‘ಭವದ ಅಗುಳಿ’ ಸಂಕಲನದುದ್ದಕ್ಕೂ ನೆಲವನ್ನು ಬಿಟ್ಟು ಇಲ್ಲಿ ಕಾವ್ಯ ಇಲ್ಲ: ಜಿ.ಪಿ. ಬಸವರಾಜು


"ಭವದ ಅಗುಳಿ"ಯ ಕವಿ ಇದ್ದಾರಲ್ಲ ಈ ಸಂತೋಷ ಇವರು ಹತ್ತರಲ್ಲಿ ಹನ್ನೊಂದನೆ ಕವಿಯಲ್ಲ ,ಇದು ಮೊದಲ ಸಂಕಲನ ಅಂತಾ ಹೇಳೋಕೂ ಆಗಲ್ಲ ಯಾಕೆ ಅಂದ್ರೆ ಆ ಪ್ರಬುದ್ಧತೆ ಇದೆಯಲ್ಲ ಭಾಷೆಯ ಬಳಕೆಯಲ್ಲಿ ಎಲ್ಲಾ ವಿಚಾರಗಳಲ್ಲೂ ಪ್ರೆಶ್ ಆಗಿರುವಂತಹ ಭಾಷೆ ಬಳಸಿದ್ದಾರೆ ಎನ್ನುತ್ತಾರೆ ಹಿರಿಯ ವಿಮರ್ಶಕ ಜಿ.ಪಿ. ಬಸವರಾಜು ಅವರು ಸಂತೋಷ ಅಂಗಡಿಯವರ "ಭವದ ಅಗುಳಿ" ಕವನ ಸಂಕಲನದ ಬಿಡುಗಡೆ ಸಂಧರ್ಭದಲ್ಲಿ ಕವನ ಸಂಕಲನ ಕುರಿತು ಆಡಿದ ಮಾತುಗಳ ಅಕ್ಷರ ರೂಪ ಇಲ್ಲಿದೆ.

ಇವತ್ತು ಸಂತೋಷ ಬರೀತಾಯಿದ್ದಾರೆ, ಬರೆಯುವ ಕವಿಗೆ ಯಾವಾಗಲೂ ತಡ ಆದಷ್ಟೂ ತಡ ಆದಷ್ಟೂ ದೊಡ್ಡ ದೊಡ್ಡ ಸವಾಲಿರುತ್ತೆ. ಇವತ್ತು ಬರೆಯುತ್ತಿರುವ ಕೆಲವು ಕವಿಗಳನ್ನು ಸುಮ್ಮನೆ ಹೆಸರಿಸುತ್ತೇನೆ ನೋಡಿ ಇತ್ತೀಚೆಗೆ ಬಹಳ ಶಕ್ತಿಯುತವಾಗಿ ಬರೀತಾಯಿರುವವರಲ್ಲಿ ಮೌಲ್ಯ ಸ್ವಾಮಿ,ರೇಣುಕಾ ರಮಾನಂದ,ಚೈತ್ರಾ ಶಿವಯೋಗಿಮಠ, ವೆಂಕಟ್ರಮಣ ಗೌಡ,ಭುವನಾ ಹಿರೇಮಠ,ಭಾಗ್ಯ ಜ್ಯೋತಿ ಗುಡಗೇರಿ,ಸುಮಿತ್ ಮೇತ್ರಿ,ಬಿ.ಆರ್.ಶೃತಿ,ಸಿದ್ದು ಸತ್ಯಣ್ಣವರ,ಪವಿತ್ರಾ ...ಇನ್ನೊಂದು ಸಾಲಿದೆ ಇವರಿಗಿಂತ ಹಿಂದಿನವರದ್ದು ಅದರಲ್ಲಿ ಕೆಲವು ವೀರಣ್ಣ ಮಡಿವಾಳರ,ಟಿ.ಎಸ್.ಗೊರವರ,ಆರೀಪ್ ರಾಜಾ,ಚಿದಾನಂದ ಸಾಲಿ, ಚಿದಾನಂದ ಕಮ್ಮಾರ,ಮಲ್ಲಿಕಾರ್ಜುನಗೌಡ ತೂಲಹಳ್ಳಿ,ಕಲ್ಲೇಶ್ ಕುಂಬಾರ್ ,ಈ ಪಟ್ಟಿಯನ್ನು ಇನ್ನೂ ಉದ್ದಕ್ಕೆ ಬೆಳೆಸಬಹುದು ಇವರಿಗೂ ಹಿಂದಿನ ತಲೆಮಾರಿನಲ್ಲಿ ಬರೆಯುವವರು ಲೆಕ್ಕವೇ ಇಲ್ಲದಷ್ಟು. ಇದನ್ನೆಲ್ಲಾ ಯಾಕೆ ನೆನಪಿಸಿಕೊಳ್ಳಬೇಕು ಅಂದ್ರೆ,ಬರೆಯುವರ ಮುಂದೆ ಹೊಸ ಹೊಸ ಸವಾಲಿರುತ್ತೆ.

