ಗುಂಟರ್ ಗ್ರಾಸ್‍ನ “ದಿ ಟಿನ್ ಡ್ರಮ್” ಮತ್ತು ಪಿಕಾರೋ ವ್ಯಕ್ತಿತ್ವ


‘ಶಿಲ್ಪಿಯಾಗಿ ಮೊದಲಿಗೆ ತನ್ನ ಬದುಕಿನ ದಾರಿಯನ್ನು ಕಂಡುಕೊಂಡ ಗುಂಟರ್ 1950ರವರೆಗೆ ಶಿಲ್ಪಿಯಾಗಿ, ಕವಿಯಾಗಿ, ನಾಟಕಕಾರನಾಗಿ, ಗ್ರಾಫಿಕ್ ಡಿಸೈನರ್ ಆಗಿ ಬೆಳೆದ. 1956ರಲ್ಲಿ ಪ್ಯಾರಿಸ್‍ಗೆ ಹೋದ. ಆಗಲೇ ತನ್ನ ಬಹು ಪ್ರಸಿದ್ಧ  ಕೃತಿ“The Tin drum” ಬರೆದು 1959ರಲ್ಲಿ ಪ್ರಕಟಿಸಿದ. ಈ ಕೃತಿ ಆತನನ್ನು ರಾತ್ರೋರಾತ್ರಿ ಪ್ರಸಿದ್ಧಿಯ ಉತ್ತುಂಗಕ್ಕೇರಿಸಿತು’ ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. “The Tin drum” ಕೃತಿಯ ಕುರಿತ ವಿಶ್ಲೇಷಣೆ ಇಲ್ಲಿದೆ. 

“I was born in Danzig in 1927. At fourteen I was , Hitler youth, at sixteen a soldier, and at seventeen an American prisoner of war. These dates meant  a great deal in an era that purposefully slaughtered one year’s crop of young men, branded the next year’s crop with guilt and spared another… The man who is speaking to you, then, is neither a proven antifacist nor an ex- national Socialist, but rather the accident product of a crop of young men who  were either born too early or infected too late”.  

ಈ ಮಾತು ಓದುತ್ತಾ  ಒಂದೋ ಖೇದ, ಇಲ್ಲ ಮರುಕ ಉಂಟಾಗುತ್ತದೆ. ಮನುಕುಲದ ಇತಿಹಾಸ ಸದಾ ಒಂದಿಲ್ಲೊಂದು ವಿಪತ್ತುಗಳಿಗೆ ತೆರೆದುಕೊಂಡೇ ಇರುವುದು. ಇಂದು ಜಗತ್ತು ಜೈವಿಕ ಯುದ್ಧದ ದಾಳಿಯಿಂದ ತತ್ತರಿಸುತ್ತಿದೆ. ಅದರೊಂದಿಗೆ ನಿತ್ಯ ಜಗತ್ತಿನ ಒಂದಿಲ್ಲೊಂದು ಕಡೆಯಲ್ಲಿ ಕೋಮು, ಧರ್ಮ, ಪಂಥ ಇಂತಹ ಮೌಢ್ಯಗಳ ಹೊತ್ತ ಮನಸ್ಸುಗಳು ಸೃಷ್ಟಿಸುತ್ತಿರುವ ಅರಾಜಕತೆ  ತಲ್ಲಣಗಳನ್ನೆ ಮನುಕುಲಕ್ಕೆ ಬಡಿಸುತ್ತಿದೆ. ನಾವೆಲ್ಲ ಇಂತಹ ಅಸಹಜ, ಅಸಂಬದ್ಧ, ಅಸಂಗತ ಸಾಮಾಜಿಕ, ರಾಜಕೀಯ ಜಗತ್ತಿನ ಶಿಶುಗಳು. ಹಾಗಾಗಿಯೇ ಹಿಂದೆಲ್ಲ ವಿರಳವಾಗಿದ್ದ ಅಸಂಗತ ಅತೃಪ್ತ ವ್ಯಕ್ತಿತ್ವಗಳು