ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ


"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗೆದ್ದು ಬೀಗುವ ಉಮೇದಿ. ಮೈನಸ್ ಡಿಗ್ರಿಯ ಮರಗಟ್ಟುವ ಚಳಿಯಲ್ಲಿ, ಏದುಸಿರಿನ ಏರುದಾರಿ ಇಳಿಯುವಲ್ಲಿ, ಜೀವವನ್ನು ಕೈಯೊಳಗೆ ಬಿಗಿ ಹಿಡಿದು ಹೀಗೆ ಹತ್ತಿ ಇಳಿಯುವ ಆಟದಲ್ಲಿ ಹಿಮಗಿರಿಯೊಂದು ಬದುಕಿನ ಅದ್ಭುತ ರೂಪಕವಾಗಿ ನಿಲ್ಲುತ್ತದೆ," ಎನ್ನುತ್ತಾರೆ ಡಾ. ಲಕ್ಷ್ಮಣ ವಿ. ಎ. ಅವರು ಡಾ. ಸಲೀಂ ನದಾಫ್ (ಅಬುಯಾಹ್ಯಾ) ಅವರ ‘ಲಡಾಕ್ ಡೈರೀಸ್’ ಕತಾಸಂಕಲನದ ಕುರಿತು ಬರೆದ ಮುನ್ನುಡಿ.

ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಕುಳಿತ ಈ ಕ್ಷಣದಲ್ಲಿ ಹಿಮಾಲಯದ ಉತ್ತರಕಾಶಿಯಲ್ಲಿ ಕಳೆದ ಹದಿನೈದು ದಿನಗಳಿಂದ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದ ಕಾರಣಕ್ಕೆ, ಅದರೊಳಗೆ ಸಿಲುಕಿದ ನಲವತ್ತೊಂದು ಕಾರ್ಮಿಕರು ಬದುಕುಳಿದು ಬಂದ ಗಳಿಗೆಯಲ್ಲಿ ಇಡೀ ಜಗತ್ತು ಒಂದು ದೀರ್ಘ ನಿಟ್ಟುಸಿರುಬಿಟ್ಟು ನಿರಾಳವಾಗಿದೆ. ಉತ್ತರಕಾಶಿ ಹಿಮಾಲಯದ ಒಂದು ಪುಟ್ಟ ಮಡಿಲು. ಜಗತ್ತಿನ ಅತಿ ಎತ್ತರದ ಹಿಮಾಲಯ ಮೇಲು ನೋಟಕ್ಕೆ ಹೊರ ಜಗತ್ತಿಗೆ ಮೈ ತುಂಬ ಐಸು ಹೊದ್ದ ತಣ್ಣನೆಯ ಕಡ್ಡಿ ಐಸ್ಟೀಮಿನಂತೆ ಗೋಚರಿಸಿದರೂ ಅದರ ಒಡಲಿನೊಳಗೊಂದು ಹಾಲಾಹಲವಿದೆ. ಅದರ ರಸತಳದಲ್ಲಿ ಕುದಿಯುವ ಲಾವಾ ಇದೆ. ಕ್ಷಣಕ್ಷಣಕ್ಕೆ ಕದಲುವ ಭೂಪದರಗಳ ಟೆಕ್ಟ್ರಾನಿಕ್ ಪ್ಲೇಟುಗಳು ಯಾವುದೇ ಕ್ಷಣದಲ್ಲಾದರೂ ಚಲನೆಗೊಂಡು ಕಂಪಿಸಿ, ಈ ಕ್ಷಣಕ್ಕೆ ಇದ್ದ ಭೂ ಪದರಿನ ಚಿತ್ರಣವನ್ನೇ ಬದಲಿಸಿ, ಇಡೀ ವಾತಾವರಣವನ್ನೇ ಅಲ್ಲೋಲ ಕಲ್ಲೋಲಗೊಳಿಸಿ, ನುಂಗಿ ನೀರು ಕುಡಿದು ಮತ್ತೊಂದು ಕ್ಷಣದಲ್ಲಿ ಏನೇನೂ ನಡದೇ ಇಲ್ಲ ಎನ್ನುವ ಶಾಲೆಯ ಪುಂಡ ಬಾಲಕನಂತೆ ಸದ್ದಿಲ್ಲದೆ ಇರಬಲ್ಲದು. ಹೀಗಾಗಿ ಈ ಹಿಮ ಹೊತ್ತ ಎತ್ತರದ ಗಿರಿಯೊಂದು ರುದ್ರವೂ ಹೌದು. ರಮಣೀಯವೂ ಹೌದು; ಥೇಟ್ ಶಿವನ ರುದ್ರ ತಾಂಡವ ನೃತ್ಯದಂತೆ.