ಪ್ರೆಶ್ ಆಗಿ ಬರಿಬೇಕು ಭಾಷೆ ಸವಕಲಾಗಿರಬಾರದು, ಜೊತೆಗೆ ರೂಪಕಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದಿರಬೇಕು. ಭಾಷೆಯಲ್ಲಿ ಲವಲವಿಕೆಯಿರಬೇಕು, ನಡೆಯಲ್ಲಿ ಚುರುಕುತನವಿರಬೇಕು ಇವೆಲ್ಲವೂ ಕಾವ್ಯಕ್ಕೆ ಸಂಬಂಧಿಸಿದ ಅಂಶಗಳು ಒಬ್ಬ ಕವಿ ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಬರಿಬೇಕಾದ್ರೆ ಅವನಿಗೆ ದಿಗಿಲಾಗಬೇಕು ಹೀಗೆ ದಿಗಿಲಾದ್ರೆ ಮಾತ್ರ ಬರಿಯೋಕೆ ಸಾಧ್ಯ. ದಿಗಿಲಿನಲ್ಲಿ ತನ್ನ ದಾರಿಯನ್ನು ಹುಡುಕಬೇಕು, ದಿಗಿಲುಗೊಳ್ಳದ ಕವಿ ಅವನು ಬಹಳ ಸಲೀಸಾಗಿ ಬರೆದುಕೊಂಡು ಹೋಗಿಬಿಡುತ್ತಾನೆ ಯಾರು ಸಲೀಸಾಗಿ ಬರೆದುಕೊಂಡು ಹೋಗಿಬಿಡುತ್ತಾನೋ ಅವನು ಕೆಟ್ಟ ಕವಿಯಾಗ್ತಾನೆ, ಅದನ್ನ ಲಂಕೇಶರು ಒಂದು ಕಡೆ ಹೇಳ್ತಾರೆ ನಿಸ್ಸಾರ ಅಹ್ಮದ್ ರವರ ಹಾಗೂ ಎ.ಕೆ.ರಮಾನುಜನ್ ರವರ ಒಂದೊಂದು ಪದ್ಯವನ್ನು ತೆಗೆದುಕೊಂಡು ಹೋಲಿಕೆ ಮಾಡುತ್ತಾ ನಿಸ್ಸಾರರು ಪ್ರಾಸ ಅನುಪ್ರಾಸ ಎಲ್ಲವನ್ನೂ ಇಟ್ಕೊಂಡು ಉದ್ದಕೆ ಪದ್ಯ ಬರೀತಾರೆ. ಎ.ಕೆ.ರಾಮಾನುಜನ್ ಬಹಳ ಚಿಕ್ಕದಾಗಿ ಹೀಗೆ ಬರೀತಾರೆ

ಶೋಕ ಷಟ್ಪದಿಯ
ನಡುವೆ
ಚಿಗುರು
ಮಾವಿನೆಲೆ ಮೂರು : ಹೀಗೆ ಬರೆದು ಮುಗಿಸಿಬಿಡುತ್ತಾರೆ, ಒಂದು ಕಾವ್ಯಕ್ಕೆ ಇರಬೇಕಾದ ಗುಣ ಏನು ಅಂದರೆ ಒಂದು ಸಂಕ್ಷಿಪ್ತತೆ ,ಹೇಳೋದನ್ನ ಬಹಳ ನಿಖರವಾಗಿ ಹೇಳೋ ನಿಖರತೆ ,ರೂಪಕಗಳ ಮೂಲಕ ಹೇಳಬೇಕು,ಇವೆಲ್ಲವನ್ನೂ ಯಾವ ಕವಿ ಸಮರ್ಥವಾಗಿ ಮಾಡುತ್ತಾನೋ ಅವನು ಉಳಿತಾನೆ , ಇವನ್ನೆಲ್ಲ ಅನುಸರಿಸದಿರುವವರು ಏನು ಆಗ್ತಾರೆ ಅಂದ್ರೆ ಹತ್ತರಲ್ಲಿ ಹನ್ನೊಂದು ಆಗ್ತಾರೆ.

