ಈ ಪುಸ್ತಕ ಇರಬೇಕಾದದ್ದು ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ


`ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ, ಮನದಲ್ಲಿ ಎಂಬ ಆಸೆಯಿಂದಾಗಿ ಹರಿಯುವ ಸ್ಥಿತಿಯಲ್ಲಿದ್ದ ಆ ಹಾಳೆಗಳನ್ನೇ ಚೀಲದಲ್ಲಿ ಹಾಕಿಕೊಂಡು ನಮ್ಮೊಟ್ಟಿಗೆ ಬೆಂಗಳೂರಿಗೆ ಕರೆತಂದಾಗಿತ್ತು. ಬೆಂಗಳೂರಿಗೆ ಬಂದು ಒಂದಷ್ಟು ವರ್ಷಗಳಾದ ಮೇಲೆ ಈಗ "ಅರಳಗೋಡು" ಕಾದಂಬರಿಯಾಗಿ ಹೊರಬಂದಿದೆ ಎನ್ನುತ್ತಾರೆ' ಚಂದ್ರಮೋಹನ್ & ಸೌಮ್ಯ ಕಾಶಿ. ಅವರು ಕೃಷ್ಣಭಟ್ ಕಾಶಿ ಅವರ "ಅರಳಗೋಡು" ಕಾದಂಬರಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ನಾವು 10-15 ವರ್ಷದವರಿದ್ದಾಗ ಸಾಗರದ ನಮ್ಮ ಮನೆಯ ಕಪಾಟಿನಲ್ಲಿ ಅಪ್ಪ ಅಮ್ಮನ ಮದುವೆ ಆಲ್‌ಬಂ ಹುಡುಕುವಾಗಲೋ ಅಥವಾ ಇನ್ನೇನನ್ನೋ ಶೋಧಿಸುವಾಗಲೋ ಸಿಕ್ಕ ಒಂದು ನೀಲಿ ಚೀಲ. ಕುತೂಹಲದಿಂದ ಅದನ್ನು ತೆಗೆದರೆ ವರ್ಷಗಟ್ಟಲೇ ಒಂದೇ ಜಾಗದಲ್ಲಿ ಕುಳಿತು ಬದಿಯೆಲ್ಲಾ ಹರಿದು, ಅಕ್ಷರಗಳು ಅಲ್ಲಲ್ಲಿ ಮಾಸಿದಂತಾದ ರಾಶಿ ರಾಶಿ ಹಾಳೆಗಳು, ಅಪ್ಪನ ಸ್ಟೈಲಿಶ್ ಅಕ್ಷರ. ಆಗ ಹೇ! ಅಪ್ಪ ಏನೋ ಬರೆದಿದ್ದಾರೆ" ಎಂಬ ಕುತೂಹಲದಲ್ಲಿ ತೆಗೆದು ನೋಡಿದರೆ ಮೊದಲ ಪುಟದಲ್ಲಿ ಶುರುವಾಗಿದ್ದೇ ನಿಜ ಹೇಳಲೇ? ನಾನು ಕಾದಂಬರಿಯೊಂದನ್ನು ಬರೆಯಬೇಕೆಂದು ಎಂದೂ ಬಯಸಿದವನಲ್ಲ. ಎಂದು. ಇದನ್ನು ಓದಿದ್ದೇ ಕುತೂಹಲ ಇನ್ನೂ ಹೆಚ್ಚಾಗಿ ಅಮ್ಮನನ್ನ ಹೋಗಿ ಕೇಳಿದರೆ ಅಮ್ಮ ಹೇಳಿದ್ದು ಅದು ಅಪ್ಪ ಬರೆದ ಕಾದಂಬರಿ ಎಂದು. ಅಲ್ಲಿಯವರೆಗೂ ಅಪ್ಪನಿಗೆ ಬರೆಯುವ ಅಭ್ಯಾಸವಿತ್ತು ಅನ್ನೋದು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕವನ ಒಂದನ್ನು ನೋಡಿ ಗೊತ್ತಿತ್ತೇ ಹೊರತು ಅಪ್ಪ ಕಾದಂಬರಿಯನ್ನು ಬರೆದಿರಬಹುದು ಎಂಬ ಸಣ್ಣ ಸುಳಿವೂ ನಮಗಿರಲಿಲ್ಲ.