ಜಗತ್ತಿನ ಬಹುತೇಕ ಸಾಹಸಿಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಈ ಎತ್ತರದ ಹಿಮಾಲಯವನ್ನು ಹತ್ತಿ ಅದರ ಮೇಲೆ ತಮ್ಮ ಪಾದವೂರಿ, ತಮ್ಮ ದೇಶದ ಧ್ವಜ ನೆಟ್ಟು, ತಮ್ಮ ಯಕಶ್ಚಿತ್ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಅದಮ್ಯ ಆಸೆ ಇದ್ದೇ ಇರುತ್ತದೆ ಎಂದು ಡಾ. ಸಲೀಂರ ಲಡಾಖ್ ಡೈರೀಸ್ ಓದಿದಾಗ ಮನದಟ್ಟಾಯಿತು. ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗೆದ್ದು ಬೀಗುವ ಉಮೇದಿ. ಮೈನಸ್ ಡಿಗ್ರಿಯ ಮರಗಟ್ಟುವ ಚಳಿಯಲ್ಲಿ, ಏದುಸಿರಿನ ಏರುದಾರಿ ಇಳಿಯುವಲ್ಲಿ, ಜೀವವನ್ನು ಕೈಯೊಳಗೆ ಬಿಗಿ ಹಿಡಿದು ಹೀಗೆ ಹತ್ತಿ ಇಳಿಯುವ ಆಟದಲ್ಲಿ ಹಿಮಗಿರಿಯೊಂದು ಬದುಕಿನ ಅದ್ಭುತ ರೂಪಕವಾಗಿ ನಿಲ್ಲುತ್ತದೆ. ಡಾ. ಸಲೀಂ ನನ್ನ ಬಾಲ್ಯದ ಗೆಳೆಯ. ಬಾಲ್ಯದಿಂದಲೂ ಇವನು ಸಾಹಸಿ, ಪುಂಡ ಮತ್ತು ಅಷ್ಟೇ ಹಾಸ್ಯ ಪ್ರವೃತ್ತಿಯ ಅತ್ಯುತ್ತಮ ಕಥೆಗಾರ ಹಾಗು ಸಾಹಿತಿ. ಸವಾಲುಗಳೆಂದರೆ ಇವನಿಗೆ ಅಚ್ಚುಮೆಚ್ಚು ಹೀಗಾಗಿ ನನಗೆ ಯಾವಾಗಲೂ ಇವನೆಡೆಗೊಂದು ಮೆಚ್ಚುಗೆ ಮತ್ತು ಸಣ್ಣ ಹೊಟ್ಟೆಕಿಚ್ಚು. ಈ ಸಾಹಸ ಪ್ರವೃತ್ತಿಯನ್ನು ಈ ನಡುವಯಸಿನಲ್ಲೂ ಮುಂದುವರೆಸಿಕೊಂಡು ನಡೆದುದರ ಬಗ್ಗೆ ಹೆಮ್ಮೆ ಮತ್ತು ಅಪಾರ ಬೆರಗು ಇದೆ.

