ಭ್ರಮೆ ಕಳಚುವ ವಿಡಂಬನೆಗಳು: ಸುಮಂಗಲ


'ರಾಜಕೀಯ ವಿಡಂಬನೆಗಳ ಇನ್ನೊಂದು ಪಾತ್ರವೆಂದರೆ ಜನಸಾಮಾನ್ಯರಿಗೆ ರಾಜಕೀಯದ ಹಾಗೂ ಸುತ್ತಲಿನ ಸಮಸ್ಯೆಗಳ ಕುರಿತು ವ್ಯಂಗ್ಯದ ಕಠಾರಿಯಿಂದ ತಿವಿಯುತ್ತಲೇ ಅರಿವನ್ನು ಮೂಡಿಸುವುದು ಕೂಡ' ಎನ್ನುತ್ತಾರೆ ಕತೆಗಾರ್ತಿ ಸುಮಂಗಲಾ ಅವರು ಚಂದ್ರಪ್ರಭ ಕಠಾರಿ ಅವರ ಕಠಾರಿ ಅಂಚಿನ ನಡಿಗೆ ಅಂಕಣ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ. 

ಸದ್ಯದ ರಾಜಕೀಯ-ಸಾಮಾಜಿಕ ಸ್ಥಿತಿಗತಿಯಲ್ಲಿ, ಎಲ್ಲವೂ ಬೈನರಿ ಮಾತ್ರವಾಗಿರುವ ಈ ಕಾಲಘಟ್ಟದಲ್ಲಿ ಪ್ರಭುತ್ವದ ನಡೆಯ ಕುರಿತು ದನಿಯೆತ್ತುವುದೇ ಅಪರಾಧ ಎಂಬಂತಾಗಿದೆ. ಯಾವುದೇ ಕ್ಷಣದಲ್ಲಿಯಾದರೂ ದೇಶದ್ರೋಹಿ ಪಟ್ಟ ಕಟ್ಟಬಹುದು. ವಾಟ್ಸಾಪ್‌ ವಿಶ್ವವಿದ್ಯಾಲಯದವರ ಸಂದೇಶಗಳು ಎಲ್ಲ ವಯೋಮಾನದವರನ್ನು ಹತ್ತು ಹಲವು ಬಗೆಯ ಭ್ರಮೆಗಳಲ್ಲಿ ಕಟ್ಟಿಹಾಕಿವೆ. ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಮಾಡುವ ವಸ್ತುನಿಷ್ಟ ವಿಶ್ಲೇಷಣೆಗಳಿಗೆ, ಅರ್ಥಪೂರ್ಣ ಚರ್ಚೆಗಳಿಗೆ ಆಸ್ಪದ ಕಡಿಮೆಯಾಗಿದೆ. ಸೃಜನಶೀಲ ಮನಸ್ಸುಗಳು ಕೂಡ ಭಟ್ಟಂಗಿಗಳಾಗುತ್ತಿರುವುದನ್ನು ಕಂಡಾಗ ತೀವ್ರ ಕಸಿವಿಸಿಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ರಾಜಕೀಯ ಎಚ್ಚರವನ್ನು ಮೂಡಿಸುವ ಜೊತೆಗೆ ಅಧಿಕಾರಸ್ಥರನ್ನು, ಮುಖ್ಯವಾಗಿ ರಾಜಕೀಯ ನಾಯಕರನ್ನು ಮೊನಚಾಗಿ ಪ್ರಶ್ನಿಸುವ ರಾಜಕೀಯ ವಿಡಂಬನೆಗಳಿಗೆ ತುಂಬ ಮಹತ್ವವಿದೆ. ಚಂದ್ರಪ್ರಭ ಕಠಾರಿಯವರ ವ್ಯಂಗ್ಯಬರಹಗಳು ನಮ್ಮೊಳಗಿನ ಅಸಮಾಧಾನ, ಸಿಟ್ಟನ್ನು ಪ್ರತಿನಿಧಿಸುತ್ತವೆ. ಅವರ ಬರಹಗಳ ಮೊನಚು, ಹರಿತವನ್ನು ಗಮನಿಸಿದಾಗ ಕಠಾರಿಯವರ ಅಡ್ಡಹೆಸರಿಗೆ ಅನುಗುಣವಾಗಿಯೇ ಅವರ ಪೆನ್ನು ಕೆಲಸ ಮಾಡಿದೆ ಎಂದು ಯಾರಿಗಾದರೂ ಅನ್ನಿಸುತ್ತದೆ.  

