ಬಿ.ಆರ್.ಎಲ್ ಎಂದರೆ ಬರೀ ಪ್ರೇಮಕವಿಯಷ್ಟೇ ಅಲ್ಲ...


"ಪ್ರೇಮದ ಹಪಾಹಪಿಯ ತರುಣಿಯೊಬ್ಬಳು ಹೀಗೆ ಸಂಧಿಸಿ ಅವನಲ್ಲಿ ಪ್ರೇಮಭಿಕ್ಷೆ ಬೇಡಿದ್ದಾಳೆ. ಆ ಹೆಣ್ಣು ಬಯಸುತ್ತಿರುವ ಪ್ರೇಮ ಮತ್ತು ಭರವಸೆ ಅವನನ್ನು ತಾಕಲಾಟಕ್ಕೆ ತಳ್ಳಿದಂತಿದೆ. ಅವನ ಅಂತರಂಗ ಆ ಪ್ರೇಮವನ್ನು ಸ್ವೀಕರಿಸುವ ಮತ್ತು ಅವಳ ಅಂತರಂಗವನ್ನು ತಲುಪುವ ಕುರಿತು ಯೋಚಿಸುತ್ತಿದೆ," ಎನ್ನುತ್ತಾರೆ ಲೇಖಕ ಗೋಪಾಲಕೃಷ್ಣ ಕುಂಟಿನಿ. ಅವರು ಬಿ.ಆರ್. ಲಕ್ಷ್ಮಣರಾವ್ ಅವರ ‘ಪ್ರೀತಿಯ ರೀತಿ’ ಕೃತಿ ಕುರಿತು ಬರೆದ ವಿಮರ್ಶೆ.

ಬಿ ಆರ್ ಎಲ್ ಎಂದರೆ ಬರೀ ಪ್ರೇಮಕವಿಯಷ್ಟೇ ಅಲ್ಲ. ಅವರು ಪ್ರೇಮಿ, ಜೀವಪ್ರೇಮಿ, ಜೀವನದ ಪ್ರೇಮಿ. ಅವರು ಸಿಕ್ಕಾಗಲೆಲ್ಲಾ ಅವರೊಳಗಿನ ಪ್ರೇಮಿ ಮೊದಲು ಕಾಣುತ್ತಾರೆ. ಅವರ ಪ್ರೀತಿ ಮತ್ತು ಮಾತುಗಳು ನಮ್ಮನ್ನು ಆಲಂಗಿಸುತ್ತವೆ. ಅವರು ಅದೇ ಪ್ರೀತಿಯಿಂದ ಕಳುಹಿಸಿಕೊಟ್ಟ ಪ್ರೇಮ ಕವನಗಳ ಸಂಕಲನ ‘ಪ್ರೀತಿಯ ರೀತಿ” ಓದಿದೆ.

ಈ ಸಂಕಲನ ಅಕಾಲದ ಪ್ರೇಮಸಂಭವಗಳು. ಕಡಿದ ತಂತಿಯಲ್ಲಿ ಮಿಂಚು ಹರಿಯಬಲ್ಲದೆ? ಗಾಜುಗೋಲಿಯಲ್ಲಿ ದೀಪ ಉರಿಯಬಲ್ಲದೆ? ಎಂದು ಕೇಳುವ ಹೊತ್ತಿನವು. ಅವಳ ಕಾವಿನಲ್ಲಿ ಸಿಹಿಯಾಗಬಹುದು ನಿಂಬೆ ಎಂಬ ನಂಬಿಕೆಯವು. ಇಲ್ಲಿರುವ ಕಾವ್ಯ ನಾಯಕ ಒಂಟಿ. ಅವನು ಎಲ್ಲರೂ ಇದ್ದು ಏಕಾಂಗಿ.