ಡಾ. ಸಲೀಂ 'ಲಡಾಖ್ ಡೈರೀಸ್'ನಲ್ಲಿ ಲಡಾಖನ್ನು ಮೊಟ್ಟ ಮೊದಲ ಬಾರಿ ನೋಡುವ ಕುತೂಹಲಭರಿತ ಪ್ರವಾಸಿಯೂ ಹೌದು, ವಿದೇಶಿ ಪ್ರವಾಸಿಗರ ಆರೋಗ್ಯ ಹದಗೆಟ್ಟಾಗ ಅದನ್ನು ಸರಿಪಡಿಸುವ ಪೇಡ್ ಡ್ಯೂಟಿ ಡಾಕ್ಟರ್ ಅಷ್ಟೇ ಅಲ್ಲದೆ, ಆ ಯೂರೋಪಿಯನ್ ಪರ್ವತಾರೋಹಿಗಳೊಡನೆ ತಾನು ವೈದ್ಯನೆಂಬ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಅವರೊಡನೆ ಒಂದಾಗಿ ಬೆರೆಯುವ ಸ್ನೇಹ ಜೀವಿಯೂ ಕೂಡ. ಈ ಕಾರಣದಿಂದಾಗಿಯೇ ಅವರು ಸಹಪಯಣಿಗರ ಜೊತೆ ಒಂದು ಅತ್ಯುತ್ತಮ ಸಂವಹನ ನಡೆಸುತ್ತ ಆ ದೇಶದ ಆಚಾರ ವಿಚಾರ, ಅಡುಗೆ, ಉಡುಗೆ, ತೊಡುಗೆ, ಮನುಷ್ಯನ ಸಂಬಂಧಗಳನ್ನು ಅರಿತು ಅದನ್ನು ಇಲ್ಲಿ ದಾಖಲಿಸುವುದರಿಂದ ಈ ಪುಸ್ತಕದ ಮೌಲ್ಯ ಹೆಚ್ಚಾಗುತ್ತದೆ.

ಲಡಾಖ್ ಆರೋಹಣ ಮಾಡುವಾಗ, ಆ ದಾರಿಯಲ್ಲಿ ಎದಿರಾಗುವ ಹಿಮಾಲಯದ ಅತಿ ವಿಶಿಷ್ಟ ಪ್ರಾಣಿ ಮಾರ್ಮೆಟ್ಟುಗಳ ಜೊತೆ ನಿಂತು ಫೋಟೋ ತೆಗೆಯುವಾಗ, ಅತಿ ವಿರಳ ಸಂಚಾರದ ದಾರಿಯಲ್ಲಿ ಸಿಗುವ ಯಾಕ್‌ಗಳ ಬೆಣ್ಣೆಯಿಂದ ಮಾಡಿದ 'ಗುರ್ ಗುರ್' ಚಹಾ ಪರಿಚಯಿಸುವಾಗ, ಗಿರಿಯನ್ನು ಹತ್ತುತ್ತಲೇ ಅಲ್ಲಿ ಸಿಗುವ ಅಪರೂಪದ ಮನುಷ್ಯನ ಮುಖಗಳನ್ನು ಅನಾವಣರಣಗೊಳಿಸಿ ಆ ಘಟನೆಗೊಂದು ತನ್ನ ಬಾಲ್ಯದ ಅನುಭವಗಳನ್ನು ತಳಕು ಹಾಕಿ ನೋಡುವಾಗ, ಒಬ್ಬ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಕಥೆಗಾರನಂತೆ ಕಾಣುತ್ತಾರೆ. ಅಲ್ಲಿನ ಮಣ್ಣಿನ ಕಣಕಣವನ್ನು ಬಹು ಎಚ್ಚರಿಕೆಯಲ್ಲಿ ಕುತೂಹಲದಿಂದ ಗ್ರಹಿಸಿ, ಆ ನೆಲದ ನರ ನಾಡಿಗಳನ್ನು ಪರೀಕ್ಷಿಸಿ, ಡಿಟೇಲ್ಡ್ ಪೋಸ್ಟ್ ಮಾರ್ಟ್ಂ ವರದಿ ನೀಡುವ ನುರಿತ ವೈದ್ಯನಾಗುತ್ತಾರೆ. ದಾರಿ ಸಾಗುತ್ತ ಸಾಗುತ್ತ ಅಲ್ಲಿನ ಬೌದ್ಧ ಗುರು ಲಾಮಾಗಳ ಬದುಕನ್ನು, ಚಳಿಗಾಲದಲ್ಲಿ ಆ ಜನರು ಎದುರಿಸುವ ಕಷ್ಟವನ್ನು ಕಲ್ಪಿಸುತ್ತ, ಅದನ್ನು ದಾಖಲಿಸುವ ಈ ಪುಸ್ತಕ ಕೇವಲ ಪ್ರವಾಸ ಕಥನವಾಗದೆ ಏಕ ಕಾಲದಲ್ಲಿ ಕಾಲ, ದೇಶಗಳಲ್ಲಿ ವಿಹರಿಸುತ್ತ ಚರಿತ್ರೆ ಮತ್ತು ವರ್ತಮಾನದಲ್ಲೂ ಸಂಚರಿಸುತ್ತದೆ.

