ಬೆಳಕಿನ ಪೊರೆಯುವ ಗುಣದ ಬಗ್ಗೆ ಇಲ್ಲಿ ಹಲವು ಕವನಗಳಿವೆ


"ಲೌಕಿಕ ದೊಂದಿಗೆ ಆರಂಭವಾಗಿ ಅನುಭಾವದ ಮೆಟ್ಟಿಲೇರುವ 'ಕಳೆದು ಹೋದ ವಸ್ತು' ಸಾಧಾರಣ ಹೇಳಿಕೆಯಿಂದ ಹೊರಟು ಆಧ್ಯಾತ್ಮಿಕ ಅರಿವಿನತ್ತ ಕೊಂಡೊಯ್ಯುವ 'ಅರಿವೆ' 'ನನ್ನ ಕನಸಿನ ದೇಶ'ದಲ್ಲಿ ಕಾಣುವ ಯುಟೋಪಿಯಾ, ರೂಪಕವೇ ಕವಿತೆಯಾಗಿ ಬರುವ 'ಆರ್ಕಿಡ್ ಹೂವು' 'ಮಿಂಚು ಹುಳ' ಮೊದಲಾದ ಕವಿತೆಗಳು ಈ ಕವಯಿತ್ರಿಯ ಕಾವ್ಯ ಕಟ್ಟುವ ಶಕ್ತಿಯ ದ್ಯೋತಕಗಳು," ಎನ್ನುತ್ತಾರೆ ಲೇಖಕಿ ಪಾರ್ವತಿ ಜಿ ಐತಾಳ್. ಅವರು ಜಯಶ್ರೀ ಬಿ. ಕದ್ರಿ ಅವರ ‘ಕೇಳಿಸದ ಸದ್ದುಗಳು’ ಕೃತಿ ಕುರಿತು ಬರೆದ ವಿಮರ್ಶೆ.

'ಕವಿತೆಯೆಂದರೆ ಹಾಗೆ ನಿಶ್ಶಬ್ದಕ್ಕೂ ಧ್ವನಿ ನೀಡುವ ಭೋರ್ಗರೆಯುವ ಕಡಲು, ಭವದ ಸಾಯುಜ್ಯಕ್ಕೆ ಉರಿವ ಹಣತೆ' ಎನ್ನುವ ಕವಯಿತ್ರಿ ಜಯಶ್ರೀ ಬಿ.ಕದ್ರಿಯವರ ಕವಿತೆಗಳಲ್ಲಿ ಅವರು ತಮ್ಮ ಭಟ್ಟಿಯಿಳಿ‌ಸಿದ ಭಾವಗಳಿಗೆ ಅಕ್ಷರಗಳ ರೂಪು ಕೊಡುತ್ತಾರಾದರೂ ತಮ್ಮ ಸುತ್ತ ಮುತ್ತ ಕಾಣುವ ಮನಸ್ಸು ಒಲ್ಲದ ವಿಚಾರಗಳ ವಿರುದ್ಧ ಪ್ರತಿಭಟನೆ ವ್ಯಕ್ತ ಪಡಿಸುವಾಗಲೂ ಮೃದುವಾಗಿ ನೆಲಕ್ಕೆ ಬೀಳುವ ಪಾರಿಜಾತದಂತೆ ಪಿಸುಗುಟ್ಟುವ ಧ್ವನಿಯಲ್ಲಿ ಮಾತನಾಡುತ್ತಾರೆ.