ಇಂದು ಆಧುನಿಕತೆಯ ಫಲಶ್ರುತಿಯಂತೆ ಬಹುಸಂಖ್ಯೆಯಲ್ಲಿ ಕಾಣಸಿಗುತ್ತವೆ. ಇದು ಕೇವಲ ಇಂದಿನ ಮಾತಲ್ಲ. ಮೂವತ್ತು, ನಲವತ್ತು ಐವತ್ತರ ದಶಕದಲ್ಲಿ ಈ ಜಗತ್ತನ್ನು ಜಾಗತಿಕ ಯುದ್ಧಗಳು ಎಂತಹ ದುರವಸ್ಥೆಗೆ ಈಡುಮಾಡಿದ್ದವು ಎಂಬುದನ್ನು ನೆನೆದುಕೊಂಡರೆ ಸಾಮಾನ್ಯರ ಬದುಕನ್ನು ಈ ಧನದಾಹ, ರಾಜ್ಯದಾಹ, ಅಧಿಕಾರದ ದಾಹಗಳು ಬದಲಿಸಿಬಿಡುವ ವಿಚಿತ್ರ ರಾಜಕೀಯ ಸಂದರ್ಭದ ವಿಪ್ಲವಗಳು ಹೇಗಿರುತ್ತವೆ ಎಂಬುದಕ್ಕೆ ಈ ಮೇಲಿನ ಮಾತು ಸಾಕು. ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಗಳಿಸಿದ ‘ಗುಂಟರ್ ಗ್ರಾಸ್’ ಎಂಬ ಜರ್ಮನ್ ಬರಹಗಾರ ಒಮ್ಮೆ ಇಸ್ರೇಲಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಮಾತನ್ನು ನುಡಿದಿದ್ದನಂತೆ. 

ಇದಕ್ಕೆ ಕಾರಣಗಳಿದ್ದವು. ಪಾಲಿಸ್- ಜರ್ಮನ್ ದಂಪತಿಗಳಿಗೆ 1927ರಲ್ಲಿ ಜನಿಸಿದ ಗುಂಟರ್ ತನ್ನ ಬಾಲ್ಯದ ದಿನಗಳನ್ನು ಫ್ರೀ ಸ್ಟೇಟ್ ಡ್ಯಾನಜಿಗ್‍ನಲ್ಲಿ ಆನಂದದಿಂದ ಕಳೆದ. ಗುಂಟರ್ ಅದನ್ನು ತನ್ನ ಕೃತಿಗಳಲ್ಲಿ ನಿರೂಪಿಸುತ್ತಾನೆ. ಆನಂತರ ಈ  ನಗರವನ್ನು ಹಿಟ್ಲರ್‍ನ ನಾಝೀಗಳು ವಶಪಡಿಸಿಕೊಂಡರು. ಇಂದು ಅದು ಪೋಲೆಂಡಿನ ಒಂದು ಭಾಗವಾಗಿ ಬೆಳೆಯುತ್ತಿದೆ. ಆತನ ಪೋಷಕರು ಬೇರೆ ಬೇರೆ ದೇಶಕ್ಕೆ ಸಂಬಂಧಿಸಿದವರಾಗಿದ್ದರು. ತಂದೆ ಜರ್ಮನ್ ಆಗಿದ್ದರೆ ತಾಯಿ ಕಶುಬಿಯನ್. ಪೋಲಾಂಡಿನ ಪಶ್ಚಿಮ ಭಾಗದ ಕಶುಬಿಯಾದ ಪ್ರಜೆ. ಇದರಿಂದ ಆತ ತನ್ನ ಕೃತಿಗಳಲ್ಲಿ  ಡ್ಯಾನಜಿಗ್‍ನ ಇತಿಹಾಸ ಮಾತ್ರವಲ್ಲದೇ ಪೋಲೆಂಡ ಮತ್ತು ಜರ್ಮನ್ ದೇಶಗಳ ನಡುವಿನ  ಆಗಿನ ಸಂಘರ್ಷದ ತಳಮಳವನ್ನು ಗುಂಟರ್ ಚಿತ್ರಿಸುತ್ತಾರೆ. 1920ರಲ್ಲಿ ಸ್ವತಂತ್ರ ನಗರವಾಗಿ ಬೆಳೆದ ಡ್ಯಾನಜಿಗ್ ಪುನಃ 1945ರಲ್ಲಿ ಜರ್ಮನಿಯ ಹತೋಟಿಗೆ ಸಿಕ್ಕಿತು. ಇದರಿಂದ ಅಲ್ಲಿಯ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಶುಬಿಯನ್ ಗುಂಪು ಮತ್ತು ಜರ್ಮನಿಯ ಆಡಳಿತಾತ್ಮಕ ಭಾಷೆ, ಇವುಗಳ ನಡುವೆ ಡ್ಯಾನಜಿಗ್ ಕುದಿಯುವ ಕುಲುಮೆಯಾಗಿತ್ತು. ಹಾಗಾಗಿ ಗುಂಟರ್ ತನ್ನ ಹೆಚ್ಚಿನ ಕೃತಿಗಳಲ್ಲಿ ಈ ವಿಷಯವನ್ನೆ ಪ್ರಮುಖ ಸಂಗತಿಗಳಾನ್ನಾಗಿಸಿಕೊಂಡಿದ್ದಾನೆ. 

