪುಂಜ ಹಲವು ಬಹುಮುಖಿ ಆಶಯಗಳನ್ನು ತನ್ನಲ್ಲಿ ಗರ್ಭಿಕರಿಸಿಕೊಂಡು ಓದುಗ ವಲಯವನ್ನು ತನ್ನತ್ತ ಸೆಳೆಯುವ ಆಕರ್ಷಣೆಯನ್ನು ಹೊಂದಿದೆ. ಕವಿತೆ, ಕವನ ಎನ್ನುವದು ನಿರ್ಮಲ ಮನಸ್ಸಿನ ಸೃಜನಶೀಲ ನಿರೂಪಣೆಯಾದರೂ, ಅದು ತನ್ನ ಭಾವನೆಗೂ ಮೀರಿ ತನ್ನನ್ನು ಸಮಾಜಮುಖಿಯಾಗಿ ಚಾಚಿಕೊಂಡಾಗ ಮಾತ್ರ ಮೌಲಿಕತೆಯ ಸ್ವರೂಪವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಾಮಾಜಿಕ ಕಣ್ಣೋಟದ, ಸಾಮಾಜಿಕ ಸೂಕ್ಷ್ಮತೆಯ ಸಂವೇದನೆಯ ಒಳಗೊಳ್ಳುವ ಸಾಹಿತ್ಯದ ಸೃಜಿಸುವಿಕೆಯು ಸಮಕಾಲಿನ ಅಗತ್ಯವಾಗಿದೆ. ಸಾಮಾಜಿಕ ಅನುಸoಧಾನ ಮತ್ತು ಮುಖಾಮುಖಿಯ ಸಾಹಿತ್ಯದ ಪ್ರಕಾರಗಳು ಓಲುವೆ ನಲುಮೆಯ ಮೂಲಕ ಸಮಾಜದಲ್ಲಿ ಸದಾಶಯವನ್ನು ಹರಡುವದರಲ್ಲಿ ಎರಡು ಮಾತಿಲ್ಲ.

ಇಂತಹ ಸವಾಲಿನ ಹೊಣೆಗಾರಿಕೆಯನ್ನು ಹೆಗಲೇರಿಸಿಕೊಂಡು, ಈ ದೆಸೆಯಲ್ಲಿ ಫಲಪ್ರದವಾದ ಸಾಹಿತ್ಯವನ್ನು ಸೃಷ್ಟಿಸಿ ಅರಿವಿನ ಬೆಳಕಿನ ಮುಖೇನ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಯಾದ ಹೆಜ್ಜೆಗಳನಿಟ್ಟು, ತಮ್ಮ ಚೊಚ್ಚಲ ಕವನ ಸಂಕಲನ ಮುಖಾಂತರ ಅಕ್ಷರ ಲೋಕದ ಅರಿವಿಗರ ಗಮನ ಸೆಳೆದಿದೆ. ಅರಿವನ್ನೆ ಪ್ರದಾನವಾಗಿಸಿ ಈ ಪ್ರಜ್ಞೆಯನ್ನು ಜನಸಮುದಾಯಗಳಲ್ಲಿ ತರಿಸಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ಕವನ ಸಂಕಲನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಕವಿ ಈ ಸಂಕಲನದಲ್ಲಿ ನಾಲ್ಕು ಪ್ರದಾನ ಅಂಶಗಳಿಗೆ ಸ್ಥಳ ಒದಗಿಸಿರುವದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.