ಇದು 80ರ ದಶಕದಲ್ಲಿ 20ರ ಆಸುಪಾಸಿನ ಅಪ್ಪ ಕಾಡಿನ ಮಧ್ಯದಲ್ಲಿ ಇರುವ ಬಣ್ಣುಮನೆ ಅನ್ನೋ ಸಣ್ಣ ಹಳ್ಳಿಯಲ್ಲಿ ಅದೆಷ್ಟೋ ರಾತ್ರಿ ಚಿಮಣಿ ದೀಪದ ಅಡಿಯಲ್ಲಿ ಕುಳಿತು ಬರೆದ ಕತೆ. ಒಮ್ಮೊಮ್ಮೆ ಹಾಳೆಗಳ ಮೇಲೆಲ್ಲ ಚೆಲ್ಲಿ ಹೋಗುವಂತಹಾ ಇಂಕು, ಇನ್ನೊಮ್ಮೆ ಹತ್ತದ ಪೆನ್ನನ್ನು ಇಟ್ಟುಕೊಂಡೇ ತಾಳ್ಮೆಯಿಂದ ಪೋಣಿಸಿದ ಕತೆಯಿದು. ಅಪ್ಪ ಏನೋ ಈ ಕಾದಂಬರಿಯನ್ನು, ಜೊತೆಗೆ ಇನ್ನೊಂದಿಷ್ಟು ಸಣ್ಣ ಕತೆಗಳನ್ನು ಬರೆದು ತಮ್ಮ ಮಣ್ಣಿನ ಮನೆಯ ಮರದ ಕಪಾಟು ಸೇರಿಸಿ ಇಟ್ಟರು. ಆಮೇಲೆ ಮದುವೆಯಾದ ಹೊಸತರಲ್ಲಿ ಅಮ್ಮ ಆ ಕಪಾಟು ತೆಗೆದಾಗ ಸಿಕ್ಕಿದ್ದು ಈ ಕಾದಂಬರಿ ಮಾತ್ರ. ಮಿಕ್ಕ ಸಣ್ಣ ಕತೆಗಳಿದ್ದ ಹಾಳೆಗಳನ್ನೆಲ್ಲ ಒರಲೆ ತಿಂದು ಹಾಕಿತ್ತು. ಇದೊಂದಾದರು ಉಳಿಯಲಿ ಎಂದು ಅಮ್ಮ ಆ ದಿನವೇ ಈ ಹಾಳೆಗಳನ್ನೆಲ್ಲ ತನ್ನ ಸುರ್ಪತ್ತಿಗೆಗೆ ತೆಗೆದುಕೊಂಡಿದ್ದಳು. ನಂತರ ಅದು ಅಪ್ಪ ಅಮ್ಮನ ಜೊತೆ ಅದೆಷ್ಟೋ ಬಾಡಿಗೆ ಮನೆಯ ಸಣ್ಣ ಕಪಾಟು ಸೇರಿ, ಆಮೇಲೆ ಸ್ವಂತ ಮನೆಯಲ್ಲಿ ಬೆಚ್ಚನೆ ಕುಳಿತಿದ್ದಾಗಲೇ ನಮ್ಮ ಕೈಗೆ ಸಿಕ್ಕಿದ್ದು, ಅಮ್ಮ ಏನೋ ಇಷ್ಟು ವರ್ಷ ಆ ಹಾಳೆಗಳನ್ನು ಜೋಪಾನ ಮಾಡಿದ್ದಳು. ಆದರೆ ಈಗಲಾದರೂ ಅದು ಮುದ್ರಣವಾಗಬೇಕು. ಮುದ್ರಣವಾಗೋದಕ್ಕೂ ಮುಂಚೆ ಜೀರ್ಣಾವಸ್ಥೆಗೆ ಹೋದ ಆ ಹಾಳೆಗಳಲ್ಲಿನ ಅಕ್ಷರಗಳನ್ನು ಅಪ್ಪನೇ ಮತ್ತೆ ಜೋಡಿಸಬೇಕು ಎಂದು ನಾವೆಷ್ಟೇ ಹೇಳಿದರೂ ಅಪ್ಪ ಅದನ್ನು ಒಪ್ಪದೇ ಏ! ನಾನು ಹುಡುಗಾಟಿಕೆ ವಯಸ್ಸಲ್ಲಿ ಬರೆದಿದ್ದು ಅದು. ಇವತ್ತು ಓದಿದರೆ ಅದರಲ್ಲಿ ಎಷ್ಟೋ ವಿಷಯಗಳು ಬೇರೆನೇ ತರ ಹೇಳಿದ್ರೆ ಚೆನ್ನಾಗಿರೋದು ಅನ್ನಿಸುತ್ತೆ. ನಾನು ಮತ್ತೆ ಬರೆಯೋದಿಲ್ಲ" ಎಂದು ಅಪ್ಪ ಅವರ ನಿರ್ಧಾರ ಹೇಳಿದ ಮೇಲೆ ಮತ್ತೆ ಆ ಹಾಳೆಗಳು ಬೆಚ್ಚನೆ ಹೋಗಿ ಕಪಾಟಿನಲ್ಲಿ ಕುಳಿತಿತ್ತು.