ಅದೂ ಅಲ್ಲದೇ ಗುಂಟರ್ ಜರ್ಮನ್ ಸೈನ್ಯವನ್ನು ಸೇರಿಕೊಂಡಿದ್ದ. ತನ್ನ ಯೌವನದ ದಿನಗಳಲ್ಲಿ ಹಿಟ್ಲರ್‍ನ ಯೂಥ್ ಮೂವ್ ಮೆಂಟ್‍ಗಳಲ್ಲಿ ತೊಡಗಿಸಿಕೊಳ್ಳಲು ಕರೆ ಬಂದ ಕಾರಣ ಈತ ಹದಿನೇಳನೇ ವಯಸ್ಸಿನಲ್ಲಿ ನಾಝೀ ಸೈನ್ಯ ಸೇರಿದ. 1945ರಲ್ಲಿ ಅಮೇರಿಕನ್ ಸೈನ್ಯದೊಂದಿಗಿನ ಹೋರಾಟದಲ್ಲಿ ಗಾಯಗೊಂಡು ಯುದ್ಧ ಖೈದಿಯಾಗಿ ಅವರ ಸೆರೆಯಾಳಾಗಿದ್ದ. 1950ರ ಅವಧಿಯಲ್ಲಿ ಹಿಸ್ಟರಿ ಆಫ್ ಆಟ್ರ್ಸನ್ನು ಡಸೆಲ್‍ಡೊರ್ಫ, ಬರ್ಲಿನ್, ಪ್ಯಾರಿಸ್‍ನಲ್ಲಿ ಅಧ್ಯಯನ ಮಾಡಿದ. ಶಿಲ್ಪಿಯಾಗಿ ಮೊದಲಿಗೆ ತನ್ನ ಬದುಕಿನ ದಾರಿಯನ್ನು ಕಂಡುಕೊಂಡ ಗುಂಟರ್ 1950ರವರೆಗೆ ಶಿಲ್ಪಿಯಾಗಿ, ಕವಿಯಾಗಿ, ನಾಟಕಕಾರನಾಗಿ, ಗ್ರಾಫಿಕ್ ಡಿಸೈನರ್ ಆಗಿ ಬೆಳೆದ. 1956ರಲ್ಲಿ ಪ್ಯಾರಿಸ್‍ಗೆ ಹೋದ. ಆಗಲೇ ತನ್ನ ಬಹು ಪ್ರಸಿದ್ಧ  ಕೃತಿ“The Tin drum” ಬರೆದು  1959ರಲ್ಲಿ ಪ್ರಕಟಿಸಿದ. ಈ ಕೃತಿ ಆತನನ್ನು ರಾತ್ರೋರಾತ್ರಿ ಪ್ರಸಿದ್ಧಿಯ ಉತ್ತುಂಗಕ್ಕೇರಿಸಿತು. ಸಾಂಪ್ರದಾಯಿಕ ಐತಿಹಾಸಿಕ ಪ್ರಜ್ಞೆಯನ್ನು ಬಹು ಸೊಗಸಾಗಿ ತನ್ನ  ಕೃತಿಯಲ್ಲಿ ಹಿಡಿದಿಟ್ಟ. ಜಾಗತಿಕ ಯುದ್ಧದ ಪೂರ್ವದ ಮತ್ತು ನಂತರದ ಪರಿಸ್ಥಿತಿಗಳನ್ನು ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾನೆ. ಅದ್ಭುತವಾದ ಬರವಣಿಗೆಯ ಶೈಲಿ, ಕಾಲ್ಪನಿಕ ಹಾಗೂ ವೈಯಕ್ತಿಕ ಅನುಭವಗಳ ಉತ್ಪ್ರೇಕ್ಷೆ-ಡ್ಯಾನಜಿಗನ  ಪಾಲಿಶ- ಜರ್ಮನ್ ದ್ವಂದ್ವ ಬದುಕಿನ  ವಿಧಾನ, ಅಲ್ಲಿಯ ಕೌಟಂಬಿಕ ಜೀವನ ರೀತಿಗಳಲ್ಲಿ ನಿಧಾನಕ್ಕೆ ಒಳತೆವಳುತ್ತಿರುವ ನಾಝಿತ್ವ. ಆರ್ಥಿಕತೆ, ಯುದ್ಧ ದಿನಗಳ ತಿಕ್ಕಾಟ, ಎಲ್ಲವನ್ನೂ ಒಳಗೊಂಡ ಅಪೂರ್ವ ಕೃತಿ “The Tin drum”.1999ರಲ್ಲಿ ಈ ಕೃತಿಗೆ ನೊಬೆಲ್ ಪ್ರಶಸ್ತಿ ಕೂಡಾ ಲಭಿಸಿತು.

