'ಅವಳ ಹೆಜ್ಜೆ ಗುರುತು' ನನ್ನ ಪ್ರಾಮಾಣಿಕ ಪ್ರಯತ್ನವಷ್ಟೇ : ಸೌಮ್ಯ ಕಾಶಿ


‘ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆದ್ದರಿಂದ "ಅವಳ ಹೆಜ್ಜೆ ಗುರುತು” ಎಂಬ ಕತೆಗಳ ಗುಚ್ಛ ನನ್ನ ಒಂದು ಪ್ರಾಮಾಣಿಕ ಪ್ರಯತ್ನವಷ್ಟೇ ಎನ್ನುತ್ತಾರೆ’ ಲೇಖಕಿ ಸೌಮ್ಯ ಕಾಶಿ. ಅವರು ‘ಅವಳ ಹೆಜ್ಜೆ ಗುರುತು’ ಕತಾ ಸಂಕಲನ ಕುರಿತು ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.
ಆಗೊಮ್ಮೆ ಈಗೊಮ್ಮೆ ಕವಿತೆಗಳನ್ನು, ಬಹಳಾ ಅಪರೂಪಕ್ಕೆ ಒಂದೆರಡು ಕತೆಗಳನ್ನು ಬರೆದು ಕೆಲವನ್ನು ಅಲ್ಲಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದವಳು ಇಷ್ಟು ಗಂಭೀರವಾಗಿ ಕುಳಿತು ಈ ಎಲ್ಲ ಕತೆಗಳನ್ನು ಬರೆದಿದ್ದೇನೆ ಎನ್ನುವ ವಿಷಯವೇ ನನಗಿನ್ನೂ ಅಚ್ಚರಿಯ ಸಂಗತಿ.

ಈ ಪುಸ್ತಕ ಬರೆಯುವಾಗ ಕೆಲವೊಮ್ಮೆ ಕಷ್ಟಪಟ್ಟು ಇದನ್ನೇ ಬರೆಯಬೇಕು ಎಂದು ಕುಳಿತವಳು ಇನ್ನೇನನ್ನೋ ಬರೆದ ಪ್ರಸಂಗಗಳಿವೆ. ಮತ್ತೆ ಕೆಲವೊಮ್ಮೆ ಏನೆಲ್ಲಾ ಬರೆಯಬೇಕು ಎನಿಸಿ ಶಿಸ್ತಿನಲ್ಲಿ ಹಾಳೆಯ ಮುಂದೆ ಕುಳಿತಾಗ ಏನೂ ಬರೆಯದೆ ಹಾಳೆಯ ತುಂಬ ಅಡ್ಡ ಗೆರೆಗಳನ್ನೋ, ಹೂವಿನ ಚಿತ್ರವನ್ನೋ, ಚುಕ್ಕಿ ರಂಗೋಲಿಯನ್ನೋ ಬರೆದ ದಾಖಲೆಯಿದೆ. ಇದೇ ಕಾರಣಕ್ಕೋ ಏನೋ ಈ ಎಲ್ಲ ಕತೆಗಳನ್ನು ಬರೆಯುವ ಮುಂಚೆ 'ಹೀಗೇ ಏನಾದರೂ ಬರೆಯಬೇಕು' ಎಂದು ಹೇಳಿಕೊಂಡು ಓಡಾಡುತ್ತಿದ್ದ ನನಗೆ ಯಾರಾದರೂ “ಯಾವ ವಿಷಯದ ಬಗ್ಗೆ ಬರೀತೀಯಾ?” ಎಂದು ಕೇಳಿದರೆ “ಗೊತ್ತಿಲ್ಲ" ಎಂದೇ ಹೇಳುತ್ತಿದ್ದೆ. ಇದು ಅವರ ಪ್ರಶ್ನೆಯಿಂದ ಜಾರಿಕೊಳ್ಳಲು ಹೇಳುತ್ತಿದ್ದ ಮಾತಲ್ಲ. ನಿಜಕ್ಕೂ ನಾನು ಖಾಲಿ ಹಾಳೆಯ ಮುಂದೆ ಪೆನ್ ಹಿಡಿದು ಕೂರುವವರೆಗೂ ನಾನು ಯಾವ ಕತೆಯನ್ನು ಬರೆಯುತ್ತೇನೆ ಎನ್ನುವ ಸಣ್ಣ ಕಲ್ಪನೆಯೂ ನನಗಿರಲಿಲ್ಲ. ಹಾಗಾಗಿ, ನಾನು ಈ ಎಲ್ಲ ಕತೆಯನ್ನು ಬರೆದಿದ್ದೇನೆ ಎನ್ನುವುದಕ್ಕಿಂತಾ ಈ ಎಲ್ಲ ಕತೆಗಳೇ ನನ್ನ ಕೈಯಲ್ಲಿ ಬರೆಸಿಕೊಂಡಿವೆ ಎಂದು ಬರವಣಿಗೆಯ ಭಾರವನ್ನೂ ಕತೆಯ ಮೇಲೆ ಹಾಕಿಬಿಡುತ್ತೇನೆ.