ಈ ಅನುಮಾನ, ಪರಿಮಾಣ, ಈ ಒಬ್ಬಂಟಿತನ ಯಾರಿಗೆ ಬೇಕಾಗಿದೆ ಎಂದು ಕೇಳುತ್ತಿರುವ ಮತ್ತು ಹೊಸ ಧಾಟಿ ಬೇಕಾಗಿದೆ, ನಾ ಬಾಳ ಬೇಕಾಗಿದೆ ಎಂದು ಹಂಬಲಿಸುವ ಹೊತ್ತು. ಆ ಹೊತ್ತಿನಲ್ಲಿ ಬಂದವಳು ಅವಳು. ಅರಗಿಳಿ.

‘ಹಾರಿಬಂದು ಮುಂಗೈ ಮೇಲೆ
ಕುಳಿತು ಒಂದು ಅರಗಿಳಿ
ಉಲಿಯಿತು ನಾ ಶಾಪಗ್ರಸ್ತೆ,
ನಿನ್ನ ಪ್ರೇಮಪುತ್ಥಳಿ,
ಶಾಪ ವಿಮೋಚನೆಗೆ ಬೇಕು
ನಿನ್ನ ಪ್ರೇಮಸುಧೆ
ನಿನ್ನ ಸ್ಪರ್ಶದಲ್ಲೇ ನನ್ನ
ಉದ್ಧಾರವಿದೆ.’
ಎಂದು ಅವಳು ಕೇಳಿದ್ದಾಳೆ.

ಪ್ರೇಮದ ಹಪಾಹಪಿಯ ತರುಣಿಯೊಬ್ಬಳು ಹೀಗೆ ಸಂಧಿಸಿ ಅವನಲ್ಲಿ ಪ್ರೇಮಭಿಕ್ಷೆ ಬೇಡಿದ್ದಾಳೆ. ಆ ಹೆಣ್ಣು ಬಯಸುತ್ತಿರುವ ಪ್ರೇಮ ಮತ್ತು ಭರವಸೆ ಅವನನ್ನು ತಾಕಲಾಟಕ್ಕೆ ತಳ್ಳಿದಂತಿದೆ. ಅವನ ಅಂತರಂಗ ಆ ಪ್ರೇಮವನ್ನು ಸ್ವೀಕರಿಸುವ ಮತ್ತು ಅವಳ ಅಂತರಂಗವನ್ನು ತಲುಪುವ ಕುರಿತು ಯೋಚಿಸುತ್ತಿದೆ.

‘ಕೊಟ್ಟುಬಿಡಲೇ ಪ್ರೀತಿಯನ್ನು?
ಮುಟ್ಟಿಬಿಡಲೇ ಗಿಳಿಯ?’
ಆತ ಕೇಳುತ್ತಿದ್ದಾನೆ. ಆತ ಯಾರನ್ನು ಕೇಳಬೇಕು? ಹೃದಯವೊಂದನ್ನೇ.

ಬಿ ಆರ್ ಎಲ್ ಪ್ರೇಮಕಾವ್ಯ ನಮ್ಮನ್ನು ತೆಕ್ಕೆಗೆ ತೆಗೆದುಕೊಳ್ಳುವ ಬಗೆಗಳು ಹೀಗೆ.

‘ಎಲ್ಲ ಕತೆಯ ಕವಿತೆಯ ಕೊನೆಯಲ್ಲೂ
ನಮಗೇ ವಿಜಯ ಪತಾಕೆ
ಪ್ರೇಮಕೆ ಸೋಲುಂಟೇ?’
ಎಂದು ಗಟ್ಟಿ ಭರವಸೆಯಿಂದ ಕೇಳಿದ ಕವಿಯಲ್ಲವೇ ಅವರು.