ಪ್ರೀತಿ ಪ್ರೇಮ, ನಿಸರ್ಗದ ಒಲವು, ಮಣ್ಣಿನ ಮಕ್ಕಳ ಅಥವಾ ನೇಗಿಲ ಯೋಗಿಯ ಬದುಕು ಬವಣೆ ಮತ್ತು ಸಮಕಾಲಿನ ಸಾಮಾಜಿಕ ಸಂದರ್ಭಗಳನ್ನು ನವಿರಾಗಿ ನಿರೂಪಿಸಿ ಯತಾವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಒಟ್ಟು ನಲವತ್ತು ಕವನಗಳ ಬ್ರಹತ್ ಜೀವನ್ಮುಖಿ ಸಂದೇಶವನ್ನು ಸಮಾಜದೆದುರು ತೆರೆದಿಡುತ್ತದೆ. ಬಹು ಆಯಾಮಗಳ ಮೂಲಕ ಸಮಾಜವನ್ನು ಅನುಲಕ್ಷಿಸಿ ಅವಲೋಕಿಸಿ ಸಾಮಾಜಿಕ ಸತ್ಯಗಳನ್ನು ಕವಿಗಳು ಕವನದೊಳಗೆ ಎಳೆದು ತಂದಿದ್ದಾರೆ. ಬುದ್ಧನ ಶಾಂತಿಯ ಸೆಲೆ, ಬಸವನ ಕಾಯಕದ ಕಲೆ,ಬಾಬಾ ಸಾಹೇಬರ ಜೀವನ್ಮುಖಿ ಸಂದೇಶಗಳ ಅಲೆ ಇಡಿ ಕವನ ಸಂಕಲನವನ್ನು ಸಮೃದ್ಧಗೊಳಿಸಿದೆ.

ಪ್ರಭುದ್ಧತೆಯ ನಾಡಿಗೆ ಒತ್ತಾಯಿಸುವ ಈ ಸುಧಾರಣೆಗಾರರ ವೈಚಾರಿಕ ಮುನ್ನೊಟವು ಕವನ ಗುಚ್ಚಕ್ಕೆ ಜೀವಪರತೆಯ ಮೆರಗನ್ನು ನೀಡಿದೆ. ಬುದ್ಧನ ಶಾಂತಿಯ ಹಂಬಲದ ಮೂಲಕ ತೆರೆದುಕೊಳ್ಳುವ ಈ ಕಾವ್ಯ ಪ್ರಕಾರವು ನಾಳಿನ ನಾಡಿನ ದೊರೆಗಳು ನಾವಾಗೋಣ ಎನ್ನುವ ಆಶಾವಾದದೊಂದಿಗೆ ಕೊನೆಗೊಳ್ಳುತ್ತದೆ. ಇದರಲ್ಲಿ ದಾಖಲಾದ ಪ್ರತಿ ಕವಿತೆಯು ತನ್ನದೆಯಾದ ಮಹತ್ವವನ್ನು ಪಡೆದುಕೊಳ್ಳುವದರ ಮುಖೇನ ಓದುಗನ್ನು ಆವರಿಸಿಕೊಳ್ಳುವ ಗುಣವನ್ನು ಹೊಂದಿದೆ.