ಹತ್ತು ಹನ್ನೆರಡು ಯೂರೋಪಿಯನ್‌ರ ಒಂದು ಗುಂಪು. ಈ ಗುಂಪು ಸಾಗುವುದು ಐನೂರು ಸಿ.ಸಿ.ಯ ಬುಲೆಟ್ಟಿನ ಮೇಲೆ. ಈ ಗುಂಪಿನಲ್ಲಿ ಯುವ ಜೋಡಿಗಳೂ ಸೇರಿದಂತೆ ನಡುವಯಸಿನ ಘಾಟಿ ಹೆಂಗಸರೂ, ಗಾಂಜಾ ಅಫೀಮನ್ನು ಕದ್ದುಮುಚ್ಚಿ ಸೇದುವ ಮಾಜಿ ಹಿಪ್ಪಿಗಳೂ, ಅತಿ ಕುಡುಕ ಮುದುಕ ಮುದುಕಿಯೂ ಇದ್ದಾರೆ. ಈ ಅತೀ ಆತ್ಮೀಯವೆನ್ನುವ ಒಡನಾಟ ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡದೇ ಬದುಕಿ ಉಳಿಯಲು ಸಾಧ್ಯವೇ ಇಲ್ಲ ಎನ್ನುವಂತಹ ಬದುಕಿನ ಒಂದು ವಿಲಕ್ಷಣ ಕ್ಷಣಗಳಲ್ಲಿ ಗಡಿ, ಗೆರೆ, ದೇಶ, ಭಾಷೆ, ಸೀಮೆಗಳನ್ನೆಲ್ಲಾ ಮೀರಿ, ತಾವೆಲ್ಲಾ ಈ ಕ್ಷಣದಲ್ಲಿ ಜೀವಕ್ಕೆ ಜೀವ ನೀಡುವ ಅತ್ಯಾಪ್ತ ಜೀವಗಳು ಎನ್ನುವ ಆ ದಿವ್ಯ ಕ್ಷಣವನ್ನು ಸ್ವತಃ ಅನುಭವಿಸಿ ಓದುಗನಿಗೆ ಅದನ್ನು ದಾಟಿಸುವುದಿದೆಯಲ್ಲ, ಈ ನಿಟ್ಟಿನಲ್ಲಿ ಡಾ. ಸಲೀಂ ಒಬ್ಬ ಅದೃಷ್ಟವಂತ ಎಂದೇ.

ಲಡಾಖ್, ಸ್ಪಿಟಿ ವ್ಯಾಲಿ, ಇದರೊಂದಿಗೆ ಒಂದಿಷ್ಟು ಕೇರಳದ ಪ್ರವಾಸದ ವಿವರಗಳ ನಡುವೆಯೇ ಬಹುಕಾಲದಲ್ಲಿ ನೆನಪುಳಿಯುವ ಬಿಲ್ಲಿ, ರಾಮ್ಮಿ ಎಂಬ ಮೆಕ್ಯಾನಿಕ್‌ಗಳು ಸೂಝಿ ಎಂಬ ನಡುವಯಸಿನ ಹೆಂಗಸು, ಬ್ಯಾಂಕರ್‌ನೆಂಬ ಸದಾ ಅಶ್ಲೀಲ ತಮಾಷೆ ಮಾಡುತ್ತಿದ್ದ ಪ್ರವಾಸಿ ಬೀದಿ ಬದಿಯ ನಾಯಿಯ ಮೇಲೆ ಬುಲೆಟ್ ಹತ್ತಿಸಿ ಕೊಂದಾಗ ಪಾಪ ಪ್ರಜ್ಞೆಯಲ್ಲಿ ಬಿಕ್ಕಿ ಬಿಕ್ಕಿ ಅಳುವಾಗ ಜಗತ್ತಿನಲ್ಲಿ ಮನುಷ್ಯನ ಭಾವನೆಗಳು ಎಲ್ಲಾ ಕಡೆ ಒಂದೇ ಎನಿಸಿಬಿಡುತ್ತದೆ.