ಒಂದು ಸಂತೋಷದ ಸಂಗತಿಯೆಂದರೆ ಈ "ಭವದ ಅಗುಳಿ"ಯ ಕವಿ ಇದ್ದಾರಲ್ಲ ಈ ಸಂತೋಷ ಇವರು ಹತ್ತರಲ್ಲಿ ಹನ್ನೊಂದನೆ ಕವಿಯಲ್ಲ ,ಇದು ಮೊದಲ ಸಂಕಲನ ಅಂತಾ ಹೇಳೋಕೂ ಆಗಲ್ಲ ಯಾಕೆ ಅಂದ್ರೆ ಆ ಪ್ರಬುದ್ಧತೆ ಇದೆಯಲ್ಲ ಭಾಷೆಯ ಬಳಕೆಯಲ್ಲಿ ಎಲ್ಲಾ ವಿಚಾರಗಳಲ್ಲೂ ಪ್ರೆಶ್ ಆಗಿರುವಂತಹ ಭಾಷೆ ಬಳಸಿದ್ದಾರೆ ಆಮೇಲೆ ಅವರು ನೋಡುವ ನೋಟವಿದೆಯಲ್ಲ ಅವರ ಗ್ರಹಿಕೆಯಲ್ಲಿ ಅದನ್ನು ನಿರೂಪಿಸುವ ಕ್ರಮದಲ್ಲಿ ಈ ಎಲ್ಲದರಲ್ಲೂ ಸಂಪೂರ್ಣವಾಗಿ ಒಂದು ಸ್ಥಿತಿಯನ್ನು ದಾಟಿದಂತಿದೆ. ಇದು ಪ್ರಾರಂಭಿಕ ಹಂತವಲ್ಲ ಮೊದಲ ಸಂಕಲನ ಅಂತಾ ನನಗೆ ಅನಿಸಲೇ ಇಲ್ಲ ಇದನ್ನ ಓದಿದಾಗ ಬಹಳ ಗಂಭೀರವಾದ ಒಬ್ಬ ಕವಿ ಕಾವ್ಯದ ಜೊತೆಗೆ ಮುಖಾ ಮುಖಿಯಾಗ್ತಾ ಇದ್ದಾನೆ, ಕಾವ್ಯದ ಜೊತೆಗೆ ಸಂವಾದ ನಡೆಸ್ತಾ ಇದ್ದಾನೆ ಇದನ್ನು ಗಂಭೀರ ಕೃತಿಯಾಗಿ ಕಟ್ಟಬೇಕೆಂಬ ಮಹತ್ವದ ಆಕಾಂಕ್ಷೆ ಇದೆ ಇದು ಈ ಸಂಕಲನದಲ್ಲಿ ಗೊತ್ತಾಗ್ತಾಯಿದೆ.

ಈ ಮೂವತ್ತರ ಆಜೂ ಬಾಜು ಇರೋ ಕವಿಗಳಿದ್ದಾರಲ್ಲ ಅವರು ಬರೆಯುವ ಪದ್ಯದ ಸ್ವರೂಪ ಏನಾಗಿರುತ್ತೆ ಬಹಳ ಸುಲಭ ಅದನ್ನ ಗುರ್ತಿಸೋದು.ಈ ಸಂಕಲನದ ಮಾತು ಬಿಟ್ಟ ದಿನ,ಬಾ ನೀನು ಮಳೆಯಂತೆ ,ನೆನಪುಗಳೇ ಹಾಗೇ ,ಹೊಸ ಜೀವ, ಈ ಮುಂತಾದ ಈ ತರಹದ ಪದ್ಯಗಳಲ್ಲಿ ಉದಾಹರಣೆಗೆ ; " ಬಾ ನೀನು ಮಳೆಯಂತೆ ,ನನ್ನೆದೆಯ ಮಣ್ಣ ಹಾಸಿನ ಮೇಲೆ "

" ನೀ ಬಾರದ ಈ ಸಂಜೆ ನನ್ನ ಮನದಂತೆ ಖಾಲಿಯಾದ ರಸ್ತೆ ಅಥವಾ ರಸ್ತೆಯಂತೆ ಖಾಲಿಬಿದ್ದ ಮನಸು "

ಸ್ವರೂಪವನ್ನು ತಿಳಿಸುವುದಕ್ಕಾಗಿ ಕೆಲವು ಸಾಲುಗಳನ್ನು ಓದಿದೆ.