ಬುದ್ಧ ಮತ್ತು ನಾನು ಎನ್ನುವ ಕವಿತೆಯು ಶಾಂತಿಯ ಅನುಷ್ಠಾನದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಹಿಂಸಾ ಮನೋಸ್ಥಿತಿಯು ಬದುಕನ್ನು ಪಲ್ಲಟಗಿಸಿ, ಅರಾಜಕತೆಯತ್ತ ಕೊಂಡೋಯ್ಯುತ್ತದೆ, ಇಂದಿನ ನವೀನ ಜಗದ ಬಹುದೊಡ್ಡ ಸವಾಲು ಶಾಂತಿಯನ್ನು ಪಡೆದುಕೊಳ್ಳುವದೆ ಆಗಿದೆ. ಶಾಂತಿಯನ್ನು ಬರಮಾಡಿಕೊಂಡರೆ ಸಮಸ್ಯೆಗಳನ್ನು ಹರಣ ಮಾಡಬಹುದು ಎನ್ನುವ ದೃಷ್ಟಿಯ ನೆಲೆಯಲ್ಲಿ ಕವಿಗಳು ಈ ಕವನದಲ್ಲಿ ಬುದ್ಧನನ್ನು ಶಾಂತಿಯ ಪ್ರತಿಮೆಯನ್ನಾಗಿಸಿ ಜಗತ್ತಿಗೆ ಶಾಂತಿಯ ಮಹತ್ವವನ್ನು ಈ ಮೂಲಕ ಸಾರಿರುವದು ಈ ಕವನದ ಮುಖಾಂತರ ಸ್ಪಷ್ಟವಾಗುತ್ತದೆ. ಶಾಂತಿ ಯು ಹಿಂಸೆಯನ್ನು ಹಿಮ್ಮೆಟ್ಟಿಸುವ ಬಹುದೊಡ್ಡ ಆಯುಧವಾಗಿದೆ. ಹಾಗಾಗಿ ಇಡಿ ಸಮಾಜ ಶಾಂತಿಯನ್ನು ತಂದುಕೊಂಡು ಹಿಂಸೆಯನ್ನು ಮುರಿಯಬೇಕು ಎನ್ನುವ ವಿಸ್ತಾರವಾದ ಆಶಯವನ್ನು ಕವಿ ಈ ಕವಿತೆಯಲ್ಲಿ ಅಭಿವ್ಯಕ್ತಿಸಿದ್ದಾರೆ.

ಬಸವ ಬೆಳಕು ಎನ್ನುವ ಮತ್ತೊಂದು ಕವನವು ಸಾಮಾಜಿಕ ಸಂವೇದನೆಯನ್ನು ಪ್ರಚುರಪಡಿಸುವ ದೆಸೆಯಲ್ಲಿ ಮೂಡಿಬಂದಿದೆ. ಬಸವಣ್ಣನವರ ಸೈದ್ಧಾಂತಿಕ ಮೂಲವಾದ ವಚನಗಳು ಸಮಾಜವನ್ನು ಪರಿವರ್ತನೆಯನ್ನು ಮುಖವಾಣಿಯನ್ನು ಹೊಂದಿರುವದು ಸರ್ವವಿಧಿತವಾದದ್ದು. ಈ ಕವನದಲ್ಲಿ ಕವಿ ಬಸವ ನನ್ನು ಒರೆಗಣ್ಣಿನಿಂದ ನೋಡದೆ ಪೂರ್ಣದೃಷ್ಟಿಯ ಮೂಲಕ ಚಿತ್ತ ಹರಿಸಿ ಅವರ ಸದಾಶಯದ ತುಡಿತವನ್ನು ಅನಾವರಣಗೊಳಿಸಿದ್ದಾರೆ. ಬಹುತ್ವದ ಅಂಶಗಳ ಮಹಾಮೊತ್ತವಾಗಿ ಬಸವನನ್ನು ಗ್ರಹಿಸುವ ಪರಿಭಾವಿಸುವ ಅಗತ್ಯವನ್ನು ಸಮಯೋಚಿತವಾಗಿ ಈ ಕವಿತೆಯನ್ನು ರಚಿಸಿರುವದು ಎದ್ದುಕಾಣುತ್ತದೆ.

ಬಸವನನ್ನು ಕೇವಲ ಆರಾಧನಾ ನೆಲೆಗೆ ಸೀಮಿತಗೊಳಿಸದೆ, ಸಮಕಾಲಿನ ಸಾಮಾಜಿಕ ವಾಸ್ತವತೆಯನ್ನು ಅನಾವರಣಗೊಳಿಸಿ ಈ ದೆಸೆಯಲ್ಲಿ ಬಸವನ ವಿಚಾರಗಳ ಬೆಳಕು ಡಾಳಾದ ಸಾಮಾಜಿಕ ಸನ್ನಿವೇಶಗಳಿಗೆ ಪರಿಹಾರವನ್ನು ನೀಡಲಿ ಎನ್ನುವ ಭಾವಾಭಿವ್ಯಕ್ತಿ ಇಡಿ ಕವಿತೆಯನ್ನು ಆವರಿಸಿರುವದು ಸ್ಪಷ್ಟ. ಮುಕ್ತಿ ತೋರಿದ ಧೀರ ಎನ್ನುವ ಕವನವು ಕೂಡಾ ಅನೇಕ ಅನುಪಮವಾದ ಸಾಮಾಜಿಕ ಸತ್ಯ ಸಂಗತಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವದು ಕವಿತೆಯ ಭಾವವನ್ನು ಗಮನಿಸಿದಾಗ ಗೊತ್ತಾಗುತ್ತದೆ.