ಈ ಕಾದಂಬರಿಯ ಪ್ರಮುಖ ಪಾತ್ರ ಹಾಗೂ ನಿರೂಪಕ ಆಸ್ಕರ್. ಹುಚ್ಚಾಸ್ಪತ್ರೆಯಲ್ಲಿ ಇರುವ ಆತ ಒಟ್ಟು ಕಾದಂಬರಿಯನ್ನು ನಿರೂಪಿಸುತ್ತಾ ಹೋಗುವುದು ಬಹಳ ಸ್ವಾರಸ್ಯಕರ. ಎಲ್ಲ ಕಡೆಗಳಲ್ಲಿ ಟಿನ್ ಡ್ರಮ್ ಬಾರಿಸುವ ಆತನಿಗೆ ತನಗಿಂತ ಭಾರದ ಅದನ್ನು ಹೊತ್ತು ಬಾರಿಸುವುದೆಂದರೆ ಅದೇನೋ ಉತ್ಸಾಹ. ತನ್ನ ಮೂರನೇ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ಪಡೆದ ಅದು ಆತನ  ಸರ್ವಸ್ವ. ಆತನ ವ್ಯಕ್ತಿತ್ವ. ಅದನ್ನು ಬಾರಿಸುತ್ತ ಹಲವು ವೇದಿಕೆಗಳಲ್ಲಿ ತನ್ನ ಕೌಶಲ್ಯ ಮೆರೆಯುವ ಆತನಿಗೆ ಅದೇ ದೊಡ್ಡ ಸಾಧನೆ. ಹಲವು ಟಿನ್ ಡ್ರಮ್‍ಗಳನ್ನು ಬದಲಾಯಿಸುವ ಆತ ಪ್ರತಿ ಸಲವೂ ವಿಶಿಷ್ಟವಾದದ್ದನ್ನೆ ಆರಿಸಿಕೊಳ್ಳುತ್ತಾನೆ. ಅದಕ್ಕಾಗಿ ಯಾವ ಹಿಂಸೆಗೂ ಆತ ಸಿದ್ಧ.

ಇದೊಂದು picaresque ಮಾದರಿಯ ಕಾದಂಬರಿ. ಪಿಕಾರೋ ಎಂದರೆ  rogue ಎಂದರ್ಥ. ಪಿಕಾರೋ ಇದೊಂದು ಸ್ಪಾನಿಷ್ ಪದ. ಈ ಕಾದಂಬರಿಗಳ ನಾಯಕ ಅಥವಾ ನಾಯಕಿ  ಒಳ್ಳೆಯ ಗುಣವುಳ್ಳವರಾಗಿದ್ದರೂ  ಸಾಮಾಜಿಕ ಜೀವನದಲ್ಲಿ ಯಾವುದೇ ಒಂದು ಪಾತ್ರದಲ್ಲಿ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲಾಗದ ಅತಂತ್ರ ಜೀವನ ಮತ್ತು ಮನಸ್ಥಿತಿ ಇರುವವರು. ಈ ಪಾತ್ರಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸದಾ ಅಲೆಮಾರಿಗಳಂತೆ ಬದಲಾಯಿಸುತ್ತಲೇ ಇರುವವು.