ಈ ವಯೋಧರ್ಮ ಹೇಗೆ ಹೇಗೆ ಕೆಲಸ ಮಾಡುತ್ತದೆ ಅನ್ನುವುದಕ್ಕೆ ಈ ಸಂಕಲನದ ಹೊಸ ಜೀವ ಎನ್ನುವ ಪದ್ಯವನ್ನು ಗಮನಿಸಬಹುದು " ಕೊಟ್ಟು ಬಿಡು ನನ್ನ ಕಣ್ಣುಗಳ ತುಂಬಾ ಕನಸುಗಳನ್ನು /ಕಾಯುತ್ತೇನೆ ಎದೆಯೊಳಗಿನ ಉಸಿರಂತೆ" ಎನ್ನುವ ಸಾಲುಗಳಲ್ಲಿ ನನಗೆ ಯಾವ ಸೋಜೀಗವೂ ಇಲ್ಲ ವಯೋಧರ್ಮಕ್ಕೆ ಸಹಜವಾದ ಕಾವ್ಯ ಇಲ್ಲಿದೆ. ಕೇವಲ ವಯೋಧರ್ಮಕ್ಕೆ ಮಾತ್ರ ಒಬ್ಬ ಕವಿ ಸೀಮಿತವಾಗಿರೋದಿಲ್ಲ ಅವನು ಒಂದು ಮನೋಧರ್ಮಕ್ಕೂ ಕೂಡಾ ಸೀಮಿತವಾಗಿರುತ್ತಾನೆ "ಮನೋಧರ್ಮ"ದಿಂದ ಕೂಡಾ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾನೆ ,ಕಲ್ಪನೆಯನ್ನು ಚಾಚುತ್ತಾನೆ ಆದ್ದರಿಂದ ನನಗೆ ಸೋಜಿಗವೆನಿಸುವುದು ಈ "ಭವದ ಅಗುಳಿ " ಏನಿದು ? ಇಲ್ಲಿಯ ಎಲ್ಲ ಪದ್ಯಗಳನ್ನು ನೀವು ಓದುತ್ತಾ ಹೋದರೆ ಒಂದು ತುಡಿತ ಇದೆ ಯಾವುದರ ಕಡೆಗಿದೆ ಅಂದ್ರೆ ಈ ವಯೋಧರ್ಮದ ಮಾತು ಹೇಳಿದೆನಲ್ಲ ಅದನ್ನು ಮೀರಿದ ಇನ್ನೊಂದು ಮೆಟ್ಟಿಲಿದೆಯಲ್ಲ ಮನೋಧರ್ಮದ ಮೆಟ್ಟಿಲು ಅದಕ್ಕೆ ಹತ್ತಿರವಾಗುವಂತಹ "ಆಧ್ಯಾತ್ಮದ ಕಡೆಗೆ " ಇದು ತುಡಿಯುತ್ತದೆ ಈ ವಯಸ್ಸಿನಲ್ಲಿ ಈ ತರುಣ ಮೂವತ್ತರ ಆಜು ಬಾಜಿನ ಈ ಹುಡುಗ ಮನೋಧರ್ಮಕ್ಕೆ ಹೋಗಿದ್ದರ ಹಿನ್ನಲೆ ಏನು ? ಇದು ತೋರಿಕೆಯದ್ದಲ್ಲ ಇವತ್ತು ಬಹಳ ಜನ ತೋರಿಕೆಯ ಕಾವ್ಯ ಬರೆಯುತ್ತಿದ್ದಾರೆ ಇದ್ದಕ್ಕಿದ್ದಂತೆ ಅಕ್ಕ ಅಂದು ಬಿಡ್ತಾರೆ ಇದ್ದಕ್ಕಿದ್ದಂತೆ ಅಲ್ಲಮ ಅಂದು ಬಿಡ್ತಾರೆ ಒಳಗೆ ಸತ್ವ ಇದ್ದರೆ ಅನ್ನಲಿ ಬಿಡಿ ಆದರೆ ಅದಿಲ್ಲದೇ ಇದ್ರೆ ಅದು ಕೇವಲ ತೋರಿಕೆಯ ಕಾವ್ಯ ಆಗುತ್ತದೆ ಆದರೆ ಇಲ್ಲಿ ಅಂತಹ ತೋರಿಕೆ ಇರಬಹುದಾ ಅಂತಾ ನಾನು ಅನುಮಾನವನ್ನಿಟ್ಟುಕೊಂಡೇ ಹುಡುಕಿದೆ ಯಾಕಂದ್ರೆ ಒಂದು ಅನುಮಾನವನ್ನಿಟ್ಟುಕೊಂಡೇ ನಾವು ಕಾವ್ಯವನ್ನು ಓದಬೇಕು ಹಾಗೆ ನೋಡಿದಾಗ ನನಗೆ ಯಾವ ತೋರುಗಾಣಿಕೆಯೂ ಕಾಣಲಿಲ್ಲ ಅಲ್ಲಿಯೂ ಕೂಡಾ ಒಂದು ಸಹಜ ವಾದ ಹುಡುಕಾಟವಿದೆ ಈ ಹುಡುಕಾಟ ಕವಿಗೆ ಯಾಕೆ ಬಂತು ? ಅಂತಾ ನಾನು ಯೋಚನೆ ಮಾಡಿದಾಗ ; ಈ ಮಣ್ಣಿದೆಯಲ್ಲ ಈ ಗದಗ ಅಥವಾ ಇಡೀ ಈ ಉತ್ತರ ಕರ್ನಾಟಕದ ನೆಲ ಇಲ್ಲಿ ಮೂರು ಮುಖ್ಯವಾದ ಗಂಗೋತ್ರಿಗಳಿರುವ ಜಾಗ ಇದು ಮೊದಲನೆಯದ್ದು ಸಂಗೀತ ಗಂಗೆ ಅದು ಪಂಚಾಕ್ಷರಿ ಗವಾಯಿಗಳಿಂದ ಮೊದಲುಗೊಂಡು ಪುಟ್ಟರಾಜ ಗವಾಯಿಗಳಿಂದ ಇಡೀ ಭಾರತದ ತುಂಬಾ ಪಸರಿಸಿದ್ದು ಈ ಹಿನ್ನೆಲೆಯಲ್ಲಿ ತುಂಬಾ ಜನ ಸಂಗೀತ ವಿದ್ವಾಂಸರನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಎರಡನೆಯದು ಸಾಹಿತ್ಯ ಗಂಗೆ ಇಲ್ಲಿ ಪಕ್ಕದ ಲಕ್ಕುಂಡಿಯಲ್ಲಿ ಅಜಗಣ್ಣ ಮುಕ್ತಾಯಕ್ಕ,ಅತ್ತಿಮಬ್ಬೆ , ಕುಮಾರವ್ಯಾಸ ,ಚಾಮರಸ ಹೀಗೆ ಇನ್ನೂ ಅನೇಕರು ಮೂರನೆಯ ಗಂಗೆ ಅದು ಆದ್ಯಾತ್ಮದ ಗಂಗೆ ಇದು ಗದಗ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲಿ ಸಾಧು ಸಂತರು, ಶರಣರು ,ಸೂಫಿಗಳು,ತತ್ವ ಪದಕಾರರು,ಬಂದಿದ್ದಾರೆ ಶಿರಹಟ್ಟಿಯ ಫಕೀರೇಶ್ವರರು ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು ಶಿಶುವಿನಹಾಳ ಷರೀಪರು, ವರವಿಯ ಮೌನೇಶ್ವರರು, ಸೂಫಿ ದಾವಲ್ ಮಲ್ಲಿಕ್ ,ಇನ್ನೂ ಅನೇಕರ ಚಿಂತನೆಯ ಫಲವಾಗಿ ಇಲ್ಲಿನ ಮಣ್ಣ ಕಣ ಕಣದಲ್ಲೂ ಆಧ್ಯಾತ್ಮ ಗಂಗೆ ಹರಿಯುತ್ತಿದೆ.