ಆದರೆ ಮಕ್ಕಳಾಗಿ ನಮಗೆ ಅಪ್ಪ ಬರೆದ ಕಾದಂಬರಿ ಕೇವಲ ನಮ್ಮ ಮನೆಯ ಕಪಾಟಿನಲ್ಲಿ ಇರುವುದು ಸರಿಕಾಣಲಿಲ್ಲ. ಅದು ಇರಬೇಕಾದ್ದು ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ, ಮನದಲ್ಲಿ ಎಂಬ ಆಸೆಯಿಂದಾಗಿ ಹರಿಯುವ ಸ್ಥಿತಿಯಲ್ಲಿದ್ದ ಆ ಹಾಳೆಗಳನ್ನೇ ಚೀಲದಲ್ಲಿ ಹಾಕಿಕೊಂಡು ನಮ್ಮೊಟ್ಟಿಗೆ ಬೆಂಗಳೂರಿಗೆ ಕರೆತಂದಾಗಿತ್ತು. ಬೆಂಗಳೂರಿಗೆ ಬಂದು ಒಂದಷ್ಟು ವರ್ಷಗಳಾದ ಮೇಲೆ ಈಗ "ಅರಳಗೋಡು" ಕಾದಂಬರಿಯಾಗಿ ಹೊರಬಂದಿದೆ. ಸುಮಾರು 40 ವರ್ಷಗಳ ಹಿಂದೆ ಚಿಮಣಿ ದೀಪದ ಅಡಿಯಲ್ಲಿ ಅಪ್ಪ ಬರೆದ ಈ ಕಾದಂಬರಿ ನಮ್ಮನ್ನು ಆಗಿನ ಕಾಲಘಟ್ಟಕ್ಕೆ ಕೊಂಡೊಯ್ಯುವುದಷ್ಟೇ ಅಲ್ಲದೆ ಈಗಿನ ಕಾಲಕ್ಕೂ ಪ್ರಸ್ತುತವೆನಿಸುತ್ತದೆ.

ನಾವು ಅಣ್ಣ-ತಂಗಿಯಿಂದ ಅಪ್ಪನಿಗೊಂದು ಪುಟಾಣಿ ಉಡುಗೊರೆ ಕೊಡಬೇಕು ಎಂದು ಯೋಚಿಸಿದಾಗ, ಅವರು ಬರೆದಿಟ್ಟ ಹಾಳೆಗಳನ್ನು ಕಾದಂಬರಿಯ ರೂಪದಲ್ಲಿ ಹೊರತರೋದಕ್ಕೆ ಒಪ್ಪಿದ ರತೀಶಣ್ಣನಿಗೆ ಹಾಗು ಹರಿವು ಬುಕ್ಸ್ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು.

- ಚಂದ್ರಮೋಹನ್ & ಸೌಮ್ಯ ಕಾಶಿ (ಮಗ & ಮಗಳು)

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...