ಚಳಿಗಾಲದ ಈ ರಾತ್ರಿಯಲ್ಲಿ ಈ ಪುಸ್ತಕ ಓದಿ ಮಡಚಿಡುವ ಹೊತ್ತಿಗೆ ನನ್ನ ಕನಸಿನಲ್ಲಿ ಆಗಾಗ ಬಂದು ಹೋಗುವ ಹಿಮಾಲಯವನ್ನು ಹಾದು ಬಂದ ಹಾಗೆ, ಈ ಥಂಡಿಯಲ್ಲಿ ಗದಗುಟ್ಟುತ್ತಿದ್ದೇನೆ ಮತ್ತು ಕೇವಲ ಬೆಂಗಳೂರಿನ ಟ್ರಾಫಿಕ್ಕಿನ ಈ ಕಿರಿಕಿರಿಯಲ್ಲಿ ಬದುಕು ಸವೆದು ಹೋಗುತ್ತಿರುವ ವಿಷಾದದಲ್ಲಿ ಹಿಮಾಲಯ ಹತ್ತದ ನನ್ನ ಮನಸಿನಲ್ಲಿ ನಾನು ದುಡಿದು ಮಡಿಚಿಟ್ಟ ಯಕಶ್ಚಿತ್ ನೋಟುಗಳು ಸಾದಾ ಕಚ್ಚಾ ಹಾಳೆಗಳಂತೆ ಕಾಣಿಸಲಾರಂಭಿಸಿವೆ.

ಒಂದು ಹ್ಯಾಪೀ ರೀಡಿಂಗ್ ಕೊಟ್ಟ ಖುಷಿಗೆ ನಿನಗೊಂದು ಹಗ್ಸ್ ಡೀಯರ್ ಡಾಕ್ಟರ್ ಸಲಿಂ.

ಡಾ. ಲಕ್ಷ್ಮಣ ವಿ. ಎ. ಬೆಂಗಳೂರು

MORE FEATURES

ವಿಮರ್ಶೆ ಎನ್ನುವುದು ಕೇವಲ ಪರಿಶ್ರಮದಿಂದ ಸಿದ್ಧಿಸುವ ಕಲೆಯಲ್ಲ

05-05-2024 ಬೆಂಗಳೂರು

'ಕನ್ನಡ ಸಾಹಿತ್ಯದಲ್ಲಿ ವಿರಳಾತಿ ವಿರಳರಾಗಿರುವ ವಸ್ತು ನಿಷ್ಠ ವಿಮರ್ಶಕರ ನಡುವೆ ಪ್ರಮುಖರಾದ ನರೇಂದ್ರ ಪೈ ಅವರ ಹೊಸ ...

ಕೌಟುಂಬಿಕ, ಸಾಮಾಜಿಕ ಪರಿಸರವೇ ದುಷ್ಕೃತ್ಯಕ್ಕೆ ಕಾರಣ

05-05-2024 ಬೆಂಗಳೂರು

'ಎಲ್ಲಾ ಕಾಲಘಟ್ಟದಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದೆ. ಆದರೆ ಅದರ ಪ್ರಮಾಣ ದಿನೇ, ದಿನೆ ಹೆಚ್ಚಾಗುತ್ತಿದೆ....

ಮನ ತಟ್ಟಿದ ಕೃತಿ ‘ಹಿಮಾಲಯನ್ ಬ್ಲಂಡರ್’ 

05-05-2024 ಬೆಂಗಳೂರು

"ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಇದುವರೆಗೂ ಕುವೆಂಪು, ತೇಜಸ್ವಿ, ಭೈರಪ್ಪ ಸೇರಿದಂತೆ ಹಲವರ ಕ...