ಇದೆಲ್ಲದರ ಪರಿಣಾಮ ಬಹುಶಃ ಈ ಕವಿಯ ಮನಸಿಗೆ ಬೀರಿರುವ ಸಾಧ್ಯತೆಯಿದೆ. ಸಂತೋಷ ಅಂಗಡಿಯವರ ಮನಸು ಸಹ ಇಂಥಹ ಆದ್ಯಾತ್ಮದ ಕಡೆಗೆ ತುಡಿಯುತ್ತಿದೆ ಮತ್ತು ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆಂದು ನಾನು ಭಾವಿಸುತ್ತೇನೆ.

ಇಲ್ಲಿ ಭವದ ಅಗುಳಿ ಎನ್ನೋ ಶಬ್ದ ಇದೆಯಲ್ಲ ಇದು ತಮಗೆಲ್ಲ ಗೊತ್ತಿದೆ , " ಭವ" ಕೂಡಾ ನಿಮಗೆ ಗೊತ್ತಿದೆ. ಈ ಸಂಕಲನದ ಮುಖಪುಟದಲ್ಲಿ ಒಂದು ಚಿತ್ರವಿದೆ ಅದು ಏಕತಾರಿಯನ್ನು ನುಡಿಸುತ್ತಿರುವ ಚಿತ್ರ ಏಕತಾರಿ ಅಂದಾಕ್ಷಣ ನಿಮಗೆ ಗೊತ್ತಾಗಿಬಿಡುತ್ತದೆ ಈ ನಾದದ ನಡಿಗೆ ಇದೆಯಲ್ಲ ಅದು ಯಾವ ಕಡೆ ಅಂದರೆ ಅದು ಆಧ್ಯಾತ್ಮದ ಕಡೆಗೆ .

ಇದಕ್ಕೆ ಪುಷ್ಠಿ ನೀಡುವ ಹಾಗೆ ಇವರು ಸುಮ್ಮನೇ ಹೀಗೆ "ಭವದ ಅಗುಳಿ" ಅಂತಾ ಹೆಸರಿಟ್ಟಿದ್ದಾರಾ ..? ಭವದ ಬಾಗಿಲು ಅಂತಾ ಇಡಬಹುದಿತ್ತು ಹಾಗೆ ಇಟ್ಟಿಲ್ಲ "ಭವದ ಅಗುಳಿ" ಅಂತಾ ಇಟ್ಟಿದ್ದಾರೆ ಯಾಕೆ ಇಟ್ಟಿದ್ದಾರೆ ಅದು ? ಭವದ ಬಾಗಿಲು ಅಂದರೆ ಅದು ಮುಚ್ವಿರಲೂ ಬಹುದು ಅಥವಾ ತೆರೆದಿರಲೂ ಬಹುದು ಈ ಅಗುಳಿಯ ನೆನಪು ಯಾವಾಗ ಆಗುತ್ತೆ ಅಂದರೆ ಮುಚ್ಚಿದಾಗ ಆಗುತ್ತೆ ಅಗುಳಿಯನ್ನು ತೆಗೆ ,ಹಾಕು ,ಅಂತೆಲ್ಲ ಹೇಳ್ತಾರೆ ಸಾಮಾನ್ಯವಾಗಿ ಹಳ್ಳಿಗರ ಮನೆಗಳಲ್ಲಿ ರಾತ್ರಿಯಾದಾಗ ಬಾಗಿಲನ್ನು ಮುಚ್ಚಿ ಅಗುಳಿಯನ್ನು ಹಾಕ್ತಾರೆ ಆಗ ಒಳಗೆಲ್ಲ ಕತ್ತಲು ತುಂಬಿರುತ್ತೆ ಕಿಡಕಿ ಬಾಗಿಲುಗಳನ್ನು ಮುಚ್ಚಿದಾಗ ಗಾಳಿಯಾಡೋದಿಲ್ಲ ಇದರಿಂದ ಬಿಡುಗಡೆ ಆಗಬೇಕಾದರೆ ಅಗುಳಿಯನ್ನು ತೆರೆಯಬೇಕು ಯಾವ ಅಗುಳಿಯಂದರೆ " ಭವದ ಅಗುಳಿ " ಈ ಭವ ಎಂಬುದೇ ಕತ್ತಲು ಗಾಳಿಯಿಲ್ಲದ ಪರಿಸ್ಥಿತಿ, ಅನೇಕ ಸಂಕಷ್ಟಗಳು ಅನೇಕ ನೋವುಗಳು,ಈ ಅಗುಳಿಯನ್ನು ತೆಗೆದರೆ ಮಾತ್ರ ಹೊಸಬೆಳಕನ್ನು ಪಡೆಯುತ್ತೇವೆ ಹೊಸ ಗಾಳಿಯನ್ನು ಪಡೆಯುತ್ತೇವೆ ,ಹೊಸ ನೋಟವನ್ನು ಪಡೆಯುತ್ತೇವೆ.