ಈ ಕಾದಂಬರಿಯ ನಾಯಕ ಕೂಡಾ ಇಂತಹ ಪಿಕಾರೋ. 1924ರಲ್ಲಿ ಜನಿಸಿದ ಆತ 1952ರಿಂದ 1954ರವರೆಗೆ ತನ್ನ ವಿಚಿತ್ರ ನಡುವಳಿಕೆಗಳಿಗಾಗಿ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಬಂಧಿಯಾಗಿರುತ್ತಾನೆ. ಹುಟ್ಟುವಾಗಲೇ ತನ್ನ ಯೋಚನೆ ಹಾಗೂ ಕಲ್ಪನಾ ಸಾಮರ್ಥ್ಯದಲ್ಲಿ ಒಬ್ಬ ಪ್ರೌಢನಿಗೆ ಇರಬೇಕಾದ ಎಲ್ಲ ಬೌದ್ಧಿಕ ಸಾಮರ್ಥ್ಯಗಳನ್ನು ಪಡೆದುಕೊಂಡೇ ಜನಿಸುತ್ತಾನೆ ಆತನ ಇನ್ನೊಂದು ಚಕಿತಗೊಳಿಸುವ ಸಾಮರ್ಥ್ಯವೆಂದರೆ ಆತ ಒಮ್ಮೆ ಜೋರಾಗಿ ಕಿರುಚಿದರೆ ಸಾಕು ಆತನ ಮುಂದಿರುವ ಗ್ಲಾಸುಗಳೂ ಪುಡಿಪುಡಿಯಾಗುತ್ತವೆ. ತನ್ನ ಮೂರನೇ ವಯಸ್ಸಿಗೆ ತನ್ನ ಬೆಳವಣಿಗೆಯನ್ನು ಸ್ವತಃ ಕುಂಠಿತಗೊಳಿಸಿಕೊಳ್ಳುತ್ತಾನೆ. ಬರಿಯ ಮೂರು ಅಡಿಯ ಕುಳ್ಳನಾಗಿಯೇ ಇರ ಬಯಸುತ್ತಾನೆ. ಪ್ರೌಢ ಜಗತನ್ನು ಪ್ರೌಢತೆಯನ್ನು ನಿರಾಕರಿಸುವ ಆತನ ವಿರೋಧಾತ್ಮಕ ಹೋರಾಟವಿದು. ತನ್ನ ಬೆಳವಣಿಗೆಯನ್ನು ನಿರಾಕರಿಸುವ ಆತ  ಅಭಿವೃದ್ಧಿಯನ್ನು ನಿರಾಕರಿಸುವ ಸಾಂಪ್ರದಾಯಿಕ ಶಾಂತ ಡ್ಯಾನಜಿಗ್‍ನ ಪ್ರತಿಚಿತ್ರದಂತೆ ಚಿತ್ರಿಸಲ್ಪಟ್ಟಿದ್ಧಾನೆ. ಆ ಮೂಲಕ ಮುಂದುವರೆದ ದೇಶದ ಆಧುನಿಕ ಅಭಿವೃದ್ದಿಯ ವಿರುದ್ಧದ ತನ್ನ ಪ್ರತಿರೋಧಕ್ಕೆ ಸಾಕ್ಷಿಯಾಗಿದ್ಧಾನೆ. ಆದರೆ ಆತನ ಬೌದ್ದಿಕ ಸಾಮರ್ಥ್ಯ ಮಾತ್ರ ಎಲ್ಲರಂತೆ. ಕಾದಂಬರಿಯ ಕೊನೆವರೆಗೂ ಆತನನ್ನು ಮಾನಸಿಕ ರೋಗಿಯೆಂದು ಪರಿಗಣಿಸಿರುವ ಬಗ್ಗೆ ನಿರ್ದಿಷ್ಟ ಕಾರಣಗಳು ಸಿಗುವುದಿಲ್ಲ.