‘ಬರಲಿ ಬೇಕಾದರೆ
ಸಂಜೆಗೆ
ನನ್ನ ಹೃದಯದ ತಮ್ಮ ತಮ್ಮ ಗೂಡುಗಳಿಗೆ,
ಅಂತರಂಗದ ಖಾಸಗಿ ಕತ್ತಲೆಗೆ
ನಿರ್ಭಿಡೆಯ ನಿರಾತಂಕ ಬೆತ್ತಲೆಗೆ

ಗೂಡುಗಳಲ್ಲಿ ತಮ್ಮ ತತ್ತಿಗಳ ಮೇಲೆ
ಕಾವು ಕೊಡಲಿ
ಮರಿ ಮಾಡಲಿ
ಗುಟುಕು ನೀಡಲಿ
ಜೋಗುಳ ಹಾಡಲಿ’
ಆತ ಕಟ್ಟಿಕೊಡುವ ಪ್ರೇಮಲೋಕ ಇದು.

ಪ್ರೇಮ ಘಟಿಸುವ ಸಂದಿಗ್ಧತೆಯನ್ನೇ ಬಿ ಆರ್ ಎಲ್ ಒಂದು ಕಾವ್ಯವಾಗಿ ಕಟ್ಟಿಕೊಟ್ಟ ಬಗೆಯ ಇಂಥ 45 ಕವನಗಳು ಇಲ್ಲಿವೆ. ವಿರಹವೇ ಬದುಕಿನ ಸಮಿಧೆಯಾಗಿ, ಮೌನವೇ ವಿರಹದ ಒಲೆಯಾಗಿ, ನೆನಪೇ ಅಗ್ಗಿಷ್ಟಿಕೆಯಾಗುವ ಹೊತ್ತಿನಲ್ಲಿ, ಕವಿ ಹೇಳುತ್ತಾರೆ,

‘..ಮತ್ತೂ ಒಮ್ಮೊಮ್ಮೆ, ಬಚ್ಚಲ ತಳಸವೆದ ಹಳೆಹಂಡೆ ಸೋರಿ,
ಒಲೆ ಆರಿ,
ಧುತ್ತನೆ ಸುತ್ತಲೂ ಕವಿಯುವ ಹೊಗೆಯಂತೆ
ನಿನ್ನ ನೆನಪಿನ ಧಗೆ ನನ್ನೊಳಗೆಲ್ಲ ಅಡರುತ್ತೆ,
ನನ್ನ ಜೀವ ಹಿಂಡುತ್ತೆ’

ಇಲ್ಲಿ ‘ತಳಸವೆದ ಹಂಡೆ’ ಎಂಬ ಒಂದು ಸಾಲು ಕಾವ್ಯದ ನಾಯಕನ ಚಿತ್ರವೂ, ಬದುಕಿನ ಸಾರ ಆರಿದ ರೂಪಕವೂ. ಇದೇ ರೀತಿಯ ನ್ನೊಂದು ಅಖಂಡವೆನಿಸುವ ರೂಪಕದ ಸಾಲು ಓದಿ.

‘ಆಳವಳೆಯಲು ಧೀರ
ಕಣ್ಣೊಳಗೆ ಧುಮುಕಿದೆ,
ಮುಳುಗಿದೆ,
ಮುಳುಗಿದೆ,
ಆಳ,
ಎಂಥ ಒಲವಿನ ಜಾಲ!
ಸಾವಂಥ ಕಗ್ಗತ್ತಲು
ಬಸಿರ
ಸುಪ್ಪತ್ತಿಗೆ
ತಳ
ಮುಟ್ಟಿದೆ
ನಿಶ್ಯಬ್ದ ಜೋಗುಳ
ಮಲಗಿಬಿಟ್ಟೆ’

ನಿಶ್ಯಬ್ದ ಜೋಗುಳ! ಎಷ್ಟು ಸೊಗಸಾದ ಪದ! ಪ್ರೇಮದ ಕೊನೆಯಲ್ಲಿ, ವಿರಹದ ಅವತರಣಿಕೆಯಲ್ಲಿ, ಬದುಕಿನ ಮುಗಿಯುವ ಹಾದಿಯಲ್ಲಿ ನಿಶ್ಯಬ್ದ ಜೋಗುಳವಲ್ಲದೇ ಇನ್ನೇನು?

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...