ಈ ಕವನವು ಈ ನೆಲದ ಅಲಕ್ಷಿತ ಸಮುದಾಯದ ತವಕ ತಲ್ಲಣಗಳನ್ನು, ನೋವು ಅಪಮಾನಗಳನ್ನು ವಸ್ತುನಿಷ್ಠವಾಗಿ ಚಿತ್ರಿಸಿದೆ. ಬಡತನವೆಂಬ ಬೇಗೆ ಬದುಕಿಗೆ ಆವರಿಸಿದಾಗ ಕಂಗಲಾದ ಜನ ಹಸಿವಿನ ಚೀಲವನ್ನು ಹೊಲೆದುಕೊಳ್ಳಲು ಅನೇಕ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದ ಪರಿಯನ್ನು ಕವಿ ತೀಕ್ಷ್ಣವಾಗಿ ದಾಖಲಿಸಿದ್ದಾರೆ. ಇಂತಹ ಸಂದೀಗ್ದತೆ ಪರಿಸರವನ್ನು ಭೇದಿಸಿ ಮನುಜಮತದ, ಮನುಷ್ಯತ್ವದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿ ಸಮತಾವಾದವನ್ನು ಹೊತ್ತು ತಂದು ಧ್ವನಿಯಿರದ ಸಮುದಾಯಗಳಿಗೆ ಕಲ್ಯಾಣದ ತೋರಿದ ಡಾ. ಬಾಬಾ ಸಾಹೇಬ ಅಂಬೇಡ್ಕರರವರನ್ನು ಮುಕ್ತಿತೋರಿದ ಧೀರನಾಗಿ ಕವಿ ಕಂಡುಕೊಂಡಿದ್ದು ಪ್ರಶಂಸನಿಯವಾದದ್ದು.

ಎತ್ತ ಸಾಗಿದೆ ಎನ್ನುವ ಇನ್ನೊಂದು ಕವಿತೆಯು ಕೂಡಾ ಸಮಕಾಲಿನ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಯತ್ನ ಮಾಡಿದೆ. ಪ್ರಸ್ತುತ ಸಮಾಜದ ಜಾಡ್ಯಗಳನ್ನು ಕಟ್ಟಿಕೊಡುವ ನೈಜವಾದ ಪ್ರಯತ್ನ ಈ ಕವನವು ಹೊರಹಾಕುತ್ತದೆ. ಜಾತಿಯತೆ, ಧರ್ಮಾoದತೆ, ಕೋಮುವಾದ, ಅಸಮಾನತೆಯ ಮುಖೇನ ಸಮಾಜ ತನ್ನ ಮೌಲ್ಯಗಳನ್ನು ಬರಿದಾಗಿಸಿಕೊಂಡು, ಅಂತಕರಣ, ಪ್ರೀತಿ ವಿಸ್ವಾಸಗಳ ಬರ ಎದುರಿಸಿ, ಸಮಾಜ ಆಪತ್ತಿನಡೆ ಸಾಗುತ್ತಿದೆ ಎನ್ನುವ ಕಳವಳವನ್ನು ಕವಿಗಳು ಈ ಕವನದಲ್ಲಿ ಚಿತ್ರೀಸಿದ್ದಾರೆ.

ಸರ್ಕಾರಕ್ಕೊಂದು ಮನವಿ ಎಂಬ ಕವಿತೆಯು ಕೂಡಾ ಸಮಾಜದ ನಿರ್ಲಕ್ಷಿತ ಸಮುದಾಯವಾದ ರೈತ ಸಮುದಾಯದ ಸಮಸ್ಯೆ ಮತ್ತು ಸವಾಲುಗಳನ್ನು ಯತವತ್ತಾಗಿ ಬಿತ್ತರಿಸುವ ಪ್ರಯತ್ನ ಕವನದುದ್ದಕ್ಕೂ ಕಾಣಸಿಗುತ್ತದೆ. ಜೊತೆಗೆ ಈ ಕವನವು ಪ್ರಕೃತಿ ಸೃಷ್ಟಿಸುವ ಅತಿವೃಷ್ಟಿ ಮತ್ತು ಅನಾವೃಷ್ಟಿ ಕುರಿತು ಗಮನ ಸೆಳೆಯುತ್ತದೆ. ಅನಾವೃಷ್ಟಿ ಉಂಟುಮಾಡುವ ಅವಘಡಗಳನ್ನು ಅದರಿಂದ ನೇಗಿಲಯೋಗಿಯ ಮೇಲಾಗುವ ಪರಿಣಾಮಗಳ ಕುರಿತು ಮಹತ್ವದ ಸಂದೇಶವನ್ನು ಪ್ರಭುತ್ವಕ್ಕೆ ರವಾನಿಸುವ ಕೆಲಸವನ್ನು ಸಾರ್ಥಕವಾಗಿ ಪೋರೈಸಿದಂತೆ ಕಾಣುತ್ತದೆ.

ಮೈದುಂಬಿ ಹರಿಯುವ ನದಿಕೊಳ್ಳಗಳಿಂದ ಉಂಟಾಗುವ ಜಲಪ್ರಳಯದಿಂದ ಅನ್ನದಾತನು ಬೆಳದ ಬೆಳೆಗಳು ನಾಶವಾಗಿ, ಆತನು ನೇಣಿಗೆ ಕೊರಳೋಡ್ದುವ ಹೃದಯವಿದ್ರಾವಕ ಪ್ರಸಂಗವನ್ನು ಕವಿ ಅಂತರಗದಿಂದ ಈ ಕವನದಲ್ಲಿ ಭಾವಪ್ರವಾಹವನ್ನು ಹರಿಸಿದ್ದಾರೆ. ಈ ಸಮುದಾಯ ಅನುಭವಿಸುತ್ತಿರುವ ಸಂಕಟವನ್ನು ಪರಿಹರಿಸಲು ಸರ್ಕಾರವು ವೈಜ್ಞಾನಿಕವಾದ ಪರಿಹಾರಗಳನ್ನು ಒದಗಿಸಿ, ಹಂತ ಹಂತವಾಗಿ ಕೃಷಿಯಿಂದ ವಿಮುಖವಾಗುತ್ತಿರುವ ರೈತ ಸಮುದಾಯವನ್ನು ಕೃಷಿಯಲ್ಲೇ ಉಳಿಸಿಕೊಳ್ಳಲು ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕೆಂದು ಪ್ರಭುತ್ವವನ್ನು ಒತ್ತಾಯಿಸುವ ಕಾಳಜಿಯ ಹೃದಯವಂತಿಕೆ ಈ ಕವನದಲ್ಲಿ ಧಾರಾಳವಾಗಿ ಹರಿದಿದೆ.

ಪ್ರಬುದ್ಧ ನಾಡಿಗಾಗಿ ನಮ್ಮ ವರ ಎನ್ನುವ ಕವನವು ಕೂಡಾ ಮನುಷ್ಯ ಹೃದಯವನ್ನು ತಟ್ಟುತ್ತದೆ. ಈ ಕವಿತೆಯಲ್ಲಿ ಸಮಸಮಾಜದ ಅಗತ್ಯತೆಯನ್ನು ಪ್ರತಿಪಾದಿಸುತ್ತಾರೆ.