Unheard melodies are sweeter ಅನ್ನುವಂತೆ ಕೇಳಿಸದ ಸದ್ದುಗಳು, ಮೌನದಾಚೆಯ ಶಬ್ದಗಳು ಮತ್ತು ನಿಶ್ಶಬ್ದಗಳ (ಅಂದರೆ ಸಾಮಾನ್ಯರ ಬಾಹ್ಯೇಂದ್ರಿಯಗಳ ಅರಿವಿಗೆ ಬಾರದ ವಿಚಾರಗಳ)ಬಗ್ಗೆ ಹೆಚ್ಚು ಒಲವಿರುವ ಕವಯಿತ್ರಿ ಈಕೆ. 'ಶಕುಂತಲೆ' 'ಅಡುಗೆ', 'ಮರೀಚಿಕೆ', 'ವಿಮರ್ಶೆ', ಮೊದಲಾದ ಅವರ ಅನೇಕ ಕವಿತೆಗಳು ಸ್ತ್ರೀ ಸಂವೇದನೆಯ ಕವಿತೆಗಳು. ಅಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗಾಗುವ ಅನ್ಯಾಯಗಳ ವಿರುದ್ಧ ಏರು ಧ್ವನಿಯಲ್ಲಿ ಏನೂ ಹೇಳದೆ ಬಹಳ ಸೂಚ್ಯವಾಗಿ ಹೆಣ್ಣಿನ ಸಂಕಷ್ಟಗಳನ್ನು ಹೇಳುವ ಅವರು ತಮ್ಮ ಸದ್ದಿಲ್ಲದ ಸಂಯಮದ ಮೂಲಕ ಓದುಗರ ಗಮನ ಸೆಳೆಯುತ್ತಾರೆ.

ಬೆಳಕಿನ ಪೊರೆಯುವ ಗುಣದ ಬಗ್ಗೆ ಇಲ್ಲಿ ಹಲವು ಕವನಗಳಿವೆ. ಬೆಳಕಿಲ್ಲದೆ ಬದುಕಿಲ್ಲ. ಮನುಷ್ಯನ ಒಳಗನ್ನೂ ಹೊರಗನ್ನೂ ಕಾಪಿಡುವುದು ಬೆಳಕು. ಆದರೆ ಬೆಳಕು ನಮ್ಮನ್ನು ಕಾಪಾಡುವಂತೆ ನಮ್ಮೊಳಗೆ ಅದನ್ನು ಸದಾ ಕಾಪಿಟ್ಟು ಕೊಳ್ಳುವುದು ನಮ್ಮ ಕರ್ತವ್ಯ ಕೂಡಾ ಆಗಿದೆ ಎನ್ನುತ್ತಾರೆ ಕವಯಿತ್ರಿ: ಒಳಮನೆಯ ಬೆಳಕಿಗೂ ಒಳಮನದ ಬೆಳಕಿಗೂ/ ಕತ್ತಲೆಯನೋಡಿಸುವ ಕಾಯಕ/... ಸೊಡರು ಕಾಡುವ ಗಾಳಿ ಆರಿ ಹೋಗುವ ತೈಲ/ಪೊರೆಯುವ ಕೈಗಳು ಬೇಕು ಕಿರುಹಣತೆಗೆ/ಭಾವದೀಪ್ತಿಯ ಬೆಳಕುಚಿತ್ತಕೋಶದ ತುಂಬ/ ಬೆಳಕಿನಲೆಗಳನು ತುಂಬಿಕೋ ಮನವೆ/ಕತ್ತಲೆಯ ಕಾವಳದಿ ಕಂಗೆಡುವಾ ಕನಸು/ ಕಾಪಿಡುವ ಕಾಯಕವ ಮುನ್ನಡೆಸು ಬೆಳಕೆ(ಬೆಳಕೇಬಾ. ಪುಟ 79)