ಕಠಾರಿಯವರು “ವಿಶ್ವಗುರುವಿನ ಅಸಲೀಯತ್ತು” ವಿಡಂಬನೆಯಲ್ಲಿ ಬೆಳಗಿನ ಸಂಭಾವಿತ ಸಾಮ್ರಾಟನ ಹಗಲಿನ ಚಿತ್ರವನ್ನು ವಿದೇಶೀ ಪತ್ರಕರ್ತೆಯೊಬ್ಬಳ ಕಣ್ಣಿನಲ್ಲಿ ಕಾಣಿಸುತ್ತಲೇ ಕೊನೆಯಲ್ಲಿ ರಾತ್ರಿ ಕಂಡ ಸಾಮ್ರಾಟನ ಚಿತ್ರವನ್ನು ಕಾಣಿಸುತ್ತಾರೆ. ರಾತ್ರಿ ಖಜಾನೆ ಕಾಯುತ್ತಿದ್ದ ಸಾಮ್ರಾಟ ಹಿಂದಿನ ಬಾಗಿಲಿನಿಂದ ಖಜಾನೆಯನ್ನು ಕದ್ದೊಯ್ಯುವುದು ತಿಳಿದಿದ್ದರೂ ಕಣ್ಣುಮುಚ್ಚಿಕೊಂಡು ಮಹಾನ್‌ ಚೌಕೀದಾರನ ಫೋಸು ಕೊಡುತ್ತಾನೆ. 

ಗೋದಿ ಮೀಡಿಯಾ ಅಥವಾ ಮಡಿಲು ಮಾಧ್ಯಮದ ಪತ್ರಕರ್ತ-ಪತ್ರಕರ್ತೆಯರ ಗೋಸುಂಬೆ ಅವತಾರವನ್ನು ʼತುತ್ತೂರಿ ಕುಮಾರಿ, ಬಕೆಟ್ ಸ್ವಾಮಿ ಮತ್ತು ರದ್ದಾದ ಪದಗಳುʼ ಲೇಖನದಲ್ಲಿ ಪದರಪದರವಾಗಿ ತೆರೆದಿಟ್ಟಿದ್ದಾರೆ. ವಿಶ್ವಗುರುವಿನ ಜುಟ್ಟು ಮಾಧವ ಕೃಪಾಕುಟೀರದ ಪೂಜಾರಿಯ ಕೈಯಲ್ಲಿರುವುದನ್ನು ವ್ಯಂಗ್ಯವಾಗಿ ಚುಚ್ಚಿದ್ದಾರೆ. ಅಲ್ಲಲ್ಲಿ ತೀರಾ ವಾಚ್ಯವಾಯಿತೇನೋ, ಭಾಷಾ ಬಳಕೆಯ ಕುರಿತು ಇನ್ನಷ್ಟು ಗಮನ ಕೊಡಬೇಕಿತ್ತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ನನ್ನ ಮಟ್ಟಿಗೆ ವಿಡಂಬನೆಯಲ್ಲಿಯೂ ಕಥೆಕಟ್ಟುವ ಕುಸುರಿಕಲೆ ಕೆಲಸ ಮಾಡುತ್ತದೆ. ಕೆಲವೊಮ್ಮೆ ಭಾಷಾ ಬಳಕೆಯಲ್ಲಿ ಎಚ್ಚರವಹಿಸಬೇಕಾಗುತ್ತದೆ. ʼತುತ್ತೂರಿ ಕುಮಾರಿ, ಬಕೆಟ್ ಸ್ವಾಮಿ ಮತ್ತು ರದ್ದಾದ ಪದಗಳುʼ ಲೇಖನವನ್ನು ಓದಿದಾಗ ಕೆಲವೆಡೆಗಳಲ್ಲಿ ಇಂತಹ ಎಚ್ಚರ ಅಗತ್ಯವಿತ್ತು ಎನ್ನಿಸುತ್ತದೆ.  

ರಾಜಕೀಯ ವಿಡಂಬನೆಗಳ ಇನ್ನೊಂದು ಪಾತ್ರವೆಂದರೆ ಜನಸಾಮಾನ್ಯರಿಗೆ ರಾಜಕೀಯದ ಹಾಗೂ ಸುತ್ತಲಿನ ಸಮಸ್ಯೆಗಳ ಕುರಿತು ವ್ಯಂಗ್ಯದ ಕಠಾರಿಯಿಂದ ತಿವಿಯುತ್ತಲೇ ಅರಿವನ್ನು ಮೂಡಿಸುವುದು ಕೂಡ. ಇದಕ್ಕೆ ಸ್ವಲ್ಪ ಧೈರ್ಯ ಕೂಡ ಬೇಕಾಗುತ್ತದೆ. ಕಠಾರಿಯವರು ತಮ್ಮ ಪೆನ್ನಿಗೆ ಆ ಧೈರ್ಯವಿದೆ ಎಂಬುದನ್ನು ಈ ವಿಡಂಬನೆಗಳ ಮೂಲಕ ಸಾಬೀತುಪಡಿಸಿದ್ದಾರೆ.

ಸುಮಂಗಲಾ
ಕತೆಗಾರ್ತಿ

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...