ಅಸಮಾನತೆ ತುಂಬಿದ ಅಂಧಕಾರದ ಸಮಾಜದಲ್ಲಿ ಮನುಷ್ಯರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣುವ ಮನೋಸ್ಥಿತಿ ಹೊಂದಿದ ಶ್ರೇಯಾoಕಿತ ಸಮಾಜದ ಕಾರ್ಯಸುಚಿಯನ್ನು ದಿಕ್ಕರಿಸಿ, ವಿರೋಧಿಸಿ ಮನುಷ್ಯತ್ವದ ಅಲೆಯನ್ನು ಆಪೇಕ್ಷಿಸಿದ ಅಂಬೇಡ್ಕರರವರ ಮುನ್ನೊಟವನ್ನು ಸ್ಮರಿಸಿ, ಇಂತಹದೆ ಕಾರ್ಯವಿಧಾನದ ಮುಖಾಂತರ ಸಮಾಜವನ್ನು ಮೌಢ್ಯ ಅಪರಿಪಕ್ವತೆ ಸಂಗತಿಗಳಿಂದ ಮೇಲೇತ್ತುವ ಕಾರ್ಯಕ್ಕೆ ವಚನಗಳನ್ನು ಬಳಸಿ, ಇವುಗಳನ್ನು ಸಾಮಾಜಿಕ ಪರಿವರ್ತನೆಯ ಲೇಪನ ಮಾಡಿ ಒಡಕಿನ ಸಮಾಜವನ್ನು, ಭಾಂದವ್ಯದ ಮೂಲಕ ಬೆಸೆಯುವ ವಿನುತನ ಮಾನದಂಡವನ್ನು ಅಂತರ್ಜಾತಿ ವಿವಾಹಗಳ ಮುಖೇನ ಪರಿಚಯಿಸಿ, ವಿವಾಹಗಳು ಜಾತಿಬಂಧನಗಳ ಮೂಲಕ ನಡೆಯಬೇಕಿಲ್ಲ, ಪ್ರೀತಿ ಪ್ರೇಮ ಪರಸ್ಪರರ ಒಪ್ಪಿಗೆಯ ಮುಖೇನ ಮನುಷ್ಯತ್ವದ ನೆಲೆಯಲ್ಲಿ ನಡೆಯಬೇಕೆನ್ನುವ ಸೈದ್ದಾಂತಿಕೆಯನ್ನು ಆದುನಿಕ ಸಮಾಜ ನಿರ್ಮಾತೃ ಬಸವಣ್ಣನವರ ಆಂತರ್ಯದ ಆಶಯಗಳನ್ನು ಈ ಕವನದಲ್ಲಿ ತುಂಬಿರುವದು ಕವಿಯ ಬೌದ್ಧಿಕ ಶ್ರೀಮಂತಿಕೆ ಈ ಕವನದಲ್ಲಿ ಭರಪುರವಾಗಿ ಸಾಕ್ಷಕ್ಕೆ ಸಿಗುತ್ತದೆ.

ಜೊತೆಗೆ ಅಕ್ಷರ ಮಾತೆ ಸಾವಿತ್ರಿ ಬಾ ಫುಲೆಯವರ ಬಹುಮುಖಿ ಕೊಡುಗೆಗಳನ್ನು ಇಲ್ಲಿ ನೆನದಿದ್ದು ಯೋಗ್ಯವಾಗಿದೆ. ಗಲ್ಲುಶಿಕ್ಷೆ ಮತ್ತು ತಾಯಿಗಂಡ ರು ಎನ್ನುವ ಕವಿತೆಗಳಲ್ಲಿ ಅತ್ಯಾಚಾರ, ಮಾನಹಾನಿಯನ್ನು ಗಟ್ಟಿಯಾಗಿ ವಿರೋಧಿಸಿ ಇಂತಹ ಕೃತ್ಯಗಳು ಸಮಾಜದ ನೈತಿಕತೆಯ ಅವನತಿಯನ್ನು ಸುಚಿಸುತ್ತವೆ. ಇಂತಹ ಕೃತ್ಯಗಳಿಗೆ ಸರ್ಕಾರ ಕಠಿಣ ಶಿಕ್ಷೆಯನ್ನು ನೀಡಬೇಕೆನ್ನುವ ದೃಢ ಭಾವವನ್ನು ಕವಿ ಈ ಕವನದ ಮೂಲಕ ವ್ಯಕ್ತಪಡಿಸುತ್ತಾರೆ.