ಇದೊಂದೇ ಅಲ್ಲ ಇದರಿಂದ ಹೊರಗೆ ಬಯಲಿಗೆ ಬರೋದಿದೆಯಲ್ಲ ಬಯಲು ಅಂದರೆ ವಚನಕಾರರು ಬಳಸಿದ ಬಯಲು ಅದಕ್ಕೆ ಯಾವ ಧರ್ಮಗಳೂ ಇಲ್ಲ ಯಾವ ಸಂಕುಚಿತ ನೋಟಗಳಿಲ್ಲ ಇದೆಲ್ಲವನ್ನೂ ದಾಟಿದ್ದು ಇದೆಯಲ್ಲ ಅದು ಬಯಲು ಆ ಬಯಲು ಎಲ್ಲರನ್ನೂ ಅಪ್ಪಿಕೊಳ್ಳುವುದು ಎಲ್ಲರನ್ನೂ ತನ್ನೊಳಗೆ ತೆಗೆದುಕೊಳ್ಳುವುದು ಬಯಲು ಬೆಳಕು ಗಾಳಿಗೆ ತೆರೆದುಕೊಳ್ಳುತ್ತದೆ ಆಕಾಶಕ್ಕೂ ತೆರೆದುಕೊಳ್ಳುತ್ತದೆ ಭವದ ಅಗುಳಿ ಈ ಸಂದರ್ಭದಲ್ಲಿ ಬಹಳ ಮುಖ್ಯವಾದ ಧ್ವನಿ ಇಷ್ಟೆಲ್ಲ ಚಿಂತನೆಯನ್ನು ಸಂತೋಷ ಈ ಸಂಕಲನದಲ್ಲಿ ಮಾಡಿರಬೇಕು ಅಥವಾ ಮಾಡಿದ್ದಾರೆ ಎನ್ನುವುದು ಮುಖ್ಯವಲ್ಲ ಈ ಭವದ ಅಗುಳಿ ಶೀರ್ಷಿಕೆಯನ್ನು ಕೊಡುವುದರ ಮೂಲಕ ಬೇರೆಯವರನ್ನು ಆ ದಿಕ್ಕಿನಲ್ಲಿ ಯೋಚಿಸುವಂತೆ ಮಾಡುತ್ತಾನಲ್ಲ ಅವನು ಸಶಕ್ತ ಕವಿ ಆಗಿರ್ತಾನೆ.

ಈ ಮಣ್ಣಿನ ಸತ್ವ ಈ ತರುಣನಲ್ಲಿ ಇದೆ ಅಂತಾ ನಾನು ಭಾವಿಸ್ಕೋತೀನಿ. ಈ ಸಂಕಲನದ ಶೀರ್ಷಿಕೆ ಸುಮ್ಮನೆ ಕೊಟ್ಟದ್ದಲ್ಲ ಬಹಳ ಸ್ಪಷ್ಟವಾದ ನಿಲುವನ್ನಿಟ್ಟುಕೊಂಡು ಇಟ್ಟಿರುವ ಹೆಸರು ಈ ಕವಿ ಪ್ರಜ್ಞಾಪೂರ್ವಕವಾಗಿ ತನ್ನ ಆಯ್ಕೆಯನ್ನು ಮಾಡ್ಕೋತಾನೆ ತನ್ನ ಚಿಂತನೆಯ ದಿಕ್ಕನ್ನು ಹುಡುಕುತ್ತಾನೆ ಎನ್ನುವುದು ಈ ಸಂಕಲನದಲ್ಲಿ ಬಹಳ ಸ್ಪಷ್ಟವಾಗಿ ಕಾಣುತ್ತದೆ.

ಈ ಸಂಕಲನದಲ್ಲಿ ಒಂದು ಪದ್ಯವಿದೆ ಬಾ ಬಾರೋ ಜೋಗಿ ಅಂತಾ ಈ ಕಾವ್ಯವನ್ನು ಗಮನಿಸಿದಾಗ ಬೇಂದ್ರೆಯವರ ಜೋಗಿ ಪದ್ಯವನೆನಪಾಗುತ್ತದೆ ಅಲ್ಲಿ ಬೇಂದ್ರೆಯವರ ಪದ್ಯದಲ್ಲಿ ಹೇಳತಾರೆ " ಬಂದೆ ಜೋಗಿ ಬಾ,ಬಾರೋ ಜೋಗಿ ಬಾ,ಏನು ಹೊತ್ತು ಬಂದಿ /ನೀನೇ ಹೇಳಿದಾ ನಾಮ ಜಪಿಸುವಾಗ ಬಂತೋ ಸುಗ್ಗಿ ಸಂಧಿ/ತಲೆಯ ಯಾವುದೋ ನಾಡಿಯೊಳಗ ಸುರುವಾತು ಸುಗ್ಗಿ ಸೊಲ್ಲು / ಮುಂದೆ ಕೇಳಿದರ ಅದs ತುಂಬಿತೋ ಮೂಲೆ ಮೂಲೆಯಲ್ಲೂ ...