ಆತನ ತಾಯಿ ಆಗ್ನೆಸ್ ಕಶುಬಿಯನ್ ಮೂಲದವಳು. ಕಶುಬಿಯಾ ಪೋಲೆಂಡಿನ ಪಶ್ಚಿಮ ಭಾಗದಲ್ಲಿದೆ. ಹೀಗಾಗಿ ಆಸ್ಕರ್ ಕೂಡಾ ಕಶುಬಿಯನ್. ಮತ್ತಾತ ಅರ್ಧ ಜರ್ಮನ್, ಇನ್ನರ್ಧ ಪಾಲಿಶ್ ಪ್ರಜೆ. ಕಾರಣವಿಷ್ಟೇ. ಆತನಿಗೆ ಇಬ್ಬರು ತಂದೆ. ಅಲ್ಪ್ರೇಡ್ ಮ್ಯಾಜ್ರಥ್ ಆತನ ಕಾನೂನುಬದ್ಧ ತಂದೆ. ಆಸ್ಕರ್‍ನ ತಾಯಿ ಆಗ್ನೇಸ್‍ಳನ್ನು ಆತ 1923ರಲ್ಲಿ ವಿವಾಹವಾಗಿದ್ದಾನೆ. ಆಗ್ನಸ್‍ಳ ಕಸಿನ್ ಜ್ಯಾನ್ ಬ್ರೋನ್ಸ್ಕಿ. ಆತ ಆಗ್ನೇಸ್‍ಳ ಪ್ರಿಯಕರ. ಹೀಗಾಗಿ ಆತನೇ ಆಸ್ಕರ್‍ನ ನಿಜವಾದ ತಂದೆ. ಆದರೆ ಅದಕ್ಕೆ ಸ್ಪಷ್ಟ ದಾಖಲೆಯಿಲ್ಲ. ಈ ಕಾರಣಗಳಿಂದ ಆಲ್ಪ್ರೆಡ್ ಆತನ ಜರ್ಮನ್ ತಂದೆ. ಮತ್ತು ಜ್ಯಾನ್ ಆತನ ಪಾಲಿಶ್ ತಂದೆ. ಗುಂಟರ್ ಇಲ್ಲಿ ಅತ್ತ ಪೋಲೆಂಡ, ಇತ್ತ ಜರ್ಮನ್ ದೇಶಗಳ ನಡುವೆ ತತ್ತರಿಸಿದ ಡ್ಯಾನಜಿಗ್‍ನ ಪರಿಸ್ಥಿತಿಯನ್ನು ಇಬ್ಬರು ತಂದೆಯ ಮಗನಾದ ಆಸ್ಕರ್‍ನಿಗೆ ಸಮೀಕರಿಸಿ ಬರೆದಿದ್ದಾನೆ.

ಆಲ್ಪ್ರೆಡ್ ಜರ್ಮನ್ ನಾಝೀ ಪಕ್ಷದ ಬೆಂಬಲಿಗ. ಆದರೆ ಜ್ಯಾನ್  ಬ್ರೋನ್ಸ್ಕಿ ಪೋಲಂಡನ್ನು ಬೆಂಬಲಿಸುವಾತ. ನಾಝಿಗಳು ಪೋಲಂಡನ್ನು ಆಕ್ರಮಿಸಿಕೊಳ್ಳುವಾಗ ಪಾಲಿಶ ಪೋಸ್ಟ್ ಆಫೀಸೊಂದನ್ನು ಕಾಯುತ್ತಿದ್ದ ಜ್ಯಾನ್ ನಾಝಿಗಳ ಕೈಯಲ್ಲಿ ಹತನಾಗುತ್ತಾನೆ. ಆಸ್ಕರನ್ ತಾಯಿಯೂ ಸತ್ತು ಹೋದ ಕಾರಣ ಆಸ್ಕರನ್‍ನ ತಂದೆ ಆಲ್ಪ್ರೇಡ್  ಮಾರಿಯಾಳನ್ನು ವಿವಾಹವಾಗುತ್ತಾನೆ. ಆಕೆ ಆಸ್ಕರನ ಸ್ನೇಹಿತ ಹರ್ಬರ್ಟ್ ಟ್ರುಜಿನಸ್ಕಿಯ ಸಹೋದರಿ. ಆಕೆಯ ಮೇಲೆ ಆಸ್ಕರನಿಗೆ ವಿಪರೀತ ಮೋಹ. ಆದರೆ ಆಕೆ ಆತನನ್ನು ಸದಾ ನಿರಾಕರಿಸುತ್ತಾಳೆ. ಮಾರಿಯಾ ಆಲ್ಪ್ರೆಡ್‍ನ ಮದುವೆಯಾಗುತ್ತಲೆ ಆಕೆ ಗಂಡುಮಗು ಕರ್ಟನಿಗೆ ಜನ್ಮ ನೀಡುತ್ತಾಳೆ. ಆ ಮಗು ತನ್ನದೇ ಎಂಬುದು ಆಸ್ಕರನ್ ಅಂಬೋಣ. ಆದರೆ ಎರಡನೇ ಮಹಾ ಯುದ್ಧ ಪ್ರಾರಂಭವಾಗುತ್ತಲೇ ಆಸ್ಕರ್ ಜರ್ಮನ್ ಸೈನ್ಯದ ಕುಳ್ಳರ ತಂಡದಲ್ಲಿ ಸೇರಿಕೊಳ್ಳುತ್ತಾನೆ. ಆದರೆ ಆಸ್ಕರನ ಎರಡನೇಯ ಪ್ರಿಯತಮೆ ರೋಸ್ವಿಥಾ ನೋರ್ಮೇಡಿಯನ್ ಆಕ್ರಮಣಕಾರರ ದಾಳಿಗೆ ಬಲಿಯಾಗುತ್ತಾಳೆ. ಪೋಲಂಡನ್ನು  ವಶಪಡಿಸಿಕೊಳ್ಳಲು ಬಂದ ರಶಿಯನ್ ಸೈನ್ಯದ ದಾಳಿಗೆ ನಾಝಿಗಳನ್ನು ಬೆಂಬಲಿಸುತಿದ್ದ ಆಸ್ಕರನ ತಂದೆ ಆಲ್ಪ್ರೆಡ್ ಬಲಿಯಾಗುತ್ತಾನೆ. ಆಸ್ಕರನ ತಾಯಿಯ ಪ್ರಿಯಕರ ಜ್ಯಾನ್ ನಾಝಿಗಳ ಧಾಳಿಗೆ ಬಲಿಯಾದರೆ ಕಾನೂನುಬದ್ಧ ತಂದೆ ಆಲ್ಪ್ರೆಡ್ ರಷ್ಯಾ ದಾಳಿಗೆ ಗುರಿಯಾಗುವುದು, ದೇಶದೇಶಗಳ ನಡುವಿನ ಸಾಮ್ರಾಜ್ಯ ಶಾಹಿ ಧೋರಣೆಗೆ ಹೇಗೆ ಡ್ಯಾನಜಿಗ್‍ನ ಪ್ರಜೆಗಳು ಪ್ರಾಣ ತೆತ್ತರು ಎಂಬುದೇ ಇಲ್ಲಿಯ ಮುಖ್ಯ ಆಶಯ.

ತಂದೆಯ ಸಾವಿನ ಕಾರಣ ತನ್ನ ಮಲತಾಯಿಯೂ ಹಾಗೂ ಪ್ರೇಯಸಿಯೂ ಆಗಿರುವ ಮಾರಿಯಾ ಮತ್ತು ಮಗ ಕರ್ಟನೊಂದಿಗೆ ಈಗ ಡ್ಯಾನಜಿಗ್ ಬಿಟ್ಟು ಆತ ಡಸೆಲ್‍ಡೊರ್ಫಗೆ ವಲಸೆಬರುತ್ತಾನೆ. ಆದರೆ ಅಲ್ಲಿಯೂ ಆತನ ಮೇಲಿನ ನಿರಂತರ ಒತ್ತಡದ ಕಾರಣ ಮಾರಿಯಾ ಮತ್ತು ಕರ್ಟರನ್ನು ತ್ಯಜಿಸಿದರೂ ಮುಂದೆ ಸಿಸ್ಟರ್ ಡೋರೋಥಿಯಲ್ಲಿ ಆಕರ್ಷಿತನಾಗುತ್ತಾನೆ. ತನ್ನ ಸ್ನೇಹಿತರೊಂದಿಗೆ ಜ್ಯಾಜ್ ಡ್ರಮರ್ ಆಗಿ ರೆಕಾರ್ಡ್ ಕಂಪನಿಯೊಂದರಲ್ಲಿ ಪ್ರತಿಭೆಯನ್ನು ಒಪ್ಪಂದಕ್ಕೆ ಮಾರಿಕೊಳ್ಳುತ್ತಾನೆ. ಹೆಸರು ಹಣ ಗಳಿಸುತ್ತಾ ಇರುವಾಗಲೇ, ಒಂದು ದಿನ ಆತನ ಇನ್ನೊಬ್ಬ ಪ್ರೇಯಸಿ ಸಿಸ್ಟರ್ ಡೊರೋಥಿಯ ಉಂಗುರ ಆತನಿಗೆ ಒಂದು ದಿನದ ವಾಕಿಂಗ್ ಸಮಯದಲ್ಲಿ ಹೊಲವೊಂದರಲ್ಲಿ ಸಿಗುತ್ತದೆ. ಆದರೆ ಅದಾಗಲೇ ಕೊಲೆಗೀಡಾದ ಆಕೆಯ ಕೊಲೆಯ ಆಪಾದನೆ ಆಸ್ಕರನ ಮೇಲೆ ಬರುತ್ತದೆ. ಅದನ್ನು ವಿರೋಧಿಸದೇ ಆಸ್ಕರ ಸುಮ್ಮನೇ ಒಪ್ಪಿಕೊಳ್ಳುತ್ತಾನೆ ಹೀಗೆ ತನ್ನದಲ್ಲದ ತಪ್ಪಿಗೆ ಕೊಲೆಗಾರನಾಗಿ ಹುಚ್ಚಾಸ್ಪತ್ರೆಯಲ್ಲಿ ಬಂಧಿಯಾಗಿ ತನ್ನ ಹಳೆಯ ನೆನಪುಗಳ ತೆರೆದಿಡುವ ಆಸ್ಕರನ್ ಪಾತ್ರ ವಿಚಿತ್ರ ಮನೋಸ್ಥಿತಿಯ ಪಿಕಾರೋ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.