ಸಾಹೇಬ ನೀವಿನ್ನು ಇರಬೇಕಿತ್ತು ಎಂಬ ಕವನ ಕೂಡಾ ಸಮಕಾಲಿನ ಅಸಂಖ್ಯ ತಲ್ಲಣಗಳನ್ನು ಹೊರಹಾಕುತ್ತದೆ. ಈ ಕವನವು ಬಾಬಾಸಾಹೇಬರ ಉಪಸ್ಥಿತಿಯ ಅಗತ್ಯದ ಅನಿವಾರ್ಯತೆಯ ಭಾಗವಾಗಿ ಮೂಡಿಬಂದಿದೆ. ಸಮಾನತೆ, ಸುಂದರ ಸಮಾಜದ ನಿರ್ಮಾಣಕ್ಕಿರುವ ತೊಡಕುಗಳನ್ನು ಈ ಕವಿತೆ ಅಭಿವ್ಯಕ್ತಿಪಡಿಸುತ್ತದೆ. ಧರ್ಮ, ಜಾತಿ ಅಸಮಾನತೆ ಮಧ್ಯೆ ಹೊರಳಾಡುತ್ತಿರುವ ಸಮಕಾಲಿನ ಸಮಾಜವನ್ನು ನೋಡಲು ನೀವಿರಬೇಕಿತ್ತು ಎನ್ನುವ ನೋವನ್ನು ತೋಡಿಕೊಳ್ಳುವ ಕವಿಗಳು ಮುಂದುವರೆದು ತಮ್ಮ ವಿಚಾರಗಳನ್ನು ಹೀಗನ್ನುತ್ತಾರೆ, ಜಾತಿ, ಧರ್ಮದ ಕಾರಣಕ್ಕಾಗಿ ವೀಕೆಂದ್ರಿಕರಣಗೊಳ್ಳುತ್ತಿರುವ ಇಂದಿನ ಸಮಾಜವನ್ನು, ಅತ್ಯುತ್ತಮ ವಿಚಾರಗಳ ಮೂಲಕ ಜೀವನ್ಮುಖಿ ಸಂದೇಶ ನೀಡಿ ಸರಿದಾರಿಗೆ ತರಲು ನೀವಿರಬೇಕಿತ್ತು ಎಂದು ಕವಿ ಕವನದ ದೆಸೆಯಲ್ಲಿ ಸ್ಮರಿಸುತ್ತಾರೆ.

ಆಳೋಣ ಬನ್ನಿ ಎಂಬ ಮತ್ತೊಂದು ಕವಿತೆಯು ಸಹಿತ ತನ್ನ ಒಡಲಾಳದ ಫಲಪ್ರದ ವಿಚಾರವಂತಿಕೆಯ ಮುಖೇನ ಸಾಹಿತ್ಯ ಆಸಕ್ತರನ್ನು ತನ್ನಡೆ ಸೆಳೆಯುತ್ತದೆ. ಈ ನೆಲಮೂಲದ ತಳಸಮುದಾಯಗಳು ನಾಡನ್ನು ರಚನಾತ್ಮಕವಾಗಿ ಕಟ್ಟಲು ಶ್ರಮಿಸಿ, ತಮ್ಮ ಜೀವವನ್ನು ತೆಯ್ದಿವೆ. ಇಂತಹ ಅನುಪಮವಾದ ಸೇವೆ ಈ ರಾಷ್ಟ್ರಕ್ಕಾಗಿ ನೀಡಿದರೂ, ಅವರನ್ನು ಮಂಜುಗಣ್ಣಿನಿಂದ ನೋಡುವ ಕ್ರಮವು ಉಚಿತವಲ್ಲ. ಎನ್ನುವ ನೋವನ್ನು ಈ ಕವಿತೆ ಹೊರಚಿಮ್ಮಿ, ಆಳುವ ಪ್ರಕ್ರಿಯೆಯಲ್ಲಿ ಈ ಸಮುದಾಯಗಳು ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ಅಭಿಲಾಷೆಯನ್ನು ಈ ಕವಿತೆ ಸಾರುತ್ತದೆ.