ಇಲ್ಲಿ ಬೇಂದ್ರೆಯವರು ನಿಗೂಢವಾದ ಗೂಡಾರ್ಥಕ್ಕೆ ಜೋಗಿ ಬೇರೆಕಡೆಯಿಂದ ಪ್ರವೇಶಿಸುತ್ತಾನೆ ಆದರೆ ಭವದ ಅಗುಳಿಯ ಜೋಗಿಯನ್ನು ಕವಿ ನೇರವಾಗಿ ಕರೆಯುತ್ತಾನೆ ಬಾ ಬಾರೋ ಜೋಗಿ ಬಾಯಾರಿದ ಕಡಲ ತಣಿಸೋ ನದಿಯಂತೆ ದಾಹ ದಾವಂತ ನೀಗುವಂತಾ ಪದವೊಂದ ಹಾಡು ಬಾರೋ ಜೋಗಿ

ಮುಂದುವರೆದು ಹೇಳ್ತಾರೆ

ಏಕತಾರಿಯ ತಂತಿಯು ನೆಲದ ನುಡಿಯನೇ ಹಿಡಿದು
ಒಡಮೂಡಿ
ಪಡಿಮೂಡಿ
ಜೀವ ಕಣಕಣವ ಮೀಟುವಂತಾ
ಪದವೊಂದ ಹಾಡು ಬಾರೋ ಜೋಗಿ

ಈ ಪದ್ಯವನ್ನು ಗಮನಿಸಿದಾಗ ಇಲ್ಲಿ ಕವಿ ಬದುಕಿನ ಜೊತೆಗಿದ್ದುಕೊಂಡೇ ನೆಲದ ಜೊತೆಗಿದ್ದುಕೊಂಡೇ ಆದ್ಯಾತ್ಮವನ್ನು ಹುಡುಕುತ್ತಾರೆ ಇದು ಬಹಳ ಮುಖ್ಯ ಇಲ್ಲಿ ಕವಿಗೆ ನೆಲವನ್ನು ಬಿಟ್ಟು ಆಧ್ಯಾತ್ಮವಿಲ್ಲ . ಒಂಟಿಗೊರಳ ಹಾಡು ಎನ್ನುವ ಇನ್ನೊಂದು ಪದ್ಯ ಗಮನಿಸಿ ಇಲ್ಲಿಯೂ ಕೂಡಾ " ಮಣ್ಣು ದಯಪಾಲಿಸುವ ಅನ್ನವನ್ನಷ್ಟೇ ಬೇಡುತ್ತೇನೆ " ಎನ್ನುವ ಸಾಲು ಹಾಗೂ ಪ್ರಾರ್ಥನೆ ಎನ್ನುವ ಕಿರು ಪದ್ಯದಲ್ಲಿ ಕೂಡಾ ಹೀಗೆ ಇದೆ

"ಓ ದೇವರೆ ಕರುಣಿಸು
ನೆಲದ ತುಂಬಾ ಬೆಳದಿಂಗಳ ಹಾಸು
ಜೀವ ಕಾರುಣ್ಯದ ಚುಕ್ಕಿಗಳ ಕೂಡಿಸಿ

ರಂಗೋಲಿ ಬರೆಯುತ್ತೇನೆ" ಎನ್ನುವ ಸರಳವಾದರೂ ಕೂಡಾ ಹೊಸ ಭಾಷೆಯನ್ನು ತನ್ನ ಕಾವ್ಯಕ್ಕೆ ತಂದುಕೊಂಡ ಪದ್ಯ ಇದು ಎಂದು ನನಗನ್ನಿಸುತ್ತದೆ . ಈ ಹೊಸ ಕವಿ ಹೇಗೆ ಭಾಷೆಯನ್ನು ಹೊಸರೀತಿಯಲ್ಲಿ ಬಳಸುತ್ತಾನೆಂಬುದಕ್ಕೆ ಇನ್ನೊಂದು ಉದಾಹರಣೆ ಗಮನಿಸಿ " ತನ್ನ ಮುಪ್ಪನ್ನು ಹೆಗಲ ಮೇಲೆ ಹೊತ್ತು

ಅಲೆಯುತಿರುವ ಕಾಲನ ಗೊಡವೆಯೇ ಬೇಡ"

ದಟ್ಟ ಹೂಗಳು ತಮ್ಮ ಚೆಲುವಿನೊಳಗಿನ ದುಃಖವನ್ನು ನುಂಗಿ ನಿಂತಿವೆ.