ಸದಾ ಜನರಿಂದ ದೂರವಿರುವ ಆಸ್ಕರ್ ತನ್ನ ಗಮನಕ್ಕೆ ಬಂದ ಅನ್ಯಾಯಗಳನ್ನು, ಅಪರಾಧಗಳನ್ನು ಗುರುತಿಸುತ್ತಾ, ಅವುಗಳ ಖಂಡಿಸುತ್ತಾ ಹೋಗುವುದು, ತನ್ನ ಇಬ್ಬರು ತಂದೆ ಮತ್ತು ತಾಯಿಯ ಮರಣದ ಹಿಂದಿನ ಅಕಾರಣ ಸಂಗತಿಗಳು, ತನ್ನಿಂದಾಗದ ಕೊಲೆಯನ್ನು ಒಪ್ಪಿ ಶಿಕ್ಷೆಗೆ ಗುರಿಯಾಗಲು ಸಿದ್ಧನಾಗುವುದು ಎಲ್ಲವೂ ಮಹಾಯುದ್ಧ ಕಾಲದ ಜನರ ದ್ವಂದ್ವ, ಕ್ಷೋಭೆಗೊಳಗಾದ ಮಾನಸಿಕ ಸ್ಥಿತಿಯನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಿದೆ. ಇಂತಹ ಕಾದಂಬರಿ ಕಟ್ಟಿಕೊಟ್ಟ ಗುಂಟರ್ ಗ್ರಾಸ್‍ಗೆ ಅವನ  ಸ್ವಂತ ಬದುಕಿನ ಅನುಭವಗಳೊಂದಿಗೆ ತಳಕುಹಾಕಿಕೊಂಡ ಕಾದಂಬರಿಯಾಗಿಯೂ, ಮನುಷ್ಯನ ವರ್ತನೆಯ ಕೀಳು ಅಭಿರುಚಿ,  ಅಸಂಬದ್ಧತೆ, ಅದನ್ನು ಎದುರಿಸುವ ಬಗೆ, ಇವೆಲ್ಲವನ್ನೂ ಗುಂಟರ ಹೆಣೆದ ರೀತಿ ಆತನನ್ನು ಇಂತಹ ವಿಷಯವಸ್ತುವಿನ ಸುತ್ತಲೇ ಕೃತಿ ರಚಿಸಿದ ಕಮೂ, ಬ್ರೇಕ್ಟ್ ಮುಂತಾದ ಸಾಹಿತಿಗಳ ಪಟ್ಟಿಗೆ ಸೇರಿಸುತ್ತದೆ. ಅಸಂಬದ್ಧತೆ ಆತನ ಕೃತಿಗಳಲ್ಲಿ ವಿಜೃಂಬಿಸುತ್ತದೆ. .ಟಿನ್ ಡ್ರಮ್ ಕಥಾನಾಯಕ  ಆಸ್ಕರ್ ಎಂಬಾತನ ಯುದ್ಧ ಪೂರ್ವದ, ಯುದ್ಧಕಾಲದ, ಯುದ್ಧಾನಂತರದ  ಬದುಕಿನ ಅನುಭವಗಳ ಸಾಧನೆಗಳ ಪುನರಾವಲೋಕನದ ಜೀವನ ಗಾಥೆ ಓದುತ್ತಾ ಆಧುಕಿನ ಬದುಕಿನಲ್ಲಿ  ನಮ್ಮನ್ನು ಕಾಡುವ ಮಾನಸಿಕ ವಿಕ್ಷಿಪ್ತತೆಗೆ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. 

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...