'ಕಡತ ವಿಲೇವಾರಿ'ಯಲ್ಲಿ ಆತ್ಮಾವಲೋಕನ ಹಾಗೂ ಆತ್ಮಶುದ್ಧಿಯ ಅಗತ್ಯದ ಸೂಚನೆಯಿದೆ. ಮನೆಯನ್ನು ಸ್ವಚ್ಛಗೊಳಿಸಲು ಹೊರಟ ಕವಯಿತ್ರಿಯ ಆಲೋಚನೆಗಳು ಎಲ್ಲೆಲ್ಲೋ ಹರಿದಾಡುತ್ತವೆ. ಅವು ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯಿಸುವ ವಿಚಾರಗಳು:
ಸಂದಿಗೊಂದಿಗಳಲ್ಲಿ ಧೂಳು ಕಸಗಳಿವೆ/
ಪುಸ್ತಕದ ಮರೆಯಲ್ಲಿ ಗೆದ್ದಲಿನ ಗೂಡು/
....ಎಲ್ಲ ಮನೆಗಳ ಹಾಗೆ ನನ್ನ ಮನೆಯೂ ಕೂಡ/
ಯಾರ ಮನೆಯಲ್ಲಿಲ್ಲ ಚೂರು ಕಸ ಹೇಳಿ(ಕಡತ ವಿಲೇವಾರಿ..ಪುಟ 51)

ಕಡು ಕಷ್ಟದ ಪರಿಸ್ಥಿತಿಯಲ್ಲೂ ಕಣ್ಣ ಬೆಳಕು ಉಳಿಯಲಿ ಎನ್ನುವ ಆಶಯ 'ಕಣ್ಣ ಬೆಳಕೇ ನಿಲ್ಲು' ಎಂಬ ಕವಿತೆಯಲ್ಲಿ ಇದೆ. ಕನಸು ಕಾಣುವ ವಯಸ್ಸಿನ ಎಳೆಯರ ಪರವಾಗಿ ನಿಲ್ಲುವ 'ಚೌಕಟ್ಟಿರದ ಕನಸುಗಳು' ಕಾಲದ ಆಟವನ್ನು ಒಪ್ಪಿಕೊಳ್ಳುವ 'ಕಾಲ ಕಾಯುವುದಿಲ್ಲ'. ಲೌಕಿಕ ದೊಂದಿಗೆ ಆರಂಭವಾಗಿ ಅನುಭಾವದ ಮೆಟ್ಟಿಲೇರುವ 'ಕಳೆದು ಹೋದ ವಸ್ತು' ಸಾಧಾರಣ ಹೇಳಿಕೆಯಿಂದ ಹೊರಟು ಆಧ್ಯಾತ್ಮಿಕ ಅರಿವಿನತ್ತ ಕೊಂಡೊಯ್ಯುವ 'ಅರಿವೆ' 'ನನ್ನ ಕನಸಿನ ದೇಶ'ದಲ್ಲಿ ಕಾಣುವ ಯುಟೋಪಿಯಾ, ರೂಪಕವೇ ಕವಿತೆಯಾಗಿ ಬರುವ 'ಆರ್ಕಿಡ್ ಹೂವು' 'ಮಿಂಚು ಹುಳ' ಮೊದಲಾದ ಕವಿತೆಗಳು ಈ ಕವಯಿತ್ರಿಯ ಕಾವ್ಯ ಕಟ್ಟುವ ಶಕ್ತಿಯ ದ್ಯೋತಕಗಳು. ಒಟ್ಟು 68 ಪುಟ್ಟ ಪುಟ್ಟ ಕವಿತೆಗಳುಳ್ಳ 'ಕೇಳಿಸದ ಸದ್ದುಗಳು' ಎಂಬ ಈ ಸಂಕಲನವು ನೋಟಕ್ಕೆ ಸರಳವೆಂದು ಕಂಡರೂ ಸಾಕಷ್ಟು ಆಳವಾದ ಅರ್ಥವಿರುವ ಕವನಗಳನ್ನು ಹೊಂದಿದೆ.

- ಪಾರ್ವತಿ ಜಿ ಐತಾಳ್

MORE FEATURES

ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ

05-05-2024 ಬೆಂಗಳೂರು

'ಕನ್ನಡ ಸಾಹಿತ್ಯದಲ್ಲಿ ವಿರಳಾತಿ ವಿರಳರಾಗಿರುವ ವಸ್ತು ನಿಷ್ಠ ವಿಮರ್ಶಕರ ನಡುವೆ ಪ್ರಮುಖರಾದ ನರೇಂದ್ರ ಪೈ ಅವರ ಹೊಸ ...

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...