ಇವೆಲ್ಲ ಕವಿಯ ಚಿಂತನೆಗೆ ಧಕ್ಕೆ ತರುವ ಪದ್ಯಗಳಲ್ಲ ಬದಲಾಗಿ ಚಿಂತನೆಯನ್ನ ಮುನ್ನಡೆಸುವ ಪದ್ಯಗಳು. ಒಬ್ಬ ಕವಿ ಗ್ರಹಿಸಬಹುದಾಧ್ದಕ್ಕೆ ಉದಾಹರಣೆ ಎಂದರೆ ಬಾರಿಗೆ ಬಂದ ಪದ್ಯ ಎನ್ನುವ ಕವಿತೆ ಈ ಪದ್ಯದಲ್ಲಿ ನಿರೂಪಿಸುವ ಕ್ರಮವಿದೆಯಲ್ಲ ಅದು ಚನ್ನಾಗಿದೆ. ಜೊತೆಗೆ ಸಂಕಲನದುದ್ದಕ್ಕೂ ನೆಲವನ್ನು ಬಿಟ್ಟು ಇಲ್ಲಿ ಕಾವ್ಯ ಇಲ್ಲ ನೆಲದ ಜೊತೆಗೇ ನೆಲದ ನುಡಿಯ ಜೊತೆಗೆ ಇರುತ್ತೆ ,ನೆಲದ ಮನುಷ್ಯರ ಜೊತೆ ನೆಲದ ಜೀವಿಗಳ ಜೊತೆ ಇರುತ್ತದೆ ಇದು ಯಾವ ಸಾಹಿತಿ/ಕವಿಗಾದರೂ ಬಹು ಮುಖ್ಯವಾದ್ದೆಂದು ನಾನು ಭಾವಿಸುವೆ. ನೆಲದ ಬಗ್ಗೆ ಹೇಳುವಾಗ ಸ್ವಪ್ನ ಚೆಲುವೆ ಎಂಬ ಪದ್ಯದಲ್ಲಿ ಹೇಳ್ತಾರೆ

ಸ್ವಪ್ನದಲ್ಲೂ ಕೂಡಾ " ಕೇಳುವುದಾದರೆ ಕೇಳು

ಬದುಕಿನ ಬಗ್ಗೆ " ಎಂಬ ಸಾಲು ಮುಖ್ಯವಾದದ್ದು. ಯಾವುದೇ ಕವಿ ಬದುಕಿನ ಆಚೆಗೆ ಹೋಗಬಾರದು ಇಲ್ಲಿಯ ತುಡಿತ ಆಧ್ಯಾತ್ಮದ ಕಡೆಗೆ ಇದ್ದರೂ ಅದು ಬದುಕನ್ನು ಇಡಿಯಾಗಿ ತಬ್ಬಿಕೊಂಡೇ ಆಧ್ಯಾತ್ಮವನ್ನು ಧ್ಯಾನಿಸುತ್ತದೆ.

ಈ ಸಂಕಲನದಲ್ಲಿ "ವ್ಯಕ್ತಮಧ್ಯ" ಇದೆಯಲ್ಲ ಅದು ಬಹಳ ಮುಖ್ಯವಾದದ್ದು ಇಲ್ಲಿ ವ್ಯಕ್ತದ ಆಚೆಗೆ ಬಂದು ಈಚೆಗೆ ನೋಡುವುದು ಸರಿಯೇ ಆದರೂ ವ್ಯಕ್ತಮಧ್ಯದ ಬದುಕಿದೆಯಲ್ಲ ಇದು ಬಹಳ ಮುಖ್ಯವಾದದ್ದು ಇಂಥದ್ದನ್ನ ಹಿಡಿಯೋದಕ್ಕಾಗಿ ಒಬ್ಬ ತರುಣ ಕವಿ ಪ್ರಯತ್ನ ಮಾಡೋದಿದೆಯಲ್ಲ ಅದು ಬಹಳ ದೊಡ್ಡದು ಇಲ್ಲಿ ಆ ದೋಷವಿದೆ ಈ ದೋಷವಿದೆ ಅಂತಾ ಹೇಳಲಿಕ್ಕೆ ಅವಕಾಶವಿರಬಹುದು ಇಲ್ಲ ಅಂತೇನು ಹೇಳಲ್ಲ ಆದರೆ ಅಂತಾ ದೋಷಗಳ ಮಧ್ಯ ಕೂಡಾ ಕವಿಯೊಬ್ಬನ ಪ್ರಯತ್ನ ಚಿಂತನೆ ಉನ್ನತ ಮಟ್ಟದಲ್ಲಿ ಹೋಗುವಾಗ ನಾವು ಅಂತಹ ಕವಿಯನ್ನ ಸ್ವಾಗತಿಸಬೇಕು ಸಂತೋಷನನ್ನು ನಾವೆಲ್ಲ ಸೇರಿ ಸ್ವಾಗತಿಸೋಣ ನಮಸ್ಕಾರ.

ಜಿ.ಪಿ.ಬಸವರಾಜು
ಕವಿ ವಿಮರ್ಶಕರು ಮೈಸೂರು

 

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...