ಈ ಕವನ ಸಂಕಲನದಲ್ಲಿ ಪ್ರೀತಿ ಪ್ರೇಮ ಮತ್ತು ಪ್ರಕೃತಿಯ ಕುರಿತಾದ ಭಾವಸಾಗರ ಬಹುವಾಗಿ ಹರದಿದೆ. ಒಟ್ಟಾರೆ ಇದೊಂದು ಬಹುಮುಖಿ ವಿಷಯಗಳನ್ನು ಭಿನ್ನ ನೆಲೆಯಲ್ಲಿ ನೋಡುವ ಕಣ್ಣೋಟವಾಗಿದೆ. ಸಾಮಾಜಿಕ ಸತ್ಯವನ್ನು ದಾಖಲಿಸುವ ಕವಿತಾ ಸಾರವಾಗಿದೆಯೆಂದು ನಿಶ್ಚಿತವಾಗಿ ಹೇಳಬಹುದು.

ಈ ದೆಸೆಯಲ್ಲಿ ಕವಿ ಚೆನ್ನಪ್ಪ ಎಸ್. ಬಾಗ್ಲಿಯವರ ಮುನ್ನೊಟಗಳು ಪಕ್ವತೆಯಿಂದ ಕೂಡಿವೆ. ಈ ಕವನ ಸಂಕಲನವು ಖಂಡಿತವಾಗಿ ಓದುಗರ ಮನಸುರೆಗೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಇಂತಹ ನೂರಾರು ಸಾಹಿತ್ಯ ಕಾಣಿಕೆಗಳು ಚೆನ್ನಪ್ಪ ಬಾಗ್ಲಿ ಯವರಿಂದ ಬರಲಿ ಎಂದು ಆಶಿಸುವೆ.

ಡಾ. ಸಾಯಿಬಣ್ಣ ಮೂಡಬುಳ,
ಸಹಾಯಕ ಪ್ರಾಧ್ಯಾಪಕರು, ಶ್ರೀ ಪ್ರಭು ಪದವಿ ಮಹಾವಿದ್ಯಾಲಯ ಸುರಪುರ.

MORE FEATURES

'ಅಕ್ಕ'ನನ್ನು ಕುರಿತ ವಿಭಿನ್ನ ದೃಷ್ಟಿಕೋನದ ಕೃತಿ ‘ರೂಹಿಲ್ಲದ ಚೆಲುವ’

02-05-2024 ಬೆಂಗಳೂರು

ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...

ನಾವೇನನ್ನೊ ಕಳೆದುಕೊಂಡರೆ ಅದಕ್ಕಿಂತ ಮಹತ್ವದ್ದನ್ನು ಪಡೆದುಕೊಳುತ್ತೇವೆ

02-05-2024 ಬೆಂಗಳೂರು

‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...

ನಮ್ಮೊಳಗನ್ನು ಎಚ್ಚರಿಸುವ ಕೃತಿ ‘ದೇವನೂರ ಮಹಾದೇವ ಜೊತೆ ಮಾತುಕತೆ’

02-05-2024 ಬೆಂಗಳೂರು

'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...