ಇನ್ನು, ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆದ್ದರಿಂದ "ಅವಳ ಹೆಜ್ಜೆ ಗುರುತು” ಎಂಬ ಕತೆಗಳ ಗುಚ್ಛ ನನ್ನ ಒಂದು ಪ್ರಾಮಾಣಿಕ ಪ್ರಯತ್ನವಷ್ಟೇ. ಈ ಪುಸ್ತಕದಲ್ಲಿ ಅಲ್ಲಲ್ಲಿ ನಾನಿದ್ದೇನೆ, ಅಲ್ಲಲ್ಲಿ ನೀವೂ ಇದ್ದೀರಿ, ನಾನು ಕಂಡವರಿದ್ದಾರೆ.

ನೀವು ಕಾಣದವರೂ ಇದ್ದಾರೆ. ಒಟ್ಟಾರೆ ಹೇಳುವುದಾದರೆ ಈ ಪುಸ್ತಕದಲ್ಲಿ ನಮ್ಮನಿಮ್ಮಂತೆಯೇ “ಭಾವಜೀವಿಗಳಿದ್ದಾರೆ”.

ಕತೆಯಲ್ಲಿನ ಭಾವಜೀವಿಗಳಂತೆಯೇ ನನ್ನ ಜೀವನದಲ್ಲೂ ಒಂದಷ್ಟು ಭಾವಜೀವಿಗಳಿದ್ದಾರೆ. ಅವರಿಂದಲೇ ಇವತ್ತು ಈ ಪುಸ್ತಕ ಸಾಧ್ಯವಾಗಿದ್ದು. ನಾನು ಅವರಿಗೆಲ್ಲ ಧನ್ಯವಾದ ಹೇಳದೇ ಹೋದರೆ ಅದು ನನ್ನ ತಪ್ಪಾಗುತ್ತದೆ. ಹಾಗಾಗಿ, ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ಎನ್ನುವಂತೆ ಪುಸ್ತಕ ಬರೆಯುವಾಗ ಜೊತೆಯಾಗಿ ನಿಂತ ಕುಟುಂಬಕ್ಕೆ, ಗೆಳೆಯರ ಬಳಗಕ್ಕೆ, ಪ್ರಕಟಿಸಲು ಮುಂದಾದ ಹರಿವು ಬುಕ್ಸ್ ಪಬ್ಲಿಕೇಶನ್‌ಗೆ, ಚಂದದ ಮುಖಪುಟ ಮತ್ತು ಕತೆಗಳಿಗೆ ಚಿತ್ರ ಬರೆದುಕೊಟ್ಟ ಸುಮುಖ್ ಶಾನ್‌ಭೋಗ್ ಅವರಿಗೆ, ಅಷ್ಟೇ ಚಂದದ ಪುಟ ತೆಗೆದುಕೊಟ್ಟ ಗುರುಪ್ರಸಾದ್ ಕಾಶಿ ಅವರಿಗೆ, ಅಕ್ಷರಗಳನ್ನು ಜೋಡಿಸಿಕೊಟ್ಟ ರಾಹುಲ್‌ ಅವರಿಗೆ, ಮುದ್ರಣ ಮಾಡಿಕೊಟ್ಟ ಲಕ್ಷ್ಮಿ ಮುದ್ರಣಾಲಯಕ್ಕೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಮೊದಲ ಕವನ ಸಂಕಲನವಾದ “ಹೇಳದೇ ಉಳಿದದ್ದು!" ಪುಸ್ತಕವನ್ನು ಕೊಂಡು ನಾನು ಈ ಪುಸ್ತಕವನ್ನು ಬರೆಯಲು ಕಾರಣರಾದ ಎಲ್ಲಾ ಓದುಗರಿಗೆ ಹಾಗೇ ಈ ಪುಸ್ತಕವನ್ನು ಕೊಂಡ ನಿಮ್ಮೆಲ್ಲರಿಗೆ ರಾಶಿ ರಾಶಿ ಧನ್ಯವಾದ!

-ಸೌಮ್ಯ ಕಾಶಿ

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...